Wednesday, September 16, 2009

ಶ್ರವಣಬೆಳಗೊಳದಲ್ಲಿ ರನ್ನ - ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 2

  ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 1 "ಬೆಳೆಯುವ ಸಿರಿ ಮೊಳಕೆಯಲ್ಲಿ"  ಕ್ಲಿಕ್ ಮಾಡಿ

ಶ್ರವಣಬೆಳಗೊಳದಲ್ಲಿ ರನ್ನ
ಹಗಲು-ರಾತ್ರಿ. ಬಿಸಿಲು-ಮಳೆ, ಚಳಿ-ಗಾಳಿ, ಕಾಡು-ಮೇಡು ಎನ್ನದೆ ರನ್ನ ಶ್ರವಣಬೆಳಗೊಳ ತಲುಪಿದ.

ಒಂದು ಶೂಭಮೂಹೂರ್ತದಲ್ಲಿ ಅಜಿತಸೇನಾಚಾರ್ಯರನ್ನು ಕಂಡು ಮನದಾಸೆಯನ್ನು ಬಿಚ್ಚಿಟ್ಟ. ಆತನ ಮಾತಿನಲ್ಲಿದ್ದ ಪ್ರಾಮಾಣಿಕತೆ, ದೃಢತೆ, ಆತ್ಮವಿಶ್ವಾಸ ಅಜಿತಸೇನಾಚಾರ್ಯರ ಗಮನಸೆಳೆದವು. ಒಂದೆರಡು ಪಕ್ಷ ತಮ್ಮಲಲಿರುವಂತೆ ಹೇಳಿ, ಆತನ ಪ್ರತಿಭೆಯನ್ನು ಮನದಟ್ಟು ಮಾಡಿಕೊಂಡ ಗುರುಗಳು ಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಒಪ್ಪಿದರು. ಆಶ್ರಯಕ್ಕೆ ಚಾಮುಂಡರಾಯನನ್ನು ಕಾಣುವಂತೆ ಹೇಳಿದರು.

ಒಂದು ದಿನ ಮುಂಜಾನೆ ಚಾಮುಂಡರಾಯನನ್ನು ಕಂಡ ರನ್ನ ತನ್ನ ಉದ್ದೇಶವನ್ನು ಗುರುಗಳ ಬಯಕೆಯನ್ನು ಅವನಿಗೆ ತಿಳಿಸಿದ. ಮೊದಲ ನೋಟದಲ್ಲೇ ಸ್ನೇಹ ಸ್ಫುರಿಸುವಂತೆ ಮಾತನಾಡಿದ ಚಾವುಂಡರಾಯ ರನ್ನನ ವಿದ್ಯಾಭ್ಯಾಸಕ್ಕೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟ.

ಸತತ ದ್ವಾದಶ ವರ್ಷಗಳ ಕಾಲ ಕನ್ನಡ, ಸಂಸ್ಕೃತ ಭಾಷೆಗಳ ವ್ಯಾಕರಣ, ಛಂದಸ್ಸು, ಜೈನಶಾಸ್ತ್ರ, ಆಗಮ ಮೊದಲಾದವುಗಳ ಅಭ್ಯಾಸವಾಯಿತು. ವಿದ್ಯಾರ್ಥಿ ದೆಸೆಯಿಂದಲೇ ವೃತ್ತ-ಕಂದಪದ್ಯಗಳಲ್ಲಿ ಪರಿಣಿತಿ ಸಾಧಿಸಿ ಬಿಡಿ ಪದ್ಯಗಳನ್ನು ರಚಿಸಿ ಸೈ ಎನಿಸಿಕೊಂಡ ರನ್ನನಿಗೆ ಕಾವ್ಯಸರಸ್ವತಿ ಒಲಿದು ಬಂದಳು. ಗುರುಗಳು ಆ ಮಾರ್ಗದಲ್ಲಿಯೇ ಮುಂದುವರೆಯುವಂತೆ ಆಶೀರ್ವದಿಸಿದರು.

ವಾಲ್ಮೀಕಿ, ವ್ಯಾಸ, ಭಾಸ, ಬಾಣ, ಕಾಳಿದಾಸ, ಪಂಪ, ಪೊನ್ನ ಮೊದಲಾದವರ ಕಾವ್ಯಗಳನ್ನು ಅಭ್ಯಾಸ ಮಾಡಿದ ರನ್ನನ ಗುರಿ ಸ್ಪಷ್ಟವಾಗಿತ್ತು. ತಾನೂ ಆ ಮಹಾಕವಿಗಳ ಸಾಲಿನಲ್ಲಿ ನಿಲ್ಲಬೇಕೆಂಬುದು ಅವನ ಕನಸಾಯಿತು. ಅದಕ್ಕಾಗಿ ಬಿಡಿ ಪದ್ಯಗಳ ರಚನೆಗಳನ್ನು ನಿಲ್ಲಿಸಿದ ರನ್ನ ಮಹಾಕಾವ್ಯರಚನೆಗೆ ಒತ್ತು ಕೊಟ್ಟ.

ಮೊದಲು ಅವನ ಮನದಲ್ಲಿ ಸುಳಿದು, ಕಣ್ಣೆದುರಿಗೆ ನಿಂತ ಮಹಾವ್ಯಕ್ತಿಯೆಂದರೆ ಚಾಮುಂಡರಾಯನೆ! ಕಲಿಯೂ ಕವಿಯೂ ಆಗಿದ್ದ ಚಾಮುಂಡರಾಯನ “ಚಾಮುಂಡರಾಯ ಪುರಾಣ” ಆಗಲೇ ವಿದ್ವತ್ ಲೋಕದಲ್ಲಿ ಹೆಸರು ಪಡೆದಿತ್ತು. ಜೈನಧರ್ಮೀಯರಲ್ಲಿ ಆ ಕೃತಿಗೆ ಹೆಚ್ಚಿನ ಮಹತ್ವವಿತ್ತು. ದೊರೆ ಗಂಗರಾಚಮಲ್ಲನ ಮಂತ್ರಿಯಾಗಿದ್ದುಕೊಂಡು ಹಲವಾರು ಯುದ್ಧಗಳಲ್ಲಿ ಗೆಲುವು ತಂದುಕೊಟ್ಟಿದ್ದ ಕಲಿ ಚಾಮುಂಡರಾಯ ‘ವೀರಮಾರ್ತಾಂಡದೇವ’, ‘ಸಮರಪರುಶರಾಮ’ ಎಂಬ ಹೆಸರುಗಳನ್ನು ಗಳಿಸಿದ್ದನು. ಬಾಹುಬಲಿಯ ಏಕಶಿಲಾವಿಗ್ರಹವನ್ನು ಮಾಡಿಸಿ, ಜೈನಧರ್ಮಕ್ಕೆ ಮಹಾಪೋಷಕನಾಗಿ ‘ಸಮ್ಯಕ್ತ್ವ ರತ್ನಾಕರ’ ಎಂಬ ಬಿರುದನ್ನು ಧರಿಸಿದ್ದ. ಇವುಗಳಲ್ಲದೆ ಸ್ವತಃ ರನ್ನನಿಗೆ ಆಶ್ರಯ ಕೊಟ್ಟಿದ್ದ.

ಅಷ್ಟೊತ್ತಿಗಾಗಲೇ ಆಶ್ರಿತ ಅರಿಕೇಸರಿಯನ್ನು ಅರ್ಜುನನೊಂದಿಗೆ ಸಮೀಕರಿಸಿದ ಪಂಪನ ‘ವಿಕ್ರಾಮಾರ್ಜುನ ವಿಜಯ’ ಪ್ರಸಿದ್ಧವಾಗಿತ್ತು. ಇವುಗಳೆಲ್ಲವನ್ನು ಗಮನದಲ್ಲಿಟ್ಟುಕೊಂಡು, ರಾಮಾಯಣ, ಮಹಾಭಾರತಗಳಲ್ಲಿ ಬರುವ ಪರುಶಾಮನೊಂದಿಗೆ ಚಾಮುಂಡರಾಯನನ್ನು ಸಮೀಕರಿಸಿ ‘ಪರಶುರಾಮ ಚರಿತೆ’ ಎಂಬ ಮಹಾಕಾವ್ಯದ ರಚನೆಯಲ್ಲಿ ತೊಡಗಿಸಿಕೊಂಡ.

ಪರಶುರಾಮಚರಿತೆಯ ರಚನೆ ಪೂರ್ಣಗೊಂಡು ವಿದ್ವತ್ ಸಭೆಗಳಲ್ಲಿ ಗೌರವಿಸಲ್ಪಟ್ಟಿತು. ಜಿನಧರ್ಮಸಮಯಪಾಲಕನಾದ ಚಾಮುಂಡರಾಯನ ಕಥೆ ಜೊತೆಗೆ ಜೈನಧರ್ಮದ ತತ್ವಸಾರ ಎಲ್ಲವೂ ಮಿಳಿತಗೊಂಡ ರಚನೆಯಾದ್ದರಿಂದ ಜೈನಧರ್ಮೀಯರಲ್ಲಿಯೂ ಕೃತಿ ಮಾನ್ಯತೆಗಳಿಸಿಕೊಂಡಿತು. ರನ್ನನ ಹೆಸರು ಮನೆ ಮಾತಾಯಿತು.

ಹೀಗಿರುವಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಸುವ ದಿನಗಳು ಹತ್ತಿರ ಬಂದವು. ದೇಶದ ಮೂಲೆಮೂಲೆಗಳಿಂದ ಜಿನಭಕ್ತರು ಶ್ರವಣಬೆಳಗೊಳಕ್ಕೆ ಬರಲಾರಂಭಿಸಿದರು. ರಾಜರು, ಮಾಂಡಳಿಕರು, ಸಾಮಂತರು, ಜೈನಧರ್ಮದ ಪ್ರಮುಖರು ಶ್ರವಣಬೆಳಗೊಳಕ್ಕೆ ಬರುವವರಿದ್ದರು. ಹಾಗೆ ಬರುವವರ ಪಟ್ಟಿಯಲ್ಲಿ ಅತ್ತಿಮಬ್ಬೆಯ ಹೆಸರೂ ಇತ್ತು. ರನ್ನ ಅತ್ತಿಮಬ್ಬೆಯ ಹೆಸರನ್ನು ಕೇಳಿದ್ದನಾದರೂ ನೋಡಿರಲಿಲ್ಲ. ಚಾಲುಕ್ಯ ತೈಲಪನ ನಾಡಿನಲ್ಲಿ ‘ಜಿನಧರ್ಮಪ್ರದೀಪಿಕೆ’ಯೆಂದು ಹೆಸರಾಗಿದ್ದ ಅತ್ತಿಮಬ್ಬೆಯನ್ನು ಕಾಣುವ ಅವನ ಕಾತರ ಕೊನೆಗೊಳ್ಳುವ ಕಾಲ ಮಹಾಮಸ್ತಕಾಭಿಷೇಕದ ನೆವದಲ್ಲಿ ಕೂಡಿಬಂದಿತ್ತು.
ಸ್ವತಃ ಚಾಮುಂಡರಾಯನೇ ಒಂದು ಸುಮೂಹರ್ತದಲ್ಲಿ ರನ್ನನನ್ನು ಅತ್ತಿಮಬ್ಬೆಯ ಸಾನಿಧ್ಯಕ್ಕೆ ಕರೆದುಕೊಂಡು ಹೋಗಿ ಪರಿಚಯಿಸಿದ. ದೀರ್ಘದಂಡ ನಮಸ್ಕಾರ ಹಾಕಿದ ರನ್ನನನ್ನು ಪ್ರೀತಿಯಿಂದ ಮೈದಡವಿ ಆಶೀರ್ವದಿಸಿದ ಅತ್ತಿಮಬ್ಬೆ ‘ನಿಮ್ಮ ಪರಶಮುರಾಮಚರಿತೆಯನ್ನು ನಾನು ಓದಿದ್ದೇನೆ. ಸ್ವತಃ ಕಥಾನಾಯಕನನ್ನು ಹಾಗೂ ಕವಿವರ್ಯರನ್ನು ಒಟ್ಟಿಗೇ ನೋಡುವ ಭಾಗ್ಯ ನನ್ನದಾಗಿದೆ’ ಎಂದು ಸಂತೋಷಪಟ್ಟಳು. ಮಾತು ಕಳೆದುಕೊಂಡು ನಿಂತಿದ್ದ ರನ್ನನಿಗೆ ಸಂತೋಷ ರೋಮಾಂಚನ ಎಲ್ಲವೂ ಆಯಿತು. ‘ನಿಮ್ಮೆದುರಿಗೆ ಬಂದು ನಿಲ್ಲುವ ಭಾಗ್ಯ ನಮ್ಮದಾಗಿದೆ ತಾಯಿ. ಅದೂ ಈ ಪರಶುರಾಮರ ದೆಸೆಯಿಂದಲೇ’ ಎಂದು ಚಾಮುಂಡರಾಯನ ಕಡೆಗೆ ಕೈತೋರಿಸಿದ.
ವೈಭವದಿಂದ ಮಹಾಮಸ್ತಕಾಭಿಷೇಕ ನಡೆಯಿತು. ಅತ್ತಿಮಬ್ಬೆಯು ಎಲ್ಲಾ ಕೆಲಸಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸಿದ್ದಳು. ರನ್ನ ಅವಳ ಉತ್ಸಾಹ, ಅವಳ ಸಾನಿಧ್ಯದಿಂದ ಸಿಗುತ್ತಿದ್ದ ದೈವಿಕ ಆನಂದ, ತನ್ನ ಸುತ್ತ ಇರುವವರ ಮೇಲೆ ಅವಳು ಬೀರುತ್ತಿದ್ದ ಪ್ರಭಾವ ಎಲ್ಲವೂ ಏನೋ ಒಂದು ಅಲೌಕಿಕತೆಯನ್ನು ರನ್ನನ ಎದೆಯಲ್ಲಿ ಉಂಟುಮಾಡುತ್ತಿದ್ದವು. ಅವಳನ್ನೇ ಸ್ತುತಿಸುವ ಕೆಲವು ಪದ್ಯಗಳು ತಲೆಯಲ್ಲಿ ಹೊಳೆದು, ಎದೆಯಲ್ಲಿ ರೂಪುಗೊಂಡು, ಬಾಯಲ್ಲಿ ದ್ವನಿಪಡೆದುಕೊಳ್ಳುತ್ತಿದ್ದವು.

ಮತ್ತೊಮ್ಮೆ ಬೇಟಿಯಾಗಿದ್ದಾಗ, ‘ನಿಮ್ಮ ಬರವಣಿಗೆ ಸುಸೂತ್ರವಾಗಿ ನಡೆಯುತ್ತಿದೆಯೆ’ ಎಂದು ಅತ್ತಿಮಬ್ಬೆ ಕೇಳಿದ್ದಳು. ರನ್ನನೂ ಹೌದೆಂದು ಉತ್ತರಿಸಿದ್ದ. ಆಗ ಅತ್ತಿಮಬ್ಬೆಯು ‘ನೋಡಿ ಈ ದಕ್ಷಿಣ ದೇಶದಲ್ಲಿ ಗಂಗರಾಜ, ಚಾಮುಂಡರಾಯ ಮೊದಲಾದವರ ಆಸಕ್ತಿ ಪ್ರೋತ್ಸಾಹ ಇವುಗಳಿಂದಾಗಿ ಜೈನಧರ್ಮ ಸುಸ್ಥಿರವಾಗಿದೆ. ಬೆಳಗೊಳದ ಈ ಉನ್ನತ ಪರ್ವತದ ಮೇಲೆ ಬಾಹುಬಲಿಯೂ ಸ್ಥಿರನಾಗಿದ್ದಾನೆ. ಆದರೆ ನಮ್ಮ ಕಡೆ ಇದುವರೆಗೂ ನಡೆಯುತ್ತಿದ್ದ ರಾಜಕೀಯ ಮೇಲಾಟದಿಂದಾಗಿ ಒಂದು ರೀತಿಯ ಮಂಕು ಕವಿದು ಬಿಟ್ಟಿದೆ. ಯಾವುದೇ ಧಾರ್ಮಿಕ ಚಟುವಟಿಕೆಗಳೂ ಕ್ರಿಯಾಶೀಲವಾಗಿಲ್ಲ. ಆದರೆ ಈಗ ತೈಲಪನ ಆಡಳಿತ ನಿಧಾನವಾಗಿ ತಳವೂರುತ್ತಿದೆ. ಎಲ್ಲ ಕ್ಷೇತ್ರಗಳೂ ಕ್ರಿಯಾಶೀಲವಾಗಬೇಕೆಂದು ತೈಲಪರು ಬಯಸುತ್ತಿದ್ದಾರೆ. ಅತ್ತ ವೆಂಗಿಯ ಕಡೆ ನಮ್ಮವರೇ ಆದ ಪಂಪ. ಇತ್ತ ಪೊನ್ನ ಮಹಾಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಜಿನಧರ್ಮವೂ ಕ್ರಿಯಾಶೀಲವಾಗುತ್ತಿದೆ. ನೀವು ಅತ್ತಕಡೆ ಬಂದುಬಿಡಿ. ತೈಲಪರೂ ಕವಿಜನಾಶ್ರಿತರಾಗಿದ್ದಾರೆ. ಚಕ್ರವರ್ತಿಯ ಆಶ್ರಯ ದೊರೆತರೆ ನಿಮ್ಮ ಬರವಣಿಗೆ ಇನ್ನೂ ಹೆಚ್ಚು ಹೆಚ್ಚು ಕ್ರಿಯಾಶಿಲವಾಗಿ ಮುಂದುವರೆದೀತು’ ಎಂದು ದೀರ್ಘವಾಗಿ ಮಾತನಾಡಿದ್ದರು.

ಆದರೆ ರನ್ನನಿಗೆ ಏನು ಮಾತನಾಡಬೇಕೆಂದು ತಿಳಿಯಲಿಲ್ಲ. ಸ್ವತಃ ರನ್ನನಿಗೆ ಚಕ್ರವರ್ತಿಯ ಆಶ್ರಯ ಪಡೆದು ಮಹಾಕವಿಯಾಗುವ ಹಂಬಲವಿತ್ತಾದರೂ ತನಗೆ ಆಶ್ರಯವಿತ್ತಿರುವ ಗೆಳೆಯ ಚಾಮುಂಡರಾಯನನ್ನು ಬಿಟ್ಟು ಹೋಗುವ ವಿಚಾರ ಮನಸ್ಸಿಗೆ ನೋವುಂಟುಮಾಡುತ್ತಿತ್ತು.

ರನ್ನನ iನಸ್ಸನ್ನು ಅರಿತವಳಂತೆ ಅತ್ತಿಮಬ್ಬೆ ‘ಮಹಾಕವಿಗಳು ಆತಂಕಪಡಬೇಕಾಗಿಲ್ಲ. ನಿಮಗೆ ಇಲ್ಲಿ ಒಗ್ಗಿಹೋಗಿದೆ. ಹೊಸ ಸ್ಥಳ ಹೇಗೋ ಏನೋ ಎನ್ನುವ ಭಯವಿದೆ. ಅಲ್ಲವೆ? ನಿಮಗೆ ಆ ಯಾವ ಯೋಚನೆಯೂ ಬೇಡ. ಸ್ವತಃ ನಾವೇ ಚಾಮುಂಡರಾಯರಲ್ಲಿ ಮಾತನಾಡುತ್ತೇವೆ. ನೀವು ಕವಿಚಕ್ರವರ್ತಿಯಾಗುವ ಅವಕಾಶವನ್ನು ಅವರು ಹಾಳುಗೆಡುವವರಲ್ಲ. ಆ ನಂಬಿಕೆ ನಮಗಿದೆ’ ಎಂದು ಸಮಾಧಾನಪಡಿಸಿದ್ದಳು.

ಮತ್ತೊಂದು ದಿನ ಅತ್ತಿಮಬ್ಬೆಯಿಂದ ರನ್ನನಿಗೆ ಕರೆಬಂದಾಗ ಸಂತೋಷದಿಂದ, ಆತಂಕದಿಂದ ಕೂಡಿದವನಾಗಿಯೇ ಬಂದ. ಅಲ್ಲಿ ಅತ್ತಿಮಬ್ಬೆ, ಚಾಮುಂಡರಾಯ ಇನ್ನೂ ಕೆಲವರು ಇದ್ದುರಿಂದ ರನ್ನನಿಗೆ ಸಂದರ್ಭದ ಗಂಭೀರತೆಯ ಅರಿವುಂಟಾಯಿತು.

ಸ್ವತಃ ರಾಯನೇ ರನ್ನನನ್ನು ಬರಮಾಡಿಕೊಂಡು ‘ತಾಯಿಯವರು ಎಲ್ಲವನ್ನೂ ಹೇಳಿದರು. ನೀನು ನನ್ನ ಮಿತ್ರ. ನಿನ್ನ ಶ್ರೇಯಸ್ಸನ್ನು ಬಯಸುವವನು ನಾನು. ನೀನಿನ್ನು ಯುವಕ. ಬೆಳೆಯಬೇಕಾದವನು. ತಾಯಿಯವರ ಇಚ್ಛೆಯಂತೆ ನೀನು ತೈಲಪನ ಆಶ್ರಯಕ್ಕೆ ಹೋಗುವುದು. ನೀನು ಕವಿರತ್ನ! ಚಕ್ರವರ್ತಿಯಲ್ಲಿರಬೇಕಾದ ರತ್ನ! ಕವಿಚಕ್ರವರ್ತಿಯಾಗಬೇಕಾದ ರತ್ನ! ಅದು ಈಡೇರಬೇಕಾದರೆ ನೀನು ತೈಲಪರ ಆಶ್ರಯಕ್ಕೆ ಬರಬೇಕಾದ್ದೇ ನ್ಯಾಯ’ ಎಂದು ಸಂಭ್ರಮಪಟ್ಟನು.

ಅತ್ತಿಮಬ್ಬೆಯು ಹೊರಡುವ ದಿನಗಳು ಹತ್ತಿರವಾಗುತ್ತಿದ್ದವು. ರನ್ನನಿಗೆ ತಾನು ಬೆಳಗೊಳವನ್ನು, ಚಾಮುಂಡರಾಯನನ್ನು ಬಿಟ್ಟುಹೋಗಬೇಕಾದ ವ್ಯಥೆ ಕಾಡುತ್ತಿತ್ತು. ಅದನ್ನು ದೂರಮಾಡಲೆಂದೇ ಚಾಮುಂಡರಾಯ ಒಂದು ದಿನ ಸಂಜೆ ಆತನನ್ನು ಚಂದ್ರಗಿರಿಗೆ ಕರೆದುಕೊಂಡು ಹೋಗಿ ಆತನೊಂದಿಗೆ ಮಾತನಾಡುತ್ತಾ ಕಳೆದ. ಇಬ್ಬರೂ ಸೇರಿ, ಎದುರುಬದರಾಗಿ ಕುಳಿತುಕೊಂಡರು.

ತಮ್ಮ ಸ್ನೇಹದ ಗುರುತನ್ನು ಈ ಬೆಟ್ಟದ ಮೇಲೆ ನಿಲ್ಲಿಸಬೇಕೆಂದು ತೀರ್ಮಾನಿಸಿ, ಚಾಮುಂಡರಾಯನ ಹೆಸರನ್ನು ರನ್ನನು, ರನ್ನ ಹೆಸರನ್ನು ಚಾಮುಂಡರಾಯನು ಬಂಡೆಯ ಮೇಲೆ ಉಳಿಯಿಂದ ಕೆತ್ತಿ ಸಂಭ್ರಮಿಸಿದರು.  ಎದುರಿಗೆ ಇಂದ್ರಗಿರಿಯ ತುದಿಯಲ್ಲಿ ಬಾಹುಬಲಿ ನಗುತ್ತಿದ್ದ! ನಾಳೆಯೇ ಊರಿಗೆ ಹೊರಡುತ್ತಿರುವ ಗೆಳೆಯನಿಗೆ ಚಾಮುಂಡರಾಯ ಬೆಟ್ಟದ ತುದಿಯಲ್ಲಿ ನಿಂತು ಶುಭಕೋರಿದ.

ಮರುದಿನ ಶುಭಗಳಿಗೆಯಲ್ಲಿ ಅತ್ತಿಮಬ್ಬೆ ಮತ್ತು ಸಂಗಡಿಗರನ್ನು ರನ್ನನೊಂದಿಗೆ ಚಾಮುಂಡರಾಯ ಬೀಳ್ಕೊಟ್ಟ.

ಮುಂದಿನ ಕಂತು : ರಾಜಾಶ್ರಯದಲ್ಲಿ ಕವಿರನ್ನ

17 comments:

Shweta said...

ಸರ್, ತುಂಬಾ ಚೆನ್ನಾಗಿದೆ ನಿಮ್ಮ ಲೇಖನ. ...
ತುಳಸಿ ರಾಮಾಯಣವನ್ನೊಮ್ಮೆ ಓದಿದ್ದೀರಾ...ಒಂದು ಸಾರೇ ಓದಿ....ಯಾಕೋ ನಿಮ್ಮ ಲೇಖನ ಓದಿದಾಗ ರಾಮಾಯಣ ನೆನಪಿಗೆ ಬಂತು.....
ಧನ್ಯವಾದಗಳೊಂದಿಗೆ....
-Shweta

ಬಿಸಿಲ ಹನಿ said...

ಕವಿರತ್ನತ್ರಯದವರಲ್ಲಿ ಒಬ್ಬನಾದ ರನ್ನನ ಪರಿಚಯವನ್ನು ಬಹಳ ಆತ್ಮೀಯವಾಗಿ ಮಾಡಿಕೊಟ್ಟಿದ್ದೀರಿ. ನಾನು ಹತ್ತನೆ ತರಗತಿ ಓದುತ್ತಿರಬೇಕಾದರೆ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿದ್ದ ‍"ಬಂಕಾಪುರದ ರನ್ನಮಯ್ಯ" ವನ್ನು ಓದಿದ್ದೆ. ಆದರೆ ಅಲ್ಲಿ ಇಷ್ಟೊಂದು ವಿವರಣೆ ಇರಲಿಲ್ಲ. ಮುಂದಿನ ಕಂತಿಗಾಗಿ ಕಾಯುತ್ತಲಿರುವೆ.

sunaath said...

ಮಹಾಕವಿ ರನ್ನನ ಚರಿತ್ರೆಯನ್ನು ಕಲ್ಪನಾತ್ಮಕವಾಗಿ ವರ್ಣಿಸಿದ್ದೀರಿ.
ಮುಂದಿನ ಕಂತುಗಳಿಗಾಗಿ ಕಾಯುತ್ತೇನೆ.
ಇದೇ ರೀತಿ ಇತರ ಕವಿಗಳ ಚರಿತ್ರೆಯನ್ನೂ ಕೊಡಿ.

Unknown said...

ಸಾರ್,ರನ್ನ ಬಗ್ಗೆ ಮಾಹಿತಿ ಒಳ್ಳೆಯದಿದೆ . ನನ್ನ ಶಾಲಾ ದಿನಗಳನ್ನು ಅಲ್ಲಿ ಓದಿದ ರನ್ನ ಹಾಗು ಇತರರ ಕಥೆಗಳನ್ನು ನೆನಪಾಗುವ೦ತೆ ಮಾಡಿದ್ದಿರಿ .
ವ೦ದನೆಗಳು .

ಸಾಗರದಾಚೆಯ ಇಂಚರ said...

ಸರ್,
ಎಷ್ಟು ಚೆನ್ನಾಗಿ ವರ್ಣಿಸಿದ್ದೀರಿ, ತುಂಬಾ ವಿಚಾರಯುಕ್ತ ಲೇಖನ

Prashanth Arasikere said...

Sir,

Ranna na jeevaana charithe chennagide..

Prashanth Arasikere said...

Sir,

Ranna na jeevaana charithe chennagide..

ತೇಜಸ್ವಿನಿ ಹೆಗಡೆ said...

ಭಾಗ -೧ ಹಾಗೂ ಎರಡನ್ನು ಒಟ್ಟಿಗೇ ಓದಿದೆ. ನಾನು ಈ ಮೊದಲು ಕನ್ನಡ ಎಂ.ಎ.ಯಲ್ಲಿಯೇ ರನ್ನನ ಜೀವನ ಚರಿತ್ರೆಯನ್ನು ಓದಿ ತಿಳಿದುಕೊಂಡಿದ್ದೆನಾದರೂ ನಿಮ್ಮ ಈ ಸ್ವಾರಸ್ಯಕರ ಆತ್ಮಚರಿತ್ರೆ ಮತ್ತೆ ಓದುವಂತೆ ಪ್ರೇರೇಪಿಸಿತು. ಎಲ್ಲೋ ಮರೆತು ಹೋದ ನನ್ನ ಪಾಠವನ್ನು ಮತ್ತೆ ನೆನಪಿಸಿಕೊಡುತ್ತಿದ್ದೀರಿ. ಧನ್ಯವಾದಗಳು. ಮುಂದಿನ ಭಾಗಗಳಿಗಾಗಿ ಕಾಯುತ್ತಿರುವೆ.

Jayalaxmi said...

ಸರಳವಾಗಿ, ಸ್ವಾರಸ್ಯಕರವಾಗಿ ಮೂಡಿಬರುತ್ತಿದೆ ರನ್ನ ಚರಿತ್ರೆ. ಕೃತಜ್ಞತೆಗಳು.

AntharangadaMaathugalu said...

ಸಾರ್...
ರನ್ನನ ಚರಿತ್ರೆ ಅತ್ಯಂತ ಕುತೂಹಲಕರವಾಗಿದೆ ಮತ್ತು ಮುಂದಿನ ಭಾಗಕ್ಕೆ ಕಾಯುವಂತೆ ಮಾಡುತ್ತಿದೆ....

ಶ್ಯಾಮಲ

PARAANJAPE K.N. said...

ರನ್ನನ ವರ್ಣನೆ ರಸವತ್ತಾಗಿದೆ. ಮುಂದಿನ ಭಾಗ ಬೇಗ ಬರಲಿ

ಬಾಲು said...

ಅತ್ಯ೦ತ ಕಾವ್ಯತ್ಮಕವಾಗಿ ವಿವರಿಸಿದ್ದಿರಿ. ಮು೦ದಿನ ಬಾಗ ಬೇಗ ಬರಲಿ.

Me, Myself & I said...

ಆತ್ಮೀಯ ಸತ್ಯನಾರಾಯಣ ಸರ್,

ಅಭಿನಂದನೆಗಳು.

ತುಂಬಾ ಒಳ್ಳೆಯ ಬರಹ.

ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಓದುಗರನ್ನ ಆಕರ್ಷಿಸಲಿ .

shivu.k said...

ಸತ್ಯ ನಾರಾಯಣ ಸರ್,

ರನ್ನನ ಬಗೆಗಿನ ವಿಚಾರವನ್ನು ಚೆನ್ನಾಗಿ ಕೊಡುತ್ತಿದ್ದೀರಿ. ಅತ್ತಿಮಬ್ಬೆಯ ಪರಿಚಯ ಅದರಿಂದ ರನ್ನನಿಗೆ ಆಗುವ ಲಾಭ ಇತ್ಯಾದಿ ವಿಚಾರಗಳು ನಮಗೆಲ್ಲಾ ಮತ್ತೆ ತಿಳುವಳಿಕೆ ಮೂಡಿಸುವಂತಿದೆ. ಇನ್ನಷ್ಟು ಸರಣಿಗಳಿಗಾಗಿ ಕಾಯುತ್ತಿದ್ದೇನೆ.

Unknown said...

ಬರಹ ತುಂಬ ಚೆನ್ನಾಗಿ ಬರುತ್ತಿದೆ... ಮುಂದಿನ ಕಂತುಗಳಿಗೆ ಕಾಯುವಂತೆ ಮಾಡಿದೆ... ಹಳೆಯ ನೆನಪುಗಳು ಮತ್ತೆ ಮರುಕಳಿಸುತ್ತಿವೆ...

ರೂpaश्री said...

ಸತ್ಯ ಸರ್,

ಬಹಳ ಚೆನ್ನಾಗಿ ವರ್ಣಿಸಿದ್ದೀರ. ತುಂಬ ವಿಚಾರಯುಕ್ತ ಲೇಖನಮಾಲೆ!!
ಮೊದಲೇ ಹೇಳಿರುವಂತೆ ನಾನು ಸಾಹಿತ್ಯ ಹೆಚ್ಚು ಓದಿಲ್ಲ, ಶಾಲೆಯಲ್ಲಿ ಕನ್ನಡ ಓದಿದ್ದೂ ಕಮ್ಮಿನೇ. ಈಗ ನಿಮ್ಮಗಳ ದೆಸೆಯಿಂದ ಬಹಳಷ್ಟು ವಿಚಾರ ತಿಳಿಯುವಂತಾಗಿದೆ:))

ಮಂಸೋರೆ said...

ಉತ್ತಮ ಲೇಖನ....