Friday, October 23, 2009

ಬಾಲ್ಯವೆಂಬುದು ಹೂವು ಕಣೋ... (ಮತ್ತೊಂದು ಹಳೆಯ ಕಥೆ) - 1

1

ಮಂಜಪ್ಪನ ಕಥೆಯನ್ನು ಬರೆದು ಪ್ರಕಟಿಸುವುದಕ್ಕೆ ಸ್ವತಃ ಕಥಾನಾಯಕನಾದ ಮಂಜಪ್ಪನಿಂದಿಲೇ ನಾನು ಅನುಮತಿ ಪಡೆದಿದ್ದೇನೆ; ಅದೂ ಹದಿನೈದು ವರ್ಷಗಳ ಹಿಂದೆ! ತಾನು ಹೇಳಿದ ಕೆಲವೊಂದು ಘಟನೆಗಳನ್ನು ಯಾರಿಗೂ ಹೇಳಬಾರದೆಂದು ಮಂಜಪ್ಪ ಕೇಳಿಕೊಂಡಾಗ, ‘ನಿನ್ನ ಘಟನೆಯನ್ನು ಯಾರದೋ ಕಥೆಯೆಂಬಂತೆ ಬರೆಯುತ್ತೇನೆ’ ಎಂದಿದ್ದೆ. ಅದಕ್ಕೆ ಆತ ‘ಕಥೆ ಬರೆಯಲು ನನ್ನ ಅಭ್ಯಂತರವಿಲ್ಲ. ಆದರೆ ನಾನು ಹೇಳುವವರೆಗೂ ಅದನ್ನು ಪ್ರಕಟಿಸಬಾರದು. ಅಕಸ್ಮಾತ್ ನಡುವೆ ನಾನೇನಾದರೂ ಸತ್ತರೆ ಅದನ್ನೇ ನನ್ನ ಅನುಮತಿಯೆಂದು ತಿಳಿದು ಕಥೆಯನ್ನು ಪ್ರಕಟಿಸಬಹುದು’ ಎಂದು ಕಡಕ್ಕಾಗಿ ಉತ್ತರಿಸಿದ್ದ.

ಈಗ ಮಂಜಪ್ಪ ಸತ್ತು ಹೋಗಿದ್ದಾನೆ. ಅವನ ಆಸೆಯಂತೆ ಕಥೆಯನ್ನು ಪ್ರಕಟಿಸುತ್ತಿದ್ದೇನೆ.

2

ಮಂಜಪ್ಪ ನನಗೆ ಪರಿಚಯವಾಗಿದ್ದು ಸುಮಾರು ೨೫ ವರ್ಷಗಳ ಹಿಂದೆ. ಆಗ ನಾನು ಕಾಜೂರು ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದೆ. ಆರನೇ ತರಗತಿಗೆ ಮಂಜಪ್ಪ ಅಡ್ಮಿಷನ್ ಆಗಿದ್ದ. ಐದನೇ ತರಗತಿಯವರೆಗೆ ಮಾವನ ಮನೆಯಲ್ಲಿದ್ದು, ಅಲ್ಲಿನ ಶಾಲೆಯಲ್ಲಿ ಓದುತ್ತಿದ್ದನಂತೆ. ಸರ್ಕಾರಿ ಶಾಲೆಯಾಗಿದ್ದರಿಂದಲೂ ಎಲ್ಲಾ ತರಗತಿಗಳು ಒಂದೇ ಕೊಠಡಿಯಲ್ಲಿ ನಡೆಯುತ್ತಿದ್ದರಿಂದಲೂ ಆತನನ್ನು ಮೊದಲ ದಿನವೇ ನೋಡಿದ್ದೆ. ಅಂದೇ ಸಂಜೆ ವಾಪಸ್ ಮನೆಗೆ ಬರುವಾಗ ದಾರಿಯಲ್ಲಿ ಅವನೂ ಗಾಜೂರಿನವನೆಂದು ತಿಳಿಯಿತು. ಗಾಜೂರಿನ ಹುಡುಗರಿಗೆ ಆತನ ಪರಿಚಯವಿತ್ತು. ನಾನು ಗಾಜೂರಿನಿಂದ ಆಚೆಗಿದ್ದ ತೋಟದ ಮನೆಯವನು. ಅಲ್ಲಿಗೆ ನಾವು ಬಂದು ಐದಾರು ವರ್ಷಗಳು ಕಳೆದಿದ್ದವು ಅಷ್ಟೆ.

ದಾರಿಯಲ್ಲಿದ್ದ ಬೃಹತ್ ಗಾತ್ರದ ಹುಣಿಸೆ ಮರದಲ್ಲಿ, ಅವತ್ತು ಗಾಜೂರಿನ ಕೆಲವರು ಇದ್ದುದ್ದು ನಮ್ಮ ಗಮನಕ್ಕೆ ಬಂತು. ನಾವೆಲ್ಲರೂ ಆಶ್ಚರ್ಯದಿಂದ ನೋಡುತ್ತಾ, ಮರದಲ್ಲಿದ್ದ ದೋರೆ ಹಣ್ಣನ್ನು ಕಿತ್ತುಕೊಡುವಂತೆ ಕೂಗತೊಡಗಿದ್ದವು. ಆಗ ಮರದ ಮೇಲಿದ್ದವನೊಬ್ಬನು ‘ಎಲ್ಲರಿಗೂ ಕಿತ್ತು ಕೊಡುತ್ತೇನೆ. ಕಿರುಚಬೇಡಿ. ಯಾರಾದರೂ ಕೇಳಿದರೆ ನಾವು ಇಲ್ಲಿರುವುದನ್ನು ಹೇಳಬೇಡಿ’ ಎಂದು ಗೊಂಚಲು ಗೊಂಚಲು ಹುಣಿಸೆಕಾಯಿ ಕಿತ್ತು ಹಾಕಿದ. ಹಾಗೆ ಹಾಕಿದ ಒಂದು ಗೊಂಚಲಿಗೆ ನಾನೂ ಮಂಜಪ್ಪ ಒಟ್ಟಿಗೆ ಕೈಹಾಕಿ ಕಿತ್ತಾಡಿ, ಅದಕ್ಕಾಗಿ ಜಗಳವನ್ನೂ ಆಡಿದೆವು. ನಂತರ ಬೇರೆ ಹುಡುಗರು, ಮೊದಲ ದಿನವೇ ಜಗಳಕ್ಕಿಳಿದ ಆತನನ್ನು ಬೈದು, ಇಬ್ಬರಿಗೂ ರಾಜಿ ಮಾಡಿಸಿ ‘ಪ್ರೆಂಡ್ಸ್’ ಮಾಡಿಸಿದ್ದರು.

ಗಾಜೂರಿನ ಎರಡು ಪಾರ್ಟಿಗಳಿಗೆ ಗಲಾಟೆಯಾಗಿದ್ದರಿಂದ, ಪೊಲೀಸಿನವರು ಬಂದು ಎಳೆದೊಯ್ಯುತ್ತಾರೆಂದು ಊರಿನ ಗಂಡಸರೆಲ್ಲಾ ಕಾಡು ಸೇರಿದ್ದರು. ಹುಣಿಸೆ ಮರದಲ್ಲಿ ಕೆಲವರು ಬಚ್ಚಿಟ್ಟುಕೊಂಡಿದ್ದಕ್ಕೆ ಅದೇ ಕಾರಣ.

ದಿನಾ ನಾವು ಬಂದು ಹೋಗುತ್ತಿದ್ದ ದಾರಿಯಲ್ಲಿ ಕಾಜೂರಿನ ಹೊಲಗೇರಿಯಿತ್ತು. ಅಲ್ಲಿಯ ರೇವಯ್ಯ ಮೇಸ್ಟರ ಹಿತ್ತಲಿನಲ್ಲಿದ ಸೀಬೆಹಣ್ಣಿನ ಮರದಿಂದ ಹಣ್ಣನ್ನು ಕದಿಯುವುದೆಂದು ನಾನೂ ಮಂಜಪ್ಪ ಹೇಳಿದಾಗ ಬೇರೆಯವರು ಆಸಕ್ತಿ ತೋರಿಸಲಿಲ್ಲ. ರೇವಯ್ಯನವರು ನಮಗೆ ಮೇಸ್ಟರಲ್ಲವಾದರೂ, ನಮ್ಮ ಮೇಸ್ಟರುಗಳಿಗೆ ಹೇಳಿ ಬೆತ್ತದ ರುಚಿ ತೋರಿಸುತ್ತಾರೆಂಬ ಭಯ. ಹಿಂದೊಮ್ಮೆ ಹಾಗೆ ಮಾಡಿದ್ದರಂತೆ.

ಆದರೆ ನಾವು ಮಾತ್ರ ಸೀಬೆಕಾಯಿ ಕೀಳಲು ನಿರ್ಧರಿಸಿದ್ದೆವು.

ನಾನು ಮರ ಹತ್ತಿ ಕಾಯಿ ಕೀಳುವುದೆಂದು, ಮಂಜಪ್ಪ ಕೆಳಗೆ ನಿಂತು ಯಾರಾದರೂ ಬಂದರೆ ತಿಳಿಸುವುದೆಂದು ತೀರ್ಮಾನವಾಗಿತ್ತು. ಅದರಂತೆ ನಾನು ಮರ ಹತ್ತಿದ್ದಾಗ, ಏನೋ ಸದ್ದಾಯಿತೆಂದು ನನಗೆ ಹೇಳದೆ ಮಂಜಪ್ಪ ಓಡಿ ಹೋಗಿದ್ದ. ಕೆಳಗಿಳಿದ ನನಗೆ ಮಂಜಪ್ಪ ಹೀಗೆ ಮಾಡಿದ್ದು ಸಿಟ್ಟು ಭರಿಸಿತ್ತು. ಓಡಿ ಹೋಗಿ, ಹೆಗಲಲ್ಲಿದ್ದ ಚೀಲವನ್ನು ಕೈಯಿಗೆ ತಗೆದುಕೊಂಡು ಬೀಸಿ ಮಂಜಪ್ಪನಿಗೆ ಹೊಡೆದಿದ್ದೆ. ಆತ ತಲೆಯನ್ನು ಸ್ವಲ್ಪ ಬಲಕ್ಕೆ ವಾಲಿಸಿದ್ದರಿಂದ ಏಟು ಎಡಗಿವಿಯ ಕಡೆಗೆ ಬಿತ್ತು. ಆತನ ಕಿವಿ ತಲೆಬುರುಡೆಗೆ ಅಂಟಿಕೊಂಡಿದ್ದಲ್ಲಿ ಬಿರುಕು ಬಿಟ್ಟು ರಕ್ತ ಒಸರಿತ್ತು. ಆತ ಇಡೀ ಬೀದಿಗೆ ಕೇಳುವಂತೆ ಅಳತೊಡಗಿದ್ದ. ಬೇರೆ ಹುಡುಗರು ‘ಹೆಚ್ಚೇನು ಏಟು ಆಗಿಲ್ಲ’ ಎಂದು ಸಮಾಧಾನ ಮಾಡಿದರೂ, ಮನೆಯಲ್ಲಿಯೂ ಸ್ಕೂಲಿನಲ್ಲಿಯೂ ದೂರು ಹೇಳುವುದಾಗಿ ಅಳುತ್ತಲೇ ಹೇಳುತ್ತಿದ್ದ.

ಭಯದಿಂದಾಗಿ ನಾನೂ ಅಳುತ್ತಿದ್ದೆ.

‘ಹುಡುಗರಲ್ಲಿ ಒಗ್ಗಟ್ಟಿರಬೇಕೆಂದು, ಇಂತಹ ಸಣ್ಣಪುಟ್ಟ ವಿಷಯವನ್ನೆಲ್ಲ ಮನೆಯಲ್ಲಿ ಮೇಷ್ಟರಲ್ಲಿ ಹೇಳಬಾರದೆಂದು’ ಬೇರೆ ಹುಡುಗರು ತೀರ್ಮಾನಿಸಿದರು. ಮಂಜಪ್ಪನ ಸಮಾಧಾನಕ್ಕಾಗಿ, ಆತನಿಗೆ ನಾನು ನನ್ನಲ್ಲಿದ್ದ ದುಡ್ಡನ್ನು ಔಷಧಿಗಾಗಿ ಕೊಡುವಂತೆ ಹೇಳಿದರು. ‘ಏನೆ ಬರಲಿ ಒಗ್ಗಟ್ಟರಲಿ’ ಎಂದು ಮೆರವಣಿಗೆಯಲ್ಲಿ ಕೂಗಿ ಕೂಗಿ ಸ್ಫೂರ್ತಿಗೊಂಡಿದ್ದ ಹುಡುಗರೆಲ್ಲ ಅದಕ್ಕೆ ಒಪ್ಪಿದರು. ನನ್ನ ಅನುಮತಿಯನ್ನು ಯಾರೂ ಕೇಳಲಿಲ್ಲ. ನನ್ನ ತರಗತಿಗೆ ನಾನೇ ಲೀಡರ್ ಆಗಿದ್ದರಿಂದ ಬಾವುಟ ಮಾರಲು ನನಗೆ ಕೊಟ್ಟಿದ್ದರು. ಹದಿನೈದು ಬಾವುಟ ಮಾರಿ ಒಂದೂವರೆ ರೂಪಾಯಿ ಸಂಗ್ರಹಿಸಿದ್ದೆ. ಹಣ ತೆಗೆದುಕೊಳ್ಳಬೇಕಾಗಿದ್ದ ಮೇಷ್ಟರು ಅಂದು ಬಂದಿರಲ್ಲವಾದ್ದರಿಂದ ಹಣ ನನ್ನೊಂದಿಗೆ ಇತ್ತು. ವಿಧಿಯಿಲ್ಲದೆ ಅಷ್ಟೂ ಹಣವನ್ನು ಮಂಜಪ್ಪನಿಗೆ ಕೊಟ್ಟೆ.

ನಾಳೆ ಮೇಷ್ಟರಿಗೆ ಕೊಡಲು ಒಂದೂವರೆ ರೂಪಾಯಿಯನನ್ನು ಅಜ್ಜಿಯ ಚೀಲದಲ್ಲಿ ಕದಿಯಲು ತೀರ್ಮಾನಿಸಿದ್ದೆ.

ದೇವರು ದಯಾಮಯನಾಗಿದ್ದ. ಅಜ್ಜಿಯ ಚೀಲದಿಂದ ದುಡ್ಡು ಕದಿಯುವ ಪ್ರಸಂಗವೇ ಬರಲಿಲ್ಲ. ರಾತ್ರಿ ಎಲೆ ಅಡಿಕೆ ಹಾಕುತ್ತಿದ್ದ ಅಜ್ಜಿಯ ಚೀಲದಿಂದ ಆಕಸ್ಮಿಕವಾಗಿ ಚಿಲ್ಲರೆ ಬಿದ್ದಹೋದವು. ಅದನ್ನ್ತು ಅಜ್ಜಿಗೆ ಎತ್ತಿಕೊಡುತ್ತ ‘ನಾಳೆ ಸ್ಕೂಲಿನಲ್ಲಿ ಮ್ಯಾಜಿಕ್ ತೋರಿಸಲು ಬರುತ್ತಾರೆ. ಮೇಷ್ಟರು ಒಂದೂವರೆ ರೂಪಾಯಿ ತರಲು ಹೇಳಿದ್ದಾರೆ’ ಎಂದು ಸುಳ್ಳು ಹೇಳಿದೆ. ಕೈತುಂಬ ಚಿಲ್ಲರೆ ಇದ್ದುದರಿಂದಲೋ ಏನೋ, ಅಜ್ಜಿ ಸುಮ್ಮನೆ ಕೊಟ್ಟುಬಿಟ್ಟಳು.

ಆದರೆ ಸ್ಕೂಲಿನಲ್ಲಿ ಅದೃಷ್ಟ ನನ್ನ ಕಡೆಗಿರಲಿಲ್ಲ.

ಮಂಜಪ್ಪ ತಲೆಗೆ ಒಂದು ದಪ್ಪ ಟವೆಲ್ಲನ್ನು ಸುತ್ತಿಕೊಂಡು, ಜೊತೆಯಲ್ಲಿ ಅವನ ದೊಡ್ಡಣ್ಣನನ್ನು ಕರೆದುಕೊಂಡು ಬಂದಿದ್ದ. ಮೇಷ್ಟರ ಕೋಲು ಮುರಿಯುವವರೆಗೂ ನನಗೆ ಏಟು ಬಿತ್ತು. ದುಡ್ಡೂ ಹೋಯಿತು.

ಈ ಘಟನೆಯ ನಂತರ ಮಂಜಪ್ಪನಿಗೆ ನಾನು ‘ಠೂ’ ಬಿಟ್ಟುಬಿಟ್ಟೆ.

ಏಳನೇ ತರಗತಿ ಮುಗಿದ ನಂತರ ನಾನು ಅವನನ್ನು ಬೇಟಿಯಾಗಿದ್ದು ಬೊಂಬಾಯಿಯ ಹ್ಯಾಂಗಿಗ್ ಗಾರ್ಡನ್ ಬಳಿ; ಅದೂ ಸುಮಾರು ಹತ್ತು ವರ್ಷಗಳ ನಂತರ!

3

ನಾನು ಹೈಸ್ಕೂಲಿಗೆ ಕಾಜೂರುಮಠದಲ್ಲಿದ್ದ ಹಾಸ್ಟೆಲ್ಲಿಗೆ ಸೇರಿದ್ದೆ. ಮಂಜಪ್ಪ ಹೈಸ್ಕೂಲಿಗೆ ಬೇರೆ ಊರಿಗೆ ಹೋಗಿದ್ದರಿಂದ ಆತನ ಬೇಟಿಯಾಗಲಿಲ್ಲ. ಹೀಗೇ ಒಂದು ದಿನ ಇದ್ದಕ್ಕಿದ್ದಂತೆ ‘ಮಂಜಪ್ಪ ಓಡಿಹೋಗಿದ್ದಾನೆ’ ಎಂಬ ಸುದ್ದಿ ಹರಡಿತು. ಗಣೇಶ ಹಬ್ಬದ ಮಾರನೇ ದಿನ, ಅಕ್ಕಂದಿರ ಊರಿಗೆ ಕಾಯಿಕಣ ಕೊಡಲು ಹೋಗಿದ್ದ ಮಂಜಪ್ಪ ಕಾಣೆಯಾಗಿಬಿಟ್ಟಿದ್ದ. ಇಬ್ಬರು ಅಣ್ಣಂದಿರು, ಒಬ್ಬ ತಮ್ಮ, ಇಬ್ಬರು ಅಕ್ಕಂದಿರು ಅಪ್ಪ ಅವ್ವ ಇವರನ್ನೆಲ್ಲಾ ಬಿಟ್ಟು ಓಡಿ ಹೋಗಿದ್ದ.

ಎಲ್ಲಿಗೆ ಹೋಗಿದ್ದ ಎಂಬುದು ಮಾತ್ರ ಗೊತ್ತಾಗಲಿಲ್ಲ.

ಕೆಲವರು ಅವನು ಸತ್ತು ಹೋಗಿರಬಹುದೆಂದರು. ಇನ್ನು ಕೆಲವರು ಯಾವುದೋ ಡ್ಯಾಮು ಕಟ್ಟಲು ಬಲಿ ಕೊಟ್ಟಿದ್ದಾರೆ ಎಂದರು. ಅವನ ಮನೆಯವರು ಕೇಳದ ಶಾಸ್ತ್ರಗಳಿಲ್ಲ. ಮಾಡದ ದೇವರುಗಳಿಲ್ಲ. ಯಾರು ಯಾರೋ ಹೇಳಿದ್ದನ್ನೆಲ್ಲಾ ಮಾಡಿದರು. ಮಾಟ ಮಂತ್ರ ಮಾಡಿಸಿದರು.

ಏನೂ ಪ್ರಯೋಜನವಾಗದೆ, ಅವನೊಬ್ಬನಿದ್ದ ಎಂಬುದನ್ನು ಮರೆತೂಬಿಟ್ಟರು!

4

ಮುಂದೆ ನಾನು ಮಾನಸಗಂಗೋತ್ರಿ ಸೇರಿದ್ದೆ.

ಎಂ.ಎಸ್ಸಿ. ಎರಡನೇ ವರ್ಷ ಹುಡುಗರೆಲ್ಲಾ ಉತ್ತರಭಾರತದ ಟೂರ್ ಹೋಗಿದ್ದೆವು. ವಾಪಸ್ ಬರುವಾಗ ಬೊಂಬಾಯಿ ಕಡೆಯ ನೋಡುತಾಣವಾಗಿತ್ತು. ಹ್ಯಾಂಗಿಗ್ ಗಾರ್ಡನ್ ಬಳಿ ಬಂದಾಗ, ಅಂದು ನನಗೆ ಸ್ವಲ್ಪ ತಲೆನೋವಿದ್ದರಿಂದ ನಾನು ಬಸ್ಸಿನಲ್ಲೆ ಕುಳಿತೆ. ಆಗಲೇ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಹಸಿವಿನಿಂದ ನನಗೆ ಹಾಗೇ ಜೂಗರಿಕೆ ಹತ್ತಿತ್ತು.

ಯಾರೋ ನನ್ನ ಹೆಸರನ್ನು ಕರೆಯುತ್ತಿರುವಂತೆ ಕೇಳಿ ಎಚ್ಚರವಾಯಿತು. ಮತ್ತೆ ಮತ್ತೆ ನನ್ನ ಹೆಸರನ್ನು ಕರೆದಂತಾಗಿ, ಕೇಳಿದ್ದು ಕನಸಲ್ಲವೆಂದುಕೊಂಡೆ.

ಕಿಟಕಿಯಿಂದ ಹೊರಗೆ ಇಣುಕಿ ದೃಷ್ಟಿ ಹಾಯಿಸಿದೆ.

ಅಲ್ಲಿದ್ದ ಆಟೋದಲ್ಲಿ ಕುಳಿತಿದ್ದ ವ್ಯಕ್ತಿ ನನ್ನನ್ನು ನೋಡಿ ಹಲ್ಲು ಕಿರಿಯಿತು.

ನನಗೆ ಪೆಚ್ಚಾಯಿತು. ಬೊಂಬಾಯಿಯಲ್ಲಿ ನನಗಾರೂ ಪರಿಚಯದವರಿರಲಿಲ್ಲ. ಅಲ್ಲಿ ಪರಿಚಯದ ನೆಪ ಹೇಳಿ ಮೋಸ ಮಾಡುತ್ತಾರೆಂದು, ಕೆಲವರು ನಾವು ಟೂರ್ ಹೊರಟಾಗ ಹೇಳಿದ್ದರಿಂದ ಹೆದರಿಕೊಂಡು, ಅವನ ಹಲ್ಕಿರಿತಕ್ಕೆ ನಾನು ಪ್ರತಿಕ್ರಿಯಿಸಲಿಲ್ಲ.

ಮತ್ತೆ ನನ್ನ ಹೆಸರನ್ನು ಆತ ಕೂಗಿದಾಗ, ಅನೈಚ್ಛಿಕವಾಗಿ ‘ಏನು?’ ಎಂಬಂತೆ ತಲೆಯಾಡಿಸಿದೆ.

‘ನೀನು ಗಾಜೂರಿನ ತೋಟದ ಮನೆಯವನಲ್ಲವಾ?’ ಎಂದು ಕನ್ನಡದಲ್ಲಿಯೇ ಕೇಳಿದಾಗ ನನಗೆ ಮೂರ್ಛೆ ಬೀಳುವುದೊಂದು ಬಾಕಿ. ಹೌದೆಂದೆ.

ತಕ್ಷಣ ಆಟೋ ಇಳಿದು ಬಂದ ಆತ ‘ನಾನು ಕಣೋ ಮಂಜಪ್ಪ. ಗೊತ್ತಾಗಲಿಲ್ಲವಾ?’ ಎಂದ.

ಒಂದು ನಿಮಿಷ ನಾನು ನಾನಾಗಿ ಉಳಿದಿರಲಿಲ್ಲ. ಆಶ್ಚರ್ಯದಿಂದ ಅವನನ್ನು ನೋಡುತ್ತಿದ್ದೆ.

ಸಾವಿರ ಪ್ರಶ್ನೆಗಳು ಮನಸ್ಸಿಗೆ ಬಂದವು. ಬಾಯಿಗೆ ಬರಲಿಲ್ಲ.

‘ಗೊತ್ತಾಗಲಿಲ್ಲವಾ?’ ಎಂದು ಮತ್ತೊಮ್ಮೆ ಕೇಳಿದಾಗ ‘ಗೊತ್ತಾಯಿತು’ ಎಂದುಸುರಿದೆ. ‘ಆಗ ‘ಠೂ’ ಬಿಟ್ಟಿದ್ದನ್ನು ಇನ್ನೂ ಮರೆತಿಲ್ಲವೆನೋ’ ಎಂದು ನಕ್ಕ. ನನಗೆ ನಗು ಬರಲಿಲ್ಲ.

ಸೀರಿಯಸ್ಸಾಗಿ ಕೇಳಿದೆ. ‘ಏನು ನಿನ್ನ ಕಥೆ. ನಿಮ್ಮ ಮನೆಯವರು ನಿನಗಾಗಿ ತುಂಬಾ ಹುಡುಕಿದರು ಗೊತ್ತಾ?’ ಎಂದೆ.

ಅಷ್ಟರಲ್ಲಿ ಅಲ್ಲೇ ಹತ್ತಿರದಲ್ಲಿ ಜೋರಾಗಿ ಜಗಳ ಶುರುವಾಯಿತು. ದೊಡ್ಡ ಗುಂಪೇ ಸೇರಿತು. ಐದೇ ನಿಮಿಷದಲ್ಲಿ ಪೊಲೀಸರು ಬಂದರು.

ಮಂಜಪ್ಪ ನನ್ನನ್ನು ಆಟೋ ಕಡೆಗೆ ತಳ್ಳುತ್ತ ‘ಅದೊಂದು ದೊಡ್ಡ ಕಥೆ. ಎಲ್ಲವನ್ನೂ ಹೇಳುತ್ತೇನೆ. ಈಗ ಹೇಳು ನೀನೆಲ್ಲಿ ಉಳಿದುಕೊಂಡಿದ್ದೀಯಾ?’ ಎಂದ. ನಾನು ‘ಐಐಟಿ ಕ್ಯಾಂಪಸ್ಸಿನಲ್ಲಿ’ ಎಂದೆ. ‘ಹೌದೇ?! ಅದು ನಾನಿರುವಲ್ಲಿಗೆ ಬಹಳ ಹತ್ತಿರ. ನಾನೇ ನಿನ್ನನ್ನು ಸಂಜೆ ಅಲ್ಲಿ ಬಿಡುತ್ತೇನೆ. ಈಗ ಬಾ ಹೋಗೋಣ. ಜಗಳ ಜಾಸ್ತಿಯಾಗಿ ಗೋಲಿಬಾರ್ ಆದರೂ ಆಶ್ಚರ್ಯವಿಲ್ಲ’ ಎಂದ. ಗಲಾಟೆಯ ಗುಂಪು ನಮ್ಮ ಹತ್ತಿರಕ್ಕೆ ಬಂತು.

ನಾನು ನಮ್ಮ ಹುಡುಗರು ಹೋಗಿದ್ದ ಕಡೆ ನೋಡಿದೆ. ದೂರದಲ್ಲಿ ಕಂಡ ಒಬ್ಬನಿಗೆ ‘ನಾನು ಸಂಜೆ ಹಾಸ್ಟೆಲ್ಲಿಗೆ ಬರುತ್ತೇನೆ’ ಎಂದು ಕೂಗಿ ಹೇಳಿ ಆಟೋ ಹತ್ತಿದೆ.

ಸ್ಟಾರ್ಟ್ ಮಾಡಿ, ಒಂದೇ ಬಾರಿಗೆ ಸ್ಪೀಡ್ ಪಿಕ್‌ಅಪ್ ಮಾಡಿಕೊಂಡು ಆಟೋ ಓಡಿಸುತ್ತಿದ್ದ ಮಂಜಪ್ಪನಿಗೆ ‘ಏನದು ಗಲಾಟೆ’ ಎಂದೆ. ‘ಏನು ಗಲಾಟೆಯೋ ಯಾರಿಗೆ ಗೊತ್ತು. ಈ ಊರಿನಲ್ಲಿ ಹಾಗೆಯೇ. ಗಲಾಟೆ ಶುರುವಾಗುವುದು ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಬೇಗ ಹಬ್ಬಿ ಬೇಗ ಮುಗಿದು ಹೋಗುತ್ತದೆ. ಅಷ್ಟರಲ್ಲಿ ಒಂದೆರಡು ಹೆಣ ಬೀಳುತ್ತವೆ’ ಎಂದ.

ಇದ್ದಕ್ಕಿದ್ದಂತೆ ಮಂಜಪ್ಪ ಸಿಕ್ಕು ಅವನ ಆಟೋದಲ್ಲಿ ನಾನು ಹೋಗುತ್ತಿರುವ ವಿಚಿತ್ರದ ಬಗ್ಗೆ ನಾನು ಯೋಚಿಸುತ್ತಿದ್ದೆ.

ಮುಂದುವರೆಯುವುದು.........

11 comments:

shivu.k said...

ಸರ್,

ಮಂಜಪ್ಪನ ಕಥೆ ಕುತೂಹಲಕರವಾಗಿದೆ. ಬಾಲ್ಯದಲ್ಲಿ ನಿಮ್ಮಾಟಗಳು, ಗಲಾಟೆ, ಕಳ್ಳತನ ಇತ್ಯಾದಿಗಳನ್ನು ಬರೆದಿರುವುದು ನಮ್ಮ ಬಾಲ್ಯವನ್ನು ಮರುಕಳಿಸುವಂತೆ ಮಾಡುತ್ತದೆ. ಮುಂದೇನಾಯಿತು...

sweet hammu said...

eradaneya bhagakke thumba kuthuhalavide. bega heli.

Me, Myself & I said...

ಸಾರ್,
ನಿಮ್ಮಿಂದ ಮತ್ತೊಂದು ಸುಂದರ ಬರಹ ಬಂದಿದ್ದಕ್ಕೆ ಅಭಿನಂದನೆಗಳು.

ಆದ್ರೆ ಸುಮ್ನೆ ಸ್ವಲ್ಪ ಕಾಲೆಳಿತೀನಿ, ಬೇಜಾರ್ ಮಾಡ್ಕಲ್ದೆ ಉತ್ತರಾ ಕೊಡಿ. ನೀವು ಸರಸ್ವತಿ ದೇವಿ ಬಗ್ಗೆ ಒಂದು ಅರ್ಥ ಪೂರ್ಣ ಬರಹ ಹಾಕಿದ್ರಲ್ಲವ? ಅದ್ರಲ್ಲಿ "ನಾನು ಒಬ್ಬ ನಾಸ್ತಿಕ, ನಂಗೆ ಅಸ್ತಿತ್ವಕ್ಕೆ ನಂಬಿಕೆ ಇಲ್ಲ, ಆದರೂ ..." ಈ ರೀತಿಯಾಗಿ ನಿಮ್ಮ ಬರಹ ಶುರು ಮಾಡಿದ್ರಿ. ಆದ್ರೆ ನೀವು ಇವತ್ತು ಬರಹದಲ್ಲಿ ಒಂದ್ಕಡೆ ಈ ರೀತಿ ಹೇಳಿದ್ದೀರಿ. "ದೇವರು ದಯಾಮಯನಾಗಿದ್ದ..."!!!
ಹ ಹ ಹ :)

ಮುಂದಿನ ಬರಹಕ್ಕೆ ಹಾಗೂ ನನ್ನ ಮೇಲಿನ ಪ್ರತಿಕ್ರಿಯೆಗೆ ನಿಮ್ಮುತ್ತರ ಕಾಯುತ್ತಿರುವೆ.

Me, Myself & I said...

ಸಾರ್,
ನಾನು ಸ್ವಲ್ಪ ತಿರುಚಿ ಬರೆದಿದ್ದೇನೆ, ನಿಮ್ಮ ಅಭಿಪ್ರಾಯ ಈ ರೀತಿ ಇತ್ತು, "(ನಾನು ನಾಸ್ತಿಕ ಮಾತ್ರ; ಆದರೆ ನಾಸ್ತಿಕವಾದಿಯಲ್ಲ ಎಂಬುದು ಗೊತ್ತಿದ್ದುದರಿಂದ ಅವರೂ ಸುಮ್ಮನಾದರು.)"

ಸುಮ್ನೆ ತಲೆ ತಿಂದದ್ದಕ್ಕೆ ಕ್ಷಮಿಸಿ

Ittigecement said...

ಸತ್ಯನಾರಾಯಣರೆ...

ನಿಮ್ಮ ಗೆಳೆಯ ಮಂಜಣ್ಣ ನನಗೆ ಇಷ್ಟವಾದ...

ಯಾವತ್ತಿನಂತೆ ಚಂದವಾದ ಲೇಖನ...

ಆಪ್ತವಾಗಿದೆ...

ಅಭಿನಂದನೆಗಳು...

AntharangadaMaathugalu said...

ಸಾರ್....
ಮಂಜಪ್ಪನ ಕಥೆ ಕುತೂಹಲಕರವಾಗಿದೆ..... ಮುಂದೇನಾಯ್ತು?

ಶ್ಯಾಮಲ

ಬಿಸಿಲ ಹನಿ said...

ಮಂಜಪ್ಪನೊಂದಗಿನ ನಿಮ್ಮ ನೆನಪುಗಳು ನಿಮ್ಮ ಆತ್ಮಕಥನದ ತುಣುಕೊಂದರಂತೆ ಭಾಸವಾಗುತ್ತವೆ. ಇದನ್ನು ಓದುತ್ತಾ ಓದುತ್ತಾ ನನಗೆ ಚಾರ್ಲ್ಸ್ ಲ್ಯಾಂಬನ “The Old Familiar Faces” ಕವನ ನೆನಪಿಗೆ ಬಂತು. ಜಗಳವಾಡಿ ದೂರ ಹೋದ ಮಂಜ ಮತ್ತೆ ನಿಮಗೆ ಸಿಕ್ಕಿದ್ದಾನೆ. ಮುಂದೇನಾಗುತ್ತದೆ? ಕುತೂಹಲದಿಂದ ಕಾಯುತ್ತಿದ್ದೇನೆ ಮುಂದಿನ ಸಂಚಿಕೆಗಾಗಿ.

ರೂpaश्री said...

satya sar,

maMjappana kathe bahaLa kutoohalakaravaagide, muMdEnaayitu aMta kaayO haage maaDiddeeri....

ದೀಪಸ್ಮಿತಾ said...

ಕತೆ ಕುತೂಹಲಕಾರಿಯಾಗಿದೆ. ಮುಂದಿನ ಭಾಗಕ್ಕೆ ಕಾಯುತ್ತಿದ್ದೇವೆ

Srushti said...

ಮಂಜಣ್ಣನ ಕತೆ ಚನ್ನಾಗಿದೆ. ಅವನು ಮರಕ್ಕೆ ಡಿಕ್ಕಿ ಹೊಡೆದು ಸತ್ತಿದ್ದು ಬೆಸರ.ನಮ್ಮ ಊರಿನ ವ್ಯಕ್ತಿಯೊಬ್ಬ ನಮ್ಮ ಕಣ್ಣು ಮುಂದೆ ಬಂದ ಹಾಗಾಯಿತು

Unknown said...

ಲೋದ್ಯಾಶಿ ಅವರೇ ನಾನು ಹೇಳಬೇಕೆಂದಿದ್ದ ುತ್ತರವನ್ನು ಕೇವಲ ಒಂದೂ ಮುಕ್ಕಾಲು ಗಂಟೆಯೊಳಗೆ ನೀವೇ ಹೇಳಿಬಿಟ್ಟಿದ್ದೀರಿ! ಶಹಬ್ಬಾಶ್!!!
ನಾಸ್ತಿಕರಿಗೂ ಬಾಲ್ಯ ಎಂಬುದಿರುತ್ತದೆ. ಅವರೂ ಕುಟುಂಬ, ಸಮಾಜ, ಧಾರ್ಮಿಕ ಚೌಕಟ್ಟುಗಳಲ್ಲಿಯೇ ಬೆಳೆದಿರುತ್ತಾರೆ. ಆಸ್ತಕರಿಗೆ ದೈವದರ್ಶನವಾಗುವಂತೆ(!!!) ನಾಸ್ತಿಕರಿಗೆ ದೇವರಿಲ್ಲ ಎಂಬ ದರ್ಶನವಾಗುತ್ತದೆ! ಇದೆಲ್ಲಾ ಒಂದೇ ರಾತ್ರಿಯಲ್ಲಿ ಆಗುವಂತಹುದಲ್ಲ. ಸುಮಾರು ಹದಿನೈದು ವರ್ಷಗಳ ಕಾಲ ಲೋಹಿಯಾ, ಕುವೆಂಪು, ಕಾರಂತ, ಪೂಚಂತೇ, ಮೂರ್ತಿರಾಯರು ಮೊದಲಾದವರ ವಿಚಾರಗಳು ನನ್ನ ಬದುಕಿನ ರೀತಿಯ ಮೇಲೆ ಪರಿಣಾಮ ಬೀರಿವೆ ಎಂಬುದಂತೂ ಸತ್ಯ.