Thursday, October 29, 2009

ಬಾಲ್ಯವೆಂಬುದು ಹೂವು ಕಣೋ... (ಮತ್ತೊಂದು ಹಳೆಯ ಕಥೆ) - 2

5
ಹೋಟೆಲಿನ ಮುಂದೆ ಆಟೋ ನಿಲ್ಲಿಸಿದ ಮಂಜಪ್ಪ ‘ಬಿಯರ್ ಕುಡಿಯುತ್ತ ಊಟ ಮಾಡುತ್ತಾ ಮಾತನಾಡುವ’ ಎಂದ. ನಾನು ‘ಊಟ ಮಾತ್ರ ಮಾಡುತ್ತೇನೆ’ ಎಂದೆ. ಖಾಲಿಯಿದ್ದ ಟೇಬಲ್ ಬಳಿ ಕುಳಿತು, ಇಬ್ಬರಿಗೂ ಮಟನ್ ಮೀಲ್ಸ್ ಮತ್ತು ಅವನಿಗೆ ಬಿಯರ್ ಆರ್ಡರ್ ಮಾಡಿದ.

‘ಊರಿನಲ್ಲಿ ನನ್ನನ್ನು ಗೇಲಿ ಮಾಡುವಾಗ ಟೆಲಿಪೋನ್ ಎಂದು ಹುಡುಗರು ಆಡಿಕೊಳ್ಳುತ್ತಿದ್ದರು. ನೆನಪಿದೆಯಾ?’ ಎಂದ. ನಾನು ಇಲ್ಲವೆಂದು ತಲೆಯಾಡಿಸಿದೆ.

‘ಹೌದಾ! ಹಾಗಾದರೆ, ಹಾಗೇಕೆ ಅನ್ನುತ್ತಿದ್ದರೆಂದು ನಿನಗೆ ಗೊತ್ತಿಲ್ಲ. ಹೇಳುತ್ತೇನೆ ಕೇಳು’ ಎಂದು ಬಿಯರ್ ಚಪ್ಪರಿಸುತ್ತ ಮುಂದುವರೆಸಿದ.

‘ಗಾಜೂರಿನ ನಮ್ಮ ಮನೆಯ ಜಗುಲಿಯಲ್ಲಿ ಒಂದು ರೂಮಿತ್ತು. ಅಲ್ಲಿ ಟೆಲಿಪೋನ್ ಲೈನ್‌ಮೆನ್ ಲಿಂಗಪ್ಪ ಬಹಳ ಕಾಲದಿಂದ ಬಾಡಿಗೆಗೆ ವಾಸವಾಗಿದ್ದ. ಅವನ ಸಂಸಾರ ಸಿಟಿಯಲ್ಲಿತ್ತು. ನಾನು ಅವನಿಗೆ ಹುಟ್ಟಿದೋನು ಎಂಬ ಕಾರಣಕ್ಕೆ ನನ್ನನ್ನು ಟೆಲಿಪೋನ್ ಎಂದು ರೇಗಿಸುತ್ತಿದ್ದರು! ನನ್ನಪ್ಪ ಇನ್ನೂ ಬದುಕಿದ್ದಾಗಲೆ ಲೈನ್‌ಮನ್ ಲಿಂಗಪ್ಪನಿಗೆ ನಾನು ಹುಟ್ಟುವುದೆಂದರೇನು? ಅಷ್ಟೇ ಕಾರಣಕ್ಕೆ ಹಾಗೆಂದವರೊಡನೆ ನಾನು ಜಗಳಕ್ಕೆ ನಿಲ್ಲುತ್ತಿದ್ದೆ.’ ಹಾಗೆಂದು ಸ್ವಲ್ಪ ಹೊತ್ತು ಸುಮ್ಮನೆ ಕುಡಿಯುತ್ತಾ ತಿನ್ನುತ್ತಾ ಇದ್ದು ನಂತರ ಮುಂದುವರೆಸಿದ. ‘ಆದರೆ ಅದು ನಿಜ! ಅದು ನಿಜವೆಂದು ಗೊತ್ತಾಗಿ ಕೇವಲ ಅರ್ಧ ದಿನದಲ್ಲೇ ನಾನು ಆ ಊರು, ಅಪ್ಪ್ವನೆನಿಸಿಕೊಂಡವನು, ಹೆತ್ತವ್ವ, ಅಣ್ಣ ತಮ್ಮ ಅಕ್ಕ ಎಲ್ಲರನ್ನೂ ಬಿಟ್ಟು ಬಂದುಬಿಟ್ಟೆ.’ ಎಂದ ನಿರುಮ್ಮಳನಾಗಿ!

ನನಗೆ ಗಾಬರಿ ಆಶ್ಚರ್ಯ ಎರಡೂ ಆಗಿತ್ತು. ಆತ ಮುಂದುವರೆಸಿದ.

‘ನಾನು ಊರು ಬಿಟ್ಟ ಹಿಂದಿನ ದಿನ ಗಣೇಶನ ಹಬ್ಬ ಅಲ್ಲವಾ? ಅವತ್ತು ನಮ್ಮೂರಿನಲ್ಲಿ ನಾಟಕ ಆಡಿದ್ದರು. ನೆನಪಿದೆಯೆ? ನನ್ನ ದೊಡ್ಡಣ್ಣನೂ ನಾಟಕದಲ್ಲಿ ಪಾತ್ರ ಮಾಡಿದ್ದ. ನಾಟಕ ನೋಡಲು ಮನೆಯವರೆಲ್ಲಾ ಹೋಗಿದ್ದೆವು. ಹಬ್ಬಕ್ಕೆ ಊರಿಗೆ ಬಂದಿದ್ದ ನಾನು ಅವ್ವನ ಜೊತೆಯಲ್ಲೇ ಕುಳಿತು ನಾಟಕ ನೋಡುತ್ತಿದ್ದೆ.

ಯಾವಾಗ ನಿದ್ರೆ ಹತ್ತಿತೋ! ಕಣ್ತೆರೆದಾಗ ಅವ್ವ ಇರಲಿಲ್ಲ.

ಬೇಸರದಿಂದ ಮನೆಯ ಕಡೆ ನಡೆದೆ. ಹೋಗಿ ನೋಡಿದರೆ ಒಳಗೆ ಲೈಟ್ ಉರಿಯುತ್ತಿತ್ತು! ಹೋಗುವಾಗ ಬೀಗ ಹಾಕಿಕೊಂಡು ಹೋಗಿದ್ದೆವು! ಈಗ ಬಾಗಿಲು ಮಾತ್ರ ಹಾಕಿದೆ!. ಬಾಗಿಲಿನ ಕಿಂಡಿಯಲ್ಲಿ ಇಣುಕಿದೆ.

ನಡುಮನೆಯಲ್ಲಿ, ಹಾಸಿದ್ದ ಚಾಪೆಯಲ್ಲಿ, ಲಿಂಗಪ್ಪ ಅವ್ವನ ಮೇಲೆ ಸವಾರಿ ಮಾಡುತ್ತಿದ್ದ. ಇಬ್ಬರೂ ಬೆತ್ತಲಾಗಿದ್ದರು.

ಅವ್ವನಿಗೆ ಮೊದಲ ಮಗಳ ಮದುವೆಯಾಗಿ ಮೊಮ್ಮಗಳು ಹುಟ್ಟಿದ್ದಳು. ಚಿಕ್ಕ ವಯಸ್ಸಿಗೆ ಮದುವೆಯಾಗಿದ್ದರಿಂದಲೋ ಏನೋ ವಯಸ್ಸಾದಂತೆ ಕಾಣುತ್ತಿರಲಿಲ್ಲ. ಲಿಂಗಪ್ಪನ ಬಲೆಗೆ ಬಿದ್ದಿದ್ದಳು. ಆದರೆ ನನಗೆ ಏನನ್ನಿಸಿತೋ ಏನೋ? ಮತ್ತೆ ನಾಟಕ ನಡೆಯುತ್ತಿದ್ದಲ್ಲಿಗೆ ಬಂದೆ. ದೂರದಲ್ಲಿ ನಿಂತುಕೊಂಡು ‘ಹೋ’ ಎಂದು ಅತ್ತುಬಿಟ್ಟೆ. ಬೆಳಿಗ್ಗೆ ಅಕ್ಕನ ಮನೆಗೆ ಕಾಯಿಕಣ ತೆಗೆದುಕೊಂಡು ಹೋಗಲು ಹೇಳಿದರು. ಹಿಂದೆ ಮುಂದೆ ಯೋಚಿಸದೆ ಲಾರಿ ಹತ್ತಿ ಬೊಂಬಾಯಿಗೆ ಬಂದುಬಿಟ್ಟೆ’ ಎಂದು ನಿಲ್ಲಿಸಿದ.

‘ಇದನ್ನು ನಾನು ನಂಬಬೇಕೆ?’ ಎಂದು ಪ್ರಶ್ನಿಸುತ್ತಿದ್ದ ನಾನ್ನನ್ನು ಮಧ್ಯದಲ್ಲಿಯೇ ತಡೆದು ‘ನಂಬದಿದ್ದರೆ ನನಗೇನು ನಷ್ಟವಿಲ್ಲ’ ಎಂದು ಅಸಹನೆಯಿಂದ ತಲೆಕೊಡವಿದ.

ನಾನು ‘ನಂಬುತ್ತೇನೆ.... ಈಗಲಾದರೂ ನೀನು ಊರಿಗೆ ಬರಬಹುದಲ್ಲ. ಈಗ ಲೈನ್‌ಮೆನ್ ಅಲ್ಲಿಲ್ಲ. ಆ ವಿಷಯವನ್ನು ಎಲ್ಲಾ ಮರೆತಿರುತ್ತಾರೆ. ನಿಮ್ಮ ಮನೆಯವರಿಗೂ ಸಮಾಧಾನವಾಗುತ್ತದೆ’ ಎಂದೆ. ‘ಬರಬಹುದಾಗಿತ್ತು. ಆದರೆ ಇಲ್ಲಿ ನಾನು ನನ್ನದೇ ಆದ ಬದುಕನ್ನು ಕಂಡುಕೊಂಡಿದ್ದೇನೆ. ನನ್ನದೇ ಆದ ತಾಪತ್ರಯಗಳಿವೆ.’ ಎಂದ.

‘ಹಾಗಾದರೆ ನೀನು ಊರಿಗೆ ಬರುವುದೇ ಇಲ್ಲವೇ’ ಎಂದೆ. ‘ಕಾಲ ಬಂದಾಗ ಬರುತ್ತೇನೆ. ಅಲ್ಲಿಯ ಆಸ್ತಿಯಲ್ಲಿ ನನಗೂ ಹಕ್ಕಿದೆ. ಅಪ್ಪನಲ್ಲದಿದ್ದರೂ ಅಪ್ಪನೆಂದು ನನ್ನ ಮೇಲೆ ಹಕ್ಕು ಚಲಾಯಿಸಿಲ್ಲವೆ ಅವರು?! ಅವರ ಆಸ್ತಿಗಾಗಿ ನಾನೂ ಹಕ್ಕು ಚಲಾಯಿಸುತ್ತೇನೆ! ಬಿಡುತ್ತೇನಾ?’ ಎಂದ.

ಆತನ ವ್ಯವಹಾರಿಕ ಮನಸ್ಥಿತಿ, ಒರಟುತನ ನನಗೆ ಅಶ್ಚರ್ಯವೆನಿಸಿತು. ಬೊಂಬಾಯಿಯು ಆತನಿಗೆ ಬದುಕು ಕೊಟ್ಟಿರುವಂತೆ ಅಲ್ಲಿನ ಕೊಳಕುತನವನ್ನು ಕೊಟ್ಟಿದೆ ಎಂದುಕೊಂಡೆ.

‘ನೀನು ನಿನ್ನ ವಿಳಾಸವನ್ನು ಕೊಡು. ನಾನು ನಿನಗೆ ಕಾಗದ ಬರೆಯುತ್ತಿರುತ್ತೇನೆ. ಅಲ್ಲಿಯ ವಿಷಯ ತಿಳಿಸುತ್ತಿರು. ಮನೆಯ ವಿಳಾಸ ಬೇಡ. ಈಗ ನೀನಿರುವ ವಿಳಾಸವನ್ನೇ ಕೊಡು’ ಎಂದ. ನಾನು ಪೆನ್ನು ಪೇಪರ್ ತೆಗೆದುಕೊಂಡು ವಿಳಾಸ ಬರೆಯತೊಡಿಗಿದೆ.

‘ನನ್ನ ತಾಯಿಯನ್ನು ನೋಡಿದರೆ ನನಗೆ ಪ್ರೀತಿ ಹುಟ್ಟುವುದಿಲ್ಲ. ನೀನು ನಿನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತೀಯ ಅಲ್ಲವಾ?’ ಎಂದ.

ನಾನು ಆತನ ಮುಖ ನೋಡಿದೆ. ನಿರ್ಭಾವುಕನಂತೆ ಕಂಡ.

ನಾನಿನ್ನೂ, ಮಧ್ಯಾಹ್ನದಿಂದ ನಡೆಯುತ್ತಿದ್ದ ಘಟನೆಗಳ ಹೊಡೆತದಿಂದ ಹೊರಬಂದಿರಲಿಲ್ಲ. ಆತನ ಮನಸ್ಥಿತಿಯನ್ನೂ ಅರಿಯಲಾಗಲಿಲ್ಲ.

‘ತುಂಬಾ ಪ್ರೀತಿಸುವ ನಿನ್ನ ತಾಯಿಯ ಮೇಲೆ ನೀನು ಆಣೆ ಮಾಡಬೇಕು! ನಾನು ಸಿಕ್ಕಿದ್ದನ್ನಾಗಲೀ, ಹೇಳಿದ್ದನ್ನಾಗಲೀ ಯಾರಿಗೂ ಹೇಳುವುದಿಲ್ಲವೆಂದು. ಮಾಡುತ್ತಿಯಾ?’ ಎಂದ. ನಾನು ಆಗಲೆಂದು ಸಮ್ಮತಿಸಿದೆ.

ವಿಳಾಸವನ್ನು ಬರೆದು ಅವನಿಗೆ ಕೊಡುತ್ತಾ, ‘ಇನ್ನೊಂದಾರು ತಿಂಗಳಷ್ಟೆ ನಾನು ಈ ವಿಳಾಸದಲ್ಲಿರೋದು. ನಂತರ ಕೆಲಸ ಸಿಕ್ಕಲ್ಲಿಗೆ ಹೋಗುತ್ತೇನೆ. ಆಗ ಹೊಸ ವಿಳಾಸ ತಿಳಿಸಿ ಕಾಗದ ಬರೆಯುತ್ತೇನೆ. ನಿನ್ನ ವಿಳಾಸವನ್ನೂ ಕೊಡು’ ಎಂದೆ. ಆತ ಹೇಳಿದಂತೆ ಡೈರಿಯಲ್ಲಿ ಬರೆದುಕೊಂಡೆ.

ಸಂಜೆ ಆರರವರೆಗೆ ಅದೂ ಇದೂ ಮಾತನಾಡಿ, ನನ್ನನ್ನು ಐಐಟಿ ಕ್ಯಾಂಪಸ್ ಬಳಿ ಬಿಟ್ಟು ಹೊರಡುವಾಗ, ನಾನು ‘ಹಣವೇನಾದರು ಬೇಕೆ?’ ಎಂದೆ.

‘ಸಧ್ಯಕ್ಕೆ ಅದರ ಅಗತ್ಯವಿಲ್ಲ’ ಎಂದು ಆಟೋ ಸ್ಟಾರ್ಟ್ ಮಾಡಿಕೊಂಡು ಹೊರಟೇಬಿಟ್ಟ.

6
ನನ್ನ ಎಂ.ಸ್ಸಿ, ಮುಗಿದು ಕೆಲಸಕ್ಕೆ ನಾನು ಬೆಂಗಳೂರಿನ ದಾರಿ ಹಿಡಿದೆ. ಈ ನಡುವೆ ಮಂಜಪ್ಪನಿಗೆ ಒಂದು ಕಾಗದ ಬರೆದಿದ್ದೆನಷ್ಟೆ. ಅವನಿಂದ ಉತ್ತರ ಬಂದಿರಲಿಲ್ಲ. ಬೆಂಗಳೂರಿಗೆ ಬಂದ ಮೇಲೆ ಹೊಸ ವಿಳಾಸ ತಿಳಿಸಿ ಕಾಗದ ಬರೆದೆ. ಹದಿನೈದು ದಿನಗಳಲ್ಲಿ ಕಾಗದ ವಾಪಸ್ ಬಂತು! ಆತನೂ ಮನೆ ಬದಲಾಯಿಸಿರಬಹುದೆಂದು, ಇನ್ನು ಮುಂದೆ ನಮ್ಮಿಬ್ಬರ ನಡುವೆ ಸಂಪರ್ಕ ಸಾಧ್ಯವೇ ಇಲ್ಲವೆಂದುಕೊಂಡು ಸುಮ್ಮನಾದೆ. ಆಶ್ಚರ್ಯವೆಂದರೆ ಆರು ತಿಂಗಳು ಕಳೆಯುವುದರೊಳಗಾಗಿ ಮಂಜಪ್ಪನಿಂದ ನನ್ನ ಹೊಸ ವಿಳಾಸಕ್ಕೇ ಕಾಗದ ಬಂತು! ನನ್ನ ಕಾಗದ ತಲುಪುವಷ್ಟರಲ್ಲಿ ಮಂಜಪ್ಪ ಆತನಿದ್ದ ಕೊಠಡಿಯನ್ನು ಖಾಲಿ ಮಾಡಿದ್ದನಂತೆ. ಆದರೆ ಕಾಗದ ಅಲ್ಲಿಗೆ ತಲುಪಿದಾಗ ಅಲ್ಲಿದ್ದವನು, ಆ ಕಾಗದದ ಹಿಂದಿದ್ದ ವಿಳಾಸವನ್ನು ಓದಿ ನೆನಪಿಟ್ಟುಕೊಂಡಿದ್ದನಂತೆ! ಯಾವಾಗಲೋ ಸಿಕ್ಕಿ ಕಾಗದ ಬಂದ ವಿಷಯ ಮಂಜಪ್ಪನಿಗೆ ತಿಳಿಸಿದ್ದರಿಂದ ಕಾಗದ ಬರೆದಿದ್ದ.
ಮತ್ತೆ ಎರಡು ವರ್ಷಗಳ ಕಾಲ ಅವನ ಕಡೆಯಿಂದ ಯಾವ ಕಾಗದವೂ ಬರಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಬಂದ ಟೆಲಿಗ್ರಾಮ್‌ನಿಂದಾಗಿ, ಆ ದಿನವೇ ಆತ ವಾಪಸ್ ಗಾಜೂರಿಗೆ ಬರುತ್ತಿದ್ದಾನೆಂದು ತಿಳಿಯಿತು.

ಅದಾದ ಒಂದೆರಡು ವಾರಗಳ ನಂತರ, ಊರಿಗೆ ಹೋದಾಗ ನನಗೆ ಆಶ್ಚರ್ಯವೊಂದು ಕಾದಿತ್ತು. ಯಾರೋ ಅಂಜನ ಹಾಕುವವನು ‘ಮಂಜಪ್ಪನನ್ನು ಕೊಂದು ನೀರಿಗೆ ಎಸೆದಿದ್ದಾರೆ’ ಎಂದಿದ್ದನಂತೆ!

ಅದನ್ನು ನಂಬಿ, ಮಂಜಪ್ಪ ವಾಪಸ್ಸು ಬಂದ ದಿನವೇ ಆತನಿಗೆ ಹಾಲು-ತುಪ್ಪ ಬಿಡಲು, ಆತನ ಮನೆಯವರು ತಯಾರಿ ನಡೆಸಿದ್ದರಂತೆ!

ಅಂದೇ ಸಂಜೆ ಅವನನ್ನು ಹುಡುಕಿಕೊಂಡು ನಾನು ಊರೊಳಗೆ ಹೊರಟೆ. ನನ್ನನ್ನು ನೋಡಿದೊಡನೆ ‘ಬಾ ಹೊರಗೆ ಹೋಗಿ ಮಾತನಾಡುವ’ ಎಂದು ಹೊರಟ. ದಾರಿಯಲ್ಲಿ ‘ನೋಡಿದೆಯಾ. ಇಲ್ಲಿ ಇವರು ನನ್ನ ತಿಥಿ ಮಾಡಲು ತಯಾರಿ ನಡೆಸಿದ್ದರು’ ಎಂದ.

ನಾನು ‘ಊರು ಬಿಟ್ಟದ್ದಕ್ಕೆ ಮನೆಯವರಿಗೆ ಊರವರಿಗೆ ಏನು ಹೇಳಿದೆ?’ ಎಂದು ಪ್ರಶ್ನಿಸಿದೆ.

‘ಕಾಯಿಕಣ ತೆಗೆದುಕೊಂಡು ಲಾರಿ ಹತ್ತಿ ಕುಳಿತುಕೊಂಡವನಿಗೆ, ನಿದ್ದೆ ಬಂತು. ಎಚ್ಚರವಾದಾಗ ನಾನು ಬೊಂಬಾಯಿಯಲ್ಲಿದ್ದೆ. ನಂತರ ಲಾರಿಯವನೇ ನನ್ನನ್ನು ಸಾಕಿಕೊಂಡ. ಲಾರಿ ಓಡಿಸಿಕೊಂಡು ಜೀವನ ನಡೆಸುತ್ತಿದ್ದೆ ಎಂದು ಹೇಳಿದೆ. ಮತ್ತೆ ಮತ್ತೆ ಅಲ್ಲಿನ ವಿಷಯವನ್ನು ಪ್ರಶ್ನಿಸಬಾರದೆಂದು, ಪ್ರಶ್ನಿಸಿದರೆ ಮತ್ತೆ ವಾಪಸ್ಸು ಹೋಗುತ್ತೇನೆ ಎಂದು ಹೇಳಿದೆ. ನಾನು ಹೋದ ಹಿಂದಿನ ರಾತ್ರಿ ನಾಟಕ ನೋಡಿ ನಿದ್ದೆಗೆಟ್ಟುದ್ದರಿಂದ, ನಿಜವೆಂದು ಎಲ್ಲಾ ನಂಬಿದ್ದಾರೆ. ಹೆಚ್ಚಿಗೆ ಏನನ್ನೂ ಪ್ರಶ್ನಿಸುತ್ತಲೂ ಇಲ್ಲ’ ಎಂದ.

ಮಂಜಪ್ಪ ಸ್ವಲ್ಪ ಮೆತ್ತಾಗದಂತೆ ಕಂಡುಬಂದ. ಬೊಂಬಾಯಿಯಲ್ಲಿ ಕಂಡಿದ್ದ ಒರಟುತನ ಇಲ್ಲಿ ಕಾಣಲಿಲ್ಲ.

ಮತ್ತೆ ಆತನೇ ಮಾತನಾಡಿದ. ‘ಇಲ್ಲಿ ನನ್ನ ತಿಥಿಗೆ ತಯಾರಿ ನಡೆದಿತ್ತು ಅಂದಿದ್ದಕ್ಕೆ ನೀನು ಏನೂ ಹೇಳಲಿಲ್ಲ?’ ಅಂದ. ನಾನು ‘ಅದರಲ್ಲೇನು ಆಶ್ಚರ್ಯ. ಓಡಿ ಹೋದವನು ಹನ್ನೆರಡು ವರ್ಷವಾದರೂ ಬರದಿದ್ದರೆ ಅವರೇನು ಮಾಡುತ್ತಾರೆ’ ಎಂದೆ. ‘ಅದರಲ್ಲಿ ನನಗೇನೂ ಆಶ್ಚರ್ಯವಿಲ್ಲ. ಆದರೆ, ನಾನು ಬೊಂಬಾಯಿಯನ್ನು ಬಿಡುವುದು ಒಂದು ದಿನ ತಡವಾಗಿದ್ದರೂ ನನ್ನ ಕೊಲೆಯಾಗುತ್ತಿತ್ತು ಗೊತ್ತಾ!?’ ಎಂದ.

ನನಗೆ ಗಾಬರಿಯಾಯಿತು. ಅದನ್ನು ಅರ್ಥ ಮಾಡಿಕೊಂಡವನಂತೆ, ‘ಇನ್ನೇನು ಭಯವಿಲ್ಲ ಬಿಡು. ಮತ್ತೆ ನಾನು ಬೊಂಬಾಯಿಗೆ ಹೋಗುವುದಿಲ್ಲ. ಅಲ್ಲಿ ಏನು ಮಾಡುತ್ತಿದ್ದೆ? ಹೇಗಿದ್ದೆ? ಎಂಬುದೆಲ್ಲಾ ಒಂದು ಕನಸು ಅಷ್ಟೆ. ಅಷ್ಟೂ ದಿನಗಳು ನನ್ನ ಪಾಲಿಗೆ ನನ್ನವಲ್ಲ. ಅದರ ಬಗ್ಗೆ ನೀನೂ ಮರೆತುಬಿಡಬೇಕು. ಬಾಯಿ ತಪ್ಪಿಯೂ ಯಾರಿಗು ಹೇಳಕೂಡದು. ನನ್ನನ್ನು ಏನೂ ಕೇಳಕೂಡದು. ಅಗತ್ಯ ಬಿದ್ದಲ್ಲಿ ನನ್ನ ಬೊಂಬಾಯಿಯ ಜೀವನವನ್ನು ನಾನೇ ನಿನಗೆ ಹೇಳುತ್ತೇನೆ’ ಎಂದು ನನ್ನ ಕೈಗಳನ್ನು ಹಿಡಿದುಕೊಂಡ!

ನಾನು ಆಯ್ತೆಂದು ಸಮ್ಮತಿಸಿದೆ.

ಆಗಲೇ ನಾನು ಆತನ ಕಥೆ ಬರೆದು ಪ್ರಕಟಿಸಲು ಒಪ್ಪಿಗೆ ಕೇಳಿದ್ದು. ಆತ ‘ಸತ್ತ ನಂತರ’ ಎಂದಿದ್ದು.

7
ಮಂಜಪ್ಪ ಆಗಲೇ ನನ್ನ ಕೋರಿಕೆಯನ್ನು ಒಪ್ಪಿಬಿಟ್ಟಿದ್ದರೆ ಕಥೆಯನ್ನು ಇಲ್ಲಿಗೆ ಮುಗಿಸಿಬಿಡಬೇಕಾಗಿತ್ತು.

ಹಾಗೆ ನೋಡಿದರೆ ಕಥೆ ಇಲ್ಲಿಗೇ ಮುಗಿಯುತ್ತದೆ; ಬದುಕು ಮುಗಿಯುವುದಿಲ್ಲ.

ಊರಿಗೆ ವಾಪಸ್ ಬಂದ ವರ್ಷವೊಂದು ಕಳೆಯುವದರೊಳಗಾಗಿ ಆತನ ಅಕ್ಕನ ಮಗಳೊಂದಿಗೇ ಮದುವೆಯಾಗಿದ್ದು, ಎರಡು ಮಕ್ಕಳಾಗಿದ್ದು ಇಲ್ಲಿ ಮುಖ್ಯವಾಗುವುದಿಲ್ಲ.

ಆದರೆ ತನ್ನ ನಲವತ್ತನೇ ವಯಸ್ಸಿನಲ್ಲಿಯೇ ಆತ ಸತ್ತ ರೀತಿ ಮಾತ್ರ ಕಥೆಗೆ ಪೂರಕವೇನೋ ಅನ್ನಿಸುತ್ತಿದೆ.
ಸಾಯುವ ಮೊದಲು ಆತನಿಗೆ ಎರಡು ಬಾರಿ ಆಕ್ಸಿಡೆಂಟ್ ಆಗಿತ್ತು.

ಒಮ್ಮೆ ಬೈಕ್ ಬಿದ್ದು ಪಕ್ಕೆಲಬು ಮುರಿದುಕೊಂಡಿತ್ತು.

ಇನ್ನೊಮ್ಮೆ ಬಸ್ಸು-ಲಾರಿ ಗುದ್ದಿ, ಮುಂದೆಯೇ ಕುಳಿತಿದ್ದ ಆತನ ಕೈ ಮುರಿದಿತ್ತು.

ಎರಡೂ ಬಾರಿಯೂ ಸಾವಿನಿಂದ ಗೆದ್ದು ಬಂದಿದ್ದ. ಹಿಂದೆ ಬೊಂಬಾಯಿಯನ್ನು ಬಿಡುವುದು ಒಂದು ದಿನ ತಡವಾಗಿದ್ದರೂ ತನ್ನ ಕೊಲೆಯಾಗುತ್ತಿತ್ತೆಂದು ಆತ ಹೇಳಿದ್ದರಿಂದ, ‘ಮೂರು ಗಂಡಾಂತರಗಳನ್ನು ದಾಟಿದ್ದೀಯ. ಇನ್ನು ನಿನಗೆ ಸಾವೇ ಇಲ್ಲ’ ಎಂದು ಒಮ್ಮೆ ತಮಾಷೆ ಮಾಡಿದ್ದೆ. ಆದರೆ ಮೊನ್ನೆ ಊರಿಗೆ ಹೋದಾಗ ‘ಮಂಜಪ್ಪ ಆಕ್ಸಿಡೆಂಟ್‌ನಲ್ಲಿ ಸತ್ತ’ ಎಂದು ತಿಳಿಯಿತು.

ರಸ್ತೆ ಅಗಲೀಕರಣಕ್ಕಾಗಿ ಉರುಳಿಸಿದ್ದ ಹೆಮ್ಮರಕ್ಕೆ, ರಾತ್ರಿ ಹೊತ್ತು ಬೈಕಿನಲ್ಲಿ ಹೋಗುತ್ತಿದ್ದ ಮಂಜಪ್ಪ ಗುದ್ದಿ, ತಲೆಯೊಡೆದು ಸತ್ತುಹೋಗಿದ್ದ!

ಮಂಜಪ್ಪನ ಸಾವಿನೊಂದಿಗೆ ಆತನ ಬೊಂಬಾಯಿಯ ಬದುಕೂ ಸತ್ತು ಹೋಯಿತು.

‘ಅದು ಈ ಕಥೆಯನ್ನು ಅಪೂರ್ಣವಾಗಿಸಿಲ್ಲ’ ಎಂದುಕೊಳ್ಳುತ್ತೇನೆ.

ಬಾಲ್ಯವೆಂಬುದು ಹೂವು ಕಣೋ... ಎನ್ನುತ್ತಾ, ಆತನ ಆತ್ಮಕ್ಕೆ ಶಾಂತಿ ಕೋರುತ್ತೇನೆ.

7 comments:

PARAANJAPE K.N. said...

ಬದುಕು ಯಾವ ರೀತಿ ವಿವಿಧ ಮಜಲುಗಳಲ್ಲಿ ಹೊರಳುತ್ತದೇ ಎ೦ಬುದು ನಿಮ್ಮ ಈ ಲೇಖನದಿಂದ ವ್ಯಕ್ತವಾಗುತ್ತದೆ. ರೋಚಕವಾಗಿದೇ ಬರಹದ ಓಘ.

Me, Myself & I said...

ಆತ್ಮೀಯ

ಬರಹ ತುಂಬಾ ಮೆಚ್ಚುಗೆಯಾಯ್ತು. ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

ಮಂಜಪ್ಪನ ಕಥೆ, ಕಣ್ಣ ಮುಂದೆ ನಡೆದ ಘಟನೆ ತರ ಬಂದು ಹೋಯ್ತು. ಆತನ ಆತ್ಮಕ್ಕೆ ಶಾಂತಿ ಸಿಗಲಿ.

ಬಿಸಿಲ ಹನಿ said...

ಮಂಜನ ಕಥೆ ಕೇಳಿ ಕಣ್ನುಗಳು ಒದ್ದೆಯಾದವು. ತನ್ನ ಹುಟ್ಟಿನ ರಹಸ್ಯ ತಿಳಿದು ಬೊಂಬಾಯಿಗೆ ಓಡಿ ಅಲ್ಲಿ ಬದುಕು ಕಟ್ಟಿಕೊಂಡು ಮತ್ತೆ ಊರಿಗೆ ಬಂದು ಅಲ್ಲಿ ಸಾಯುವದು ದುರಂತ. ಆದರೆ ಕತೆಯಲ್ಲಿ ಅವನಿಗೇಕೆ ಕೊಲೆ ಬೆದರಿಕೆ ಇತ್ತು ಎನ್ನುವದು ತಿಳಿಯುವದೇ ಇಲ್ಲ. ಸ್ನೇಹಿತನ ಬಗ್ಗೆ ಬರೆಯುತ್ತಾ ಅವನ ನೇರ ನಡೆ ನುಡಿಯನ್ನು ಇದ್ದಕ್ಕಿದ್ದಂತೆ ಸೆರೆಹಿಡಿದ್ದೀರಿ. ಇಷ್ಟವಾಯಿತು.
ನಿಮ್ಮ ಸ್ನೇಹಿತನ ಕಥೆಯಲ್ಲಿ ನಿಮ್ಮ ಬಗ್ಗೆ ಪ್ರಸ್ತಾಪಿಸುತ್ತಾ ನೀವು ಎಮ್.ಎಸ್ಸಿ ಮಾಡಿರುವಿರಿ ಎಂದು ಹೇಳಿರುವಿರಿ. ಹಾಗಾದರೆ ನೀವು ಕನ್ನಡ ಎಮ್. ಎ ಮಾಡಿದ್ದು ನಂತರದಲ್ಲಿಯೇ? ಗೊತ್ತಾಗಲಿಲ್ಲ. ಕ್ಷಮಿಸಿ ಇದು ನಿಮ್ಮ ವ್ಯಯಕ್ತಿಕ ವಿಷಯ. ಆದರೆ ಕತೆಯಲ್ಲಿ ಪ್ರಸ್ತಾಪವಾಗಿದ್ದಕ್ಕೆ ಕುತೂಹಲ ತಡೆಯಲಾರದೆ ಕೇಳುತ್ತಿದ್ದೇನೆ. ಏಕೆಂದರೆ ನಾನು ನೀವು ಕನ್ನಡ ಎಮ್. ಎ ಮಾಡಿ ನಂತರ ಪಿ.ಎಚ್ಡಿ ಮಾಡಿದ್ದೆಂದು ತಿಳಿದಿದ್ದೆ.

ಸಾಗರದಾಚೆಯ ಇಂಚರ said...

ಮಂಜನ ಕಥೆ ಹ್ರದಯಸ್ಪರ್ಶೀಯಾಗಿದೆ,
ಸುಂದರ ಬರಹ

Unknown said...

ಎಲ್ಲರಿಗೂ ಧನ್ಯವಾದಗಳು

ಉದಯ್
ಕನ್ನಡ ಎಂ.ಎ. ಮಾಡಿ ಪಿಹೆಚ್.ಡಿ. ಮಾಡಿರುವುದು ನಿಜ. ಅದಕ್ಕಿಂತ ಮುಂಚೆ, ನಾನು ಎಂ.ಎಲ್.ಐ.ಎಸ್ಸಿ. (ಮಾಸ್ಟರ್ಸ್ ಇನ ಲೈಬ್ರರಿ ಅಂಡ್ ಇನ್ಫಾರ್ಮೇಷನ್ ಸೈನ್ಸ್) ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಿದ್ದೆ. ನನ್ನದು ಎರಡು ಮಾಸ್ಟರ್ಸ್ ಡಿಗ್ರಿಗಳು! ಅದನ್ನು ಎಂ.ಎಸ್ಸಿ. ಎಂದೂ ಕರೆಯಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಹೆಚ್ಚಿನ ಜನಕ್ಕೆ ಎಂ.ಎಲ್.ಐ.ಎಸ್ಸಿ. ಎಂದರೆ ಏನು ಎಂದು ಕೇಳುತ್ತಾರೆ!

ಕಥೆಯ ವಿಷಯಕ್ಕೆ ಬಂದರೆ, ಈ ಕಥೆ ಸತ್ಯ ಘಟನೆಯೊಂದರಿಂದ ಪ್ರೇರಿತವಾಗಿ ಬರೆದಿದ್ದು. ಅದರಲ್ಲಿ ವಾಸ್ತವ ಎಷ್ಟು ಕಲ್ಪನೆ ಎಷ್ಟು ಎಂದು ಬಿಡಿಸುವುದು ಕಷ್ಟ.

ಇಲ್ಲಿಯ ನಾನು ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಈ 'ನಾನು' (ಅಂದರೆ ಸತ್ಯನಾರಾಯಣ) ಉಳಿದಂತೆ ಕೇವಲ ನಿರೂಪಕ ಮಾತ್ರ!!! ಅದರಾಚೆಗಿನ ಸತ್ಯಗಳು ಕೆಲವು ಕಾಲದವರೆಗೆ ಮರೆಯಾಗಿಯೇ ಇರಬೇಕಾಗುತ್ತದೆ.

ಉದಯ್
ಬದುಕು-ಕಲೆ ಇವೆರಡನ್ನೂ ಬಿಡಿಸಿ ನೋಡುವುದು ಒಂದು ತೆರೆನಾದರೆ, ಇವೆರಡನ್ನೂ ಅಭೇಧ್ಯವಾಗಿಯೇ ನೋಡುವುದು ಇನ್ನೊಂದು ತರ ಎನ್ನಿಸುತ್ತದೆ. ಒಬ್ಬ ಬರಹಗಾರರಾಗಿ ನಿಮಗೆ ಏನನ್ನಿಸುತ್ತದೆ? ಎನ್ನುವ ಕುತೂಹಲ ನನ್ನದು. ಬಿಡುವಾದಾಗ ನಿಮಗೆ ಸಮ್ಮತವಾದರೆ ಹಂಚಿಕೊಳ್ಳಿ.

ಹಾಗೆ ನೋಡಿದರೆ ಇಲ್ಲಿಯ ಮಂಜಪ್ಪ ಒಬ್ಬನಲ್ಲ; ಇಬ್ಬರಲ್ಲ; ನೂರಾರು!!! ನನ್ನ ಉದ್ಧೇಶ ಇಷ್ಟೆ. ಈ ಮಾನವ ನಿರ್ಮಿತ ಸಮಾಜ ನಾಗರೀಕತೆ ಕುಟುಂಬ ವ್ಯವಸ್ಥೆ ಇವೆಲ್ಲವನ್ನೂ ಮೀರಿದ ವೈಯಕ್ತಿಕ ಎನ್ನಬಹುದಾದ ಸೆಳೆತ ಆಮಿಷ ಪ್ರತಿಯೊಬ್ಬನಿಗೂ ಇರುತ್ತವೆ. ಆದರೆ ಸಮಾಜಕ್ಕೆ ಕಾಣುವುದೇ ಬೇರೆ. ಸಮಾಜನಿರ್ದೇಶಿತ ವ್ಯವಸ್ಥೆಯ ಭಾಗವಾಗಿರುವ ಮನುಷ್ಯನಿಗೆ ಆ ಸೆಳೆತ ಆಮಿಷಗಳು ಅನೈತಿಕವಾಗಿ ಕಾಣುತ್ತವೆ!
ಇವ್ಯಾವುದರ ಅರಿವೂ ಇಲ್ಲದ ಬಾಲ್ಯವಾಸ್ಥೆಯಲ್ಲಿ ಈ ಸಮಾಜ ದೃಷ್ಟಿಯ ಅನೈತಿಕತೆ ಉಂಟುಮಾಡುವ ತಲ್ಲಣಗಳು ಮಾತ್ರ ಊಹಾತೀತ!(ಅದರಲ್ಲೂ ಭಾವುಕತನದ ಮನಸ್ಸುಳ್ಳ ಮಕ್ಕಳ ಮೇಲೆ)

Unknown said...

ಹೃದಯಸ್ಪರ್ಶಿ ಕಥೆ...

ಜಲನಯನ said...

ಡಾ.ಸತ್ಯ ನಿಜ ನಿಮ್ಮ ಮಾತು..ನಿಖರ ಗುರಿ ಧ್ಯೇಯ ಇಲ್ಲದೇ ಮನೆಯಿಂದ ಓಡಿಹೋಗುವ ಪಡ್ಡೇಯುವಕರಿಗೆ ನಿಮ್ಮ ಕಥೆ ಕಿವಿಮಾತನ್ನು ಹೇಳುತ್ತಿದೆ.