Wednesday, October 21, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ -27

ಮಂಜಣ್ಣನ ಹೀರೋ ಮೆಜೆಸ್ಟಿಕ್
ಮಂಜಣ್ಣ ಯಾರ ಕೈಯಲ್ಲೂ ಮುಟ್ಟಿಸದ ಒಂದು ವಸ್ತುವೆಂದರೆ ‘ಹೀರೋಮೆಜೆಸ್ಟಿಕ್’ ಎಂಬ ಮೋಟಾರ್ ಸೈಕಲ್. ಅದು ರಸ್ತೆಯಲ್ಲಿ ಓಡಾಡಿದ್ದಕ್ಕಿಂತ ಮೂಲೆಯಲ್ಲಿ ನಿಂತದ್ದೇ ಹೆಚ್ಚು. ಅದನ್ನು ನಾವೂ ಆಸೆ ಕಂಗಳಿಂದ ನೋಡುತ್ತಾ, ಅದನ್ನು ಸವಾರಿ ಮಾಡಿದಂತೆ ಕನಸು ಕಾಣುತ್ತಾ ಇದ್ದೆವು. ಕೊನೆಯ ಪಕ್ಷ ಅದನ್ನು ಸುಮ್ಮನೆ ತಳ್ಳಿಕೊಂಡು ಓಡಾಡಿಸಲು ಕೊಟ್ಟಿದ್ದರೂ ನಮಗೆ ಆಗ ಸಂತೋಷವಾಗುತ್ತಿತ್ತೇನೋ!


ನಮ್ಮ ಈ ಆಸೆ ಈಡೇರುವ ದಿನವೂ ಒಮ್ಮೆ ಬಂತು. ಮಂಜಣ್ಣನಿಗೆ ಊರಿನಲ್ಲಿ ಸ್ವಲ್ಪ ಜಮೀನಿತ್ತು. ಅದರಲ್ಲಿ ಆತನ ಹಿರೇಹೆಂಡತಿ ಬಾಳೆ ಹಾಕಿಕೊಂಡಿದ್ದಳು. ಅದಕ್ಕೆ ಆತ ನೀರು ಬಿಡಲು ಆಗಾಗ ಊರಿಗೆ ಹೋಗುತ್ತಿದ್ದ. ಆಗಾಗ ಕೈಕೊಡುತ್ತಿದ್ದ ತನ್ನ ಮೊಟಾರ್ ಸೈಕಲ್ಲನ್ನು ಆತ ನೆಚ್ಚಿಕೊಳ್ಳುತ್ತಿರಲಿಲ್ಲ. ಊರಿಗೆ ಹೋಗುವುದು ಹೆಚ್ಚಾದಾಗ ಅದನ್ನು ಒಂದು ಬಾರಿ ಚೆನ್ನಾಗಿ ರಿಪೇರಿ ಮಾಡಿಸಿಬಿಡಬೇಕೆಂದು ತೀರ್ಮಾನ ಮಾಡಿದ. ಆದರೆ ಅದನ್ನು ಚನ್ನರಾಯಪಟ್ಟಣದವರೆಗೆ ತೆಗೆದುಕೊಂಡು ಹೋಗುವ ಬಗೆ ಹೇಗೆ? ಅದಕ್ಕಾಗಿ ಆತ ನನ್ನನ್ನು ಮತ್ತು ವೆಂಕಟೇಶ ಎಂಬ ಇನ್ನೊಬ್ಬ ಹುಡುಗನನ್ನು ಕೇಳಿಕೊಂಡ. ‘ಚನ್ನರಾಯಪಟ್ಣದವರೆಗೆ ಅದನ್ನು ತಂದುಕೊಟ್ಟರೆ, ಅದನ್ನು ರಿಪೇರಿ ಮಾಡಿಸಿಕೊಂಡು ಬರುವಾಗ ಮೂರೂ ಮಂದಿ ವಾಪಸು ಬರೋಣ. ಅಲ್ಲಿ ನಿಮಗೆ ನಾನು ಮಿಲಿಟರಿ ಹೋಟೆಲ್ಲಿನಲ್ಲಿ ಊಟ ಕೊಡಿಸುತ್ತೇನೆ’ ಎಂದು ಹೇಳಿದ. ‘ಬೇಕಾದರೆ ನೀವು ಇಳಿಜಾರಿನಲ್ಲಿ ಅದರ ಮೇಲೆ ಕುಳಿತುಕೊಂಡು ಬರಬಹುದು’ ಎಂದೂ ಸೇರಿಸಿದ. ಆತನ ಎರಡನೇ ಮಾತು ಮಾತ್ರ ನಮಗೆ ಕೇಳಿಸಿದ್ದು! ಕೇವಲ ಕನಸಾಗಿದ್ದ ಹೀರೋಮೆಜೆಸ್ಟಿಕ್ ಮೋಟಾರ್ ಸೈಕಲ್ಲನ್ನು ಹತ್ತಿ ಅದರಲ್ಲಿ ಡಬಲ್ ರೈಡ್ ಹೋಗುವ ಅವಕಾಶವನ್ನು ಕಳೆದುಕೊಳ್ಳಲು ನಾವಂತೂ ಸಿದ್ಧರಿರಲಿಲ್ಲ. ಒಪ್ಪಿಯೇ ಬಿಟ್ಟೆವು. ಮಂಜಣ್ಣ, ‘ನಾನು ಮೊದಲು ಹೋಗಿ ಬರಗೂರಿನಲ್ಲಿ ತೋಟಕ್ಕೆ ನೀರು ಬಿಡುತ್ತಿರುತ್ತೇನೆ. ನೀವು ಅಲ್ಲಿಯವರೆಗೆ ತಳ್ಳಿಕೊಂಡು ಬನ್ನಿ. ಅಲ್ಲಿಂದ ಮುಂದಕ್ಕೆ ನಾನೂ ಬರುತ್ತೇನೆ’ ಎಂದು ಹೇಳಿದ.
ಒಂದು ಭಾನುವಾರ ಮಂಜಣ್ಣ ಅದನ್ನು ಹೇಗೆ ತಳ್ಳಿಕೊಂಡು ಬರಬೇಕೆಂದು, ಇಳಿಜಾರಿನಲ್ಲಿ ಹೇಗೆ ಕ್ಲಚ್ ಹಿಡಿದು ಓಡಿಸಿಕೊಂಡು ಬರಬೇಕೆಂದು ನಾಲ್ಕೈದು ಬಾರಿ ಹೇಳಿ, ರಿಟರ್ನ್ ಬಸ್ ಹತ್ತಿದ. ಹಿಂದೆಯೇ ನಾವು ಮೋಟಾರ್ ಸೈಕಲ್‌ನ್ನು ಹತ್ತಿದೆವು. ಕುಂದೂರುಮಠದಿಂದ ಕುಂದೂರು ಕಡೆಗೆ ಪ್ರಾರಂಭದಲ್ಲಿಯೇ ದೊಡ್ಡ ಇಳಿಜಾರು ಇದ್ದುದರಿಂದ ನಮಗೆ ಅನುಕೂಲವೇ ಆಗಿತ್ತು. ಗಾಡಿ ಓಡಿಸುತ್ತಿದ್ದ ನಾನು, ಕ್ಲಚ್ ಹಿಡಿದು, ಯಾವುದಕ್ಕೂ ಇರಲಿ ಎಂದು ಬಲಗೈಯಲ್ಲಿ ಬ್ರೇಕನ್ನು ಸ್ವಲ್ಪ ಹಿಡಿದುಕೊಂಡು ಓಡಿಸುತ್ತಿದ್ದೆ. ಸೈಕಲ್‌ನ್ನು ಕೈಬಿಟ್ಟುಕೊಂಡೆಲ್ಲಾ ಓಡಿಸುತ್ತಾ, ಅದರ ಮೇಲೆ ನಾನಾ ವರಸೆಗಳನ್ನು ಮಾಡುತ್ತಿದ್ದ ನನಗೆ ನಿರ್ಜೀವವಾಗಿ ಓಡುತ್ತಿದ್ದ ಮೋಟಾರ್ ಸೈಕಲ್ ಹೊಸದೆಂದು ಅನ್ನಿಸಲೇ ಇಲ್ಲ.
ಇನ್ನೇನು ಇಳಿಜಾರು ಮುಗಿಯಬೇಕು ಎನ್ನುವಷ್ಟರಲ್ಲಿ ಯಾವುದೋ ಜ್ಞಾನದಲ್ಲಿ ಎಡಗೈಯಲ್ಲಿ ಹಿಡಿದಿದ್ದ ಕ್ಲಚ್‌ನ್ನು ಬಿಟ್ಟುಬಿಟ್ಟೆ. ಆ ಕ್ಷಣ ಮೋಟಾರ್ ಸೈಕಲ್ ವಿಚಿತ್ರ ಶಬ್ದ ಮಾಡುತ್ತಾ, ಮುಗ್ಗರಿಸುತ್ತಾ ಸ್ಟಾರ್ಟ್ ಆಗೇಬಿಟ್ಟಿತು! ನನಗೆ ಗಾಬರಿ, ಸಂತೋಷ ಎಲ್ಲವೂ ಆಯಿತು. ಕಷ್ಟಪಟ್ಟು ಬೀಳದಂತೆ ಬ್ಯಾಲೆನ್ಸ್ ಮಾಡುತ್ತಾ ಗಾಡಿ ಓಡಿಸತೊಡಗಿದೆ. ಬಹುಶಃ ಅದರ ಪ್ಲಗ್‌ನಲ್ಲೋ ಫಿಲ್ಟರ್‌ನಲ್ಲೋ ಏನೋ ತೊಂದರೆ ಇದ್ದಿರಬೇಕು. ಅದಕ್ಕೆ ಅದು ಮಂಜಣ್ಣ ಸ್ಟಾರ್ಟ್ ಮಾಡಿದಾಗ ಸ್ಟಾರ್ಟ್ ಆಗದೆ, ತುಂಬಾ ವೇಗವಾಗಿ ಬರುತ್ತಾ ಒಂದೇ ಬಾರಿ ಕ್ಲಚ್ ಬಿಟ್ಟಿದ್ದರಿಂದ ಹೇಗೋ ಸ್ಟಾರ್ಟ್ ಆಗಿರಬೇಕು. ಕುಂದೂರನ್ನು ದಾಟಿ ಮುಂದೆ ಬರುವವರೆಗೆ ನಾವಿಬ್ಬರೂ ಮಾತೇ ಆಡಿರಲಿಲ್ಲ. ಅಲ್ಲಿಯವರೆಗೆ ನಾನು ಗಾಡಿ ಓಡಿಸುವುದನ್ನು ಭಯದಿಂದ ನೋಡುತ್ತಾ ಭದ್ರವಾಗಿ ನನ್ನನ್ನು ಹಿಡಿದು ಕುಳಿತಿದ್ದ ವೆಂಕಟೇಶ ನಿಧಾನವಾಗಿ, ‘ನಾನೂ ಓಡಿಸುತ್ತೇನೆ’ ಎಂದು ರಾಗ ತೆಗೆದ.
ಅವನಿಗೆ ಮೋಟಾರ್ ಸೈಕಲ್ ಓಡಿಸುವುದು ಇಷ್ಟೊಂದು ಸುಲಭವೇ ಅನ್ನಿಸಿರಬೇಕು! ಆದರೆ ಅಷ್ಟು ಬೇಗ ನಾನು ಅವನಿಗೆ ಮೋಟರ್ ಸೈಕಲ್ಲನ್ನು ಕೊಡಲು ಸಿದ್ಧನಿರಲಿಲ್ಲ. ನಾನು ‘ಪೆಟ್ರೊಲ್ ಇದೆಯೋ ಇಲ್ಲವೋ. ಈಗ ನಿಲ್ಲಿಸಿದರೆ ಮತ್ತೆ ಸ್ಟಾರ್ಟ್ ಆಗದಿದ್ದರೆ ಮತ್ತೆ ನೀನೆ ತಳ್ಳಬೇಕಾಗುತ್ತೆ’ ಎಂದಿದ್ದರಿಂದ ತೆಪ್ಪಗೆ ಕುಳಿತುಕೊಂಡ. ನಾನು ರಾಜಠೀವಿಯಿಂದ ಗಾಡಿ ಓಡಿಸುತ್ತಾ ಮುಖ್ಯರಸ್ತೆಗೆ ಬಂದೆ. ಪೆಟ್ರೊಲ್ ಟ್ಯಾಂಕ್ ರಸ್ಟ್ ಹಿಡಿಯುತ್ತದೆ ಎಂದು ಪೆಟ್ರೊಲ್ ಪೂರಾ ಡ್ರೈ ಆಗಲು ಮಂಜಣ್ಣ ಬಿಟ್ಟಿರಲಿಲ್ಲ. ಅರ್ಧ ಲೀಟರಿನಷ್ಟು ಪೆಟ್ರೊಲ್ ಇತ್ತೆಂದು ಕಾಣುತ್ತದೆ. ಪೆಟ್ರೊಲ್ ಖಾಲಿಯಾಗಿ ಗಾಡಿ ನಿಲ್ಲುವ ಯಾವ ಸೂಚನೆಯೂ ಬಾರದಿದ್ದಾಗ ವೆಂಕಟೇಶ ಮತ್ತೆ ಮತ್ತೆ ರಾಗ ತೆಗೆಯುತ್ತಿದ್ದ. ನಾನು ‘ಸ್ಟಾರ್ಟ್ ಆಗದಿದ್ದರೆ, ನೀನೇ ತಳ್ಳುವುದಾದರೆ ಹೇಳು. ನಿಲ್ಲಿಸುತ್ತೇನೆ’ ಎಂದು ಹೆದರಿಸುತ್ತಲೇ ಇದ್ದೆ.
ಅಂತೂ ಇಂತು ಬರಗೂರಿನವರೆಗೆ ಬಂದಾಗ, ಗಾಡಿ ಕೆಟ್ಟ ಶಬ್ದ ಮಾಡುತ್ತಾ, ಮುಗ್ಗುರಿಸುತ್ತಾ ನಿಂತು ಹೋಯಿತು. ನಾವು ಗಾಡಿಯನ್ನು ಓಡಿಸಿಕೊಂಡು ಬಂದಿದ್ದನ್ನು ಕೇಳಿ ಮಂಜಣ್ಣನಿಗೆ ತುಂಬಾನೆ ಖುಷಿಯಾಯಿತು. ಅದೇ ಖುಷಿಯಲ್ಲಿ, ಊರಿನಲ್ಲಿ ಬೈಕಿದ್ದ ಇನ್ನಾರನ್ನೋ ಹುಡುಕಿ ಒಂದಷ್ಟು ಪೆಟ್ರೊಲನ್ನು ಸಂಪಾದಿಸಿಬಿಟ್ಟ. ಗಾಡಿಗೆ ಪೆಟ್ರೊಲ್ ತುಂಬಿಸಿ, ಸ್ಟಾರ್ಟ್ ಮಾಡಿದರೆ ಅದು ಮುಷ್ಕರ ಕುಳಿತವರಂತೆ ಮೌನವಾಗಿಬಿಟ್ಟಿತ್ತು. ಏನೆಲ್ಲಾ ಸರ್ಕಸ್ ಮಾಡಿದರೂ ಅದು ಸ್ಟಾರ್ಟ್ ಆಗಲಿಲ್ಲ. ಮಂಜಣ್ಣನನ್ನು ಗಾಡಿಯಲ್ಲಿ ಕುಳ್ಳಿರಿಸಿ ನಾವಿಬ್ಬರು ದೂಡಿದರೂ ಸ್ಟಾರ್ಟ್ ಆಗಲಿಲ್ಲ. ಕೊನೆಗೆ ಮಂಜಣ್ಣ ‘ಮಗಾ ನಿನ್ನ ಕೈಗುಣ ಚೆನ್ನಾಗಿರಂಗೆ ಕಾಣುತ್ತೆ. ನೀನೆ ಕುಳಿತು ಓಡ್ಸು, ನಾವೇ ತಳ್ತೀವಿ’ ಎಂದು ನನಗೆ ಗಾಡಿ ಓಡಿಸಲು ಕೊಟ್ಟ. ಆದರೆ ನನ್ನ ಕೈಗುಣವೂ ಚೆನ್ನಾಗಿರಲಿಲ್ಲ! ಅದು ಸ್ಟಾರ್ಟ್ ಆಗಲಿಲ್ಲ.
ಕೊನೆಗೆ ಅದನ್ನು ತಳ್ಳಿಕೊಂಡು ಅಲ್ಲಿಂದ ಒಂದು ಕಿಲೋಮೀಟರ್ ದೂರವಿರುವ ಬರಗೂರ್ ಹ್ಯಾಂಡ್‌ಪೋಸ್ಟ್ ಬಳಿಗೆ ಬಂದೆವು. ಅಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿದ್ದ ಸಾಬರು ‘ನಾನೇ ರಿಪೇರಿ ಮಾಡುತ್ತೇನೆ’ ಎಂದು, ಅದರ ಫ್ಲಗ್ ಎಲ್ಲಾ ಬಿಚ್ಚಿ ಕ್ಲೀನ್ ಮಾಡಿದ. ನಂತರ ಸರಾಗವಾಗಿ ಅದು ಸ್ಟಾರ್ಟ್ ಆಯಿತು. ಆ ಸಾಬರು ‘ಇನ್ನೇನು ಭಯವಿಲ್ಲ. ಬೇರೆ ರಿಪೇರಿಯು ಬೇಕಿಲ್ಲ. ಆಗಾಗ ಬಂದು ಫ್ಲಗ್ ಕ್ಲೀನ್ ಮಾಡಿಸಿಕೊಳ್ಳಿ’ ಎಂದು ಉಚಿತವಾಗಿ ಸಲಹೆ ಕೊಟ್ಟ. ಮಂಜಣ್ಣ ನಮಗೆ ಮಾತು ಕೊಟಿದ್ದಂತೆ, ಚನ್ನರಾಯಪಟ್ಟಣದವರೆಗೂ ನಮ್ಮನ್ನು ತ್ರಿಬಲ್ ರೈಡ್ ಮಾಡುತ್ತಾ ಕರೆದುಕೊಂಡು ಬಂದು ಮಿಲಿಟರಿ ಹೋಟೆಲ್ಲಿನಲ್ಲಿ ಊಟ ಕೊಡಿಸಿದ. ವಾಪಸ್ ಬರುವಾಗ ತ್ರಿಬಲ್ ರೈಡ್ ಮಾಡುತ್ತಾ ಬಂದೆವು. ಇಳಿಜಾರಿನಲ್ಲಿ, ಹಾಗೂ ಮಟ್ಟವಾದ ರಸ್ತೆಯಲ್ಲಿ ಹೇಗೋ ಹೋಗುತ್ತಿದ್ದ ನಾವು ಏರು ರಸ್ತೆ ಬಂದಾಗ ಮಾತ್ರ, ಇಳಿದು ಮಂಜಣ್ಣನ ಹಿಂದೆ ಓಡಬೇಕಾಗಿತ್ತು. ಅಂತೂ ಕೊನೆಗೆ ನಾವು ಕುಂದೂರುಮಠ ತಲುಪಿದಾಗ ಸಂಜೆಯ ಸೂರ್ಯ ಮೇಲಿನ ಸುಬ್ಬಪ್ಪನ ಗುಡಿಯ ಹಿಂದೆ ಮುಳುಗುವುದರಲ್ಲಿದ್ದ!

{ಈ ಕಂತಿನೊಂದಿಗೆ 'ನನ್ನ ಹೈಸ್ಕೂಲು ದಿನಗಳು' ಪುಸ್ತಕದ ಇ-ರೂಪ ಮುಗಿಯಲಿದೆ. ಮುಂದೆ ಈ ಪುಸ್ತಕವನ್ನು ಕುರಿತು ಮೂವರು ಲೇಖಕರು ಬರೆದ ಬರಹಗಳನ್ನು ಮೂರು ಕಂತಿನಲ್ಲಿ ಪ್ರಕಟಿಸುತ್ತೇನೆ. ಥಟ್ ಅಂತ ಹೇಳಿ ಕಾರ್ಯಕ್ರಮದ ಡಾ.ನಾ. ಸೋಮೇಶ್ವರ ಅವರು ತಮ್ಮ ಯಕ್ಷಪ್ರಶ್ನೆಯಲ್ಲಿ ಹೈಸ್ಕೂಲು ದಿನಗಳ ಸವಿ ಸವಿ ನೆನಪು…  ಎಂದು ಬರೆದಿದ್ದಾರೆ. ಒಮ್ಮೆ ಭೇಟಿಕೊಡಿ. ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು}

ಚಿತ್ರಕೃಪೆ : ಅಂತರಜಾಲ

6 comments:

ಶಿವಪ್ರಕಾಶ್ said...

Triple riding incident ಚನ್ನಾಗಿದೆ... :)

UMESH VASHIST H K. said...

ನಿಮ್ಮ ಹೈಸ್ಕೂಲಿನ ದಿನಗಳು ಬರಹ ಚೆನ್ನಾಗಿದೆ, ಮುಂದೇನು ಮುಂದೇನು ಅಂತ ಓಡಿಸ್ಕೊಂಡು ಹೋಗುತ್ತೆ, ನಿಮ್ಮ ಒಳ್ಳೆಯ ಬರಹ ನಮಗೆ ಹಂಚಿದ್ದಕ್ಕಾಗಿ ವಂದನೆಗಳು

Me, Myself & I said...

ಸಾರ್

ಈ ಕಂತು ಹಾಸ್ಯ ಮಿಶ್ರೀತವಾಗಿದೆ.
"ಥಟ್ ಅಂತೇಳಿ ಡಾ.ನಾ. ಸೋಮೇಶ್ವರ" ಅವರ ವಿವರಣೆಯನ್ನ ಸುಮಾರು ಒಂದು ವಾರದ ಹಿಂದೆಯೇ ಓದಿದ್ದೆ.

ನಿಮ್ಮ ಮುಂದಿನ ಬರಹಗಳಿಗೆ ಕಾಯುತ್ತಿರುತ್ತೇವೆ.

ಅಭಿನಂದನೆಗಳು.

Unknown said...

I like your way writing and is impressive. I use to wait for your articles to read and enjoy. Thanks. Expecting some more articles from you.

ಸವಿಗನಸು said...

ಮಜಾವಾಗಿತ್ತು...
ಇನ್ನಷ್ಟು ಬರಲಿ...

Anonymous said...

ಆತ್ಮೀಯ
ನಿಮ್ಮ ನಿರೂಪಣಾ ಶೈಲಿ ತು೦ಬಾ ಚೆನ್ನಾಗಿದೆ ಸಣ್ಣ ನೆನಪುಗಳು ಮನಸ್ಸಿಗೆ ಮುದ ಕೊಡುತ್ತೆ. ತು೦ಬಾ ದಿನಗಳ ನ೦ತರ ಸ೦ತೋಷ ಕೊಟ್ಟ ಬರಹ ಇದು.
ಹರೀಶ ಆತ್ರೇಯ