ಮಂಜಣ್ಣನ ಹೋಟೆಲ್
ಕುಂದೂರುಮಠದಲ್ಲಿ ಮಂಜಣ್ಣನ ಹೋಟೆಲ್ ಒಂದು ಆಡುಂಬೊಲವಿದ್ದಂತೆ! ಮಂಜಣ್ಣ ತನ್ನ ಮೊದಲನೆ ಹೆಂಡತಿಯನ್ನು ಊರಿನಲ್ಲಿಯೇ ಬಿಟ್ಟು ಬಂದಿದ್ದು ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದವನು. ನಂತರ ಅಲ್ಲಿ ಕೆಲಸಕ್ಕೆ ಬರುತ್ತಿದ್ದ ಇನ್ನೊಂದು ಹುಡುಗಿಯನ್ನೂ ಮದುವೆಯಾಗಿ ಇಬ್ಬರ ಹೆಂಡಿರ ಮುದ್ದಿನ ಗಂಡನಾಗಿದ್ದವನು. ಎರಡನೇ ಮದುವೆಯಾದ ಮೇಲೆ ಮೇಸ್ತ್ರಿ ಕೆಲಸಕ್ಕೆ ಗುಡ್‌ಬೈ ಹೇಳಿ, ಹೋಟೆಲ್ ಶುರುಮಾಡಿದ್ದ. ಮೊದಲ ಹೆಂಡತಿ ಊರಿನಲ್ಲಿದ್ದರೆ, ಎರಡನೆಯ ಹೆಂಡತಿಯ ಜೊತೆಯಲ್ಲಿ ಈತ ಹೋಟೆಲ್ ನಡೆಸುತ್ತಿದ್ದ. ಆತನ ಹೋಟೆಲ್ ಎಂದರೆ ಒಂದು ಗುಡಿಸಲು, ಒಂದೆರಡು ಕುರ್ಚಿಗಳು, ನಾಲ್ಕೈದು ಪಾತ್ರೆಗಳು, ಒಂದು ಸ್ಟವ್ ಮಾತ್ರ. ಅಷ್ಟರಲ್ಲೇ ವ್ಯಾಪಾರ ಶುರುಮಾಡಿ, ಒಂದೆರಡು ವರ್ಷದಲ್ಲಿ ತಕ್ಕಮಟ್ಟಿಗೆ ಅಭಿವೃದ್ಧಿಯನ್ನೂ ಹೊಂದಿದ್ದ.
ಕುಂದೂರುಮಠಕ್ಕೆ ಬರುತ್ತಿದ್ದವರಲ್ಲಿ ಹೆಚ್ಚಿನವರು ಮೆಳೆಯಮ್ಮನ ಭಕ್ತರಾಗಿದ್ದರಿಂದಲೂ ಹಾಗೆ ಬರುವವರು ಕುರಿ, ಕೋಳಿ ಬಲಿ ಕೊಟ್ಟು ಅಡುಗೆ ಮಾಡಿ, ಊಟ ಮಾಡಿ ಹೋಗುವುದಕ್ಕೆಂದೇ ಬರುವವರಾಗಿದ್ದರಿಂದಲೂ ಆತನ ಹೋಟೆಲ್ಲಿಗೆ ಊಟ ತಿಂಡಿಗೆ ಬರುತ್ತಿದ್ದವರು ತುಂಬಾ ಕಡಿಮೆ. ಬೆಳಿಗ್ಗೆ ವೇಳೆ ಬರುತ್ತಿದ್ದ ರಿಟರ್ನ್ ಬಸ್ಸಿನ ಕಂಡಕ್ಟರ್ ಮತ್ತು ಡ್ರೈವರ್ ಮಾತ್ರ ಆತನ ಪರ್ಮನೆಂಟ್ ಗಿರಾಕಿಗಳು. ಬೆಳಿಗ್ಗೆ ಹೊತ್ತು ಮಾತ್ರ ಸ್ವಲ್ಪ ಇಡ್ಲಿ, ಉಪ್ಪಿಟ್ಟು ಮಾಡುತ್ತಿದ್ದ. ಮಧ್ಯಾಹ್ನ ಚಿತ್ರಾನ್ನ ಮಾತ್ರ ಆತನ ಹೋಟೆಲ್ಲಿನಲ್ಲಿರುತ್ತಿದ್ದ ತಿಂಡಿಯಾಗಿರುತ್ತಿತ್ತು. ಇನ್ನುಳಿದಂತೆ ಟೀ ಮತ್ತು ಬೋಂಡಾಕ್ಕೆ ಮಾತ್ರ ಹೆಚ್ಚಿನ ಬೇಡಿಕೆ ಇತ್ತು. ಆತನ ಹೋಟೆಲ್ಲಿನ ಹಿಂದೆ ಕೂಗಳತೆಯ ದೂರದಲ್ಲಿದ್ದ ಸೇಂದಿ ಮತ್ತು ಸಾರಾಯಿ ಅಂಗಡಿಗೆ ಹೋಗುವವರೆಲ್ಲಾ ಮಂಜಣ್ಣನ ಹೋಟೆಲ್ಲಿನ ಮುಂದೆಯೇ ಹೋಗಬೇಕಾಗಿತ್ತು. ಹಾಗೆ ಹೋಗುವವರೆಲ್ಲಾ ಸಾಕಷ್ಟು ಬೋಂಡಾಗಳನ್ನು ಕಟ್ಟಿಸಿಕೊಂಡೇ ಹೋಗುತ್ತಿದ್ದರು. ಸ್ವತಃ ಮಂಜಣ್ಣನೇ ಸ್ವಲ್ಪ ದಿನ ಬ್ಲಾಕ್‌ನಲ್ಲಿ ಬೀರು, ಬ್ರ್ಯಾಂಡಿಯನ್ನು ಮಾರುತ್ತಿದ್ದ. ಒಂದು ಮಂಕರಿಯಲ್ಲಿ ಹೂವು ಹಣ್ಣು ಇಟ್ಟುಕೊಂಡು ಮಾರಲು ಬರುತ್ತಿದ್ದ, ಪಕ್ಕದ ಹಳ್ಳಿಯ ಹೆಂಗಸೊಬ್ಬಳು, ಮಂಕರಿಯ ಒಳಗೆ ಬೀರು ಬ್ರ್ಯಾ೦ಡಿಯನ್ನು ತಂದು ಮಾರುತ್ತಿದ್ದಳು! ಅವಳು ಮಂಜಣ್ಣನ ಕಳ್ಳವ್ಯಾಪಾರವನ್ನು ಬಂದ್ ಮಾಡಿಸುವಲ್ಲಿ ಅದ್ಹೇಗೋ ಯಶಸ್ವಿಯಾಗಿದ್ದಳು. ಆ ಕಾರಣಕ್ಕೆ ಅವಳನ್ನು ನೋಡಿದರೆ ಮಂಜಣ್ಣ ಬಾಯಿಗೆ ಬಂದಂತೆ ಬಯ್ಯುತ್ತಿದ್ದ!
ಕೆಲಸವಿಲ್ಲದೆ ಅಲೆಯುವವರಿಗೆ, ಹರಟೆ ಹೊಡೆಯುತ್ತಾ ಕಾಲಕಳೆಯಲಿಚ್ಚಿಸುವವರಿಗೆ, ಬಸ್ ಕಾಯುವವರಿಗೆ ಮಂಜಣ್ಣನ ಹೊಟೆಲ್ ಅನುಕೂಲವಾದ ಜಾಗದಲ್ಲಿತ್ತು. ಜಾತ್ರೆಯ ದಿನಗಳಲ್ಲಿ ಒಂದು ತಿಂಗಳ ಕಾಲ ಆತನ ಹೋಟೆಲ್ಲಿಗೆ ಮಾತ್ರ ತುಂಬಾ ಡಿಮ್ಯಾಂಡ್ ಇತ್ತು. ಆಗ ಕೆಲಸ ಮಾಡುವುದಕ್ಕೆಂದೇ ಒಂದಿಬ್ಬರನ್ನು ಬೇರೆಡೆಯಿಂದ ಕರೆದು ತರುತ್ತಿದ್ದ. ಬೇರೆ ಬೇರೆ ತಿಂಡಿಯನ್ನೂ ಮಾಡುತ್ತಿದ್ದ. ಕೆಲವೊಮ್ಮೆ ಕೆಲವು ಹಾಸ್ಟೆಲ್ ಹುಡುಗರೂ ಸಪ್ಲೇಯರ್ ಕೆಲಸ ಮಾಡಿದ್ದುಂಟು. ಅದು ಚಿಕ್ಕಯ್ಯನೋರ ತನಕ ಹೋಗಿ, ಅವರು ಮಂಜಣ್ಣಗೆ ಬಯ್ದು ‘ಹಾಸ್ಟೆಲ್ ಹುಡುಗರ ಕೈಯಲ್ಲಿ ಕೆಲಸ ಮಾಡಿಸಬೇಡ’ ಎಂದು ಹೇಳಿದ್ದರು.
ಮಂಜಣ್ಣನ ಹೊಟೆಲ್ ಹಾಸ್ಟೆಲ್ಲಿನ ಎಲ್ಲಾ ಹುಡುಗರಿಗೆ ಅತ್ಯಂತ ಆಪ್ತವಾದ ಸ್ಥಳ. ಕೈಯಲ್ಲಿ ದುಡ್ಡಿದ್ದಾಗ, ಇಡ್ಲಿ-ವಡೆ ತಿನ್ನುತ್ತಿದ್ದುದ್ದರಿಂದ ಅವನಿಗೇನೂ ಅವರಿಂದ ತೊಂದರೆಯಾಗುತ್ತಿರಲಿಲ್ಲ. ಹೊತ್ತು ಕಳೆಯಲು ಅಲ್ಲಿ ರೆಡಿಯೋ ಇತ್ತು. ಆಟ ಆಡಿಸಲು ಮಂಜಣ್ಣನ ಎರಡು ವರ್ಷದ ಮಗುವಿತ್ತು. ಬಂದು ಹೋಗುವವರನ್ನು ನೋಡುತ್ತಾ ರೇಡಿಯೋ ಕೇಳುತ್ತಾ ಕಾಲ ಕಳೆಯುವ ಆಸೆ ಹಾಸ್ಟೆಲ್ ಹುಡುಗರಿಗೆ ತುಸು ಹೆಚ್ಚಾಗಿಯೇ ಇತ್ತು. ಅದಕ್ಕಾಗಿ ಹೊತ್ತು ಗೊತ್ತಿಲ್ಲದೆ ಆತನ ಹೋಟೆಲ್ಲಿನಲ್ಲಿ ಜಮಾಯಿಸಿಬಿಡುತ್ತಿದ್ದರು.
ಒಮ್ಮೆ ಸಂಜೆಯ ವೇಳೆ ಹಾಸ್ಟೆಲ್ಲಿಗೆ ಇನ್‌ಸ್ಪೆಕ್ಷನ್‌ಗಾಗಿ ಬಿ.ಇ.ಒ. ಬಂದು ಹುಡುಗರೆಲ್ಲಿ ಎಂದು ಕೇಳಿದಾಗ ಮೊದಲಿದ್ದ ಒಬ್ಬ ವಾರ್ಡನ್‌ಗೆ ಏನು ಹೇಳಬೇಕೆಂದು ಗೊತ್ತಾಗದೇ ತಬ್ಬಿಬ್ಬಾಗಿದ್ದಾರೆ. ಆಗ ಧರ್ಮಣ್ಣನೇ, ‘ಇಂದು ದೇವಾಸ್ಥಾನದಲ್ಲಿ ವಿಶೇಷ ಪೂಜೆಯೇನೋ ಇತ್ತು ಅದಕ್ಕೆ ಹೋಗಿದ್ದಾರೆ. ಇನ್ನೇನು ಬಂದುಬಿಡುತ್ತಾರೆ’ ಎಂದು ಹೇಳಿ, ಅಲ್ಲಿದ್ದ ಒಬ್ಬ ಹುಡುಗನನ್ನು ಗುಟ್ಟಾಗಿ ಮಂಜಣ್ಣನ ಹೋಟೆಲ್ಲಿನ ಹತ್ತಿರ ಇದ್ದವರನ್ನೆಲ್ಲಾ ಕರೆದುಕೊಂಡು ಬರಲು ಕಳುಹಿಸಿದ್ದ. ವಾರ್ಡನ್ ಮಂಜಣ್ಣನ ಮೇಲೆ ರೇಗಿ ‘ಅಲ್ಲಿ ಹುಡುಗರನ್ನು ಸೇರಿಸಬೇಡಿ’ ಎಂದು ಹೇಳಿದ್ದಕ್ಕೆ ರೇಗಿದ್ದ ಮಂಜಣ್ಣ ‘ಅಯ್ಯೋ ಹೋಗಯ್ಯ, ಮೊದಲು ಹುಡುಗರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊ. ಅವರನ್ನು ಕಾಯುತ್ತಾ ಕುಳಿತುಕೊಳ್ಳುವುದಕ್ಕೆ ನನಗೇನು ಬೇರೆ ಕೆಲಸವಿಲ್ಲವೆ’ ಎಂದಿದ್ದ. ಆದರೆ ಮಂಜಣ್ಣ ಬೇರೆಯವರ ಬಳಿ ಹೇಳಿದಂತೆ, ‘ಹುಡುಗರು ಹೋಟೆಲ್ಲಿನಲ್ಲಿ ಇದ್ದರೆ, ಯಾವಾಗಲೂ ಬಿಜಿಯಾಗಿರುವ ಹೋಟೆಲ್ ಎಂದು ಜನ ಭಾವಿಸುತ್ತಾರೆ; ಬ್ಯುಸಿನೆಸ್ ಚೆನ್ನಾಗಿ ಆಗುತ್ತದೆ’ ಎಂಬುದು ಆತನ ಲೆಕ್ಕಾಚಾರ.
ಈ ಮಂಜಣ್ಣನ ಹೋಟೆಲ್ ಕೇವಲ ಕಾಲ ಕಳೆಯುವ ತಾಣವಾಗಿದ್ದರೂ, ಒಂದು ರೀತಿಯಲ್ಲಿ ಮನರಂಜನಾ ಸ್ಥಳವಾಗಿತ್ತು! ನೋಡಿ. ಒಮ್ಮೆ ಮಾತು ಮಾತಿಗೆ ಬೆಳೆದು, ಅದು ಎಲ್ಲಿಗೋ ತಿರುಗಿ, ‘ಎಣ್ಣೆಯಲ್ಲಿ ಬೇಯುತ್ತಿರುವ ಬೋಂಡವನ್ನು ಬರಿಗೈಯಿಂದ ತೆಗೆದುಕೊಂಡರೆ ಆ ಬೋಂಡ ತೆಗೆದುಕೊಂಡವನಿಗೆ ಫ್ರೀ’ ಎಂದು ಮಂಜಣ್ಣ ಸವಾಲು ಹಾಕಿದ. ಆಗ ನಮ್ಮ ಎಂ.ಕೆ.ಸ್ವಾಮಿ ಲೀಲಾಜಾಲವಾಗಿ, ಕುದಿಯುತ್ತಿರುವ ಎಣ್ಣೆಯ ಬಾಂಡಲೆಯಲ್ಲಿ ಸ್ವಲ್ಪ ದಡಕ್ಕೆ ಬಂದಿದ್ದ ಬೋಂಡಾವನ್ನು ಬರಿಗೈಯಿಂದ ಎತ್ತಿ ತನ್ನದಾಗಿಸಿಕೊಂಡ. ಅದನ್ನು ಅನುಸರಿಸಿ ಇನ್ನೊಂದಿಬ್ಬರೂ ಪ್ರಯತ್ನ ಪಟ್ಟು, ಅಲ್ಪ ಸ್ವಲ್ಪ ಕೈಸುಟ್ಟುಕೊಂಡರೂ ಬೋಂಡಾ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸ್ವಾಮಿಯಂತೂ ಮೂರ‍್ನಾಲ್ಕು ಬೋಂಡಾಗಳನ್ನು ಕಬಳಿಸಿದ್ದ. ಇಷ್ಟಕ್ಕೆ ಹೆದರಿದ ಮಂಜಣ್ಣ ಆ ಸವಾಲನ್ನು ಹಿಂತೆಗೆದುಕೊಳ್ಳಬೇಕಾಯಿತು.
ಈ ಮಂಜಣ್ಣನದು ಒಂದು ಲಡಕಾಸು ಸೈಕಲ್ ಇತ್ತು. ಅದನ್ನು ಹತ್ತಿ ಓಡಾಡಿಸುವುದೆಂದರೆ ನಮಗೆಲ್ಲಾ ಭಾರಿ ಮಜ. ಅದರಿಂದ ನಮಗೆ ಇನ್ನೊಂದು ಉಪಯೋಗವೂ ಇತ್ತು. ಬೇಸಿಗೆಯಲ್ಲಿ ಹಾಸ್ಟೆಲ್ಲಿಗೆ ಬೇಕಿದ್ದ ನೀರನ್ನು ಮೆಳೆಯಮ್ಮನ ಗುಡಿಯ ಬಳಿಯಿದ್ದ ಬೋರ್‌ವೆಲ್‌ನಿಂದ ತರಬೇಕಾಗಿತ್ತು. ಆಗೆಲ್ಲಾ, ದಿನಾ ಹತ್ತು ಜನ ಹುಡುಗರು ನೀರು ತಂದು ತುಂಬಿಸಬೇಕಾಗಿತ್ತು. ಅದಕ್ಕೆ ಮಂಜಣ್ಣ ತನ್ನ ಸೈಕಲ್ಲನ್ನು ಫ್ರೀಯಾಗಿ ಒದಗಿಸುತ್ತಿದ್ದ. ‘ಪಾಪ. ಎಳೆಯ ಹುಡುಗರು. ಅವರ ಕೈಯಲ್ಲಿ ನೀರು ಹೊರಿಸುತ್ತಾರೆ. ಸೈಕಲ್ ಮೇಲೆ ತಂದುಕೊಳ್ಳಲಿ ಬಿಡಿ’ ಎಂದು ಕೇಳಿದವರ ಹತ್ತಿರ ಹೇಳುತ್ತಿದ್ದ. ಅದರಲ್ಲಿ ಆತನ ಸ್ವಾರ್ಥವೂ ಇತ್ತು. ಹಾಗೆ ನೀರುತರುತ್ತಿದ್ದ ಹುಡುಗರ ಕಡೆಯಿಂದ ತನ್ನ ಹೋಟೆಲ್ಲಿಗೆ ಬೇಕಾದಷ್ಟು ನೀರನ್ನು ತರಿಸಿಕೊಳ್ಳುತ್ತಿದ್ದ! ಸ್ವತಃ ತಾನೇ ತನ್ನ ಸೈಕಲ್‌ನ್ನು ಬಿಡಿಬಿಡಿಯಾಗಿ ಬಿಚ್ಚಿ ರಿಪೇರಿ ಮಾಡಿಕೊಳ್ಳುತ್ತಿದ್ದ ಆತನಿಗೆ ಅದನ್ನು ರಿಪೇರಿ ಮಾಡಿಸುವ, ಅದಕ್ಕೆ ಖರ್ಚು ಮಾಡುವ ಭಯವಿರಲಿಲ್ಲ.
ಮುಂದಿನವಾರ ಮಂಜಣ್ಣನ ಹಿರೋಮೆಜೆಸ್ಟಿಕ್ ಸವಾರಿ! (ನನ್ನ ಹೈಸ್ಕೂಲು ದಿನಗಳು ಪುಸ್ತಕದ ಕೊನೆಯ ಕಂತು)
ಚಂದನ ವಾಹಿನಿ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಡಾ.ನಾ.ಸೋಮೇಶ್ವರ ಅವರು 'ನನ್ನ ಹೈಸ್ಕೂಲು ದಿನಗಳು' ಪುಸ್ತಕದ ಅವಲೋಕನವನ್ನು ತಮ್ಮ ಯಕ್ಷಪ್ರಶ್ನೆಯಲ್ಲಿ ಮಾಡಿರುತ್ತಾರೆ. ಅದನ್ನು ಓದಲು ಹೈಸ್ಕೂಲು ದಿನಗಳ ಸವಿ ಸವಿ ನೆನಪು… ಕ್ಲಿಕ್ಕಿಸಿ.
8 comments:
ಸರ್,
ಎಲ್ಲಾ ಸ್ಕೂಲು, ಮಠಗಳ ಬಳಿಯೂ ಮಂಜಣ್ಣನಂಥ ಹೋಟಲ್ಲುಗಳು ಮನರಂಜನೆಗೆ ಇದ್ದೆ ಇರುತ್ತವೆ ಅಲ್ವಾ ಸರ್...
ಮತ್ತೆ ನಿಮ್ಮ ಎಂ.ಕೆ.ಸ್ವಾಮಿ ಬೋಂಡಗಾಗಿ ಕುದಿಯುತ್ತಿರುವ ಎಣ್ಣೆಯಲ್ಲಿ ಕೈಹಾಕಿದ್ದು ಮಾತ್ರ ಆಗಿನ ವಯಸ್ಸಿನ ಉಮೇದು ಅಲ್ವೇ ಸರ್...
ಮಂಜಣ್ಣನ ಕತೆ ತುಂಬಾ interesting ಆಗಿದೆ. ಮುಂದುವರೆಸಿ.
ಚೆನ್ನಾಗಿತ್ತು ಮಂಜಣ್ಣನ ಹೋಟೆಲ್ ಕಥೆ.....
ಸಾಮಾನ್ಯವಾಗಿ ಟೈಂ ಪಾಸಿಗೆ ಇಂತಹ ಹೋಟೆಲ್ ಹುಡುಕುತ್ತಾರೆ ಹುಡುಗರು...
ಮಂಜಣ್ಣನ ಹಿರೋಮೆಜೆಸ್ಟಿಕ್ ಸವಾರಿಗೆ ಕಾಯ್ತಾ ಇದ್ದೀವಿ.....
ಮಂಜಣ್ಣನ ಹೋಟೆಲಿನ ಸುತ್ತಮುತ್ತಲ ಘಟನೆ ಗಳು ಚೆನ್ನಾಗಿವೆ. ನನ್ನ ಶಾಲಾದಿನಗಳಲ್ಲಿಯು ಇ೦ತಹ ಹೋಟೆಲು ಗಳಿದ್ದವು. ಕೆಲ ಹಳೆಯ ನೆನಪುಗಳು ಮರುಕಳಿಸಿದವು.
ಮಂಜಣ್ಣನ ಹೋಟೆಲಿನ ಸುತ್ತಮುತ್ತಲ ಘಟನೆ ಗಳು ಚೆನ್ನಾಗಿವೆ. ನನ್ನ ಶಾಲಾದಿನಗಳಲ್ಲಿಯು ಇ೦ತಹ ಹೋಟೆಲು ಗಳಿದ್ದವು. ಕೆಲ ಹಳೆಯ ನೆನಪುಗಳು ಮರುಕಳಿಸಿದವು.
thumbaa chennagide sir
ಮಂಜಣ್ಣ ಹೋಟೆಲಿನ ಕಥೆ ಚೆನ್ನಾಗಿದೆ, ಬಾಲ್ಯದ ನೆನಪುಗಳು ನನಗೂ ಬರುತ್ತಿವೆ
manajannana hotelina kathe cannaagide, munduvaresi, mundina bhagakkaagi kaayuttiddene.
Post a Comment