ಶ್ರೀ ಸತ್ಯನಾರಾಯಣ ಅವರು ತಮ್ಮ ಕಿಶೋರದಿನಗಳನ್ನು ಮೆಲಕು ಹಾಕುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಿದ್ದಾರೆ. ಎರಡು ಕಾರಣಗಳಿಂದಾಗಿ ಇದೊಂದು ಓದಿಸಿಕೊಂಡು ಹೋಗುವ, ಓದಿದ ಮೇಲೂ ನೆನಪಿನಲ್ಲಿ ಉಳಿಯುವ ಕೃತಿಯಾಗಿದೆ. ಒಂದು ಆ ವಯಸ್ಸು... ಇತ್ತ ಬಾಲ್ಯವೂ ಅಲ್ಲದ ಅತ್ತ ವಯಸ್ಕನೂ ಅಲ್ಲದ ಆ ವಯಸ್ಸಿನ ಆಸೆಗಳು, ಕುತೂಹಲಗಳು, ರಾಗ-ದ್ವೇಷಗಳು... ಇವೇ ತುಂಬ ನಾಟಕೀಯವಾಗಿರುತ್ತವೆ. ವ್ಯವಸ್ಥೆ ಬಗ್ಗೆ ಆಕ್ರೋಶ, ತಾನು ಹಿರಿಯರಿಗಿಂತ ತಿಳುವಳಿಕೆಯುಳ್ಳವನು, ತಾನು ಬದಲಾಯಿಸ್ತೀನಿ ಹೀಗೆ ‘ತಾನು’ ಅನ್ನೋದರ ಸುತ್ತವೇ ಬದುಕು ಗಿರಿಗಟಲೆ ಹೊಡೆವ ಹಂತ... ಈ ಅವಸ್ಥೆಯನ್ನು ವಾಸ್ತವವಾಗಿ ಬರೆದಿರೋರು ಕಡಿಮೆ. ಸತ್ಯನಾರಾಯಣ ಅವರೂ ಪೂರ್ತಿಯಾಗಿ ಅಥವಾ ತೀರಾ ಖಾಸಗಿ ವಲಯದ ವಿವರಕ್ಕೆ ಕೈ ಹಾಕಿಲ್ಲ. ಇದ್ದರೆ ಇನ್ನೂ ಚನ್ನಾಗಿರುತ್ತಿತ್ತೇನೋ(?)... ಇನ್ನೊಂದು ಕಾರಣ ಆ ದಿನಗಳ ನೆನಪನ್ನು ಹೇಳುವ ನೆಪದಲ್ಲಿ ಒಂದು ಸಮುದಾಯದ ಬದುಕನ್ನು ನಮ್ಮ ಮುಂದೆ ಬಿಚ್ಚಿಡ್ತಾರೆ... ಅನ್ನೋದು.
ಕುಂದೂರುಮಠದ ಮೂಲ ಹುಡುಕುವ ವಿವರಗಳಂತೂ ಒಬ್ಬ ಸಂಶೋಧಕನಿಗೆ ಮಾತ್ರ ಸಾಧ್ಯವಾಗುವಂಥದ್ದು. ಲೇಖಕರು ಸ್ವತಃ ಸಂಶೋಧಕರೂ ಆಗಿರುವುದರಿಂದ ಇದು ಸಾಧ್ಯವಾಗಿದೆ. ಪೂಜಿಸುವ ದೇವರ ಹೆಸರೇ ಬದಲಾದ ಕಥೆ, ಮೆಳೆಯಮ್ಮನಿಗೆ ಮಾಂಸಪ್ರಸಾದವನ್ನು ಲಿಂಗಾಯಿತ ಸಮುದಾಯದ ಪೂಜಾರಿ ಅರ್ಪಿಸುತ್ತಿದ್ದ ಪರಿ (ಈ ವ್ಯಂಗ್ಯದ ಹಿಂದೆ ಸ್ವಲ್ಪ ಕ್ರೌರ್ಯ ಇದೆಯೇನೋ ಅನ್ನಿಸುತ್ತೆ), ಹಳ್ಳಿ ಶಾಲೆಗಳ ಕಥೆ, ಹೆಡ್ಮಾಸ್ಟರಿಗೆ ನೀರು ಕೊಟ್ಟಿದ್ದು, ಹಾಸ್ಟೆಲ್ಲಿನಲ್ಲಿ ಆದ ಕಳ್ಳತನ... ಇವೆಲ್ಲಾ ಓದಿದಾಗ ಸ್ವಾರಸ್ಯಕರ ಕಥೆಗಳ ವ್ಯಕ್ತಿ ಚಿತ್ರಣಗಳು ಒಂದು ಕಾದಂಬರಿಯ ಹರುಹನ್ನು ಪಡೆದ ಬರಹಗಳಾಗಿವೆ. ಅಯ್ಯಪ್ಪಸ್ವಾಮಿಯ ಯಾತ್ರೆಯ ಬಗೆಗಿನ ಬರಹವೂ ಅಷ್ಟೆ. ಒಂದು ಸಮುದಾಯದ ನಂಬಿಕೆ, ಆಚರಣೆ ಇವುಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಬರಹಗಳ ಬಂಧವೂ ಹಾಗೆ..... ಒಮ್ಮೆ ಘಟನೆಯನ್ನು, ಮಗದೊಮ್ಮೆ ವ್ಯಕ್ತಿ ಪರಿಚಯವನ್ನು, ಮತ್ತೊಮ್ಮೆ ಸ್ಥಿತಿಚಿತ್ರಣವನ್ನು ಕೊಡುತ್ತಾ ವೈವಿಧ್ಯ ಕಾಯ್ದುಕೊಂಡಿದೆ.ಪುಸ್ತಕದ ಮೊದಲಿಗೆ ಲೇಖಕರು ‘ತಮ್ಮ ಹೈಸ್ಕೂಲು ಜೀವನದ ಬಗ್ಗೆಯೇ ಏಕೆ ಬರೆಯಬೇಕು?’ ಅಂತ ಅನ್ನಿಸಿತು ಎಂದು ಹೇಳುತ್ತಾ, ‘ತಮ್ಮ ಇದುವರೆಗಿನ ಜೀವಮಾನದಲ್ಲೇ ಅತ್ಯಂತ ಸ್ವಾರಸ್ಯಕರವಾದ ಘಟನೆಗಳಿಂದ ಕೂಡಿದ ಕಾಲವಾಗಿತ್ತು’ ಎಂದು ಹೇಳುತ್ತಾರೆ. ಈ ಪುಸ್ತಕ ಓದಿದ ಮೇಲೆ ನಮ್ಮಂಥ ನಗರವಾಸಿಗಳಂತೂ ಒಪ್ಪಲೇಬೇಕಾದ ಮಾತು. ಆದರೆ ನನಗೆ ತುಂಬಾ ಕಾಡಿದ್ದು... ಹೀಗೆ ಭೂತವನ್ನು ಹೆಕ್ಕುವಾಗ ಎಲ್ಲ ಸೊಗಸಾಗಿ, ಸ್ವಾರಸ್ಯಕರವಾಗಿ ಕಾಣುವುದು ಸಹಜವಾದರೂ ಅವನ್ನು ಅನುಭವಿಸುವಾಗಿನ ಕಷ್ಟ, ಆ ನಿರಾಸೆಗಳು, ಆ ಕೊರತೆಗಳು... ಅವುಗಳನ್ನು ಇಂದು ಹೀಗೆ ನೆನಪಿಸಿಕೊಳ್ಳುವಾಗ ಕೊಡುವ ಸುಖ ಸುಳ್ಳಲ್ಲವೇ? ಸುಳ್ಳಲ್ಲದಿದ್ದರೆ ಇಂದಿಗೂ ಇರುವ ಗ್ರಾಮೀಣ ಪ್ರದೇಶದಲ್ಲಿನ ಬಡತನ, ಮೂಲಭೂತ ಸೌಕರ್ಯಗಳಿಲ್ಲದ ಕೊರತೆಯ ಸ್ಥಿತಿಯನ್ನು, ಅದಕ್ಕಿಂತ ಹೆಚ್ಚಾಗಿ ಅಜ್ಞಾನವನ್ನು, ನಿರಕ್ಷರತೆಯನ್ನು ಹಾಗೆ ಬಿಟ್ಟು ಬಿಡಬಹುದಲ್ಲವೇ? ಎಂದು. ಇದೊಂದು ಯೋಚನೆ ಅಷ್ಟೆ. ಎಲ್ಲ ಗ್ರಾಮೀಣ ಮಕ್ಕಳೂ ಸತ್ಯನಾರಾಯಣರಂತೆ ಆ ಎಲ್ಲ ಹಂಗನ್ನು ಮೀರಿ ಬೆಳೆಯುವ ಭರವಸೆ ಇದ್ದರೆ ಹಾಗೇ ಮಾಡಬಹುದಿತ್ತೇನೋ?!
ಇದರಲ್ಲಿ ಕೆಲವು ಲೇಖನಗಳನ್ನು ಓದಿದಾಗ ತುಂಬಾ ದುಃಖವಾಯ್ತು. ಮುಗ್ಧತೆಗೆ, ಬಡತನಕ್ಕೆ, ತಿಳಿಗೇಡಿತನಕ್ಕೆ ಸಿಗೋ ಸುಖ, ಖುಷಿ.... ತಿಳುವಳಿಕೆಗೆ, ಶ್ರೀಮಂತಿಕೆಗೆ ಏಕೆ ಸಿಗದು? ಹೈಸ್ಕೂಲು ಹುಡುಗನಿಗೆ ಇರುವ ಸಿನಿಮಾ ನೋಡುವ ತವಕ, ಕುತೂಹಲ, ಅದಮ್ಯ ಬಯಕೆ... ಇವು ಕೈತುಂಬ ದುಡಿಮೆ, ಬೇಕಾದಷ್ಟು ಸಿನಿಮಾ ನೋಡೋ ಬಿಡುವು, ಏಕೆ? ಏನು? ಅಂತ ಕೇಳುವವರು ಇಲ್ಲದಾಗ ಅದರ ಆಸೆಯೇ ಹಿಂಗಿ ಹೋಗುವುದು.... ದುಃಖ ಅಲ್ಲವೇ!? ತಿಪ್ಪರಲಾಗ ಹಾಕಿ ತಮಗೆ ಬೇಕಾದ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದ ಹುಡುಗರಿಗೆ ಅದನ್ನು ಉಳಿಸಿಕೊಳ್ಳಲಾಗದ ಅಸಹಾಯಕತೆ... ಈಗ ಹಿಂದಿರುಗಿ ನೋಡಿದಾಗ ಮತ್ತೆ ಅಂಥ ಶೋಕಿ ಮಾಡುವಷ್ಟು ಕೂದಲೇ ಉಳಿಯದ ಬುರುಡೆಯನ್ನು ಸವರಿಕೊಳ್ಳುವಂತಾಗುವುದು ವಿಪರ್ಯಾಸವಲ್ಲವೇ!?
ಆಧುನಿಕತೆ, ಜಾಗತೀಕರಣದ ಪರಿಣಾಮಗಳಲ್ಲಿ ಒಳ್ಳೆಯದು-ಕೆಟ್ಟದ್ದು ಸಮಪ್ರಮಾಣದಲ್ಲಿದೆ ಎಂದು ಈ ಪುಸ್ತಕ ಓದಿದ ಮೇಲೆ ಅನ್ನಿಸದಿರದು. ಇಂದಿನ ಹೈಸ್ಕೂಲು ಮಕ್ಕಳು ಇವರ (ನಮ್ಮ) ತಲೆಮಾರಿನವರಂತೆ ಮುಗ್ಧರು, ಎಷ್ಟೋ ವಿಷಯದಲ್ಲಿ ಪೆದ್ದರು ಖಂಡಿತ ಆಗಿರುವುದಿಲ್ಲ. ಇವರು ಬಾಂಬ್ ಮಾಡಿದ ಸಾಹಸದಲ್ಲಿ, ಬೆಂಕಿ ದೆವ್ವದಲ್ಲಿ, ಕೋಳಿಮೊಟ್ಟೆ ಇಡುವ ಪ್ರಶ್ನೆಗೆ ಕೊಟ್ಟ ಉತ್ತರದಲ್ಲಿ ಇವೆಲ್ಲ ತುಂಬಾ ರಂಜಕವಾಗಿ ಕಚಗುಳಿಯಿಡುವಂತೆ ಬಿಚ್ಚುತ್ತಾ ಹೋಗುತ್ತದೆ.
ಈ ಪುಸ್ತಕದಲ್ಲಿನ ‘ಹಾಸ್ಟೆಲ್ಲಿನ ಕಳ್ಳತನ’ ‘ಅಡುಗೆ ಭಟ್ಟರು’ ‘ಬಾಂಬ್ ಮಾಡುವ ಸಾಹಸ’ ‘ಮೊದಮೊದಲ್ ಸೇದಿದ ಸಿಗರೇಟು’ ‘ಜಿ.ಎಸ್.ಎಸ್. ಅಂಗನವಾಡಿ ಮೇಡಮ್‌ಗೆ ಕಣ್ಣು ಹೊಡೆದಿದ್ದು’.... ಇನ್ನೂ ಎಷ್ಟೋ ಘಟನೆಗಳನ್ನು, ಆ ಪಾತ್ರಗಳ ಚಿತ್ರಣವನ್ನು ಓದಿದಾಗ ಬೇಡದೆಯೂ ಲಂಕೇಶರ ‘ಮುಸ್ಸಂಜೆಯ ಕಥಾಪ್ರಸಂಗ’, ಗೊರೂರರ ‘ನಮ್ಮ ಊರಿನ ರಸಿಕರು’, ಆರ್.ಕೆ. ನಾರಾಯಣರ ‘’ಮಾಲ್ಗುಡಿ ಡೇಸ್’ ಕೃತಿಗಳನ್ನು ಮೆಲಕು ಹಾಕುವಂತಾಯ್ತು. ಆ ಕೃತಿಗಳಂತೆಯೇ ಇದೂ ಕೂಡಾ ಬೆಚ್ಚಗಿನ ಅನುಭವ ಕೊಡುತ್ತಲೇ ಅದರಾಚೆಗಿನ ಒಂದು ಹೊಳಹನ್ನು ಕಾಣಿಸುತ್ತದೆ. ಆ ದೃಷ್ಟಿಯಿಂದ ಒಂದು ಸಾರ್ಥಕ ಓದು ನಮ್ಮ ಪಾಲಾಗುತ್ತದೆ. ಕೊರತೆ ಎನಿಸೋದು ಬರವಣಿಗೆಯಲ್ಲಿ ಸ್ವಾರಸ್ಯಕತೆಯನ್ನು ಕಟ್ಟಿಕೊಡುವುದಕ್ಕಿಂತ ಲೇಖಕರು ತಮ್ಮ ವಿಮರ್ಶಾ ಪ್ರಜ್ಞೆಯನ್ನು ಅಲ್ಲಲ್ಲಿ ಇಣಕಿಸಿ ರಸಭಂಗ ಮಾಡೋದು.... ಭೂತ ಮತ್ತು ವರ್ತಮಾನವನ್ನು ಹೀಗೆ ‘ಬ್ರಿಡ್ಜ್’ ಮಾಡುವ ಅಗತ್ಯ ಇರಲಿಲ್ಲವೇನೋ. ಅವರು ಅದನ್ನು ಹೇಳದೆಯೂ ಆ ಭಾವ ನಮ್ಮಲ್ಲೆ ಹುಟ್ಟಿಸುವಷ್ಟು ಪ್ರಭಾವಿ ಭಾಷೆ ಅವರಿಗೆ ಇರುವಾಗ... ಉದಾ: ಆಂಗ್ಲಭಾಷೆ ಕಲಿಯುವ ಅವರ ತರಗತಿಯ ಬಗ್ಗೆ ಹೇಳುತ್ತಾ ಇಂದಿನ ಶಿಕ್ಷಣ ಪದ್ಧತಿಯ ಮಾತು ತರುವುದು... ಹೀಗೆ.
ಸತ್ಯನಾರಾಯಣರವರ ಭಾಷೆಯ ಪ್ರಯೋಗದ ಬಗ್ಗೆ ಹೇಳಲೇಬೇಕು. ಅವರ ಅನುಭವಗಳಷ್ಟು ಸರಳವಲ್ಲ ಅವರ ಭಾಷೆ. ವಿವೇಕಯುಕ್ತ ಮಿದುಳೊಂದು ಆ ಅನುಭವಗಳನ್ನು ಪರಾಮರ್ಶಿಸುತ್ತಿರುವುದು ಕಾಣಸಿಗುತ್ತದೆ. ಕೆಲವು ಪದಪ್ರಯೋಗವಂತೂ ತುಂಬಾ ವಿಶಿಷ್ಟವಾಗಿವೆ ‘ಅಪಾರ್ಥದಲ್ಲಿ ಅರ್ಥೈಸಿಕೊಂಡಿದ್ದೆವು’ ಎನ್ನುತ್ತಾರೆ. ‘ಸ್ವಂತಪುರಾಣ ವಾಚನಗೋಷ್ಠಿ’ ಅಂತೆ... ಹೀಗೆ ಒಂದು ಬಗೆಯ ವ್ಯಂಗ್ಯವನ್ನು ಜೊತೆಗೆ ಹಾಸ್ಯದ ಹಾಸನ್ನು ಪದಗಳಿಂದಲೇ ಹುಟ್ಟುಹಾಕಿಬಿಡುತ್ತಾರೆ. ತಲೆಬರಹ ನೀಡುವಾಗಲೇ ಈ ಪ್ರಯೋಗಗಳನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡಿದ್ದಾರೆ. ಇದೇ ಪುಸ್ತಕ, ಕಾಣದೂರಿನ ಒಬ್ಬ ಗೆಳೆಯನ ಅನುಭವದ ಹಂಚಿಕೆ ಅನ್ನುವಷ್ಟು ಸ್ವಾರಸ್ಯಕಾರಿಯಾಗಿ ಮುಂದಿಡುತ್ತಾರೆ.
ಒಟ್ಟಿನಲ್ಲಿ ಆತ್ಮಕತೆಗೆ ಈ ‘ಇಂಟರ್‌ಪ್ರಿಟೇಷನ್’ ತರುವ ಪ್ರಯೋಗದಲ್ಲಿ ಯಶಸ್ವಿಯಾಗಿರುವ ಈ ಲೇಖಕರಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದಾಗಿದೆ.... ಆ ನಿಟ್ಟಿನಲ್ಲಿ ಈ ಕೃತಿ ಅವರಿಗೆ ಜವಾಬ್ದಾರಿಯನ್ನೂ ಹೊರಿಸುತ್ತೆ.... ಅದಕ್ಕೆ ಅವರು ತಯಾರಾಗಿರಬೇಕು ಅಷ್ಟೆ.
3 comments:
ಸತ್ಯನಾರಾಯಣ ಸರ್,
ವಿ.ಸುಂದರರಾಜ್‍ರವರು ನಿಮ್ಮ ಪುಸ್ತಕದ ಬಗ್ಗೆ ಬರೆದ ವಿಮರ್ಶೆ ಓದಿದೆ. ತುಂಬಾ ಚೆನ್ನಾಗಿ ಅವಲೋಕಿಸಿದ್ದಾರೆ. ಪ್ರತಿಯೊಂದು ಲೇಖನವನ್ನು ವಿವರವಾಗಿ ಓದಿರುವ ಅವರ ವಿಮರ್ಶೆ ತೂಕವುಳ್ಳದ್ದಾಗಿದೆ...
ಧನ್ಯವಾದಗಳು.
ಸ್ವಾರಸ್ಯಕರವಾದ ಲೇಖನಮಾಲೆಗೆ ಅಷ್ಟೇ ಅರ್ಥಪೂರ್ಣವಾದ ಮುನ್ನುಡಿ ಬಂದಿದೆ.
ಸುಂದರರಾಜ್‍ವರು ಬರೆದಿರುವ ವಿಮರ್ಶೆ ಚನ್ನಾಗಿದೆ.ಈ ಪುಸ್ತಕವನ್ನು ನಾನು ನಿಮ್ಮ ಬ್ಲಾಗಲ್ಲಿ ಅಲ್ಲಲ್ಲಿ ಮಾತ್ರ ಓದಿದ್ದೇನೆ. ಈ ಸಾರಿ ಬೆಂಗಳೂರಿಗೆ ಬಂದಾಗ ತೆಗೆದುಕೊಂಡು ಓದುವೆ.
ಅಂದಹಾಗೆ ಕನ್ನಡ ಬ್ಲಾಗರ್ಸ್ ತಾಣದಲ್ಲಿ ನನ್ನ ಬಗ್ಗೆ ಹೊಗಳಿ ಬರೆದಿರುವಿರೆಲ್ಲ?. ಇರಲಿ. ನೀವು ಕೇಳಿರುವ ಪ್ರಶ್ನೆಗೆ ಮುಂದೆ ನನ್ನ ಬ್ಲಾಗಲ್ಲಿಯೇ ಲೇಖನವೊಂದನ್ನು ಸಿದ್ಧಪಡಿಸಿ ಉತ್ತರಿಸುವೆ.
Post a Comment