ನಾನಾಗ ಚಿಕ್ಕವನು. ಐದೋ ಆರೋ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಯಾರದೋ ಮನೆಯಲ್ಲಿ ಪೆನ್ಸಿಲ್ಲಿನಲ್ಲಿ ಬರೆದಿದ್ದ ಇಬ್ಬರು ವ್ಯಕ್ತಿಗಳ ಚಿತ್ರಗಳನ್ನು ಗೋಡೆಯಲ್ಲಿ ನೇತು ಹಾಕಿದ್ದರು. ಹತ್ತಿರದಲ್ಲೇ ಇದ್ದ ಒಂದು ಚಿತ್ರ ಕುವೆಂಪು ಅವರದ್ದು ಎಂದು ಅದರ ಮೇಲೆ ಬರೆದಿದ್ದರಿಂದ ಗೊತ್ತಾಯಿತು. ಸ್ವಲ್ಪ ದೂರದಲ್ಲಿದ್ದ ಚಿತ್ರ ಯಾವ ಕೋನದಿಂದ ನೋಡಿದರೂ ನಮ್ಮ ತಾತನದೇ ಚಿತ್ರದಂತೆ ಕಾಣುತ್ತಿತ್ತು. ಒಂದೇ ವ್ಯತ್ಯಾಸವೆಂದರೆ ನಮ್ಮ ತಾತ ತಲೆಗೆ ರುಮಾಲು ಸುತ್ತುತ್ತಿದ್ದರು. ಚಿತ್ರದಲ್ಲಿದ್ದ ತಾತ ಟೋಪಿ ಹಾಕಿಕೊಂಡಿದ್ದರು. ಕೊನೆಗೆ ತಡೆಯಲಾರದೇ ಎದ್ದು ಹೋಗಿ ನೋಡಿದಾಗ ಅದರ ಮೇಲೆ ದ.ರಾ.ಬೇಂದ್ರೆ ಎಂದು ಬರೆದಿತ್ತು. ನಮ್ಮ ತಾತನಿಗೂ ಅದೇ ವಯಸ್ಸು, ಸುರುಳಿಗೂದಲು, ಮೀಸೆ ಮತ್ತು ಮುಗ್ದಮುಖವಿದ್ದುದರಿಂದ ಬೇಂದ್ರೆ ಚಿತ್ರ ನನಗೆ ನನ್ನ ತಾತನ ಚಿತ್ರದಂತೆಯೇ ಕಾಣುತ್ತಿತ್ತು. ಹೀಗೆ ಬೇಂದ್ರೆ ಚಿತ್ರ ಅಂದು ನನ್ನ ಮನಸ್ಸಿನಲ್ಲಿ ದಾಖಲಾಯಿತು. ಅಂದಿನಿಂದ ಇಂದಿನವರೆಗೂ ಬೇಂದ್ರೆ ಎಂದರೆ ನನಗೆ ಮೊದಲು ನೆನಪಾಗುವುದು ಅದೇ ಚಿತ್ರದ ತಾತ! ಜನವರಿ 31 ಅವರು ಹುಟ್ಟಿದ ದಿನ.
ನಂತರ ಪಠ್ಯಪುಸ್ತಕಗಳಲ್ಲಿದ್ದ ಕವನಗಳ ಮೂಲಕ ಬೇಂದ್ರೆ ಹತ್ತಿರವಾದರು. ಸಾಹಿತ್ಯದಲ್ಲಿ ಆಸಕ್ತಿ ಮೂಡುತ್ತಾ ಹೋದಂತೆ ಬೇಂದ್ರೆ ಪ್ರೀತಿಯ ಕವಿಯಾದರು. ೧೯೯೮-೨೦೦೦ನೇ ಇಸವಿಯಲ್ಲಿ ಕನ್ನಡ ಎಂ.ಎ. ಮಾಡುವಾಗ ನನ್ನ ಸುಯೋಗವೋ ಏನೋ? ಬೇಂದ್ರೆಯವರನ್ನು ವಿಶೇಷಕವಿಯಾಗಿ ಅಧ್ಯಯನ ಮಾಡಬೇಕಾಗಿತ್ತು. ಆಗಿನ್ನು ಅವರ ಸಮಗ್ರಸಾಹಿತ್ಯ ಪ್ರಕಟವಾಗಿರಲಿಲ್ಲ. ಆದರೂ ಆಗ ಸಿಕ್ಕ ಅವರ ಎಲ್ಲಾ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದೆ. ಅದರಿಂದಾದ ಸಂತೋಷ ಪದಗಳಿಗೆ ನಿಲಕದ್ದು.
ಅವರ ಯಾವುದೋ ಬರಹವೊಂದರಲ್ಲಿ ‘ಸಣ್ಣ ಸೋಮವಾರ’ ಎಂಬ ಪ್ರಯೋಗ ಬಂದಿತ್ತು. ನಾನು ಆ ಪದದ ಬಗ್ಗೆ ತಲೆಕೆಡಿಸಿಕೊಂಡು ಸಿಕ್ಕ ಸಿಕ್ಕ ನಿಘಂಟುಗಳನ್ನೆಲ್ಲಾ ಜಾಲಾಡಿದ್ದೆ. ಕೊನೆಗೆ ವರ್ಷದ ಕೊನೆಯಲ್ಲಿ ಪ್ರೊ.ಶಿವಕುಮಾರ್ ಎಂಬುವವರಲ್ಲಿ ಈ ಪದದ ಬಗ್ಗೆ ಕೇಳಿದೆ. ಅವರು ‘ಈ ಸಮಸ್ಯೆ ನಿನಗೂ ಕಾಡಿದೆ ಎಂದರೆ ನೀನು ಬೇಂದ್ರೆಯವರನ್ನು ಸೀರಿಯಸ್ಸಾಗಿ ಓದುತ್ತಿದ್ದೀಯಾ ಎಂದರ್ಥ. ಈ ಪದ ಹಲವಾರು ವಿದ್ವಾಂಸರನ್ನು ಓದುಗರನ್ನು ಕಾಡಿದೆ. ಅದಕ್ಕೆ ಒಬ್ಬ ಬಸ್ ಕಂಡಕ್ಟರ್ ಉತ್ತರ ಹುಡುಕಿದ್ದರು. ಧಾರವಾಡ ಕಡೆ ಸಣ್ಣ ಸೋಮವಾರ ಮಾಡುವುದು ಎಂಬ ಆಚರಣೆಯೇ ಇದೆ. ಸಣ್ಣ ಅಂದರೆ ಶ್ರಾವಣ ಅಂತ ಅಷ್ಟೆ! ಅಂದರೆ ಶ್ರಾವಣ ಸೋಮವಾರ’ ಎಂದು ಅದರ ಇತಿಹಾಸವನ್ನೇ ಬಿಚ್ಚಿಟ್ಟಿದ್ದರು. ಬೇಂದ್ರೆಯವರು ಈ ನೆಲದ ಸೊಗಡನ್ನು ತಮ್ಮದಾಗಿಸಿಕೊಂಡಿದ್ದಕ್ಕೆ ಇದೊಂದು ಚಿಕ್ಕ ಉದಾಹರಣೆ.
ಆಗ ಉಪನ್ಯಾಸ ನೀಡಿದ್ದ ಇನ್ನೊಬ್ಬ ವಿದ್ವಾಂಸರು ಸಾಂಸ್ಕೃತಿಕ ವೈರುದ್ಧ್ಯಗಳಂತಿದ್ದ ವ್ಯಕ್ತಿತ್ವಗಳು ಅರ್ಥಪೂರ್ಣ ಮುಖಾಮುಖಿಯಾಗುವುದು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದೆ ಎಂದು ಹೇಳಿ ಮೂರು ಉದಾಹರಣೆ ಕೊಟ್ಟಿದ್ದರು. ‘ಕನಕದಾಸ-ಪುರಂದರದಾಸ, ಗಾಂಧಿ - ಅಂಬೇಡ್ಕರ್, ಕುವೆಂಪು-ಬೇಂದ್ರೆ’ ಎಂದು.
ಗಾಂಧಿ ಸೂಟುಬೂಟು ತ್ಯಜಿಸಿದ್ದು ಹಾಗೂ ಅಂಬೇಡ್ಕರ್ ಸೂಟುಬೂಟು ಒಪ್ಪಿಕೊಂಡಿದ್ದು, ಕುವೆಂಪು ಭಾಷೆ ಸಂಸ್ಕೃತಭೂಯಿಷ್ಟವಾದುದ್ದು ಹಾಗೂ ಬೇಂದ್ರೆ ಭಾಷೆ ಜಾನಪದೀಯವಾದದ್ದು, ಪುರಂದರದಾಸರು ಕೇವಲ ದಾಸರಾಗಿದ್ದು ಹಾಗೂ ಕನಕದಾಸರು ದಾಸರಾಗುವುದರ ಜೊತೆಗೆ ಕವಿಯೂ ಆದದ್ದು. . . . ಹೀಗೇ ಅವರ ಹೋಲಿಕೆ ನಡೆದಿತ್ತು. ಆದರೆ ಅವರ ವಿಮರ್ಶೆ ಕುಚೋದ್ಯದಿಂದ ಕೂಡಿದೆ ಎಂದೇ ಅನ್ನಿಸಿತ್ತು. ಈಗಲೂ ಅದನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತ ಕುವೆಂಪು-ಬೇಂದ್ರೆ ಭಾಷಾವಿಚಾರದಲ್ಲಿ ಅದೊಂದು ತೀರಾ ಸಾಮಾನ್ಯ ವಿವರಣೆ ಅನ್ನಿಸದಿರದು. ಸಹಜಕವಿಯಾದವನಿಗೆ ಭಾಷೆಯೇ ಒಂದು ತೊಡಕು ಎಂದು ಎಲ್ಲೋ ಓದಿದ ನೆನಪು. ಕವಿಯ ಮನಸ್ಸಿನಲ್ಲಿ ಕವಿತೆಯಾದುದೆಲ್ಲಾ ಭಾಷೆಯಲ್ಲಿ ಅಭಿವ್ಯಕ್ತಿಯಾಗುವುದು ಕಷ್ಟ! ಬೇಂದ್ರೆ-ಕುವೆಂಪು ಇಬ್ಬರೂ ಭಾಷೆಯನ್ನು ಯಾವ ಗರಿಷ್ಠಮಟ್ಟಕ್ಕಾದರೂ ಕೊಂಡಯ್ದು ಬಳಸಬಲ್ಲ ಕವಿಗಳಾಗಿದ್ದರು. ಹಾಗೇ ಜಾನಪದೀಯವಾಗಿಯೂ ಬಳಸಬಲ್ಲವರಾಗಿದ್ದವರು. ಇಷ್ಟನ್ನೇ ಆಧಾರವಾಗಿರಿಸಿಕೊಂಡು ಸಾಂಸ್ಕೃತಿಕ ವೈರುದ್ಧ್ಯವುಳ್ಳ ವ್ಯಕ್ತಿತ್ವಗಳು ಹಾಗೂ ಅವುಗಳ ಮುಖಾಮುಖಿ ಎಂದು ಭಾವಿಸುವುದು ಅಷ್ಟು ಸಮಂಜಸವೇನಲ್ಲ ಎಂಬುದು ನನ್ನ ಅನಿಸಿಕೆ.
ನಾನು ಬೇಂದ್ರೆಯವರನ್ನು ಅಧ್ಯಯನ ಮಾಡುವಾಗ ನನ್ನನ್ನು ಸೂಜಿಗಲ್ಲಿನಂತೆ ಸೆಳೆದದ್ದು ಅವರ ‘ಕನ್ನಡ ಮೇಘದೂತ’ ಖಂಡಕಾವ್ಯ. ಅದು ಕಾಳಿದಾಸನ ಮೇಘದೂತದ ಕನ್ನಡ ಅವತರಣಿಕೆ. ಒಂದೊಂದು ಪದ್ಯವೂ ಬಿಡಿಮುತ್ತಿನಂತೆ ಸರಳ ಛಂದಸ್ಸ್ಸಿನಲ್ಲಿ ಮೂಡಿಬಂದಿವೆ. ಅದರ ನಾಲ್ಕು ಪದ್ಯಗಳನ್ನು ಇಲ್ಲಿ ಕೊಡುತ್ತೇನೆ, ರಸಗ್ರಹಣಕ್ಕಾಗಿ!
ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು
ಕೆಲವೆ ತಿಂಗಳಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು
ಕಾರಹುಣ್ಣಿಮೆಯ ಮಾರನೆಯ ದಿನವೆ ಮೋಡ ಕೋಡನಪ್ಪಿ
ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆ ಬೆಡಗನೊಪ್ಪಿ
ಉತ್ತರಕ್ಕೆ ಹೊರಟವಗೆ ಉಜ್ಜಯಿನಿ ಅಡ್ಡವಾದರೇನು?
ಅಲ್ಲಿ ಮೇಲುಮಾಳಿಗೆಯ ಭೋಗ ಕಳಕೊಳ್ಳಬೇಡ ನೀನು
ಆ ಊರ ಹೆಂಗಸರ ಕಣ್ಣಬಳಿ ಮಿಂಚೆ ಮಿಣುಕು ಎನ್ನು
ಅವರ ಕಣ್ಣಕುಡಿಲಲ್ಲೆಯೊಲ್ಲೆಯಾ? ವ್ಯರ್ಥ ಇದ್ದು ಕಣ್ಣು
ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ
ಆಷಾಡ ಮಾವು ಸುರಿದಾವು ಗೊಂಚಲಲ್ಲಿ ಬೆಟ್ಟದೆದೆಯ ಮೇಲೆ
ಅಮರ ಮಿಥುನಗಳ ಪ್ರಣಯ ದೃಷ್ಟಿ ಅರಳರಳುವಂತೆ ಆಗೆ
ಮಲೆಯ ತುದಿಯು ಕಪ್ಪಾಗೆ ತೋರುವದು ನೆಲದ ಮೊಲೆಯ ಹಾಗೆ
ಮರದ ನಡುವೆ ಬಿಳಿ ಹಾಸಗಲ್ಲು ಬಂಗಾರ ಕೋಲು ನಡುಕೆ
ಎಳೆಬಿದಿರ ಬಣ್ಣ ಬೆಲೆ ಹರಳಿನಿಂದ ನೆಲೆಗಟ್ಟು ಅದರ ಬುಡಕೆ
ಆ ಕೋಲಿನಲ್ಲಿ ಕುಣಿಸುವಳು ನವಿಲ ನನ್ನಾಕೆ ಸಂಜೆಯಲ್ಲಿ
ಕೈ ತಟ್ಟಿ ಮಾಟ ಬಳೆ ತಕಲಾಟ ಥಕಥೈಯ ಥಾಟಿನಲ್ಲಿ
ಈ ಮೇಘದೂತದ ಗುಂಗಿನಲ್ಲೇ ನಾನು ಮೇಘದೂತನ ಕಾವ್ಯಸಿರಿ ಎಬ ಕವಿತೆಯೊಂದನ್ನು ಬರೆದಿದ್ದೆ. ಅದನ್ನಿಲ್ಲಿ ಕೊಟ್ಟು ಈ ಲೇಖನವನ್ನು ಮುಗಿಸುತ್ತೇನೆ. ಹಾಗೆ ನೋಡಿದರೆ ಮೊನ್ನೆ ಹೆಚ್.ಎಸ್.ವೆಂಕಟೇಶಮೂರ್ತಿಯವರು ಹೇಳಿದಂತೆ ಸ್ಮರಣೆಯೊಂದೇ ಮರಣದ ದುಃಖವನ್ನು ಮರೆಯಾಗಿಸುವ ಸಾಧನ!
ಮೇಘದೂತನ ಕಾವ್ಯಸಿರಿ
ಕೆರೆಯ ಅಂಚಿಗೆ ಚಾಚಿದ್ದ ಬಿಳಿಯ ಕಲ್ಲು
ತೊಳೆದು ಹೊಳೆವ ಬಿಂದಿಗೆ ನಡುವಿಗೆ
ಎಳೆಯ ರಶ್ಮಿಯ ಹೊಳಪಿನಿಂದ
ಬೆಳಕ ಚಿತ್ತಾರ ನೀರಕನ್ನಡಿಗೆ.
ಬಿಂದಿಗೆಯ ಮುಳುಗಿಸಿ ನೀರ
ತುಂಬುವಳು ಚೆಲುವೆ ಬಿಂಕದಿಂದ
ಅದ ನಡುವಿಗಿಟ್ಟು ನೆರಿಗೆ ಎತ್ತಿ ಕಟ್ಟಿ
ನಡೆವಳು ಚೆಲುವೆ ವೈಯಾರದಿಂದ.
ತಾವರೆಯ ವರಿಸಿದ ದುಂಬಿ, ಮರೆತು
ಬಂದಿತೋ ಅವಳಿಂದೆ; ಅವಳೊಂದು ಪುಷ್ಪ.
ಮುಂಜಾನೆಯ ಮಂದ ಮಾರುತಕೆ
ಚೆಲ್ಲಿದಳೋ ಮಕರಂದ, ಅವಳೊಂದು ಪುಷ್ಪ
ವಾಯುವಿಹಾರಿ ವಾಯಿಸಂಚಾರಿ
ಮನುಜ ಗಂಧರ್ವರೆಲ್ಲ ಬೆರಗಾದರೋ,
ಕನಕಪುತ್ಥಳಿ ಮಕರಂದಪುಷ್ಪ
ನಿಜ ಚೆಲುವಕಂಡು ಧನ್ಯರಾದರೋ.
ದತ್ತೂ ಮಾಸ್ತರರ ಕನ್ನಡ ಕಸ್ತೂರಿಯ
ಸೊಗಸನು ಮೇಘದೂತದಿ ಕಂಡು
ಮೈಮನ ನಿಮಿರಿ ರೋಮಾಂಚನದಲಿ
ಪುಲಕಗೊಂಡವು ಆ ಸೊಗಸನುಂಡು.
7 comments:
ಬೇಂದ್ರೆ ಯಾವಾಗ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟಿದ್ದಿರಿ....ಜನವರಿ ೩೧ ಅವರ ಹುಟ್ಟಿದ ಹಬ್ಬ ಅಂತ ಗೊತ್ತಿರಲಿಲ್ಲ.....
ಒಳ್ಳೆಯ ಅರ್ಥ ಪೂರ್ಣ ಲೇಖನ
ಬೇಂದ್ರೆ ಎಂಥಹ ಕವಿ
ಅವರ ಕವನಗಳು ಮನಸ್ಸಿಗೆ ಎಷ್ಟೊಂದು ಹಿತ ಕೊಡುತ್ತವೆ
ಕೆಲವು ಭಾವನಾತ್ಮಕ ಗೀತೆಗಲಂತೂ ಸೂಪರ್
ಒಳ್ಳೆಯ ಮಾಹಿತಿ ನೀಡಿದ್ದಿರಿ
ಹುಟ್ಟಿದ ಹಬ್ಬಕ್ಕೆ ಹಾರೈಕೆ ನಮ್ಮ ಕಡೆಯಿಂದ
ದ.ರಾ.ಬೇಂದ್ರೆ ಅವರ ಬಗ್ಗೆ ಬಹಳಷ್ಟು ಒಳ್ಳೆ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು
ಸತ್ಯನಾರಾಯಣರವರೆ,
ಬೇಂದ್ರೆಯವರ ಜನ್ಮ ದಿನಕ್ಕೆ ಅವರ ಬಗ್ಗೆ ಬರೆದ ಲೇಖನ ಸಂದರ್ಭೋಚಿತ. ಬಹಳಷ್ಟು ಬೆಂಗಳೂರು, ಮೈಸೂರು ಕಡೆಯವರಿಗೆ ಬೇಂದ್ರೆಯವರ ಪದ್ಯಗಳು ಅರ್ಥವೇ ಆಗುವದಿಲ್ಲ. ಇದನ್ನು ನಾನು ಕುಹಕದಿಂದ ಹೇಳುತ್ತೇನಂದಲ್ಲ. ಆದರೆ ಇದು ವಾಸ್ತವ. ಏಕೆಂದರೆ ನೀವು ಸಣ್ಣ ಸೋಮವಾರ ಎಂದರೇನೆಂದು ತಲೆಕೆಡಿಸಿಕೊಂಡಂತೆ ಹಿಂದೆ ಬಿ.ಎಮ್.ಶ್ರೀಯವರು ಬೇಂದ್ರೆಯವರ ‘ಪಾತರಗಿತ್ತಿ’ ಎಂದರೇನೆಂದು ಬಹಳಷ್ಟು ತಲೆಕೆಡಿಸಿಕೊಂಡಿದ್ದರು. ಆದರೆ ಮುಂದೆ ಯಾವಾಗಲೋ ಧಾರವಾಡದ ಕಡೆಯವರಿಂದ ಪಾತರಗಿತ್ತಿ ಎಂದರೆ ಚಿಟ್ಟೆ ಎಂದು ಗೊತ್ತಾಗಿದ್ದು. ಬೇಂದ್ರೆಯವರ ಕವನಗಳೇ ಹಾಗೆ. ಅವು ಧಾರವಾಡದ ಭಾಷೆಯನ್ನು ಮೈ ಬೆಳೆಸಿಕೊಂಡು ಬೆಳೆದಂಥವು. ಬೇಂದ್ರೆಯವರ ಕವನಗಳನ್ನು ಓದಬೇಕಾದರೆ ಧಾರವಾಡ ಭಾಷೆ ಚನ್ನಾಗಿ ಗೊತ್ತಿರಬೇಕು. ಇಲ್ಲವಾದರೆ ನಿಜವಾದ ಬೇಂದ್ರೆ ನಮಗೆ ಸರಿಯಾಗಿ ಸಿಗದೆ ಮಿಸ್ ಆಗುತ್ತಲೇ ಇರುತ್ತಾರೆ.
ನಿಮ್ಮ ಮೇಘ್ಹದೂತನ ಕಾವ್ಯ ಸಿರಿಯ ತುಣುಕಗಳು ಚನ್ನಾಗಿ ಮೂಡಿವೆ.
ಬಿಆರೆಸ್, ಬೇಂದ್ರೆಯವರ ಬಗೆಗಿನ ತಮ್ಮ ಅನುಭವ ಅದ್ಭುತವಾದುದು. ಅವರ ಹುಟ್ಟು ಹಬ್ಬದ ದಿನಕ್ಕೆ ಒಳ್ಳೆಯ ಅಕ್ಷರ ಕಾಣಿಕೆ.
ಬೇಂದ್ರೆಯವರ ಬಗೆಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಿ. ಸ್ಮರಣೆಯೇ
ಮದ್ದು ವಿರಹದ ನೋವಿಗೆ ಎನ್ನುವದು ಔಚಿತ್ಯಪೂರ್ಣವಾಗಿದೆ.
Uttama baraha... Matte meghadoota nenapisidiri..
Post a Comment