‘ಏನು ಕಾಫಿಗೆ ಬರುವುದಿಲ್ಲವೆ?’
‘ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ್ತಿದೆ’
‘ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು ನೀವು ಬಂದು ಕಾಫಿ ಕುಡಿದು ಹೋಗಿ’
ಅರ್ಧಗಂಟೆಯ ನಂತರ ಕಾಪಿ ಕುಡಿಯುತ್ತಾ,
‘ಚಿನ್ನಮ್ಮ ತಪ್ಪಿಸಿಕೊಂಡು ಹೋದಳೆ?’
‘ಹ್ಞೂ ಅವಳು ಕ್ಷೇಮವಾಗಿ ಹುಲಿಕಲ್ಲು ನೆತ್ತಿ ಹತ್ತಿದಳು’
ಈ ಸಂಭಾಷಣೆ ಕುವೆಂಪು ದಂಪತಿಗಳದ್ದು. ಮಲೆಗಳಲ್ಲಿ ಮಧುಮಗಳು ಕಾದಂಬರಿ ರಚನೆಯಾಗುತ್ತಿದ್ದ ಕಾಲದ ಒಂದು ದಿನ ಸಂಜೆ ಕಾಫಿಯ ಸಮಯದಲ್ಲಿ ನಡೆದದ್ದು. ಇದನ್ನು ಸೊಗಸಾಗಿ ತಾರಿಣಿಯವರು ‘ಮಗಳು ಕಂಡು ಕುವೆಂಪು’ ಕೃತಿಯಲ್ಲಿ ದಾಖಲಿಸಿದ್ದಾರೆ.
ಮೊದಲು ಪ್ರಾರಂಭವಾಗಿ, ಒಂದೆರಡು ಅಧ್ಯಾಯಗಳನ್ನು ಬರೆದು ಮುಗಿಸಿದ ಮೇಲೆ, ನಂತರ ಸುಮಾರು ೩೦ ವರ್ಷಗಳಾದ ಮೇಲೆ ಮೂರು ವರ್ಷಗಳ ಕಾಲ ಬರೆಯಿಸಿಕೊಂಡ ಕಾದಂಬರಿ ಇದು! ಅದು ಹೇಗೆ ಸಾಧ್ಯವಾಯಿತು? ಇದಕ್ಕೂ ಉತ್ತರ ತಾರಿಣಿಯವರ ಕೃತಿಯಲ್ಲಿ ಸಿಗುತ್ತದೆ.
ಕುವೆಂಪು ನಿವೃತ್ತರಾದ ಮೇಲೆ ಮನೆಯಲ್ಲಿ ಅರಾಮವಾಗಿದ್ದಾಗ ಒಂದು ದಿನ ಪುಸ್ತಕದ ಬೀರುವಿನಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ತಾರಿಣಿ ‘ಏನು?’ ಎಂದು ಕೇಳಿದಾಗ, ‘ಅಕ್ಕಾ ಎಲ್ಲಾದರೂ ನನ್ನ ಪುಸ್ತಕಗಳ ಬೀರುವಿನಲ್ಲಿ ಆ ಕಾದಂಬರಿಯ ಮ್ಯಾಪ್ ಇದೆಯೇ ನೋಡುವೆಯಾ? ನಿನಗೆ ಸಮಯವಾದಾಗ ಹುಡುಕು’ ಎನ್ನುತ್ತಾರೆ. ‘ಅದು ಹೇಗಿದೆ ಅಣ್ಣಾ?’ ಎನ್ನುವ ಪ್ರಶ್ನೆಗೆ, ಒಂದು ಫುಲ್ ಸ್ಕೇಪ್ ಬಿಳಿ ಹಾಳೆ, ಅದರಲ್ಲಿ ಎಲ್ಲಾ ಬರೆದಿರುವೆ’ ಎಂಬ ಉತ್ತರ ದೊರೆಯುತ್ತದೆ.
ಕೆಲ ದಿನಗಳ ನಂತರ, ಕುವೆಂಪು ತಮ್ಮ ಹಸ್ತಪ್ರತಿಗಳನ್ನು ಒಂದೊಂದೇ ತೆಗೆದು ನೋಡುತ್ತಿದ್ದಾಗ ಆ ಹಾಳೆ ಸಿಗುತ್ತದೆ. ಅವರು ಸಂತೋಷದಿಂದ ಅಲ್ಲಿಯೇ ಇದ್ದ ತಾರಿಣಿಗೆ ‘ಅಕ್ಕಾ ಇಲ್ಲಿ ನೋಡು, ಅಂತೂ ಈ ಕಾದಂಬರಿ ಮ್ಯಾಪ್ ಸಿಕ್ಕಿತು’ ಎಂದು ಹರ್ಷದಿಂದ ಹೇಳುತ್ತಾರೆ.
(ತಾರಿಣಿಯವರ ಮಾತಿನಲ್ಲೇ ಹೇಳುವುದಾದರೆ) ಬಹಳ ಹಳೆಯದಾದ ಒಂದು ಕಾಗದದ ಹಾಳೆ. ಆ ಕಾಗದದ ಬಣ್ಣ ಮಾಸಿತ್ತು. ಬಿಳಿ ಬಣ್ಣ ಹೋಗಿ ಮಾಸಲು ಕೆಂಪು ಬಣ್ಣ ಬಂದಿತ್ತು. ಮಡಿಕೆಯಾದ ಜಾಗದಲ್ಲಿ ಸ್ವಲ್ಪ ಹರಿದಿತ್ತು. ಕಾಗದದಲ್ಲಿ ತಲೆಬರಹ ದೊಡ್ಡದಾಗಿ ಮಲೆಗಳಲ್ಲಿ ಮಧುಮಗಳು ಎಂದು ಬರೆದಿತ್ತು. ಆ ಕಾಗದದ ತುಂಬ ಏನೇನೋ ಅತ್ತ ಇತ್ತ ಗೀರು, ಗೀರಿನ ಕೆಳಗೆ, ಮಧ್ಯೆ, ಪಕ್ಕ, ಕಾದಂಬರಿ ಪಾತ್ರಗಳ ಹೆಸರು, ಸಥಳಗಳ ಹೆಸರು, ಊರಿನ ಹೆಸರು, ಬಾಣದ ಗುರುತುಗಳು, ಅಡ್ಡಗೀರು, ಉದ್ದಗೀರು, ತ್ರಿಕೋಣಗೆರೆಗಳು ಹೀಗೆ ಎಲ್ಲಾ ಕಡೆ ಚಿತ್ತಾರವಾಗಿ ನೋಡಿದವರಿಗೆ ಏನೂ ಅರ್ಥವಾಗುತ್ತಿರಲಿಲ್ಲ!
ಅದನ್ನು ನೋಡಿದ ತಾರಿಣಿಯವರು ‘ಇದೇನಣ್ಣಾ ಈ ಮ್ಯಾಪ್ ಹೀಗಿದೆ? ನಾನು ಏನೋ ಬೇರೆಯೇ ತರವೇ ಊಹಿಸಿದ್ದೆ. ನನ್ನಿಂದ ಈ ಮ್ಯಾಪ್ ಹುಡುಕಲು ಆಗುತ್ತಿರಲಿಲ್ಲ’ ಎನ್ನುತ್ತಾರೆ.
‘ಮತ್ತಿನ್ನೇನು? ಭೂಗೋಳ ಮ್ಯಾಪ್ ಹಾಗೆ ಇದರಲ್ಲಿ ಚಿತ್ರ ಬರೆದಿರುವೆ ಎಂದು ತಿಳಿದೆಯಾ? ಇಡೀ ಕಾದಂಬರಿ ಹೇಗೆ ಚಿತ್ರಿತವಾಗುವುದು ಎಂದು ಸ್ಥೂಲವಾಗಿ ಗುರುತು ಹಾಕಿದ್ದೆ. ಸಿಕ್ಕಿದ್ದು ಒಳ್ಳೆಯದಾಯಿತು. ಮತ್ತೆ ಬರೆಯಲು ಪ್ರಾರಂಭಿಸುವೆ. ಅಂತೂ ಸಧ್ಯ ಬೇಗ ಸಿಕ್ಕಿತಲ್ಲಾ. ಮೂವತ್ತು ವರ್ಷಗಳ ಹಿಂದೆ ಬರೆದಿಟ್ಟಿದ್ದು. ಹಾಳಾಗದೇ ಉಳಿದದ್ದೇ ಆಶ್ಚರ್ಯ’ ಎನ್ನುತ್ತಾರೆ.
ಆ ಕಾದಂಬರಿ ಮ್ಯಾಪ್ ಸಿಗದಿದ್ದರೆ...!?
ಮಲೆಗಳಲ್ಲಿ ಮಧುಮಗಳು ಎಂಬ ಮಹಾ ಕಾದಂಬರಿ ಸೃಷ್ಟಿಯಾಗುತ್ತಿರಲೇ ಇಲ್ಲವೇನೋ! ಆದರೆ ಶ್ರೇಷ್ಠ ಸಾಹಿತ್ಯ ಕೃತಿಯೊಂದು ಜನ್ಮ ತಳೆಯುವುದು ಭುವನದ ಭಾಗ್ಯವಲ್ಲವೆ!
ತಾರಿಣಿಯವರ ಪುಸ್ತಕದಲ್ಲಿ ಈ ಘಟನೆಯನ್ನು ಓದಿದ ಮೇಲೆ, ಇಷ್ಟೊಂದು ಸಂಕೀರ್ಣ ಸಂರಚನೆಯುಳ್ಳ ಕಾದಂಬರಿ ಮೊದಲ ಬಾರಿಗೆ ಓದುಗನನ್ನು ಬೆಕ್ಕಸಬೆರಗುಗೊಳಿಸುವ ಈ ಕಾದಂಬರಿಯ ಬಗ್ಗೆ ನನಗೆ ಸಾಧ್ಯವಾದ ಹಾಗೆ ಓಮದು ಮ್ಯಾಪ್ ರಚಿಸಬೇಕೆಂದು ಕೊಂಡೆ, ವರ್ಷಗಳ ಹಿಂದೆಯೇ! ಆದರೆ ಅದನ್ನು ಮರು ಓದಿಗೆ ಒಳಪಡಿಸಿದ್ದು ತೀರಾ ಇತ್ತೀಚಿಗೆ. ಒಂದು ವಾರಗಳ ಕಾಲ ಓದುತ್ತಾ ವ್ಯಕ್ತಿನಾಮ, ಸ್ಥಳನಾಮ, ಪರಸ್ಪರ ಸಂಬಂಧಗಳನ್ನು ಗುರುತಿಸಿಕೊಳ್ಳುತ್ತಾ ಹೋದ ಹಾಗೆ ತೆರೆದುಕೊಂಡಿದ್ದೇ ಒಂದು ದೊಡ್ಡ ಪ್ರಪಂಚ!
ಒಂದು ಮಹಾ ಕಾದಂಬರಿ ಹೇಗೆ ಇರುತ್ತದೆ. ವರ್ತಮಾನದಲ್ಲಿದ್ದುಕೊಂಡೇ ಭೂತಕಾಲದಲ್ಲಿಯೂ ವಿಹರಿಸುತ್ತಾ ಭವಿಷ್ಯದತ್ತ ಸಾಗುವ ಅಚ್ಚರಿ! ಮೊದಲ ಸುಮಾರು ೨೦೦ ಪುಟಗಳ ಕಥೆ ಕೇವಲ ಒಂದು ದಿನದಲ್ಲಿ ನಡೆಯುವ ಘಟನೆಗಳು. ಇಡೀ ಕಾದಂಬರಿ ಸುಮಾರು ಒಂದು ಮಳೆಗಾಲ ಪ್ರಾರಂಭವಾಗಿ ಮುಗಿಯುವ ಮೊದಲೇ ಮುಗಿದು ಹೋಗುತ್ತದೆ. ಎಂಟನೂರಕ್ಕೂ ಅಧಿಕ ಪುಟಗಳಲ್ಲಿ ಕಾಲ ದೇಶಗಳನ್ನು ಮೀರಿ ನಡೆಯುವ ಘಟನೆಗಳು ಕಿಕ್ಕಿರಿದಿವೆ. ನೂರಾರು ಪ್ರಾಣಿ ಪಕ್ಷಿಗಳ ಹೆಸರುಗಳು ದಟ್ಟೈಸಿವೆ. ಮರಗಿಡಗಳ ಪ್ರಸ್ತಾಪವಾಗುತ್ತದೆ. ಮೇಲಿನವುಗಳಲ್ಲದೆ ಅಸಂಖ್ಯಾತ ಅನಾಮಿಕ ಪಾತ್ರಗಳು, ಜಾಗಗಳು ಪ್ರಸ್ತಾಪವಾಗುತ್ತವೆ. ಇಷ್ಟೊಂದು ಪಾತ್ರಗಳು ಅವುಗಳ ಮನೋಭಾವ, ಕಾರ್ಯವಿಧಾನ, ವೃತ್ತಿ, ಸಂಬಂಧಗಳು ಎಲ್ಲವನ್ನೂ ಕವಿ ನಿಭಾಯಿಸಿರುವುದು ಅದ್ಭುತ!
ಎಲ್ಲಿಯಾದರೂ ಸರಿ, ಹೇಗಾದರೂ ಸರಿ ಒಂದಿಷ್ಟೂ ಗೊಂದಲ ಕಾದಂಬರಿಕಾರನಿಗೆ ಬಂದಿರಬಹುದಲ್ಲ ಎನ್ನುವ ಸಹಜ(ಕೆಟ್ಟ)ಕುತೂಹಲ ಉತ್ತರವಾಗಿ ಸಿಕ್ಕಿದ್ದು ಎರಡು ಸನ್ನಿವೇಶಗಳು. ಅದರಲ್ಲು ಒಂದು ಸನ್ನಿವೇಶ ಕಾದಂಬರಿಕಾರನ ಉದ್ದೇಶಪೂರ್ವಕ ನಡೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮತ್ತೊಂದು ಇಬ್ಬರು ವ್ಯಕ್ತಿಗಳ ಹೆಸರು ಮತ್ತು ವೃತ್ತಿಯ ಅದಲು ಬದಲು ಅಷ್ಟೆ!
ಈ ಕೆಳಗೆ ನಾನು ಪಟ್ಟಿ ಮಾಡಿರುವ ಸ್ಥಳಗಳು, ಪಾತ್ರಗಳು, ಅವುಗಳ ಪರಸ್ಪರ ಸಂಬಂಧಗಳನ್ನು ಗಮನಿಸಿದರೆ ಮಹಾಕಾದಂಬರಿಯೊಂದರ ಅರಹು ಹೇಗಿರುತ್ತದೆ ಹಾಗೂ ಹೇಗಿರಬೇಕು ಎಂದು ತಿಳಿಯುತ್ತದೆ. ಮಲೆಗಳಲ್ಲಿ ಮಧುಮಗಳು ಓದುವುದಕ್ಕೆ ಪೂರ್ವಭಾವಿಯಾಗಿ ಈ ಸಿದ್ಧಟಿಪ್ಪಣಿ ಒಳ್ಳೆಯ ಪ್ರವೇಶವಾಗಬಹುದು.
ಕಾದಂಬರಿಯ ಬಿಚ್ಚಿಕೊಳ್ಳುವ ಪ್ರಮುಖ ಸ್ಥಳಗಳು- ಸಿಂಬಾವಿ (ಭರಮೈ ಹೆಗ್ಗಡೆಯ ಮನೆ)
- ಸೀತೂರುಗುಡ್ಡ (ಸಿಂಬಾವಿ-ಲಕ್ಕೂಂದದ ನಡುವಿನ ಒಂದು ಗುಡ್ಡ)
- ಲಕ್ಕುಂದ (ಹಳೇಪೈಕದವರ ಹಟ್ಟಿ. ಸಿಂಬಾವಿಯಿಂದ ಮೂರ‍್ನಾಲ್ಕು ಮೈಲಿ)
- ಮೇಗರವಳ್ಳಿ (ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿನ ಊರು. ಲಕ್ಕುಂದದಿಂದ ಎರಡು ಮೈಲಿ)
- ಬೆತ್ತದಸರ
- ಹುಲಿಕಲ್ಲು
- ಹಳೆಮನೆ (ಸುಬ್ಬಣ್ಣ ಹೆಗ್ಗಡೆಯವರ ಮನೆ. ಮೇಗರವಳ್ಳಿಯಿಂದ ಒಂದು ಹರಿದಾರಿ)
- ಅರೆಕಲ್ಲು (ಹಳೆಮನೆಯಿಂದ ಬೆಟ್ಟಳ್ಳಿಗೆ ಹೋಗುವ ದಾರಿಯಲ್ಲಿ ಬೆಟ್ಟಳ್ಳಿಯ ಹೊಲಗೇರಿಗೆ ದಾರಿ ಕವಲೊಡೆಯುವ ಜಾಗ)
- ಬೆಟ್ಟಳ್ಳಿ (ಕಲ್ಲಯ್ಯಗೌಡರ ಮನೆ)
- ಬೆಟ್ಟಳ್ಳಿ ಹಕ್ಕಲು (ಬಿಸೇಕಲ್ ಸವಾರಿ ನಡೆದ ಜಾಗ)
- ಬೆಟ್ಟಳ್ಳಿ ಹೊಲಗೇರಿ
- ಅರೆಕಲ್ಲು ಕಾರೇಮೆಟ್ಟು (ಬೆಟ್ಟಳ್ಳಿ ಹೊಲಗೇರಿಯ ಹತ್ತಿರದ್ದು. ಗುತ್ತಿ ತಿಮ್ಮಿಗಾಗಿ ಕಾಯುತ್ತಾ ಕುಳಿತಿದ್ದ ಜಾಗ)
- ಕಮ್ಮಾರಸಾಲೆ (ಕೋಣೂರಿಗೂ ಬೆಟ್ಟಳ್ಳಿಗೂ ಮಧ್ಯೆ, ಮೇಗರವಳ್ಳಿ ಹೂವಳ್ಳಿ ಹಳೆಮನೆಗಳಿಗೂ ಸಮದೂರದಲ್ಲಿದ್ದ ಜಾಗ. ಕಳ್ಳಂಗಡಿ, ಮೂರ‍್ನಾಲ್ಕು ಜೋಪಡಿಗಳಿದ್ದ ಜಾಗ)
- ಕೋಣೂರು (ರಂಗಪ್ಪಗೌಡರ ಮನೆ)
- ಭೂತದವನ (ಕೋಣುರು ಮನೆಗೆ ಸೇರಿದ್ದು)
- ಹಾಡ್ಯದ ಮಾರಮ್ಮನ ಗುಡಿ
- ಹಳೆಪೈಕದ ಯೆಂಕಿಯ ಮನೆ
- ಹೂವಳ್ಳಿ (ವೆಂಕಟಣ್ಣ ನಾಯಕರ ಮನೆ)
ಗುತ್ತಿ ಯಾ ನಾಯಿಗುತ್ತಿ ಈ ಕಾದಂಬರಿಯ ಪ್ರಮುಖ ಪಾತ್ರ ಹಾಗೂ ಚಲನಶೀಲತೆಯ ಪ್ರತೀಕ. ಈಡೀ ಕಾದಂಬರಿಯಲ್ಲಿ ಪ್ರಸ್ತಾಪವಾಗುವ ಬಹುತೇಕ ಸ್ಥಳಗಳಿಗೆ ಈ ಪಾತ್ರ ಭೇಟಿಕೊಡುತ್ತದೆ. ಅದು ಕೇವಲ ಬೇಟಿಯಲ್ಲ! ಆ ಬೇಟಿ ಕಾದಂಬರಿಯ ಮುಂದಿನ ಓಟಕ್ಕೆ ತೆರೆದುಕೊಳ್ಳಲು ಕಾರ್ಯಕಾರಣ ಸಂಬಂಧವನ್ನು ಸೃಷ್ಟಿಸುತ್ತದೆ. ವಿವಾದಗಳನ್ನೇ ಹುಟ್ಟು ಹಾಕುತ್ತದೆ. ಕೆಲವೊಮ್ಮೆ ಶಾಂತಿ ನೆಮ್ಮದಿಗೆ ಕಾರಣವಾಗುತ್ತದೆ. ಆರಂಭದಿಂದ ಕೊನೆಯವರೆಗೆ, ಸಿಂಭಾವಿಯಿಂದ ಕಾನೂರು ಚಂದ್ರಯ್ಯಗೌಡರ (ಕಾನೂರು ಹೆಗ್ಗಡತಿ ಕಾದಂಬರಿಯ ಪ್ರಮುಖ ಪಾತ್ರ) ಆಶ್ರಯಕ್ಕೆ ಬರುವವರೆಗೆ ಆ ಪಾತ್ರದ ಪ್ರಯಾಣವನ್ನು ಗಮನಿಸಿ.
- ಸಿಂಬಾವಿ
- ಸೀತೂರುಗುಡ್ಡ
- ಲಕ್ಕುಂದ
- ಮೇಗರವಳ್ಳಿ
- ಬೆತ್ತದಸರ
- ಹುಲಿಕಲ್ಲು
- ಹಳೆಮನೆ
- ಅರೆಕಲ್ಲು
- ಬೆಟ್ಟಳ್ಳಿ
- ಬೆಟ್ಟಳ್ಳಿ ಹಕ್ಕಲು
- ಬೆಟ್ಟಳ್ಳಿ ಹೊಲಗೇರಿ
- ಅರೆಕಲ್ಲು ಕಾರೇಮೆಟ್ಟು
- ಕಮ್ಮಾರಸಾಲೆ
- ಕೋಣೂರು ದಾರಿ
- ಹುಲಿಕಲ್ಲು
- ಬೆತ್ತದ ಸರ
- ಲಕ್ಕುಂದ
- ಸೀತೂರುಗುಡ್ಡ
- ಸಿಂಬಾವಿ ಹೊಲಗೇರಿ
- ಸಿಂಬಾವಿ
- ಮೇಗರವಳ್ಳಿ ತೀರ್ಥಹಳ್ಳಿ ರಸ್ತೆ
- ಕಾಗಿನಹಳ್ಳಿ
- ಹಳೆಮನೆ ಸ್ಮಶಾಣ
- ಹಳೆಮನೆ ಹೊಲಗೇರಿ
- ಹಳೆಮನೆ ಶಂಕರ ಹಗ್ಗಡೆ ಮನೆ
- ಹುಲಿಕಲ್ಲು
- ಕೋಣುರು ಮನೆ
- ಕೋಣುರು ಐತನ ಬಿಡಾರ
- ಹುಲಿಕಲ್ಲು
- ಹೂವಳ್ಳಿ ಮನೆಯ ಹತ್ತಿರದವರೆಗೆ
- ಹುಲಿಕಲ್ಲು
- ತೀರ್ಥಹಳ್ಳಿ
- ತುಂಗಾನದಿ ದೋಣಿ ಗಿಂಡಿ
- ಕಾನೂರು
2 comments:
ತುಂಬಾ ಚೆನ್ನಾಗಿ ಬರೆದಿದ್ದಿರಾ
ಕಾದಂಬರಿ ಓದಲೇಬೇಕು
ಎಷ್ಟೋ ವಿಷಯಗಳನ್ನು ತಿಳಿಸಿದ್ದಿರಿ
ಥ್ಯಾಂಕ್ಸ್
"ಬಹುಶಃ ನಿನ್ನ ಕ್ಲಾಸ್ ಎಕ್ಸಾಮಿಗೆ ನೀನು ಹೀಗೆ ಓದಿದ್ದರೆ ನೀನೆಲ್ಲೋ ಇರುತ್ತಿದ್ದೆ ನೋಡು" ....ಎಂದು ನನ್ನವರು ನಾನು "ಮಲೆಗಳಲ್ಲಿ ಮದುಮಗಳು " ಓದುತ್ತಿದ್ದಾಗ ಅಣಕಿಸುತ್ತಿದ್ದರು . ಸ್ವಲ್ಪ ಸಮಯ ಸಿಕ್ಕಿದರೂ ಕಾದಂಬರಿ ಕೈಯಲ್ಲಿ ಪ್ರತ್ಯಕ್ಷವಾಗುತ್ತಿತ್ತು .
ನಿಮ್ಮ ಈ ಪೂರ್ವಸಿದ್ಧತೆಯ ಬಗ್ಗೆ ಓದಿ ನನಗೆ ಮತ್ತೊಮ್ಮೆ ಕಾದಂಬರಿಯನ್ನು ಓದೆಬೇಕೆನಿಸುತ್ತಿದೆ.
Post a Comment