Monday, August 02, 2010

ಕಿನ್ನರಿ ಬ್ರಹ್ಮಯ್ಯ

ಇಂದಿನ ಆಂಧ್ರಪ್ರದೇಶದ ಪೂದೂರು ಎಂಟನೂರೈವತ್ತು ವರ್ಷಗಳ ಹಿಂದೆ ಕಲ್ಯಾಣದ ಚಾಲುಕ್ಯರ ಆಡಳಿತದಲ್ಲಿತ್ತು. ನಂತರ ಕಲಚೂರಿ ಬಿಜ್ಜಳನ ಆಡಳಿತಕ್ಕೆ ಹೋಯಿತು. ಆಗ ಪೊಡೂರು ಎಂದು ಕರೆಯಲಾಗುತ್ತಿತ್ತು. ಆ ಊರಿನಲ್ಲಿದ್ದ ಅಕ್ಕಸಾಲಿಗ ಕುಟುಂಬವೊಂದರಲ್ಲಿ ಬ್ರಹ್ಮಯ್ಯ ಎಂಬ ಶಿವಭಕ್ತನೊಬ್ಬನಿದ್ದನು. ಅವನು ತನಗೆ ವಂಶಪಾರಂಪರ್ಯವಾಗಿ ಬಂದಿದ್ದ ವೃತ್ತಿಯ ಜೊತೆಗೆ ಕಿನ್ನರಿ ನುಡಿಸುವುದನ್ನೂ ಕಲಿತಿದ್ದನು. ಆತನಿಗೆ ಕಿನ್ನರಿ ನುಡಿಸುವುದನ್ನು ಕಲಿಸಿದ ಗುರುವೊಬ್ಬರಿಗೆ ಒಂದಷ್ಟು ಆಭರಣ ಮಾಡಿಕೊಡುವ ಅವಕಾಶ ಅವನಿಗೆ ಬರುತ್ತದೆ. ಗುರುವಿನ ಕೆಲಸ ಎಂಬ ತುಂಬು ಅಭಿಮಾನದಿಂದ ಆಭರಣ ತಯಾರು ಮಾಡಿದ ಬ್ರಹ್ಮಯ್ಯ ಅದನ್ನು ಗುರುವಿಗೆ ಒಪ್ಪಿಸಲು ಬರುತ್ತಾನೆ. ಆತ ಕೊಟ್ಟ ಆಭರಣಗಳ ಸೊಗಸನ್ನು ಸವಿಯುತ್ತ ಗುರುಗಳು ಅದನ್ನು ಸ್ವೀಕರಿಸುತ್ತಾರೆ. ಆಗ ಗುರುವಿನ ಮನೆಯಲ್ಲಿದ್ದವರೊಬ್ಬರು ‘ಏನು ಗುರುಗಳೆ, ಚಿನ್ನವನ್ನು ತೂಕ ಹಾಕಿಯೇ ತೆಗೆದುಕೊಳ್ಳಬೇಕು. ಹೊಳೆಗೆ ಹಾಕಿದರೂ ಅಳೆದು ಹಾಕು ಎಂಬ ಗಾದೆಯನ್ನು ನೀವು ಕೇಳಿಲ್ಲವೆ? ಅಕ್ಕಸಾಲಿಗರು ಸ್ವತಃ ಅಕ್ಕನ ಚಿನ್ನದಲ್ಲಿಯೂ ಕತ್ತರಿಸದೆ ಬಿಡರು ಎಂಬ ಮಾತಿದೆ. ನೀವು ತೂಕ ಹಾಕಿಸಿ ತೆಗೆದುಕೊಳ್ಳಿ’ ಎಂದರು. ಆಗ ಗುರುಗಳು ‘ನನ್ನ ಶಿಷ್ಯನ ಬಗ್ಗೆ ನನಗೆ ನಂಬಿಕೆಯಿದೆ’ ಎಂದರು. ಆದರೆ ತನ್ನ ಗುರುಭಕ್ತಿಯನ್ನೇ ಅವಮಾನಕ್ಕೆ ಎಡೆಮಾಡಿದ ಹಾಗೂ ತನ್ನ ವೃತ್ತಿಯನ್ನು ಅವಮಾನಿಸಿದ ಆ ವ್ಯಕ್ತಿಯನ್ನು ಕುರಿತು ಬ್ರಹ್ಮಯ್ಯ ‘ನಾನು ವಡವೆಯನ್ನು ತೂಕ ಹಾಕಿಯೇ ಕೊಡುತ್ತೇನೆ’ ಎಂದು ಗುರುಗಳು ತಡೆಯುತ್ತಿದ್ದರೂ ತೂಕಕ್ಕೆ ಹಾಕುತ್ತಾನೆ. ಅದರಲ್ಲಿ ಒಂದು ಸಾಸಿವೆ ಕಾಳಿನಷ್ಟು ತೂಕದ ಚಿನ್ನ ಕಡಿಮೆ ಇರುತ್ತದೆ. ಗುರುಗಳ ಮನೆಯಲ್ಲಿದ್ದ ಆಗುಂತಕ ತನ್ನ ಪ್ರೌಢಿಮೆಗೆ ತಾನೇ ಬೀಗುತ್ತಾ ‘ನಾನು ಹೇಳಲಿಲ್ಲವೇ ಗುರುಗಳೆ’ ಎಂದು ವ್ಯಂಗ್ಯದ ನಗೆ ನಗುತ್ತಾನೆ. ಗುರುಗಳು ‘ಸೂಕ್ಷ್ಮ ಕೆಲಸ ಮಾಡುವಾಗ ಒಂದಷ್ಟು ಹೆಚ್ಚು ಕಡಿಮೆ ಆಗುತ್ತದೆ’ ಎಂದು ಸಮಾಧಾನದ ಮಾತನ್ನಾಡುತ್ತಾರೆ. ಆದರೆ ಬ್ರಹ್ಮಯ್ಯನಿಗೆ ಕೋಪ, ನಾಚಿಕೆ, ದುಃಖ ಎಲ್ಲವೂ ಆಗುತ್ತದೆ. ತಕ್ಷಣ ಗುರುವಿನ ಪಾದಗಳನ್ನು ಹಿಡಿದು ಕ್ಷಮೆ ಕೋರುತ್ತಾ ‘ಇನ್ನೆಂದು ನಾನು ಅಕ್ಕಸಾಲಿಗ ವೃತ್ತಿಯನ್ನು ಮಾಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡುತ್ತಾನೆ.


ಅಕ್ಕಸಾಲಿಗ ವೃತ್ತಿಯನ್ನು ತ್ಯಜಿಸಿದ ಬ್ರಹ್ಮಯ್ಯ ಮುಂಗಾಣದೆ ಕುಳಿತಿದ್ದಾಗ, ಕಲ್ಯಾಣದಲ್ಲಿ ನಡೆಯುತ್ತಿದ್ದ ಬಸವಣ್ಣನ ನೇತೃತ್ವದ ಕಾಯಕ ಚಳುವಳಿ ಗಮನ ಸೆಳೆಯುತ್ತದೆ. ಒಂದೇ ಮನದಿಂದ ಶಿವನನ್ನು ಸ್ತುತಿಸುತ್ತಾ ಕಲ್ಯಾಣದ ದಾರಿ ಹಿಡಿಯುತ್ತಾನೆ. ಅಲ್ಲಿನ ತ್ರಿಪುರಾಂತಕೇಶ್ವರ ದೇವಾಲಯದ ಮುಂದೆ ಕಿನ್ನರಿ ನುಡಿಸುವ ಕಾಯಕ ನಡೆಸುತ್ತಾ ಜೀವನ ಸಾಗಿಸುತ್ತಾನೆ. ಆತನ ಕಿನ್ನರಿಯ ನಾದವನ್ನು ಕೇಳಿದ ಜನತೆ ಪ್ರಸನ್ನರಾಗಿ ನೀಡುತ್ತಿದ್ದ ಹಣವನ್ನು ಸಂಗ್ರಹಿಸಿ ನಿತ್ಯ ಅನ್ನದಾಸೋಹ ನಡೆಸುತ್ತಾನೆ. ಜನ ಅವನನ್ನು ಪ್ರೀತಿಯಿಂದ ಕಿನ್ನರಿ ಬೊಮ್ಮಯ್ಯ ಎಂದು ಕರೆಯುತ್ತಾರೆ. ಇವನ ಜಂಗಮದಾಸೋಹ ಬಸವಣ್ಣ ಕಿವಿಗೂ ಮುಟ್ಟುತ್ತದೆ. ಅಂತಹ ನಿಷ್ಠ ಭಕ್ತರ ಅಗತ್ಯವಿದ್ದ ಬಸವಣ್ಣ ಆತನನ್ನು ಮಹಾಮನೆಗೆ ಕರೆದುಕೊಂಡು ಹೋಗಿ ಅಲ್ಲಿನವರಿಗೆ ಪರಿಚಯಿಸಿ ಆತನನ್ನು ಅವರೊಳಗೊಬ್ಬನನ್ನಾಗಿಸಿಕೊಳ್ಳುತ್ತಾನೆ.

ಒಮ್ಮೆ ಮಹಾಮನೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಸವಣ್ಣ ಈರುಳ್ಳಿಯು ತಾಮಸ ಗುಣವನ್ನು ಪ್ರಚೋದಿಸುವುದೆಂದು ವಾದಿಸಿ, ಈರುಳ್ಳಿಯ ಸೇವನೆಯನ್ನು ತ್ಯಜಿಸಬೇಕೆಂದು ಕರೆಕೊಡುತ್ತಾನೆ. ಜನಸಾಮಾನ್ಯರ ಆಹಾರವಾದ ಈರುಳ್ಳಿಯನ್ನು ಬಸವಣ್ಣ ನಿಂದಿಸಿದ್ದನ್ನು ತಡೆಯದ ಬ್ರಹ್ಮಯ್ಯ ಅದನ್ನು ವಿರೋಧಿಸಿ ಮಹಾಮನೆಯಿಂದ ಹೊರಟು ಹೋಗುತ್ತಾನೆ. ಹಾಗೆ ಬ್ರಹ್ಮಯ್ಯ ವಿರೋಧಿಸಿದ್ದೇಕೆಂದು ಚಿಂತಿಸಿದ ಬಸವಣ್ಣನಿಗೆ ತನ್ನ ಸಂಸ್ಕಾರದ ಬಗ್ಗೆ ತಾನೇ ನಾಚಿಕೆಪಟ್ಟುಕೊಳ್ಳುತ್ತಾನೆ. ಜನಸಾಮಾನ್ಯರೆಲ್ಲಾ ಈರುಳ್ಳಿಯನ್ನು ನಿತ್ಯಸೇವನೆ ಮಾಡುತ್ತಿದ್ದರೂ ಅವರೆಲ್ಲರೂ ತಾಮಸಗುಣದಿಂದ ಪೀಡಿತರಾಗಿಲ್ಲ ಎಂಬ ಸತ್ಯ ಬಸವಣ್ಣನಿಗೆ ಹೊಳೆಯುತ್ತದೆ. ತಕ್ಷಣ ಬ್ರಹ್ಮಯ್ಯನ ಮನೆಗೆ ಹೋಗಿ ತನ್ನ ದುಡುಕಿಗೆ ಕ್ಷಮೆಯಾಚಿಸಿದ್ದಲ್ಲದೆ, ಮತ್ತೆ ಬ್ರಹ್ಮಯ್ಯನನ್ನು ಮಹಾಮನೆಗೆ ಕರೆದುಕೊಂಡು ಬರುತ್ತಾನೆ. ಅಷ್ಟಕ್ಕೆ ಸಮಾಧಾನ ಹೊಂದದ ಬಸವಣ್ಣ ಈರುಳ್ಳಿಯನ್ನು ಊರಿನಲ್ಲೆಲ್ಲಾ ಮೆರವಣಿಗೆ ಮಾಡಿಸಿ, ಜನಸಾಮಾನ್ಯರ ಆಹಾರವಾದ ಅದಕ್ಕೆ ಸಿಗಬೇಕಾದ ಮನ್ನಣೆ ದೊರೆಯುವಂತೆ ಮಾಡುತ್ತಾನೆ.

ತನ್ನಿಷ್ಟದ ಕಿನ್ನರಿ ಕಾಯಕ, ತನ್ನಿಷ್ಟದೈವದ ಪೂಜೆ, ತಾನು ನಡೆಸುತ್ತಿರುವ ಜಂಗಮದಾಸೋಹ ಇವುಗಳೆಲ್ಲದರ ಜೊತೆಗೆ ಬಸವಾದಿಗಳ ಸಹವಾಸ ಇದರಿಂದ ಕಿನ್ನರಿ ಬೊಮ್ಮಯ್ಯನಿಗೆ ತನ್ನ ಬಗ್ಗೆ ತನಗೇ ಅಭಿಮಾನ. ಒಂದು ರೀತಿಯ ಅಹಂಕಾರ ಆಗಾಗ ಮನಸ್ಸಿನಲ್ಲಿ ಮೂಡುತ್ತಿರುತ್ತದೆ. ಒಮ್ಮೆ ಕಲಕೇತಯ್ಯ ಎಂಬ ಕಿಳ್ಳೆಕ್ಯಾತ ಜನಾಂಗದ ಅಲೆಮಾರಿ ಜಾನಪದ ಕಲಾವಿದನೊಬ್ಬನು ನಡೆಸುತ್ತಿದ್ದ ದಾನದ ಎದುರಿಗೆ ತನ್ನದೇನೂ ಅಲ್ಲ ಎಂಬ ಅರಿವು ಕಿನ್ನರಯ್ಯನಿಗೆ ಉಂಟಾಗುತ್ತದೆ. ಆ ಕಥೆ ಹೀಗಿದೆ. ಒಂದು ದಿನ ಬಡವನೊಬ್ಬನು ಕಿನ್ನರಯ್ಯ ನಿತ್ಯಪಡಿಕೊಡುವನೆಂದು ತಿಳಿದು ಅದಕ್ಕಾಗಿ ಅವನಲ್ಲಿಗೆ ಹೊರಟಿರುತ್ತಾನೆ. ದಾರಿಯಲ್ಲಿ ಸಿಕ್ಕ ಕೇತಯ್ಯನು ಆ ಬಡವನ ಕಷ್ಟವೇನೆಂದು ತಿಳಿದುಕೊಂಡು, ಅಂದು ತಾನು ಗಳಿಸಿದ್ದೆಲ್ಲವನ್ನೂ, ತನಗೂ ಒಂದಷ್ಟು ಇಟ್ಟುಕೊಳ್ಳದೆ ಆ ಬಡವನಿಗೆ ದಾನ ಮಾಡಿಬಿಡುತ್ತಾನೆ. ಆತ ಕೊಟ್ಟಿದ್ದೆಲ್ಲವನ್ನೂ ಆ ಬಡವ ಹೊರಲಾರದೆ ತನ್ನಿಂದ ಆದಷ್ಟನ್ನು ಹೊತ್ತುಕೊಂಡು ದಾರಿಯಲ್ಲಿ ಬರುವಾಗ ಬಸವಣ್ಣ ಮತ್ತು ಕಿನ್ನರಯ್ಯ ಅವರನ್ನು ಬೇಟಿ ಮಾಡಿ ಕೇತಯ್ಯನ ದಾನಗುಣವನ್ನು ಪ್ರಶಂಸಿಸುತ್ತಾನೆ. ಬಸವ ಬೇರೊಬ್ಬ ಆಳನ್ನು ಕಳುಹಿಸಿ ಉಳಿದ ಹೊನ್ನನ್ನು ಆ ಬಡವನ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾನೆ. ಬಸವಣ್ಣ ಕಿನ್ನರಯ್ಯನಲ್ಲಿ ಕೇತಯ್ಯನ ನಿಸ್ಸಂಗ್ರಹಬುದ್ದಿಯನ್ನು ಕೊಂಡಾಡುತ್ತಾನೆ. ಅದನ್ನು ಕೇಳಿದ ಕಿನ್ನರಯ್ಯ ‘ಅಯ್ಯೋ ನಾನು ಕೊಡುವ ಪಡಿಯೇ ದೊಡ್ಡದೆಂದು ನಾನೆಂದುಕೊಂಡಿದ್ದೆ. ಆದರೆ ಇಲ್ಲಿ ನನಗೊಬ್ಬ ಗುರುವಿದ್ದಾನೆ’ ಎಂದುಕೊಂಡು ಕೇತಯ್ಯನಲ್ಲಿಗೆ ಬಂದು ಅವನನ್ನು ಸ್ತುತಿಸುತ್ತಾನೆ.

ಮಹಾವಿರಾಗಿನಿಯಾದ ಅಕ್ಕಮಹಾದೇವಿಯು ಮಹಾಮನೆಗೆ ಬಂದಾಗ ಅವಳನ್ನು ಪರೀಕ್ಷಿಸುವ ಸಂದರ್ಭ. ಮಹಾಮನೆಯ ಬಾಗಿಲಿನಲ್ಲೇ ಅಕ್ಕಮಹಾದೇವಿಯನ್ನು ಕಿನ್ನರಿ ಬೊಮ್ಮಯ್ಯ ನಿಲ್ಲಿಸಿ ಅವಳ ವೈರಾಗ್ಯವನ್ನು ಒರೆಗಲ್ಲಿಗೆ ಅಚ್ಚುತ್ತಾನೆ. ಅವಳ ಮೈಮನಸ್ಸೆಲ್ಲವೂ ವೈರಾಗ್ಯವೇ ಆಗಿತ್ತು ಎಂಬುದನ್ನು ಮನಗಂಡ ಕಿನ್ನರಯ್ಯ ತನ್ನ ಅಲ್ಪತನಕ್ಕೆ ಪಶ್ಚತ್ತಾಪ ಪಡುತ್ತಾನೆ. ಸ್ವತಃ ಅಕ್ಕಮಹಾದೇವಿಯು ಆತನನ್ನು ಸಹೋದರ ಎಂದು ಕರೆದು ಸಮಾಧಾನಿಸುತ್ತಾಳೆ. ಕಿನ್ನರಯ್ಯ ತನ್ನೊಂದು ವಚನದಲ್ಲಿ ಆಕೆಯನ್ನು ಹುಲಿಗೆ ಹೋಲಿಸುತ್ತಾ, ‘ನಾನು ಹುಲಿಯ ನೆಕ್ಕಿ ಬದುಕಿದೆನು’ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಅಷ್ಟಲ್ಲದೆ ತನ್ನೊಂದು ವಚನದಲ್ಲಿ ಅಕ್ಕಮಹಾದೇವಿಯನ್ನು ಪರೀಕ್ಷಿಸುವಾಗಿನ ತನ್ನ ಅನುಭವವನ್ನು ಹೇಳಿಕೊಳ್ಳುತ್ತಾ ‘ತ್ರಿಪುರಾಂತಕದೇವಾ ಮಹಾದೇವಿಯಕ್ಕನ ನಿಲುವನ್ನರಿಯದೆ ಅಳುಪಿ ಕೆಟ್ಟೆನು’ ಎಂದು ಆಲಾಪಿಸಿದ್ದಾನೆ.

‘ಶರಣಲೀಲಾಮೃತ’ ಮತ್ತು ‘ಚೆನ್ನಬಸವಪುರಾಣ’ ಇವುಗಳಲ್ಲಿ ಕಿನ್ನರಿ ಬೊಮ್ಮಯ್ಯನ ಬಗ್ಗೆ ಪವಾಡದ ಒಂದು ಕತೆ ಬಂದಿದೆ. ಒಮ್ಮೆ ನಗರದ ಸೂಳೆಯೊಬ್ಬಳಿಗೆ, ಅವಳ ವಿಟಪುರುಷನೊಬ್ಬನು ಕಾಣಿಕೆಯಾಗಿ ಕೊಡಲು ಕೊಬ್ಬಿದ ಕುರಿಯನ್ನು ಕೊಂಡೊಯ್ಯುತ್ತಿರುತ್ತಾನೆ. ಅದು ಅವನಿಂದ ತಪ್ಪಿಸಿಕೊಂಡು ತ್ರಿಪುರಾಂತಕೇಶ್ವರ ದೇಗುಲದ ಗರ್ಭಗುಡಿಯನ್ನು ಹೊಕ್ಕುಬಿಡುತ್ತದೆ. ದೇವಾಲಯದ ಮುಂದೆ ಕಿನ್ನರಿ ಕಾಯಕವ ನಡೆಸುತ್ತಿದ್ದ ಬೊಮ್ಮಯ್ಯ ಅದನ್ನು ನೋಡುತ್ತಾನೆ. ಆ ಟಗರನ್ನು ಎಳೆದೊಯ್ಯಲು ಬಂದ ವಿಟಪುರುಷನಿಗೆ ಆ ದಿನದ ತನ್ನ ಗಳಿಕೆಯಲ್ಲವನ್ನೂ ಕೊಟ್ಟು ಟಗರನ್ನು ಬಿಟ್ಟು ಬಿಡುವಂತೆ ಬೇಡಿಕೊಳ್ಳುತ್ತಾನೆ. ಆ ವಿಟಪುರುಷನಿಗೋ ತನ್ನ ಸೂಳೆಯ ಮುಂದೆ, ಕಿನ್ನರಯ್ಯ ಕೊಡುವ ಒಂದಷ್ಟು ಹೊನ್ನು ಆಕರ್ಷಕವಾಗಿ ಕಾಣುವುದೇ ಇಲ್ಲ. ಆತನ ಕೋರಿಕೆಯನ್ನು ತಿರಸ್ಕರಿಸಿ ಟಗರನ್ನು ಎಳೆದೊಯ್ಯುತ್ತಿದ್ದ ಆತನನ್ನು ಕಿನ್ನರಯ್ಯ ತನ್ನ ಕಿನ್ನರಿಯಿಂದ ಹೊಡೆಯುತ್ತಾನೆ. ಅಷ್ಟಕ್ಕೇ ಆತ ಸತ್ತು ಹೋಗುತ್ತಾನೆ. ಈ ಘಟನೆ ಬಿಜ್ಜಳನವರೆಗೂ ಹೋಗುತ್ತದೆ. ಕಿನ್ನರಯ್ಯ ವಿಟಪುರುಷನನ್ನು ಕೊಂದಿದ್ದು ತಪ್ಪು ಎಂಬುದು ಬಿಜ್ಜಳನ ಆಕ್ಷೇಪ. ಆದರೆ ತನ್ನದೇನು ತಪ್ಪಿಲ್ಲ ಎಂದು ವಾದಿಸುವ ಕಿನ್ನರಯ್ಯ ಬೇಕಾದರೆ ಶಿವನಿಂದ ಸಾಕ್ಷಿ ಹೇಳಿಸುತ್ತೇನೆ ಎಂದು ಬಿಜ್ಜಳನಿಗೆ ಸವಾಲೆಸೆಯುತ್ತಾನೆ. ಎಲ್ಲರೂ ತ್ರಿಪುರಾಂತಕೇಶ್ವರ ಗುಡಿಯ ಬಳಿ ಬರುತ್ತಾರೆ. ಗರ್ಭಗುಡಿಯ ಬಾಗಿಲ ತೆಗೆಸಿ ಕಿನ್ನರಯ್ಯ ಶಿವನನ್ನು ಪ್ರಾರ್ಥಿಸುತ್ತಾನೆ. ಶಿವನೇ ಸಾಕ್ಷಿ ನುಡಿದಿದ್ದರಿಂದ ಬಿಜ್ಜಳ ಸುಮ್ಮನಾಗಬೇಕಾಗುತ್ತದೆ. ಸತ್ತು ಹೋಗಿದ್ದ ವಿಟಪುರುಷನೂ ಬದುಕುತ್ತಾನೆ. ಟಗರೂ ಬದುಕುತ್ತದೆ.

ಬಿಜ್ಜಳನ ಕೊಲೆಯಾಗಿ ಶಿವಶರಣರೆಲ್ಲಾ ಕಲ್ಯಾಣವನ್ನು ತೊರೆಯುವಾಗ, ದಂಡಿನ ದಳಪತಿಯಾಗಿದ್ದ ಚೆನ್ನಬಸವಣ್ಣನು ಅದರ ಉಸ್ತುವಾರಿಯನ್ನು ಕಿನ್ನರಿ ಬೊಮ್ಮಯ್ಯನಿಗೆ ವಹಿಸಿಕೊಡುತ್ತಾನೆ. ದಂಡಿನ ದಳಪತಿಯಾಗಿ ಹೋರಾಟವನ್ನು ಮುಂದುವರೆಸಿದ ಕಿನ್ನರಯ್ಯ, ಉಳವಿಯ ಮಹಾಮನೆಯ ಮುಂದಿನ ನದಿಯ ದಿಕ್ಕನ್ನು ತನ್ನ ದಂಡಿನ ನೆರವಿನಿಂದ ಬದಲಾಯಿಸುತ್ತಾನೆ. ಅದರ ಪರಿಣಾಮವಾಗಿ ಶತ್ರು ಸೇನೆ ಅಪಾರ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ನಂತರ ಉಳವಿಯಲ್ಲೇ ಕೊನೆಯುಸಿರೆಳೆದ ಕಿನ್ನರಯ್ಯ ಸಮಾಧಿ ಈಗಲೂ ಉಳವಿಯಲ್ಲಿದೆ. ಆತ ತಿರುಗಿಸಿದ ಹೊಳೆಗೆ ಕಿನ್ನರಿ ಬೊಮ್ಮಯ್ಯನ ಹೊಳೆ ಎಂದೇ ಹೆಸರಾಗಿದೆ.

ಕಿನ್ನರ ಬೊಮ್ಮಯ್ಯನು ತನ್ನಿಷ್ಟದೈವವಾದ ‘ಮಹಾಲಿಂಗ ತ್ರಿಪುರಾಂತಕ’ನ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಗುರುಲಿಂಗಜಂಗಮ ಸ್ವರೂಪ ಇವನ ವಚನಗಳಲ್ಲಿ ವ್ಯಕ್ತವಾಗಿದೆ. ಮುಖ್ಯವಾಗಿ ಕಿನ್ನರಯ್ಯ ಅಕ್ಕಮಹಾದೇವಿಯನ್ನು ಪರೀಕ್ಷಿಸಿದ ನಂತರ ಅದರಿಂದಾದ ತನ್ನ ಅನುಭವವನ್ನು ದಾಖಲಿಸಿರುವ ವಚನಗಳು ಗಮನ ಸೆಳೆಯುತ್ತವೆ. ಅದರಲ್ಲಿ ಒಂದು ವಚನ ಹೀಗಿದೆ.

ಮಸ್ತಕವ ಮುಟ್ಟಿ ನೋಡಿದಡೆ

ಮನೋಹರದಳಿವು ಕಾಣ ಬಂದಿತ್ತು!

ಮುಖಮಂಡಲವ ಮುಟ್ಟಿ ನೋಡಿದಡೆ,

ಮೂರ್ತಿಯ ಅಳಿವು ಕಾಣ ಬಂದಿತ್ತು!

ಕೊರಳ ಮುಟ್ಟಿ ನೋಡಿದಡೆ,

ಗರಳಧರನ ಇರವು ಕಾಣಬಂದಿತ್ತು!

ತೋಳುಗಳ ಮುಟ್ಟಿ ನೋಡಿದಡೆ,

ಶವನಪ್ಪುಗೆ ಕಾಣಬಂದಿತ್ತು!

ಉರಸ್ಥಲವ ಮುಟ್ಟಿ ನೋಡಿದಡೆ,

ಪರಸ್ಥಲದಂಗಲೇಪ ಕಾನ ಬಂದಿತ್ತು!

ಬಸಿರ ಮುಟ್ಟಿನೋಡಿದಡೆ,

ಬ್ರಹ್ಮಾಂಡವ ಕಾಣಬಂದಿತ್ತು!

ಗುಹ್ಯವ ಮುಟ್ಟಿನೋಡಿದಡೆ,

ಕಾಮದಹನ ಕಾಣಬಂದಿತ್ತು!

ಮಹಾಲಿಂಗ ತ್ರಿಪುರಾಂತಕದೇವಾ,

ಮಹಾದೇವಿಯಕ್ಕನ ನಿಲುವನರಿಯದೆ ಅಳುಪಿ ಕೆಟ್ಟೆನು.

ಅಕ್ಕಮಹಾದೇವಿಯ ಪರೀಕ್ಷೆನಡೆದ ಮೇಲೆ, ಆಕೆ ಕಿನ್ನರಯ್ಯನನ್ನು ಸಹೋದರನೆಂದು ಸ್ವೀಕರಿಸಿದ ಮೇಲೆ ಕಿನ್ನರಯ್ಯ ಅವಳಿಗೆ ಶರಣು ಹೋಗುತ್ತಾನೆ. ಆಗಿನ ಭಾವ ಕೆಳಗಿನ ವಚನದಲ್ಲಿದೆ.

ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ,

ಶರಣಾರ್ಥಿ ಶರಣಾರ್ಥಿ ಕರುಣಸಾಗರ ನಿಧಿಯೆ

ದಯಾಮೂರ್ತಿ ತಾಯೆ, ಶರಣಾರ್ಥಿ!

ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,

ನೀವು ಬಿಡಿಸಿದವರಾಗಿ ನಿಮ್ಮ ದಯದಿಂದ

ನಾನು ಹುಲಿನೆಕ್ಕಿ ಬದುಕಿದೆನು ಶರಣಾರ್ಥಿ ಶರಣಾರ್ಥಿ ತಾಯೆ.

5 comments:

AntharangadaMaathugalu said...

ತುಂಬಾ ಚೆನ್ನಾಗಿದೆ ಸತ್ಯ ಸಾರ್.....
ಕಿನ್ನರಿ ಬೊಮ್ಮಯ್ಯನ ಕಥೆ ಇಷ್ಟು ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..

ಮನದಾಳದಿಂದ............ said...

ತುಂಬಾ ಸಂತೋಷ ಸರ್,
ಅಷ್ಟಾಗಿ ಕೆಲರಿಯದೆ ಇದ್ದ ಕಿನ್ನರಿ ಬೋಮ್ಮಯ್ಯನ ಬಗ್ಗೆ ನೀವು ಚೆನ್ನಾಗಿ ವಿವರಿಸಿದ್ದೀರಾ.......
ಧನ್ಯವಾದಗಳು.

ಪ್ರಗತಿ ಹೆಗಡೆ said...

ಒಂದು ಒಳ್ಳೆ ಕಥೆ ತಿಳ್ಸಿಕೊಟ್ರಿ... ಧನ್ಯವಾದಗಳು..

ಸಾಗರದಾಚೆಯ ಇಂಚರ said...

nice information

ಜಲನಯನ said...

ಡಾ. ಸತ್ಯ ಚನ್ನಾಗಿದೆ ನಿಮ್ಮ ಕಥೆ ಹೇಳುವ ಪರಿ...ಅಂದಹಾಗೆ ಕಾಲೇಜು ದಿನಗಳಲ್ಲಿ ಕೆಲವೊಮ್ಮೆ ಮೆಸ್ ಬಿಲ್ ಕಟ್ಟೋದು ಲೇಟ್ ಆಗಿ...ಊಟ ಸಿಗದಿದ್ದಾಗ..ನಿಮ್ಮಂತೆ ಬಾಳೆ ಹಣ್ಣು ಊಟ ಆಗ್ತಿತ್ತು...