Monday, August 09, 2010

ದಾನ್ ದಾನ್ ಪರ್ ಲಿಖಾ ಹೈ ತೇರಾ ನಾಮ್!

ಶ್ರೀ ಮಧುಸೂದನ ಪೆಜತ್ತಾಯರ ಸ್ಮೃತಿಪಟಲದಿಂದ...
ಕ್ರಿ.ಶ. ೧೯೫೬ನೇ ಇಸವಿ ಇರಬೇಕು. ಆಗಷ್ಟೇ ಉಡುಪಿಯ ಬೋರ್ಡ್ ಹೈಸ್ಕೂಲ್‌ನ ಆರನೇ ತರಗತಿಗೆ ಸೇರಿದ್ದೆ. ನಮ್ಮ ಮನೆಯಿಂದ ಸ್ಕೂಲ್ ಎರಡು ಮೈಲಿ ದೂರ. ನಮ್ಮಮಧ್ಯಾಹ್ನದ ಊಟದ ವಿರಾಮದ ವೇಳೆ ಮಧ್ಯಾಹ್ನ ೧೨-೩೦ ರಿಂದ ೨-೦೦ ಗಂಟೆಯವರೆಗೆ ಇತ್ತು. ಶಾಲಾದಿನಗಳಲ್ಲಿ ಲಗುಬುಗೆಯಿಂದ ಮನೆಗೆ ನಡೆದು ಬಂದು ಬೇಗಬೇಗನೇ ಮೂಗು ಬಾಯಿಯಿಂದ ಊಟ ಮುಕ್ಕಿ ಸಮಯಕ್ಕೆ ಸರಿಯಾಗಿ ಪುನಃ ಸ್ಕೂಲ್ ಸೇರುತ್ತಾ ಇದ್ದೆ!

ಸೈಕಲ್ ಕಲಿತರೆ ನನಗೆ ತುಂಬಾ ಅನುಕೂಲ ಆಗಬಹುದೆಂಬ ಆಸೆಯಿಂದ ಪ್ರತೀ ಸಂಜೆ ಬಾಡಿಗೆಯ ಸೈಕಲ್ ಪಡೆದು ಕಲಿಯ ತೊಡಗಿದೆ. ಮೊದಲ ದಿನವೇ ನನ್ನ ಬಾಡಿಗೆಯ ಸೈಕಲ್ ಪಲ್ಟಿ ಹೊಡೆದು ಕಾಲಿಗೆ ಗಾಯ ಮಾಡಿಕೊಂಡೆ. ಕುಂಟುತ್ತಾ ನಡೆಯುತ್ತಿದ್ದ ನನಗೆ ಅಮ್ಮ ನಾಲ್ಕಾಣೆಯ ಪಾವಲಿ (ನಾಣ್ಯ) ಕೊಟ್ಟು ನಮ್ಮ ಹೈಸ್ಕೂಲ್ ಪಕ್ಕದಲ್ಲೇ ಇದ್ದ ಆನಂದ ಭವನ ಹೋಟೆಲಿನಲ್ಲಿ “ಪ್ಲೇಟ್ ಊಟ ಮಾಡು” ಎಂದು ಹೇಳಿದ್ದರು.

ನನಗೆ ಸಂಭ್ರಮವೋ ಸಂಭ್ರಮ!

ಆ ದಿನಗಳಲ್ಲಿ ನಮಗಾರಿಗೂ ‘ಪಾಕೆಟ್ ಮನಿ’ ಕೊಡುವ ಪದ್ಧತಿ ಇರಲಿಲ್ಲ. ಅಪರೂಪದಲ್ಲಿ, ಮಧ್ಯಾಹ್ನ ಮನೆಗೆ ಊಟಕ್ಕೆ ಬರಲಾಗದ ಇಂತಹಾ ಸಂದರ್ಭಗಳಲ್ಲಿ ಮಾತ್ರ ಮಧ್ಯಾಹ್ನದ ಊಟಕ್ಕೆಂದು ಪಾಕೆಟ್ ಮನಿ ನನಗೆ ಸಿಗುತ್ತಾ ಇತ್ತು.

ಆಗ ಪ್ಲೇಟ್ ಊಟಕ್ಕೆ ಬರೇ ನಾಲ್ಕಾಣೆ (=೨೫ ಪೈಸೆ) ಫುಲ್ ಊಟಕ್ಕೆ ಎಂಟಾಣೆ (= ೫೦ ಪೈಸೆ)! ಫುಲ್ ಊಟ ಅಂದರೆ ಊಟ ಮಾಡಿದಷ್ಟೂ ಅನ್ನ ಹಾಗೂ ವ್ಯಂಜನಗಳು! ಶಾಲಾ ಮಕ್ಕಳಾದ ನಮಗೆ ಆನಂದ ಭವನದ ಪ್ಲೇಟ್ ಊಟವೇ ಹೆಚ್ಚಾಗುತ್ತಾ ಇತ್ತು.

ಒಂದು ದಿನ ಆನಂದ ಭವನದ ಹತ್ತಿರ ಬರುತ್ತಲೇ ಪಕ್ಕದ ಬೀಡಾ ಅಂಗಡಿಯಲ್ಲಿ ತೂಗು ಹಾಕಿದ್ದ ಚಂದ್ರಬಾಳೆಯ ಹಣ್ಣಿನ ಗೊನೆ ಕಂಡಿತು. ಆ ಗೊನೆಯಲ್ಲಿ ನಸುಗೆಂಪು ಬಣ್ಣದ ಸುಮಾರು ಒಂದೊಂದು ಪೌಂಡ್ (ಸುಮಾರು ೪೫೪ ಗ್ರಾಂ) ತೂಗುವ ಮಾಗಿದ ಚಂದ್ರ ಬಾಳೆಯ ಹಣ್ಣುಗಳು ತೂಗಾಡುತ್ತಿದ್ದುವು. ಕ್ರಯ ಕೇಳಲು ಪ್ರತೀ ಬಾಳೆಹಣ್ಣಿಗೆ ಎರಡಾಣೆ (=೧೨ ಪೈಸೆ) ಅಂತ ಅಂಗಡಿಯ ಯಜಮಾನರು ಹೇಳಿದರು.

ನನಗೆ ಈ ಅಪರೂಪದ ಚಂದ್ರಬಾಳೆಹಣ್ಣು ಬಹು ಇಷ್ಟ. ಅದರ ಪರಿಮಳ ಮತ್ತು ಸ್ವಾದಗಳೇ ವಿಶಿಷ್ಟ. ಅದಲ್ಲದೇ, ಒಂದು ಬಾಳೆಯ ಹಣ್ಣು ತಿಂದರೆ ನನ್ನ ಹೊಟ್ಟೆಯೇ ತುಂಬುವಂತಿತ್ತು!

ಬಾಳೆಹಣ್ಣು ಕಂಡೊಡನೆಯೇ, ನನ್ನ ಮಧ್ಯಾಹ್ನದ ಊಟದ ‘ಮೆನು’ ಬದಲಾಯಿತು. “ಇಂದು ಮಧ್ಯಾಹ್ನದ ಊಟದ ಬದಲಿಗೆ ಎರಡಾಣೆ ಕೊಟ್ಟು ಒಂದು ಮಸಾಲೆ ದೋಸೆ ತಿಂದು, ಉಳಿಯುವ ಎರಡಾಣೆಗಳನ್ನು ಸಾಯಂಕಾಲದ ಚಂದ್ರ ಬಾಳೆಚಿi ಹಣ್ಣಿನ ಫಲಾಹಾರಕ್ಕೆ ಉಳಿಸಿಕೊಂಡರೆ ಹೇಗೆ?” ಎಂಬ ಆಲೋಚನೆ ಬಂತು.

ಆನಂದ ಭವನದ ಮಸಾಲೆ ದೋಸೆ ಇಡೀ ಉಡುಪಿಗೇ ಪ್ರಸಿದ್ಧ.

ಉಡುಪಿಯ ದೇವಸ್ಥಾನಗಳ ಸುತ್ತಿನಲ್ಲಿರುವ ರಥಬೀದಿಯ ಉಪಾಹಾರ ಗೃಹಗಳಲ್ಲಿ ನೀರುಳ್ಳಿ ಬಳಸದೇ ಬರೇ ಇಂಗಿನ ಒಗ್ಗರಣೆ ಸೇರಿಸಿದ ಆಲೂಗೆಡ್ಡೆಯ ಪಲ್ಯವನ್ನು ಹಾಕಿ ಘಮಘಮ ಮಸಾಲೆ ದೋಸೆ ತಯಾರಿಸುವ ಕ್ರಮ ಅಂದೂ ಇತ್ತು, ಆ ಕ್ರಮ ಇಂದಿಗೂ ಇದೆ.

ಈ ಈರುಳ್ಳಿ ರಹಿತ ಮಸಾಲೆ ದೋಸೆಗಳು ಯಾತ್ರಾರ್ಥಿಗಳ ಮತ್ತು ಸ್ಥಳೀಯ ಜನರ ಅಭಿರುಚಿಗೆ ತಕ್ಕಂತೆ ಇಂದಿಗೂ ಬದಲಾಗದೇ ಉಳಿದಿವೆ. ಸ್ಥಳೀಯ ಜನರು ಮತ್ತು ಯಾತ್ರಾರ್ಥಿಗಳು ಈ ವಿಶಿಷ್ಟ ಮಸಾಲೆ ದೋಸೆಗಳ ರುಚಿಗೆ ಇಂದಿಗೂ ಮುಗಿಬೀಳುತ್ತಾರೆ.

ಈರುಳ್ಳಿ ಮತ್ತು ಬೆಳ್ಳುಳ್ಳಿಯ ರುಚಿಗೆ ಆಗಲೇ ಮಾರುಹೋಗಿದ್ದ ನಾವು, ಉಡುಪಿಯ ರಥಬೀದಿಯ ಉಪಹಾರಗೃಹಗಳ ಮಸಾಲೆ ದೋಸೆಗಳನ್ನು “ಮಡಿ ಮಸಾಲೆ ದೋಸೆ” ಅಂತ ಲೇವಡಿ ಮಾಡುತ್ತಾ ಇದ್ದೆವು!

ಆನಂದ ಭವನದ ಗರಿ ಗರಿ ದೋಸೆಗಳ ಮೇಲೆ ಕೆಂಪು ಕೆಂಪು ಖಾರದ ಮೆಣಸುಯುಕ್ತವಾದ ಬೆಳ್ಳುಳ್ಳಿಯ ಚಟ್ನಿ ಹಚ್ಚಿ ಈರುಳ್ಳಿ ಮತ್ತು ಆಲೂಗೆಡ್ಡೆಯ ಪಲ್ಯ ಪೇರಿಸಿ ಮಡಚಿ ಕೊಡುತ್ತಾ ಇದ್ದರು.

ಹಾಗಾಗಿ, ನಮಗೆ ಆನಂದ ಭವನದ ಮಸಾಲೆ ದೋಸೆ ಬಹಳ ಇಷ್ಟ.

ಎರಡಾಣೆ ಬೆಲೆಯ ಹನ್ನೆರಡು ಇಂಚು ಅಗಲದ ಒಂದು ಮಸಾಲೆ ದೋಸೆ ತಿಂದು ನೀರು ಕುಡಿದಾಗ ಮಧ್ಯಾಹ್ನದ ಹಸಿವು ಮಂಗಮಾಯ!

ಆ ಸಂಜೆ ಶಾಲೆ ಬಿಟ್ಟೊಡನೆ ಎರಡು ಆಣೆ ಕೊಟ್ಟು ಚೆನ್ನಾಗಿ ಮಾಗಿದ ಒಂದು ಚಂದ್ರಬಾಳೆಯ ಹಣ್ಣನ್ನು ಖರೀದಿಸಿದೆ. ಅದನ್ನು ನನ್ನ ಸ್ಕೂಲ್ ಬ್ಯಾಗ್‌ನ ಒಳಗೆ ಸೇರಿಸಿದೆ. ಮನೆಗೆ ಹೋಗುತ್ತಾ, ಮುಂದೆ ಸಿಗುವ ನಿರ್ಜನವಾದ ದಾರಿಯಲ್ಲಿ, ನಿಧಾನವಾಗಿ ಅದನ್ನು ಆಸ್ವಾದಿಸಿ ತಿನ್ನುವ ಯೋಜನೆ ಹಾಕಿದೆ.

ಮನೆಯ ದಾರಿಯಲ್ಲಿ ಸಾಗುತ್ತಾ ಸಾಗುತ್ತಾ ಇರುವಂತೆ ಜನಸಂದಣಿ ಕಡಿಮೆ ಆಯಿತು. ಬಾಳೆಯ ಹಣ್ಣಿನ ಪರಿಮಳ ಮೂಗಿಗೆ ಬಡಿದು ನನ್ನ ಹಸಿವು ಮತ್ತಷ್ಟು ಹೆಚ್ಚಿತು.

ನನ್ನ ಮುಂದುಗಡೆ, ರಸ್ತೆಯ ಬಲಬದಿಯಲ್ಲಿ ಒಂದು ದನ ನೆರಳಿನಲ್ಲಿ ಮೆಲುಕು ಹಾಕುತ್ತಾ ಮಲಗಿತ್ತು. ಈ ದನಕ್ಕೆ ಬಾಳೆಹಣ್ಣಿನ ಸಿಪ್ಪೆ ತಿನ್ನಲು ಕೊಟ್ಟು ನಾನು ಬಾಳೆಯ ಹಣ್ಣನ್ನು ನಿಧಾನವಾಗಿ, ಆಸ್ವಾದಿಸಿ ತಿನ್ನುವ ಆಲೋಚನೆ ಮಾಡಿದೆ.

ಹಣ್ಣನ್ನು ನಿಧಾನವಾಗಿ ಸುಲಿಯಲಾರಂಬಿಸಿದೆ.

ಬಾಳೆಯ ಹಣ್ಣಿನ ತಿರುಳನ್ನು ಬಲಗೈ ಬೆರಳುಗಳಲ್ಲಿ ಭದ್ರವಾಗಿ ಹಿಡಿದು ಸಿಪ್ಪೆಯನ್ನು ಬೇರ್ಪಡಿಸಿದೆ.

ಆ ನಂತರ ಸಿಪ್ಪೆಯನ್ನು ದನದ ಕಡೆಗೆ ಎಸೆದೇ ಬಿಟ್ಟೆ!

ಆಗಲೇ ದೊಡ್ದ ಅಚಾತುರ್ಯ ನಡೆದಿತ್ತು!!

“ದೇವರೇ! ನೀನು ಯಾಕೆ ನನ್ನನ್ನು ಎಡಚನನ್ನಾಗಿ ಮಾಡಲಿಲ್ಲ?” ಅಂತ ಹಲುಬುವಷ್ಟು ದೊಡ್ದ ತಪ್ಪನ್ನು ಮಾಡಿಬಿಟ್ಟಿದ್ದೆ!!!

ಬಲಗೈ ಬಂಟನಾದ ನಾನು ಬಲಗೈಯ್ಯಲ್ಲಿ ಇದ್ದ ಕದಳೀ ಫಲದ ತಿರುಳನ್ನು ದನದ ಮುಂದೆ ಎಸೆದು, ಎಡಕೈಯ್ಯಲ್ಲಿ ಇದ್ದ ಸಿಪ್ಪೆಯನ್ನು ನನ್ನ ಬಾಯಿಗೆ ಕೊಂಡೊಯ್ದಿದ್ದೆ!!!!

ಅಷ್ಟೊತ್ತಿಗಾಗಲೇ ಆ ದನವು ಮಲಗಿದ್ದಲ್ಲಿಂದಲೇ ಕತ್ತು ನೀಡಿ ಬಾಳೆಯ ಹಣ್ಣನ್ನು ಸ್ವಾಹಾ ಮಾಡಿತ್ತು!

ನನ್ನ ಕೈಯ್ಯಲ್ಲಿ ಉಳಿದಿದ್ದ ಚಂದ್ರಬಾಳೆಯ ಹಣ್ಣಿನ ಸಿಪ್ಪೆಯನ್ನೇ ಒಂದು ಕ್ಷಣ ನಿರಾಸೆಯಿಂದ ದಿಟ್ಟಿಸಿ, ಅದನ್ನೂ ಆ ದನದ ಕಡೆಗೆ ಎಸೆದೆ!!

ನನಗೆ ಅಂದು ಆ ಚಂದದ ಬಾಳೆಯ ಹಣ್ಣು ತಿನ್ನುವ ಯೋಗ ಇರಲಿಲ್ಲ!!!

ಅದನ್ನು ತಿನ್ನುವ ಯೋಗ ಅಂದು ಖಂಡಿತವಾಗಿ ಆ ದನಕ್ಕೆ ಬರೆದಿತ್ತು!

ಈ ಮರೆಯಲಾರದ ಸಂಗತಿಯನ್ನು ಇಂದು ನೆನೆದಾಗ “ದಾನ್ ದಾನ್ ಪರ್ ಲಿಖಾಹೈ ತೇರೇ ನಾಮ್!” ಎಂಬ ಗಾದೆ ನೆನಪಾಗುತ್ತೆ!

{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. 'ರೈತನಾಗುವ ಹಾದಿಯಲ್ಲಿ' ಎಂಬ ಕನ್ನಡ ಪುಸ್ತಕವೂ ಪ್ರಕಟವಾಗುವುದರಲ್ಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ

5 comments:

PARAANJAPE K.N. said...

ನನ್ನ ಆತ್ಮೀಯ ಹಿರಿಯ ಮಿತ್ರ ಪೆಜತಾಯರ ಬರಹಗಳು ನನಗೆ ತು೦ಬಾ ಇಷ್ಟ., ಅವರ ಎಲ್ಲಾ ಬರಹ ಓದಿದ್ದೇನೆ. ಅವರೊ೦ಥರ ಅನುಭವ ಖಜಾನೆ.

ಮನದಾಳದಿಂದ............ said...

ಉತ್ತಮ ಬರಹ,ಮಧುಸೂದನ ಪೆಜತ್ತಾಯ ಅವರ ಬರಹವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು,
ಮಧ್ಯಾಹ್ನದ ಊಟದ ವಿರಾಮದ ವೇಳೆ ಮಧ್ಯಾಹ್ನ ೧೨-೩೦ ರಿಂದ ೨-೦೦ ಗಂಟೆಯವರೆಗೆ ಇತ್ತು. ಇಲ್ಲಿ ಸಮಯ ಹಿಂದೆ ಮುಂದೇ ಆದಂತಿದೆಯಲ್ವಾ?
ಇಲ್ಲಿ(ದೆಹಲಿಯಲ್ಲಿ) ಆ ಗಾದೆಯನ್ನು 'ದಾನ್ ದಾನ್ ಪರ ಲಿಖಾ ಹೈ ಖಾನೆವಾಲೊಂಕಾ ನಾಮ್' ಅನ್ನುತ್ತಾರೆ:)
ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಪೆಜತಾಯರ ಬಗೆಗೆ ನನ್ನ ಜ್ಞಾನ ಕಡಿಮೆ
ಆದರೆ ನೀವು ಹೇಳಿದ ಮೇಲೆ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿದೆ

Ravi Hanj said...

Another interesting pick from Mr.Pejathaya's basket of memories. ಆನಂದ ಭವನವನ್ನು ಹೊಕ್ಕು ಮಸಾಲೆ ದೋಸೆ ತಿಂದಷ್ಟೇ ಆನಂದವಾಯಿತು.

CYCLING said...

ಮಸಾಲೆ ದೋಸೆ ಮತ್ತು ಚಂದ್ರಬಾಳೆಹಣ್ಣುಗಳ ಬಗ್ಗೆ ಕೇಸರಿಯವರು ಸ್ವಾರಸ್ಯವಾಗಿ ಬರೆದಿರುವರು.
ಆರ್.ಜಿ.ಭಟ್, ಬೆ೦ಗಳೂರು