Monday, April 18, 2011

ಸಾವು ಎಂಬ ಮಂತ್ರವಾದಿಯು ಬರಲು... ... ...

‘ನಿಮಗೆ ಪೋನಿದೆಯಂತೆ’ ಎಂದ ಮಿತ್ರನಿಗೆ ಜಾಡಿಸಿ ಒದಿಯಬೇಕೆನಿಸಿತು. ಆಗ ತಾನೆ ಊಟ ಮುಗಿಸಿ, ಮೂರು ಮಹಡಿ ಹತ್ತಿ ಬಂದು ಕುಳಿತಿದ್ದೆ. ಅಷ್ಟರಲ್ಲಿ ಆತ ಬಂದಿದ್ದ. ಆದರೂ, ನನ್ನ ಅನುಭವಕ್ಕೆ ಬಂದವರಲ್ಲಿ ಕಂಡ, ಬೆರಳೆಣಿಕೆಯಷ್ಟು ಮಂದಿ ಒಳ್ಳೆಯ ಜನಗಳಲ್ಲಿ ಈ ಮಿತ್ರನೂ ಒಬ್ಬನಾಗಿದ್ದ. ಮತ್ತೆ ಕಾಲೆಳೆದುಕೊಂಡು ಮಹಡಿ ಇಳಿಯತೊಡಗಿದೆ. ‘ಪೋನ್ ಯಾರದಿರಬಹುದು?’ ಎಂಬ ಪ್ರಶ್ನೆಗಿಂತ, ನನಗೆ ಪೋನ್ ಬಂದಾಗಲೆಲ್ಲ ಬಯ್ಯುತ್ತಲೇ ರಿಸಿವರ್ ಕೈಗಿಡುವ ಸಿಡುಬು ಮುಖದ ಮ್ಯಾನೇಜರನ ಸಿಡುಕು ಮೂತಿ ಕಣ್ಣ ಮುಂದೆ ಕುಣಿಯುತ್ತಿತ್ತು. ನಾನು ಅಂದುಕೊಂಡಿದ್ದು ಸುಳ್ಳಾಗಿಸಬಾರದೆಂಬಂತೆ, ಒಟಗುಡುತ್ತಲೆ ಮ್ಯಾನೆಜರ್ ರಿಸಿವರನ್ನು ನನ್ನತ್ತ ಸರಿಸಿದ.
ಆ ತುದಿಯಲ್ಲಿ ಅಜ್ಜನಿದ್ದ!
‘ಮಗಾ, ಲಕ್ಕಣ್ಣ ಹಾಸ್ಗೆ ಹಿಡುದ್ಬುಟ್ಟವ್ನೆ. ಆಗ್ಲೊ ಈಗ್ಲೊ ಅಂತಾಯಿದೆ ಜೀವ. ಅದ್ರೊಳ್ಗೆ, ನಿನ್ನನ್ನ ನೋಡ್ಬೇಕು ಕರ್ಸಿ ಅಂತ ಗೋಳಾಡ್ತಾವ್ನೆ. ವಸಿ ಬಂದೋಗು’ ಎಂದ ಅಜ್ಜನ ಮೇಲೆ, ಮಿತ್ರನ ಮೇಲೆ ಬಂದದ್ದಕ್ಕಿಂತ ಹೆಚ್ಚಿನ ಸಿಟ್ಟು ಬಂತು.
...ಇನ್ನೆಂದು ನಿನ್ನ ಮನೆ ಹೊಸಲು ತುಳಿಯೊದಿಲ್ಲವೊ. ನಿನ್ಗು ನಿನ್ನ ಅಧಿಕಾರಕ್ಕು ದಿಕ್ಕಾರ ಇರ್ಲಿ. ನಿನ್ನಂತ ಒಬ್ಬ ಥರ್ಡ್ ಗ್ರೇಡ್ ರಾಜಕಾರಣಿ ಬೆಂಬಲ ಇಲ್ದಿದ್ರು ಆತ್ಮಬಲ ಇದ್ದವ್ನು ಗೆದ್ದು ಬದುಕ್ತಾನೆ ಅನ್ನೊದಿಕ್ಕೆ ನಾನೆ ಸಾಕ್ಷಿ... ಎಂದು ನನಗಿಂತ ಮೂರು ಪಟ್ಟು ವಯಸ್ಸಾಗಿದ್ದ ಲಕ್ಕಣ್ಣನ ಮುಖಕ್ಕೆ ಹೊಡೆದಂತೆ ಹೇಳಿ ಬಂದು ಸುಮಾರು ಹತ್ತು ವರ್ಷಗಳೇ ಕಳೆದು ಹೋಗಿತ್ತು. ಲಕ್ಕಣ್ಣನಿಗಿಂತ ಮುಂಚೆ ಈ ಅಜ್ಜನೇ ಸಾಯಬಾರದಾಗಿತ್ತೆ ಎಂದುಕೊಳ್ಳುತ್ತಿರುವಾಗಲೆ, ನಾನು ಏನು ಮಾತನಾಡದಿದ್ದುದನ್ನು ಕಂಡ ಅಜ್ಜ, ಕಿವುಡರಿಗೆ ಹೇಳುವ ಹಾಗೆ ‘ಕೇಳುಸ್ತಾಯಿತಾ. ಏನೊ ಕೆಟ್ಗಾಲ. ಹತ್ತನ್ನೆರಡು ವರ್ಷದ ಮಾತು. ಅದ್ನ ಇಟ್ಕೊಂಡು ಸಾಯೊ ಮುದುಕ್ನ ಆಸೆ ಈಡೇರುಸ್ತೆ ಇರಕಾಯ್ತದ. ಸುಮ್ನೆ ಬಂದೋಗು’ ಎಂದು ಪೋನ್ ಕಟ್ ಮಾಡಿಯೇ ಬಿಟ್ಟ. ಅಜ್ಜ ಭಯಂಕರ ಹಠವಾದಿ. ಅವನ ಗರಡಿಯಲ್ಲೇ ನಾನು ಬೆಳೆದಿದ್ದು. ಹಾಗೆ ಪೋನ್ ಕಟ್ ಮಾಡುತ್ತಲೆ ‘ನೀನು ಬರಲೇಬೇಕು. ಇದು ನನ್ನಾಜ್ಞೆ’ ಎಂಬ ಸಂದೇಶವನ್ನೂ, ಅದೇಶವನ್ನೂ ನನಗೆ  ದಯಪಾಲಿಸಿದ್ದ.
***
ಯಾವತ್ತೂ ಪ್ರಯಾಣದಲ್ಲಿ ನಿದ್ದೆ ಮಾಡುತ್ತಿದ್ದವನಿಗೆ ಇಂದು ಮಾತ್ರ ಪ್ರಯತ್ನಪಟ್ಟರೂ ನಿದ್ದೆ ಮಾಡಲಾಗಲಿಲ್ಲ. ಬಸ್ ಮುಂದೆ ಮುಂದೆ ಸಾಗಿದಂತೆ ನನ್ನ ನೆನಪು ಹಿಂದೆ ಹಿಂದೆ ಓಡತೊಡಗಿತು.
ಅಜ್ಜ ಹೇಳಿದಂತೆ ಇದು ಹನ್ನೆರಡು ವರ್ಷದ ಹಿಂದಿನ ಮಾತು. ನಾನಾಗ ಎಸ್ಸೆಲ್ಸಿ ಪಾಸು ಮಾಡಿದ್ದೆ. ಅಪ್ಪ ಅಮ್ಮ ಯಾರೆಂದು ತಿಳಿಯದ ನನ್ನನ್ನು ಸಾಕಿದ್ದು ಈ ಅಜ್ಜಯ್ಯನೆ. ಬೇಲಿಗೆ ಮುಳ್ಳು ಕಟ್ಟುವ ಕಾಯಕದ ಅಜ್ಜಯ್ಯ, ಉಪವಾಸ ಮಾಡಿಯಾದರೂ ನನ್ನನ್ನು ಓದಿಸುತ್ತೆನೆ ಎನ್ನುತ್ತಿದ್ದ. ಅದರಂತೆ ಮಾಡಿಯೂ ಇದ್ದ. ಕುಂದೂರು ಮಠದ ಬೋರೆಯ ಮೇಲೆ ಆಗಲೊ ಈಗಲೊ ನೆಲ ಕಚ್ಚಲು ತಯಾರಾಗಿದ್ದ ಸರ್ಕಾರಿ ಸ್ಕೂಲಿನಲ್ಲಿ ಓದುತ್ತಿದ್ದೆ. ಅದಕ್ಕಿಂತ ಒಳ್ಳೆಯ ಸ್ಕೂಲಿನಲ್ಲಿ ಓದಿಸುವ ಆಸೆ ಅಜ್ಜಯ್ಯನಿಗೇನೋ ಇತ್ತು. ಆದರೆ ಅವನ ಸಂಪಾದನೆ ಅದಕ್ಕೆ ಪೂರಕವಾಗಿರಲಿಲ್ಲ.
ತರಗತಿಯಲ್ಲಿದ್ದ ನಲವತ್ತೈದು ಜನರಲ್ಲಿ ಪಾಸಾಗಿದ್ದ ಏಕೈಕ ವ್ಯಕ್ತಿ ನಾನೇ ಆಗಿದ್ದೆ. ಅಜ್ಜನನ್ನು ಹಿಡಿದು ನಿಲ್ಲಿಸುವವರು ಯಾರೂ ಇರಲಿಲ್ಲ. ಎಸ್ಸೆಲ್ಸಿ ಮುಗಿದ ಮೇಲೆ ಏನನ್ನು ಓದಿಸಬೇಕೆಂದು ಅಜ್ಜನಿಗಾಗಲಿ, ಏನನ್ನು ಓದಬೇಕೆಂದು ನನಗಾಗಲಿ ಏನೂ ಗೊತ್ತಿರಲಿಲ್ಲ. ಅಜ್ಜಯ್ಯ ಸಿಕ್ಕಸಿಕ್ಕವರಲ್ಲಿ ಮುಂದಕ್ಕೇನು ಓದಿಸುವುದು ಎಂದು ಕೇಳುತ್ತಿದ್ದ. ಒಬ್ಬೊಬ್ಬರೂ ಒಂದೊಂದು ಹೇಳುತ್ತಿದ್ದರು. ಅದರಿಂದಾಗಿ ಅಜ್ಜಯ್ಯನಿಗೆ ಐಟಿಯೆ, ಪಾಲ್ಟೆಕ್ನಿಕ್ ಪಿಯುಸಿ ಮುಂತಾದ ವಿಚಿತ್ರ ರೀತಿಯ ಹೊಸ ಪದಗಳ ಪರಿಚಯವೂ, ಅವುಗಳನ್ನು ಓದಿದರೆ ಯಾವ ಕೆಲಸ ಸಿಕ್ಕುತ್ತದೆ ಎಂಬ ಭಯಂಕರ ಜ್ಞಾನವೂ ಸಿಕ್ಕಿತು!. ‘ನಮ್ಮ ಹುಡುಗನ್ನ ಪಾಲ್ಟೆಕ್ನಿಕ್ ಮಾಡ್ಸಿ ಇಂಜಿನೆರು ಮಾಡ್ತಿನಿ’ ಎನ್ನುತ್ತಿದ್ದ. ಆದರೆ ‘ಯಾವುದನ್ನು ಓದಿದರೆ ಬೇಗ ಕೆಲಸ ಸಿಕ್ಕುತ್ತದೆ?’ ಎಂಬ ಅಜ್ಜಯ್ಯನ ಪ್ರಶ್ನೆಗೆ ಸಿಕ್ಕಿದ ಪುಕ್ಕಟ್ಟೆ ಸಲಹೆಯಂತೆ ನನ್ನನ್ನು ಐಟಿಐ ಗೆ ಸೇರಿಸಲು ತೀರ್ಮಾನಿಸಿದ. ಹಾಸನದ ಕಾಲೇಜಿನಲ್ಲಿ ಅರ್ಜಿ ಹಾಕಿದ್ದೂ ಅಯಿತು. ಆದರೆ ನನಗಿದ್ದ ಪರ್ಸಂಟೇಜಿನಲ್ಲಿ ನನಗೆ ಸೀಟು ಸಿಗುವುದು ದೂರದ ಮಾತಾಗಿತ್ತು. ಆಗ ಅಜ್ಜಯ್ಯನ ನೆನಪಿಗೆ ಬಂದವನು ಈ ಲಕ್ಕಣ್ಣ.
ಹಾಗೆ ನೋಡಿದರೆ ಲಕ್ಕಣ ಅಜ್ಜಯ್ಯನಿಗೆ ದೂರದವನೇನು ಅಲ್ಲ. ಸ್ವತಃ ಲಕ್ಕಣ್ಣನ ತಂಗಿಯನ್ನೆ ಈ ಅಜ್ಜಯ್ಯ ಮದುವೆಯಾಗಿದ್ದ. ಬಾವನೆಂಟನ ಸಂಬಂಧ ಮುರಿದುಬಿದ್ದು ಅಲ್ಲಿಗೇ ಇಪ್ಪತೈದು ವರ್ಷಗಳಾಗಿದ್ದವು. ಅಜ್ಜಯ್ಯನಿಗೆ ಇಷ್ಟೊಂದು ಹತ್ತಿರದ ಸಂಬಂಧಿಯೊಬ್ಬನಿದ್ದಾನೆ ಎಂದು ನನಗೆ ತಿಳಿದಿದ್ದು ಆಗಲೆ. ಲಕ್ಕಣ್ಣ ಆಗ ಜಿಲ್ಲಾ ಪಂಚಾಯಿತ್ ಸದಸ್ಯನಾಗಿದ್ದ. ಆರು ತಿಂಗಳ ಹಿಂದಷ್ಟೆ ಆತ ಎಲೆಕ್ಷನ್ನಿಗೆ ನಿಂತಿದ್ದಾಗ, ಈ ಅಜ್ಜಯ್ಯನೇ ನನ್ನಿಂದ ಒಂದು ಕಳ್ಳ ಓಟನ್ನು ಲಕ್ಕಣ್ಣನ ಗುರುತಿಗೆ ಹಾಕಿಸಿದ್ದ. ಆದರೆ ಆಗಲೂ ಲಕ್ಕಣ್ಣ ತನ್ನ ಸಂಬಂಧಿಯೆಂದು ನನ್ನ ಹತ್ತಿರ ಹೇಳಿರಲಿಲ್ಲ.
ಭಯಂಕರ ಆಶಾವಾದಿಯೂ, ದುರಾಸೆಯವನೂ ಆಗಿದ್ದ ಲಕ್ಕಣ್ಣನ ತಂದೆ ಚಿಕ್ಕ ವಯಸ್ಸಿನಲ್ಲೇ ಸತ್ತು ಹೋಗಿದ್ದರಿಂದ ಆತನೇ ಮನೆಯ ಯಜಮಾನನಾಗಿದ್ದ. ಆತನಿಗಿದ್ದ ತಂಗಿಯನ್ನು ಒಳ್ಳೆಯ ಕಡೆ ಕೊಟ್ಟು ಮದುವೆ ಮಾಡಿದರೆ ಹೆಚ್ಚು ಹಣ ಖರ್ಚು ಮಾಡಬೇಕಾಗುವುದೆಂಬ ದೂರಾಲೋಚನೆಯಿಂದ, ಬೇಲಿ ಕಟ್ಟುವ, ಮೆದೆ ಹಾಕುವ ಕೆಲಸಗಳನ್ನು ಮಾಡಿಕೊಂಡು ಚುರುಕಾಗಿ ಊರಿನಲ್ಲಿ ಓಡಾಡಿಕೊಂಡಿದ್ದ ತಬ್ಬಲಿ ಹುಡುಗನಿಗೆ ಗಂಟು ಹಾಕಿ ಮನೆಯಲ್ಲಿಯೇ ಇಟ್ಟುಕೊಂಡಿದ್ದ. ತಂಗಿಯ ಮೇಲಿನ ಪ್ರೀತಿಯಿಂದ ಹೀಗೆ ಮಾಡಿದ್ದಾನೆ ಎಂದು ಊರವರು ಮಾತನಾಡಿಕೊಳ್ಳುತ್ತಿದ್ದರು. ಆದರೆ ವಾಸ್ತವ ಬೇರೆಯೇ ಇತ್ತು. ಲಕ್ಕಣ್ಣನಿಗೆ ದುಡಿಯಲು ಇಬ್ಬರು ಆಳುಗಳು ಬೇಕಿತ್ತು ಅಷ್ಟೆ. ಯಾವ ಸಂಬಳವನ್ನೂ ಕೊಡದೆ ಅವರನ್ನು ಪಡೆದಿದ್ದ. ಸ್ವಭಾವತಃ ಶ್ರಮ ಜೀವಿಯಾಗಿದ್ದ ಅಜ್ಜಯ್ಯನಿಗೆ ದುಡಿಮೆ ಏನು ಅನ್ನಿಸದಿದ್ದರೂ, ಸ್ವಲ್ಪ ಬುದ್ದಿವಂತಳಾಗಿದ್ದ ಆತನ ಹೆಂಡತಿಗೆ ಬಹು ಬೇಗ ತನ್ನ ಅಣ್ಣನ ಮನಸ್ಸು ಅರ್ಥವಾಗಿತ್ತು. ಇಲ್ಲಿ ಮಾಡುವ ಕೂಲಿಯನ್ನು ಬೇರೆ ಕಡೆ ಮಾಡಿದರೂ ಸರಿಯೆ ಎಂದುಕೊಂಡು, ಗಂಡನನ್ನು ಹೊರಡಿಸಿಕೊಂಡು ಬೇರೆ ಸಂಸಾರ ಹೂಡಿಯೇ ಬಿಟ್ಟಳು. ಲಕ್ಕಣ್ಣನಿಂದ ಬಹುವಾಗಿ ಚಿತ್ರವಿಚಿತ್ರ ಹಿಂಸೆಗೊಳಗಾಗಿ, ಇನ್ನೇನು ನೆಮ್ಮದಿಯಿಂದ ಇರುತ್ತೇವೆ ಅಂದುಕೊಳ್ಳುವಷ್ಟರಲ್ಲಿ ವಿಧಿ ಕೈಕೊಟ್ಟಿತ್ತು. ನಾನು ಅಜ್ಜಯ್ಯನ ಮನೆ, ಮನ ಸೇರುವಷ್ಟರಲ್ಲಿ ಅಜ್ಜಯ್ಯನ ಹೆಂಡತಿ ಸತ್ತು ಆರು ತಿಂಗಳಾಗಿತ್ತು. ಆತನೂ ತಬ್ಬಲಿಯಾದ್ದರಿಂದಲೋ, ತನಗೆ ಮಕ್ಕಳಿಲ್ಲದಿದ್ದರಿಂದಲೋ ಏನೊ ತಬ್ಬಲಿಯಾಗಿದ್ದ ನನ್ನನ್ನು ಸಾಕಿಕೊಂಡಿದ್ದ. ದುರದೃಷ್ಟವೆಂದರೆ, ಇಬ್ಬರು ಹೆಂಡತಿಯರಿದ್ದರೂ ಲಕ್ಕಣ್ಣನಿಗೆ ಮಕ್ಕಳಾಗಿರಲಿಲ್ಲ. ನನಗೆ ಐಟಿಐ ಸೀಟು ಕೊಡಿಸಲೆಂಬ ಏಕೈಕ ಕಾರಣದಿಂದ, ಇಪ್ಪತೈದು ವರ್ಷಗಳ ನಂತರ ಅಜ್ಜಯ್ಯ ಲಕ್ಕಣ್ಣನ ಮನೆಯ ಹೊಸಲು ತುಳಿದಿದ್ದ.
ಅಜ್ಜಯ್ಯನೇ ಮೊದಲು ಮನೆಗೆ ಬಂದಿದ್ದರಿಂದ ಗೆದ್ದವನಂತೆ ಬೀಗುತ್ತಿದ್ದ ಲಕ್ಕಣ್ಣ ಸೀಟು ಕೊಡಿಸಿಯೇ ತೀರುತ್ತೇನೆ ಎಂಬ ಆಶ್ವಾಸನೆಯನ್ನು ಕೊಟ್ಟ. ‘ಜಿಲ್ಲಾ ಪಂಚಾಯಿತ್ ಸದಸ್ಯನ ಕೋಟಾದಲ್ಲಿ ನಿನಗೆ ಸೀಟು ಗ್ಯಾರಂಟಿ’ ಎಂದು ನನ್ನ ತಲೆ ಸವರಿ ಹೇಳಿದ್ದ.
ಅದಕ್ಕೆ ಪೂರಕವಾಗಿಯೋ ಎಂಬಂತೆ ನಾಲ್ಕಾರು ಬಾರಿ ಕಾಲೇಜಿನ ಬಳಿ ಬಂದು ಹೋಗಿ ಮಾಡಿದ್ದ. ಬಂದಾಗಲೆಲ್ಲ ನನ್ನನ್ನು ಅಜ್ಜಯ್ಯನನ್ನು ಹೊರಗಡೆ ನಿಲ್ಲಿಸಿ ಪ್ರಿನ್ಸಿಪಾಲರ ಕೊಠಡಿಯಲ್ಲಿ ಗಂಟೆಗಟ್ಟಲ್ಲೆ ಕುಳಿತಿದ್ದು ಬರುತ್ತಿದ್ದ. ಹೊರ ಬಂದಾಗಲೆಲ್ಲ ‘ಸೀಟು ಸಿಗುತ್ತೆ ಬಿಡು. ನೀನೇನು ಯೋಚನೆ ಮಾಡಬೇಡ’ ಎನ್ನುತ್ತಿದ್ದ. ಅಜ್ಜಯ್ಯ ಲಕ್ಕಣ್ಣನನ್ನು ಪೂರ್ತಿಯಾಗಿ ನಂಬಿಬಿಟ್ಟಿದ್ದ. ಮತ್ತೆ ಆತ ಹೇಳುತ್ತಿದ್ದ ಕೆಲಸಗಳನ್ನು ಮಾಡಿಕೊಡುತ್ತಿದ್ದ, ಪುಕ್ಕಟ್ಟೆಯಾಗಿ!
ನನಗೆ ಸೀಟು ಸಿಗಲಿಲ್ಲ. ಇದರಿಂದಾಗಿ ಲಕ್ಕಣ್ಣ ಮತ್ತು ಅಜ್ಜಯ್ಯನವರ ಹೊಸ ಸ್ನೇಹಕ್ಕೇನು ಕೊರತೆಯಾಗಲಿಲ್ಲ. ನಾನು ಪಿಯುಸಿ ಸೇರಿಕೊಂಡೆ. ಆದರೆ ಒಂದು ವರ್ಷ ಕಳೆಯುವದರೊಳಗಾಗಿ ಸತ್ಯ ಏನು ಎಂಬುದು ಸ್ಪಷ್ಟವಾಗತೊಡಗಿತು. ಹಾಸನಕ್ಕೆ ದಿನವೂ ಹೋಗಿ ಬಂದು ಮಾಡುತ್ತಿದ್ದ ನನಗೆ ಅಲ್ಲಿಯ ಕೆಟ್ಟ ರಾಜಕಿಯದ ಪರಿಚಯವೂ ತಕ್ಕ ಮಟ್ಟಿಗೆ ಆಯಿತು. ಅದರಿಂದಾಗಿ ನಾನೂ, ಅಜ್ಜಯ್ಯನೂ ಲಕ್ಕಣ್ಣನಿಂದ ಮೋಸ ಹೋಗಿದ್ದ ವಿಚಾರವೂ ತಿಳಿಯಿತು. ಜಿಲ್ಲಾ ಪಂಚಾಯಿತ್ ಸದಸ್ಯನ ಕೋಟಾದಲ್ಲಿ ಲಕ್ಕಣ್ಣನಿಗೆ ಎರಡು ಸೀಟು ಇದ್ದುದ್ದು ನಿಜವೇ ಆಗಿತ್ತು. ನನಗೆ ಕೊಡಿಸುತ್ತೇನೆ ಎಂದು ಹೇಳುತ್ತಲೇ, ಮೂರು ಮೂರು ಸಾವಿರ ಹಣಕೊಟ್ಟ ಇಬ್ಬರು ಬೇರೆ ಹುಡುಗರಿ ಸೀಟು ಕೊಡಿಸಿದ್ದ. ಅವರಿಬ್ಬರಿಗೂ ನನಗಿಂತ ಕಡಿಮೆ ಅಂಕಗಳಿದ್ದವೂ ಕೂಡ!
ಅಜ್ಜಯ್ಯನಿಗೆ ವಿಷಯ ತಿಳಿದು ಮತ್ತೊಮ್ಮೆ ಶಪಥ ಮಾಡಿ ಲಕ್ಕಣ್ಣನ ಸಂಬಂಧವನ್ನು ಕಡಿದುಕೊಂಡ. ಅದಕ್ಕೆ ನಾನೇ ಕಾರಣ ಎಂದು ಭಾವಿಸಿದ ಲಕ್ಕಣ್ಣ ನಾನಾ ರೀತಿಯಲ್ಲಿ ನನಗೆ ಕಾಟ ಕೊಡಲಾರಂಭಿಸಿದ. ವರ್ಷವೆರಡು ಕಳೆಯುವುದರಲ್ಲಿ ಲಕ್ಕಣ್ಣ ನನ್ನ ಶತ್ರುವಾಗಿಬಿಟ್ಟಿದ್ದ. ಆತನ ಕೊಲೆ ಮಾಡಿಯಾದರೂ ಸರಿಯೆ ಆತನ ಕಾಟ ಕಳೆದುಕೊಳ್ಳ ಬೇಕು ಎಂಬ ಭಯಂಕರ ನಿರ್ಧಾರಕ್ಕೆ ನಾನು ಬಂದುಬಿಟ್ಟಿದ್ದೆ. ಆತ ಮುಂದಿನ ಎಲೆಕ್ಷೆನ್ನಿಗೆ ನಿಂತಾಗ, ಆತನ ವಿರೋಧಿ ಗೆಲ್ಲುವಂತೆ ಪ್ರಚಾರ ಮಾಡಿದೆ. ಲಕ್ಕಣ್ಣ ಸೋತು ಹೋಗಿದ್ದ. ಕಾರಣ ನನ್ನನ್ನು ಮುಗಿಸಲು ಸಂಚು ಮಾಡ ತೊಡಗಿದ. ಅದನ್ನು ಅರಿತ ಅಜ್ಜಯ್ಯ ನನ್ನನ್ನು ಊರು ಬಿಟ್ಟು ಹೋಗುವಂತೆ ಒತ್ತಯಿಸಿ ಬೆಂಗಳೂರು ಬಸ್ಸು ಹತ್ತಿಸಿದ್ದ. ನನ್ನ ಓದಿಗೆ ಸಿಕ್ಕ ಸೆಕುರಿಟಿ ಗಾರ್ಡ್ ಕೆಲಸ ಮಾಡುತ್ತಲೇ ಎಸ್‌ಡಿಸಿ ಪರೀಕ್ಷೆಯನ್ನು ಕಟ್ಟಿ ಪಾಸು ಮಾಡಿಕೊಂಡು ಸರ್ಕಾರಿ ಗುಮಾಸ್ತನಾದೆ. ಆಗ ಧೈರ್ಯದಿಂದ ಊರಿಗೆ ಹೋಗಿ ಲಕ್ಕಣ್ಣನ ಮುಖದೆದುರು ನಿಂತು, ಉಗಿದು, ಆತನಿಗೆ ದಿಕ್ಕಾರ ಕೂಗಿ ಬಂದಿದ್ದೆ. ಸಿಟಿಗೆ ಬರಲೊಪ್ಪದ ಅಜ್ಜಯ್ಯ ಊರಿನಲ್ಲಿಯೇ ಉಳಿದಿದ್ದ. ಇತ್ತ ನಾನು ಬೆಂಗಳೂರಿನಲ್ಲಿ, ಗುಮಾಸ್ತನಾಗಿ ಹತ್ತು ವರ್ಷಗಳನ್ನು ಕಳೆದಿದ್ದೆ.
***
ಬಸ್ಸಿಳಿದ ನನಗೆ ನೇರವಾಗಿ ಲಕ್ಕಣ್ಣನ ಮನೆಗೆ ಹೋಗಲು ಇಷ್ಟವಾಗದೆ ಅಜ್ಜಯ್ಯನನ್ನು ಹುಡುಕಿ ಹೊರಟೆ. ಅಜ್ಜಯ್ಯ ಸಿಗುವ ಮೊದಲೆ, ಲಕ್ಕಣ್ಣನ ಕಿರಿಯ ಹೆಂಡತಿಯ ತಮ್ಮ ಸಿಕ್ಕಿದ. ಲಕ್ಕಣ್ಣನನ್ನು ಹಟ್ಟಿಗೆ ಹಾಕಿದ್ದಾರಂತೆಲೂ, ಇನ್ನೇನು ಸಾಯುತ್ತನೆಂತಲೂ ಹೇಳಿದ. ಅಜ್ಜಯ್ಯನನ್ನು ಕರೆಯಲು ಲಕ್ಕಣ್ಣ ಹೇಳಿದ್ದರಿಂದ ಅಜ್ಜಯ್ಯನನ್ನೇ ಹುಡುಕಿಕೊಂಡು ಆತನೂ ಹೊರಟಿದ್ದ.
ನಾವು ಹಟ್ಟಿಗೆ ಬರುವಷ್ಟರಲ್ಲಿ ಅಜ್ಜಯ್ಯನೂ ಬಂದಿದ್ದ. ಜನ ಆಗಲೇ ಗುಂಪುಗೂಡಿದ್ದರು. ಅಜ್ಜಯ್ಯ ಎಲ್ಲರನ್ನು ಸರಿಸಿ ನನ್ನನ್ನು ಮಲಗಿದ್ದ ಲಕ್ಕಣ್ಣನ ಸಮೀಪಕ್ಕೆ ತಳ್ಳಿ ನಿಲ್ಲಿಸಿದ. ಲಕ್ಕಣ್ಣನೆಡೆಗೆ ಬಾಗಿ ನಾನು ಬಂದಿರುವುದನ್ನು ಮೆಲ್ಲಗೆ ಕೂಗಿ ಕೂಗಿ ಹೇಳಿದ. ಎಷ್ಟೋ ಹೊತ್ತಿನ ನಂತರ ನಿಧಾನವಾಗಿ ಕಣ್ಣು ತೆರೆದ ಲಕ್ಕಣ್ಣ ನನ್ನನ್ನು ಗುರುತು ಹಿಡಿಯಲು ನಿಮಿಷಗಳೇ ಬೇಕಾಯಿತು. ಗುರುತು ಹತ್ತಿದ್ದರಿಂದಲೋ ಏನೋ ಆತನ ಮುಖದ ಮೇಲೆ ಸಣ್ಣಗೆ ನಗು ಮೂಡಿತು. ಆತನ ದೇಹದಲ್ಲಿ ಉಂಟಾದ ಚಲನೆಯಿಂದಾಗಿ, ಆತ ಬಲಗೈನ್ನೆತ್ತಲು ಪ್ರಯತ್ನಿಸುತ್ತಿರುವಂತೆ ನನಗನ್ನಿಸಿ, ಬಾಗಿ ಅವನ ಕೈಹಿಡಿದುಕೊಂಡೆ. ಮೈ ಆಗಲೇ ತಣ್ಣಗಾಗುತ್ತಿತ್ತು. ನಾನು ಮುಟ್ಟಿದ್ದರಿಂದಲೊ ಏನೊ ಎಲ್ಲರೂ ಆಶ್ಚರ್ಯ ಪಡುವಂತೆ ತನ್ನೆರಡು ಕೈಗಳಿಂದ ನನ್ನ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ಕಣ್ಮುಚ್ಚಿದ. ಮುದುಕನ ಕಣ್ಣುಗಳಿಂದ ನೀರು ಹರಿಯತೊಡಗಿತು. ಕಣ್ಣನ್ನು ತೆರೆಯದೆ, ನನ್ನ ಕೈಗಳನ್ನು ಬಿಟ್ಟು ತನ್ನೆರಡು ಕೈಗಳನ್ನು ನನ್ನಡೆಗೆ ಮುಗಿಯುವವನಂತೆ ಎದೆಯ ಮೇಲೆ ಜೋಡಿಸಿಕೊಂಡ. ನಾನು ಆತನ ಮುಖದ ಹತ್ತಿರವೇ ಬಾಗಿಕೊಂಡು ಗಂಭೀರನಾಗಿ ಆತನ ಮುಖವನ್ನೇ ತದೇಕ ಚಿತ್ತದಿಂದ ಗಮನಿಸುತ್ತಿದ್ದೆ. ನಾನು ನೋಡು ನೋಡುತ್ತಿದ್ದಂತೆ ಮುಖ ಕಳಾಹೀನವಾಗಿ ಜೀವ ಕಳೆಯೇ ಇಲ್ಲವಾಂದತೆನ್ನಿಸಿತು. ಇನ್ನೇನು ಪ್ರಾಣ ಹೋಯಿತು ಅಂದುಕೊಂಡು ಆತನ ಕೈಗಳನ್ನು ಮುಟ್ಟಿದೆ. ಕೈ ತಣ್ಣಗಾಗಿದ್ದವು. ಉಸಿರೂ ನಿಂತು ಹೋಗಿತ್ತು. ಮುಚ್ಚಿದ ಕಣ್ಣಿನಲ್ಲಿ ಹರಿದಿದ್ದ ನೀರು, ಮುಗಿದ ಕೈಗಳು ಮಾತ್ರ ಹಾಗೆಯೇ ಇದ್ದವು.
ಅಲ್ಲಿ ಸೇರಿದ್ದವರಲ್ಲಿ ಬಹಳಷ್ಟು ಮಂದಿ ‘ನಿನ್ನನ್ನು ನೋಡಿ ಕ್ಷಮೆ ಕೇಳಿ ಸತ್ತ. ನೀನು ಕ್ಷಮಿಸಿಬಿಡು’ ಎಂದು ಏನೇನೋ ಹೇಳುತ್ತಿದ್ದರು. ಎಂಥ ದರ್ಪಿಷ್ಟನನ್ನು, ಅಹಂಕಾರಿಯನ್ನು, ಕೆಟ್ಟ ಮನುಷ್ಯನನ್ನು, ಕಟುಕನನ್ನು ಬಗ್ಗಿಸುವ ‘ಸಾವು’ ಎಂಬ ಮತ್ರವಾದಿಯ ಬಗ್ಗೆ ನಾನು ಯೋಚಿಸುತ್ತಿದ್ದೆ. ಅಜ್ಜಯ್ಯ ನನ್ನ ಹೆಗಲ ಮೇಲೆ ಕೈ ಹಾಕಿ ‘ಇನ್ನು ಹೋಗಣವೇ’ ಎಂಬಂತೆ ನೋಡಿದ. ನಾನು ಮರು ಮಾತನಾಡದೆ ಅವನನ್ನು ಹಿಂಬಾಲಿಸಿದೆ.

1 comment:

Gubbachchi Sathish said...

ಸಾವು! ನಿಜವಾಗಲು ಮಂತ್ರವಾದಿಯೇ ಸ್ರಿ.