Tuesday, April 26, 2011

ಕುಡಕರಾಗಬೇಕೆ? ಇಷ್ಟಕ್ಕೆ!

ಮೊನ್ನೆ ಊರಿಗೆ ಹೋಗಿದ್ದಾಗ ಒಂದು ಆಘಾತಕರ ಸುದ್ದಿ ಕಾಯ್ದು ಕುಳಿತಿತ್ತು. ನಮ್ಮ ಬಂಧುಗಳ ಊರಿನ ಪರಿಚಯದವರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ವಯಸ್ಸು ಸುಮಾರು ಅರವತ್ತು ಇರಬಹುದು. ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು, ಮೊಮ್ಮಕ್ಕಳು ಎಲ್ಲಾ ಇದ್ದ ಈ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುವಂತದ್ದು ಏನಾಗಿತ್ತೆಂಬುದು ನನಗೆ ಯಕ್ಷಪ್ರಶ್ನೆಯಾಗಿಬಿಟ್ಟಿತ್ತು. ಹಾಗೆ ನೋಡಿದರೆ ದಿವಂಗತರು ಸಾಮಾನ್ಯದ ಕುಳವೇನಲ್ಲ. ಸಾಕಷ್ಟು ಹೊಲ ತೋಟ ಎಲ್ಲಾ ಇತ್ತು. ಊರಿನ ಕೆಲವು ಮುಖಂಡರಲ್ಲಿ ಇವರೂ ಒಬ್ಬರಾಗಿದ್ದರು. ಸುತ್ತ ಹತ್ತೂರುಗಳ ಇಲ್ಲಸಲ್ಲದ ಪಂಚಾಯ್ತಿಗೆಂದು ಕಟ್ಟೆಗಳಲ್ಲೂ ಕೂತವರು. ರೈತಸಂಘದ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದವರು. ಕೃಷಿಯ ಜೊತೆಗೆ ಹತ್ತಿರದ ಸಂತೆಯಲ್ಲಿ ವ್ಯಾಪಾರವನ್ನೂ ಇಟ್ಟುಕೊಂಡಿದ್ದವರು. ಇಷ್ಟೆಲ್ಲಾ ಲೋಕದ ನಂಟು ಉಳಿಸಿಕೊಂಡು ಬದುಕುತ್ತಿದ್ದ ಮನುಷ್ಯ ಸಾಯುವುದೆಂದರೆ!
ಕುಡಿತ ಕುಡಿಯುವವರನ್ನೂ ಕುಡಿಯದವರನ್ನೂ ಹಾಳು ಮಾಡುತ್ತದೆ. ದಿವಂಗತರ ಆತ್ಮಹತ್ಯೆಗೂ ಕುಡಿತಕ್ಕೂ ತಳಕು ಹಾಕಿಕೊಂಡ ಸುದ್ದಿಗಳು ಕೊನೆಗೂ ನಿಜವಾಗಿ ಬಿಟ್ಟಿದ್ದವು. ದಿವಂಗತರಿಗೆ ಸ್ವಲ್ಪ ಕುಡಿತದ ಚಟವಿತ್ತು. ಆದರೆ ಎಂದು ಮಿತಿ ಮೀರಿರಲಿಲ್ಲ. ವಾರಕ್ಕೋ ಪಕ್ಷಕ್ಕೋ ಮಾತ್ರ. ಅವರ ಈ ದೌರ್ಬಲ್ಯ ಮಕ್ಕಳು ಮತ್ತು ಅವರ ನಡುವೆ ಹಲವಾರು ಬಾರಿ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಬುದ್ಧಿ ಹೇಳುವ ನೈತಿಕತೆಯನ್ನು ಕುಡಿತ ಅವರಿಂದ ಕಿತ್ತುಕೊಂಡಿತ್ತು. ಇಬ್ಬರೂ ಗಂಡು ಮಕ್ಕಳು ಒಳ್ಳೆಯವರಾಗಿದ್ದರು. ತಂದೆ ತಾಯಿ ಬಂಧು ಬಳಗ ಎಂದು, ತಮ್ಮ ಕೆಲಸ ತಾವು ಮಾಡಿಕೊಂಡು ಇದ್ದವರು. ಅಪ್ಪನ ಕುಡಿತ ಹಲವಾರು ಬಾರಿ ಅವರನ್ನು ಮುಜುಗರಕ್ಕೆ ಒಳಪಡಿಸಿತ್ತು. ಆಗೆಲ್ಲಾ ಅವರು ಅಪ್ಪನಿಗೆ ಕುಡಿತ ಬಿಡುವಂತೆ, ಒತ್ತಾಯ ಹೇರುತ್ತಿದ್ದರು. ಆಗ ಬಿಸಿಬಿಸಿ ಮಾತುಗಳಾಗುತ್ತಿದ್ದವು. ದಿವಂಗತರದು ಒಂದೇ ಮಾತು. ’ನಾನು ನನ್ನ ಜೀವನದಲ್ಲಿ ಏನೆಲ್ಲಾ ಮಾಡಿದ್ದೇನೆ. ನಿಮಗಾಗಿ ಆಸ್ತಿ ಪಾಸ್ತಿ ಮಾಡಿಟ್ಟಿದ್ದೇನೆ. ಯಾವುದನ್ನೂ ಹಾಳು ಮಾಡಿಲ್ಲ. ಏನೂ ವಾರಕ್ಕೋ ತಿಂಗಳಿಗೋ ಒಮ್ಮೆ ಕುಡಿದರೆ ಅದಕ್ಕೂ ಅಡ್ಡಿ ಮಾಡುತ್ತೀರಲ್ಲ’ ಎನ್ನುತ್ತಿದ್ದರು.
ಆದರೆ ಮೊನ್ನೆ ಸಾಯುವ ಮೊದಲು ನಡೆದ ಘಟೆನಗಳು ಮಾತ್ರ ಸ್ವಲ್ಪ ಭಯಂಕರವಾಗಿಯೇ ಇದ್ದವು. ಬಯಲು ಸೀಮೆಯಲ್ಲಿ ಯುಗಾದಿ ಕಳೆಯಿತೆಂದರೆ ಗ್ರಾಮದೇವತೆಗಳ ಜಾತ್ರೆಗಳು ಪ್ರಾರಂಭವಾಗಿಬಿಡುತ್ತವೆ. ಒಂದೊಂದು ಊರಿನಲ್ಲಿ ಒಂದೊಂದು ದಿವಸ ಜಾತ್ರೆ, ಬಲಿ ಎಂದು ಭರ್ಜರಿ ಊಟ ಇರುತ್ತದೆ. ಇತ್ತೀಚಿಗೆ ಬಂದವರಿಗೆ ಕುಡಿಯುವುದಕ್ಕೆ ಕೊಡುವುದು ಹಳ್ಳಿಗಳಲ್ಲಿ, ಸ್ವಲ್ಪ ಮುಂದುವರೆದ ಮನೆಗಳವರಲ್ಲಿ ಫ್ಯಾಷನ್ನಾಗಿಬಿಟ್ಟಿದೆ. ಅಂತಹುದೇ ಒಂದು ಊರಿನಲ್ಲಿ ಒಂದು ಜಾತ್ರೆ. ದಿವಂಗತರ ಸ್ನೇಹಿತರ ಮನೆಯಲ್ಲಿ ಹತ್ತಾರು ಕುರಿ ಕೋಳಿ ಕಡಿದು ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಯಥಾಪ್ರಕಾರ ಹಲವಾರು ಸ್ನೇಹಿತರೊಂದಿಗೆ ದಿವಂಗತರೂ ಊಟಕ್ಕೆ ಹೋಗಿದ್ದಾರೆ. ಊಟಕ್ಕೆ ಮೊದಲು ನಡೆದ ತೀರ್ಥಸಮಾರಾಧನೆ ಜೋರಾಗಿಯೇ ಇತ್ತು. ನೆಂಚಿಕೊಳ್ಳಲು ಕೋಳಿ ಮಾಸದ ತುಂಡು. ಹೊತ್ತು ಕಳೆದಿದ್ದೇ ಗೊತ್ತಾಗಿಲ್ಲ. ದಿವಂಗತರಂತೂ ಚೆನ್ನಾಗಿಯೇ ಕುಡಿದು ಚಿತ್ತಾಗಿಬಿಟ್ಟಿದ್ದಾರೆ.
ಊಟ ಮಾಡಿದರೋ ಬಿಟ್ಟರೋ. ಯಾರದೋ ಬೈಕ್ ಹತ್ತಿಕೊಂಡು ತಮ್ಮ ಊರಿನ ಕಡೆ ಹೊರಟಿದ್ದಾರೆ. ಬೈಕ್ ಓಡಿಸುತ್ತಿದ್ದವನೂ ಕುಡಿದಿದ್ದವನೇ ಆದರೂ ಇವರಷ್ಟು ಚಿತ್ತಾಗಿರಲಿಲ್ಲ. ಕತ್ತಲಲ್ಲಿ ಹಿಂದೆ ಕುಳಿತಿದ್ದ ಇವರು ಬಿದ್ದು ಹೋದದ್ದೂ ಬೈಕ್ ಓಡಿಸುತ್ತಿದ್ದವನಿಗೆ ಗೊತ್ತಾಗಲೇ ಇಲ್ಲ. ಇವರು ಹಿಂದೆ ಕುಳಿತಿದ್ದು ಅವನಿಗೇ ಮರತೇ ಹೋಗಿತ್ತು. ಸುಮ್ಮನೆ ಮನೆಗೆ ಹೋಗಿ ಮಲಗಿಬಿಟ್ಟ. ಇತ್ತ ಬಿದ್ದ ಇವರ ಮುಖವೆಲ್ಲಾ ಜಜ್ಜಿ ಹೋಗಿತ್ತು. ಹಲ್ಲುಗಳು ಮುರಿದು ಹೋಗಿದ್ದವು. ಬೆಳಿಗ್ಗೆ ಇವರಿಗೆ ಎಚ್ಚರವಾಗಿ ತಾನು ಎಲ್ಲಿ ಬಿದ್ದಿದ್ದೇನೆ ಎಂದು ಅರಿವಾಗುವಷ್ಟರಲ್ಲಿ ಊರವರಿಗೆಲ್ಲಾ ಸುದ್ದಿ ತಿಳಿದುಹೋಗಿತ್ತು. ಮಕ್ಕಳು ಅಪ್ಪ ಮನೆಗೆ ಬರುವುದನ್ನೇ ಕಾಯುತ್ತಿದ್ದರು. ಬಂದ ತಕ್ಷಣ ತರಾಟೆಗೆ ತೆಗೆದುಕೊಳ್ಳುವುದು ಅವರ ಉದ್ದೇಶ. ಆದರೆ ಅಪ್ಪನಿಗೆ ಆಗಲೇ ತನ್ನ ತಪ್ಪಿನ ಅರಿವಾಗಿತ್ತು. ಊರವರ ಕಣ್ಣಲ್ಲಿ ತಾನು ಸಣ್ಣವನಾಗಿಬಿಟ್ಟೆ ನನ್ನ ಹೆಂಡತಿ ಮಕ್ಕಳಿಗೆ ಇದರಿಂದ ಅವಮಾನವಾಗುತ್ತದೆ ಎಂದೆಲ್ಲಾ ಅನ್ನಿಸಿತೋ ಏನೋ? ಮನೆಗೆ ಹೋಗಲೇ ಇಲ್ಲ. ತನ್ನ ಬಳಿ ಬಂದವರ ಕಣ್ಣು ತಪ್ಪಿಸಿ ಮರೆಯಾಗಿಬಿಟ್ಟರು.
ಒಂದು ದಿನ ಕಳೆಯಿತು. ಮಕ್ಕಳಿಗೆ ಗಾಬರಿಯಾಗಿ ತಮಗೆ ತಿಳಿದ ನೆಂಟರಿಷ್ಟರ, ಸ್ನೇಹಿತರ ಹಾಗೂ ಅಪ್ಪ ಹೋಗುತ್ತಿದ್ದ ಜಾಗವನ್ನೆಲ್ಲಾ ಹುಡಕಲಾರಂಭಿಸಿದರು. ಸಂಜೆಯ ವೇಳೆಗೆ ಕೊಟ್ಟಿಗೆಯ ಕಡೆಯಿಂದ ಏನೋ ದುರ್ವಾಸನೆ ಬರುತ್ತಿದೆ ಎಂದು ಅವರ ಹೆಂಡತಿಗೆ ಮೊದಲು ಗೊತ್ತಾಯಿತು. ಕೊಟ್ಟಿಗೆ ಬಾಗಿಲು ತೆಗೆದೇ ಇತ್ತು. ವಾಸನೆಯ ಮೂಲ ಕೊಟ್ಟಿಗೆ ಅಟ್ಟ ಎಂಬುದು ಖಚಿತವಾಯಿತು. ಮನೆಯಲ್ಲಿದ್ದ ಸೊಸೆಯರಿಗೆ ತಿಳಿಸಿ, ಅಪ್ಪನನ್ನು ಹುಡುಕಿಕೊಂಡು ಹೋಗಿದ್ದ ಮಕ್ಕಳಿಗೆ ಪೋನ್ ಮಾಡಿಸಿ ಕರೆಸಿಕೊಂಡರು. ಮಕ್ಕಳು ಸ್ವಲ್ಪ ಭಯದಿಂದಲೇ ಅಕ್ಕಪಕ್ಕದವರ ಮನೆಯವರನ್ನು ಸೇರಿಸಿಕೊಂಡು ಕೊಟ್ಟಿಗೆಯ ಅಟ್ಟಕ್ಕೆ ಹತ್ತಿ ನೋಡಿದರೆ ಅಪ್ಪ ಸತ್ತು ಹೆಣವಾಗಿದ್ದ. ವಿಷದ ಬಾಟಲಿ ಹತ್ತಿರದಲ್ಲೇ ಬಿದ್ದಿತ್ತು!
ವಿಷ ಅವರನ್ನು ಒಂದೇ ಬಾರಿಗೆ ಕೊಂದುಹಾಕಿತ್ತು. ಆದರೆ ಕುಡಿತ ಅವರನ್ನು ಎಂದೋ ಬಲಿತೆಗೆದುಕೊಂಡುಬಿಟ್ಟಿತ್ತು!

[ಈ ಮೇಲಿನ ಘಟನೆ ನಡೆದಾಗ ನನ್ನ ತಂದೆ, ಹಿಂದೆ ನಡೆದ ಒಂದು ಘಟನೆಯನ್ನು ನನಗೆ ಹೇಳಿದರು. ಈ ಕುಡಿತದ ಕಾರಣವಾಗಿ ನನ್ನ ಹಳ್ಳಿಗಳಲ್ಲಿ ಅನಾಹುತಗಳಾದ ಇನ್ನೊಂದಿಷ್ಟು ಘಟನೆಗಳು ಮನಸ್ಸನ್ನು ಕೊರೆಯುತ್ತಿವೆ. ಅವುಗಳ ಬಗ್ಗೆಯೂ ಬರೆಯಬೇಕೆನ್ನಿಸುತ್ತಿದೆ. ಒಳಗಿನ ಒತ್ತಡ ಕೆಲಸ ಮಾಡಿದಾಗ, ಖಂಡಿತಾ ಬರೆಯುತ್ತೇನೆ!]
ಕುಡಿತದಿಂದ ಅನಾಹುತ ಸೃಷ್ಟಿಸಿದ ಇಬ್ಬರು ವ್ಯಕ್ತಿಗಳ ಬಗ್ಗೆ ಈಗಾಗಲೇ ಬರೆದಿದ್ದೇನೆ. ಅವುಗಳ ಲಿಂಕ್ :
ಶಾಂತಣ್ಣ ಸತ್ತು ಶಾಂತನಾದ!

ಥಣಾರಿಯ ಪ್ರಣಯ ಪ್ರಸಂಗ

No comments: