Thursday, March 31, 2011

ಶಾಂತಣ್ಣ ಸತ್ತು ಶಾಂತನಾದ!

ನಾನು ಮೂರನೇ ತರಗತಿಯಲ್ಲಿದ್ದಾಗಲಿಂದಲೂ ಈ ಶಾಂತಣ್ಣನನ್ನು ಬಲ್ಲೆ. ಊರಿನಲ್ಲಿ ಏನೇ ಕಾರ್ಯಕ್ರಮವಿರಲಿ, ಈತ ಹಾಜರಾಗುತ್ತಿದ್ದ. ಶ್ರಾವಣ ಮಾಸದಲ್ಲಿ ಕರೆದವರ ಮನೆಗೆ ಹೋಗಿ ಶನಿಮಹಾತ್ಮೆ ಕಥೆ ಓದುತ್ತಿದ್ದ. ಹೆಚ್ಚು ಬಾರಿ ಅವನು ಅಥವಾ ಜೊತೆಗೆ ಇನ್ನೊಬ್ಬರು ಇರುತ್ತಿದ್ದರು. ಎಲ್ಲೋ ಒಂದೆರಡು ಬಾರಿ ಏಳೆಂಟು ಜನರ ಗುಂಪು ಮಾಡಿಕೊಂಡು ಕಥೆ ಓದುವುದಕ್ಕೆ ಬಂದದ್ದನ್ನು ನೋಡಿದ್ದೇನೆ. ಅದಕ್ಕೇನೂ ಆತ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಊಟ, ತಿಂಡಿ, ಬೀಡಿಕಾಸು ಮಾತ್ರ. ಆದರೆ ಕರೆಸಿದ ಮನೆಯವರು ಕೊಟ್ಟರೆ ಬೇಡವೆನ್ನುತ್ತಿರಲಿಲ್ಲ.
ಆತ ಓದುತ್ತಿದ್ದ ಕಥೆಗಳಲ್ಲಿ ರಾಜಾ ವಿಕ್ರಮಾದಿತ್ಯ ಮತ್ತು ರಾಜಾ ಸತ್ಯವ್ರತ ಮಾತ್ರ ನನ್ನ ನೆನಪಿನಲ್ಲಿ ಉಳಿದಿವೆ. ಸ್ವಲ್ಪ ಹೆಣ್ಣಿನ ಧ್ವನಿಯಿದ್ದು ರಾಗವಾಗಿ ಕಥೆ ಓದುತ್ತಿದ್ದ. ಹಾಡುಗಳನ್ನು ದಮಡಿ ಬಡಿದುಕೊಂಡು ತಾಳಬದ್ಧವಾಗಿ ಹಾಡುತ್ತಿದ್ದ. ನಡುವೆ ಬರುತ್ತಿದ್ದ ಗದ್ಯವನ್ನೂ ಒಂದು ವಿಶಿಷ್ಟ ಲಯದಲ್ಲಿ ಹೇಳುತ್ತಿದ್ದ. ಗದ್ಯ ಕೊನೆಯಲ್ಲಿ 'ಹೇಳುತ್ತಿದ್ದಾರೆಂತೆನೀ...' ಎಂದು ದೀರ್ಘವಾಗಿ ರಾಗವೆಳೆಯುತ್ತಿದ್ದ. ಚಿಕ್ಕ ಹುಡುಗರಾಗಿದ್ದ ನಾವೆಲ್ಲರೂ ಅವನೊಟ್ಟಿಗೆ 'ಹೇಳುತ್ತಿದ್ದಾರೆಂತೆನೀ...' ಎಂದು ತಾರಕದಲ್ಲಿ ಕಿರುಚುತ್ತಿದ್ದೆವು.
ಅವನ ಈ ಶನಿಪ್ರಭಾವದ ಕಥೆಗಳಿಗಿಂತ, ನಡುವೆ ಆತ ಹೇಳುತ್ತಿದ್ದ ಉಪಕಥೆಗಳು ನನಗೆ ಬಹಳ ಇಷ್ಟವಾಗುತ್ತಿದ್ದವು. ಪ್ರತೀ ಕಥೆ ಹೇಳುವಾಗಲೂ, ಆ ಕಥೆಯಲ್ಲಿ ನಮ್ಮನ್ನೇ ಪಾತ್ರದಾರಿ ಮಾಡಿಕೊಳ್ಳುತ್ತಿದ್ದ. ಚಿಕ್ಕವನಾದ ನನ್ನನ್ನೇ ನಾಯಕನ ಪಾತ್ರದಲ್ಲಿ ಸೇರಿಸುತ್ತಿದ್ದ. ಈ ಉಪಕಥೆಗಳಲ್ಲಿ ಒಂದೆರಡು ಕಥೆಗಳು ಈಗಲೂ ನನ್ನ ಮನದಲ್ಲಿ ಅಚ್ಚಳಿಯದಂತೆ ನಿಂತುಬಿಟ್ಟಿವೆ. ಅವುಗಳನ್ನು ಮತ್ತೊಮ್ಮೆ ಯಾವಗಲಾದರೂ ಹೇಳುತ್ತೇನೆ.
ನಾವು ದೊಡ್ಡವರಾದಂತೆ ಈ ಕಥೆ ಕೇಳುವ ಹುಚ್ಚು ಕಡಿಮೆಯಾಯಿತೇ? ಅಥವಾ ಎಂಟನೇ ತರಗತಿಯಿಂದ ನನಗೊದಗಿ ಬಂದ ಹಾಸ್ಟೆಲ್ ಜೀವನದಲ್ಲಿ ನಿತ್ಯ ನನಗೆ ಸಿಗುತ್ತಿದ್ದ ಅತಿಮನರಂಜಕ ಘಟನೆಗಳಿಂದಾಗಿ ನಾನು ಇದರ ಬಗ್ಗೆ ಆಸಕ್ತಿ ಕಳೆದುಕೊಂಡೆನೇ, ಗೊತ್ತಾಗುತ್ತಿಲ್ಲ.
ಈ ಶಾಂತಣ್ಣ ಒಳ್ಳೆಯ ನಟನಾಗಿದ್ದ. ಊರಿನಲ್ಲಿ ಆಡುತ್ತಿದ್ದ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದ. ಕಲಾವತಿ ಕಲ್ಯಾಣ ಎಂಬ ಬಯಲುಸೀಮೆಯ ದೈತ್ಯಕುಣಿತದ ಯಕ್ಷಗಾನದಲ್ಲಿ ಕಲಾವತಿಯ ಪಾತ್ರ ಮಾಡಿದ್ದ. ಇನ್ನೊಮ್ಮೆ ರಾಮಾಯಣದಲ್ಲಿ ಸೀತೆ ಪಾತ್ರ ಮಾಡಿದ್ದ. ಒಮ್ಮೆ ಮಾತ್ರ ರಾಜಾ ವಿಕ್ರಮಾದಿತ್ಯ ನಾಟಕದಲ್ಲಿ ವಿಕ್ರಮಾದಿತ್ಯನ ಪಾತ್ರ ಮಾಡಿ ಎಲ್ಲರಿಂದಲೂ 'ಭೇಷ್, ಶಾಂತಣ್ಣ ಗಂಡು ಪಾತ್ರವನ್ನೂ ಮಾಡಬಲ್ಲ' ಎಂದು ಹೊಗಳಿಸಿಕೊಂಡಿದ್ದ.
ಹುಟ್ಟಿನಿಂದ ಕುಂಬಾರ ಕುಲಕ್ಕೆ ಸೇರಿದ್ದ ಶಾಂತಣ್ಣ ಮಡಕೆ ಮಾಡುವುದನ್ನು ನಾನೆಂದೂ ನೋಡಲಿಲ್ಲ. ಶಾಂತಣ್ಣ ಮಾತ್ರ ಏಕೆ? ಆ ಊರಿನಲ್ಲಿದ್ದ ಸುಮಾರು ಐವತ್ತು ಕುಂಬಾರ ಕುಟುಂಬಗಳಲ್ಲಿ ಮಡಕೆ ಮಾಡುತ್ತಿದ್ದುದು ಎರಡು ಕುಟುಂಬಗಳು ಮಾತ್ರ! ಉಳಿದವರೆಲ್ಲರಿಗೂ ಕೃಷಿಯೇ ಜೀವನಾಧಾರವಾಗಿತ್ತು. ಈ ಶಾಂತಣ್ಣನಿಗೂ ನಾಲ್ಕಾರು ಎಕರೆ ಹೊಲ ತೋಟ ಇತ್ತು. ತನ್ನ ಹೊಲದಲ್ಲಿ ಚೆನ್ನಾಗಿಯೇ ದುಡಿಮೆ ಮಾಡುತ್ತಿದ್ದ. ಊರೊಟ್ಟಿನ ಕೆಲಸಗಳಲ್ಲಿ ಎಂದೂ ಮುಂದೆ ಇರುತ್ತಿದ್ದ.
ಇಂತಹ ಶಾಂತಣ್ಣನ ಬದುಕು ಬದಲಾದುದು ಒಂದು ವಿಪರ್ಯಾಸ. ಬೇರೆ ಊರಿನ ಹಣವೊಂತರೊಬ್ಬರು, ಊರಿನಲ್ಲಿ ಸಾಮಿಲ್ಲು ತೆರೆಯಲು ಬಂದಾಗ. ಅವರು ಸೂಕ್ತವಾದ ಜಾಗ ಹುಡುಕುತ್ತಿದ್ದರು. ರಸ್ತೆಯ ಪಕ್ಕದಲ್ಲಿದ್ದ ಶಾಂತಣ್ಣನ ಒಂದು ಹೊಲ ಅತ್ಯಂತ ಸೂಕ್ತವಾಗಿ ಅವರಿಗೆ ಕಂಡಿತು. ಶಾಂತಣ್ಣನಿಗೆ ಅಷ್ಟೊತ್ತಿಗಾಗಲೇ ಹದಿನೈದು ಹದಿನಾರರ ಮಗನಿದ್ದ. ಆತ ಎಸ್ಸೆಸ್ಸೆಲ್ಸಿಗೆ ಮಣ್ಣು ಹೊತ್ತು ಹೊಲದಲ್ಲಿ ಅಪ್ಪನೊಂದಿಗೆ ದುಡಿಯುತ್ತಿದ್ದ. ಸಾಮಿಲ್ಲಿಗೆ ಬೇಕಾದ ಅರ್ಧ ಎಕರೆ ಜಮೀನು ಕೊಟ್ಟರೆ, ಆತ ಹುಟ್ಟಿನಿಂದ ಕಾಣದಷ್ಟು ದುಡ್ಡು, ಮತ್ತು ಒಬ್ಬರಿಗೆ ಕೆಲಸ ಕೊಡುವುದಾಗಿ ಬಂದ ಆಮಿಷವನ್ನು ಆತ ತಡೆಯದಾದ. ಮಗ ಹೊಲದಲ್ಲಿ ದುಡಿಯುವುದಾದರೆ ನಾನೇಕೆ ಸಾಮಿಲ್ಲಿನಲ್ಲಿ ಕಾವಲುಗಾರನಾಗಿ ಕೆಲಸ ಮಾಡಿಕೊಂಡು, ಅಲ್ಲಿಯೇ ನೆಲಸಿ ಸಂಪಾದನೆ ಮಾಡಬಾರದು. ಒಬ್ಬ ಮಗನಲ್ಲದೇ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿ ನೆಲೆ ಕಾಣಿಸಲು ಅದು ಅತ್ಯಂತ ಸುಲಭದ ಮಾರ್ಗ ಎಂದು ಆತನಿಗೆ ಅನ್ನಿಸಿರಬೇಕು. ಆತ ಒಪ್ಪಿದ.
ಆರೇ ತಿಂಗಳಿನಲ್ಲಿ ಅಲ್ಲಿ ಸಾಮಿಲ್ಲು ಪ್ರತಿಷ್ಠಾಪನೆಯಾಯಿತು. ಕಾವಲುಗಾರನಾಗಿ, ಕೆಲಸಗಾರನಾಗಿ, ಮ್ಯಾನೇಜರನಾಗಿ ಶಾಂತಣ್ಣ ಅಲ್ಲಿ ಪ್ರತಿಷ್ಠಾಪನೆಗೊಂಡ. ಸಾಮಿಲ್ಲಿನ ಯಜಮಾನ ಹಗಲೆಲ್ಲಾ ಅಲ್ಲಿದ್ದು ರಾತ್ರಿ ತನ್ನ ಊರಿಗೆ ಹೋಗುತ್ತಿದ್ದ. ಮೊದಲು ಡ್ರೈವರ್ ಬೇರೆಯೇ ಇದ್ದ. ಶಾಂತಣ್ಣ ನಿಧಾನವಾಗಿ ಆ ಕೆಲಸವನ್ನು ಕಲಿತಿದ್ದರಿಂದ ಸಾಮಿಲ್ಲಿನ ಡ್ರೈವರ್ ಕೆಲಸವೂ ಆತನ ಹೆಗಲಿಗೆ ಬಂತು. ಯಜಮಾನ ಎರಡು ಮೂರು ದಿನಗಳ ಕಾಲ ಈ ಕಡೆ ತಲೆ ಹಾಕದಿದ್ದರೂ ಶಾಂತಣ್ಣ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವಷ್ಟರ ಮಟ್ಟಿಗೆ ಬೆಳೆದುಬಿಟ್ಟ.
ಕೈಯಲ್ಲಿ ದುಡ್ಡು ಆಡಲಾರಂಭಿಸಿತು. ಬೀಡಿಯ ಬದಲು ಸಿಗರೇಟು ಬಂತು. ಆತನ ಮುರುಕಲು ಮನೆ ಒಳ್ಳೆಯ ಮರಮುಟ್ಟುಗಳಿಂದ ಶೃಂಗಾರವಾಯಿತು. ಅರ್ಧ ರೇಟಿಗೆ ಆತ ಕೊಡುತ್ತಿದ್ದ ಸಣ್ಣಪುಟ್ಟ ಮರಕ್ಕಾಗಿ ಸ್ನೇಹಿತರು ಹೆಚ್ಚಾದರು. ಶಾಂತಣ್ಣನ ಆಸೆ ಬೆಳೆಯುತ್ತಲೇ ಹೋಯಿತು. ಕೇವಲ ಆಸೆ ಬೆಳೆದಿದ್ದರೆ ಅಂತಹ ಪ್ರಮಾದವೇನೂ ಆಗುತ್ತಿರಲಿಲ್ಲ. ಒಂದು ದಿನ ಯಜಮಾನನಿಗೆ ಲಾಸ್ ಆಗಿ, ಅದಕ್ಕೆ ಶಾಂತಣ್ಣನೇ ಕಾರಣ ಎಂದು ಕೆಲಸದಿಂದ ಬಿಡಿಸಬಹುದಿತ್ತು, ಅಷ್ಟೆ. ಆದರೆ ಆದದ್ದು ಬೇರೆಯೇ!
ಸಾಮಿಲ್ಲಿನ ಬಳಿಯೇ ಜಮಾಯಿಸುತ್ತಿದ್ದ ಜನ, ದುರಾಸೆಗೆ ಬಿದ್ದು ಆತನಿಗೆ ಕುಡಿತದ ಹುಚ್ಚು ಹತ್ತಿಸಿಬಿಟ್ಟರು. ಮೊದಲು ಅವರೇ ಹಣ ಕೊಟ್ಟು ಕುಡಿಸುತ್ತಿದ್ದರು. ಒಮ್ಮೆ ಅದಕ್ಕೆ ದಾಸನಾದ ಶಾಂತಣ್ಣ ನಂತರ ತನ್ನ ದುಡ್ಡಿನಿಂದಲೇ ಎಲ್ಲರಿಗೂ ಕುಡಿಸಿ ತಾನೂ ಕುಡಿದು ತೂರಾಡುತ್ತಿದ್ದ. ಐದಾರು ವರ್ಷದಲ್ಲಿ ಮನೆ ಮಕ್ಕಳನ್ನು ಒಂದು ಹಂತಕ್ಕೆ ತಂದಿದ್ದ ಶಾಂತಣ್ಣ ಮುಂದಿನ ಮೂರೇ ವರ್ಷದಲ್ಲಿ ಊರಿನ ಅತ್ಯಂತ ದೊಡ್ಡ ಕುಡುಕನಾಗಿದ್ದ. ದಿನದ ಇಪ್ಪತ್ತನಾಲ್ಕು ಗಂಟೆಯೂ ಆತ ಅಮಲಿನಲ್ಲೇ ಇರುತ್ತಿದ್ದ. ಈ ಕುಡಿತ ಆತನನ್ನು ಜೀವಂತ ಶವ ಮಾಡಿಬಿಟ್ಟಿತು. ಆತ ಜೀವಂತವಾಗಿಯೇ ಒಣಗಿಸಿದ ಮನುಷ್ಯನಂತೆ ಕಾಣುತ್ತಿದ್ದ. ಎರಡು ಬೆರಳಿನ ಗಾತ್ರ ಆತನ ತೊಡೆ ತೋಳುಗಳಿದ್ದವು ಎಂದರೆ ಕುಡಿತ ಆತನ ಮೇಲೆ ಬೀರಿದ ಪರಿಣಾಮದ ಅರಿವು ನಿಮಗಾದೀತು!
ಆತನ ದುರದೃಷ್ಟಕ್ಕೆ ಸಾಮಿಲ್ಲು ಮುಚ್ಚಿಹೋಯಿತು. ಕೈಲ್ಲಿದ್ದ ದುಡ್ಡು ಕಾಸು ಖರ್ಚಾಗಿ ಹೋಯಿತು. ಕೊನೆಗೆ ಕಂಡಕಂಡವರಲ್ಲಿ ಕೈನೀಡಿ ಬೇಡಿ ಕುಡಿಯುವ ಹಂತಕ್ಕೆ ಇಳಿದುಬಿಟ್ಟ. ಕುಡಿತ ಆತನನ್ನು ಕೊಲ್ಲುತ್ತಿರುವುದರ ಜೊತೆಗೆ ಆತನ ನೈತಿಕತೆಯನ್ನೂ, ಆತ್ಮಸ್ಥೈರ್ಯವನ್ನೂ, ಆತನಲ್ಲಿದ್ದ ಕಲೆಯನ್ನೂ ಕೊಂದು ಹಾಕಿಬಿಟ್ಟಿತು.

ಹೀಗಿದ್ದ ಶಾಂತಣ್ಣನನ್ನು ಒಮ್ಮೆ ಮುಖಾಮುಖಿಯಾಗುವ ಪ್ರಸಂಗ ಮೂರು ತಿಂಗಳ ಹಿಂದೆ ನನಗೊದಗಿ ಬಂತು. ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಆತ ಬಂದ. ನಾನು ನಿಂತಿದ್ದ ಅಂಗಡಿಯ ಮಾಲೀಕ ಸೀನ ಉರುಫ್ ಶ್ರೀನಿವಾಸನ ಬಳಿ ಬಂದು ಸಿಗರೇಟು ಕೇಳಿದ. ಅಷ್ಟರಲ್ಲಿ ಆಗಲೇ ಆತ ಕುಡಿದು ತೂರಾಡುತ್ತಿದ್ದ. ಸೀನ ಮೊದಲು ನಿರಾಕರಿಸಿದರೂ ಕೊನೆಗೆ ಹೋಗಲಿ ಎಂದು ಒಂದು ಸಿಗರೇಟು ಕೊಟ್ಟ. ಅದಕ್ಕೆ ಬೆಂಕಿ ತಾಗಿಸಿ ಕೊಂಡು ಅಂಗಡಿಯ ಮುಂದೆ ಇದ್ದ ಹಾಸುಗಲ್ಲಿನ ಮೇಲೆ ತನ್ನ ಒಣಗಿದ ಕೈ ಕಾಲುಗಳನ್ನು ಬಿಟ್ಟುಕೊಂಡು ಕುಳಿತು ರಾಜ ಟೀವಿಯಲ್ಲಿ ಸಿಗರೇಟು ಸೇದಿದ. ಆ ಭಂಗಿಯಲ್ಲಿ ಆತನನ್ನು ಕಂಡು ಆತನ ವಿಕ್ರಮಾದಿತ್ಯ ಪಾರ್ಟು ನೆನಪಾಯಿತು. ನನ್ನ ಮೊಬೈಲ್ ಕ್ಯಾಮೆರಾದಿಮದ ಪೋಟೊ ತೆಗೆದುಕೊಂಡೆ, ಆದರೆ ಆತನ ಭಂಗಿ ಬದಲಾಗಿತ್ತು!
ನನಗೆ ಅಯ್ಯೋ ಅನ್ನಿಸಿ, ಅವನಿಗೊಂದು ಬಿಸ್ಕೆಟ್ ಪ್ಯಾಕ್ ಕೊಡಿಸುವ ಯೋಚನೆ ಬಂತು. ಸೀನನಿಗೆ ಕೇಳಿದೆ. ಅದಕ್ಕೆ ಆತ, 'ನೀವು ಬಿಸ್ಕೆಟ್ ಕೊಟ್ಟರೆ, ಅದರಲ್ಲೇ ನಿಮಗೆ ಹೊಡೆದರೂ ಆಶ್ಚರ್ಯವಿಲ್ಲ. ಇಲ್ಲಾ ಬಾಯಿಗೆ ಬಂದಂತೆ ಬಯ್ಯುತ್ತಾನೆ. ಒಂದು ಪಕ್ಷ ಮನಸ್ಸು ಬದಲಾಯಿಸಿ ಅದನ್ನು ತೆಗೆದುಕೊಂಡರೂ, ಮತ್ತೆ ನನ್ನ ಅಂಗಡಿಗೇ ಅದನ್ನು ತಂದು, ಅದರ ಬದಲಿಗೆ ಸಿಗರೇಟು ಪಡೆದು ಸೇದುತ್ತಾನೆ. ಸುಮ್ಮನೆ ಯಾಕೆ ಕೊಡುತ್ತೀರ?' ಎಂದು ಬಿಟ್ಟ. ನನಗೆ ಸ್ವಲ್ಪ ಆತಂಕವಾದರೂ, ಏನಾದರಾಗಲಿ, ನನ್ನ ಬಾಲ್ಯದಲ್ಲಿ ನನಗೆ ಹೀರೋ ಆಗಿ ಕಂಡಾತನಿಗೆ ಒಂದು ಬಿಸ್ಕೆಟ್ ಪ್ಯಾಕ್ ಕೊಡಲೇಬೇಕು ಎನ್ನಿಸಿ, ಅಂಗಡಿಯಿಂದ ಪಡೆದು, ಶಾಂತಣ್ಣನಿಗೆ ಕೊಡುತ್ತಾ 'ಇದನ್ನು ತಿಂದು ನೀರು ಕುಡಿ, ನಡೆದಾಡಲು ಶಕ್ತಿಯಾದರೂ ಬರುತ್ತದೆ.' ಎಂದೆ.
ಬಗ್ಗಿಸಿದ ತಲೆಯನ್ನು ನಿಧಾನವಾಗಿ ಮೇಲೆತ್ತಿ ನನ್ನನ್ನು ದೃಷ್ಟಿಯಿಟ್ಟು ನೋಡಿದ. ಕಣ್ಣುಗಳು ಕೆಂಡದುಂಡೆಗಳಾಗಿದ್ದವು. ಚರ್ಮ ಒಣಗಿಹೋಗಿತ್ತು. ಇನ್ನೇನು ಆತ ನನ್ನನ್ನು ಬಯ್ಯಬಹುದು, ಇಲ್ಲಾ ಬಿಸ್ಕೆಟ್ ಪ್ಯಾಕ್ ಕಿತ್ತು ಎಸೆಯಬಹುದು ಎಂಬ ಆಲೋಚನೆಯಲ್ಲಿ ನಾನು ಮುಳುಗಿದ್ದರೂ ಆತನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಆತನಿಗೆ ಏನನ್ನಿಸಿತೋ, ಒಮ್ಮೆಲೆ ಬಿಸ್ಕೆಟ್ ಪ್ಯಾಕ್ ಕಿತ್ತುಕೊಂಡ. 'ಓಹೋ ರಾಜಕುಮಾರ, ನೀನು ರಾಜಕುಮಾರ. ನನಗೆ ಗೊತ್ತು. ನಾನೇ ನಿನ್ನನ್ನು ರಾಜಕುಮಾರ ಮಾಡಿದ್ದೆ. ಏಳುಸಮುದ್ರದ ಆಚೆಯ ರಾಜಕುಮಾರಿಯ ನಿನಗೆ ಮದುವೆ ಮಾಡಿಸಿದ್ದೆ. ರಾಜಕುಮಾರ ನೀನು ಚೆನ್ನಾಗಿರು, ಚೆನ್ನಾಗಿರು' ಎಂದು ಏನೇನೂ ಹೇಳುತ್ತಾ, ನಿಧಾನವಾಗಿ ಬಿಸ್ಕೆಟ್ ಪ್ಯಾಕ್ ತೆರೆದು ತಿನ್ನತೊಡಗಿದ. ಅರ್ಧ ಅವನ ಬಾಯಿಗೆ ಅರ್ಧ ನೆಲಕ್ಕೆ ಬಿಸ್ಕೆಟ್ ಆಹಾರವಾಗತೊಡಗಿತು!
ಸೀನ ಆಶ್ಚರ್ಯದಿಂದ ನೋಡಿದ. ಏನೋ ಹೇಳಲು ಅಥವಾ ಕೇಳಲು ಆತ ಕಾತರನಾಗಿದ್ದ. ನಾನು ಸುಮ್ಮನಿರುವಂತೆ ಕಣ್ಸನ್ನೆ ಮಾಡಿದೆ. ಆತ ಸುಮ್ಮನಾದ. ನನ್ನ ಬಸ್ಸು ಬಂತು. ನಾನು ಅದನ್ನೇರಿ ಹೊರಟೆ.
ಮೊನ್ನೆ ಊರಿಗೆ ಹೋಗಿದ್ದಾಗ, ಶಾಂತಣ್ಣ ಸತ್ತು ಹೋಗಿದ್ದ ಸುದ್ದಿ ತಿಳಿಯಿತು. ನಾನು ಹೋದ ದಿನವೇ ಆತನ ತಿಥಿ! ನಾನು ಸಂಜೆ ವಾಪಸ್ಸು ಬರಲು ಬಸ್ ನಿಲ್ದಾಣಕ್ಕೆ ಬರುವಾಗ ದಾರಿಯಲ್ಲಿ ಒಬ್ಬ (ಆತ ನಮ್ಮ ಪಕ್ಕದ ತೋಟದವನು) ಕುಡಿದು ರೋಧಿಸುತ್ತಿದ್ದ. 'ನನ್ನ ಗೆಳೆಯ, ನನ್ನ ಮಿತ್ರ ಶಾಂತಣ್ಣ ಸತ್ತೋಗಿಬಿಟ್ಟ, ನಾವೇನು ಇಲ್ಲಿ ಶಾಶ್ವತವಾ? ಅವನ ಹಿಂದೆ ನಾವೂ ಹೋಗುವುದೇ' ಎಂದು ವಿಕಾರವಾಗಿ ರೋಧಿಸುತ್ತಾ ಹೇಳುತ್ತಿದ್ದ. ಆಶ್ಚರ್ಯವೆಂದರೆ ಆತ ನನ್ನನ್ನೂ ಸೇರಿಸಿಕೊಂಡು 'ನಾವು ನಾವು' ಎಂದು ಹೇಳುತ್ತಿದ್ದ!
ಶಾಂತಣ್ಣನೇನೋ ಸತ್ತು ಶಾಂತವಾಗಿದ್ದ! ಆದರೆ ಇಂತಹ ಕುಡುಕರು ಆತನನ್ನು ಹಿಂಬಾಲಿಸಲು ಮಾತ್ರ ಪೈಪೋಟಿ ಮಾಡುತ್ತಲೇ ಇರುತ್ತಾರೆ ಎನ್ನಿಸಿ, ನನ್ನ ನಡಿಗೆಯನ್ನು ಚುರುಕುಗೊಗಿಸಿದೆ.

3 comments:

bhushan mnn said...

Dr Satyannaa,adbhutavaada nirupane,nammurinalli idda kelavara nenepu banthu,saadhyavaadare bareyuva hambala kuda baruvanthe maadiddiri,thanks

Unknown said...

Dear Sir, Super story ,,, human life is horrible it can change any time,,,keep it up

Sandesh ,, come with nice story may god bless you,

AntharangadaMaathugalu said...

ಸತ್ಯ ಸಾರ್...
ನಿರೂಪಣೆ ಚೆನ್ನಾಗಿದೆ. ಈ ತರಹದ ಅನೇಕ ವ್ಯಕ್ತಿ/ವ್ಯಕ್ತಿತ್ವ ನಮ್ಮೆಲ್ಲರ ಬದುಕಿನಲ್ಲೂ ಬಂದಿವೆ. ಇಂತಹ ಬರಹಗಳನ್ನು ಓದಿದಾಗ ನಮ್ಮ ಮನಸ್ಸುಗಳು ಒಮ್ಮೆ ಹಿಂದಿರುಗಿ ನೋಡುವುದು ನಿಶ್ಚಯ...

ಶ್ಯಾಮಲ