Friday, April 29, 2011

'ನನ್ನ ತೇಜಸ್ವಿ'ಗೆ ಅನಾಮಿಕರ ಕಾಟ!


ಕೆಂಡಸಂಪಿಗೆಯಲ್ಲಿ ’ನನ್ನ ತೇಜಸ್ವಿ’ಯ ಗುಂಗಿನಲ್ಲಿ: ಸಿಂಧು ಬರೆದ ಲಾವಂಚ ಓದಿದೆ. ಒಂದು ಕೃತಿಯ ಓದಿಗೆ ತತ್ಕ್ಷಣ ನೀಡುವ ಪ್ರತಿಕ್ರಿಯೆಯಾಗಿದ್ದು ಸಹಜವಾಗಿಯೇ ಇದೆ. ನಾನೂ ’ನನ್ನ ತೇಜಸ್ವಿಯ’ನ್ನು ಕೇವಲ ಒಂದೂವರೆ ದಿನದಲ್ಲಿ ಓದಿ ಮುಗಿಸಿದೆ. ಅದರ ಬಗ್ಗೆ ನನಗನ್ನಿಸಿದ್ದನ್ನು ಬರೆಯಬೇಕಂಬ ಒಳಗಿನ ಒತ್ತಡ, ಹೊರಗಿನ ಬದುಕಿನ ಒತ್ತಡಗಳಿಂದ ಹಾಗೆಯೇ ಉಳಿದುಬಿಟ್ಟಿದೆ. ಮುಂದೆ ಎಂದಾದರೊಮ್ಮೆ ಬರೆದೇನು!
ಸಿಂಧು ಅವರ ಅಭಿಪ್ರಾಯಸ್ವರೂಪದ ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ತಮ್ಮ ಸ್ವಂತ ಹೆಸರನ್ನೂ ಹೇಳಿಕೊಳ್ಳಲು ಇಚ್ಛಿಸದ ಆದರೆ ನಿರ‍್ಮೋಹಿ(!)ಯಾಗಿರುವವರು (ಅವರ ಹೆಸರಿನ ಬಗ್ಗೆ ಅವರಿಗೆ ತುಂಬಾ ಮೋಹವಿರಬೇಕು. ಅದಕ್ಕೇ ಅದನ್ನು ಯಾರಿಗೂ ಹೇಳುತ್ತಿಲ ಅನ್ನಿಸುತ್ತದೆ.) ‘ಅವರ ಬರಹಗಳೆಲ್ಲವೂ ಸತ್ವಭರಿತವೇನಲ್ಲ. ಅವರ ಸಾಹಿತ್ಯ ಕೃಷಿಯಲ್ಲಿ ಜೊಳ್ಳು ಬರಹಗಳೂ ಇವೆ. ಅವನ್ನು ನಿರ್ಲಕ್ಷಿಸಿ ಸದಾ ಅವರ ಬರಹವನ್ನು ಹೊಗಳಿ ಬರೆಯುವುದು ಸರಿಯೆ?’ ಎಂದು ಪ್ರತಿಕ್ರಿಯಿಸಿದ್ದಾರೆ. ತಮ್ಮ ಹೆಸರನ್ನು ಹೇಳಿಕೊಳ್ಳುವ ನೇರವಂತಿಕೆಯನ್ನು ಪ್ರದರ್ಶಿಸದ ಶ್ರೀಯುತರು ಇನ್ನೊಬ್ಬರಿಂದ ಏಕೆ ನೇರ ಬರಹಗಳನ್ನು ವಿಮರ್ಶೆಯನ್ನು ನಿರೀಕ್ಷಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ. ಅನಾಮಿಕರಾಗಿ ಗಾಳಿಸುದ್ದಿ ಹಬ್ಬಿಸುವಂಥ ಕಾಮೆಂಟ್ ಹಾಕುವುದು, ಒಬ್ಬರನ್ನು ಹೊಗಳಿಯೋ ತೆಗಳಿಯೋ ಬರೆಯುವುದು, ಒಂದು ರೀತಿಯಲ್ಲಿ ಇವರನ್ನು ವಿಕೃತ ಸಂತೋಷಿಗಳು ಎನ್ನಬಹುದು. ಹಿಂದೊಮ್ಮೆ ಅನಾಮಿಕ ಕಾಮೆಂಟಿಗರನ್ನು ಕತ್ತಲೆ ಸಾಮ್ರಾಜ್ಯದ ಬೆತ್ತಲೆ ಚಕ್ರವರ್ತಿಗಳು ಎಂದು ಕರೆದಿದ್ದೆ. ತಾವು ಕತ್ತಲೆಯಲ್ಲಿ ನಿಂತು, ಬೇರೆಯವರನ್ನು ಬೆಳಕಿನಲ್ಲಿ ಬೆತ್ತಲಾಗಿಸುವ ಈ ಚಟ ಆನ್ ಲೈನ್ ಸಾಹಿತ್ಯ ಚಟುವಟಿಕೆಗೆ ಹತ್ತಿದ ಶಾಪ! ಅನಾಮಿಕರಾಗಿದ್ದುಕೊಂಡು,  ಮೌಲ್ಯಯುತ ಬರಹಗಳಿಂದ ಕ್ರಿಯಾಶೀಲರಾಗಿರುವ, ಮಿತ್ರರೂ ಇದ್ದಾರೆ. ಅವರನ್ನು ಅಭಿನಂದಿಸೋಣ.
ಅದು ಒತ್ತಟ್ಟಿಗಿರಲಿ. ಅಷ್ಟಕ್ಕೂ ಸಿಂಧು ಅವರು ಇಲ್ಲಿ ತೇಜಸ್ವಿಯವರ ಸಾಹಿತ್ಯದ ವಿಮರ್ಶೆಗೆ ಇಳಿದಿಲ್ಲ ಎಂಬುದು ಸ್ಪಷ್ಟವಾಗಿಯೇ ಇದೆ. ಶ್ರೀಮತಿ ರಾಜೇಶ್ವರಿಯವರ ’ನನ್ನ ತೇಜಸ್ವಿ’ ಕೃತಿಯ ಓದಿನ ರಸಾನುಭೂತಿಂಇನ್ನು ಸಿಂದು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದು ಅವರ ಪ್ರಮಾಣಿಕ ಅನಿಸಿಕೆ. ‘ನನ್ನ ತೇಜಸ್ವಿ’ ಕೃತಿಯೂ ಕೂಡ ತೇಜಸ್ವಿಯವರ ಸಾಹಿತ್ಯದ ವಿಮರ್ಶೆಗೆ ಹೊರಟ ಕೃತಿಯಲ್ಲ. ಸಾಹಿತ್ಯಕ್ಕಿಂತಲೂ ಬದುಕನ್ನು ಹೆಚ್ಚು ಪ್ರೀತಿಸುತ್ತಿದ್ದ ತೇಜಸ್ವಿಯವರ ಇನ್ನೊಂದು ಮುಖ ಆ ಕೃತಿಯಲ್ಲಿ ಕಂಡರಿಸಲ್ಪಟ್ಟಿದೆ. ಸಾಹಿತಿಯಾಗಿ ನಮಗೆ ತೇಜಸ್ವಿ ಎಷ್ಟು ಮುಖ್ಯವೋ ಅವರು ಬದುಕೂ ಮುಖ್ಯ. ತೇಜಸ್ವಿಯವರ ಬದುಕಿನ ನೂರಾರು ಕ್ಷಣಗಳನ್ನು ಒಂದು ರೀತಿಯ ಸ್ಲೈಡ್ ಶೋ ಮೂಲಕ ನಮಗೆ ತೋರಿಸಿರುವ ಪ್ರಯತ್ನ. ಸ್ಲೈಡ್ ಶೋ ನಡೆಯುವಾಗ ನಮ್ಮ ಅನುಭಕ್ಕೆ ಎಷ್ಟು ದಕ್ಕುತ್ತದೋ ಅಷ್ಟೆ. ಹೆಚ್ಚಿನ ಅನುಭವ ಬೇಕೆಂದರೆ, ಮತ್ತೆ ಹಿಂದಿನ ಸ್ಲೈಡಿಗೆ ಹೋಗಬೇಕು. ಅಲ್ಲಿಯೂ ದಕ್ಕದಿದ್ದರೆ, ಬೇರೆಡೆ ಹುಡುಕಾಟ ಮಾಡಬೇಕು. ಈ ಹುಡುಕಾಟವೇ ಬದುಕು!
ಈ ಕೃತಿ ತೇಜಸ್ವಿಯವರನ್ನು ಹೆಚ್ಚು ಹೆಚ್ಚು ನಮ್ಮ ಹತ್ತಿರಕ್ಕೆ ತಂದು ನಿಲ್ಲಿಸಿದೆ. ‘ಅಣ್ಣನ ನೆನಪು’ ’ಮಗಳು ಕಂಡ ಕುವೆಂಪು’ ಬರುವವರೆಗೂ ಕುವೆಂಪು ಅವರ ಬಗ್ಗೆ ಇದ್ದ ಮಿಥ್‌ಗಳು ಎಷ್ಟು! ಆದರೆ ಆ ಕೃತಿಗಳನ್ನು ಓದಿದ ನಂತರ, ಅದುವರೆವೆಗೂ ಯಾವುದೋ ಲೋಕದವರಾಗಿದ್ದ ಕುವೆಂಪು ನಮಗೆ ಹೆಚ್ಚು ಮಾನವೀಯವಾಗಿ ಕಂಡಿದ್ದಾರೆ. ಅಂತಹುದೇ ಒಂದು ಕೃತಿ ನನ್ನ ತೇಜಸ್ವಿ. ಹಾಗೆ ನೋಡಿದರೆ ಇಲ್ಲಿ ಕುವೆಂಪು ಅವರ ವಿಚಾರವೂ ಬರುತ್ತದೆ. ತೇಜಸ್ವಿ ಮತ್ತು ತಾರಿಣಿಯವರಿಗೆ ಕುಂವೆಂಪು ಕಂಡಿದ್ದಕ್ಕಿಂತ ಭಿನ್ನವಾಗಿ ರಾಜೇಶ್ವರಿಯವರಿಗೆ ಕಂಡಿದ್ದಾರೆ. ಈ ಕೃತಿಯ ಓದಿನ ನಂತರ ಕುವೆಂಪು ನಮಗೆ ಇನ್ನಷ್ಟು ಹತ್ತಿರವಾಗುತ್ತಾರೆ. ಇಷ್ಟು ನಮ್ಮದಾಗಬೇಕೆ ಹೊರತು ಇಲ್ಲಿ ಕುವೆಂಪು ಅವರ ಸಾಹಿತ್ಯದ ವಿಮರ್ಶೆಯನ್ನು ಅಪೇಕ್ಷಿಸುವುದು ಅನುಚಿತವೆಂದು ಮಾತ್ರ ಹೇಳಬಹುದು. ಅಷ್ಟಕ್ಕೂ ತೆಗಳಿ ಬರೆಯುವುದನ್ನೇ ವಿಮರ್ಶೆ ಎಂದು ಪರಿಭಾವಿಸುವ ಮನಸ್ಥಿತಿಯ ಬಗ್ಗೆಯೇ ನನಗೆ ಗುಮಾನಿಯಿದೆ.
ಬೇರೊಬ್ಬರಿಗೆ ಇಷ್ಟವಾಗುವಂತೆ, ಸಿಂಧು ಅಥವಾ ಬೇರಾವುದೇ ಬರಹಗಾರ ಬರೆಯಬೇಕು, ಅದು ಕೆಂಡಸಂಪಿಗೆಯಲ್ಲೇ ಪ್ರಕವಾಗಬೇಕು ಎನ್ನುವಂತೆ ’ಡಿಮ್ಯಾಂಡ್’ ಮಾಡುವುದು ಎಷ್ಟು ಸರಿ? ಒಬ್ಬರ ಕೃತಿಯ ಓದಿನ ಅನುಭವವನ್ನು ಹಂಚಿಕೊಳ್ಳುತ್ತಿರುವ, ಕೃತಿಯನ್ನು ಪರಿಚಯ ಮಾಡಿಕೊಡುತ್ತಿರುವ ಲೇಖನದಲ್ಲಿ, ಕೃತಿಯಲ್ಲಿ ಕೇಂದ್ರಬಿಂದುವಾಗಿರುವ ವ್ಯಕ್ತಿಯ ಸಾಹಿತ್ಯದ ಬಗ್ಗೆ ವಿಮರ್ಶೆ ಬರಬೇಕು ಎಂದು ಬಯಸುವುದು ಎಷ್ಟು ಸರಿ? ನಿರ್ಮೋಹಿಗಳು ನಿರ್ಮೋಹಿಗಳಾಗಿ ಯೋಚಿಸಲಿ.
ಎಡ್ವರ‍್ಡ್ ಬುಲ್ಲೂ ಎಂಬ ಮೀಮಾಂಸಕಾರ ಪ್ರತಿಪಾದಿಸಿರುವಂತೆ ಒಂದು ಕೃತಿಯನ್ನು ಆಸ್ವಾದಿಸುವಾಗ ಓದುಗ, ಕೃತಿಯಿಂದ ಒಂದು ಆರೋಗ್ಯಕರ ಮಾನಸಿಕ ಅಂತರವನ್ನು (ಸೈಕಿಕಲ್ ಡಿಸ್ಟೆನ್ಸ್) ಕಾಪಾಡಿಕೊಳ್ಳಬೇಕಾಗುತ್ತದೆ. ಈ ಅಂತರವನ್ನು ಒಂದು ಕೃತಿಯನ್ನು ಮೊದಲಬಾರಿಗೆ ಓದುವಾಗ ಏಕಾಏಕಿ ಸಾಧಿಸಲು ಸಾಧ್ಯವಿಲ್ಲ. ಒಂದು ಪಕ್ಷ ನಿರ್ಮೋಹಿಯವರ ಅಭಿಪ್ರಾಯದಂತೆ ಲೇಖಕಿ ಕೃತಿಯನ್ನು ’ಅಂಡರ್ ಡಿಸ್ಟೆನ್ಸ್’ನಲ್ಲೇ ನಿಂತು ನೋಡಿದ್ದಾರೆ ಎಂದುಕೊಳ್ಳುವ. ಕೃತಿಯ ನಡುವೆ ಆರೋಗ್ಯಕರ ‘ಮಾನಸಿಕ ಅಂತರ’ವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವಿರುವ ನಿರ್ಮೋಹಿಯವರೇ ಏಕೆ ತೇಜಸ್ವಿಯವರ ಸಾಹಿತ್ಯವನ್ನು ಕುರಿತಂತೆ ವಿಮರ್ಶಾ ಗ್ರಂಥವನ್ನು ಬರೆಯಬಾರದು. ಅದರಲ್ಲಿ ತೇಜಸ್ವಿಯವರ ಸಾಹಿತ್ಯದ ಜೊಳ್ಳು ಗಟ್ಟಿಗಳನ್ನು ಬೇರ್ಪಡಿಸಿ ನಮಗೂ ತೋರಿಸಬಾರದು? ಆದರೆ ಒಂದು ಮಾತ್ರ ನಿಜ. ಸಿದ್ಧ ವಿಮರ್ಶೆಯ ಚೌಕಟ್ಟಿನಲ್ಲಿ ತೇಜಸ್ವಿಯ ಸಾಹಿತ್ಯವನ್ನು ಇಟ್ಟ ತಕ್ಷಣ ನಿಮ್ಮ ಉದ್ದೇಶದ ಶೇಕಡ ಎಪ್ಪತ್ತೈದು ಭಾಗ ನೀವು ಅನುತ್ತೀರ್ಣವಾದಂತೆಯೇ! ಇದು, ತೇಜಸ್ವಿಯವರ ಸಾಹಿತ್ಯವನ್ನು ಕುರಿತಂತೆ ಹಲವಾರು ವಿಚಾರ ಸಂಕಿರಣದಲ್ಲಿ ಭಾಗವಹಿಸಿರುವ ನನ್ನ ಅನುಭವ.
ಇನ್ನೊಂದು ಪ್ರತಿಕ್ರಿಯೆ: "ಕಡುಗಪ್ಪು ರಾತ್ರಿಯಲ್ಲಿ ಬಿಸಿಯೂಟ ಮುಗಿಸಿ, ಕಿಟಕಿಯಾಚೆಗೆ ನೀಲಿಯೆದೆಯಲ್ಲಿ ನಕ್ಷತ್ರ ನೋಡುತ್ತಾ" ಕಡುಗಪ್ಪು ರಾತ್ರಿಯಲ್ಲಿ ನೀಲಿಬಣ್ಣ ಕಾಣಲು ಸಾಧ್ಯವೇ ಎಂಬದು.
ನಿರ್ಮೋಹಿಯವರನ್ನು ಬೆಂಬಲಿಸುವ ಕಡುಮೋಹಿಯವರು ತಮ್ಮ ವಾದದ ಸಮರ್ಥನೆಗೆ ಬಳಸಿರುವ ಸಾಲುಗಳನ್ನು ಗಮನಿಸಿ. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಗುಣ ದೋಷಗಳ ವಿಚಾರ ಬರುತ್ತದೆ. ದೋಷವೂ ಕೂಡ ಒಮ್ಮೊಮ್ಮೆ ಅಲಂಕಾರವಾಗಿರುತ್ತದೆ ಎಂಬ ಮಾತೂ ಬರುತ್ತದೆ. ಇದು ಸಮರ್ಥನೆಗೆಂದು ಹೇಳುತ್ತಿರುವುದಿಲ್ಲ. ಅವರು ಬಳಸಿರುವ ವಾಕ್ಯದ ಇಂದು ಮುಂದು ನನಗೆ ಗೊತ್ತಿಲ್ಲದಿರುವುದರಿಂದ ಆ ವಾಕ್ಯವನ್ನಷ್ಟೇ ಇಟ್ಟುಕೊಂಡು ನನ್ನ ಓದಿನ ಅರಿವಿನಲ್ಲಿ ಒಂದೆರಡು ಮಾತುಗಳನ್ನು ಬರೆಯಲಿಚ್ಚಿಸುತ್ತೇನೆ.
ಟಿ.ಎಸ್.ಎಲಿಯಟ್ ಅಭಿಪ್ರಾಯದಂತೆ ಒಂದು ಒಳ್ಳೆಯ ಕಾವ್ಯವನ್ನು ಓದಿದಾಗ, ಅದು ಅರ್ಥವಾಗುವ ಮುಂಚೆಯೇ ಓದುಗನಿಗೆ ರಸಾನುಭವ ಆಗಿಬಿಡುತ್ತದೆ. ಟಿ.ಎಸ್. ಎಲಿಯಟ್ಟನ ಕಾವ್ಯವನ್ನು ಅಷ್ಟಾಗಿ ಮೆಚ್ಚದಿದ್ದ ಕುವೆಂಪು ಅವರೂ ಸಹ ಎಲಿಯಟ್ಟನ ಕಾವ್ಯಮೀಮಾಂಸೆಯ ತತ್ವವನ್ನು ಒಪ್ಪಿಕೊಂಡಿದ್ದರು. ಡಾ.ಪ್ರಭುಶಂಕರರು ಕುವೆಂಪು ಅವರ ಮಾರ್ಗದರ್ಶನದಲ್ಲಿ ’ಕನ್ನಡದಲ್ಲಿ ಭಾವಗೀತೆಗಳು’ ಎಂಬ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾಗ, ’ಮಲ್ಲಿಗೆ ಹೂವು ಬಿರಿಯುವ ಸದ್ದು ಕೇಳಿಸುತ್ತದೆ’ ಎನ್ನುವ ಅರ್ಥದಲ್ಲಿ ಬರುವ ಭಾವಗೀತೆಯೊಂದರ ಸಾಲನ್ನು ಕುರಿತು ಇದು ಹೇಗೆ ಸಾಧ್ಯ. ಇದು ತೀರಾ ಅಭೌತಿಕ ಅಲ್ಲವೆ ಎಂದು ಕೇಳಿದ್ದರಂತೆ. ಆಗ ಕುವೆಂಪು ಅವರು ‘ಖಂಡಿತಾ ಸಾಧ್ಯವಿದೆ. ಪ್ರತಿಭಾವಂತನಾದ ಕವಿ ಆ ಸದ್ದನ್ನು ಆಲಿಸಬಲ್ಲ; ಆದರೆ ಅದು ಹೊರಕಿವಿಯಿಂದಲ್ಲ; ಒಳಕಿವಿಯಿಂದ’ ಎಂಬ ಅರ್ಥದಲ್ಲಿ ಮಾತನಾಡುತ್ತಾರೆ.
ಬೇಂದ್ರೆಯವರ ಪ್ರಸಿದ್ಧ ’ಬೆಳಗು’ ಕವಿತೆಯಲ್ಲಿ ’ಗಿಡಗಂಟೆಯಾ ಕೊರಳೊಳಗಿಂದ ಹಕ್ಕಿಗಳ ಹಾಡು’ ಎಂಬ ಸಾಲು ಬರುತ್ತದೆ. ಮೇಲ್ನೋಟಕ್ಕೆ ಇದು ಸಾಧ್ಯವೇ ಎನ್ನಿಸುತ್ತದೆ. ಆದರೆ ಒಮ್ಮೆ ಯೋಚಿಸಿ. ಎಷ್ಟೋ ಬಾರಿ ಹಕ್ಕಿಯ ಉಲಿ ನಮಗೆ ಕೇಳಿಸುತ್ತದೆಯಾದರೂ ಹಕ್ಕಿ ನಮಗೆ ಕಾಣಿಸುವುದಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಮರಗಿಡಗಳ ಎಲೆಗಳು ನಮಗೆ ಕಾಣಿಸುತ್ತದೆಯೇ ಹೊರತು ಹಕ್ಕಿ ಕಾಣಿಸುವುದಿಲ್ಲ. ಆದರೆ ಹಾಡು ಕೇಳಿಸುತ್ತದೆ. ಆಗ ಅದು ಪ್ರತಿಭಾಸಂಪನ್ನನಾದ ಕವಿಗೆ ಮರಗಿಡಗಳೇ ಹಾಡುತ್ತಿರುವಂತೆ ಭಾಸವಾಗುತ್ತದೆ ಅಲ್ಲವೆ? ಹಾಗೆಯೇ ನೋಡುವ ಅಲ್ಲಲ್ಲ, ಕಾಣುವ ಕಣ್ಣಿದ್ದರೆ ರಾತ್ರಿಯ ವೇಳೆಯೂ ಕಡುಕಪ್ಪು ಕತ್ತಲಲ್ಲೂ ’ನಿಲಿಯೆದೆಯ ನಕ್ಷತ್ರಗ’ಳು ಕಾಣಬಹುದು! ಆದರೆ ನನಗೆ ಆಶ್ಚರ್ಯವಾಗುವುದು, ’ನನ್ನ ತೇಜಸ್ವಿ’ ಕೃತಿಯಲ್ಲಿ, ಮತ್ತು ಅದರ ಓದಿನ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿರುವ ಲೇಖನದಲ್ಲಿ ಈ ಸಾಹಿತ್ಯ ವಿಮರ್ಶೆ,  ಮೀಮಾಂಸೆ ಎಲ್ಲಾ ಬೇಕು ಎನ್ನುವ ಹಠ ಏಕೆ ಎಂಬುದು!
ಸಾಹಿತ್ಯ ಹೆಚ್ಚೋ ಬದುಕು ಹೆಚ್ಚೋ ಎಂಬ ಪ್ರಶ್ನೆಯೇ ಒಂದು ಹಂತದವರೆಗೆ ಅಸಂಬದ್ಧವೆನ್ನಿಸುತ್ತದೆ. ಆದರೆ ಪ್ರಶ್ನೆ ಎದುರಾದಾಗ ಬದುಕು ಹೆಚ್ಚು ಎಂಬುದು ನನ್ನ ಅಭಿಪ್ರಾಯ. ತೇಜಸ್ವಿ ಸಾಹಿತ್ಯ ದೊಡ್ಡದೋ ಬದುಕು ದೊಡ್ಡದೋ, ಅವರ ಫೋಟೋಗ್ರಫಿ ಉತ್ಕೃಷ್ಟವೋ ಸಾಹಿತ್ಯ ಉತ್ಕೃಷ್ಟವೋ ಇತ್ಯಾದಿ ಪ್ರಶ್ನೆಗಳೇ ಅಸಂಬದ್ಧ. ಅವರ ಸಾಹಿತ್ಯದಂತೆ ಅವರ ಬದುಕೂ ನನ್ನ ಮಟ್ಟಿಗಂತೂ ಸಾಕಷ್ಟು ಪರಿಣಾಮ ಬೀರಿದೆ. ಆದ್ದರಿಂದ ಅವರ ಸಾಹಿತ್ಯದಲ್ಲಿ ಬರುವ ಒಂದು ಸಾಲು ಅಥವಾ ಒಂದು ಪುಟ ಅಥವಾ ಒಂದು ಇಡೀ ಪುಸ್ತಕವೇ ಅಪ್ರಸ್ತುತವಾದರೆ ನನಗೇನೂ ಅನ್ನಿಸುವುದಿಲ್ಲ! ಆದರೂ ನನ್ನ ಪಾಲಿಗೆ ’ಅರಿವಿನ ಗುರು’ವಾಗಿಯೇ ತೇಜಸ್ವಿ ಉಳಿಯುತ್ತಾರೆ. ನಮ್ಮ ಅರಿವಿನ ದಿಗಂತಗಳನ್ನು ವಿಸ್ತರಿಸಿ, ಚಿಂತಿಸುವುದನ್ನು ಕಲಿಸಿದ ತೇಜಸ್ವಿ ನನಗೆ ಮುಖ್ಯವಾಗುವುದು ಹೀಗೆ! ’ನನ್ನ ತೇಜಸ್ವಿ’ ಕೃತಿ ರಚನೆಯಾಗುವವರೆಗೂ ರಾಜೇಶ್ವರಿಯವರ ತೇಜಸ್ವಿಯಾಗಿದ್ದರು. ಈಗ ನನ್ನ ತೇಜಸ್ವಿಯೂ ಆಗಿದ್ದಾರೆ. ಕೃತಿಯೋದಿದ ಪ್ರತಿಯೊಬ್ಬ ಸಹೃದಯನಿಗೂ ತೇಜಸ್ವಿ ತನ್ನವನಾಗುತ್ತಲೇ ಹೋಗುತ್ತಾರೆ. ಇದು ಈ ಕೃತಿಯ ವಿಶೇಷ. ಸಾಹಿತಿಗಳ ಸಾಹಿತ್ಯವನ್ನು ನಾವು ಓದಿಕೊಳ್ಳಬಹುದು. ಆದರೆ ಅವರ ಬದುಕು? ಅದು ನಮಗೆ ಮುಖ್ಯವಾದಾಗಲೆಲ್ಲಾ ’ನನ್ನ ತೇಜಸ್ವಿ’ಯಂಥಹ ಕೃತಿಗಳ ಅಗತ್ಯತೆ ಎದ್ದು ಕಾಣುತ್ತದೆ. ಅದಕ್ಕಾಗಿ ಶ್ರೀಮತಿ ರಾಜೇಶ್ವರಿಯವರಿಗೆ ಅಭಿನಂದನೆಗಳು ಸಲ್ಲುತ್ತವೆ.
ಆ ಕೃತಿಯನ್ನು ನಾನು ಓದಿ ಮುಗಿಸಿದಾಗ ನನಗನ್ನಿಸಿದ್ದನ್ನು ಪುನರಾವರ್ತನೆಯಾದರೂ ಇಲ್ಲಿ ಮತ್ತೊಮ್ಮೆ ಹೇಳುತ್ತೇನೆ. ತೇಜಸ್ವಿ ಹುಡಕಾಟದಲ್ಲಿದ್ದಾಗ, ರಾಜೇಶ್ವರಿಯವರೂ ಹಡುಕಾಟದಲ್ಲಿರುತ್ತಿದ್ದರು. ತೇಜಸ್ವಿ ಕಂಡಿದ್ದನ್ನು ತಾವೂ ಕಾಣುತ್ತಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ, ಆ ಕ್ಷಣದ ತೇಜಸ್ವಿಯವರನ್ನು ಕಾಣುತ್ತಿದ್ದರು. ತೇಜಸ್ವಿ ಹಕ್ಕಿಗಳ ಭಾವನೆಗಳನ್ನು ಗ್ರಹಿಸುತ್ತಿದ್ದರೆ, ರಾಜೇಶ್ವರಿಯವರು ಅದರ ಜೊತೆಗೆ ತೇಜಸ್ವಿಯವರ ಭಾವನೆಗಳನ್ನೂ ಗ್ರಹಿಸುತ್ತಿದ್ದರು. ಅವೆಲ್ಲವುಗಳನ್ನು ಪುಸ್ತಕದಲ್ಲಿ ತುಂಬಾ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ. ತೇಜಸ್ವಿಯವರು ರಾಜೇಶ್ವರಿಯವರಿಗೆ ಬರೆದ ಪತ್ರಗಳನ್ನೂ ಪುಸ್ತಕದಲ್ಲಿ ಸಂಕಲಿಸಲಾಗಿದೆ. ಅವು ಆ ಕಾಲದ ಸಾಮಾಜಿಕ ಸಾಹಿತ್ಯಕ ವಿಚಾರಗಳನ್ನು ಒಳಗೊಂಡಿರುವ ವಿಶಿಷ್ಟ ದಾಖಲೆಗಳು!

2 comments:

ಮಲ್ಲಿಕಾರ್ಜುನ.ಡಿ.ಜಿ. said...

ಅನೇಕರ ಕ್ರಿಯಾಶೀಲತೆಗೆ ಸ್ಫೂರ್ತಿಯಾದ ತೇಜಸ್ವಿಯವರ ಬಗ್ಗೆ ಅರಿಯುವ ಕುತೂಹಲವಿತ್ತು. "ನನ್ನ ತೇಜಸ್ವಿ" ಪುಸ್ತಕವನ್ನು ಆ ದೃಷ್ಟಿಯಿಂದ ಓದಲು ಪ್ರಾರಂಭಿಸಿದೆ. ಆದರೆ ಓದುತ್ತಾ ಓದುತ್ತಾ ನನ್ನೊಳಗಿನ ತೇಜಸ್ವಿಯನ್ನು ಕಂಡುಕೊಳ್ಳತೊಡಗಿದೆ!
ತೇಜಸ್ವಿಯವರ ಬದುಕು, ಕೃಷಿ, ಸಿತಾರ್, ಪೇಂಟಿಂಗ್, ಫೋಟೋಗ್ರಫಿ, ಬರವಣಿಗೆ ಎಲ್ಲವೂ ಬೇರೆ ಬೇರೆ ಎಂದನಿಸಲಿಲ್ಲ. ಎಲ್ಲವೂ ಒಂದೇ ಎಂದನಿಸಿದೆ!
ರಾಜೇಶ್ವರಿ ಮೇಡಂ ಎಲ್ಲಿಯೂ ಉತ್ಪ್ರೇಕ್ಷೆ ಮಾಡದೆ, ತೇಜಸ್ವಿಯವರನ್ನು ಹೊಗಳದೆ ತಮ್ಮ ಜೊತೆಯಲ್ಲಿ ಸಾಗಿ ಬಂದ (ಬಾಳ) ಪಯಣಿಗನನ್ನು ಕಂಡುಕೊಂಡ ಬಗೆಯಲ್ಲಿ ಬರೆದಿದ್ದಾರೆ. ಬರವಣಿಗೆಯನ್ನು ಓದಿ ಈ ಸುಪ್ತ ಪ್ರತಿಭೆಯನ್ನು ಕೇವಲ ತೇಜಸ್ವಿಯವರು ಮಾತ್ರ ಗುರುತಿಸಿದ್ದರಾ ಎಂಬ ಅನುಮಾನ ಕಾಡಿತು!

ಕೊಂಕು ನುಡಿಗಳಿಂದ ಕನ್ನಡಿಗರಿಗೆ ಹೇಗೆ ಲುಕ್ಸಾನಾಗುತ್ತದೆ ಎಂಬುದಕ್ಕೆ ಉದಾಹರಣೆ:
ಮಿನೇನಿಯಂ ಸರಣಿಯನ್ನು ತೇಜಸ್ವಿಯವರು ಇದ್ದಕ್ಕಿದ್ದಂತೆ ನಿಲ್ಲಿಸಲು ಕಾರಣ ಯಾರೋ ಕೊಂಕು ಮಾತು ಬರೆದರೆಂದು. ಇಲ್ಲದಿದ್ದರೆ ಇನ್ನಷ್ಟು ಮಿಲೇನಿಯಂ ಸರ್ಣಿಯ ಪುಸ್ತಕಗಳು ನಮ್ಮದಾಗುತ್ತಿದ್ದವು.

Gubbachchi Sathish said...

ಸರ್, ಈ ಪುಸ್ತಕ ನಾನಿನ್ನೂ ಓದಿಲ್ಲ. ನಮ್ಮ ಗೆಳೆಯರ ಗುಂಪಿನಲ್ಲಿ ಈ ಪುಸ್ತಕದ ಬಗ್ಗೆ ಬಹಳಷ್ಟು ಕುತೂಹಲ ಇದಾಗಲೇ ಮೂಡಿದೆ. ಎಂಥವರೂ ಕದಲುವಂತೆ ಕೆಲವರು ಮಾಡಿಬಿಡುತ್ತಾರೆ. ಅವರನ್ನು ಅವರ ಪಾಡಿಗೆ ಬಿಡುವುದು ಒಳಿತು. ನಿಮ್ಮ ಲೇಖನದಲ್ಲಿ ಓದನ್ನು ಗ್ರಹಿಸುವದರ ಮಾರ್ಗವಿದೆ.