Thursday, May 26, 2011

ರಾಜಭವನದಲ್ಲಿ ರಾಷ್ಟ್ರಕವಿ : ರಾಜ್ಯಪಾಲರು ಕಂಡಂತೆ ಕುವೆಂಪು-ಕರ್ನಾಟಕ

ಇಂದು ಬೆಳಿಗ್ಗೆ ರಾಜಭವನದಲ್ಲಿ ’ರಾಷ್ಟ್ರಕವಿ ಕುವೆಂಪು: ಎ ಡೈಲಾಗ್’ ಎಂಬ ಕಾರ್ಯಕ್ರಮ ನಡೆಯಿತು. ಸಾ-ಮುದ್ರ ಫೌಂಡೇಷನ್, ಬೆಂಗಳೂರು ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಈ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಸ್ವತಃ ರಾಜ್ಯಪಾಲರ ಅಪೇಕ್ಷೆಯಂತೆ ಆಯೋಜಿಸಲಾಗಿತ್ತು. ಶ್ರೀಯುತರುಗಳಾದ ಜೀವಿ, ಚೌಟ, ಎಸ್.ಆರ್.ನಾಯಕ್, ಜಸ್ಟೀಸ್ ಸದಾಶಿವ, ಜಸ್ಟೀಸ್ ಜಗನ್ನಾಥಶೆಟ್ಟಿ, ಸಿದ್ಧಲಿಂಗಯ್ಯ ಮೊದಲಾದ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಯುತ H.R. ಭಾರದ್ವಾಜ್ ಅವರು ಸಿದ್ಧಪಡಿಸಿದ್ದ ಭಾಷಣವನ್ನು ಪಕ್ಕಕ್ಕಿಟ್ಟು, ಸುಮಾರು ನಲವತ್ತೈದು ನಿಮಿಷಗಳ ಕಾಲ ಕುವೆಂಪು, ಅವರ ಸಾಹಿತ್ಯ, ವೇದ-ಉಪನಿಷತ್ತುಗಳ ಮಹತ್ವ, ಭಾರತೀಯ ಸಂಸ್ಕೃತಿ, ಕನ್ನಡ ನಾಡಿನ ಹೆಚ್ಚುಗಾರಿಕೆ, ಬಾಹುಬಲಿ, ತುಲಸೀದಾಸ್, ಗಾಂಧಿ, ವಿಶ್ವೇಶ್ವರಯ್ಯ ಮೊದಲಾದವರ ಜೀವನದರ್ಶನವನ್ನು ಕುರಿತು ಮಾತನಾಡಿದರು. ರಾಜ್ಯಪಾಲರಾಗಿ ಬಂದ ಹೊಸತರಲ್ಲಿ ’ನಾಡಗೀತೆ’ಯ ಬಗ್ಗೆ ಕೇಳಿ ಆಶ್ಚರ್ಯಪಟ್ಟಿದ್ದ ಶ್ರೀಯುತರು ನ್ಯಾಯಾಧೀಶರೊಬ್ಬರು ಕೇಳಿಸಿದ ಸಂಪೂರ್ಣ ನಾಡಗೀತೆ ಮತ್ತು ಅವರ ವಿವರಣೆ ಕೇಳಿ ಏನೋ ಒಂದು ಅನಿರ್ವಚನೀಯ ಸಂತೋಷವನ್ನು ಅನುಭವಿಸಿದ್ದರಂತೆ. ಅದರಲ್ಲಿ ಬರುವ ’ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸೀಕ ಜೈನುರುದ್ಯಾನ’ ಹಾಗೂ ’ಕಪಿಲ ಪತಂಜಲ ಗೌತಮ ಜಿನನುತ’ ಮೊದಲಾದ ಸಾಲುಗಳನ್ನು ಕೇಳಿ ಇದನ್ನು ಬರೆದವರ ಮನೋಶ್ರೀಮಂತಿಕೆಯ ಬಗ್ಗೆ ಯೋಚಿಸಿದ್ದರಂತೆ. ’ಭಾರತಜನನಿಯ ತನುಜಾತೆ’ ಎಂಬ ಭಾವದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ರಾಜ್ಯಪಾಲರು, ಕುವೆಂಪು ಅವರ ಬಗ್ಗೆ ಮೊದಲು ತಿಳಿದ ಸಂದರ್ಭವನ್ನು ನೆನಪಿಸಿಕೊಂಡರು. ಮೇಲುಕೋಟೆಯ ಪ್ರವಾಸಿಮಂದಿರದಲ್ಲಿದ್ದ ಕುವೆಂಪು ಅವರ ಪೋಟೋವನ್ನು ತೋರಿಸಿ, ಅಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ’ಯಾರಿದು? ಈ ಜಂಟ್ಲಮನ್’ ಎಂದು ಕೇಳಿದ್ದರಂತೆ. ಅಂದು ಅವರು ತಿಳಿಸಿದ ವಿಚಾರಗಳಿಂದ ಪ್ರೇರಿತರಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಬೇಟಿಕೊಟ್ಟಾಗ ಇನ್ನೂ ಹೆಚ್ಚಿನ ವಿವರಗಳನ್ನು ಕೇಳಿ ಕುವೆಂಪು ಅವರ ಬಗ್ಗೆ ಬಂದಿದ್ದ ಇಂಗ್ಲಿಷ್ ಪುಸ್ತಕಗಳನ್ನು ಓದಿದರಂತೆ. ನಂತರ ಕುವೆಂಪು ಅವರ ಕೆಲವು ಅನುವಾದಿತ ಕೃತಿಗಳನ್ನು ಓದಿ ಪ್ರಭಾವಿತರಾದೆ ಎಂದು ನೆನಪಿಸಿಕೊಂಡರು. ಗಾಂಧಿ ಪ್ರಣೀತ ವೈಷ್ಣವ ಭಕ್ತಿ ಹೇಗೆ ವಿಶ್ವಾತ್ಮಕವಾದುದು ಹಾಗೆಯೇ ಕುವೆಂಪು ಪ್ರತಿಪಾದಿಸಿದ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ ಕೂಡ ವಿಶ್ವಾತ್ಮಕವಾದುದು ಎಂದರು. ತಲಸಿರಾಮಾಯಣ ಮತ್ತು ಕುವೆಂಪು ರಾಮಾಯಣಗಳಲ್ಲಿ ಪ್ರತಿಪಾದಿತವಾಗಿರುವ ಜ್ಯಾತ್ಯಾತೀತ ಆಶಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂದಿನ ಸಂದರ್ಭದಲ್ಲಿ ಮನುಷ್ಯ ಎಷ್ಟೇ ರಿಲಿಜಿಯಸ್ ಆಗಿದ್ದರೂ ಜ್ಯಾತ್ಯಾತೀತನಾಗಿರಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ಹೋಮರ್, ವ್ಯಾಸ, ವಾಲ್ಮೀಕಿ, ಮಿಲ್ಟನ್, ಫಿರ್ದೂಸ್, ತುಲಸೀದಾಸ್ ಮುಂತಾದವರ ಪರಂಪರೆಯಲ್ಲಿ ಕುವೆಂಪು ಮತ್ತು ಅವರ ದರ್ಶನವನ್ನು ತುಲನಾತ್ಮಕವಾಗಿ ನೋಡಿದರು. 
ಭಾರದ್ವಾಜ್ ಅವರ ವಾಗ್ವೈಖರಿ ನನಗೆ ದಂಗುಬಡಿಸಿತ್ತು. ಅವರ ರಾಜಕೀಯ ಜಂಜಾಟಗಳೇ ಏನೇ ಇರಲಿ, ಕರ್ನಾಟಕದ ರಾಜ್ಯಪಾಲರಾಗಿ ಅವರು ಕರ್ನಾಟಕವನ್ನು ಅರ್ಥಮಾಡಿಕೊಂಡಿರುವ, ಮಾಡಿಕೊಳ್ಳುತ್ತಿರುವ ರೀತಿ ಮಾತ್ರ ಅನನ್ಯ. ಮೊತ್ತಮೊದಲ ಬಾರಿಗೆ ರಾಷ್ಟ್ರಗೀತೆಯಲ್ಲಿ ದ್ರಾವಿಡ ಪದವನ್ನು ಕೇಳಿದ್ದಾಗ ಇದೇನಿದು? ಎಂದು ಗೊಂದಲಕ್ಕೊಳಗಾಗಿದ್ದರಂತೆ. ಆದರೆ ಇಂದು, ಇಡೀ ಭಾರತಕ್ಕೆ ದಕ್ಷಿಣಭಾರತದ ಕೊಡುಗೆಯ ಬಗ್ಗೆ, ದಕ್ಷಿಣ ಭಾರತದ ಸಂಸ್ಕೃತಿಯ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತನಾಡಿದರು. ಭಾರತೀಯತೆಗೆ ದಕ್ಷಿಣಭಾರತ, ವಿಶೇಷವಾಗಿ ಕರ್ನಾಟಕ ನೀಡಿದ ಕೊಡುಗೆ ಅನನ್ಯವಾದುದು ಎಂದರು. ಗುಲ್ಬರ್ಗ ಸುತ್ತಮುತ್ತಲಿನ ಅಲೆಮಾರಿ ಜನಾಂಗದಿಂದ ಹಿಡಿದು, ಬಹುಭಾಷಾ ಹಾಗೂ ಬಹುಧರ್ಮೀಯ ನೆಲೆಗಳಾಗಿರುವ ಕರಾವಳಿ ಪ್ರದೇಶದ ಅನನ್ಯತೆಯ ಬಗ್ಗೆ, ಶ್ರವಣಬೆಳಗೊಳದ ಬಾಹುಬಲಿಯ ಬಗ್ಗೆ ಅವರು ತನ್ಮಯವಾಗಿ ಮಾತನಾಡುತ್ತಿದ್ದರೆ ಇಡೀ ಸಭಾಂಗಣ ದಂಗಬಡಿದಂತೆ ನಿಶ್ಯಬ್ಧವಾಗಿ ಕುಳಿತು ಕೇಳಿಸಿಕೊಳ್ಳುತ್ತಿತ್ತು. ಅಲ್ಲಿ ನೆರೆದಿದ್ದ ವಿವಿಧ ಕ್ಷೇತ್ರಗಳ, ವಿವಿಧ ವಿಷಯಗಳ ತಜ್ಞರುಗಳನ್ನು ಉದ್ದೇಶಿಸಿ, ಈ ರಾಜಭವನ ನಿಮ್ಮದು, ನಾನು ಬಳಸುತ್ತಿರುವುದು ಕೇವಲ ಒಂದು ಕೊಠಡಿ. ನಿಮ್ಮ ಇಂತಹ ರಚನಾತ್ಮಕ ಕಾರ್ಯಕ್ರಮಕ್ಕೆ ರಾಜಭವನದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದಾಗ ದೊಡ್ಡ ಚಪ್ಪಾಳೆಯೊಂದಿಗೆ ಜನ ಹರ್ಷ ವ್ಯಕ್ತಪಡಿಸಿದರು. ಕುವೆಂಪು ಅವರ ಬಗ್ಗೆ ಒಂದು ಒಳ್ಳೆಯ ಇಂಗ್ಲಿಷ್ ಪುಸ್ತಕ ತರಲು ಬೇಕಾದ ಸಹಕಾರವನ್ನು ನೀಡುವುದಾಗಿಯೂ ಘೊಷಿಸಿದರು. ವಿಶ್ವೇಶ್ವರಯ್ಯ, ಕುವೆಂಪು ಮುಂತಾದವರಿಂದ ಕರ್ನಾಟಕ ಅಂದು, ಇಂದು ಮುಂದೆಯೂ ಒಂದು ಒಳ್ಳೆಯ ಪ್ರಗತಿಪರ ರಾಜ್ಯ ಎಂದು ಹೇಳಿ ತಮ್ಮ ಮಾತು ಮುಗಿಸಿದರು. 
ಬಹುಶಃ, ಅಲ್ಲಿದ್ದ ಎಲ್ಲ ಕನ್ನಡಿಗರಿಗಿಂತ ವಿಶೇಷವಾಗಿ ಒಂದು ಆರೋಗ್ಯಕರ ಅಂತರದಲ್ಲಿ ನಿಂತು ಕುವೆಂಪು ಅವರನ್ನು, ಕರ್ನಾಟಕವನ್ನು ಈ ರಾಜ್ಯಪಾಲರು ಅರ್ಥಮಾಡಿಕೊಂಡಿದ್ದಾರೆ ಅನ್ನಿಸಿತು. ಸುದೀರ್ಘ ಸಾರ್ವಜನಿಕ ಜೀವನದ ಅನುಭವ, ಹಿಂದಿ ಮತ್ತು ಇಂಗ್ಲಿಷ್ ಸಾಹಿತ್ಯ, (ಅವರು ಸ್ನಾತಕೋತ್ತರ ಪದವಿ ಮೊದಲು ಪಡೆದಿದ್ದು ಸಾಹಿತ್ಯದಲ್ಲಿ!) ತತ್ವಶಾಸ್ತ್ರದ ಅಧ್ಯಯನ ಅವರಿಗೆ ಇಂತಹ ಅವಕಾಶವನ್ನು ಒದಗಿಸಿಕೊಟ್ಟಿದೆ ಎನ್ನಬಹುದು.
ರಾಜ್ಯಪಾಲರು ಮಾತನಾಡುವ ಮೊದಲು ಪ್ರೊ.ಕೆ.ಇ.ರಾಧಾಕೃಷ್ಣ ಮತ್ತು ಹಂಪನಾ ಅವರು ಕ್ರಮವಾಗಿ, ’ರಾಮಾಯಣದರ್ಶನಂ’ ಮಹಾಕಾವ್ಯದ ದರ್ಶನ ಮತ್ತು ಕುವೆಂಪು, ವ್ಯಕ್ತಿ, ಕವಿ ಮತ್ತು ದಾರ್ಶನಿಕ ಎಂಬ ವಿಷಯಗಳ ಬಗ್ಗೆ ಅಧ್ಯಯನಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದರು. ಮಹಾರಾಜಾ ಕಾಲೇಜಿನಲ್ಲಿ ಕೇವಲ ಕುವೆಂಪು ಅವರನ್ನು ನೋಡಲು ಕಾದು ನಿಂತಿರುತ್ತಿದ್ದ ವಿದ್ಯಾರ್ಥಿಗಳ ಬಗ್ಗೆ ಹೇಳಿದ ಹಂಪನಾ, ಕುವೆಂಪು ಅವರ ದರ್ಶನವನ್ನು ತೆರೆದಿಟ್ಟರು. ಪ್ರೊ.ಕೆ.ಇ.ಆರ್. ಅವರು ರಾಮಾಯಣದರ್ಶನಂ ಕಾವ್ಯದ ಮಲೆನಾಡಿನ ಚಿತ್ರಣ, ಕೊನೆಯ ಅಧ್ಯಾಯದ ದರ್ಶನ, ಆದಿ ಅನಾದಿ ತತ್ವದ ಬಗ್ಗೆ ಮಾತನಾಡಿದರು. 
ರಾಜ್ಯಪಾಲರ ಭಾಷಣದ ನಂತರ ಮಾತನಾಡಿದ ಪ್ರೊ. ಮನುಚಕ್ರವರ್ತಿ ಅವರು ಕುವೆಂಪು ಅವರ ಸೌಂದರ್ಯ ಮತ್ತು ತತ್ವಮೀಮಾಂಸೆಯ ಬಗ್ಗೆ ವಿದ್ವತ್‌ಪೂರ್ಣ ಪ್ರಬಂಧವನ್ನು ಮಂಡಿಸಿದರು. ಡಾ. ಚಿದಾನಂದಗೌಡರು ಪಂಚಮಂತ್ರ-ಸಪ್ತಸೂತ್ರ ಎಂಬ ವಿಷಯದ ಮೇಲೆ ಸೋದಾಹರಣವಾಗಿ ಮಾತನಾಡಿದರು. ಒಂದೊಂದು ಮಂತ್ರಕ್ಕೂ ಅವರು ಹೇಳುತ್ತಿದ್ದ ಪುಟ್ಟ ಪುಟ್ಟ ಕಥೆಗಳು ಮನಸೆಳೆಯುವಂತಿದ್ದವು. ಕುವೆಂಪು ಪ್ರತಿಷ್ಠಾನದ ಶ್ರೀ ಕಡಿದಾಳ್ ಪ್ರಕಾಶ್ ಅವರು ವಂದನಾರ್ಪಣೆ ಸಲ್ಲಿಸಿ, ರಾಜ್ಯಪಾಲರನ್ನು ಕುಪ್ಪಳಿಗೆ ಆಹ್ವಾನಿಸಿದರು.
ಬೆಳಿಗ್ಗೆ ಹತ್ತೂವರೆಗೆ ಆರಂಭವಾಗಿ ನಿಗದಿತ ಒಂದು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಮುಗಿಯಿತು. ಕಾರ್ಯಕ್ರಮ ಮುಗಿದ ಮೇಲೂ, ರಾಜ್ಯಪಾಲರು ಸುಮಾರು ಅರ್ಧಗಂಟೆಗಳ ಕಾಲ ಎಲ್ಲರೊಡನೆ (ಊಟದ ಸಮಯದಲ್ಲೂ) ಮಾತನಾಡುತ್ತಾ ನಿಂತಿದ್ದರು. ಔತಣಕೂಟದ ಆಯೋಜಕರು ಸ್ವತಃ ರಾಜ್ಯಪಾಲರೇ ಆಗಿದ್ದರು!
ಕೊನೆಯ ಮಾತು: ಊಟವಾದ ಮೇಲೆ ಶ್ರೀಮತಿ ತಾರಿಣಿಯವರ ಹತ್ತಿರ ಮಾತನಾಡುತ್ತಾ ನಿಂತಿದ್ದಾಗ, ಒಬ್ಬ ವಯಸ್ಸಾದ ಮಹಿಳೆ ಮತ್ತು ಇನ್ನೊಬ್ಬರು (ಅವರ ಮಗನಿರಬಹುದು) ಬಂದು ಮಾತನಾಡಿಸಿದರು. ಆ ಮಹಿಳೆ ತಾರಿಣಿಯವರ ಕೈಹಿಡಿದು, ಕುವೆಂಪು ಅವರು ನಮಗೆ ದೇವರ ಸಮಾನ. ಅವರ ಬಗೆಗಿನ ನಮ್ಮ ಭಾವನೆ, ಪ್ರೀತಿ ಇವೆಲ್ಲವೂ ಅನಿರ್ವಚನೀಯ ಎಂದು ಭಾವುಕತೆಯಿಂದ ಹೇಳುತ್ತಿದ್ದರು. ನಿಮ್ಮಲ್ಲಿಯೇ ಅವರನ್ನು ಕಾಣುತ್ತಿದ್ದೇವೆ ಎಂದು ಅವರ ಮಗನೂ ಧ್ವನಿಗೂಡಿಸಿದರು. 
ಆಗ ನನಗನ್ನಿಸಿದ್ದು: ಕುವೆಂಪು ಅವರು ತಮ್ಮ ಸಂಪರ್ಕಕ್ಕೆ ಬಂದವರ ಮೇಲೆ ಪ್ರಭಾವ ಬೀರಿದಂತೆ, ನೇರವಾಗಿ ಅವರ ಸಂಪರ್ಕಕ್ಕೆ ಬರದವರ ಮೇಲೂ ಸಾಕಷ್ಟು ಪ್ರಭಾವ ಬೀರಿದ್ದಾರೆ. ’ರಾಮನಿಗಿಂತ ರಾಮತ್ವ ದೊಡ್ಡದು’ ಎಂಬ ಅವರ ಮಾತಿನಂತೆ, ಕುವೆಂಪು ಅವರಿಗಿಂತ ಅವರ ವ್ಯಕ್ತಿತ್ವ ಬಹುದೊಡ್ಡದು! ಕುವೆಂಪು ಇಂದು ವ್ಯಕ್ತಿಯಾಗಿ ನಮ್ಮೊಂದಿಗೆ ಇಲ್ಲದಿರಬಹುದು; ಆದರೆ ಶಕ್ತಿಯಾಗಿ ನಮ್ಮೊಂದಿಗಿದ್ದಾರೆ!

1 comment:

Manjunatha Kollegala said...

ಹೆಚ್.ಆರ್.ಭಾರದ್ವಾಜರ ಭಾಷಣದ ವಿವರ, ಅವರ ಸಂವೇದನಾಶೀಲತೆಗಳಬಗ್ಗೆ ಓದುತ್ತಿದ್ದಂತೆ ಅವರ ರಾಜಕೀಯ ಜಂಜಡಗಳು, ರಾಜ್ಯಪಾಲರ ಪದವಿ ಹೇಗೆ ಕೀಳುಮಟ್ಟದ ರಾಜಕೀಯದಲ್ಲಿ ಹೂತುಹೋಗಿದೆ ಇತ್ಯಾದಿ ಆತಂಕದ ವಿವರಗಳೂ ಮನದಲ್ಲಿ ಹಾದುಹೋಗಿ ಒಂದುರೀತಿ ವಿಚಿತ್ರ ಭಾವವುಂಟಾಯಿತು. ಇಂಥಾ ಸಂವೇದನಶೀಲರು, ವಿಚಾರಪರರು ಹೊಲಸು ರಾಜಕೀಯದಲ್ಲಿರಬಾರದು; ಇದ್ದರೂ ಅದು ಅವರನ್ನು ಅಮರಿಕೊಳ್ಳಲು ಬಿಡಬಾರದು. ಅದೇನೇ ಇರಲಿ ಭಾರದ್ವಾಜರ ಅಧ್ಯಯನದ ಆಳ, ಸಂವೇದನಾಶೀಲತೆಗಳು ಮನ ಮೆಚ್ಚುವಂಥದ್ದು. ಅವರ ಈ ಗುಣಗಳು ಕರ್ನಾಟಕವನ್ನು ಮುನ್ನೆಡೆಸಲಿ.

ರಾಜ್ಯಪಾಲರ ಇನ್ನೊಂದು ಒಳ್ಳೆಯ ಮಗ್ಗುಲನ್ನು ತೆರೆದಿಟ್ಟ ನಿಮಗೆ ಧನ್ಯವಾದ.