Monday, May 30, 2011

ನರ್ತಿಸುತಾಯೇ ಅಜಜಾಯೇ ಮಮ ಮಸ್ತಕ ನೀರೇಜದಲಿ!

ಸರಸ್ವತಿಯನ್ನು ಕುರಿತು ನಾನು ಪಿಹೆಚ್.ಡಿ. ಅಧ್ಯಯನ ಮಾಡುತ್ತಿದ್ದಾಗ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಂಬಂಧಪಟ್ಟ ಕವಿತೆಗಳ ಹುಡುಕಾಟ ನಡೆಸುತ್ತಿದ್ದೆ. ಡಿ.ವಿ.ಜಿ., ಬೇಂದ್ರೆ, ಕುವೆಂಪು, ಬಿ.ಎಂ.ಶ್ರೀ., ಪು.ತಿ.ನ., ಜಿ.ಎಸ್.ಎಸ್. ಮೊದಲಾದ ಕವಿಗಳೆಲ್ಲರೂ ಸರಸ್ವತಿಯ ಬಗ್ಗೆ ಬರೆದಿದ್ದಾರೆ. ನಮ್ಮ ಮೇಷ್ಟ್ರು ಕೆ.ಆರ್.ಜಿ. ಆಗ ನನಗೆ ಕುವೆಂಪು ಅವರ ’ನಾಟ್ಯ ಸರಸ್ವತಿಗೆ’ ಎಂಬ ಕವಿತೆಯ ಬಗ್ಗೆ ಹೇಳಿ, ಅದನ್ನು ಪರಿಶೀಲಿಸುವಂತೆ ಸೂಚಿಸಿದರು. ಅದು ನಾಟ್ಯಸರಸ್ವತಿಯ ವಿಗ್ರಹವೊಂದರ ಪ್ರೇರಣೆಯಿಂದಾಗಿ ರಚಿತವಾಗಿರುವ ಕವಿತೆ. “ನಾಗಮಂಗಲದ ಮಹಾಜನರು ಅರ್ಪಿಸಿರುವ ನಾಟ್ಯ ಸರಸ್ವತಿಯ ದಿವ್ಯಸುಂದರವಾದ ಪಂಚಲೋಹ ವಿಗ್ರಹವನ್ನು ನಿರ್ದೇಶಿಸಿ, ದೇವೀ ಮೂರ್ತಿಯನ್ನು ನಿರ್ಮಿಸಿದ ಅಜ್ಞಾತ ಶಿಲ್ಪಿಗೆ ಕವಿಯ ಅನಂತ ಕೃತಜ್ಞತೆಯ ಫಲರೂಪವಾಗಿ.” ಎಂದು ಕವಿತೆಗೆ ಅಡಿ ಟಿಪ್ಪಣಿ ನೀಡಲಾಗಿದೆ. ಈ ಕವಿತೆ ಸೃಷ್ಟಿಯಾದ ಹಿನ್ನೆಲೆಯನ್ನು ಶ್ರೀಮತಿ ತಾರಿಣಿಯವರು ’ಮಗಳು ಕಂಡ ಕುವೆಂಪು’ ಕೃತಿಯ ’ತಂದೆಯವರ ಸಂಗೀತಾಸಕ್ತಿ’ ಎಂಬ ಬರಹದಲ್ಲಿ ದಾಖಲಿಸಿದ್ದಾರೆ. ಅವರ ಬರಹವನ್ನೇ ಇಲ್ಲಿ ಇಡಿಯಾಗಿ ಉಲ್ಲೇಖಿಸುತ್ತೇನೆ.

ಒಂದು ಭಾನುವಾರ. ಆಕಾಶವಾಣಿಯಲ್ಲಿ ದೊರೆಸ್ವಾಮಿ ಅಯ್ಯಂಗಾರ್ ಅವರ ವೀಣಾವಾದನ ಕಾರ್ಯಕ್ರಮ, ಒಂದು ಗಂಟೆ ಹೊತ್ತು ನೇರ ಪ್ರಸಾರವಾಗುತ್ತಿತ್ತು. ಹಿಂದಿನ ದಿನವೇ ಪತ್ರಿಕೆಯಲ್ಲಿ ಕಾರ್ಯಕ್ರಮ ನೋಡಿ ತಂದೆಯವರು 'ನನಗೂ ಭಾನುವಾರ ಒಂಬತ್ತುವರೆಗೆ ರೇಡಿಯೋ ಹಾಕಲು ನೆನಪಿಸು' ಎಂದು ಹೇಳಿದ್ದರು. ಭಾನುವಾರ ಸಂಗೀತ ಬರುವ ಮೊದಲೆ ರೇಡಿಯೋ ಹಾಕಿಕೊಂಡು ಹಾಲಿನಲ್ಲಿ ದೊಡ್ಡ ರೆಡಿಯೋ ಇಟ್ಟಿದ್ದ ಮೇಜಿನ ಎದುರು ಕುರ್ಚಿಯಲ್ಲಿ ಕುಳಿತು ವೀಣೆ ಕೇಳಲು ಸಿದ್ಧರಾದರು. ದೊಡ್ಡ ರೇಡಿಯೋ ಮೇಲೆ ಹೊಳೆಯುತ್ತಿದ್ದ, ನಾಗಮಂಗಲದ ಮಹಾಜನತೆ ಅರ್ಪಿಸಿದ್ದ ನಾಟ್ಯ ಸರಸ್ವತಿಯ ಸುಂದರ ವಿಗ್ರಹ ಇತ್ತು. ವೀಣಾವಾದನ ಪ್ರಾರಂಭವಾಯಿತು. ತಂದೆಯವರು ನಾದಮಗ್ನರಾಗಿ ಕೇಳುತ್ತಿದ್ದರು. ಆಗಾಗ್ಗೆ ಬಾಯಿಯಲ್ಲಿ ಏನೋ ಹೇಳಿಕೊಳ್ಳುತ್ತಿದ್ದರು. ವೀಣೆ ಕೇಳುತ್ತಾ ಕೇಳುತ್ತಾ ಬೇರೆ ಪ್ರಪಂಚದಲ್ಲಿ ಇದ್ದಂತೆ ಕಾಣುತ್ತಿದ್ದರು. ಕೆಲವು ಸಾರಿ ತಂದೆಯವರು ರೇಡಿಯೋ ತುಂಬ ಜೋರಾಗಿ ಕೇಳುವಂತೆ ಹಾಕಿಕೊಳ್ಳುವರು. ಆ ದಿನವೂ ಹಾಗೆಯೇ ಜೋರಾಗಿ ಕೇಳಿಸುತ್ತಿತ್ತು. ಮನೆಯ ಯಾವ ಮೂಲೆಯಲ್ಲಿದ್ದರೂ ವೀಣಾವಾದನ ಜೋರಾಗಿ ಕೇಳಿಸುತ್ತಿತ್ತು. ಭಾನುವಾರ ರಜದ ದಿನವಾಗಿ ಮಕ್ಕಳೆಲ್ಲಾ ಮನೆಯಲ್ಲಿದ್ದೆವು. ಅಣ್ಣ ತೇಜಸ್ವಿಗೂ ಕಾಲೇಜು ರಜ. ಅವನೂ ಮನೆಯಲ್ಲಿದ್ದನು. ಆಚೆ ಈಚೆ ಓಡಾಡುತ್ತಿದ್ದ ಅವನಿಗೂ ವೀಣೆ ಬಹಳ ಜೋರಾಗಿ ಕೇಳುತ್ತಿದೆ ಎನ್ನಿಸಿತು. ಧ್ವನಿ ಸ್ವಲ್ಪ ತಗ್ಗಿಸಲು ತಂದೆಯವರ ಹತ್ತಿರ ನಿಂತು 'ಸ್ವಲ್ಪ ಕಡಿಮೆ ಮಾಡುವುದೇ?' ಎಂದು ಕೇಳಿದ. ಆದರೆ ತಂದೆಯವರು ಇನ್ನಾವುದೋ ಗುಂಗಿನಲ್ಲಿದ್ದಂತೆ ತೋರುತ್ತಿತ್ತು. ತೇಜಸ್ವಿಯ ಮಾತು ಅವರ ಮನಸ್ಸಿಗೆ ಹೋದಂತಿಲ್ಲ. ತೇಜಸ್ವಿ ರೇಡಿಯೋ ಹತ್ತಿರ ಹೋಗಿ ಸ್ವಲ್ಪ ವಾಲ್ಯೂಮ್ ಕಡಿಮೆ ಮಾಡಿದ. ತಕ್ಷಣ ಅವರ ಭಾವಕ್ಕೆ ತೊಂದರೆಯಾದಂತೆ “ಬೇಡ ಬೇಡ ಏನೂ ಮಾಡಬೇಡ” ಎಂದು ಜೋರಾಗಿ ರಭಸವಾಗಿ ಹೇಳಿದರು. ಕೂಡಲೆ ತೇಜಸ್ವಿಗೂ ಅರ್ಥವಾಯಿತು. ಅವರು ಯಾವುದೋ ರಚನೆಯಲ್ಲಿದ್ದಾರೆ ಎಂದು. ಮತ್ತೆ ಮೊದಲಿನಂತೆ ಹೆಚ್ಚು ಮಾಡಿ ಅಲ್ಲಿಂದ ನಿರ್ಗಮಿಸಿದ. ತೇಜಸ್ವಿ ಕಡಿಮೆ ಮಾಡುವ ಮೊದಲು ನಾನೇ ತುಂಬ ಜೋರಾಗಿ ಕೇಳುತ್ತಿದ್ದ ರೇಡಿಯೋ ಸ್ವಲ್ಪ ಕಡಿಮೆ ಮಾಡಲೆ ಎಂದು ಯೋಚಿಸಿದ್ದೆ. ಆದರೆ ತಂದೆಯವರ ಭಾವಸ್ಥಿತಿ ನೋಡಿ ಕಡಿಮೆ ಮಾಡಲು ಧೈರ್ಯ ಬರಲಿಲ್ಲ. ಹೀಗೆ ಸಂಗೀತ ಕೇಳುತ್ತಾ ಅವರ ಬಾಯಿಯಿಂದ “ನರ್ತಿಸುತಾಯೆ ಅಜಜಾಯೆ” ಎಂದು ಹೇಳುವುದು ಆಗಾಗ ಕೇಳಿಸುತ್ತಿತ್ತು.

ವೀಣೆ ಮುಗಿಯಿತು. ತಂದೆಯವರು ರೇಡಿಯೋ ನಿಲ್ಲಿಸಿ ಎದ್ದು ತಾವು ಓದುವ ಕೊಠಡಿಗೆ ಹೋದರು. ಸ್ವಲ್ಪ ಹೊತ್ತು ಬರೆಯುತ್ತಾ ಕುಳಿತಿದ್ದರು. ಅನಂತರ ಎದ್ದು, ಸ್ನಾನ ಮುಗಿಸಿ ದೇವರ ಮನೆಗೆ ಪೂಜೆಗೆ ಹೋದರು. ದೇವರ ಮನೆಯಲ್ಲಿಯೂ ಪೂಜೆ ಮುಗಿಸಿ 'ನರ್ತಿಸುತಾಯೆ ಅಜಜಾಯೆ' ಎಂದು ಗುನುಗುತ್ತಿದ್ದುದು ಕ್ಷೀಣವಾಗಿ ಕೇಳಿಸುತ್ತಿತ್ತು. ಸಾಯಂಕಾಲದ ಹೊತ್ತಿಗೆ 'ನಾಟ್ಯ ಸರಸ್ವತಿಗೆ' ಎಂಬ ಕವನ ಹೊರಬಂದಿತ್ತು “ನರ್ತಿಸುತಾಯೇ ಅಜಜಾಯೇ ಮಮ ಮಸ್ತಕ ನೀರೇಜದಲಿ” (೧-೮-೧೯೬೦) 
ಆ ನಾಟ್ಯಸರಸ್ವತಿಯ ಶಿಲ್ಪ ಮತ್ತು ಕವಿತೆಯನ್ನು ಕುರಿತಂತೆ ತಾರಿಣಿಯವರು ಹೀಗೆ ಹೇಳಿದ್ದಾರೆ. “ನಾಗಮಂಗಲದ ಮಹಾಜನತೆ ತಂದೆಯವರಿಗೆ ಸನ್ಮಾನ ಮಾಡಿ ತುಂಬ ಸಂದರವಾಗಿ ಕೆತ್ತಿರುವ ಪಂಚಲೋಹದ ನಾಟ್ಯಸರಸ್ವತಿ ವಿಗ್ರಹ ಕೊಟ್ಟಿದ್ದರು. ಆ ಕಲೆಯ ಶಿಲ್ಪಿಗಳು ಇರುವುದು ನಾಗಮಂಗಲದಲ್ಲೇ. ನಾಟ್ಯ ಸರಸ್ವತಿಯನ್ನು ಸಾಮಾನ್ಯವಾಗಿ ತಂದೆಯವರ ಹುಟ್ಟಿದ ದಿನ ಡಿಸೆಬರ್ ೨೯ನೇ ತಾರೀಖು ಚೆನ್ನಾಗಿ ತೊಳೆದು ಹೊಳಪು ನೀಡಿ ಹಾಲಿನಲ್ಲಿ ರೇಡಿಯೋ ಮೇಜಿನ ಮೇಲೆ ಇಟ್ಟು ಹೂವಿನಿಂದ ಅಲಂಕರಿಸುತ್ತಿದ್ದೆವು. ಅಭಿಮಾನಿಗಳು ಶುಭಾಶಯ ಕೋರಲು ಬಂದಾಗ ಅವರು ತಂದಿರುವ ಹೂವನ್ನು ಸರಸ್ವತಿಗೆ ಅರ್ಪಿಸುವಂತೆ ತಂದೆಯವರು ಹೇಳುತ್ತಿದ್ದರು. ಸರಸ್ವತಿಯನ್ನು ಹದಿನೈದು ದಿನಗಳು ಅಲ್ಲೇ ಇಟ್ಟು ನಾನಾ ವಿಧದ ಹೂಮಾಲೆ ಹಾಕುತ್ತಿದ್ದೆವು. ಅನಂತರ ಅಲ್ಲಿಂದ ನಡುಮನೆ ವರಾಂಡದ ಷೋಕೇಸ್ ಮೇಲೆ ಇಡುತ್ತಿದ್ದೆವು. ಆ ದಿನವೂ ಹೊಳೆಯುವ ಸರಸ್ವತಿ ವಿಗ್ರಹವನ್ನು ಹಾಲಿನಲ್ಲಿಯೇ ಇಟ್ಟಿದ್ದೇನೆ. ಅದನ್ನು ನೋಡುತ್ತಾ ಸ್ಫೂರ್ತಿಗೊಂಡ ಕವಿಯ ಮನಸ್ಸಿನ ಭಾವನೆಗಳು ವೀಣಾವಾದನದ ನಾದ ಮಾಧುರ್ಯವನ್ನು ಆಸ್ವಾದಿಸುತ್ತಾ ಹೊರ ಹೊಮ್ಮಿತ್ತು ’ನಾಟ್ಯ ಸರಸ್ವತಿಗೆ’ ಎಂಬ ಕವನ. ಮುಂದೆ ಪ್ರತಿವರ್ಷವೂ ಡಿಸೆಂಬರ್ ೨೯ರಂದು ನಾಟ್ಯಸರಸ್ವತಿ ರೇಡಿಯೋ ಮೇಜಿನ ಮೇಲೆ ಇಟ್ಟಾಗ, ತಂದೆಯವರು ಅದರ ಎದುರು ಕುರ್ಚಿಯಲ್ಲಿ ಕುಳಿತು ಒಂದುಸಾರಿ ’ನರ್ತಿಸುತಾಯೆ’ ಕವನವನ್ನು ಹೇಳುವುದು ಅವರ ರೂಢಿಯಾಗಿತ್ತು. ಕವನ ಬರೆದ ನಂತರ ನಮ್ಮ ಸಂಗೀತ ಉಪಾಧ್ಯಾಯರಿಗೂ ಅದನ್ನು ಕೊಟ್ಟು ರಾಗ ಹಾಕಿ ನಮಗೆ ಹೇಳಿಕೊಡಲು ಹೇಳಿದ್ದರು. ನಾವು ಅದನ್ನು ಕಲಿತು ಆಗಾಗ್ಗೆ ತಂದೆಯವರ ಎದುರು ಹಾಡುತ್ತಿದ್ದೆವು. [ಮಗಳು ಕಂಡ ಕುವೆಂಪು, ಪುಟ ೩೧೮-೧೯]

ಕವಿತೆಯ ಪೂರ್ಣಪಾಠ ಇದು.

ನರ್ತಿಸು, ತಾಯೆ,
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!
ಮಾನಸ ಅಧಿಮಾನಸಕೇರೆ
ಅತಿಮಾನಸ ಮೈದೋರೆ
ಆನಂದಾಮೃತ ರಸ ಸೋರೆ
ನರ್ತಿಸು, ತಾಯೆ, 
      ಅಜ ಜಾಯೆ,
      ಮಮ ಮಸ್ತಕ ನೀರೇಜದಲಿ !
ಅಡಿ ಸೋಂಕಿಗೆ ಮುಡಿ ಅರಳೆ
ಅಜ್ಞಾನದ ಗಡಿ ಉರುಳೆ
ವಿಜ್ಞಾನದ ಕಾಂತಿ
ಅವತರಿಸುತ ಬರೆ ಶಾಂತಿ
ನರ್ತಿಸು, ತಾಯೆ, 
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!
`ಶಾಂತಿ’ಯ ಅವತಾರವಾಗಬೇಕೆದರೆ ವಿಜ್ಞಾನದ ಬೆಳಕು ಬೇಕು. ಅದು ಬೇಕೆಂದರೆ ಅಜ್ಞಾನದ ಗಡಿ ಉರುಳಬೇಕು. ಇದೆಲ್ಲ ಆಗುವುದಕ್ಕೆ ಸರಸ್ವತಿಯ (ವಿದ್ಯೆಯ, ಜ್ಞಾನದ) ಅಡಿ ಸೋಂಕಬೇಕು. ಅದಕ್ಕಾಗಿ ಸರಸ್ವತಿ ಎಲ್ಲರ ಮಸ್ತಕದಲ್ಲಿ ನರ್ತಿಸಬೇಕು. ’ವಿಜ್ಞಾನದ ಕಾಂತಿ ಅವತರಿಸಿ ಶಾಂತಿ ಬರುವಂತೆ ನರ್ತಿಸು ನಮ್ಮ ಮಸ್ತಕದಲ್ಲಿ’ ಎನ್ನುವ ನುಡಿ ಸೊಗಸಾಗಿ ಮೂಡಿ ಬಂದಿದೆ. ಅಭಿನವ ಪಂಪನಾದ ನಾಗಚಂದ್ರನಲ್ಲಿ ಆತನ ಕಾವ್ಯವು ’ವಿದ್ಯಾನಟಿಯ ನಾಟ್ಯವೇದಿಕೆ’ಯಾಗಿದ್ದರೆ (’ವಚಶ್ರೀನರ್ತಕೀನೃತ್ಯವೇದಿಕೆ’, 'ವಿದ್ಯಾನಟೀನಾಟ್ಯವೇದೀಕಲ್ಪಂ’), ಇಲ್ಲಿ ಸ್ವತಃ ಕವಿಯ ಮಸ್ತಕವೇ ನೃತ್ಯವೇದಿಕೆಯಾಗಿದೆ. ಸರ್ವರ ಮಸ್ತಕವೂ ಸರಸ್ವತಿಯ ನೃತ್ಯವೇದಿಕೆಯಾಗಬೇಕೆಂಬುದು ಪ್ರಸ್ತುತ ಕವಿತೆಯ ಆಶಯ.

2 comments:

Sreenivas G Kappanna said...

ನನಗೆ ಈ ಕವಿತೆ ಬಹಳ ಇಷ್ಟ. ಕುವೆಂಪು ಅವರ ಸಾಲುಗಳಿಗೆ ಮೈಸೂರಿನ ಸುನಿತಾ ಚಂದ್ರ ಕುಮಾರ್ ರಾಗ ಸಂಯೋಜಿಸಿ ರತ್ನ ಮಾಲ ಪ್ರಕಾಶ್ ಹಾಡಿದ್ದಾರೆ.ಈ ಹಾಡನ್ನ ಅಮೇರಿಕಾದಲ್ಲಿ ಅಕ್ಕ ಉತ್ಸವದಲ್ಲಿ ನೃತ್ಯ ವಾಗಿಯೂ ಪ್ರದರ್ಶಿಸಿದೆ.ಹಿರಿಯ ಗುರು ರಾಧಾ ಶ್ರೀಧರ್
ನೃತ್ಯ ಸಂಯೋಜಿಸಿದರು.ಜನ ಬಹಳ ಇಷ್ಟ ಪಟ್ಟರು

Shashi said...

bahala chennagide.