ಕಸಿನ್ಸ್ ಅವರು ಐರಿಷ್ ಕವಿ ಹಾಗೂ ಸ್ವದೇಶಿ ಚಳುವಳಿಯ ಪ್ರತಿಪಾದಕರಾಗಿದ್ದರು. ಕುವೆಂಪು ಅವರ ಇಂಗ್ಲಿಷ್ ಕವಿತೆಗಳನ್ನು ಪರಿಶೀಲಿಸಿ, "ಏನಿದೆಲ್ಲ ಕಗ್ಗ? (ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತ್ರಗಳೆ ಕಾಣುತ್ತವೆ. ಇದು ಮಾತ್ರ ಸ್ವದೇಶಿಯಲ್ಲ. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?" ಎಂದು ಕೇಳುತ್ತಾರೆ. ಈ ಅನಿರೀಕ್ಷಿತ ಪ್ರಶ್ನೆಗೆ, ಈಗಾಗಲೇ ಕನ್ನಡದಲ್ಲಿ ಅಮಲನ ಕಥೆ' ಎಂಬ ದೀರ್ಘಕವಿತೆಯನ್ನು ರಚಿಸುತ್ತಿದ್ದರೂ 'ಇಲ್ಲ' ಎಂದೇ ಉತ್ತರಿಸುತ್ತಾರೆ. ನಂತರ ಇಬ್ಬರ ನಡುವೆ ಕಾವ್ಯ, ಇಂಗ್ಲಿಷ್ ಭಾಷೆ ಮತ್ತು ಕನ್ನಡ ಭಾಷೆ ಮೊದಲಾದ ವಿಚಾರಗಳ ಮಾತುಗಳಾಗುತ್ತವೆ. ಒಟ್ಟಾರೆ ಮಾತುಕತೆಯ ಫಲಶೃತಿ, ’ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು’ ಎಂಬ ಕಸಿನ್ಸ್ ಮಾತಿನ ಪ್ರಕಾರ ಕುವೆಂಪು ಅವರು ತಮ್ಮ ಸ್ವಂತ ಭಾಷೆಯಲ್ಲೇ ಬರೆಯಬೇಕು ಎಂದಾಗುತ್ತದೆ. ಇಪ್ಪತ್ತರ ವಯಸ್ಸಿನ ಯುವಕ ಕುವೆಂಪು, ಆಕ್ಷಣಕ್ಕೆ ಸಹಜವಾಗಿಯೇ ಕುಪಿತರಾಗುತ್ತಾರೆ. ಕುಪಿತ ಮನಸ್ಥಿತಿಯಲ್ಲೇ ಅವರಿಂದ ಬೀಳ್ಕೊಡುತ್ತಾರೆ. ಆದರೆ ಇಂದು ಈ ತುದಿಯಲ್ಲಿ ನಿಂತು ನೋಡಿದಾಗ ಅದೊಂದು ಮಹತ್ವದ ಹಾಗೂ ಸ್ಮರಣೀಯವಾದ ದಿನ! ನೆನಪಿನ ದೋಣಿಯಲ್ಲಿ ಕುವೆಂಪು ಆ ಸಂದರ್ಭವನ್ನು ಕುರಿತು ಕಸಿನ್ಸ್ ಅವರ ಹಿತವಚನ ಮೇಲೆಮೇಲೆಕ್ಕೆ ತಿರಸ್ಕೃತವಾಗಿದ್ದರು ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು! ಹಿಂತಿರುಗಿ ಬರುವಾಗಲೇ ದಾರಿಯಲ್ಲಿ ಏನೋ ಒಂದು ಕನ್ನಡ ಕವಿತೆ ರಚಿಸುತ್ತಾ ಗುನುಗುತ್ತಾ ಬಂದೆ ಎಂದು ಬರೆದಿದ್ದಾರೆ.
ಹೀಗೆ ಆ ಕ್ಷಣಕ್ಕೆ ಕುವೆಂಪು ಅವರಿಂದ ರಚಿತವಾದ ಕವಿತೆಯೇ ’ಪೂವು’.
ಎಲೆ ಪೂವೆ ಆಲಿಸುವೆ|ಮಜ್ಜನವ ಮಂಜಿನೊಳು|
ನಾ ನಿನ್ನ ಗೀತೆಯನು||
ಎಲೆ ಪೂವೆ ಸೋಲಿಸುವೆ|
ನಾ ನಿನ್ನ ಪ್ರೀತಿಯನು|| ಪಲ್ಲವಿ ||
ನೀ ಮಾಡಿ ನಲಿವಾಗ|
ಉಜ್ಜುಗದಿ ಸಂಜೆಯೊಳು|
ನರರೆಲ್ಲ ಬರುವಾಗ||
ತಳಿರೊಳಗೆ ಕೋಕಿಲೆಯು|ಕವಿವರನು ಹೊಲಗಳಲಿ|
ಕೊಳಲನು ನುಡಿವಾಗ|
ಎಳೆದಾದ ರವಿಕಿರಣ|
ಇಳೆಯನ್ನು ತೊಳೆವಾಗ||
ತವಿಯಿಂದ ತೊಳಗುತಿಹ|
ಭುವನವನು ಸಿಂಗರಿಸಿ|
ಸವಿಯಾಗಿ ಬೆಳಗುತಿಹ||
ಅಲರುಗಳ ಸಂತಸದಿ|ಗೀತವನು ಗೋಪಾಲ|
ತಾ ನೋಡಿ ನಲಿವಾಗ|
ನಲಿ ಪೂವೆ ಎನ್ನುತ್ತಲಿ|
ರಾಗದಿಂ ನುಡಿವಾಗ||
ಏಕಾಂತ ಸ್ಥಳದೊಳು|
ಪ್ರೀತಿಯಿಂ ನುಡಿವಾಗ|
ನಾಕವನು ಸೆಳೆಯುತ್ತ||
ವನದಲ್ಲಿ ಪಕ್ಷಿಗಳು|ಮೋಡಗಳು ಸಂತಸದಿ|
ಇನನನ್ನು ಸವಿಯಾಗಿ|
ಮನದಣಿವ ಗೀತದಿಂ|
ಮನದಣಿಯೆ ಕರೆವಾಗ||
ಮೂಡುತಿಹ ಮಿತ್ರನನು|
ನೋಡಿ ನೋಡಿ ನಲಿಯಲು
ನಾಡ ಮೇಲ್ ನಡೆವಾಗ||
ಮುಂಜಾನೆ ಮಂಜಿನೊಳು|ಎಲೆ ಪೂವೆ ಆಲಿಸುವೆ|
ಪಸುರಲ್ಲಿ ನಡೆವಾಗ|
ಅಂಜಿಸುವ ಸಂಜೆಯೊಳು|
ಉಸಿರನ್ನು ಎಳೆವಾಗ||
ನಾ ನಿನ್ನ ಗೀತೆಯನು|
ಎಲೆ ಪೂವೆ ಸೋಲಿಸುವೆ|
ನಾ ನಿನ್ನ ಪ್ರೀತಿಯನು||
ಅದನ್ನು ತಮ್ಮ ಸಹನಿವಾಸಿಗಳ ಎದುರು ರಾಗವಾಗಿ ಹಾಡಿದಾಗ ಅವರೆಲ್ಲರೂ ಅತಿಯಾಗಿ ಹಿಗ್ಗು ವ್ಯಕ್ತಪಡಿಸುತ್ತಾರೆ. ನಂತರದ ದಿನಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಕವಿತಾ ರಚನೆ ಮುಂದುವರೆದು, ಮುಂದೊಂದು ದಿನ ಇಂಗ್ಲಿಷ್ನಲ್ಲಿ ಬರೆಯುವುದು ಪೂರ್ಣವಾಗಿ ನಿಂತೇ ಹೋಗುತ್ತದೆ. ಕನ್ನಡ ಪ್ರಕಾಶಿಸುತ್ತದೆ! ಆ ’ಪೂವು’ ಕವಿತೆಯ ಬಗ್ಗೆ ಸ್ವತಃ ಕುವೆಂಪು ಅವರ ಅಭಿಪ್ರಾಯಗಳನ್ನು ತಿಳಿಯುವ ಮೊದಲು ಇಡೀ ಕವಿತೆಯನ್ನೊಮ್ಮೆ ನೋಡಬಹುದು. ಐದು ಮಾತ್ರೆಗಳ ಗಣಗಳು, ದ್ವಿತೀಯಾಕ್ಷರ ಪ್ರಾಸ ಹಾಗೂ ಕೆಲವು ಪಂಕ್ತಿಗಳಲ್ಲಿ ಕಾಣುವ ಅಂತ್ಯಪ್ರಾಸದಿಂದ ಕೂಡಿದ ಕವನ ಪೂವು.
೧೯೨೪ ಜುಲೈ ೧೦ನೆಯ ಗುರುವಾರದಂದು ತಮ್ಮ ದಿನಚರಿಯಲ್ಲಿ ಹೀಗೆ ದಾಖಲಿಸಿದ್ದಾರೆ.
This is the precious day for which I was striving for a time when I received inspiration to write in my own language in a different style so as to bring I think a new era in the annals of Kannada literature. I have rebelled against convention in the sense that I have followed my own metre etc. The themes are my themes which I would have otherwise written in English. I composed a tiny beautiful poem and I named it ‘PUVU’ or (‘The flower’). It was gailed by my friends and casual admires. Many for the music, few for the theme and still few for the new style. “Mother, guide me! Let thy fire burn in my heart! Vande Swami Vivekanadam!”
ಹಾಗೆ ಇಂಗ್ಲಿಷಿನಲ್ಲಿ ಬರೆದುದನ್ನು ಕನ್ನಡಕ್ಕೆ ಅನುವಾದಿಸಿ ನೆನಪಿನ ದೋಣಿಯಲ್ಲಿ ಕೊಟ್ಟಿದ್ದಾರೆ.
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ, ನನಗನ್ನಿಸುತ್ತದೆ, ಒಂದು ನೂತನ ಶಕವನ್ನೆ ತರುವಂತೆ, ಸಂಪ್ರದಾಯ ದೂರವಾದ ಬೇರೆಯ ರೀತಿಯಲ್ಲಿ, ಸ್ಫೂರ್ತಿಗೊಂಡಾಗ ನನ್ನ ನುಡಿಯಲ್ಲಿಯೆ ನಾನು ಬರೆಯಬೇಕೆಂದು ಸ್ವಲ್ಪ ಕಾಲದಿಂದಲೂ ಯಾವುದಕ್ಕಾಗಿ ಹೆಣಗುತ್ತಿದ್ದೆನೋ ಅದು ಸಾರ್ಥಕವಾಗಿರುವ ಒಂದು ಅದ್ಭುತ ಸುಮೂಲ್ಯ ದಿನ. ನಾನು ಸಂಪ್ರದಾಯಕ್ಕೆ ವಿರುದ್ಧವಾಗಿ ದಂಗೆಯೆದ್ದಿದ್ದೇನೆ, ಯಾವ ಅರ್ಥದಲ್ಲಿ ಎಂದರೆ, ನನ್ನದೇ ಆಗಿರುವ ಛಂದಸ್ಸು ಇತ್ಯಾದಿಗಳನ್ನು ಅನುಸರಿಸುವಲ್ಲಿ, ಕಾವ್ಯದ ವಸ್ತು ಭಾವಗಳೆಲ್ಲ ನನ್ನವೆ, ಕನ್ನಡದಲ್ಲಿ ಅಲ್ಲದಿದ್ದರೆ ಅವನ್ನೆಲ್ಲ ಇಂಗ್ಲಿಷಿನಲ್ಲಿಯೆ ಬರೆಯುತ್ತಿದ್ದೆ. ಒಂದು ಪುಟ್ಟ ಸಂದರ ಕವನ ರಚಿಸಿದೆ. ಅದಕ್ಕೆ ’ಪೂವು’ ಎಂದು ಕೊಟ್ಟಿದ್ದೇನೆ. ನನ್ನ ಸ್ನೇಹಿತರೂ ಇತರ ಕೆಲವು ಪರಿಚಿತರೂ ಅದನ್ನು ಹೊಗಳಿದ್ದೇ ಹೊಗಳಿದ್ದು! ಅನೇಕರು ಅದರ ನಾದ ಮಾಧೂರ್ಯಕ್ಕಾಗಿ, ಕೆಲವರು ಅದರ ವಸ್ತುಭಾವಗಳಿಗಾಗಿ, ಒಬ್ಬಿಬ್ಬರು ಅದರ ನೂತನ ಶೈಲಿಗಾಗಿ. ತಾಯೀ ದಾರಿ ತೋರು! ನಿನ್ನ ಅಗ್ನಿ ನನ್ನ ಹೃದಯದಲ್ಲಿ ಪ್ರಜ್ವಲಿಸಲಿ! ವಂದೇ ಸ್ವಾಮಿ ವಿವೇಕಾನಂದಮ್!ಮೇಲಿನ ಮಾತುಗಳ ಬಗ್ಗೆ, ನೆನಪಿನ ದೋಣಿಯಲ್ಲಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಜುಲೈ ೧೦ನೆಯ ಗುರುವಾರ, ೧೯೨೪ನೆಯ ದಿನಚರಿಗೆ ನನ್ನ ಸಾಹಿತ್ಯಜೀವನದಲ್ಲಿ ಒಂದು ಐತಿಹಾಸಿಕ ಸ್ಥಾನವಿದೆ. ಈ ದಿನಚರಿ ಬರೆಯದೆ ಇದ್ದಿದ್ದರೆ ಅಥವಾ ಅದು ಉಳಿದು ಈಗ ನನಗೆ ದೊರೆಯದೆ ಇದ್ದಿದ್ದರೆ, ನಾನು ಆ ಪ್ರಾರಂಭಿಕ ಶೈಶವಾವಸ್ಥೆಯಲ್ಲಿ ಅಷ್ಟು ದಿಟ್ಟತನದಿಂದ ಸಾಹಿತ್ಯ ಶಕಪುರುಷನಾಗಿ ಬಿಡುತ್ತೇನೆ ಎಂದು ಬರೆಯಲು ಸಾಧ್ಯ ಎಂಬುದನ್ನೆ ನಂಬಲು ಅಸಾಧ್ಯವಾಗುತ್ತಿತ್ತು. ಯಾವ ಧೈರ್ಯದಿಂದ ಹಾಗೆ ಬರೆದೆನೋ ಆ ದೇವೀ ಸರಸ್ವತಿಗೇ ಗೊತ್ತು!
ಮುಂದುವರೆದು, ಮೇಲಿನ ಮಾತುಗಳಿಗೆ ಒಂದು ರೀತಿಯಲ್ಲಿ ಪ್ರೇರಕವಾಗಿದ್ದ ’ಪೂವು’ ಕವಿತೆಯ ಬಗ್ಗೆ ದಿನಚರಿಯಲ್ಲಿ ಬರೆದಿಡುವ ಅಂತಹ ಕ್ರಾಂತಿಕಾರಕವಾದ ಧೀರಪ್ರತಿಜ್ಞೆಯ ವೀರ ವಾಕ್ಯಗಳಿಗೆ ನಿಮಿತ್ತಮಾತ್ರವಾದ ಆ ’ಪೂವು’ ಕವನವನ್ನು ಈಗ ನೋಡಿದರೆ ಕನಿಕರ ಪಡುವಂತಿದೆ! ಅಷ್ಟು ಬಡಕಲು, ಅಷ್ಟು ಸೊಂಟಮುರುಕ! ಕನ್ನಡ ಭಾಷೆಯೂ ಅದುವರೆಗಿನ ನನ್ನ ಇಂಗ್ಲಿಷ್ ಕವನಗಳ ಭಾಷೆಯ ಪ್ರಯೋಗದ ಮುಂದೆ ಬರಿಯ ಅಂಬೆಗಾಲು, ತಿಪ್ಪತಿಪ್ಪದಂತಿದೆ! ವಿದೇಶೀ ಭಾಷೆಯನ್ನೇ ಅಷ್ಟಾದರೂ ಸಮರ್ಥವಾಗಿ ಬಳಸಬಲ್ಲ ಕವಿಗೆ ತನ್ನ ನುಡಿಯನ್ನೇ ಸಾಧಾರಣವಾಗಿಯಾದರೂ ಬಳಸಲಾರದಷ್ಟು ದಾರಿದ್ರ್ಯವಿದ್ದುದನ್ನು ನೋಡಿದರೆ ನಮ್ಮ ವಿದ್ಯಾಭ್ಯಾಸ ಪದ್ಧತಿ ಎಂತಹ ಗುಲಾಮಗಿರಿಯಲ್ಲಿತ್ತು ಎಂಬುದು ಗೊತ್ತಾಗುತ್ತದೆ. ಎಂದು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.
ಆ ಧೀರ ಪ್ರತಿಜ್ಞೆ, ಉನ್ಮೇಷನ, ಸಂತೋಷ, ಹೆಮ್ಮೆ ಪೂವು ಪದ್ಯದ ವಿಚಾರದಲ್ಲಿ ಏಕೆ ಎಂಬುದುಕ್ಕೆ ಅದನ್ನು ಇಂಪಾಗಿ ಹಾಡಿ ಭಾವಪೂರ್ವಕವಾಗಿ ಸಹೃದಯರಲ್ಲಿ ಸಂವಹನ ಉಂಟುಮಾಡಿದ್ದಕ್ಕಾಗಿಯೂ ಇರಬಹುದು. ಆದರೂ ಆ ಕಾರಣ ಸಾಲದಾಗಿದೆ. ಈಗ ಆಲೋಚಿಸಿದರೆ ನನಗನ್ನಿಸುತ್ತದೆ, ಆ ಕವನದ ಭಾಷಾಭಿವ್ಯಕ್ತಿಗಾಗಿ ಅಲ್ಲ, ಅದರ ಹಿಂದಿರುವ ಕನ್ನಡ ಛಂದಸ್ಸಿನ ಸ್ವರೂಪರಹಸ್ಯ ಅಂತಃಪ್ರಜ್ಞಾಗೋಚರವಾದುದರಿಂದಲೆ ಕವಿಗೆ ಅಂತಹ ಆತ್ಮಪ್ರತ್ಯಯವೂ ಕನ್ನಡ ಸಾಹಿತ್ಯದಲ್ಲಿ ನೂತನ ಶಕಾರಂಭ ಸಾಧ್ಯ ಎಂಬ ಭರವಸೆಯೂ ಮೂಡಿದುದು. ಇಂಗ್ಲಿಷ್ ಭಾವಗೀತೆಗಳ ನಾನಾರೂಪದ ವೈವಿಧ್ಯದ ಪ್ರಯೋಗತಃ ಪರಿಚಯವಿದ್ದ ನನಗೆ ಕನ್ನಡದಲ್ಲಿಯೂ ಆ ಎಲ್ಲ ರೂಪಗಳನ್ನೂ ವೈವಿಧ್ಯವನ್ನೂ ಸಾಧಿಸಲು ಸಾಧ್ಯ ಎಂಬುದು ಮನಸ್ಸಿಗೆ ಸ್ಫುರಿಸಿರಬೇಕು. ಟ್ರೈಮೀಟರ್, ಟೆಟ್ರಾಮೀಟರ್, ಪೆಂಟಾಮೀಟರ್, ಹೆಕ್ಸಾಮೀಟರ್ ಮೊದಲಾದುವುಗಳಿಗೆ ಸಂವಾದಿಯಾಗಿ ಮೂರು ಮಾತ್ರೆ, ನಾಲ್ಕು ಮಾತ್ರೆಯ, ಮೂರುನಾಲ್ಕು ಮಾತ್ರೆಯ, ಐದು ಮಾತ್ರೆಯ, ಆರು ಮಾತ್ರೆಯ ಗಣಗಳನ್ನು ಉಪಯೋಗಿಸಬಹುದೆಂಬ ತತ್ವ ಗೋಚರವಾಗಿ ಆ ಧೀರಪ್ರತಿಜ್ಞೆಯ ವೀರೋಕ್ತಿ ಹೊಮ್ಮಿತೆಂದು ತೋರುತ್ತದೆ! ಎಂದು ಬರೆದಿದ್ದಾರೆ.
ಮೇಲಿನ ಕವಿಯ ಆತ್ಮಪ್ರತ್ಯಯವೆನ್ನಿಸಬಹುದಾದ ಮಾತುಗಳು, ಅವುಗಳಲ್ಲಿ ವ್ಯಕ್ತವಾಗಿರುವ ಕೆಚ್ಚು, ಆತ್ಮವಿಶ್ವಾಸ ಎಲ್ಲವೂ, ಆ ಕ್ಷಣದ ಒತ್ತಡದಿಂದ ಹೊಮ್ಮಿದವುಗಳಲ್ಲ ಎಂಬುದು, ಮುಂದಿನ ಕೆಲವೇ ದಿನಗಳಲ್ಲಿ ಗೋಚರಿಸಲ್ಪಡುತ್ತದೆ ಎಂಬುದಕ್ಕೆ ಒಂದು ಉದಾಹರಣೆಯನ್ನು ನಾವಿಲ್ಲಿ ನೋಡಬಹುದು. ಹೀಗೆ ಕ್ರಾಂತಿಕಾರಕ ಮಾತುಗಳನ್ನು ದಿನಚರಿಯಲ್ಲಿ ದಾಖಲಿಸಿದ ದಿನದಿಂದ, ಕೇವಲ ಒಂದೇ ತಿಂಗಳಿನಲ್ಲಿ (6.8.1924) ಬ್ಲಾಂಕ್ ವರ್ಸ್ ಛಂದಸ್ಸನ್ನು ಮೊತ್ತ ಮೊದಲ ಬಾರಿಗೆ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಮನೆಯ ತಾರಸಿಯ ಮೇಲೆ ನಿಂತಿ ಬೆಂಲದಿಂಗಳನ್ನು ಸವಿಯುತ್ತಾ ಒಂದು ಸಾನೆಟ್ ರಚಿಸಲು ಯೋಚಿಸುತ್ತಾರೆ. This sky, this moon, these clouds, these stars etc ಎಂದು ಹೇಳಿಕೊಳ್ಳುತ್ತಲಿರುವಾಗಲೇ, ಅದನ್ನು ಹಿಂಬಾಲಿಸಿ, ಅನೈಚ್ಛಿಕವಾಗಿ 'ಈ ಗಗನವೀ ಚಂದ್ರನೀ ಮುಗಿಲು' ಎಂಬ ಸಾಲು ಮೂಡಿಬಿಡುತ್ತದೆ. ಆದರೆ ಅದು ಸಾನೆಟ್ಟಿನ ಹದಿನಾಲ್ಕು ಸಾಲನ್ನು ಮೀರಿ ಹದಿನೇಳು ಸಾಲಿಗೆ ಬೆಳೆದುಬಿಡುತ್ತದೆ. ಅದರ ಮಾರನೆಯ ದಿನವೇ (7.8.1924) ಕನ್ನಡದಲ್ಲಿಯೇ 'ಸೊಬಗು' ಎಂಬ ಸಾನೆಟ್ ರಚನೆಯ ಸಾಹಸಕ್ಕಿಳಿಯುತ್ತಾರೆ. ಯಶಸ್ವಿಯೂ ಆಗುತ್ತಾರೆ. ಕನ್ನಡದ ಮೊದಲನೆಯ ಸಾನೆಟ್! ಕವಿಯೇ ಹೇಳುವಂತೆ 'ಅದು ಬರಿಯ ಅಭ್ಯಾಸ ಮಾತ್ರ ರೂಪದ್ದು'. ಆದರೆ ಕವಿಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದು. 27.9.1924ರಲ್ಲಿ ರಚಿತವಾಗಿರುವ 'ಕರ್ಣಾಟಕ ಮಾತೆಗೆ-(ಕವಿಯೆ ಭರವಸೆ)' ಎಂಬುದು, ಇದರಲ್ಲಿಯೂ ಕ್ರಾಂತಿಕಾರಕವಾದ ಮಾತುಗಳಿವೆ, ನಿರ್ಧಾರಗಳಿವೆ. ಕರ್ನಾಟಕ ಮಾತೆಗೆ ಮಗುವೊಂದು ಭರವಸೆ ನೀಡುತ್ತಿರುವಂತೆ ರಚಿತವಾಗಿದೆ.
ಬೆದರದಿರು; ಬೆದರದಿರು; ನಾನಿಹೆನು, ಓ ದೇವಿ!ಈ ಸಾನೆಟ್ ಕುರಿತು ಕವಿ ಹೀಗೆ ಹೇಳುತ್ತಾರೆ. "ತೊದಲುನುಡಿಯ, ತಿಪ್ಪತಿಪ್ಪ ಹೆಜ್ಜೆಯ ಹಸುಳೆ ಕವಿ ಕರ್ಣಾಟಕದ ಮಾತೆಗೆ ಕೊಡುವ ಭರವಸೆಯನ್ನು ಆಲಿಸಿದರೆ ಹೊಟ್ಟೆ ಹುಣ್ಣಾಗುವಂತೆ ನಗಲೂಬಹುದು, ಅಥವಾ ಕಾಲದ ಈ ದೂರದಲ್ಲಿ ನಿಂತು ನೋಡಿ ಅಚ್ಚರಿಗೊಳ್ಳಲೂಬಹುದು. ಅಂತೂ ಯಾವ ಭವಿಷ್ಯದ ದುರ್ದಮ್ಯ ಧೈರ್ಯವು ಅಂದಿನ ಬಾಲಕವಿ ಹೃದಯದಲ್ಲಿ ವಾಮನನಂತೆ ಮೂಡಿ ತನ್ನ ಮುಂದಿನ ತ್ರಿವಿಕ್ರಮ ವಿಕ್ರಮವನ್ನು ಘೊಷಿಸುವಂತೆ ಪ್ರೇರಿಸಿತೊ ಅದು ಅತಿಮಾನುಷವೆಂಬಂತೆ ತೋರುತ್ತದೆ. ಅಂದು ಕೊಟ್ಟ ಭರವಸೆ ಇಂದಿಗೂ (22.5.1972) ಪೂರ್ತಿಯಾಗಿ ಕೈಗೂಡಿಲ್ಲ, ಕೈಗೂಡದಿದ್ದರೂ ಚಿಂತೆಯಿಲ್ಲ. ಮಗುವಿನ ಒಲವಿನ ಭರವಸೆಯೆ ಅದರ ಕೈಗೂಡಿಕೆಗಿಂತ ತಾಯಿಗೆ ಮೆಚ್ಚುಗೆಯಾಗುವುದರಲ್ಲಿ ಸಂದೇಹವಿಲ್ಲ."
ಉದಯಿಸುವನೊರ್ವ ಕವಿ ನಿನ್ನುದರ ಭೂಮಿಯಿಂ-
ದದುಭುತದಿ ಧಾರಿಣಿಯ ಜನಗಳಿಗೆ ಮೈದೋರಿ,
ಉದಯಭಾಸ್ಕರತೇಜದಿಂ ಮೆರೆದು ಕಂಗಳಿಗೆ!
ಕುಡಿಯುವಂ ಮಹಾ ತತ್ವಾಂಬುಧಿಯ; ಸಾಹಿತ್ಯ
ದೊಡಲ ಭೇದಿಸುತ ಕವಿತೆಯಾನಂದಮಂ ತಾಂ
ಪಡೆಯುವಂ! ಧರೆಯ ಜನಕೀಯುವಂ ತತ್ವಗಳ
ಬಿಡದೆ; ಪರಲೋಕಮಂ ಹಿಡಿದೆಳೆಯುವನು ಧರೆಗೆ!
ದೇವಿ, ನಿನ್ನುಡಿಯ ಮೇಲವನೊಲಿದು ಪಾಡುವಂ
ಜೀವ ಪರಮರ ವರ ವಿನೋದಮಂ! ಮಾಯೆಯಂ
ಭಾವನೆಯ ಕನ್ನಡಿಯನೊಡೆಯುವಂತೊಡೆಯುವಂ!
ಏಳುವಂ ಜೀವಾರ್ಣವ ತರಂಗ ಗಿರಿಯಂತೆ;
ಕಾಲನ ಕರಾಳಮಂ ಅದೃಷ್ಟದಾ ದಾಡೆಯಂ
ಸೀಳುವಂ ಸುಕವಿತಾ ಪೂಗೊಡಲಿಯಿಂ ಬಡಿದು!
ಮುಂದೆ ಒಂದು ದಿನ 'ಪೂವು' ಕವಿತೆಯನ್ನು ಹಲವಾರು ಕನ್ನಡ ಕವಿತೆಗಳ ಜೊತೆ ಸೇರಿಸಿದ, ’ಪುಷ್ಪಗೀತೆ’ ಎಂಬ ತಲೆಬರಹದ ಕವಿತೆಯ ಕಟ್ಟನ್ನು, ಕನ್ನಡದ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ಬಿ.ಕೃಷ್ಣಪ್ಪನವರಿಗೆ ಕೊಡುತ್ತಾರೆ. ’ನಾನಾಗಿದ್ದರೆ ಅದನ್ನು ವಂದನೆಗಳೊಂದಿಗೆ ಹಿಂದಿರುಗಿಸುತ್ತಿದ್ದೆ. ಅವರು ಶ್ರಮವಹಿಸಿ ಆ ಕಸದ ರಾಶಿಯಲ್ಲಿಯೂ ರಸವನ್ನು ಕಾಣುವ ಸಹೃದಯ ಸುಹೃದಯತೆಯನ್ನು ಪ್ರದರ್ಶಿಸಿ, ಕೆಲವು ಕವನಗಳ ಭಾಷೆಯನ್ನು ತಿದ್ದಲು ಪ್ರಯತ್ನಿಸಿದ್ದಾರೆ’ ಎನ್ನುತ್ತಾರೆ. ಪೂವು ಕವಿತೆಗೆ ಬಿ.ಕೃಷ್ಣಪ್ಪನವರು ಸೂಚಿಸಿದ್ದ ಬದಲಾವಣೆಗಳನ್ನು ಹೀಗೆ ಪಟ್ಟಿ ಮಾಡಬಹುದು.
ಪೂವು ಎಂಬುದರ ಬದಲು ’ಪೂ’
’ಕೊಳಲನ್ನು ನುಡಿವಾಗ’ ಎಂಬ ಸಾಲಿಗೆ ಬದಲಾಗಿ ’ಕೊಳಲುಲಿಯನುಲಿವಾಗ’
’ಎಳೆದಾದ ರವಿಕಿರಣ| ಇಳೆಯನ್ನು ತೊಳೆವಾಗ’ ಎಂಬುದಕ್ಕೆ ಬದಲಾಗಿ ’ಎಳದಾದ ರವಿಕಿರಣ| ವಿಳೆಯನ್ನು ತೊಳೆವಾಗ’ (ಎಳೆ>ಎಳ; ರವಿಕಿರಣ+ಇಳೆ=ರವಿಕಿರಣವಿಳೆ)
’ಕವಿವರನು ಹೊಲಗಳಲಿ’ ಎಂಬಲ್ಲಿ ಕವಿವರನು ಎಂಬುದಕ್ಕೆ ಅಡಿಗೆರೆ ಮತ್ತು ಪ್ರಶ್ನಾರ್ಥಕ ಚಿಹ್ನೆ
’ಏಕಾಂತ ಸ್ಥಳದೊಳು’ ಎಂಬುದರಲ್ಲಿನ ಒಂದು ಮಾತ್ರೆಯ ಕೊರತೆಯನ್ನು ತುಂಬಲಿಕ್ಕಾಗಿ ’ಏಕಾಂತ ಸ್ಥಾನದೊಳು’
’ಮನದಣಿವ ಗೀತದಿಂ’ ಎನ್ನವಲ್ಲಿ ’ಮನವೊಲಿವ ಗೀತದಿಂ’
ಇಷ್ಟೆಲ್ಲಾ ತಿದ್ದುಪಡಿ ಸೂಚಿಸಿ, ಕವನ ಪಾಸಾಗಿದೆ ಎಂದು ಸುಚಿಸುವಂತೆ ಬಣ್ಣದ ಪೆನ್ಸಿಲ್ಲಿನಲ್ಲಿ ರೈಟ್ ಮಾರ್ಕ್ ಹಾಕಿದ್ದರಂತೆ.
ಗುರುವಿನ ಹಾರೈಕೆ. ಕನ್ನಡದ ಸುದೈವ. ಕವಿತೆಯೂ ಪಾಸಾಯಿತು; ಶಿಷ್ಯನೂ ಪಾಸಾದ!
2 comments:
ಆಂಗ್ಲಕವಿ ಕಸಿನ್ಸ್ ಅವರ "ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತ್ರಗಳೆ ಕಾಣುತ್ತವೆ. ಇದು ಮಾತ್ರ ಸ್ವದೇಶಿಯಲ್ಲ. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?" ಎಂದು ಪ್ತಶ್ನಿಸಿದ ಮಾತು.
ಅವರನ್ನು ಕಂಡು ಉಗಮಿಸಿದ "ಪೂವು" ಅದು ಹೇಗೆ ಕನ್ನಡ ಕಾವ್ಯಗಳ ಹರಿಕಾರನಾಯಿತು!
ಇದು ನಮಗೆ ತಿಳಿಯಲು ಕಾರಣವಾದ ಹಿರಿಯರ ದಿನಚರಿ, ಮೊದಲ ಕನ್ನಡ ಕವಿತೆಗಳ ಕಟ್ಟು, ಅದನ್ನು ತಿದ್ದಿದ ಗುರುಗಳ ಪ್ರೀತಿ " ಗುರುವಿನ ಹಾರೈಕೆ. ಕನ್ನಡದ ಸುದೈವ. ಕವಿತೆಯೂ ಪಾಸಾಯಿತು; ಶಿಷ್ಯನೂ ಪಾಸಾದ! " ಇಂಥಹಾ ಸಿಹಿ ವೃತ್ತಾಂತವನ್ನು ಓದುಗರಿಗೆ ಒದಗಿಸಿದ "ಪೂವು" ಎಂಬ ಕವಿತೆಯ ಉಗಮದ ಬಗ್ಗೆ ಬರೆದ ಪ್ರಬಂಧ ಅದೆಷ್ಟು ಸುಂದರ! ತಮಗೆ ಧನ್ಯವಾದಗಳು.
nice !
Post a Comment