Monday, August 01, 2011

ಮತ್ತಷ್ಟು ಹೂವಿನ ಕವಿತೆಗಳು

‘ಸೌಂದರ್ಯಯಾಜಿ’ ಎನ್ನುವ ಕವಿತೆಯಲ್ಲಿ ತನ್ನ ಮನೆಯ ಉದ್ಯಾನವನವನ್ನು ನೋಡಲು ಬನ್ನಿ ಎಂದು ದೇವರುಗಳನ್ನು ಆಹ್ವಾನಿಸುತ್ತಾರೆ.
ಬನ್ನಿ, ಓ ಬಾನಲೆವರೆ, ನಮ್ಮ ತೋಟಕೆ,
ನಂದನವನೆ ಮೀರಿಸುವೀ ದಿವ್ಯನೋಟಕೆ.
ಬನ್ನಿ ಸೌಂದರ‍್ಯರಸದ ಅಮೃತದೂಟಕೆ,
ಅಲೋಕಸುಖವನೀವ ಈ ಲೋಕಪೀಠಕೆ:
ಉದ್ಯಾನವನವಿರುವುದು ಕವಿಯ ಮನೆಯ ಅಂಗಳದಲ್ಲಿ, ಆದ್ದರಿಂದ ಅದು ನಂದನಕ್ಕೂ ಮಿಗಿಲು!
ಕವಿಯ ಮನೆಯ ಅಂಗಳ
ದಿವಿಜರಿಗೂ ಮಂಗಳ!
ಸರಸ್ವತಿಯ ಕಂದನ
ಮನಕೆ ಮಿಗಿಲೆ ನಂದನ?
ಕವಿಯ ಮನೆಯಂಗಳದಲ್ಲಿ ಏನೆಲ್ಲಾ ಗಿಡ ಮರಗಳಿದ್ದವು? ಬಣ್ಣ ಬಣ್ಣದ ಹೂವುಗಳಿದ್ದವು? ಪಟ್ಟಿ ನೋಡಿ
ಅಲ್ಲಿ ಪಂಕ್ತಿ ಸೂರ್ಯಕಾಂತಿ; ಇಲ್ಲಿ ಪನ್ನೇರಿಳೆ;
ಅಲ್ಲಿ ಹೊಂಗುಲಾಬಿ ಹಂತಿಲ ಇಲ್ಲಿ ಚಿನ್ನ ವೂಮಳೆ;
ಇಲ್ಲಿ ಕೆಂಪು; ಅಲ್ಲಿ ಹಳದಿ; ಹಸುರು, ಪಚ್ಚೆ, ನೀಲಿ
ಹೊಸತೆ ಬಂತೊ ತಾಯ ಹರಕೆ ಹೂವ ರೂಪ ತಾಳಿ!
ಅದರಿಂದ ಕವಿಗೇನು ಉಪಯೋಗ?
ಕೋಕಿಲಾದಿ ಕೂಜನ;
ಸ್ಫಟಿಕಪುಷ್ಪ ಲಾಜನ;
ಸರ್ವಸೃಷ್ಟಿಯ ಸರ್ವಸುಖಕೆ
ಸತ್ಯ ಶಿವ ಸೌಂದರ್ಯಮುಖಕೆ
ಕವಿಯ ಯಾಜನ:
ಇದರಿಂದ ಕವಿಗೆ ಮಾತ್ರ ಉಪಯೋಗವೆ? ಕವಿ ತಾನು ಕಂಡಿದ್ದನ್ನು ಬೇರೆಯವರಿಗೂ ಕಾಣಿಸಬೇಕೆಂಬ ಹಂಬಲವುಳ್ಳವರು. ಅವರ ಹಲವಾರು ಕವಿತೆಗಳಲ್ಲಿ ವ್ಯಕ್ತವಾಗಿರುವಂತೆ ಈ ಕವಿತೆಯಲ್ಲೂ ತನ್ನ ರಸಯಾತ್ರೆಯಲ್ಲಿ ದಿವ್ಯ ಚೇತನಗಳೆಲ್ಲಾ ಪಾಲ್ಗೊಳ್ಳಬೇಕು, ರಸಾನುಭವ ಹೊಂದಬೇಕು ಎಂದು ಕವಿಮನ ಬಯಸುತ್ತದೆ.
ಕವಿಹೃದಯದ ಕರವೀಂಟುವ ಸೃಷ್ಟಿಗೋ ಪಯೋಧರ
ಸೊರಸುವಮೃತ ಮಧುವಿಗೆಣೆಯೆ ನಿಮ್ಮ ಅಪ್ಸರಾಧರ?
ಓ ದಿವ್ಯ ಚೇತನಗಳೇ,
ಇಳಿದು ಬನ್ನಿ, ಬನ್ನಿ!
ಇಳಿದು ಬಂದು ಕವಿಯೊಂದಿಗೆ ವಿಹರಿಸಿದರೆ ಸಹೃದಯನಿಗಾಗುವ ಲಾಭ ಏನು?
ಇಳಿಯೆ ನೀವು ಅಳಿಯೆ ನೋವು
ಬುವಿಗೆ ದಿವಿಯ ತನ್ನಿ!
ಕವಿಯ ಕಾಣ್ಪ ಸವಿಯೆ ನನ್ನಿ;
ತಿಳಿಯೆ ನಾವು,
ಬುವಿಯೆ ದಿವಿ ಎನ್ನಿ!
ಕವಿರಸಾನುಭವದ ಸೇತುವಿಂ
ಪ್ರವಾಹವಿಳಿದು ಬನ್ನಿ!
ಬನ್ನಿ, ಓ ಬನ್ನಿ.
ದಿವಿಯನುಳಿದು ಕವಿಯ ಬುವಿಯ ದಿವ್ಯದಿವಿಗೆ ಬನ್ನಿ!
‘ಹೂವು! ಹೂವು! ಹೂವು! ಹೂವು! ಉಸಿರು ಒಡಲು ಎಲ್ಲ ಹೂವು!’ ಎಂದು ಹೂವಿನ ಬಗ್ಗೆ ಹಾಡಿರುವ ಕವಿತೆ ‘ಹೂವಿನ ತೋಟದಲ್ಲಿ ಪುಷ್ಪಸಮಾಧಿ!’ ಪುಷ್ಪ ಸಮಾಧಿ ಎಂದಿದ್ದರೂ ಇಲ್ಲಿ ರಸಸಮಾಧಿಯಲ್ಲಿ ಮುಳುಗುವುದು ಕವಿಯೆ! ಒಂದೊಂದು ಬಣ್ಣದ ಹೂವನ್ನು ಧನ್ಯಾನಿಸುವಾಗಲೆಲ್ಲಾ ಕವಿಯೂ ಆ ಬಣ್ಣದೊಳಗೆ ಮುಳುಗಿಬಿಡುತ್ತಾರೆ. ಇಡೀ ಜಗತ್ತೇ, ಕವಿಯನ್ನೂ ಸೇರಿಸಿಕೊಂಡು ಆ ಹೂವಿನ ಬಣ್ಣವೇ ಆಗಿಬಿಡುತ್ತದೆ!
ಕೆಂಪಿನೆಡೆಯೊಳಾನು ಕೆಂಪು;
ನೀಲಿಯೆಡೆಯೊಳಾನು ನೀಲಿ;
ಬಣ್ಣ ಬಣ್ಣವೀ ಕುವೆಂಪು
ತಾನೆ ನೋಳ್ಪ ನೋಟವಾಗಿ
ಹೂವಿನೊಂದು ತೋಟವಾಗಿ
ವರ್ಣ ಜಲಧಿಯಲ್ಲಿ ತೇಲಿ
ಮುಳುಗಿ ರಸ ಸಮಾಧಿಯಲ್ಲಿ
ಮೃತವ ದಾಂಟಿ ಅಮೃತವೀಂಟಿ
ಎಂದು ಹೂವಿನ ನೋಟದಿಂದ ತನಗೆ ಲಭಿಸಿದ ಸ್ಥಿತಿಯನ್ನು ಕವಿತೆಯಾಗಿಸಿದ್ದಾರೆ.
ಜರ್ಬರಾ ಹೂವಿನ ಬಗ್ಗೆ ‘ಜರ್ಬರಾ’ ಎಂಬ ಕವಿತೆಯಿದೆ. ಜರ್ಬರಾ ಹೂವಿನ ಸೊಗಸು, ನಯ, ನಾಜೂಕುತನ ಎಲ್ಲವನ್ನೂ ಒಳಗೊಂಡಿರುವ ಕವಿತೆ 'ಜರ್ಬರಾ'
ತೊಂಡೆ ಹಣ್ಣು ಮಣಿಯೆ ನಾಚಿ
ನಗೆಯ ಚೆಲುವ ತುಟಿ ಚಾಚಿ
ಜಗದ ಒಲವನೆಲ್ಲ ಬಾಚಿ
ಜ್ವಲಿಸುವಳೀ ಜರ್ಬರಾ!
ಜರ್ಬರಾ ಹೂವಿನ ವರ್ಣವೈಭವವನ್ನು ಮನಗಾಣಿಸುವ ಸಾಲುಗಳು ಹೀಗಿವೆ.
ಪಂಚಬಾಣ ರಕ್ತಕಿರಣೆ
ಮನ್ಮಥ ಸತಿ ಅಲಕ್ತಚರಣೆ
ಜೀರ್ಕೋವಿಯ ಓಕುಳಿಯೆಣೆ
ಚಿಮ್ಮುವಳೀ ನಿರ್ಜರಾ!
‘ನಾಚುತಿರುವ ನಿರ್ಜರಾ ಬಿಂಬಾಧರದಪ್ಸರಾ!’ ಜರ್ಬರಾವನ್ನು
ನಿಲ್ಲು, ನೋಡು, ಕಾಣ್!
ಗಮನಿಸು, ಬಾಗು!
ಪರಿಭಾವಿಸು! ಆಸ್ವಾದಿಸು! ಧ್ಯಾನಿಸು! ಒಂದಾಗು!
ಹೀಗೆ ಆಸ್ವಾದಿಸಬೇಕು. ಆಸ್ವಾದಿಸದಿದ್ದರೆ,
ಅದು ಇದ್ದೂ ನೀನಿದ್ದೂ
ಅದೂ ಇಲ್ಲ, ನೀನೂ ಇಲ್ಲ;
ಶೂನ್ಯ ಇಬ್ಬರೂ!
ಆಸ್ವಾದಿಸಿದರೆ,
ಅಸ್ತಿ, ಭಾತಿ, ಪ್ರಿಯ:
ಅದೂ ನೀನೂ ಶಾಶ್ವತ!
ಅದೇ ನೀನು, ನೀನೆ ಅದು;
ಎರಡೊಂದಾಗುತ ಶಾಶ್ವತ!
ಒಂದು ಶೂನ್ಯ ಓಷ್ಠವಾಗೆ
ಪೂರ್ಣವೊಂದೆ ಚುಂಬಿತ!
ರಸಾನಂದ ಯೋಗಲಯದಿ
ಶೂನ್ಯವನ್ನು ಶೂನ್ಯವಪ್ಪಿ
ಪೂರ್ಣವಿಬ್ಬರೂ! ಋತ!
‘ಪುಷ್ಪ ಭಗವಾನ್’ ಎಂಬ ಕವಿತೆಯಲ್ಲಿ,
ಇದು ದರ್ಶನ:
ಇದು ಸಾಕ್ಷಾತ್ಕಾರ:
ಬರಿ ನೋಡುವುದಲ್ಲೋ!
ಈ ಅನುಭವಕಿನ್ನಾವುದು ಬೇರೆಯ ಹೆಸರಿಲ್ಲೋ!
ಎಂದು ಮಾತು ಸೋತ ಕವಿಯಾಗಿಬಿಡುತ್ತಾರೆ. ಹೂವು ಬಿಡುವುದು ಸಾಮಾನ್ಯದ ಪ್ರಾಕೃತ ಸಂಗತಿ ಮಾತ್ರವೇ? ಅಲ್ಲ. ಅದು ಭಾವಿಸಿ ಕಂಡರೆ, ಅದೊಂದು ‘ಭಗವಂತನ ಅವತಾರ’!
ಈ ಉದ್ಯಾನದಿ
ಈ ಹೊತ್ತರೆಯಲಿ
ಈ ಹೂಬಿಸಿಲಲಿ
ಧ್ಯಾನದಿ ನಿಂತವಲೋಕಿಸಿದರೆ ಪ್ರತ್ಯಕ್ಷಂ
ಇದು ಮಹದವತಾರ!
ಇದನೀಕ್ಷಿಸುವುದೇ ಸಾಕ್ಷಾತ್ಕಾರ!
ಹೇ ಭಗವತ್ ಪುಷ್ಪಾಕಾರ,
ನಿನಗಿದೋ ನಮಸ್ಕಾರ!
ಸಾಷ್ಟಾಂಗ ನಮಸ್ಕಾರ!
ಎಂದು ಆ ಭಗವಂತನ ಅವತಾರವೇ ಆಗಿರುವ ಪುಷ್ಪಕ್ಕೆ ಶಿರಭಾಗಿಬಿಡುತ್ತಾರೆ. ‘ಪವಾಡ ಸಂದರ್ಶನ’ ಎಂಬ ಕವಿತೆಯಲ್ಲಿ ಡಾಲಿಯಾ ಹೂವಿನಲ್ಲಿ ಆದ ಭಗವಂತನ ಸಾಕ್ಷಾತ್ಕಾರ, ಕಂಡ ದರ್ಶನ, ಅದರಿಂದ ತನಗೊದಗಿದ ರಸಸಮಾಧಿ ಸ್ಥಿತಿಯನ್ನು ಹೀಗೆ ದಾಖಲಿಸುತ್ತಾರೆ.
ಮನೆಯ ಉದ್ಯಾನದಲ್ಲಿ
ಅಗೆದಗೆದು ಹಸನು ಮಾಡಿದ ಈ ಮಣ್ಣಿನಲ್ಲಿ
ನೀರು ಗೊಬ್ಬರವಿಟ್ಟು
ಗೆಡ್ಡೆ ನಟ್ಟು
ಮೂಡಿದೀ ಡಾಲಿಯಾ ಗಿಡದ ಹಸುರು ಕೈಯಲ್ಲಿ
ಜಗದ ಅಮ್ಮ
ಬಿಸಿಲು ಗಾಳಿಯನಿಡಲು,
ಮೆಲ್ಲನೆಯೆ,
ಮೊಗ್ಗುಗಣ್ ತೆರೆತೆರೆಯೆ ತೆರೆದು
ಅಲೆಅಲೆಯ ಕಡಲು ಈ ಹೂವು ಬಿಡಲು,
ನಾನದರ ದಿವ್ಯ ಸಾನ್ನಿಧ್ಯದಲಿ ಕೈಮುಗಿದು ನಿಂತು
ವಿಸ್ಮಯಾರಾಧೆನಯ ರಸಸಮಾಧಿಯನಾಂತು
ತೂಣಗೊಂಡಿಹೆನಿಂತು
ಮಹಾದ್ಭುತ ಪವಾಡ ಸಂದರ್ಶನಕ್ಕೆ!
ಋಷಿ ಶಾಪದಿಂದ ಗುಲಾಬಿ ಗಿಡವಾಗಿ ಹುಟ್ಟಿರುವ ಅಪ್ಸರೆಯ ಹವಳದ ತುಟಿಯಂತೆ ಕಾಣುತ್ತದೆ ಗುಲಾಬಿ ಹೂ. ಅದು ಮದನ ಹೃದಯರತಿಯ ಸಾವಾಗಿ ಕಂಡು, ಯತಿಸ್ವರೂಪಿಯಾದ ಕವಿಯನ್ನು ಚುಂಬನಕಾಹ್ವಾನಿಸುತ್ತಿದೆಯಂತೆ! ಕೊನೆಗೆ
ನಾನೆಯೆ ಆಗಿದ್ದೆನೆ ಅವನು?
ಆ ಯತಿ?
ಬಲ್ಲನು ಆ ಶಿವನು!
ಪಶುಪತಿ!
ಎಂದು, ಆತ್ಮ ಪರಮಾತ್ಮರ ನಡುವಿನ ಆಟದಂತೆ ಕಂಡು ನಿಸ್ಸಹಾಯಕರಾಗಿಬಿಡುತ್ತಾರೆ. ‘ಉದ್ಯಾನದಲ್ಲಿ ಧ್ಯಾನಯೋಗಿ’ ಎಂಬ ಕವಿತೆಯಲ್ಲಿ ಭಗವಂತನಿಲ್ಲಿ ಪುಷ್ಪವೇಷಿ ಎಂಬ ಮಾತಿದೆ. ಆದ್ದರಿಂದ ಇದು ಬರಿಯ ಉದ್ಯಾನವಲ್ತೋ ಇದು ಪುಷ್ಪಕಾಶಿ! ಎನ್ನುತ್ತಾರೆ. ಈ ಪುಷ್ಪವನವೊಂದು ಸೇತು. ರಸರಾಮಸೇತು! ಇದರ ಮೂಲಕವೇ ಕವಿಗೆ ದೇವರನುರಾಗವಿಳಿದು ಬರುತ್ತಿರುವಂತೆ ಭಾಸವಾಗುತ್ತದೆ. ಪುಷ್ಪವನದೊಳಗಿರುವ ಕವಿ ದೇವಕಿಯ ಗರ್ಭಸ್ಥ ಕೃಷ್ಣನಿದ್ದಂತೆ, ಧ್ಯಾನದ ಫಲ ಕೃಷ್ಣಾವತಾರವಿದ್ದಂತೆ ಎಂಬುದನ್ನು
ದಿಟದಿ ದೇವಕಿಯ ದಿವ್ಯಗರ್ಭ:
ಧ್ಯಾನಿಗುದ್ಯಾನ
ಶ್ರೀ ಕೃಷ್ಣ ಸಂಭವಕ್ಕೊಡ್ಡಿರುವ ಯೋಗಸಂದರ್ಭ!
ಎಂಬ ಮಾತುಗಳು ಗರ್ಭೀಕರಿಸಿಕೊಂಡಿವೆ.
ಹೂವಿನಿಂದ ಕವಿಯ ಮನಸ್ಸು ಉದ್ಬೋಧನಗೊಳ್ಳುತ್ತಿದ್ದುದು, ಅದರಿಂದ ಕವಿಗಾಗುತ್ತಿದ್ದ ಆನಂದ, ಅನುಭವ, ದರ್ಶನ ಎಲ್ಲವನ್ನೂ ಒಳಗೊಂಡಿರುವ ಕವಿತೆ ‘ಹೂವಿನ ತೋಟದಲ್ಲಿ’. ಅದನ್ನಿಲ್ಲಿ ಇಡಿಯಾಗಿ ಉಲ್ಲೇಖಿಸಿಬಿಡುತ್ತೇನೆ. ಕವಿತೆ ಭಾಷೆ ಪ್ರೌಢವಾಗಿದೆ. ಗಂಭೀರವಾಗಿದೆ. ಅದರ ಲಯಬದ್ಧತೆ ಗಮನ ಸೆಳೆಯುತ್ತದೆ.
ಬಣ್ಣದ ರೂಪದಿ ಭಗವತ್ ಪ್ರೇಮ
ಕಣ್ಣನು ಚುಂಬಿಸಿದೆ!
ಬಿಂಬಾಧರದಾ ಸೃಷ್ಟಿಯ ಹೃದ್‌ರತಿ
ಜ್ವಾಲಾ ವರ್ಣದ ಲೀಲಾ ಪರ್ಣದಿ
ಓಷ್ಠಾಗ್ನಿಯ ಪ್ರತಿಬಿಂಬಿಸಿದೆ!
ಕಬ್ಬಿಗನೆದೆಯಲಿ ಶ್ರದ್ಧಾನಂದಂ
ಅಗ್ನಿಯ ಬುಗ್ಗೆಯೊಲುಕ್ಕುತೆ ಧಗ್ಗನೆ
ಪ್ರಾಣ ಸಮುದ್ರಂ ಜೃಂಭಿಸಿದೆ!
ದೇವಾಲಯುವೀ ಹೂವಿನ ತೋಟಂ!
ರಸ ಸಾಧನೆಯೀ ಯೋಗದ ನೋಟಂ!
ಜೀವನ ದೇವನ ಈ ಹೂಬೇಟಂ!
ಮೂಲೋಕವನಾಲಂಗಿಸಿದೆ
ಭಗವದ್ ಭೋಗದ ಈ ಜೇನೂಟಂ!
ತೃಷ್ಣೆಯ ಬೇರನೆ ಭಂಗಿಸಿದೆ!
ಇಂದ್ರಿಯಗಳನುಲ್ಲಂಘಿಸಿದೆ!
ನಾನೆಂಬಬುಧಿಯನಿಂಗಿಸಿದೆ!

3 comments:

Anonymous said...

nice introduction to a great poet :)

Pejathaya said...

ಹಿರಿಯ ಕನ್ನಡ ಕವಿಗೆ ದೇಸೀ ಹೂಗಳಷ್ಟೇ ವಿದೇಶದಿಂದ ಬಂದು ನೆಲೆಸಿದ ಹೂಗಳೂ ಪ್ರಿಯವಾಗಿದ್ದುವು. ಡಾಲಿಯಾ, ಜರ್ಬರಾ ಮುಂತಾದ ಹೂಗಳಿಗೂ ತಾರತಮ್ಯ ಇಲ್ಲದೇ ನಮಿಸಿ ವರ್ಣಿಸಿದ್ದಾರೆ.
ಕುವೆಂಫು ಅವರ ಸೌಂದರ್ಯ ಪ್ರಜ್ಞೆಗೆ ಕುವೆಂಪು ಅವರೇ ಸಾಠಿ.
ದೇವಾಲಯವೀ ಹೂವಿನ ತೋಟಂ!
ಈ ಮಾತು ನಿತ್ಯ ಸತ್ಯ.
- ಪೆಜತ್ತಾಯ ಎಸ್. ಎಮ್.

ಮನದಾಳದಿಂದ............ said...

ಅದ್ಬುತ ವರ್ಣನೆ........
ಕವಿವರ್ಯರ ಹೂವಿನ ಪ್ರೀತಿ ಓದಿ ತಿಳಿದಿದ್ದೆ, ನಿಮ್ಮ ಈ ಮಾಹಿತಿಯಿಂದ ಇನ್ನಷ್ಟು ತಿಳಿದುಕೊಳ್ಳುವಂತಾಯ್ತು.
ಧನ್ಯವಾದಗಳು.