ಸಿದ್ಧೇಶ್ವರಾನಂದರ ಆಣತಿಯಂತೆ, ಊರಿಗೆ ಹೋಗಿ, ಬಂಧು-ಬಾಂಧವರ, ಸ್ನೇಹಿತರ, ಪ್ರಕೃತಿಯ ಒಡನಾಡಿ, ತಕ್ಕಮಟ್ಟಿನ ಆರೋಗ್ಯ ಸಂಪಾದಿಸಿ ಮಲೆನಾಡಿನಿಂದ ಹಿಂದಿರುಗಿದ ಮೇಲೆ ಆಶ್ರಮದ ಪ್ರಶಾಂತ ನಿಃಶಬ್ದ ವಾತಾವರಣದಲ್ಲಿ ಕವಿಯ ಅಧ್ಯಯನ ಪ್ರಾರಂಭವಾಗುತ್ತದೆ. ಮೂರನೆಯ ವರ್ಷದ ಡಿಗ್ರಿ ಪರೀಕ್ಷೆಗೆ ಸಿದ್ಧತೆ ನಡೆದಿರುತ್ತದೆ. ಭಾಷಾ ಮತ್ತು ಇತರೆ ಮೈನರ್ ವಿಷಯಗಳ ಪರೀಕ್ಷೆಗಳು ಮೊದಲೆರಡು ವರ್ಷಗಳಲ್ಲಿಯೇ ಮುಗಿದು ಹೋಗಿದ್ದರಿಂದ, ಮೂರನೆಯ ವರ್ಷದಲ್ಲಿ ಮೇಜರ್ ವಿಷಯವಾಗಿದ್ದ ತತ್ವಶಾಸ್ತ್ರ ಮಾತ್ರ ಉಳಿದಿರುತ್ತದೆ. ತರಗತಿಯಲ್ಲಿ ನೋಟ್ಸ್ ಕೂಡಾ ತೆಗೆದುಕೊಳ್ಳುತ್ತಿರಲಿಲ್ಲವಂತೆ! ಪ್ರೊಫೆಸರುಗಳು ತಪ್ಪು ತಿಳಿದಾರು ಎಂದು ಕೊಂಡು ನೋಟ್ಸ್ ತೆಗೆದುಕೊಳ್ಳುವಂತೆ ನಟಿಸುತ್ತಿದ್ದರಂತೆ! ಆ ಇಡೀ ವರ್ಷದ ನೋಟ್ಸ್ ನಾಲ್ಕು ಐದು ಪುಟಗಳಷ್ಟೂ ಆಗಿರಲಿಲ್ಲವಂತೆ! ಆದರೆ ಅವರ ಜ್ಞಾನದ ಹಸಿವು ಕಡಿಮೆಯಾಗಿರಲಿಲ್ಲ. ತಮ್ಮ ಸಹಪಾಠಿಗಳೊಡನೆ ಆಶ್ರಮದ ತಾರಸಿಯ ಮೇಲೆ (ಸ್ವಾಮೀಜಿ, ತಾರಸಿಗೆ ಒಂದು ಲೈಟ್ ಎಳೆಸಿ, ಬೇಸಿಗೆಯಾದ್ದರಿಂದ ಅಲ್ಲಿ ಓದಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದರಂತೆ) ಜಾಯಿಂಟ್ ಸ್ಟಡಿಗೆ ಸೇರಿದ್ದಾಗ, ಅವರ ನೋಟ್ಸುಗಳನ್ನೇ ಇಟ್ಟುಕೊಂಡೇ ಸಹಪಾಠಿಗಳಿಗೂ ಅನುಕೂಲವಾಗುವಂತೆ ಕವಿ ವಿವರಿಸುತ್ತಿದ್ದರಂತೆ.
ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮತ್ತು ಮಹಾಮಾತೆಯ ಜನ್ಮೋತ್ಸವ ಸಂದರ್ಭಗಳಲ್ಲಿ ಬರೆದಿದ್ದ ಕವನಗಳನ್ನುಳಿದು ಬೇರೆ ಕವನಗಳ ರಚನೆಯ ಕಡೆಗೆ ಮನಸ್ಸು ಕೊಡಲಿಲ್ಲ. ರಚಿತವಾದವುಗಳು ಅಗ್ನಿಹಂಸ ಕವನಸಂಕನದಲ್ಲಿ ಸೇರಿವೆ. ಆದರೆ, ಆ ಸಂದರ್ಭದ ಬಲವ ನೀಡೆನೆಗೆ ಎಂಬ ಕವಿತೆ ಅಪ್ರಕಟಿತವಾಗಿ ಉಳಿದುಬಿಟ್ಟಿದೆ! ಪ್ರತಿನಿತ್ಯ ಸಂಜೆಯ ಹೊತ್ತು ಪೂಜೆ ಪ್ರಾರ್ಥನೆ ಮಂಗಳಾರತಿಯಲ್ಲಿ ಸ್ವಾಮೀಜಿಯವರ ಜೊತೆಗೆ ಇರುತ್ತಿದ್ದರು. ನಂತರ ಧ್ಯಾನ ಮಾಡುವುದೂ ನಡೆಯುತ್ತಿತ್ತು. ಸ್ವಾಮೀಜಿ, ಆ ಸಮಯದಲ್ಲಿ (೨.೩.೧೯೨೭) ಎಲ್ಲಾ ವಿದ್ಯುದ್ದೀಪಗಳನ್ನು ಆರಿಸಿ, ನೀಲಾಂಜನದ ಬೆಳಕಿನ ರಹಸ್ಯಮಯ ಕತ್ತಲಿನಲ್ಲೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರಂತೆ! ಅದನ್ನು ಕವಿ ಮತ್ತಿತರರೂ ಅನುಸರಿಸುತ್ತಿದ್ದರು. ಆ ಸಂದರ್ಭದಲ್ಲಿ ರಚಿತವಾದುದ್ದೇ ಬಲವ ನೀಡೆನೆಗೆ. ಚಿತ್ತಶುದ್ಧಿಗಾಗಿಯೂ ಆತ್ಮಶುದ್ಧಿಗಾಗಿಯೂ ಭಕ್ತನ ಚೇತನ ಬೇಡುತ್ತಿರುವಂತಿದೆ ಕವಿತೆ.
ಬಲವ ನೀಡೆನೆಗೆ, ಗುರುವೇ
ಬಲವ ನೀಡು. ||ಪಲ್ಲವಿ||
ಎಡವಿ ಬೀಳದೆ, ಬಿದ್ದರಳುಕದೆ
ಎದ್ದು ನಡೆಯುವಂತೆ ||ಅನುಪಲ್ಲವಿ||
ಜಗದ ಮೋಹವು ಮನವ ಮೋಹಿಸಿ
ಮಾಯ ಜಾಲವ ಬೀಸಿ ಬರುತಿರೆ
ಮತ್ತನಾಗದೆ ಕುರುಡನಾಗದೆ
ಚಿತ್ತಶುದ್ಧಿಯೊಳಿರುವ ತೆರದೊಳು...ಬಲವ...
ಆತ್ಮವೆಲ್ಲವ ಬಿಡದೆ ಮುತ್ತುತ
ಭುವಿಯ ತಿಮಿರವು ನುಂಗಲೈತರೆ
ದೆಸೆಯನರಿಯದೆ ಮನವು ಭಯದಲಿ
ಪುಡಿಯೊಳೊರಲುತ ಹೊರಳದಂದದಿ.....ಬಲವ...
ಧರೆಯ ರಂಗದಿ ಕಡುಗಿ ಕಾದುತ
ಅರಿಯ ಘಾತದಿ ಮುರಿದು ಬೀಳಲು
ನೆಚ್ಚ ತೊರೆಯದೆ ಬೆಚ್ಚಿ ಬೀಳದೆ
ಮತ್ತೆ ಕೆಚ್ಚೆದೆಯೀಯುವಂದದಿ.......ಬಲವ...
ದಿನಕ್ಕೆ ಎರಡೆರಡು ಪ್ರಶ್ನೆಪತ್ರಿಕೆಗಳಂತೆ ಅಂತೂ ಪರೀಕ್ಷೆ ಮುಗಿಯುತ್ತದೆ. ಮೊದಲನೆಯ ದಿನ ಬರೆದೂ ಬರೆದೂ ಕೈನೋವು ಹತ್ತಿ, ತಲಗೆ ಬಿಸಿ ಏರಿ ಆಶ್ರಮಕ್ಕೆ ಬಂದು ನಲ್ಲಿ ತಿರುಗಿಸಿ ತಣ್ಣೀರಿಗೆ ತಲೆಕೊಟ್ಟು ಕುಳಿತಿದ್ದರಂತೆ!
ಪರೀಕ್ಷೆ ಮುಗಿಯುತ್ತಿದ್ದಂತೆ, ಸ್ವಾಮೀಜಿಯ ಅಪ್ಪಣೆ ಪಡೆದು, ಒಂದಷ್ಟು ಪುಸ್ತಕಗಳನ್ನು ತುಂಬಿಕೊಂಡು ಮಲೆನಾಡಿಗೆ ಹೊರಟುಬಿಡುತ್ತಾರೆ. ಆ ಬಾರಿಯ ಬೇಸಿಗೆ ರಜಾದಲ್ಲಿ ನಡೆದ ಮೂರು ಘಟನೆಗಳ ಬಗ್ಗೆ ನೆನಪಿನ ದೋಣಿಯಲ್ಲಿ ದಾಖಲಿಸುತ್ತಾರೆ. ಒಂದು ಶೃಂಗೇರಿಗೆ ಹೋಗಿದ್ದು, ಎರಡು ಅಡಕೆ ತೋಟಕ್ಕೆ ಸಿಡಿಲು ಹೊಡೆದುದ್ದು ಹಾಗೂ ಅದಕ್ಕೆ ಶಾಂತಿ ಮಾಡಿಸಿದ್ದು! ಮತ್ತು ಮೂರನೆಯದು ಕವಿಗೆ ನ್ಯೂಮೋನಿಯಾ ಆಗಿ ವಿಷಮಿಸಿದ್ದು. ಇವುಗಳಲ್ಲಿ ಮೊದಲ ಮತ್ತು ಕೊನೆಯ ಘಟನೆಗಳು ಕವಿತಾ ರಚನೆಯ ದೃಷ್ಟಿಯಿಂದ ಮಹತ್ವವಾದವುಗಳು.
ಶೃಂಗೇರಿ ಯಾತ್ರೆಯ ಬಗ್ಗೆ ಕವಿ ಹೀಗೆ ಹೇಳುತ್ತಾರೆ: ನಾನು ಶೃಂಗೇರಿಗೆ ಹೋದದ್ದು ಪೂಜೆಗಾಗಿಯೂ ಅಲ್ಲ, ಯಾತ್ರಾರ್ಥಿಯಂತೆಯೂ ಅಲ್ಲ. ದೇ.ರಾ.ವೆಂಕಟಯ್ಯನವರು ಅವರ ಹೆಣ್ಣು ಕೊಟ್ಟ ಮಾವನಮನೆ ಮರಿತೊಟ್ಟಿಲಿಗೆ ಹೋಗುವಾಗ ಒಬ್ಬರೆ ಹೋಗಲು ಬೇಜಾರಾಗಿ ನನ್ನನ್ನೂ ಜೊತೆಗೆ ಬರುವಂತೆ ಕೇಳಿಕೊಂಡರು. ೧೯೨೭ರ ಹೊತ್ತಿಗಾಗಲೆ ಅವರು ಕಾರನ್ನಿಟ್ಟಿದ್ದರು... ಇಂಗ್ಲಾದಿಯಿಂದ ಕಾರಿನಲ್ಲಿ ಕುಪ್ಪಳಿಗೆ ಬಂದು ಜೊತೆಗೆ ಬಾ ಎಂದು ಕರೆದಾಗ ಸಂತೋಷದಿಂದಲೆ ಹೋಗಿದ್ದೆ.
ರಸ್ತೆ ಕೊರಕಲು ದಾರಿಯಾಗಿದ್ದರೂ, ಇಕ್ಕೆಲದ ಸಹ್ಯಾದ್ರಿ ಪರ್ವತಶ್ರೇಣಿಯ ಅರಣ್ಯಮಯ ಗಿರಿಕಂದರಗಳಿಮದ ಭವ್ಯ ರಮ್ಯವಾಗಿದ್ದುರಿಂದ ಸುಖಕರವೂ ಸಂತೋಷಕರವೂ ಕಾವ್ಯೋನ್ಮೇಕರವೂ ಆಗಿತ್ತಂತೆ! ಈ ಹಿಂದೆ ಎತ್ತಿನ ಗಾಡಿಯಲ್ಲೊಮ್ಮೆ ಶೃಂಗೇರಿಗೆ ಹೋಗಿದ್ದಾಗ ಅನುಭವ ಮಾತ್ರವಾಗಿದ್ದ ಸೌಂದರ್ಯಾನುಭೂತಿ, ಆಶ್ರಮದ, ಸ್ವಾಮೀಜಿಯ ಸಹವಾಸದ, ಅಧ್ಯಯನದ ಫಲವಾಗಿ ಕವಿಯ ಮನಸ್ಸು ಆಧ್ಯಾತ್ಮಿಕ ಪ್ರಜ್ಞೆಯ ದಾರ್ಶನಿಕ ಭೂಮಿಕೆಗೆ ಏರಿದ್ದುದರಿಂದ, ಪ್ರಯಾಣದ ದಾರಿಯ ಅನುಭವ ಈ ಬಾರಿ ಅನುಭಾವವೆ ಅಗಿಬಿಡುತ್ತದೆ.
ಅದ್ವೈತ ಮಹಾದರ್ಶನವನ್ನು ವಿಶ್ವಕ್ಕೆ ನೀಡಿದ ಆದಿ ಶಂಕರಾಚಾರ್ಯರ ದಿವ್ಯಸ್ಮೃತಿ, ತುಂಗೆಯ ಸುಂದರ ಸ್ನಾನಘಟ್ಟ, ಅಲ್ಲಿ ಬೃಹತ್ ಗಾತ್ರದ ಮತ್ಸ್ಯ ಸಂಕುಲ, ಆಕಾಶವನ್ನೇ ಎತ್ತಿ ಹಿಡಿದಿರುವಂತೆ ಕಾಣುವ ಗಿರಿಶೃಂಗ ಪಂಕ್ತಿ, ವಿವಿಧ ಪಕ್ಷಿಗಳ ಕೂಜನ, ಶಂಕರರ ದೇವಾಲಯ ಮೊದಲಾದವನ್ನು ನೋಡಿ, ಕವಿಯ ಚೇತನ ಒಂದು ದಿವ್ಯತೆಯನ್ನು ಅನುಭವಿಸುತ್ತದೆ. ಆ ಅನುಭವದ ಅಕ್ಷರರೂಪವೇ ಶೃಂಗೇರಿ ಎಂಬ ಅಪ್ರಕಟಿತ ಕವಿತೆ. ೨೧.೪.೧೯೨೭ರ ರಚನೆ.
ಇದೊಂದು ಪ್ರಬುದ್ಧವಾದ ರಚನೆ. ಆದರೆ ಅದು ಅಪ್ರಕಟಿತವಾಗಿ ಉಳಿದುದ್ದೇಕೆ? ಅದನ್ನು ಕುರಿತಂತೆ ಕವಿ ಹೇಳಿರುವ ಮಾತುಗಳಿವು: ಅದು ಎಲ್ಲಿಯೂ ಅಚ್ಚಾಗಿಲ್ಲ; ಯಾರ ಕಣ್ಣಿಗೂ ಬಿದ್ದಿಲ್ಲ. ಯಾವ ಕವನಸಂಗ್ರಹದಲ್ಲಿಯೂ ಸೇರದಿರುವುದಕ್ಕೆ ಕಾರಣ ಮಠಗಳು, ದೇವಸ್ಥಾನಗಳು, ನೂರಾರು ದೇವರುಗಳು, ಪುರೋಹಿತ ವರ್ಗದವರು, ಮತ ಮತ್ತು ಧರ್ಮದ ಹೆಸರಿನಲ್ಲಿ ವಿಜೃಂಭಿಸುತ್ತಿರುವ ಮೂಢನಂಬಿಕೆಗಳು ಇತ್ಯಾದಿಗಳ ವಿಷಯದಲ್ಲಿ ನನ್ನ ಮನೋಧರ್ಮದಲ್ಲಿ ಉಂಟಾದ ವಿರುದ್ಧ ಭಾವನೆಯೆ. ಜಗತ್ತಿನ ತತ್ವಜ್ಞರಲ್ಲಿ ಕಿರೀಟಸದೃಶರಾಗಿ ವಿಶ್ವ ವಿಶಾಲವಾದ ಅದ್ವೈತವನ್ನು ಬೋಧಿಸಿದ ಆಚಾರ್ಯನ ಕೇಂದ್ರಸ್ಥಾನ ಇಂದು ಯಾವ ದುರ್ಗತಿಗಿಳಿದಿದೆ? ಎಂತಹ ಸಂಕುಚಿತ ಜಾತಿಭಾವನೆಯ ಗೂಬೆಗವಿಯಾಗಿದೆ, ವಿಶ್ವಕ್ಕೇ ಜ್ಯೋತಿರ್ದಾನ ಮಾಡಲೆಂದು ಆಚಾರ್ಯನು ಕಟ್ಟಿದ ಆ ಸಂಸ್ಥೆ, ಇತರ ಅಂತಹ ಎನಿತೋ ಹಿಂದೂ ಸಂಸ್ಥೆಗಳಂತೆಯೆ? ನನ್ನ ಜುಗುಪ್ಸೆಗೆ ಕಾರಣ ಆ ಸಂಸ್ಥೆಗಳಲ್ಲ ಅವುಗಳ ಅಧೋಗತಿ ಮತ್ತು ಅವು ಇಳಿದಿರುವ ದುಃಸ್ಥಿತಿ! ಆ ಕವನವನ್ನು ಪ್ರಕಟಿಸಿದರೆ ನಾನೂ ಈಗಿನ ಶೃಂಗೇರಿ ಮಠದ ಭಕ್ತನೆಂದುಕೊಂಡಾರು ಎಂದು ಹೆದರಿ ಅದನ್ನು ಅಚ್ಚುಹಾಕಿಸಿರಲಿಲ್ಲ.
ಹಾಗೆ ನೋಡಿದರೆ, ಕುವೆಂಪು ಅವರ ಮೊದಲ ಕೊಳಲು ಕವನ ಸಂಗ್ರಹಕ್ಕೆ ಕವಿತೆಗಳನ್ನು ಆರಿಸಿದವರು ತಿರುಮಲೆ ಶ್ರೀನಿವಾಸಾಚಾರ್ಯ ಎಂಬುವವರು. ಶ್ರೀಯುತ ಮಾಸ್ತಿಯವರು ಕವನಸಂಗ್ರಹವನ್ನು ಪ್ರಕಟಿಸುವ ಮಾತನ್ನು ಹೇಳಿ, ಅದಕ್ಕೆ ಕವಿತೆಗಳನ್ನು ಆರಿಸಿಕೊಡುವ ಕೆಲಸವನ್ನು ಅವರ ಅಧೀನಾಧಿಕಾರಿಯಾಗಿದ್ದ ಶ್ರೀನಿವಾಸಾಚಾರ್ಯರಿಗೆ ವಹಿಸುತ್ತಾರಷ್ಟೆ. ವಸಂತ ಕುಸುಮ ಎಂಬ ಅದ್ವೈತ ದೃಷ್ಟಿಯ ಕವಿತೆ, ಕೊಳಲು ಸಂಗ್ರಹದಿಂದ ಹೊರಗುಳಿದ ಕಥೆಯನ್ನು ಹೇಳುವಾಗಲೇ ತಿರುಮಲೆ ಶ್ರೀನಿವಾಸಾಚಾರ್ಯರು ಈ ಕವನವನ್ನು (ವಸಂತ ಕುಸುಮ) ಅಷ್ಟಾಗಿ ಮೆಚ್ಚಿಕೊಳ್ಳದಿದ್ದುದಕ್ಕೆ ಬಹುಶಃ ಈ ಕವನದಲ್ಲಿ ಅಭಿವ್ಯಕ್ತವಾಗಿರುವ ಅದ್ವೈತ ದೃಷ್ಟಿಯೂ ಕಾರಣವಾಗಿರಬಹುದೆಂದು ತೋರುತ್ತದೆ, ವಿಶಿಷ್ಟಾದ್ವೈತದ ಶ್ರೀ ವೈಷ್ಣವರಾಗಿದ್ದ ಅವರಿಗೆ ಎಂದಿದ್ದರು. ಬಹುಶಃ ಶೃಂಗೇರಿ ಕವಿತೆ ಹೊರಗುಳಿಯುವುದಕ್ಕೆ ಕವಿಯ ಅಭೀಪ್ಸೆಯ ಜೊತೆಗೆ ಇದೂ ಕಾರಣವಾಗಿದ್ದಿರಬಹುದು. ನಂತರದ ಯಾವ ಸಂಕಲನದಲ್ಲೂ ಅದು ಪ್ರಕಟವಾಗದಿರುವುದಕ್ಕೆ ಕವಿಯ ಅಭಿಪ್ರಾಯವೇ ಅಂತಿಮವಾಗಿದೆ.
ನೆನಪಿನ ದೋಣಿಯಲ್ಲಿ ಅದರ ಪೂರ್ಣಪಾಠವನ್ನು ಕೊಡುವ ಕವಿ ಹೀಗೆ ಹೇಳುತ್ತಾರೆ: ಇದು ಶಂಕರಾಚಾರ್ಯರ ಅದ್ವೈತ ದರ್ಶನಕ್ಕೆ ಸಾಂಕೇತಿಕವಾದ ಶೃಂಗೇರಿಗೆ ಮಾತ್ರ ಅನ್ವಯಿಸುತ್ತದೆಯೆ ಹೊರತು ವರ್ಣಾಶ್ರಮ, ಜಾತಿಭೇದ, ಚತುರ್ವರ್ಣ, ಶೂದ್ರ, ಬ್ರಾಹ್ಮಣ, ಇತ್ಯಾದಿ ಸಂಕುಚಿತ ಭಾವನೆಗಳನ್ನು ಪೋಷಿಸುವ ಸಂಪ್ರದಾಯಕೂಪದ ಸಂಸ್ಥೆಗಲ್ಲ ಎಂಬುದನ್ನು ಯಾರೂ ಮರೆಯದಿರಲಿ ಎಂದು ಕೊಳ್ಳುತ್ತೇನೆ.
ಶೃಂಗೇರಿ
ಶ್ರೀಮಚ್ಛಂಕರ ಗುರುವರ ಪುರವಿದು
ಪಾವನಮಾಗಿಹ ಶೃಂಗೇರಿ;
ಪರಮತೆಗಾಲಯ, ರಮ್ಯತೆಗಾಶ್ರಯ,
ಬ್ರಹ್ಮಾನಂದಾವಾಸಮಿದು!
ಪುಣ್ಯ ತೀರ್ಥಜಲದಿಂದ ಮೆರೆವಮಲ
ತುಂಗಾ ತೀರೋದ್ಯಾನಮಿದು;
ಶಂಕರ ಕೇಸರಿ ಗರ್ಜಿಸುತಲೆದ ಮ-
ಹಾ ಅದ್ವೈತಾರಣ್ಯಮಿದು!
ಕಂಗಳ ಮೋಹಿಪ ಮಂಗಳಕರವಹ
ಶೃಂಗಗಳೆಲ್ಲಿಯು ಮೆರೆಯುತಿವೆ;
ಮನವನೆ ಅಳಿಸುವ ಘನತರವಾಗಿಹ
ಚಿನುಮಯನನುಭವವಾಗುತಿದೆ;
ಮಾಯಾ ಬಂಧವ ಮುರಿವಾ ಚೆಂದವ
ಮೋಕ್ಷಾನಂದವು ತೋರುತಿದೆ;
ಶಕ್ತಿಗೂಡಭಯ ಭಕ್ತಿವಾಹಿನಿಯ
ಮುಕ್ತಿಮಹಾರ್ಣವವಾಗುತಿದೆ!
ಕಲ್ಪನೆಯೆನ್ನನು ಶತಮಾನಗಳಾ-
ಚೆಗೆ ಕರೆದೊಯ್ಯನೆ ಒಯ್ಯುತಿದೆ:
ಅಂದಿನ ಜೀವನವಂದಿನ ನೋಟಗ
ಳಂದದಿ ಮನದೊಳು ಮೆರೆಯುತಿವೆ.
ಕುಸುಮಿತ ಮರದಡಿ ಶಂಕರ ಗುರು ತಾ
ಧ್ಯಾನದೊಳಿರುವುದ ನೋಡುವೆನು!
ಅಹಹಾ ಶಾಂತಿಗೆ ನೆಲವನೆಯಾಗಿಹ
ವದನವು ಜ್ಯೋತಿಯ ಬೀರುತಿದೆ!
ತುಂಗೆಯ, ಗುರುವಿನ ಮಂಗಳ ಚರಣ ಯು
ಗಂಗಳ ನಿನ್ನ ತರಂಗಗದೊಳು
ಮಂಜುಳ ವೇದ ನಿನಾದವ ಮಾಡುತ
ತೊಳೆಯುವ ನೀನೇ ಪಾವನಳು!
ನಿನ್ನಾ ಪರಮ ಪವಿತ್ರತೆ ಇಂದಿಗು
ಪಾಪವಿನಾಶಕವಾಗಿಹುದು.
ಜನ್ಮಮೃತ್ಯುಗಳ ಪಾಪಪುಣ್ಯಗಳ
ಮೀರಿದೆ ಗುರುವಿನ ಸಂಗದಲಿ!
ಎಲೆಲೇ ಕೋಗಿಲೆ, ಕೂಗುವೆ ಏತಕೆ
ಗುರುವಿನ ಧ್ಯಾನವ ಭಂಗಿಸಲು?
ವಿಕಲ್ಪವಿಲ್ಲದ ಭಾವಸಮಾಧಿಯ-
ಲಳಿವನು ಎಂಬುವ ಭಯದಿಂದೇ?
ಲೋಕಕೆ ಗುರುವರ ಬೋಧಾಮೃತ ತಾ
ದೊರಕದು ಎಂಬುವ ಭಯದಿಂದೇ?
ಹಾಡೈ, ಕೋಗಿಲೆ, ಸೃಷ್ಟಿ ನಿಯಮದೊಳು
ನಿನಗಿಹ ಕರ್ಮವ ನೀಮಾಡು!
ಗುರುವರ, ನಿನ್ನಯ ಹೃದಯ ವಿಶಾಲತೆ-
ಯರಿಹರು ನಿನ್ನನುಯಾಯಿಗಳು:
ಎಲ್ಲದರಲ್ಲಿಯು ಎಲ್ಲೆಲ್ಲಿಯು ನೀ
ಬ್ರಹ್ಮವ ಕಾಣುತ ಪೂಜಿಸಿದೆ.
ಮ್ಲೋಚ್ಛ ಶೂದ್ರರನು ತತ್ತ್ವವೇತ್ತರನು
ಒಂದೇ ಎನ್ನುತ ಭಾವಿಸಿದೆ;
ತ್ಯಾಗಭೋಗಗಳ ಕರ‍್ಮಧರ್ಮಗಳ
ಯೋಗದ ಪರಿಯನು ಬೋಧಿಸಿದೆ.
ಗುರುವರ, ನಿನ್ನೀ ಮುದ್ದಿನ ಭಾರತ
ಭೂಮಿಯ ದುರ್ಗತಿಗಿಳಿದಿಹುದು;
ಹಿಂದೂಸ್ಥಾನದ ರಮ್ಯಾರಣ್ಯವ
ಸೋಹಂ ಗರ್ಜನೆ ಇನ್ನೊಮ್ಮೆ
ಕುರಿಗಳ ಹರಿಗಳ ಮಾಡುವ ತೆರೆದೊಳು
ತುಂಬಲಿ, ಶಂಕರ ಕೇಸರಿಯೆ!
ತಾಯಿಯ ಭೂಮಿಯ ಸಲಹಲು ಜನಿಸೈ
ಭಾರತ ಭೂಮಿಯೊಳಿನ್ನೊಮ್ಮೆ!
(೨೪.೪.೧೯೨೭)
ಶಂಕರರ ಘನ ಉದ್ದೇಶ, ಮಹಿಮೆ ಎಲ್ಲವನ್ನೂ ಸಾರು ಈ ಕವಿತೆ ಅತ್ಯಂತ ಮಹತ್ವದ್ದು. ೪ ೪ ೪ ೪, ೪ ೪ ೪ ೧ರ ಲಯದ ಪಂಕ್ತಿಗಳು ಕವಿತೆಯುದ್ದಕ್ಕೂ ಗಮನ ಸೆಳೆಯುತ್ತವೆ. ಈ ಕವಿತೆಗೆ ಸಂಬಂಧಪಟ್ಟಂತೆ, ಧರ್ಮ, ವರ್ಣಾಶ್ರಮ, ಜಾತಿಪದ್ಧತಿ, ಮಠ ಮೊದಲಾದುವುಗಳ ಬಗ್ಗೆ ಹೀಗೆ ಅಭಿಪ್ರಾಯಪಟ್ಟಿದ್ದಾರೆ. ನನ್ನ ಜೊತೆ ಬಂದಿದ್ದವರು ಭಟ್ಟರ ಕೈಲಿ ಪೂಜೆಗೀಜೆ ಮಾಡಿಸುವ ಕಾರ್ಯದಲ್ಲಿ ತೊಡಗಿದ್ದರು. ನಾನು ಎಂದಿನಂತೆ ಆ ಪೂಜೆಪ್ರಸಾದಗಳ ಗೋಜಿಗೆ ಹೋಗದೆ ಶಾಂಕರ ದೇವಾಲಯದ ಪ್ರಾಚೀನ ಪ್ರಶಾಂತಿಯಲ್ಲಿ ಪರಿಚಿಂತನಶೀಲನಾಗಿದ್ದೆ: ಈ ದೇವಾಲಯಗಳ ಸ್ವರೂಪವೆ ಬದಲಾಗದಿದ್ದರೆ, ಶ್ರುತ್ಯಂಶದ ವೇದಾಂತ ದರ್ಶನವನ್ನಾಶ್ರಯಿಸಿ, ಸ್ಮೃತ್ಯಂಶದ ಧರ್ಮಶಾಸ್ತ್ರಪುರಾಣಾದಿಗಳ ಕಾಲದೇಶಾಚಾರಗಳ ಅನಿತ್ಯಾಂಶಗಳನ್ನು ತ್ಯಜಿಸದಿದ್ದರೆ ಧರ್ಮದ ವಿನಾಶ ಇಂದಲ್ಲ ನಾಳೆ ಸ್ವತಃಸಿದ್ಧ! ವರ್ಣಾಶ್ರಮ, ಜಾತಿಪದ್ಧತಿ, ಚಾತುವೃರ್ಣ್ಯ ಮೊದಲಾದ ಮೂಢನಂಬಿಕೆಗಳ ಪುರೋಹಿತಶಾಹಿಯಿಂದ ಸಂಪೂರ್ಣವಾಗಿ ಪಾರಾದಂದೇ ಹಿಂದೂಮತವು ವೇದಾಂತ ದರ್ಶನವಾಗಿ, ವಿಶ್ವಧರ್ಮವಾಗಿ, ಸರ್ವಧರ್ಮಗಳನ್ನು ಒಳಗೊಂಡು, ನಿಜವಾದ ವಿಶ್ವಧರ್ಮವಾಗುತ್ತದೆ. ಅಲ್ಲಿಯವರೆಗೂ ಅದು, ಶೂದ್ರಪೀಡನಕರವಾಗಿ ಪುರೋಹಿತ ಪೀಡೆಯ ಬ್ರಾಹ್ಮಣ್ಯ ಮಾತ್ರವಾಗಿರುತ್ತದೆ; ಮತ್ತು ಬುದ್ಧಿಯುಳ್ಳವರಿಗೆ ಜುಗುಪ್ಸೆ ಉಂಟುಮಾಡುವ ಅಸಹ್ಯವಾಗಿರುತ್ತದೆ.
ಈ ಅಸಹ್ಯ ಭಾವನೆ ಉಂಟಾಗುವುದನ್ನು ತಪ್ಪಿಸಲೋಸುಗವಾದರೂ ಅದ್ವೈತ ಕೇಸರಿ, ಜನಿಸೈ ಭಾರತ ಭೂಮಿಯೊಳಿನ್ನೊಮ್ಮೆ!
1 comment:
ಕುವೆಂಪು ಅವರ ಪ್ರಕೃತಿಯ ಆರಾಧನೆಯ ಭಾವವನ್ನು ಬೆಳೆಸಿಕೊಂಡು ಈ ಅಧ್ಯಾಯದ ಕೊನೆಯ ಸಾಲುಗಳ ಆಶಯವನ್ನು ನಾವು ಪುನಃ ಉಚ್ಛರಿಸಿ ನಮ್ಮ ರಾಷ್ಟ್ರವನ್ನು ನಿಜವಾದ ಜಾತ್ಯಾತೀತ ಮತ್ತು ಮತಾತೀತ ರಾಷ್ಟ್ರವನ್ನಾಗಿ ಬೆಳಗಬೇಕಿದೆ. ಆಗ ನಮ್ಮ ಭಾರತ ಮಹಾತ್ಮಾಗಾಂಧಿಯವರ ಕನಸಿನ ಭಾರತ ಆದೀತು. ಕುವೆಂಪು ಅವರ ಮನ ಸಂತಸದಿ ನಲಿದೀತು.
Post a Comment