Monday, November 21, 2011

ಭದ್ರಾವತಿಯ ದವಾಖಾನೆಯಲ್ಲಿ ಹುಟ್ಟಿತ್ತು 'ನೇಗಿಲಯೋಗಿ' ರೈತಗೀತೆ!

ಕುಪ್ಪಳಿಯ ಅಡಕೆ ತೋಟಕ್ಕೆ ಸಿಡಿಲು ಹೊಡೆದ ಘಟನೆಯನ್ನು ಕವಿ ನೆನಪಿನ ದೋಣಿಯಲ್ಲಿ ಸವಿವರವಾಗಿ ಕೊಟ್ಟಿದ್ದಾರೆ. ಅದೊಂದು ದುರ್ಘಟನೆ ಎಂದು ಭಾವಿಸಿದ ಮನೆಯವರು ಅದಕ್ಕೆ ಶಾಂತಿ ಮಾಡಿಸುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಆದರೆ, ಕವಿಯ ಪಾಲಿಗೆ, ಸಿಡಿಲು ಹೊಡೆಯುವುದು ಬರಿಯ ನಿಸರ್ಗ ವ್ಯಾಪಾರ ಮಾತ್ರ. ಅದನ್ನು ದೋಷ ಎಂದು ಭಾವಿಸುವುದಾಗಲೀ, ಅದಕ್ಕೆ ಪುರೋಹಿತರನ್ನು ಕರೆಸಿ ಶಾಂತಿ ಮಾಡಿಸುವುದಾಗಲೀ ಮೌಢ್ಯವನ್ನು ಒಪ್ಪಿಕೊಂಡಂತೆಯೇ ಸರಿ. ಸಹಜವಾಗಿ ಕವಿ ಶಾಂತಿ ಮಾಡಿಸುವ ಕಾರ್ಯಕ್ರಮವನ್ನು ವಿರೋಧಿಸುತ್ತಾರೆ. ಅವರ ಬೆಂಬಲಕ್ಕೆ ತರುಣವರ್ಗ ನಿಲ್ಲುತ್ತದೆ. ಹಾರುವರ ಕೈಯಿಂದ ಪೂಜೆ ಮಾಡಿಸಿ ಸಮಾರಾಧನೆಯ ಊಟ ಹಾಕಿಸುವುದರಿಂದ ಸಿಡಿಲು ಬಡಿದು ಆಗಿರುವ ನಷ್ಟಕ್ಕೆ ಪರಿಹಾರ ದೊರೆಯುವುದಿಲ್ಲ ಎಂಬ ಇವರ ವಾದ ಮನೆಯವರ ನಂಬಿಕೆಯ ಎದುರಿಗೆ ಶಕ್ತಿ ಕಳೆದುಕೊಳ್ಳುತ್ತದೆ!
ಕಾರ್ಯಕ್ರಮಕ್ಕೆ ವಿರೋಧವಿದ್ದರೂ, ಅಂದು ಮಾಡಿದ್ದ ಊಟಕ್ಕೆ ವಿರೋಧ ಇರಬೇಕಿಲ್ಲವಷ್ಟೆ!? ಪುಳಿಚಾರಿನ ಸಿಹಿಯೂಟ. ಶೂದ್ರವರ್ಗಕ್ಕೆ ಅಷ್ಟೇನು ಆಧರಣೀಯವಲ್ಲದಿದ್ದರೂ ನಂಟರಿಷ್ಟರ ಜೊತೆ ಸೇರಿ ಕವಿಯೂ ಪಟ್ಟಾಗಿ ಹೊಡೆದುಬಿಡುತ್ತಾರೆ. ಮಿತ್ರರೊಂದಿಗೆ ಸ್ಪರ್ಧಿಸಿ ಹೋಳಿಗೆ ತುಪ್ಪ ಪಾಯಸ ಒಡೆ ಮುಂತಾದವುಗಳನ್ನು ಮೀರಿ ತಿನ್ನುತ್ತಾರೆ. ಕವಿಯೇ ಹೇಳುವಂತೆ ’ಪ್ರಚ್ಛನ್ನ ಯೌವನಮದವಶನಾಗಿ!’. ಆದರೆ ಅದರ ಪರಿಣಾಮ ಮಾತ್ರ ಭೀಕರವಾಗಿತ್ತು. ’ಅಶನಿ’ಗಾಗಿ ಮಾಡಿದ ಶಾಂತಿ ’ಶನಿ’ಯಾಗಿ ಕಾಡಿತ್ತು, ನ್ಯೂಮೋನಿಯಾ ರೂಪದಲ್ಲಿ!
ಮೊದಲು ಹೊಟ್ಟೆ ಕೆಟ್ಟು, ನಂತರ ಜ್ವರ ಕೆಮ್ಮು ಶುರುವಾಯಿತು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕವಿ, ಕುಪ್ಪಳಿಯಲ್ಲಿ ಇದ್ದ ದಿನಗಳಲ್ಲಿ ಮಾಡುತ್ತಿದ್ದ ನಿತ್ಯ ಕಾಯಕವನ್ನು - ನಸುಕಿನಲ್ಲಿಯೇ ಕವಿಶೈಲಕ್ಕೆ ಹೋಗಿ ವ್ಯಾಯಾಮ ಪ್ರಾಣಾಯಮ ಧ್ಯಾನ -ನಿಲ್ಲಿಸಲಿಲ್ಲ. ಮಂಜು ಬೀಳುತ್ತಿದ್ದ ಸಮಯದಲ್ಲಿ ಆ ಕಾಯಕ ನಡೆಯುತ್ತಿದ್ದುದರಿಂದ ಜ್ವರ ಉಲ್ಬಣಗೊಂಡು ನ್ಯೂಮೋನಿಯಾ ಆಗಿಬಿಟ್ಟಿತು. ದೇವಂಗಿ ಆಸ್ಪತ್ರೆಯಿಂದ ಔಷಧಿಯನ್ನು ತಂದು ಕೊಟ್ಟರೂ ಜ್ವರ ಕಡಿಮೆಯಾಗಲಿಲ್ಲ. ಆಗಲೇ ಮೈಸೂರಿನಿಂದ ಬಂದ ಕಾಗದ ಅವರು ಎರಡೂ ಭಾಗದಲ್ಲಿಯೂ ಎರಡನೆ ಕ್ಲಾಸಿನಲ್ಲಿ ತೇರ್ಗಡೆಯಾದ ವಿಚಾರ ತಿಳಿಯುತ್ತದೆ. ಮನೆಯವರಿಗೆಲ್ಲಾ, ಊರವರಿಗೆಲ್ಲಾ ತಮ್ಮವನೊಬ್ಬ ಬಿ.ಎ. ಪಾಸಾದನಲ್ಲ ಎಂಬ ಹೆಮ್ಮೆ. ’ನನ್ನ ಬಿ.ಎ. ಪಾಸಿನಿಂದ ಯಾರಿಗೂ ಮೂರು ಕಾಸಿನ ಪ್ರಯೋಜನವಾಗದಿದ್ದರೂ ಎಲ್ಲರೂ ಸಂತೋಷಪಟ್ಟರು’ ಎನ್ನುತ್ತಾರೆ ಕವಿ.
ಆದರೆ ನ್ಯೂಮೋನಿಯಾ ಉಲ್ಬಣಗೊಂಡು ಒಮ್ಮೊಮ್ಮೆ ಮೂರ್ಛೆ ಹೋಗುವಷ್ಟರಮಟ್ಟಿಗೆ ನಿತ್ರಾಣಗೊಂಡಿದ್ದ ಕವಿಗೆ ಮಲಮೂತ್ರ ವಿಸರ್ಜನೆಗೆ ಹೋಗುವುದೂ ಕಷ್ಟವಾಗಿಬಿಡುತ್ತದೆ. ಜಗಲಿಯಲ್ಲೇ ಹಾಸಿಗೆ ಹಾಸಿ ಮಲಗಿಸಲಾಗುತ್ತದೆ. ನಂತರ ಬದುಕುವುದೇ ಸಂದೇಹಾಸ್ಪದವಾಗಿ ತೋರಿ ಶಿವಮೊಗ್ಗೆಗೆ ಟೆಲಿಗ್ರಾಂ ಕೊಟ್ಟು ಆಸ್ಪತ್ರೆಗೆ ಸಾಗಿಸುವ ವಿಚಾರ ಮನೆಯಲ್ಲಿ ನಡೆಯುತ್ತದೆ. ಟೆಲಿಗ್ರಾಂ ಕೆಲಸ ಮಾಡುತ್ತದೆ. ಮಾನಪ್ಪ ಬಾಡಿಗೆ ಕಾರು ಮಾಡಿಕೊಂಡು, ಭದ್ರಾವತಿಯಲ್ಲಿ ಡಾಕ್ಟರಾಗಿದ್ದ ಚೊಕ್ಕಂ ಐಯ್ಯಂಗಾರರನ್ನು ಜೊತೆಗೆ ಕರೆದುಕೊಂಡೇ ನಡುರಾತ್ರಿಯ ಹೊತ್ತಿಗೆ ಬರುತ್ತಾರೆ. ಸದಾ ವಿನೋದಶೀಲರಾಗಿರುತ್ತಿದ್ದ ಡಾ. ಚೊಕ್ಕಂ, ರೋಗಿಯನ್ನು ಪರೀಕ್ಷಿಸುತ್ತಲೇ ಗಂಭೀರ ವದನರಾಗಿಬಿಡುತ್ತಾರೆ. ಒಂದು ಇಂಜೆಕ್ಷನ್ನಷ್ಟೇ ಕೊಟ್ಟು ರಾತ್ರೋರಾತ್ರಿಯೇ ರೋಗಿಯನ್ನು ಭದ್ರಾವತಿಯ ತಮ್ಮ ಆಸ್ಪತ್ರೆಗೆ ಸಾಗಿಸಲು ನಿಶ್ಚಯಿಸಿಬಿಡುತ್ತಾರೆ. ಮನೆಯವರಿಗೆಲ್ಲ ದಿಗಿಲಿಟ್ಟುಕೊಳ್ಳುತ್ತದೆ. ಮುಂಗಾರು ಮಳೆಯ ಆರ್ಬಟ. ರಸ್ತೆಗಳೇ ಇಲ್ಲದ ಮಲೆನಾಡಿನಲ್ಲಿ, ಕ್ಯಾನ್ವಾಸ್ ಮುಚ್ಚಿಗೆಯ ಫೋರ್ಡ್ ಕಾರಿನಲ್ಲಿ, ನಿತ್ರಾಣನಾಗಿ ಮೂರ್ಛೆಗೆ ಬೀಳುತ್ತಿದ್ದ ರೋಗಿಯನ್ನು ಎಪ್ಪತ್ತು ಎಂಬತ್ತು ಮೈಲಿ ಸಾಗಿಸುವ ಕಷ್ಟದ ನಿರ್ಧಾರ ಮಾಡಿಯೇ ಬಿಡುತ್ತಾರೆ.
ದಾರಿಯಲ್ಲಿ ಸಾಗುವಾಗ ಕಾರಿನ ಹೆಡ್‌ಲೈಟ್‌ಗಳೇ ಕೆಟ್ಟುಹೋಗುತ್ತವೆ. ಅವರ ದೊಡ್ಡ ಚಿಕ್ಕಪ್ಪಯ್ಯ ಅಪಶಕುನ ಕಂಡವರಂತೆ ಆತಂಕಪಡುತ್ತಾರೆ. ಆದರೆ ಡಾ. ಚೊಕ್ಕಂ ಮಾತ್ರ ತಮ್ಮ ಮನೋಸ್ಥೈರ್ಯವನ್ನು ಕಳೆದುಕೊಳ್ಳದೆ, ರೋಗಿಯ ನಾಡಿಯನ್ನೊಮ್ಮೆ ಪರಿಶೀಲಿಸುತ್ತಾರೆ. ಮನೆಯಿಂದ ತಂದಿದ್ದ ಕಾಫಿಯನ್ನು ರೋಗಿಗೆ ಕುಡಿಸಿ ನಸುಕಾಗುವವರೆಗೂ ಕಾಯ್ದು ನಂತರ ಹೊರಡುತ್ತಾರೆ. ಭದ್ರಾವತಿಯ ನದಿಯ ದಂಡೆಯ ಮೇಲಿದ್ದ ಅವರ ಆಸ್ಪತ್ರೆಗೆ ತಲುಪಿದ ಮೇಲೆ ಡಾ. ಚೊಕ್ಕಂ ರೋಗಿಯ ಶುಶ್ರೂಷೆಗೆ ಮೊದಲಿಟ್ಟುಕೊಳ್ಳುತ್ತಾರೆ. ಬಹಳ ವರ್ಷಗಳ ನಂತರ ಆ ಘಟನೆಯ ಬಗ್ಗೆ ಹೇಳುತ್ತಾ, ಡಾ. ಚೊಕ್ಕಂ ಕುವೆಂಪು ಅವರ ಹತ್ತಿರ ’It (pulse) was so low, I was shaking in my boots. And I was cursing myself for having brought you in the car in such a condition. And began praying’ ಎಂದಿದ್ದರಂತೆ.
ನ್ಯೂಮೋನಿಯಾ ಕಾರಣದಿಂದ ಕವಿಗೆ ಒಂದಷ್ಟು ದಿನಗಳ ಆಸ್ಪತ್ರೆಯ ವಾಸ ಶುರುವಾಗುತ್ತದೆ. ಕುವೆಂಪು ಮತ್ತು ಮಾನಪ್ಪ ನಂಬಿದ್ದ ಗುರುಬಲವೋ, ದೈವಬಲವೋ ಅಥವಾ ಡಾ.ಚೊಕ್ಕಂ ಅವರ ಪ್ರಾರ್ಥನೆ ಮತ್ತು ಶ್ರಮದ ಫಲವೋ ಆಸ್ಪತ್ರೆ ಸೇರಿದ ಮಾರನೆಯ ದಿನದಿಂದಲೇ ಜ್ವರ ಇಳಿಮುಖವಾಗುತ್ತಾ ಹೋಗುತ್ತದೆ. ಆದರೂ ಯಾವುದೇ ಮಾನಸಿಕ ಶ್ರಮದ ಕಾರ್ಯವನ್ನು ಮಾಡದಂತೆ ಕಟ್ಟಾಜ್ಞೆ ವಿಧಿಸಿಬಿಟ್ಟಿರುತ್ತಾರೆ. ದೈಹಿಕ ಬಲ ಬರುವವರೆಗೂ ಕವಿತೆ ಕಟ್ಟುವ ಕೆಲಸವೂ ಬೇಡ ಎಂದು ಪಥ್ಯ ಹೇಳಿದ್ದರಂತೆ! ಆದರೆ ಬಣ್ಣದ ಚಿತ್ರಗಳನ್ನು ನೋಡುವುದನ್ನು ನಿಷೇಧಿಸಿರಲಿಲ್ಲವಂತೆ; ಕಲಾತ್ಮಕವಾದ ಚಿತ್ರಗಳನ್ನು ನೋಡಿ ಆನಂದಿಸುವುದರಿಂದ ಕಾಯಿಲೆ ಬೇಗ ವಾಸಿಯಾಗಲು ನೆರವಾಗುತ್ತದೆ, ಎಂಬ ನಂಬಿಕೆಯಿಂದ. ಆಗ ಮಾನಪ್ಪ ಭಾರತೀಯ ಮಹಾವರ್ಣಚಿತ್ರಕಾರರ ಚಿತ್ರಗಳನ್ನೊಳಗೊಂಡ ನಾಲ್ಕು ’ಆಲ್ಬಂ’ಗಳನ್ನು ತಂದುಕೊಟ್ಟರಂತೆ. ಪ್ರಕೃತಿಯನ್ನು ನೋಡುತ್ತಾ ಉಂಟಾಗುತ್ತಿದ್ದ ರಸಾನಂದವನ್ನೇ ಸಹೃದಯನಾದವನು ವರ್ಣಚಿತ್ರವನ್ನು ವೀಕ್ಷಿಸಿ ಪರಿಭಾವಿಸಿದಾಗ ಅನುಭವಿಸಬಹುದು. ಇನ್ನು ಕುವೆಂಪು ಅವರಿಗೆ ಅದು ಅಸಾಧ್ಯವಾದುದ್ದೇನಲ್ಲ ಅಲ್ಲವೆ? ಕೆಲವು ದಿನಗಳ ನಂತರ ಡಾ. ಚೊಕ್ಕಂ ಓದುವುದಕ್ಕೆ ಅನುಮತಿಯಿತ್ತರೂ, ಬರೆಯುವುದು ಇನ್ನಷ್ಟು ದಿನ ಬೇಡ ಅನ್ನುತ್ತಿದ್ದರಂತೆ. ಮಾನಪ್ಪ ಶಿವಮೊಗ್ಗದಿಂದ ಬರುವಾಗ ಹಿಂದೂ ಪತ್ರಿಕೆಯನ್ನು ತಂದುಕೊಡುತ್ತಿದ್ದರಂತೆ. ನೂರಾರು ವರ್ಣಚಿತ್ರಗಳನ್ನು ನೋಡಿ ರಸಾನುಭವವನ್ನು ಪಡೆದಿದ್ದ ಕವಿಯ ಮನಸ್ಸು ಸಹಜವಾಗಿಯೇ ಕವಿತಾ ರಚನೆಯಲ್ಲಿ ತೊಡಗಿಬಿಡುತ್ತದೆ. ಆದರೆ ಅವನ್ನೆಲ್ಲಾ ಎಷ್ಟು ದಿನ ಎಂದು ನೆನಪಿಟ್ಟುಕೊಳ್ಳುವುದು? ಮಾನಪ್ಪನಿಂದ ಹೇಗೋ ಒಂದು ಪೆನ್ಸಿಲ್ ಸಂಪಾದಿಸಿ, ಹಿಂದೂ ಪತ್ರಿಕೆಯ ಅಂಚಿನಲ್ಲಿ ಖಾಲಿ ಇದ್ದ ಜಾಗದಲ್ಲಿ ಬರೆದಿಡಲಾರಂಭಿಸಿದರಂತೆ! ಹೀಗೆ ಪತ್ರಿಕೆಯಂಚಿನಲ್ಲಿ ಬರೆದಿಟ್ಟಿದ್ದ ಕವಿತೆಗಳ ಸಂಖ್ಯೆ ಹನ್ನೊಂದು!
ಹೀಗೆ ವಿವಿಧ ವರ್ಣಚಿತ್ರಗಳಿಂದ ಪ್ರೇರಿತರಾಗಿ ರಚಿತವಾದ ಆರು ಕವಿತೆಗಳಲ್ಲಿ ಮೂರು ಕವಿತೆಗಳು - ಮುಜುಂದಾರರ ’Divine Flute’ ಚಿತ್ರದ ಪ್ರೇರಣೆಯಿಂದ ರಚಿತವಾದ ’ಮುರಳಿ ಶಿಕ್ಷ’; ’In Expectation’ ಚಿತ್ರವನ್ನು ನೋಡಿ ಬರೆದ ’ಹಾರೈಕೆ’; ’Lingering Look’ ಚಿತ್ರವನ್ನು ನೋಡಿ ಬರೆದ ’ನಟ್ಟ ನೋಟ’ - ಷೋಡಶಿ ಸಂಕಲನದಲ್ಲಿ ಪ್ರಕಟವಾಗಿವೆ. ಮುಜುಂದಾರರದೇ ಆದ ’Traffic in Soul’ ಚಿತ್ರದಿಂದ ಪ್ರೇರಿತರಾಗಿ ಬರೆದ ’ಆತ್ಮನಿವೇದನ’ ಕವಿತೆ (’ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೇ ಬೇಗ, ಸಖಿ!’ ಎಂದು ಆರಂಭವಾಗುವ, ಪ್ರಸಿದ್ಧವಾಗಿರುವ ಕವಿತೆ) ಪ್ರೇಮಕಾಶ್ಮೀರ ಸಂಕಲನದಲ್ಲಿ ಪ್ರಕಟವಾಗಿದ್ದರೆ, The Goal ಚಿತ್ರದಿಂದ ಪ್ರೇರಿತವಾಗಿ ಬರೆದ ’ಗತಿ’ ಕೊಳಲು ಸಂಕಲನದಲ್ಲಿದೆ. ಆದರೆ ಅನಾಮಿಕ ಚಿತ್ರಕಾರನೊಬ್ಬನ ಚಿತ್ರದ ಪ್ರೇರಣೆಯಿಂದ ಬರೆದ ’ಓಮರ್ ಖಯಾಮ್’ ಕವಿತೆ ಅಪ್ರಕಟಿತವಾಗಿ ಉಳಿದುಬಿಟ್ಟಿದೆ! ನೆನಪಿನ ದೋಣಿಯನ್ನು ಬರೆಯುವಾಗ, ಕವಿ ನೆನಪು ಮಾಡಿಕೊಂಡು ಕೊಟ್ಟಿರುವ ಚಿತ್ರದ ವಿವರಗಳು ಹೀಗಿವೆ: ಒಬ್ಬ ರಸಿಕ ಗಡ್ಡಧಾರಿ ಒಂದು ಮರದಡಿಯಲ್ಲಿ ಒಬ್ಬ ಚೆಲುವೆಯೊಡನೆ ಕುಳಿತಿದ್ದಾನೆ ಪಾನೀಯ ಪದಾರ್ಥಗಳು ಬಳಿ ಇವೆ. ಏನನ್ನೊ ಹೇಳುವಂತಿದೆ.
ಓಮರ್ ಖಯಾಮ್
(ಒಂದು ಚಿತ್ರವನ್ನು ನೋಡಿ ಬರೆದುದು)

ನಿಶೆಯು ಧರೆಯನಾಳುತಿಹುದು
ಮೌನದಿಂದ ರಮಣಿಯೆ.
ಶಶಿಯು ನೀಳಗಗನದಲ್ಲಿ
ಮನವ ಮೋಹಿಸಿರುವುನು.

ಬಿಳಿಯ ಮುಗಿಲ ಬಾನಿನಲ್ಲಿ
ಮೈಮೆದೋರುತಿರುವುದು;
ಅಲರ ಕಂಪ ಸೂರೆಗೊಂಡು
ಎಲರು ಬೀಸುತಿರುವುದು.
ಗಗನವೇನೊ ಮೌನವಚನ-
ವಾಡುತಿಹುದು ತರಳೆಯೆ,
ಜಗವೆ ನಿಂತು ಕೇಳುತಿಹುದು!
ಮಾಯೆಯಾಡುತಿರುವಳು.
ನಿಶೆಯು ಧರೆಯನಾಳುತಿರಲಿ,
ಜೊನ್ನಕಾಂತಿ ಬೆಳಗಲಿ;
ಎಸೆವ ಗಗನ ನುಡಿಯುತಿರಲಿ,
ಮಾಯೆ ಮೆರೆದು ನಲಿಯಲಿ.
ಬಾಲೆ, ಬಾರೆ, ಪ್ರಣಯ ಮಧುವ
ಸುರಿದು ತಾರೆ ಬೇಗನೆ.
ಕಾಲನೆಮ್ಮ ಯೌವನವನು
ಕದಿವ ಮುನ್ನ ಹೀರುವ!

ಚಿತ್ರಪ್ರೇರಿತ ಆರು ಕವಿತೆಗಳಲ್ಲದೆ ಉಳಿದ ಐದು ಕವಿತೆಗಳಲ್ಲಿ ನಾಲ್ಕು ಅಪ್ರಕಟಿತ ಕವಿತೆಗಳಿವೆ. ’ಪ್ರಾರ್ಥನೆ’ಯಲ್ಲಿ ರೋಗದ ದವಡೆಗೆ ಸಿಕ್ಕಿ ತಪ್ಪಿಸಿಕೊಂಡ ಕವಿಯ ಮನಸ್ಥಿತಿ ಚಿತ್ರಿತವಾಗಿದೆ ಎನ್ನಬಹುದು.
’ಕೈಹಿಡಿದು ನಡೆಸೆನ್ನ, ಗುರುವೆ,
ಬಾಲಕನು ನಾನೇನನರಿಯೆ.’ 
ಎಂಬ ಪಲ್ಲವಿಯಿಂದ ಆ ಕವಿತೆ ಪ್ರಾರಂಭವಾಗಿ ’ಗತಿ ನೀನೆ, ಗುರುವೆ!’ ಎಂದು ಅಂತ್ಯವಾಗುತ್ತದೆ. ’ನಿನ್ನ ಕೊಳಲಯ್ಯ ನಾನು’ ಎಂದು ಆರಂಭವಾಗುವ ಶೀರ್ಷಿಕೆಯಿಲ್ಲದ ಕವಿತೆ, ಕವಿಯು ಭಗವಂತನ ಕೈಯ ಕೊಳಲೆಂದೂ, ಊದುವವನು ಭಗವಂತನೆಂದೂ, ಆ ನಾದದ ಇಂಪಿಗೆ ಲೋಕ ಮೋಹಗೊಳ್ಳುವುದೆಂದೂ, ಯಾರು ಆಲಿಸಲಿ ಬಿಡಲಿ ಕೊಳಲಿಗೆ ಆತಂಕವಿಲ್ಲವೆಂದೂ ಹೇಳುತ್ತದೆ.
’ಸ್ಥಿರ ಚಿತ್ತವೇಕಿನ್ನು ಬರಲಿಲ್ಲ, ತಾಯೆ? 
ಚಿತ್ತವನು ಮುತ್ತಿರುವುದೇಕಿನ್ನು ಮಾಯೆ? 
ಎಂಬ ಪಲ್ಲವಿಯಿಂದ ಆರಂಭವಾಗುವ ಅಪ್ರಕಟಿತ ಕವಿತೆ - ಸುಖ ನೆಮ್ಮದಿ ಇರುವಾಗ ದೇವರಿದ್ದಾನೆ, ಕಾಪಾಡುತ್ತಾನೆ ಎಂಬ ನಂಬಿಕೆ ಇರುತ್ತದೆ. ಅದು ತಪ್ಪಿ ಕಷ್ಟ ಕೋಟಲೆ ಪ್ರಾಪ್ತವಾಗಲು ದೇವರಿದ್ದಾನೆ ಎಂಬ ಶ್ರದ್ಧೆಯೆ ಅಳ್ಳಾಡಿಹೋಗುತ್ತದೆ ಎಂಬುದನ್ನು ಕಟ್ಟಿಕೊಡುತ್ತದೆ. ಈ ಕವಿತೆಯ ಎರಡು ಚರಣಗಳು ಹೀಗಿವೆ.

ಕತ್ತಲೊಳು ನಡುಗುವುದು ಎದೆ ಧೈರ್ಯಗುಂದಿ
ಚಿತ್ತದೊಳು ಸುಳಿಯುವುದು ಸಂದೇಹವು;
ಮತ್ತೆ ಬೆಳಕಾಗೆ ನಲಿವುದು ಧೈರ್ಯಹೊಂದಿ
ಸುತ್ತ ನೀನಿಹೆ ಎಂಬ ಭರವಸೆಯಲಿ!

ಬಿರುಗಾಳಿ ಬೀಸದಲೆ ಸಾಗುತಿರೆ ನಾವೆ
ಭರವಸೆಯು ನಾವೆಯೊಳಗಿರುವೆ ಎಂದು;
ಬಿರುಗಾಳಿ ಭೋರೆಂದು ಕಡಲು ಕುದಿವೇಳೆ
ಭರವಸೆಯು ಜಾರುವುದು ಸಂಶಯದೊಳು!
ಇನ್ನೊಂದು ಶೀರ್ಷಿಕೆಯಿಲ್ಲದ ಅಪ್ರಕಟಿತ ಕವಿತೆ ಭೀತಿ ಸಂದೇಹಗಳ ಪರಿಹರಿಸು, ಗುರುವೆ’ ಎಂದು ಪ್ರಾರಂಭವಾಗಿ ಗುರುಕೃಪೆಯನ್ನು ಯಾಚಿಸುತ್ತದೆ.
ಆದರೆ, ಕೊಳಲು ಸಂಕಲನದಲ್ಲಿ ಪ್ರಕಟವಾಗಿ ಪ್ರಸಿದ್ಧವಾಗಿರುವ ಅತ್ಯಂತ ಮುಖ್ಯವಾದ ಕವಿತೆ ’ನೇಗಿಲಯೋಗಿ’!
ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ.
ಲೋಕದೊಳೇನೇ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ:
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೆ ಇಲ್ಲ.
ಬಾಳಿತು ನಮ್ಮೀ ನಾಗರಿಕತೆ ಸಿರಿ
ಮಣ್ಣುಣಿ ನೇಗಿನಾಶ್ರಯದಿ;
ನೇಗಿಲ ಹಿಡಿದಾ ಕೈಯಾಧಾರದಿ
ದೊರೆಗಳು ದರ್ಪದೊಳಾಳಿದರು.
ನೇಗಿಲ ಬಲದೊಳು ವೀರರು ಮೆರೆದರು,
ಶಿಲ್ಪಿಗಳೆಸೆದರು, ಕವಿಗಳು ಬರೆದರು.
ಯಾರೂ ಅರಿಯದ ನೇಗಿಲ ಯೋಗಿಯೆ
ಲೀಕಕೆ ಅನ್ನವನೀಯುವನು.
ಹೆಸರು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ.
ನೇಗಿಲಕುಳದೊಳಗಡಗಿದೆ ಕರ್ಮ;
ನೇಗಿಲ ಮೇಳೆಯೆ ನಿಂತಿದೆ ಧರ್ಮ.


ಇದೊಂದು ಸಾರ್ವಕಾಲಿಕ ಶ್ರೇಷ್ಠ ಕವಿತೆ. ’ಗಾಳಿ’ ಮತ್ತು ’ನೀರು’ ನಂತರದ ಜೀವ ಚೈತನ್ಯವೇ ’ಅನ್ನ’. ಅನ್ನದಾತನಾದ ರೈತನ ಸಾರ್ಥಕತೆಯನ್ನು ಸಾಫಲ್ಯತೆಯನ್ನು ಇಷ್ಟೊಂದು ಸರಳವಾಗಿ, ಆದರೆ ಅರ್ಥಪೂರ್ಣವಾಗಿ ಹಿಡಿದಿಟ್ಟ ಕವಿತೆ ಬಹುಶಃ ಮತ್ತೊಂದಿರಲಾರದು! ಈ ಹಾಡನ್ನು ’ಕಾಮನಬಿಲ್ಲು’ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಡಾ. ರಾಜ್ ಕುಮಾರ್ ನೇಗಿಲು ಹಿಡಿದು ಉಳುಮೆ ಮಾಡುವ ದೃಶ್ಯಕ್ಕೆ ಹಿನ್ನೆಲೆಯಾಗಿ ಮಾಡಿಬಂದ ಈ ಹಾಡಿಗೆ ಸಿ. ಅಶ್ವಥ್ ದನಿಗೂಡಿಸಿದ್ದರು. ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜಿಸಿದ್ದರು.
ಭದ್ರವಾತಿಯ ನದಿ ದಂಡೆಯಲ್ಲಿದ್ದ ಡಾ. ಚೊಕ್ಕಂ ಅವರ ಆಸ್ಪತ್ರೆಯಲ್ಲಿ, ನ್ಯೂಮೋನಿಯಾದಿಂದ ಬಳಲಿ ಬೆಂಡಾಗಿದ್ದ ಕವಿಯಿಂದ ಸೃಜಿಸಲ್ಪಟ್ಟು, ಹಿಂದೂ ಪತ್ರಿಕೆಯ ಅಂಚಿನಲ್ಲಿ ಚಾಕ್ಷುಷ ರೂಪಕ್ಕಿಳಿದ ಕವಿತೆ ’ನೇಗಿಲಯೋಗಿ’!! ಇದು ಇಂದು ನಮ್ಮ ’ರೈತಗೀತೆ’!!!

7 comments:

Srinivasa Mahendrakar said...

ನಿಮ್ಮ ಬರಹಗಳು, ಘಟನೆಯನ್ನು ಕಣ್ಣಮುಂದೆ ಸಿನೆಮಾ ದಂತೆ ಅಚ್ಚು ಮಾಡುತ್ತೆ ಮಾನ್ಯರೇ. ಸಂತೋಷವಾಗುತ್ತೆ ನಿಮ್ಮ ಲೇಖನಗಳನ್ನ ಓದಲು

Srinivasa Mahendrakar said...
This comment has been removed by the author.
Pejathaya said...

ಡಾ. ಸತ್ಯ
ಅದೆಷ್ಟು ಸುಂದದ ಮಾತು!
ಕುವೆಂಪು ಅವರಿಂದ ಮಾತ್ರ ಅದನ್ನು ಬರೆಯಲು ಸಾದ್ದ್ಯ!
ಉದಾ:
"ನೇಗಿಲಕುಳದೊಳಗಡಗಿದೆ ಕರ್ಮ;
ನೇಗಿಲ ಮೇಳೆಯೆ ನಿಂತಿದೆ ಧರ್ಮ".

ಬಡ ರೈತನಿಗೆ ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು?

ಪ್ರೀತಿಯಿಂದ
ಪೆಜತ್ತಾಯ

rajesh said...

super story sir thanks

ಮನಸು said...

wow enta baraha sir... thanks a lot

saapeksha said...

Very good article but contrast to today's reality:
Raithara dudimeli beledide desha
Raithara maranke illa aakrosha
Raithara holadali arlive kampani
Raithara kannali aaradu kambani

Aluvaa yogiya nodilli!
Aluvaa yogiya nodilli !

Bharath said...

This is an exceptional work. Congrats!