Monday, January 30, 2012

ಶಿವಮುಖಚಂದ್ರಿಕೆಯ ಸೌಂದರ್ಯದಿಂ ಶಿವನುದ್ಭವಿಪಂತೆ!

ಮಲೆನಾಡಿನ ಚಿತ್ರಗಳ ಮುನ್ನುಡಿಯಲ್ಲಿ ’ಕವಿಶೈಲದಂತೆಯೆ ಅಥವಾ ಅದಕ್ಕಿಂತಲೂ ಒಂದು ಕೈ ಮೇಲಾಗಿದೆ ನವಿಲುಕಲ್ಲು’ ಎಂದು ಕವಿ ಬರೆದಿದ್ದಾರೆ. ಕುವೆಂಪು ಅವರ ಗದ್ಯ-ಪದ್ಯಗಳೆರಡರಲ್ಲೂ ನವಿಲು ಕಲ್ಲಿನ ಸೂರ್ಯೋದಯದ ವರ್ಣನೆಗಳು ಬಣ್ಣಿತವಾಗಿವೆ. ಬಯಲು ಸೀಮೆಯಿಂದ ಬಂದ ಗೆಳೆಯರನ್ನು ಬೆಳಗಿನ ಜಾವ ನಾಲ್ಕು ಗಂಟೆಗೆ ಎಬ್ಬಿಸಿ ಕರೆದುಕೊಂಡು ನವಿಲುಕ್ಲಲಿನ ಸೂರ್ಯೋದಯದ ವರ್ಣವೈಭವನನ್ನು ತೋರಿಸುವುದು ಕವಿಯ ಹವ್ಯಾಸಗಳಲ್ಲೊಂದಾಗಿತ್ತು! ’ಅದನ್ನು ನೋಡಿ ಅನುಭವಿಸಿದಲ್ಲದೆ ಅದರ ಸೌಂದರ್ಯ ಮಹಿಮೆಗಳು ತಿಳಿಯುವುದಿಲ್ಲ. ನಾನಂತೂ ಅದನ್ನು ನೋಡಿ ಸೋತು ಶರಣಾಗಿದ್ದೇನೆ. ಆ ಸ್ವರ್ಗೀಯ ದೃಶ್ಯದ ಮಹಾ ವಿಗ್ರಹ ನನ್ನ ಮನೋಮಂದಿರದಲ್ಲಿ ಚಿರವಾಗಿ ಸ್ಥಾಪಿಸತವಾಗಿದೆ. ಅದಕ್ಕಲ್ಲಿ ದಿನ ದಿನವೂ ಆರಾಧನೆ ನಡೆಯುತ್ತಿದೆ.’ ಎನ್ನುತ್ತಾರೆ ಕವಿ. ಒಮ್ಮೆ ಗೆಳಯರೊಂದಿಗೆ ನೋಡಿದ ಚಿತ್ರಣವನ್ನು ಹೀಗೆ ಬರೆದಿದ್ದಾರೆ. ’ಮಂಜಿನ ಇಂದ್ರಜಾಲಗಳನ್ನು ಅವಲೋಕಿಸುತ್ತ ನಿಂತಿದ್ದ ಹಾಗೆಯೆ ಬಹುದೂರದ ಪೂರ್ವದಿಗಂತದಲ್ಲಿ ಅರುಣಕಾಂತಿ ತಲೆದೋರಿ ಪರ್ವತ ಶಿಖರ ಪಂಕ್ತಿಗಳಿಂದಾದ ದಿಗಂತರೇಖೆ ಸ್ಪಷ್ಟವಾಯಿತು. ನಾವೆಲ್ಲರೂ ಮಾತಾಡದೆ ಎವೆಯಿಕ್ಕದೆ ಉತ್ಕಂಠಭಾವದಿಂದ ನಿಂತು ಭಗವಾನ್ ಸೂರ್ಯದೇವನ ಪ್ರಥಮದರ್ಶನದ ಮಹೋತ್ಸವನ್ನೇ ಎದುರು ನೋಡುತ್ತಿದ್ದೆವು. ಕೆಂಬೆಳಕು ಮತ್ತಿನಿತು ಉದ್ದೀಪನವಾಗಿ ನೋಡುತ್ತಿರೆಯಿರೆ ದಿವಾಕರನ ರಕ್ತಾಕ್ತ ವಿಶಾಲ ಬಿಂಬದ ನೇಮಿರೇಖೆ ಸುದೂರದೂರದ ಪರ್ವತಶೀಖರಗಳ ಮೇಲೆ ಹಠಾತ್ತಾಗಿ ಪ್ರತ್ಯಕ್ಷವಾಯಿತು! ನಮ್ಮೆದೆಗಳಲ್ಲಿ ನೆತ್ತರು ಚಿಮ್ಮಿತು; ಮನದಲ್ಲಿ ಭಾವವುಕ್ಕಿತು. ತಳತಳಿಸುವ ಮಿಂಚಿನ ವಕ್ರರೇಖೆಯಂತೆ ಹೊರಮೂಡಿದ ದಿನೇಶನು ನೋಡೆ ನೋಡೆ ಕುಂಕುಮದಲ್ಲಿ ಮಿಂದು ಮಿಂಚಿನುಂಡೆಯಾದನು!’
ನೆನಪಿನ ದೋಣಿಯಲ್ಲಿ ೧-೪-೧೯೩೫ ರಿಂದ ೧೫-೬-೧೯೩೫ರವರೆಗಿನ ರಜಾದಿನಗಳನ್ನು ಊರಿನಲ್ಲಿ ಕಳೆದೆ. ಆದ್ದರಿಂದ ದಿನಚರಿಯನ್ನು ಬರೆದಿಲ್ಲ ಎಂದಿದ್ದಾರೆ. ಆದರೆ ಆ ದಿನಗಳಲ್ಲಿ ನಡೆದ ಘಟನೆಗಳನ್ನು ನೆನಪಿನಾಧಾರದಲ್ಲಿ ದಾಖಲಿಸಿದ್ದಾರೆ. ಆ ರಜಾದಿನಗಳಲ್ಲಿಯೇ ಚಿಕ್ಕಮಗಳೂರಿನಲ್ಲಿ ನಡೆದ ಉಪನ್ಯಾಸ ಸಪ್ತಾಹ ಕಾರ್ಯಕ್ರಮಕ್ಕೆ ಪ್ರೊ. ವೆಂಕಣ್ಣಯ್ಯ, ನಾ.ಕಸ್ತೂರಿ, ತೀ.ನಂ. ಶ್ರೀಕಂಠಯ್ಯ ಮತ್ತು ಜಿ ಹನುಮಂತರಾಯರು ಬಂದಿರುತ್ತಾರೆ. ಅವರೆಲ್ಲರನ್ನೂ ಕರೆದುಕೊಂಡು ಮಲೆನಾಡು ಯುವಕರ ಸಂಘದ ವಾರ್ಷಿಕೋತ್ಸವಕ್ಕೆ ಹುಗಲವಳ್ಳಿಗೆ ಹೋಗುತ್ತಾರೆ. ಅದರ ಮಾರನೆಯ ದಿನ ನವಿಲುಕಲ್ಲಿಗೆ ಸೂರ್ಯೋದಯವನ್ನು ನೋಡಲು ಹೋಗುವ ಕಾರ್ಯಕ್ರಮ ಹಾಕಿಕೊಳ್ಳುತ್ತಾರೆ. ಆ ಯಾತ್ರೆಯ ರಸಕ್ಷಣಗಳನ್ನು ಕವಿಯ ಮಾತುಗಳಲ್ಲೇ ನೋಡಬಹುದು.

ಬೆಳಿಗ್ಗೆ ಐದು ಗಂಟೆಗೆ ಮೊದಲೆ ಎಲ್ಲರನ್ನೂ ಎಬ್ಬಿಸಿ, ಕಾರಿನಲ್ಲಿ ಕಾಡು ರಸ್ತೆಯಲ್ಲಿಯೇ ಅವರನ್ನೆಲ್ಲ ’ನವಿಲುಕಲ್ಲು’ ಗುಡ್ಡದ ಬುಡದವರೆಗೆ ಕರೆದೊಯ್ದೆವು. ಅಲ್ಲಿಂದ ಕತ್ತಲು ನೆತ್ತಿಗೆ ಏರಿದೆವು. ಅಂದು ಉಷಃಕಾಲದಿಂದ ಹಿಡಿದು ಸೂರ್ಯೋದಯದವರೆಗೂ ನಾವು ಕಂಡ ದೃಶ್ಯಪರಂಪರೆಯ ಅದ್ಭುತ ಸೌಂದಾರ‍್ಯಾನುಭೂತಿಯನ್ನು ಇಲ್ಲಿ ನಾನು ವರ್ಣಿಸುವುದಿಲ್ಲ. . . ಅದರ ಮಹತ್ವವನ್ನೆಲ್ಲ ಒಂದು ನಡೆದ ಘಟನೆಯಿಂದಲೆ ಸೂಚಿಸ ಬಯಸುತ್ತೇನೆ: ನಾವೆಲ್ಲರೂ ಪಂಕ್ತಿಯ ಹಿಂದೆ ಪಂಕ್ತಿಯೆಂತೆ ಮೇಲಮೇಲಕ್ಕೆದ್ದು ಪೂರ್ವದಿಗಂತದಲ್ಲಿ ವಿಶ್ರಾಂತವಾಗಿದ್ದ ಪರ್ವತಶ್ರೇಣಿಗಳತ್ತ ಬಿಡುಗಣ್ಣಾಗಿ ಮಾತಿಲ್ಲದೆ ಸುಮಾರು ಒಂದು ಒಂದೂವರೆ ಗಂಟೆಯವರೆಗೂ ನಿಷ್ಪಂದರೆಂಬಂತೆ ನೋಡುತ್ತಿದ್ದೆವು. ರಸಾನುಭವದ ತುತ್ತತುದಿಯಲ್ಲಿ ಸಮಾಧಿ ಸ್ಥಿತಿಯಿಂದ ಇಳಿದುಬಂದವರಂತೆ ಎಚ್ಚತ್ತು ನಿಟ್ಟುಸಿರುಬಿಡುತ್ತಿದ್ದಂತೆ, ಧ್ಯಾನಲೀನ ಸ್ನಿಗ್ಧಮಂದಸ್ಮತರಾಗಿದ್ದ ಪ್ರೊ.ವೆಂಕಣ್ಣಯ್ಯನವರು ತಮ್ಮ ಸಾವಧಾನವಾದ ಆರ್ದ್ರ ಗಂಭೀರ ಧ್ವನಿಯಲ್ಲಿ ನನ್ನ ಕಡೆ ತಿರುಗಿ, ಏನನ್ನೋ ಯಾಚಿಸುತ್ತಿರುವರೋ ಅಥವಾ ಆಜ್ಞಾಪಿಸುತ್ತಿರುವರೋ ಎಂಬಂತೆ 'ಪುಟ್ಟಪ್ಪ, ಇದನ್ನು ಹಿಡಿದಿಟ್ಟುಕೋ!' ಎಂದು ಮತ್ತೆ ಆ ದಿವ್ಯದೃಶ್ಯದತ್ತ ಕಣ್ಣಾಗಿ ಮುಂದೆ ಮಾತನಾಡಲಾರದವರಂತೆ ಮೌನಿಯಾದರು.

ಗುರುವಿನಾಜ್ಞೆಯನ್ನು ಶಿಷ್ಯ ಶಿರಸಾವಹಿಸಿ ಪಾಳಿಸುವಂತೆ ಕವಿ ಕುವೆಂಪು ನವಿಲುಕಲ್ಲಿನ ಉಷಃಕಾಲ ಮತ್ತು ಸೂರ್ಯೋದಯವನ್ನು ಹಿಡಿದಿಟ್ಟುಕೊಂಡರು, ತಮ್ಮ ಎರಡು ಕವಿತೆಗಳಲ್ಲಿ. ’ಹಿಡಿದಿಟ್ಟುಕೊಂಡರು’ ಎನ್ನುವುದಕ್ಕಿಂತ, ಅದನ್ನು ಸಹೃದಯರಿಗೆ ಉಣಬಿಡಿಸಿದರು ಎಂಬುದೇ ಹೆಚ್ಚು ಸೂಕ್ತವಾದೀತು. ನವಿಲುಕಲ್ಲಿನಲ್ಲಿ ಉಷಃಕಾಲ (೧೩-೪-೧೯೩೫) ಮತ್ತು ನವಿಲುಕಲ್ಲಿನಲ್ಲಿ ಸೂರ್ಯೋದಯ (೨೫-೫-೧೯೩೫) ಊರಿನಲ್ಲಿದ್ದಾಗಲೇ ರಚಿತವಾದವುಗಳಾಗಿವೆ.

ಬಣ್ಣ ಬಣ್ಣದ ಹೂವುಗಳನ್ನು ಮುಡಿದು ಮೂಡುತ್ತಿರುವ ಉಷೆವೆಣ್ಣಿನ ಚಿತ್ರಣ ಮೊದಲ ಕವಿತೆಯಲ್ಲಿದೆ.
ದತ್ತುರಿಯ ಹೂವು, ತಾವರೆ, ಕಿತ್ತಿಳೆಯ ಹಣ್ಣು,
ಕೇಸರಿ, ಗುಲಾಬಿ, ಕುಂಕುಮರಂಗು - ತರತರದ
ಫಲಕುಸುಮ ಸಮ ರತ್ನರಾಗ ಸುಮನೋಹರದ
ಭೋಗಮಂದಾಕಿನಿಯ ಪ್ರವಹಿಸುವಂತೆ ಉಷೆವೆಣ್ಣು
ಮೂಡುತಿಹಳದೊ ದೂರ ದಂತುರ ದಿಗಂತದಲಿ,
ಪ್ರತಿಭಾತಟಿತ್ತಿನಿಂ ಮನವನುಜ್ವಲಗೈದು,
ಸೌಂದರ್ಯ ನಂದನವನಾತ್ಮ ನಾಕಕೆ ನೆಯ್ದು,
ಗಿರಿವನ ತರಂಗಮಯ ಸಹ್ಯಾದ್ರಿರಂಗದಲಿ!
ಹಬ್ಬಿಹುದರಳೆಮಂಜು ನೊರೆಯ ಹೆಗ್ಗಡಲಾಗಿ
ಬಿತ್ತರದ ಬಿಂಕದಿಂ ಕಂದರಂಗಳ ತುಂಬಿ,
ಸೃಷ್ಟಿಸುತೆ ಸಾಗರದ್ವೀಪ ಸಮ್ಮೋಹಮಂ.
ಭಾವಭಾಗೀರಥಿಯು ಧುಮುಕಿದೆ ನಭಶ್ಚುಂಬಿ
ಪ್ರಾಣಶೈಲಾಗ್ರದಿಂ ಪ್ರಾಸ ಘೋಷಿಣಿಯಾಗಿ
ಕೊಚ್ಚಿ ಕರಗಿಸಿ ದೇಹ ನಾನೆಂಬ ಗೇಹಮಂ!
’ಭೋಗಮಂದಾಕಿನಿಯ ಪ್ರವಹಿಸುವಂತೆ ಉಷೆವೆಣ್ಣು ಮೂಡುತಿಹಳದೊ’ ಎಂಬಂತಹ ಅದ್ಭುತ ಉಪಮೆಯನ್ನೊಳಗೊಂಡ ಈ ಸಾನೆಟ್ಟು ಕುವೆಂಪು ಅವರ ಸೂರ್ಯೋದಯ ಗೀತೆಗಳಲ್ಲಿ ಅನನ್ಯವಾದುದು. ಒಂದು ರೀತಿಯಲ್ಲಿ, ತಾಣು ಕಂಡ ದರ್ಶನವನ್ನು ಕಲಾತ್ಮಕವಾಗಿ ಸಹೃದಯರ ಮುಂದಿಟ್ಟಿರುವ ಸಾಕ್ಷಚಿತ್ರ! ಆ ಸೌಂದರ್ಯಸಾಗರದ ಮುಂದೆ ಮಾನವನ ಅಹಂಕಾರ, ದೇಹ-ಗೇಹಗಳೆಲ್ಲವೂ ಕರಗಿ ಕೊಚ್ಚಿಹೋಗಿಬಿಡುತ್ತವೆ. ಇಂತಹ ಇನ್ನೊಂದು ಸಾಕ್ಷಚಿತ್ರವೇ ನವಿಲುಕ್ಕಲಿನಲ್ಲಿ ಸೂರ್ಯೋದಯ ಕವಿತೆ.
ಕತ್ತಲೆಯ ಬಸಿರಿಂದೆ ಮೆಲ್ಲಮೆಲ್ಲನೆ ಪೊರಗೆ
ಪೊಣ್ಮುತಿದೆ ಶಿಖರಕಂದರಮಯಂ ಸಹ್ಯಾದ್ರಿ.
ಸ್ಪಷ್ಟತರವಾಗುತಿರೆ ಭೂವ್ಯೋಮಗಳ ಸಂಧಿ,
ದೃಶ್ಯ ಚಕ್ರದ ನೇಮಿಯಂದದಿ ದಿಗಂತ ಫಣಿ
ಸುತ್ತುವರಿದಿದೆ ದೃಷ್ಟಿವಲಯಮಂ. ನಾಣ್ಗೆಂಪು
ಮೊಗದೊಳೇರುವ ಉಷಾಭೊಗಿನಿಯ ಫಣೆಯಲ್ಲಿ
ಬೆಳ್ಳಿ, ಉಜ್ವಲ ತಾರೆ, ಕುಂಕುಮ ಹರಿದ್ರದಿಂ
ರಂಜಿಸುವ ಪೊಂಬಣೆಗೆ ರಜತ ತಿಲಕದ ಬಿಂದು
ತಾನೆನೆ ವಿರಾಜಿಸಿದೆ.
ಸುಮಾರು ಐದು ಗಂಟೆಯಿಂದಲೇ ಮೇಲಿನ ಪ್ರಕೃತಿವ್ಯಾಪಾರಗಳು ಪ್ರಾರಂಭವಾಗುತ್ತವೆ. ತುಸುಗಪ್ಪು ಬಣ್ಣದ ಬಿತ್ತಿಯ ಮೇಲೆ ಕಪ್ಪು ಬಣ್ಣದ ರೇಖೆಗಳನ್ನು ಎಳೆದಂತೆ, ಮಗುವೊಂದು ತನಗೆ ತೋಚಿದಂತೆ ಗೀಚಿದಂತೆ ನವಿಲು ಕಲ್ಲಿನಿಂದ ಕಾಣುವ ದೃಶ್ಯ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಕತ್ತಲೆಯ ಬಸಿರಿಂದೆ ಮೆಲ್ಲಮೆಲ್ಲನೆ ಪೊರಗೆ ಪೊಣ್ಮುತಿದೆ ಶಿಖರಕಂದರಮಯಂ ಸಹ್ಯಾದ್ರಿ ಎಂಬ ಸಾಲುಗಳನ್ನು ಓದುತ್ತಿದ್ದಂತೆ, ಕವಿ ಕಂಡ ದರ್ಶನ ನಮ್ಮ ಕಣ್ಣೆದುರಿಗೇ ಕುಣಿಯುವಂತಹ ವರ್ಣನೆ ಮನಮುಟ್ಟುತ್ತದೆ. ಭೂಮಿ ಯಾವುದು? ಆಕಾಶ ಯಾವುದು? ಎಂಬುದು ಅಸ್ಪಷ್ಟವಾಗಿ ಗೋಚರವಾಗತೊಡಗುತ್ತದೆ. ಈ ಅಸ್ಪಷ್ಟ ಚಿತ್ರಣ ಕಣ್ಣಿಗೆ ಕಟ್ಟುತ್ತಿರುವಾಗಲೇ ಮೈಗೆ ತಾಕುವ ತಣ್ಣನೆಯ ಗಾಳಿ, ನೀಲಿಯ ಒಳ ಹೊದಿಕೆಯನ್ನು ತೋರುತ್ತಿರುವ ಆಕಾಶ, ಕತ್ತಲೆಗಂಬಳಿಯಿಂದ ಹೊರಗೆ ಬರುತ್ತಿರುವ ಹಾಗೂ ಮಂಜಿನ ಪರದೆಯೊಳಗಿನ ಭೂಮಿ, ಹಸುರುಡುಗೆಯ ಕಾಡು ಎಲ್ಲವೂ ಲೋಕಮೋಹಕವಾಗಿ ನೀಲಿಯ ಕನಸಿನಂತೆ ಕವಿಗೆ ಕಾಣುತ್ತವೆ.
ಹಸುರು ತಳಿರನು ತುಳಿದು,
ನಲುಗಿ, ನಲಿಯಿಸಿ, ನಲಿದು, ಯೋಜನ ಸುವಿಸ್ತರದ
ಕಾಂತಾರ ಪರಿಮಳಂಬೊತ್ತ ತಣ್ಣನೆ ಗಾಳಿ
ಮಂದ ಮಂದಂ ತೀಡಿ ಬೀಸುತಿದೆ ಸುಖವಾಗಿ,
ತಂಪಾಗಿ. ಕತ್ತಲೆಯ ಕಂಬಳಿಯನುಳಿಯೆ ತೊರೆ,
ನೀಲಿಯೊಳಹೊದಿಕೆ ತಾಂ ತೋರ್ದುದೆನೆ, ಹಸರಿಸದೆ
ಹೊಗೆಯ ಮಂಜಿನ ತೆಳ್ಳನೆಯ ಪರದೆ, ಭೂದೇವಿ
ಉಟ್ಟ ಹಸುರುಡೆಯ ಹೋಲುವ ಕಾಡುಗಳ ಮೇಲೆ,
ಲೋಕಮೋಹಕವಾಗಿ ನೀಲಿಯ ಕನಸಿನಂತೆ!
ಪೆಂಪುವಡೆದಿರಲಿಂತು ಕಣ್ಗೆ.
ಆಗ ಸುತ್ತಲಿನ ಜೀವಚೈತನ್ಯ ಸೂರ್ಯನಾಗಮನದ ಸೂಚನೆಗೆ ಸ್ಪಂದಿಸುತ್ತದೆ, ಹೀಗೆ.
ಕಿವಿಗಿಂಪಾಗಿ ಕೇಳುತಿದೆ ಮಲೆವಕ್ಕಿಗಳ ಕೊರಳಿನಿಂಚರಂ,
ನಾದದ ಮಧುರ ನಂದನದ್ವಾರ ತೆರೆದಂತೆ.
ಮರದ ತುದಿಗೋಡಿನಲಿ ಕಾಮಳ್ಳಿ; ಪೊದೆಗಳಲಿ
ಪಿಕಳಾರಿ; ಹಸುರು ಚಾಮರಗಳನೆ ನಭಕೆತ್ತಿ
ಹಿಡಿದಂತೆ ಉಷೆಯ ನಸುಕಿನೊಳೆಸೆವ ಗರಿಗರಿಯ
ಬಿದಿರು ಮೆಳೆಗಳ ಗಳುಗಣೆಯ ಚೆಲವುನೆತ್ತಿಯಲಿ
ಕೆಮ್ಮೊನೆಯ ಹಸುರು ಹಳದಿಯ ಮೆಯ್ಯ ಗಿಳಿವಿಂಡು;
ಹೊಸತಳಿರ ಮರೆಯ ಕೋಗಿಲೆ; ಹೆಸರೆ ಇಲ್ಲದಿಹ
ನೂರಾರು ಸುಮಧುರ ವಿಹಂಗಮ ಅಮರಗಾನ!
ಸಂಗೀತ ಸೌಧಕ್ಕೆ ಹೊಂಗಳಶವಿಟ್ಟಂತೆ,
ಆಲಿಸದೊ, ಸುರಗೇಯ ಗಂಗೆಯನು ಹರಿಸುತಿದೆ
ಕಾಜಾಣ! ಗಾನದಾನಂದಕ್ಕೆ ಝುಮ್ಮೆಂದು
ಸ್ಪಂದಿಸುತಿದೆ ಶೈಲ ಕಾನನ ವಿರಾಟ್ ಪ್ರಾಣ!
ಸಂಗೀತದ ಹಿಮ್ಮೇಳದಲ್ಲಿ, ಸೂರ್ಯನ ಪ್ರಥಮದರ್ಶನದ ನಿರೀಕ್ಷೆಯಲ್ಲಿ ಕುಳಿತ ಕವಿ, ಅದಕ್ಕೆ ಸ್ಪಂದಿಸುತ್ತಿರುವ ಶೈಲಕಾನನ ವಿರಾಟ್ ಪ್ರಾಣವನ್ನು ಕಂಡು ಆಶ್ಚರ್ಯಪಡುವಷ್ಟರಲ್ಲಿ ಪೂರ್ವದಿಗಂತದಲ್ಲಿ ಬಣ್ಣಗಳ ಮೆರವಣಿಗೆ ಪ್ರಾರಂಭವಾಗುತ್ತದೆ.
ಅದೊ ನೋಡು, ಬಣ್ಣಗಳ ದಿಬ್ಬಣಂ! ಗಗನದಾ
ಶೈಲ ಶೈಲಿಯ ದಂತುರ ದಿಗಂತ ರಂಗದಲಿ
ದೇವತೆಗಳೆಲ್ಲರೂ ಅಪ್ಸರಿಯರೊಡಗೂಡಿ
ಇಂದ್ರನೈರಾವತದ ಹಿಂದುಗಡೆ ಮೆರವಣಿಗೆ
ಹೊರಟಿಹರೊ ಎನೆ ಶೋಭಿಸುತ್ತಿದೆ ಮನವನೊಲಿಸಿ!
ಶಿವನ ಮುಖಚಂದ್ರಿಕೆಯೆ ಸೌಂದರ್ಯ ರೂಪದಿಂ

ಪ್ರತ್ಯಕ್ಷವಾಗುತಿರೆ ಶಿವನೆ ಮೈದೋರ್ದಂತೆ
ಆಹ ನೋಡದೊ, ಮಲೆಗಳಾಚೆಯ ಸುದೂರದಲಿ
ಒಯ್ಯನಾವಿರ್ಭವಿಪನಮರ ತೇಜಸ್ವಿ ರವಿ!
ದೇವತೆಗಳೆಲ್ಲರೂ ಅಪ್ಸರೆಯರ ಜೊತೆಗೂಡಿ ಇಂದ್ರನ ಐರಾವತದೊಂದಿಗೆ ಹೊರಟಿರುವ ಭವ್ಯಮೆರವಣಿಗೆಯಂತೆ ಕಾಣುತ್ತಿರುವ ಬಣ್ಣಗಳ ಮೆರವಣಿಗೆ ಶಿವನ ಮುಖಚಂದ್ರಿಕೆಯ ಸೌಂದರ್ಯದಿಂದ ದರ್ಶನವಾಗುವ ಶಿವನಂತೆಯೆ ಕವಿಗೆ ಕಂಡಿದೆ. ಆಗಲೇ ಆವಿಭವಿಸುವುನು ಅಮರ ತೇಜಸ್ವಿ ರವಿ! ಮುಂದಿನದು ಕವಿಯ ಕೋರಿಕೆ:
ಹೃದಯಪ್ರಪಾತಕ್ಕೆ ಧುಮುಕುತಿದೆ ರಸದ ಧುನಿ
ಭಾವಜಲಪಾತದಿಂ! ಮೌನವೆ ಮಹಾ ಸ್ತೋತ್ರಂ
ಈ ಭೂಮ ಭವ್ಯ ಸೌಂದರ‍್ಯದಾರಾಧನೆಗೆ!
ನೋಡ, ಸುಮ್ಮನೆ ನೋಡ; ಮಾತಿಲ್ಲಿದೆಯೆ ನೋಡ:
ಈ ದೃಶ್ಯ ಮಾಧುರ‍್ಯದಿದಿರಿನಲಿ ಕರ್ಕಶಂ
ಕವಿಯ ವಾಣಿಯು ಕೂಡ!
ನೋಡು, ಸುಮ್ಮನೆ ನೋಡು;
ದೃಶ್ಯದಲಿ ತಲ್ಲೀನನಪ್ಪನ್ನೆಗಂ ನೋಡು!
ಅದರೊಳೊಂದಾಗುವುದೆ ಪರಮ ರಸಿಕತೆ; ಅದಕೆ
ಮಿಗಿಲಹ ರಸಾನಂದ ಮತ್ತೆ ಬೇರೊಂದಿಲ್ಲ!
ಕುವೆಂಪು ಅವರ ಸೂರ್ಯೋದಯ ಗೀತೆಗಳ ಬಗ್ಗೆ ಎಸ್.ವಿ.ಪಿ.ಯವರು, ’ವಿಜ್ಞಾನಿಯಾಗಿ, ತತ್ವಜ್ಞಾನಿಯಾಗಿ, ಎಲ್ಲಕ್ಕೂ ಮಿಗಿಲಾಗಿ ಕವಿಯಾಗಿ ಕುವೆಂಪು ದರ್ಶೀಸಿದ ವಾಸ್ತವ ಲೋಕದ ಚಿತ್ರ ಇಲ್ಲಿದೆ. ವಾಸ್ತವಜಗತ್ತು, ಅದನ್ನು ನೋಡಿದ ಕವಿಯ ಮನದಲ್ಲಿ ಮೂಡಿದ ಭಾವ, ಆ ಭಾವದಲ್ಲಿ ಬಾಹ್ಯವನ್ನು ಮರೆತು, ಆ ಸೌಂದರ್ಯ ಸನ್ನಿಧಿಯಲ್ಲಿ ತಲ್ಲೀನನಾಗಿ ಆ ಮುಂದೆ ರಸಾನಂದದ ಪರಿಣಾಮ ಸುಖವನ್ನು ಪಡೆಯುವುದು, ಈ ಕ್ರಮದಲ್ಲಿ ಈ ಗೀತೆಗಳ ವಸ್ತುವಿನ್ಯಾಸವಿದೆ’ ಎಂದಿದ್ದಾರೆ. ಮುಂದುವರೆದು, ’ಕವಿಯ ವೈಯಕ್ತಿಕವಾದ ಅನುಭವ ವಿಶೇಷಗಳನ್ನು ಇಲ್ಲಿ ಕಾಣುವುದರಿಂದ ಇವು ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ನಮಗೆ ಕಣ್ಣಿಗೆ ಕಟ್ಟಿಕೊಡುತ್ತವೆ. ಮೂರ್ತಿಮತ್ತಾಗಿ ಇಲ್ಲಿ ವರ್ಣಿಸಿದ ಚಿತ್ರಗಳು ನಮ್ಮ ಮನಃಪಟಲದ ಮೇಳೆ ಅಚ್ಚೊತ್ತಿದಂತೆ ಮೂಡಿ ನಿಲ್ಲುತ್ತವೆ. ಉದಯದ ಚಿತ್ರಗಾರನಿಗೆ ಬೇಕಾದ ಎಲ್ಲ ವಿವರಗಳನ್ನೂ ವಿಷಯಕ್ಕೆ ಒದಗಿಸಿಕೊಡುವಂತೆ ಈ ವರ್ಣನೆಗಳಿವೆ’ ಎಂದಿದ್ದಾರೆ. ಸೂರ್ಯೋದಯೋತ್ತರ ಮತ್ತು ಸೂರ್ಯೋದಯವನ್ನು, ಪೂರ್ವದಿಕ್ಕಿನ ವರ್ಣವೈವಿಧ್ಯವನ್ನು ಅಪೂರ್ವವಾಗಿ ವರ್ಣಿಸಿರುವ ಈ ಗೀತೆಗಳು ಒಂದು ದೃಷ್ಟಿಯಲ್ಲಿ ಸಾಕ್ಷಿಚಿತ್ರಗಳೇ ಆಗಿವೆ.

’ಕೆಂಬೆಳಕು ಮತ್ತಿನಿತು ಉದ್ದೀಪನವಾಗಿ ನೋಡುತ್ತಿರೆಯಿರೆ ದಿವಾಕರನ ರಕ್ತಾಕ್ತ ವಿಶಾಲ ಬಿಂಬದ ನೇಮಿರೇಖೆ ಸುದೂರದೂರದ ಪರ್ವತಶೀಖರಗಳ ಮೇಲೆ ಹಠಾತ್ತಾಗಿ ಪ್ರತ್ಯಕ್ಷವಾಯಿತು! ತಳತಳಿಸುವ ಮಿಂಚಿನ ವಕ್ರರೇಖೆಯಂತೆ ಹೊರಮೂಡಿದ ದಿನೇಶನು ನೋಡೆ ನೋಡೆ ಕುಂಕುಮದಲ್ಲಿ ಮಿಂದು ಮಿಂಚಿನುಂಡೆಯಾದನು!’ ಕವಿಯ ಈ ಮಾತುಗಳ ದೃಶ್ಯರೂಪವನ್ನು ಕೆಳಗಿನ ವಿಡಿಯೋ ತುಣುಕಿನಲ್ಲಿ ಕಾಣಬಹುದು.
http://nandondmatu.blogspot.in/2008/12/blog-post_12.html

No comments: