Sunday, January 15, 2012

ದಿಗ್ವಧೂ ಭ್ರೂಮಧ್ಯೆ, ಕಾಣ್, ರಂಗುಮಾಣಿಕ ಬಿಂದು!

ಎಲ್ಲರಿಗೂ ಮಕರಸಂಕ್ರಾಂತಿಯ ಶುಭಾಶಯಗಳು.

ಕವಿಶೈಲದ ಬಗೆಗಿನ ಕವಿಯ ಪ್ರೇಮ ಬೆರಗು, ಅಲ್ಲಿ ಧ್ಯಾನಸ್ಥರಾಗಿ ಕಾಲ ದೇಶಗಳನ್ನು ಮೀರಿ ವಿಹರಿಸುವ ಮನಸ್ಸು ಎಲ್ಲವನ್ನೂ ಕವಿಶೈಲದ ಸಾನೆಟ್ಟುಗಳಲ್ಲಿ ನೋಡಿದೆವು. ಆದರೆ ಈ ಸಾನೆಟ್ಟುಗಳ ರಚನೆಯಾಗುವ ಸರಿಸುಮಾರು ಒಂದು ವರ್ಷಕ್ಕೆ ಮೊದಲೇ (೧೭-೫-೧೯೩೩) ರಚಿತವಾಗಿರುವ ’ಕವಿಶೈಲದಲ್ಲಿ ಸಂಧ್ಯೆ’ ಎಂಬ ಕವಿತೆಯನ್ನು ಓದದೆ, ಕವಿಶೈಲದ ಬಗೆಗಿನ ಕುತೂಹಲ ತಣಿಯುವುದಿಲ್ಲ.
ದೃಷ್ಟಿದಿಗಂತದ ಮೇರೆಯ ದಾಟಿ
ಗಗನದ ಮೇಘವಿತಾನವ ಮೀಟಿ
ದೂರಕೆ ದೂರಕೆ ಸುದೂರ ದೂರಕೆ
ಹಬ್ಬಿದೆ ಪರ್ವತ ದಿಗಂತ ಶೈಲಿ,
ಮೈಲಿ ಮೈಲಿ!
ಎಂದು ಕವಿತೆ ಆರಂಭವಾಗುತ್ತದೆ. ಕವಿಶೈಲದ ಶಿಖರವೇದಿಕೆಯಲ್ಲಿ ಕುಳಿತಾಗ ಕಣ್ಣೆದುರಿಗೆ ಬಿಚ್ಚಿಕೊಳ್ಳುವ ಗಗನಚುಂಬಿ ಸಹ್ಯಾದ್ರಿ ಶಿಖರತರಂಗಗಳ ವಿಸ್ತಾರದ ಅನಂತತೆಯ ಅಕ್ಷರೂಪ! ಮುಂದುವರೆದು ಕವಿಶೈಲದಿಂದ ಕಾಣುವ ಸಂಜೆಯ ರವಿ, ರವಿಯ ರಶ್ಮಿಯಿಂದ ದಿಗಂತದಲ್ಲಿ ಮೂಡುವ ವಿವಿಧ ವಿನ್ಯಾಸಗಳು, ಕವಿಶೈಲದಲ್ಲಿ ಒಬ್ಬನೇ ಇರುವ ಕವಿಗೆ ದೊರೆತ ಅನುಭವವನ್ನು ಕವನ ಕಟ್ಟಿಕೊಡುತ್ತದೆ.
ಪಶ್ಚಿಮ ಗಿರಿಶಿರದಲಿ ಸಂದ್ಯೆಯ ರವಿ;
ನಿರ್ಜನ ಕವಿಶೈಲದೊಳೊಬ್ಬನೆ ಕವಿ;
ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ,
ಅನಂತ ಶಾಂತಿ!
ಕವನ ರಚಿತವಾದ ಸುಮಾರು ಎರಡು ವರ್ಷಗಳ ನಂತರ, ಮಲೆನಾಡು ಯುವಕರ ಸಂಘದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬಂದು ಒಂದು ವಾರಗಳ ಕಾಲ ಕವಿ ಕುವೆಂಪುವನ್ನು ರೂಪಿಸಿದ ಮಲೆಯನಾಡನ್ನು ಪ್ರೀತಿಯಿಂದ ಸುತ್ತಿದ ಬಿ.ಎಂ.ಶ್ರೀ.ಯವರಿಗೆ ಕವಿಶೈಲದಲ್ಲಿ, ಕವಿ ಕೊಟ್ಟಿರುವ ಸಂಜೆಯ ವರ್ಣವಿಹಾರದ ಪ್ರತ್ಯಕ್ಷದರ್ಶನವಾಗುತ್ತದೆ. ಕಣ್ಣಮುಂದೆ ಕಾಣುತ್ತಿರುವುದನ್ನು ಅರಿಯಲು ಕವಿವರ್ಣನೆಯ ಅಗತ್ಯವೇ ಇರಲಿಲ್ಲ ಅನ್ನಿಸುವಷ್ಟು ಸಾದೃಶವಾಗಿತ್ತಂತೆ!
ಸೊಂಡಿಲ ಮೇಗಡೆ ಸೊಂಡಿಲ ಚಾಚಿ
ವಿಶಾಲ ವ್ಯೋಮದ ಕರೆಯನೆ ಬಾಚಿ
ಸ್ಪರ್ಧಿಸುತಿರುವುವೊ ಎನೆ ದಿಗ್ದಂತಿ
ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ,
ಗಂತಿ ಗಂತಿ!
’ಕುಪ್ಪಳಿ ಮನೆಯ ಇದಿರಿಗೇ ಗೋಡೆಯಂತೆ ಎದ್ದಂತಿದ್ದ ಗುಡ್ಡವನ್ನು ಮುತ್ತಿದ್ದ, ಮುದ್ದೆ ಮುದ್ದೆ ಹಸುರನ್ನೆ ಮೆತ್ತಿದಂತಿದ್ದ, ಸಾರ್ವಕಾಲಿಕ ಶ್ಯಾಮಲ ಅರಣ್ಯಶ್ರೇಣಿ’ ಅಂದೂ ಕಾಣುತ್ತದೆ.
ತೆರೆತೆರೆ ತೆರೆಯೆದ್ದರಣ್ಯ ಶ್ರೇಣಿ
ಬಿದ್ದಿದೆ ನಿದ್ದೆಯೊಳೋ ಎನೆ ಪ್ರಾಣಿ
ಅಸಂಖ್ಯ ವರ್ಣದಿ ಅಪಾರ ಪರ್ಣದಿ
ತಬ್ಬಿದೆ ಭೂಮಿಯನೆರಂಕೆ ಚಾಚಿ
ವೀಚಿ ವೀಚಿ!
ಸೃಷ್ಟಿಯ ಅನಂತತೆಯಲ್ಲಿ ಮನುಷ್ಯ ಒಂದು ಅಣು ಮಾತ್ರ. ಇನ್ನು ಆ ಮಹತ್ತಿನಡಿಯಲ್ಲಿ ಸರ್ವವೂ ಮಹತ್ತಾಗಿರಬೇಕಾದ್ದೇ!
ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ
ಈ ಸಹ್ಯ ಮಹಾ ಬೃಹತ್ತಿನಲ್ಲಿ!
ಕ್ಷುದ್ರಸ್ಪಷ್ಟತೆಗೆಡೆಯಿಲ್ಲೆಲ್ಲಿ?
ಭವ್ಯಾಸ್ಫುಟವಿದು - ಶರೀರ ಸೀಮಾ
ವಿಹೀನಧಾಮ!
ಮಿತ್ರರಿಗೆ ಇಲ್ಲಿ ಮಾತೇ ಬೇಡ ಎಂದು ಹೇಳಿದ, ಇಡೀ ಸಹ್ಯಾದ್ರಿ ಗಿರಿಶ್ರೇಣಿಯನ್ನು ಧ್ಯಾನಸ್ಥಯೋಗಿಯಂತೆ ಪರಿಭಾವಿಸಿದ ಕವಿಪ್ರತಿಭೆ, ಅನಂತತೆಯ ಮೌನದ ನಡುವಿನ ಝೇಂಕಾರವನ್ನು ಆಲಿಸುತ್ತದೆ. ಅದಕ್ಕಾಗಿ ತನ್ನನ್ನು ತಾನು ಇಲ್ಲವಾಗಿಸಿಕೊಳ್ಳುವುದು ಹೀಗೆ.
ಆಲಿಸು! ಕೇಳುತಲಿದೆ ಓಂಕಾರ:
ನಿತ್ಯನಿರಂತರ ಅಳಿ ಝೇಂಕಾರ!
ಮನವೇ, ಧ್ಯಾನದಿ ಮುಳುಗು ನಿಧಾನದಿ:
ನುಂಗಲಿ ನಿನ್ನಂ ತಪಃ ಸುಷುಪ್ತಿ,
ಅನಂತ ತೃಪ್ತಿ!
ಕವಿಶೈಲಕ್ಕೆ ಅಂಟಿಕೊಂಡಂತೆಯೇ, ಅದರ ಪೂರ್ವಕ್ಕೆ ಆಕಾಶಗಾಮಿಯಾಗಿ ನಿಂತಿರುವ ಶಿಖರವೇ ಸಂಜೆಗಿರಿ. ಅಲ್ಲಿಂದಲೂ ಸಹ್ಯಾದ್ರಿಯ ಶಿಖರತರಂಗಗಳಲ್ಲಿ ಕಳೆದು ಹೋಗುವ ಸೂರ್ಯಾಸ್ತವನ್ನು ಸವಿಯಬಹುದಾಗಿದೆ. ಅದರಿಂದ ಉದ್ಬೋಧಗೊಂಡ ಕವಿಯ ಮನಸ್ಸಿನಿಂದ ಹುಟ್ಟಿದ ಒಂದು ಸಾನೆಟ್ಟು ’ಸಂಜೆಗಿರಯಲಿ ಸಂಜೆ’ ಎಂಬುದು ೧೨-೫-೧೯೩೫ರಂದು ರಚಿತವಾಗಿದೆ.
ಸಂಜೆಗಿರಿಯಲಿ ಸಂಜೆ: ಯಾವ ದೊರೆ ನನಗೆ ಸರಿ?
ಸ್ವರ್ಗದಲಿ ಕರುಬುತಿಹನಿಂದ್ರನೆನ್ನಂ ನೋಡಿ,
ಧೇನು ಸುರತರು ಸುರಾಂಗನೆಯರಂ ರೋಡಾಡಿ!
ಈ ನಿಸರ್ಗಶ್ರೀಗೆ ಮೇಣಾವ ಸಗ್ಗಸಿರಿ
ವೆಗ್ಗಳಂ? ಪಂಕ್ತಿ ಪಂಕ್ತಿಗಳಾಗಿ ಕಣ್ದಿಟ್ಟಿ
ಸೋಲ್ವಂತೆ ಪರ್ಣಾರ್ಣವ ಮಹಾ ತರಂಗತತಿ
ಪ್ರಸರಿಸಿವೆ. ಗಿರಿಶಿವನೆದೆಯ ಮೇಲೆ ಶ್ಯಾಮಸತಿ
ಕಾನನ ಮಹಾಕಾಳಿ ತಾನಿಲ್ಲಿ ನಿತ್ಯನಟಿ!
ಸುಯ್ದಪಂ ಶಿಶಿರ ಶೀತಲ ಸುಖ ಸಮೀರಣಂ
ಮರ‍್ಮರ ಧ್ವನಿಗೈದು. ಸಾಂದ್ರ ಕಾಂತಾರದಲಿ
ಲಕ್ಷಮಧುಕರ ಪಕ್ಷಿರವದಿ ನಾದದ ಸಿಂಧು
ಮಸಗುತಿದೆ. ಸಂಜೆರವಿ, ಅದೊ, ವರುಣ ದಿಗ್ವಾರಣಂ
ತಾನೆನಲೆಸೆವ ಶೈಲ ಮಸ್ತಕ ಸುದೂರದಲಿ
ದಿಗ್ವಧೂ ಭ್ರೂಮಧ್ಯೆ, ಕಾಣ್, ರಂಗುಮಾಣಿಕ ಬಿಂದು!
ಇಲ್ಲಿಂದ ಕಾಣುವ ಸಹ್ಯಾದ್ರಿಗಿರಿಯೇ ಶಿವ; ಆತನ ಎದೆಯ ಮೇಲೆ ನರ್ತಿಸುವ ನೆರಳುಬೆಳಕೆಂಬ ಮಹಾಕಾಳಿ ಇಲ್ಲಿ ’ನಿತ್ಯನಟಿ’ಯಾಗಿದ್ದಾಳೆ. ತಾನು ದರ್ಶಿಸುತ್ತಿರುವ ಇಂತಹ ಮಹೋನ್ನತ ಸನ್ನಿವೇಶಗಳಿಂದ ಪ್ರಕೃತಿಯನ್ನು ಪೀರ‍್ವ ಕವಿಯ ಮನಸ್ಸು ತೃಪ್ತಗೊಳ್ಳುತ್ತದೆ. ಅದು ಅಂತಿಂತ ತೃಪ್ತಿಯಲ್ಲ. ಅಮರಾವತಿಯ ಇಂದ್ರನೇ ಈ ಕವಿಯ ಸೌಭಾಗ್ಯವನ್ನು ಕಂಡು ಕರುಬಬೇಕು. ಇಂತಹ ಮನೋಭಾವ ಕವಿಗೆ ಆಗ ಬಂದು ಈಗ ಹೋಗುವಂತಹುದಲ್ಲ; ಕವಿಯ ಸ್ಥಾಯೀ ಭಾವ. ಹಲವಾರು ಕವಿತೆಗಳಲ್ಲಿ ಅದನ್ನು ಕಾಣಬಹುದು. ಮುಖ್ಯವಾಗಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ದಶರಥನ ಪಾತ್ರ ಸನ್ನಿವೇಶವೊಂದರಲ್ಲಿ ಅನುಭವಿಸುವ ಮನಸ್ಥಿತಿಯನ್ನು ಗಮನಿಸಬಹುದು.

ಮೂವರು ಹೆಂಡತಿಯರಿದ್ದರೂ ದಶರಥನಿಗೆ ಮಕ್ಕಳಾಗಿಲ್ಲ. ’ಸಿರಿಯನಿತುಮಿರ್ದೊಡಂ’ ಅವರ ತಲೆಗಳಲ್ಲಿ ಬೆಳ್ಳಿಕೂದಲು ಮೂಡಿದ್ದರೂ ದಶರಥನಿಗೆ ಸಂತಾನದ ಪ್ರತೀಕ್ಷೆ ಕಾಡುತ್ತಿರುತ್ತದೆ. ಆದರೆ ಅದು ಕ್ರಿಯಾಶೀಲವಾಗಿ ಮುಂದಡಿಯಿಡಲು ಪ್ರಕೃತಿಯ ಲೀಲಾನಾಟಕವೊಂದು ಕಾರಣವಾಗಬೇಕಿರುತ್ತದೆ. ಆ ಸಂದರ್ಭ ಹೀಗಿದೆ.
ತಿರುಗುತಿರಲರಮನೆಯ ಸಿರಿದೋಂಟದೋಳ್:
ಮರಿಯ ತೆರೆವಾಯ್ಗಿಡುತೆ ತನ್ನ ಕೊಕ್ಕಂ, ಕುಟುಕು
ಕೊಡುತಿರ್ದ ತಾಯ್ವಕ್ಕಿಯಂ ಕಂಡು, ಕಣ್ ನಟ್ಟು,
ಕಾಲ್‌ನಟ್ಟು ನಿಂದನು ಮರಂಬಟ್ಟು.
ಈ ದೃಶ್ಯ ಸೃಷ್ಟಿಯ ಮಹದ್‌ವ್ಯೂಹದಲ್ಲಿ ನಿತ್ಯ ನಡೆಯುವ ಸಾಮಾನ್ಯ ಸಂಗತಿ. ಆದರೆ ಅಂದು ಅದನ್ನು ನೋಡಿದ ದಶರಥನಿಗೆ ಅದೊಂದು ಋತದಿಚ್ಛೆ!
ಮಕ್ಕಳಂ ಪಡೆದ ಪಕ್ಕಿಯ ಸಿರಿತನಂ ಚಕ್ರವರ್ತಿಗೆ ತನ್ನ
ಬಡತನವನಾಡಿ ಮೂದಲಿಸಿತೆನೆ, ಕರುಬಿ ಕುದಿದನ್
ಕೋಸಲೇಶ್ವರನಾ ವಿಹಂಗಮ ಸುಖಕೆ ಕಾತರಿಸಿ.
ದೇವತೆಗಳಾಶಿತಮೊ? ಋತದಿಚ್ಛೆಯೊ? ವಿಧಿಯೊ?
ಪಕ್ಕಿ ಗುಬ್ಬಚ್ಚಿಯಾದೊಡಮೇಂ? ವಿಭೂತಿಯಂ
ತಿರೆಗೆ ಕರೆವಾಸೆಯಂ ಕೆರಳಿಸಿದುದಾ ದೊರೆಯ
ಹೃದಯದಲಿ!
ಹಕ್ಕಿಗಳ ಸಿರಿತನ ಚಕ್ರವರ್ತಿಯ ಸಿರಿತನವನ್ನು ಮೂದಲಿಸಿದ್ದರಿಂದಲೇ ದೇವ ಶಕ್ತಿಗಳು ಸಂಚು ಹೂಡಿದ್ದರೋ ಎಂಬಂತೆ ಆ ಮುದುಕನ ಎದೆಯಲ್ಲಿ ಮಕ್ಕಳ ಆಸೆ ಮಿಂಚುತ್ತದೆ. ದಶರಥ ಪುತ್ರಕಾಮೇಷ್ಠಿಯನ್ನು ಮಾಡಲು ಉದ್ದೇಶಿಸುತ್ತಾನೆ. ಆಗ ಬರುವ ಜಾಬಾಲಿ ಋಷಿ ಆಡುವ ಮಾತುಗಳು, ಕವಿ ಎಷ್ಟೇ ಆದ್ಯಾತ್ಮಿಯಾದರೂ ಜನಮುಖಿಯೂ ಸಮಾಜಮುಖಿಯೂ ಆಗಿರಲು ಸಾಧ್ಯ ಎಂಬುದನ್ನು ತೋರಿಸುತ್ತದೆ.

ಸಂಪ್ರದಾಯ ಎಂದು ದಿಗ್ವಿಜಯ ಹಯಮೇಧ ಮೊದಲಾದುವಗಳಿಂದ ಒದಗುವ ಹಿಂಸೆ ಕ್ರೌರ್ಯವನ್ನು ತಪ್ಪಿಸಿ, ಅವುಗಳಿಲ್ಲದ ಪ್ರೇಮವನ್ನೇ ವ್ರತವಾಗಿ ಸ್ವೀಕರಿಸಿ ಪೂಜಿಸಿದರೆ ಮಾತ್ರ ಜಗತ್ತನ್ನಾಳುತ್ತಿರುವ ಋತ (ಸತ್ಯ) ಮೆಚ್ಚುತ್ತದೆ.
ನೆಲದಲ್ಲಿ, ಭಾನಲ್ಲಿ,
ಕಡಲು ಕಾಡುಗಳಲ್ಲಿ ಪಕ್ಕಿ ಮಿಗ ಪುಲ್ಗಳಲಿ
ಆರ್ಯರಲಿ ಮೇಣ್ ಅನಾರ್ಯರಲಿ, ಕೇಳ್, ವಿಶ್ವಮಂ
ಸರ್ವತ್ರ ತುಂಬಿದಂತರ್ಯಾಮಿ ಚೇತನಂ ತಾಂ
ಪ್ರಾಮಾತ್ಮವಾಗಿರ್ಪುದದರಿಂದೆ ಹಿಂಸೆಯಿಂ
ಪ್ರೇಮಮೂರ್ತಿಗಳಾದ ಸಂತಾನಮುದಿಸದಯ್.
ಶ್ರೀರಾಮಚಂದ್ರನಂತಹ ಪ್ರೇಮಮೂರ್ತಿಯುದಯಿಸಬೇಕಾದರೆ ಸೃಷ್ಟಿಗಿರಬೇಕಾದ ಉದಾತ್ತೆಯೂ ಅನನ್ಯವಾಗಿರಬೇಕಾಗುತ್ತದೆ. ಮಾನವಕೇಂದ್ರಿತ ಆಲೋಚನಾಕ್ರಮದಿಂದ ಹೊರಬಿದ್ದು ಎಲ್ಲರೊಳಗೊಂದಾಗಿ, ಎಲ್ಲವುದರೊಳಗೊಂದಾಗಿ ಯೋಚಿಸಿದಾಗ ಮೇಲಿನ ಮಾತುಗಳಲ್ಲಿ ಅಡಗಿರುವ ಸತ್ಯದ ದರ್ಶನವಾಗುತ್ತದೆ. ಆ ದರ್ಶನ ಸ್ವಯಂವೇದ್ಯವೇ ಹೊರತು ಬಾಹ್ಯಪ್ರದರ್ಶನಕ್ಕಲ್ಲ ಎಂಬುದೂ ಮನುಷ್ಯನ ಅಲೋಚನಾ ಮತ್ತು ಅಭಿವ್ಯಕ್ತಿ ಕ್ರಮದ ಇತಿ ಮಿತಿಗಳನ್ನು ತೆರೆದಿಡುತ್ತದೆ.

ಈ ಸೃಷ್ಟಿಯ ಜಡಚೇತನಗಳಲ್ಲಿ ತುಂಬಿರುವ ಚೇತನವೇ ಪ್ರೇಮ. ಆದ್ದರಿಂದ ಹಿಂಸೆಯಿಂದ ಪ್ರೇಮಮೂರ್ತಿಗಾಳದ ಸಂತಾನ ಉದಯಿಸುವುದಿಲ್ಲ ಎಂದು ಹೇಳುತ್ತಾ-
ವಿಶ್ವಶಕ್ತಿಸ್ವರೂಪಿಯನಗ್ನಿಯಂ ಭಜಿಸು ನೀಂ
ಸಾತ್ವಿಕ ವಿಧಾನದಿಂ. ಪ್ರಜೆಗಳಂ ಬಡವರಂ
ಸತ್ಕರಿಸವರ್ಗೆ ಬಗೆ ತಣಿವವೋಲ್. ತೃಪ್ತಿಯಿಂ
’ದೊರೆಗೊಳ್ಳಿತಕ್ಕೆ!’ ಎಂದಾ ಮಂದಿ ಪರಸಲ್ಕೆ,
ಪರಕೆಯದೆ ದೇವರಾಶೀರ್ವಾದಕೆಣೆಯಾಗಿ
ಕೃಪಣ ವೀಧಿಯಂ ಪಿಂಡಿ ತಂದೀವುದೈ ನಿನಗೆ
ನೆಲದರಿಕೆಯೊಳ್ಮಕ್ಕಳಂ.
ಎನ್ನುತ್ತಾರೆ. ಪ್ರಕೃತಿಯೊಳಗೊಂದಾಗಿ ಸಾಗಿದ ಸಾಧಕನ ಸಾಧನೆಗೆ ಕೊನೆಯೆಂಬುದೇ ಇಲ್ಲ. ಅದು ನಿತ್ಯಚಲನಶೀಲವಾದುದು ಮತ್ತು 'ನಿತ್ಯಋತ'ಮುಖಿಯಾದುದು.

No comments: