Wednesday, December 26, 2012

ರಸತಪಸ್ವಿಯ ನೆನವರಿಕೆ

ಕುವೆಂಪು ಅವರ ನೆನಪಿನ ದೋಣಿಯಲ್ಲಿ ಕೃತಿಯನ್ನು ಓದುವಾಗ ಪುಟ್ಟಯ್ಯನಾಯಕರ ಹೆಸರನ್ನು ಎದುರುಗೊಂಡಿದ್ದೆ. ನಂತರ ಅಲಿಗೆ ಗುರು ಅವರ ಎರಡು ಪುಸ್ತಕಗಳಲ್ಲಿ ಈ ಹೆಸರನ್ನು ಗಮನಿಸಿದ್ದೆ. ಕುವೆಂಪು ಅವರು ಗೌರವಪೂರ್ವಕವಾಗಿ ಪುಟ್ಟಯ್ಯನಾಯಕರನ್ನು ನೆನಪಿಸಿಕೊಳ್ಳುವುದು, ಪುಟ್ಟಯ್ಯನಾಯಕರು ಕುವೆಂಪು ಅವರ ತಾಯಿಯೊಂದಿಗೆ ಮಾತನಾಡಿದ್ದು, ಸಮಾಧಾನ ಮಾಡಿದ್ದು ಈ ಎಲ್ಲಾ ಅಂಶಗಳಿಂದ, ಯಾರೋ ಆ ಭಾಗದ ಸಹೃದಯ ಹಿರಿಯರು, ಕುವೆಂಪು ಅವರಿಗಿಂತ ವಯಸ್ಸಿನಲ್ಲಿ ಬಹುದೊಡ್ಡವರು ಎಂಬ ಭಾವನೆ ನನ್ನಲ್ಲಿ ನೆಲೆನಿಂತಿತ್ತು.

ನಾನು ನನ್ನ ಬ್ಲಾಗಿನಲ್ಲಿ ಕುವೆಂಪು ಅವರ ಕೆಲವು ಕವಿತೆಗಳ ಸಂದರ್ಭದ ಸ್ವಾರಸ್ಯವನ್ನು ಕುರಿತು ಬರೆಯುತ್ತಿದ್ದಾಗ, ಮೊದಲೇ ಪರಿಚಯವಾಗಿದ್ದ ಶ್ರೀ ವಿ.ಎಂ. ಕುಮಾರಸ್ವಾಮಿಯವರು, ಒಂದು ದಿನ ಪೋನ್ ಮಾಡಿ, ಅಲಿಗೆ ಪುಟ್ಟಯ್ಯನಾಯಕರ ಬಗ್ಗೆ, ಕುವೆಂಪು ಅವರ ಅಜ್ಜಿಯ (ಶೇಷಮ್ಮ) ತವರುಮನೆಯ ಬಗ್ಗೆ, ಕುವೆಂಪು ಮತ್ತು ಪುಟ್ಟಯ್ಯನಾಯಕರ ಸಂಬಂಧದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಅವರ ಬಗ್ಗೆ ಗೊತ್ತಿರುವ ವಿಷಯಗಳನ್ನು ಬರೆದು ಕೊಡುವಂತೆ ಕೇಳಿದರು. ನಾನೂ ಒಪ್ಪಿಕೊಂಡು, ಇಡೀ ನೆನಪಿನ ದೋಣಿಯಲ್ಲಿ ಕೃತಿಯನ್ನೂ ಹಾಗೂ ಗುರು ಅವರ ಎರಡು ಕೃತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಒಂದು ಲೇಖನವನ್ನು ಸಿದ್ಧಪಡಿಸಿ ಕೊಟ್ಟಿದ್ದೆ. ಆ ಸಂದರ್ಭದಲ್ಲಿ ಪುಟ್ಟಯ್ಯನಾಯಕರು ಕುವೆಂಪು ಅವರಿಗಿಂತ ಕೇವಲ ಎಂಟು ವರ್ಷ ದೊಡ್ಡವರೆಂದೂ, ಸಂಬಂಧದಲ್ಲಿ ಅಣ್ಣನಾಗಬೇಕೆಂದು ನನಗೆ ತಿಳಿಯಿತು. ಅದಕ್ಕಿಂತ ಹೆಚ್ಚಾಗಿ ಶ್ರೀ ಪುಟ್ಟಯ್ಯನಾಯಕರ ಎತ್ತರ ಬಿತ್ತರಗಳು ನನ್ನಲ್ಲಿ ಬೆರಗು ಮೂಡಿಸಿದ್ದವು. ಎರಡು ಮೇರು ವ್ಯಕ್ತಿತ್ವಗಳ ನಡುವೆ ನಾನು ಮೂಕವಿಸ್ಮಿತನಾಗಿ ನಿಂತುಬಿಟ್ಟಿದ್ದೆ. ಒಬ್ಬರು ರಸಋಷಿ; ಇನ್ನ್ನೊಬ್ಬರು ರಸತಪಸ್ವಿ. ಒಬ್ಬರು ಕವಿ; ಇನ್ನೊಬ್ಬರು ಕವಿಮನದವರು ಹಾಗೂ ಕವಿಜನಪ್ರಿಯರು. ಒಬ್ಬರು ರೈತರು; ಇನ್ನೊಬ್ಬರು ರೈತರಿಗೂ ಉಸಿರನ್ನಿತ್ತವರು!
ನಾನು ಕಳುಹಿಸಿದ ಲೇಖನವನ್ನು ಓದಿದ ಕುಮಾರಸ್ವಾಮಿಯವರು, ಅಲಿಗೆ ಪುಟ್ಟಯ್ಯನಾಯಕರಂತಹ ಜನಸಮುದಾಯದ ನಾಯಕರ ಬಗ್ಗೆ ಒಂದೂ ಪುಸ್ತಕ ಬರದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ನೀನು ಕುವೆಂಪು ಸಾಹಿತ್ಯ ಬಗ್ಗೆ ಚೆನ್ನಾಗಿ ಓದಿಕೊಂಡಿದ್ದೀಯಾ ಎಂದು ನಿನ್ನ ಬರವಣಿಗೆಗಳಿಂದ ತಿಳಿಯುತ್ತಿದೆ. ಪುಟ್ಟಯ್ಯನಾಯಕರ ಬಗ್ಗೆ ಒಂದು ಪುಸ್ತಕವನ್ನು ನೀನೇಕೆ ಸಿದ್ಧಪಡಿಸಬಾರದು. ಅದಕ್ಕೆ ಬೇಕಾದ ಸಹಕಾರವನ್ನು ನಾನು ನೀಡುತ್ತೇನೆ ಎಂದು ಕೇಳಿದರು. ಮತ್ತೊಮ್ಮೆ ಕುವೆಂಪು ಪ್ರಪಂಚದಲ್ಲಿ ವಿಹರಿಸುವ ಸಂದರ್ಭವನ್ನು ನಾನು ಕಳೆದುಕೊಳ್ಳುತ್ತೇನೆಯೇ? ಸಂತೋಷವಾಗಿ ಒಪ್ಪಿದೆ. ಫೋನಿನಲ್ಲಿಯೇ ಪುಸ್ತಕ ಹೇಗಿರಬೇಕು ಎಂಬ ಒಂದು ಸ್ಥೂಲ ಕಲ್ಪನೆಗೆ ನಾವು ಬಂದಿದ್ದೆವು. ಒಂದರ ಹಿಂದೊಂದು ಬರುತ್ತಿದ್ದ ಈಮೇಲುಗಳಲ್ಲಿಯೂ ಮಾಹಿತಿ ವಿನಿಮಯ ಮಾಡಿಕೊಂಡೆವು. ನೀನು ಒಮ್ಮೆ ಅಲಿಗೆಗೆ ಹೋಗಿ ಬಾ ಎಂದು ಕುಮಾರಸ್ವಾಮಿ, ನನಗೆ ಅಲಿಗೆ ಮನೆಯವರ ಎಲ್ಲರ ಪರಿಚಯವನ್ನು ಪೋನಿನಲ್ಲಿಯೇ ಮಾಡಿಕೊಟ್ಟರು.
ಪೂರ್ಣಚಂದ್ರ ತೇಜಸ್ವಿಯವರ ನೆನಪಿನಲ್ಲಿ ೫.೪.೧೨ರಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದವನು ಅಲಿಗೆ ಮನೆಗೆ ನನ್ನ ಹೆಂಡತಿ ಮಗಳೊಂದಿಗೆ ಭೇಟಿಯಿತ್ತೆ. ಅಲ್ಲಿಯವರು ನನಗೆ ನೀಡಿದ ಸ್ವಾಗತ, ನಮ್ಮನ್ನು ಸತ್ಕರಿಸಿದ ರೀತಿ, ನೀಡಿದ ಮಾಹಿತಿಗಳು ನನ್ನನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿದ್ದವು. ನಾನು ಪುಟ್ಟಯ್ಯನಾಯಕರ ಹಾಗೂ ಅವರ ಕಾಲದ ಚಿತ್ರಣವನ್ನು ಬಿಂಬಗ್ರಾಹ್ಯವಾಗಿಸಿಕೊಳ್ಳತೊಡಗಿದ್ದೆ. ಮಾಹಿತಿ ನೀಡುವುದರಲ್ಲಿದ್ದ ಆತ್ಮೀಯತೆ ಕೃತಿಯಲ್ಲೂ ನಡೆಯುತ್ತಿತ್ತು. ಕೇವಲ ಐದಾರು ಗಂಟೆ ಕಳೆಯುವಷ್ಟರಲ್ಲಿ ನಾವೂ ಆ ಬೃಹತ್ ಮನೆತನದ ಭಾಗವಾಗಿದ್ದೇವೊ ಎಂಬ ಭಾವನೆ ನಮ್ಮನ್ನಾವರಿಸಿತ್ತು. ರಸತಪಸ್ವಿಯ ಚಿತ್ರಣ ಮನದಲ್ಲಿ ಮೂಡುತ್ತಿತ್ತು.
ಮುಂದೆ ಮೂರೇ ತಿಂಗಳಲ್ಲಿ ಕುಮಾರಸ್ವಾಮಿಯವರು ಭಾರತಕ್ಕೆ ಬಂದಾಗ, ಮತ್ತೆ ಅಲಿಗೆ ಮನೆಗೆ ಭೇಟಿ ಕೊಡುವ ಅವಕಾಶ ನನಗೆ ಸಿಕ್ಕಿತ್ತು. ಮೂರು ದಿನಗಳ ಕಾಲ ಕುಪ್ಪಳಿಯಲ್ಲಿ ಉಳಿದಕೊಂಡು, ಅಮ್ಮಡಿ, ದೇವಂಗಿ, ಹೊಸಕೇರಿ, ಅಲಿಗೆ, ಹಿರಿಕೊಡಿಗೆ ಮುಂತಾದ ಪ್ರದೇಶಗಳಲ್ಲಿ ಸುತ್ತಿ ಪುಟ್ಟಯ್ಯನಾಯಕರ ಕಾರ್ಯಕ್ಷೇತ್ರವನ್ನು ಪರಿಚಯ ಮಾಡಿಕೊಂಡೆವು. ಹಿರಿಯರಾದ ಶ್ರೀ ಅಮ್ಮಡಿ ಆರ್. ನಾಗಪ್ಪನಾಯಕರು ಶಿವಮೊಗ್ಗದಿಂದ ಬಂದು ನಮ್ಮ ಜೊತೆ ಸೇರಿದ್ದರಿಂದ, ಬಾಗಶಃ ನಾವು ಪುಟ್ಟಯ್ಯನಾಯಕರ ಪ್ರಪಂಚವನ್ನು ಪ್ರವೇಶಿಸಿದ್ದೆವು.
ಪುಟ್ಟಯ್ಯನಾಯಕರನ್ನು ಹತ್ತಿರದಿಂದ ಬಲ್ಲ, ಅವರೊಂದಿಗೆ ಒಡನಾಡಿದ ಹಲವಾರು ಮಂದಿಯನ್ನು ಸಂಪರ್ಕಿಸಿ, ಅವರಿಗೆ ಗೊತ್ತಿರುವ ಮಾಹಿತಿಯನ್ನು ಬರೆದುಕೊಡುವಂತೆ, ನೀಡುವಂತೆ ಕೇಳಿಕೊಳ್ಳಲಾಗಿತ್ತು. ನಾವು ಸಂಪರ್ಕಿಸಿದ ಎಲ್ಲರೂ ಸ್ಪಂದಿಸದಿದ್ದರೂ, ಪುಟ್ಟಯ್ಯನಾಯಕರ ಕುಟುಂಬದವರು, ಆತ್ಮೀಯರು, ಅವರ ಶಿಷ್ಯರು, ಅಭಿಮಾನಿಗಳು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಲ್ಲದೆ, ಲೇಖನಗಳನ್ನೂ ಬರೆದುಕೊಟ್ಟರು. ನಾಯಕರ ಮರಿಮೊಮ್ಮಗ ೧೩ ವರ್ಷದ ಮಂಚಲ್‌ನಿಂದ ಹಿಡಿದು, ಹಿರಿಯರಾದ ನಾಗಪ್ಪನಾಯಕ ಹಾಗೂ ಪುಟ್ಟಯ್ಯನಾಯಕರ ಶ್ರೀಮತಿ ರಾಜಮ್ಮ ಅವರುಗಳವರೆಗೆ ಎಲ್ಲರೂ ನೀಡಿದ ಸಹಕಾರದಿಂದ ಈ ಕೃತಿ ಸಿದ್ಧಗೊಂಡಿದೆ. ಕುಮಾರಸ್ವಾಮಿಯವರ ದೃಢನಿರ್ಧಾರ, ಅವರ ಕಾರ್ಯಚಾತುರ್ಯದಿಂದ ಇಂದು ಸಹೃದಯ ಓದುಗರ ಕೈ ಸೇರುತ್ತಿದೆ.

ನನ್ನನ್ನು ಚಿಂತೆಗೆ ಈಡುಮಾಡಿದ ವಿಷಯವೆಂದರೆ, ಒಂದು ಕಾಲದಲ್ಲಿ ಪುಟ್ಟಯ್ಯನಾಯಕರಿಂದ ಪುರಸ್ಕರಿಸಲ್ಪಟ್ಟವರು, ಅವರ ಪ್ರೀತಿಯ ಅತಿಥಿಸತ್ಕಾರವನ್ನು ಉಂಡವರು, ಅವರು ಬದುಕಿದ್ದಾಗ, ವಾರಗಟ್ಟಲೆ ಅಲಿಗೆಗೆ ಬಂದು ಉಳಿದು ಉಂಡು ತಿಂದು ಹೋದವರು, ತಮ್ಮ ಪುಸ್ತಕಗಳನ್ನು ಕಳುಹಿಸಿ ಅವರಿಂದ ಮೆಚ್ಚುಗೆ ಪತ್ರಗಳನ್ನು ಬರೆಯಿಸಿಕೊಂಡವರು, ಅದನ್ನು ಬೇರೆಯವರಿಗೆ ತೋರಿಸಿ ಬೀಗಿದವರು... ಇಂತಹ ಕೆಲವರು ಕೇವಲ ಬಾಯಿ ಮಾತಿನಲ್ಲಿ ಪುಟ್ಟಯ್ಯನಾಯಕರನ್ನು ನೆನಪು ಮಾಡಿಕೊಂಡರೂ, ಅವರ ಬಗ್ಗೆ, ಅವರ ಜೊತೆಗಿನ ಒಡನಾಟದ ಬಗ್ಗೆ ಬರೆದುಕೊಡದೇ ಹೋದದ್ದು! ಅದೂ ಕೆಲವರು ದೊಡ್ಡ ದೊಡ್ಡ ಬರಹಗಾರರೆನ್ನಿಸಿಕೊಂಡವರೂ ಕೂಡಾ! ಅದೇನೇ ಇರಲಿ, ಪುಟ್ಟಯ್ಯನಾಯಕರಂತಹ ಶಾಂತಜೀವಿಯ ಸ್ಮರಣೆಯೇ ನಮ್ಮ ಬದುಕಿಗೆ ಒಂದು ನವಚೈತನ್ಯವನ್ನು ನೀಡಬಲ್ಲುದು ಎಂಬುದು ನನ್ನ ಅನುಭವ. ನಾಯಕರಿಂದ ಉಪಕೃತರಾದವರೇ ಅಂತಹ ಅವಕಾಶವನ್ನು ಕಳೆದುಕೊಂಡರಲ್ಲ ಎಂಬ ಬೇಸರವೂ ಆಗುತ್ತದೆ.
ಕುವೆಂಪು ಅವರೇ ಕರೆದಿರುವಂತೆ ನಾಯಕರು ಅಜ್ಞಾತ ಮಹಾಪುರುಷ. ಅವರು ಬದುಕು, ಆದರ್ಶಗಳನ್ನು ಗಮನಿಸಿದರೆ ಅವರೊಬ್ಬ ನಿಷ್ಕಾಮ ಕರ್ಮಯೋಗಿ. ಅಂತಹ ಮಹಾವ್ಯಕ್ತಿಯ ಪ್ರಭಾವಲಯದಲ್ಲಿ ಸುತ್ತಿ, ಅವರ ಬದುಕು, ಆದರ್ಶ, ಧ್ಯೇಯಗಳನ್ನು ಅರಿಯುವ ತನ್ಮೂಲಕ ಅಲಿಗೆಯಂತಹ ಒಂದು ಸಾರ್ಥಕ ಮನೆತನದ ಇತಿಹಾಸದಬಗ್ಗೆ, ಪರಂಪರೆಯ ಬಗ್ಗೆ ಅನುಸಂಧಾನ ನಡೆಸುವ ಭಾಗ್ಯ ನನ್ನದಾಗಿದೆ.
ಈ ಕೆಲಸಕ್ಕೆ ಪುಟ್ಟಯ್ಯನಾಯಕರ ಕುಟುಂಬವರ್ಗದವರು ನೀಡಿದ ಸಹಕಾರ  ಅಪಾರವಾದದ್ದು. ಅದಕ್ಕಾಗಿ ಆ ಇಡೀ ಮನೆತನದ ಸರ್ವರಿಗೂ ಮೊದಲಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪ್ರತಿಯೊಬ್ಬರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ. ಅದನ್ನು ಎದುರು ನೋಡುವಂತಹ ಸಂಸ್ಕಾರವೂ ಆ ಕುಟುಂಬದವರಿಗಿಲ್ಲ ಎಂಬುದೇ ಅಲಿಗೆಯವರ ದೊಡ್ಡಸ್ತಿಕೆ. ಮೊದಲ ಭೇಟಿಯಲ್ಲೇ ಮಿತ್ರಗೌರವವನ್ನು ದಯಪಾಲಿಸಿ ತಮ್ಮ ಅತಿಥಿ ಸತ್ಕಾರದಲ್ಲಿ ನನ್ನ ಕುಟುಂಬವನ್ನು ಮುಳುಗಿಸಿದ ಹಿರಿಯರಾದ ಶ್ರೀ ಗಣಪಯ್ಯನಾಯಕರ ಕುಟುಂಬವರ್ಗ, ಹಲವಾರು ಮಾಹಿತಿಗಳನ್ನು ನೀಡಿದ ಶ್ರೀ ವಿಜಯರಾಘವ ಅವರ ಕುಟುಂಬವರ್ಗ, ಹಾಗೂ ಇಡೀ ಅಲಿಗೆ ಮನೆಯನ್ನೇ ನಮ್ಮ ಮುಂದೆ ತೆರೆದಿಟ್ಟಿದ್ದ ಶ್ರೀ ವಿವೇಕಾನಂದ ಮತ್ತು ಶ್ರೀ ವಿಷ್ಣುಮೂರ್ತಿ ಮತ್ತು ಅವರ ಮನೆಯವರನ್ನು ನಾನಿಲ್ಲಿ ನೆನೆಯಲೇಬೇಕಾಗಿದೆ. ಅಲಿಗೆಯ ಬಂಧುಗಳಾದ ಶ್ರೀಮತಿ ಹೆಚ್.ಬಿ. ಪ್ರಮೀಳಾ ಅವರು ತಾವು  ಬಾಲ್ಯದಲ್ಲಿ ಕಂಡಿದ್ದ ಅಜ್ಜಯ್ಯನ ನೆನಪನ್ನು ದಾಖಲಿಸಿದ್ದಾರೆ. ಅವರನ್ನಿಲ್ಲಿ ಗೌರವದಂದ ನೆನೆಯುತ್ತೇನೆ.
ಅಲಿಗೆ ಮನೆಯವರೊಂದಿಗೆ ಈ ಕೆಲಸದಲ್ಲಿ ಸಹಕರಿಸಿ, ಮಾಹಿತಿ ನೀಡಿ, ಲೇಖನವನ್ನು ಬರೆದುಕೊಟ್ಟ, ಅಮ್ಮಡಿ ಆರ್. ನಾಗಪ್ಪನಾಯಕ, ಕೋಣೆಗದ್ದೆ ಪದ್ಮನಾಭ ಶ್ರೀಮತಿ ಹೆಚ್.ಬಿ ಪ್ರಮೀಳಾ, ಹೆಚ್.ಸಿ.ದಯನಂದ, ಕಡಿದಾಳು ದಯಾನಂದ, ಕಾ.ಹಿ. ರಾಧಾಕೃಷ್ಣ ಅವರಿಗೆ ಕೃತಜ್ಞನಾಗಿದ್ದೇನೆ. ಅವರ ಲೇಖನಗಳು ಈ ಪುಸ್ತಕದ ಮಹತ್ವವನ್ನು ಹೆಚ್ಚಿಸಿವೆ. ಅವುಗಳನ್ನು ಓದುವುದೆಂದರೆ ಗತಕಾಲಕ್ಕೇ ಒಂದು ಪಯಣ ಮಾಡಿದಂತೆ. ಪುಟ್ಟಯ್ಯನಾಯಕರನ್ನು ಕಂಡಿರದ ನನ್ನಂತವರಿಗೆ ಅವರನ್ನು ತಂದು ಮುಂದೆ ನಿಲ್ಲಿಸಿದ್ದಾರೆ.
ಕುಪ್ಪಳಿಯಲ್ಲಿ ಸಿಕ್ಕಾಗ ಅಲಿಗೆ ಪುಟ್ಟಯ್ಯನಾಯಕರ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಲ್ಲದೆ, ಲೇಖನವನ್ನು ಬರೆದುಕೊಟ್ಟ ಹಿರಿಯರಾದ ಶ್ರೀ ಕಡಿದಾಳ ಶಾಮಣ್ಣ ಅವರ ಸೌಜನ್ಯಕ್ಕೆ ನಾನು ಆಭಾರಿಯಾಗಿದ್ದೇನೆ. ಪುಟ್ಟಯ್ಯನಾಯಕರು ತೇಜಸ್ವಿಯವರಿಗೆ ಬರೆದಿದ್ದ ಕಾಗದಗಳನ್ನು ಸ್ಕ್ಯಾನ್ ಮಾಡಿಸಿ ನೀಡಿದ್ದಲ್ಲದೆ, ತೇಜಸ್ವಿಯವರ ಮುಖಾಂತರ ತಾವು ಕಂಡಿದ್ದ ಪುಟ್ಟಯ್ಯನಾಯಕರ ಬಗ್ಗೆ ಪ್ರೀತಿಯಿಂದ ಬರೆದುಕೊಟ್ಟ ಶ್ರೀಮತಿ ರಾಜೇಶ್ವರಿಯವರಿಗೂ ಹಾಗೂ ನಾಯಕರು ಅವರ ಹೃದಯಸಾಮ್ರಾಟರಾಗಿದ್ದ ಕುವೆಂಪು ಅವರಿಗೆ ಬರೆದಿರುವ ಹಲವಾರು ಪತ್ರಗಳನ್ನು ಪರಿಶೀಲಿಸಿ, ಆಯ್ದ ಪತ್ರಗಳನ್ನು ನೀಡಿದ್ದಲ್ಲದೆ, ತಾವು ಬಾಲ್ಯದಲ್ಲಿ ಕಂಡಿದ್ದ ನಾಯಕರ ಬಗ್ಗೆ ಆಪ್ತವಾಗಿ ಬರೆದುಕೊಟ್ಟಿರುವ  ಶ್ರೀಮತಿ ತಾರಿಣಿ ಚಿದಾನಂದಗೌಡ ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ. ಕುವೆಂಪು ಮತು ತೇಜಸ್ವಿಯವರಿಗೆ ಬಂದಿರುವ ಎಲ್ಲಾ ಕಾಗದಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಅವುಗಳು ಮುಂದಿನ ತಲೆಮಾರಿಗೆ ಲಭ್ಯವಾಗುವಂತೆ ಮಾಡುತ್ತಿರುವ ತಾರಿಣಿ ಮತ್ತು ರಾಜೇಶ್ವರಿಯವರ ಪ್ರಯತ್ನಕ್ಕೆ ನಾವು ಋಣಿಯಾಗಿದ್ದೇವೆ.
ಶ್ರೀಯುತರೆಲ್ಲರೂ ನೀಡಿದ ಮಾಹಿತಿಗಳು, ಬರೆದುಕೊಟ್ಟ ಲೇಖನಗಳು ಮತ್ತು ಇನ್ನಿತರ ಲಭ್ಯ ಮಾಹಿತಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ಈ ಪುಸ್ತಕದ ಮೊದಲ ಭಾಗವನ್ನು ಸಿದ್ಧಪಡಿಸುವಲ್ಲಿ ನನಗೆ ನೆರವಾದವರು, ಹಿರಿಯರಾದ ಅಲಿಗೆ ವಿವೇಕಾನಂದ ಅವರು. ಪುಟ್ಟಯ್ಯನಾಯಕರ ಮಗನಾಗಿದ್ದರೂ, ಹೊರಗಿನ ವ್ಯಕ್ತಿಯಂತೆ, ವಸ್ತುನಿಷ್ಟವಾಗಿ ಯೋಚಿಸಿ, ದಾಖಲಿಸುವಲ್ಲಿ ಅವರು ಅಪಾರ ಶ್ರಮವಹಿಸಿದ್ದಾರೆ. ಅಲಿಗೆಯಿಂದ ಬೆಂಗಳೂರಿಗೆ ಬಂದು ಐದಾರು ದಿನಗಳ ಕಾಲ ನಮ್ಮೊಡನಿದ್ದು ಅಲಿಗೆ ಮನೆಯ ಇತಿಹಾಸ, ಸಂಸ್ಕೃತಿ, ಆಗಿ ಹೋದ ಮಹನೀಯರುಗಳು, ಪುಟ್ಟಯ್ಯನಾಯಕರ ಒಡನಾಡಿಗಳು, ಘಟನೆಗಳು ಇವುಗಳ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಹಲವನ್ನು ಬರೆದೂ ಕೊಟ್ಟಿದ್ದಾರೆ. ಆ ಬರವಣಿಗೆಯ ಡಿ.ಟಿ.ಪಿ.ಯಾಗುತ್ತಿದ್ದ ಹಾಗಯೇ ಅದರ ಕರಡಚ್ಚು ತಿದ್ದುವಲ್ಲಿಯೂ ಶ್ರೀಯುತರ ಪರಿಶ್ರಮವಿದೆ. ಅದಕ್ಕಾಗಿ ಅವರಿಗೆ ನಾನು ಆಭಾರಿಯಾಗಿದ್ದೇನೆ. ನಮಗಾಗಿ, ನಮಗೆ ಬೇಕೆಂದಲ್ಲಿಗೆ ಅವರನ್ನು ಬೆಂಗಳೂರಿನಲ್ಲಿ ಕರೆದುಕೊಂಡು ಬರುತ್ತಿದ್ದ ಹೆ.ಚ್.ಸಿ ದಯಾನಂದ ಅವರ ಶ್ರಮವನ್ನು ಪ್ರೀತಿಯಿಂದ ನೆನೆಯುತ್ತೇನೆ.
ಎಲ್ಲರ ಅಹಕಾರದಿಂದ, ಸಿಕ್ಕಿದ ಮಾಹಿತಿಗಳು ಮತ್ತು ಲಭ್ಯ ಆಕರಗಳಿಂದ ಸ್ಥೂಲವಾಗಿ ಅಲಿಗೆ ಮನೆಯ ಇತಿಹಾಸ, ಸಾಂಸ್ಕೃತಿಕ ಮಹತ್ವ,, ಪುಟ್ಟಯ್ಯನಾಕರ ತಂದೆಯ ಸಾಧನೆಗಳು, ಪುಟ್ಟಯ್ಯನಾಯಕರ ಬದುಕು, ಧ್ಯೇಯ, ಆದರ್ಶ, ವ್ಯಕ್ತಿತ್ವ ಮೊದಲಾದವನ್ನು ಮೊದಲಭಾಗದಲ್ಲಿ ಕಟ್ಟಿಕೊಡಲು ಯತ್ನಿಸಲಾಗಿದೆ. ನಂತರ ಪುಟ್ಟಯ್ಯನಾಯಕರ ಬಗ್ಗೆ ಬೇರೆಯವರು ಬರೆದ ಲೇಖನಗಳನ್ನು ಕೊಟ್ಟಿದೆ.
ಇಂತಹ ಮಹತ್ವದ ಕೆಲಸವನ್ನು ನನ್ನ ಮೇಲೆ ನಂಬಿಕೆಯಿಟ್ಟು  ನನಗೆ ವಹಿಸಿದ್ದಲ್ಲದೇ ಸ್ವತಃ ತಾವೂ ಸಕ್ರೀಯವಾಗಿ ನನ್ನೊಂದಿಗಿದ್ದ, ಹಿರಿಯರೂ ಅಭಿಮಾನಧನರೂ ಆದ ಶ್ರೀ ಕುಮಾರಸ್ವಾಮಿಯವರಿಗೆ ನಾನು ಆಭಾರಿಯಾಗಿದ್ದೇನೆ. ಅವರೊಂದಿಗೆ ಕುಪ್ಪಳಿ ಪ್ರವಾಸಕ್ಕೆ ಬಂದುದಲ್ಲದೆ, ಹಲವಾರು ಸಲಹೆಗಳನ್ನು ನೀಡಿ ಮಾರ್ಗದರ್ಶನ ಮಾಡಿದ ಡಾ. ಹ.ಕ.ರಾಜೇಗೌಡರಿಗೆ ಮತ್ತು ಮಾಹಿತಿ ಸಂಗ್ರಹಿಸುವಲ್ಲಿ ಹಾಗೂ ಛಾಯಾಚಿತ್ರಗಳನ್ನು ತೆಗೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದ ಶ್ರೀ ಟಿ. ಗೋವಿಂದರಾಜು ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ತಮ್ಮ ಸಂಗ್ರಹದಲ್ಲಿದ್ದ ಪೋಟೊವನ್ನು ಒದಗಿಸಿದ ಹಿರಿಯ ಜಾನಪದ ತಜ್ಞ ಕ.ರಾ.ಕೃ. ಅವರನ್ನಿಲ್ಲಿ ನೆನೆಯುತ್ತೇನೆ.
ಕೈಬರಹದಲ್ಲಿದ್ದ ಕೆಲವು ಲೇಖನಗಳನ್ನು ಡಿ.ಟಿ.ಪಿ. ಮಾಡಿ ಸಹಕರಿಸಿದ ನನ್ನ ಶ್ರೀಮತಿ ಶ್ವೇತಾ, ಕರಡಚ್ಚು ತಿದ್ದುವಲ್ಲಿ ಸಹಕರಿಸಿದ ಹಿರಿಯರಾದ ಶ್ರೀ ಜಿ.ಎಸ್.ಎಸ್.ರಾವ್ ಅವರಿಗೂ, ನನ್ನ ಈ ಕೆಲಸಕ್ಕೆ ಸಮಯಾನುಕೂಲ ಮಾಡಿಕೊಟ್ಟ ಮಗಳು ಈಕ್ಷಿತಾಳಿಗೂ, ನನ್ನ ಸುರಾನಾ ಕಾಲೇಜಿನ ಸರ್ವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಮಿತ್ರ ಸೃಷ್ಟಿ ನಾಗೇಶನಿಗೆ, ಮುಖಪುಟ ಕಲಾವಿದರಾದ ಸುಧಾಕರ ದರ್ಭೆ ಮತ್ತು ಸತ್ಯಶ್ರೀ ಪ್ರಿಂಟರ‍್ಸ್ ಎಲ್.ಲಿಂಗಪ್ಪನವರಿಗೆ ಹಾಗೂ ಸಹೃದಯ ಓದುಗರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

1 comment:

Ashok.V.Shetty, Kodlady said...

Very Nice sir...Congrats n All the best sir....