ಎಸ್.ವಿ.ಪರಮೇಶ್ವರಭಟ್ಟರು ಇಂದು (08.02.2013) ಬದುಕಿದ್ದರೆ ಅವರಿಗೆ ನೂರು ವರ್ಷಗಳು ತುಂಬಿರುತ್ತಿದ್ದವು. ಅವರು ನಿಧನರಾಗೇ ಹನ್ನೆರಡು ವರ್ಷಗಳು ಕಳೆದು ಹೋಗಿವೆ ಎಂಬುದನ್ನು ನೆನೆದಾಗ ಮನಸ್ಸು ಭಾರವಾಗುತ್ತದೆ.
ನಾನೇನೂ ಎಸ್.ವಿ.ಪಿ.ಯವರನ್ನು ನೋಡಿದವನಲ್ಲ; ಅವರೊಂದಿಗೆ ಮಾತನಾಡಿದವನಲ್ಲ. ಅವರ ತುಂಬೆ ಹೂವು ಎಂಬ ಕವನಸಂಕಲನದ ಮುಖಾಂತರ ಒಬ್ಬ ಓದುಗನಾಗಿ ಅವರನ್ನು ಮುಖಾಮುಖಿಯಾಗಿದ್ದೆ. ನಂತರ ನನ್ನ ಪಿಹೆಚ್.ಡಿ. ಅಧ್ಯಯನ ಸಂದರ್ಭದಲ್ಲಿ, ಸಂಸ್ಕೃತ ಮಹಾಕಾವ್ಯಗಳ ಕನ್ನಡ ಅನುವಾದಗಳನ್ನು ಹುಡಕುತ್ತಿದ್ದಾಗ, ಅದರಲ್ಲಿ ಬಹುಪಾಲು ಎಸ್.ವಿ.ಪಿ.ಯವರ ಅನುವಾದಗಳೇ ನನಗೆ ದೊರೆತಿದ್ದು ಹಾಗೂ ಅನುಕೂಲವಾಗಿದ್ದು. ಅವುಗಳಲ್ಲಿ ಹೆಚ್ಚಿನವನ್ನು, ಪಿಹೆಚ್.ಡಿ. ಅಧ್ಯಯನದ ನಂತರವೂ ನಾನು ಓದಿ ಖುಷಿ ಪಟ್ಟಿದ್ದೇನೆ. ಸಂಸ್ಕೃತದ ಕಾಳಿದಾಸ ನನಗೆ ಕನ್ನಡದಲ್ಲಿ ದಕ್ಕಿದ್ದು ಎಸ್.ವಿ.ಪಿ.ಯವರ ಮುಖಾಂತರವೇ!
ಟಿ.ಎಸ್.ವೆಂಕಣ್ಣಯ್ಯನವರು ಹಾಗೂ ಕುವೆಂಪು ಅವರ ಗುರುಗಳಾಗಿದ್ದರು. ವೆಂಕಣ್ಣಯ್ಯನವರ ಬಹುತೇಕ ಶಿಷ್ಯರಂತೆ ಇವರೂ ಅವರಿಂದ ಉಪಕೃತರಾದವರೇ ಆಗಿದ್ದಾರೆ. ಆರ್ಥಿಕ ಮುಗ್ಗಟ್ಟಿನಲ್ಲೇ ವಿದ್ಯಾಭ್ಯಾಸ ನಡೆಸುತ್ತಿದ್ದ ಎಸ್.ವಿ.ಪಿ.ಯವರು ತೀರಾ ಅಗತ್ಯ ಬಿದ್ದಾಗ ಗುರುಗಳ ಬಳಿಯೇ ಸಾಲ ಮಾಡಿದ್ದುಂಟು. ಒಮ್ಮೆ ಅದನ್ನು ತೀರಿಸಲು ಹೋದಾಗ ವೆಂಕಣ್ಣಯ್ಯನವರು, ಅದೇ ದುಡ್ಡಿನಲ್ಲಿ ಕಿಟ್ಟೆಲ್ ನಿಘಟು ಕೊಂಡುಕೊ. ಅದು ನಿನ್ನ ಬಳಿ ನಿನ್ನ ಜೀವನಪರ್ಯಂತ ಇರುತ್ತದೆ ಎಂದು ಶಿಷ್ಯವಾತ್ಸಲ್ಯವನ್ನು ಮೆರೆದಿದ್ದರಂತೆ.
ಎಸ್.ವಿ.ಪಿಯವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ನಿವೃತ್ತಿ ಹೋಂದಿದ ಮೇಲೆ, ಮೈಸೂರಿನಲ್ಲಿ ನೆಲೆಸಿದರು. ಆ ಸಂದರ್ಭದಲ್ಲಿ ಯು.ಜಿ.ಸಿ. ಪ್ರಾಯೋಜಿತ ಪ್ರಾಧ್ಯಾಪಕರಾಗಿ ಮಾನಸಗಂಗೋತ್ರಿಯಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬರುತ್ತದೆ. ಆಗ ಅವರು ಯಾವುದಾದರೊಂದು ವಿಷಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕಾಗಿರುತ್ತದೆ. ಆಗ ಅವರು ಆಯ್ಕೆ ಮಾಡಿಕೊಂಡಿದ್ದು ಕುವೆಂಪು ಅವರ ಕಾವ್ಯವನ್ನು. "ರಸಋಷಿ ಕುವೆಂಪು" ಶೀರ್ಷಿಕೆಯ ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿದರು. ಕೈಬರಹದಲ್ಲಿದ್ದ ತಮ್ಮ ಇಡೀ ಬರಹವನ್ನು ಕುವೆಂಪು ಅವರಿಗೆ ತೋರಿಸಬೇಕೆಂದು ಉದಯರವಿಗೆ ಆಟೋದಲ್ಲಿ ಹಾಕಿಕೊಂಡು ಬಂದಿದ್ದರಂತೆ! ಅಷ್ಟು ಬೃಹತ್ತಾಗಿತ್ತು ಆ ಬರಹ. ಯಾವಾಗಲಾದರೊಮ್ಮೆ ಕುವೆಂಪು ಅವರಿಗೆ ಸಿಕ್ಕಾಗ, "ಏನು ಭಟ್ಟರೆ ಹೇಗಿದ್ದೀರಿ? ತುಂಬಾ ಅಪರೂಪ" ಎಂದು ಕುವೆಂಪು ಕೇಳಿದರೆ, "ಏನು ಮಾಡುವುದು ಗುರುಗಳೇ, ಕುವೆಂಪು ಸಾಹಿತ್ಯ ಸಮುದ್ರಕ್ಕೆ ಧುಮ್ಮಿಕ್ಕಿರುವೆ. ಈಗ ದಡ ಸೇರಬೇಕಾಗಿದೆ. ಈಜಿತ್ತಾ ದಡಸೇರುವ ಹೋರಾಟ ಮಾಡುತ್ತಿದ್ದೇನೆ" ಎನ್ನುತ್ತಿದ್ದರಂತೆ.
ಅಂದು ಆಟೋದಲ್ಲಿ ಹೊತ್ತು ತಂದಿದ್ದ ಲೆಡ್ಜರುಗಳನ್ನು ಎತ್ತಲು ಅವರಿಂದ ಸಾಧ್ಯವಿರಲಿಲ್ಲ. ಆಟೋ ಡ್ರೈವರನ ಸಹಾಯದಿಂದ ಉದಯರವಿಯ ಒಳಗೆ ತಂದು ಇಟ್ಟು, ಕವಿಗೆ ದೀರ್ಘದಂಡ ನಮಸ್ಕಾರ ಮಾಡಿ ಹೀಗೆ ಹೇಳಿದರಂತೆ- "ಗುರುಗಳೆ, ರಸಋಷಿ ಕುವೆಂಪು ಗ್ರಂಥ ಮುಗಿದಿದೆ. ಅದನ್ನು ನಿಮಗೆ ತೋರಿಸಲು ತಂದೆ". ಆಗ ಕುವೆಂಪು ಅವರು ಆ ಅಗಾಧ ಬರಹದ ರಾಶಿಯನ್ನು ಕಂಡು, "ಭಟ್ಟರೆ, ನೀವು ಬರೆದಿರುವುದನ್ನು ನೀವೇ ಹೊರಲಾರಿರಿ. ಇನ್ನು ಓದುಗರು ಹೊರುವರೇ?" ಎಂದು ತಮಾಷೆ ಮಾಡಿದರಂತೆ. ನಂತರ ಬರಹದ ಗಾತ್ರ, ಮುದ್ರಿತವಾದ ನಂತರ ಅದು ತಾಳಬಹುದಾದ ಗಾತ್ರ, ಇವೆಲ್ಲವನ್ನೂ ಚರ್ಚಿಸಿ, ಇಡೀ ಬರಹವನ್ನು ಈಗಿರುವ ಅರ್ಧದಷ್ಟು ಗಾತ್ರಕ್ಕೆ ಇಳಿಸುವ ತೀರ್ಮಾನಕ್ಕೆ ಬರುತ್ತಾರೆ.
ಗುರುವಿನ ಆದೇಶವನ್ನು ಮನಸ್ವೀ ಸ್ವೀಕರಿಸಿದ ಎಸ್.ವಿ.ಪಿ.ಯವರು ಆ ಕೆಲಸವನ್ನು ಪಟ್ಟು ಹಿಡಿದು ಸಾಧಿಸುತ್ತಾರೆ. ಎಲ್ಲವೂ ಅಂತಿಮವಾದಾಗ, ಮತ್ತೆ ಕುವೆಂಪು ಅವರಿಗೆ ಅದನ್ನು ತೋರಿಸುತ್ತಾರೆ. ಅದನ್ನು ಪರಿಶೀಲಿಸಿದ ಕುವೆಂಪು ಅವರು ಎಸ್.ವಿ.ಪಿ.ಯವರಿಗೆ ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ.
"ನೀವು ಆರಿಸಿಕೊಂಡಿರುವ ವಿಷಯಕ್ಕೆ ನಿಮಗಿಂತಲೂ ಉತ್ತಮತರ ಅಧಿಕಾರಿ ದೊರೆಯುವುದು ಕಷ್ಟ! ನನ್ನಂತೆಯೇ ನೀವೂ ಹುಟ್ಟಿ, ಬೆಳೆದು, ಬಾಲ್ಯದಲ್ಲಿ ಮಲೆಕಾಡುಗಳ ಸಾನ್ನಿಧ್ಗದ ದಿವ್ಯಸೌಂದರ್ಯದ ಪೀಯೂಷವನ್ನು ಆಸ್ವಾದಿಸಿದ್ದೀರಿ. ಭಾಷಾ ಪಾಂಡಿತ್ಯದಲ್ಲಿ ನನ್ನೆಲ್ಲ ವಾಚ್ಯ ಲಕ್ಷ್ಯ ವ್ಯಂಗ್ಯಗಳನ್ನು ತಲಸ್ಪರ್ಶಿಯಾಗಿ ಅರಿಯುವ ಸಾಮಾರ್ಥ್ಯವನ್ನು ಪಡೆದಿದ್ದೀರಿ. ನೀವು ಇದುವರೆಗೆ ಪ್ರಕಟಿಸಿರುವ ವಿಮರ್ಶೆ ಲೇಖನಗಳನ್ನು ನೋಡಿರುವ ನನಗೆ ನನ್ನ ಕೃತಿಗಳ ದರ್ಶನ ಧ್ವನಿಯನ್ನು ದರ್ಶನವನ್ನು ಗ್ರಹಿಸುವ ಗಗನ್ನೋನ್ನತಿ ಧೀಶಕ್ತಿಯ ಕೃಪೆಗೂ ನೀವು ಪಾತ್ರರಾಗಿದ್ದೀರಿ. ನೀವೇ ಬರೆದಿರುವಂತೆ 'ನನ್ನ ಸಾಹಿತ್ಯಜೀವನದ ಕಾರ್ಯಕಲಾಪಗಳಲ್ಲಿ ಈ ಗ್ರಂಥ ಕಟ್ಟಕಡೆಯದಾಗಿ ಮಕುಟಪ್ರಾಯವಾದದ್ದಾಗಿ ರಾರಾಜಿಸಬೇಕು ಎಂಬುದು ನನ್ನ ಅಪೇಕ್ಷೆ' ಎಂಬುದು ಖಂಡಿತವಾಗಿಯೂ ಸಫಲವಾಗುತ್ತದೆ ಎಂಬುದು ನನ್ನ ಆಶೆ ಮತ್ತು ಅನಿಸಿಕೆ.
ಆದರೆ ಒಂದು ಹೆದರಿಕೆ!
ಜನರು ನಿಮ್ಮ ಗ್ರಂಥವನ್ನೇ ಓದಿ ತೃಪ್ತರಾಗಿ ನನ್ನ ಕೃತಿಗಳನ್ನು ಎಲ್ಲಿ ಓದದೇ ಹಾಗುತ್ತಾರೋ ಎಂದು!
ಹಾಗಾದರೂ ಆಗಿಹೋಗಲಿ! ನಷ್ಟವೇನಿಲ್ಲ! ಭಟ್ಟ ಪರಮೇಶ್ವರನಿಗೆ ಜಯವಾಗಲಿ.
ನಮಸ್ಕಾರಗಳು
ಕುವೆಂಪು"
ರಸಋಷಿ ಕುವೆಂಪು ಕೃತಿ ಐದು ಸಂಪುಟಗಳಲ್ಲಿ ಪ್ರಕಟವಾಗಿದೆ. ಸುಮಾರು ಒಂದೂವರೆ ಸಾವಿರಪುಟಗಳಿವೆ, ಒಟ್ಟಿಗೆ.
"ಒಬ್ಬ ಸಾಹಿತಿಯ ಕುರಿತು ಅವರ ಸಮಗ್ರ ಕೃತಿಗಳನ್ನು ಅಧ್ಯಯನಕ್ಕೆ ಒಳಗು ಮಾಡಿ ಸುಮಾರು ಸಾವಿರದ ಐದುನೂರು ಪುಟಗಳಷ್ಟು ವಿಮರ್ಶಾತ್ಮಕ ಅಧ್ಯಯನದ ಬರಹವನ್ನು ಒಬ್ಬರೇ ಅಧ್ಯಯನಕಾರರು ಬರೆದು ಪ್ರಕಟಿಸಿದ್ದು, ನನ್ನ ಗಮನಕ್ಕೆ ಬಂದಂತೆ ಇದೇ ಮೊದಲನೆಯದಾಗಿದೆ. ಈ ಹೆಗ್ಗಳಿಕೆ ಶ್ರೀ ಕುವೆಂಪು ಅವರೊಂದಿಗೆ ಪ್ರೊ. ಎಸ್.ವಿ. ಪರಮೇಶ್ವರಭಟ್ಟ ಅವರಿಗೂ ಸಲ್ಲುತ್ತದೆ" ಎಂದು ಐದನೆಯ ಸಂಪುಟದ 'ಮೊದಲ ಮಾತು' ಬರೆದ ಪ್ರೊ. ಅರವಿಂದ ಮಾಲಗತ್ತಿಯವರು ಅಭಿಪ್ರಾಯಿಸಿದ್ದಾರೆ.
ಎಸ್.ವಿ.ಪಿ.ಯವರ ಆಸೆಯಂತೆಯೇ ಎಲ್ಲವೂ ನಡೆಯಿತು. ಆದರೆ ಐದನೆಯ ಸಂಪುಟ ಪ್ರಕಟವಾಗುವಷ್ಟರಲ್ಲಿ ಸ್ವತಃ ಎಸ್.ವಿ.ಪಿ.ಯವರೇ ನಮ್ಮನ್ನಗಲಿಬಿಟ್ಟಿದ್ದರು. ಒಟ್ಟಾರೆ ಗುರುವೂ ಧನ್ಯ; ಶಿಷ್ಯನೂ ಧನ್ಯ. ಜೊತೆಗೆ ಆ ಕೃತಿಯ ಫಲಾನುಭವಿಗಳಾದ ಸಹೃದಯ ಓದುಗರಾದ ನಾವೂ ಧನ್ಯ, ಧನ್ಯ! (ನನ್ನ "ಕುವೆಂಪು ಕಾವ್ಯಯಾನ" ಕೃತಿ ರಚನೆಗೆ ಈ ಸಂಪುಟಗಳು ಪ್ರೇರಕವೂ, ಅನುಕೂಲವೂ ಆಗಿವೆ)
ಎಸ್.ವಿ.ಪಿ.ಯವರ ಸಂಕ್ಷಿಪ್ತ ಪರಿಚಯ (ಕೃಪೆ: ರಸಋಷಿ ಕುವೆಂಪು ಪುಸ್ತಕದ ಹಿಂಬದಿಯ ಒಳಪುಟ)
ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ ಅವರು (8.2.1914 - 27.10.2000) ಶಿವಮೊಗ್ಗ ಜಿಲ್ಲೆಯ ಮಾಳೂರಿನಲ್ಲಿ ಜನಿಸಿದರು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ತೂದೂರು ಕಟ್ಟೆಯಲ್ಲಿಯೂ ಪ್ರೌಢಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿಯೂ ಮುಗಿಸಿದ ಭಟ್ಟರು ಮುಂದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಬಿ.ಎ. (ಆನರ್ಸ್) (1937_, ಕನ್ನಡ ಎಂ.ಎ. ಪದವಿ (1938) ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಶ್ರೀ ಭಟ್ಟರು 1968ರಲ್ಲಿ ಮಂಗಳಗಂಗೋತ್ರಿಯಲ್ಲಿ ಕನ್ನಡ ಪ್ರಾಧ್ಯಾಪಕರಾದರು. 1969ರಲ್ಲಿ ಮಂಗಳಗಂಗೋತ್ರಿ ನಿರ್ದೇಶಕರಾದರು.
ಪ್ರೊ. ಭಟ್ಟರಿಗೆ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಗಳ ಬಹುಮಾನಗಳು ಬರುವುದರ ಜೊತೆಗೆ, 'ಪೂರ್ಣಕುಂಭ' ಎಂಬ ಅಭಿನಂದನ ಗ್ರಂಥವೂ ಸಮರ್ಪಣೆಯಾಗಿದೆ. ಉಪ್ಪು ಕಡಲು, ಇಂದ್ರಚಾಪ. ತುಂಬೆ ಹೂವು, ಕನ್ನಡ ಕಾಳಿದಾಸ ಮಹಾಸಂಪುಟ (ಅನು), ಸೀಳುನೋಟ, ಅದ್ಭುತ ರಾಮಾಯಣ (ವ), ಮುದ್ದಣ ಕವಿಯ ಶ್ರೀರಾಮ ಪಟ್ಟಾಭಿಷೇಕ (ಸಂ) ಮೊದಲಾದ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
1 comment:
ಮನಮುಟ್ಟುವ ಲೇಖನ. :)
Post a Comment