ಅಡ್ಡ ಹೆಸರು ಎಂದರೇನು? ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿಯುವುದೇ ಜೀವನ ಎಂಬಂತೆ, ಇರುವ ಹೆಸರು ಬಿಟ್ಟು, ಬೇರೊಂದು
ಹೆಸರಿನಲ್ಲಿ ವ್ಯಕ್ತಿಯನ್ನು ಗುರುತಿಸಿದರೆ, ಆ ಹೆಸರನ್ನು ಅಡ್ಡ ಹೆಸರು ಎನ್ನುತ್ತಾರೆ.
ಮಾವಿನ ಮರಕ್ಕೆ ಹಬ್ಬಿದ ಬಂದಳಿಕೆ, ಮಾವಿನ ಮರವನ್ನೇ ಮರೆಸುವಂತೆ, ಈ ಅಡ್ಡ ಹೆಸರುಗಳು
ನಿಜ ಹೆಸರುಗಳನ್ನೇ ಮರೆಸಿಬಿಡುತ್ತವೆ. ಭಾರತಕ್ಕೆ ಇಂಡಿಯಾ ಅಡ್ಡ ಹೆಸರು ಎಂಬುದು ನನ್ನ
ಸ್ನೇಹಿತರೊಬ್ಬರ ವಾದ. ಮೊನ್ನೆ ನನ್ನ ಮಗಳ ತರಗತಿಯಲ್ಲಿ ಓದುತ್ತಿರುವ ಹುಡುಗನೊಬ್ಬನ
ಅಮ್ಮ ನನಗೆ ಫೊನ್ ಮಾಡಿ ‘ಸಾರ್ ಇಂಡಿಯಾ ಭಾರತ ಬೇರೆ ಬೇರೆಯೇ? ಅಥವಾ ಎರಡೂ ಒಂದೆಯೇ?
ಇಲ್ಲಿ ನನ್ನ ಮಗ ಅವೆರಡೂ ಬೇರೆ ಬೇರೆ ಎನ್ನುತ್ತಿದ್ದಾನೆ’ ಎಂದು ಕೇಳಿದ್ದರು. ಬಿಡಿ ಆ
ವಿಷಯ. ಒಟ್ಟಾರೆ ಪ್ರತಿಯೊಂದು ಅಡ್ಡ ಹೆಸರಿನ ಹಿಂದೆ ಒಂದು ಸೃಜನಶೀಲ ಮನಸ್ಸು ಕೆಲಸ
ಮಾಡಿರುತ್ತದೆ ಎಂದರೆ ನೀವು ನಂಬಲೇ ಬೇಕು. ಒಂದೊಂದು ಅಡ್ಡ ಹೆಸರಿನ ಹಿಂದೆಯೂ ಒಂದೊಂದು
ಕಥೆಯೂ ಇರುತ್ತದೆ. ಈ ಹೇಳಿಕೆಗೆ ಸಾಕ್ಷಿಯೇ ಕೆಳಗಿನ ಕಥೆಗಳು.
ನಮ್ಮ ಭಾವನವರ ಊರಿನಲ್ಲಿ ಒಬ್ಬನಿದ್ದ. ಅವನನ್ನು
ಬಾಲಕರಾದಿಯಾಗಿ ಎಲ್ಲರೂ ‘ನಾಯಿನೆಕ್ಕ’ ಎಂದೇ ಕರೆಯುತ್ತಿದ್ದರು. ಆ ಹೆಸರು ಕೇಳುವುದಕ್ಕೇ
ವಿಚಿತ್ರವೂ, ಅದಕ್ಕಿರುವ ಅರ್ಥಗಳನ್ನು ಯೋಚಿಸಿದಾಗ ಅಸಹ್ಯವೂ ಆಗುತ್ತಿತ್ತು. ಈತ
ನಾಯಿಯನ್ನು ನೆಕ್ಕಿದ್ದಿರಬಹುದು ಎಂದುಕೊಂಡಿದ್ದೆ ನಾನು. ನಾಯಿನೆಕ್ಕನ ನಿಜನಾಮವೇನೆಂದು
ತಿಳಿದುಕೊಳ್ಳುವ ಕುತೂಹಲದಿಂದ ಒಂದೆರಡು ಹುಡುಗರನ್ನು ಕೇಳಿದೆ. ಅವರು ನಾಯಿನೆಕ್ಕ
ಎಂಬುದೇ ಆತನ ಹೆಸರು ಎಂದುಬಿಟ್ಟರು. ಇರಲಾರದು ಅನ್ನಿಸಿ, ಆತನನ್ನೇ ಒಂದು ದಿನ ನಾನು
ಕೇಳಿದೆ. ನಾನು ಕೇಳಿದ ಸಮಯ ಸರಿಯಿರಲಿಲ್ಲವೇನೊ, ಆತ ಸ್ವಲ್ಪ ಕುಡಿದಿದ್ದನೋ ಏನೊ, ‘ನನ್ನ
ಹೆಸರು ನಾಯಿನೆಕ್ಕ. ಎಲ್ಲರೂ ಹಾಗೇ ಕರೆಯುತ್ತಾರೆ. ನೀನೂ ಹಾಗೇ ಕರಿ’ ಎಂದ. ಅಷ್ಟಕ್ಕೆ
ಬಿಡದೆ, ಅಲ್ಲಿ ನನಗೆ ಪರಿಚಿತರಾಗಿದ್ದ ಒಬ್ಬ ಹಿರಿಯರನ್ನು ಕೇಳಿದೆ. ಅವರು ‘ಅಯ್ಯೋ
ಅದೊಂದು ಕಥೆ’ ಎಂದರು. ನನಗೆ ಬೇಕಾಗಿದ್ದುದು ಅದೇ ಕಥೆ ತಾನೇ!
ಈ ನಾಯಿನೆಕ್ಕನಿಗೆ ಮನೆಯವರು ಇಟ್ಟ ಹೆಸರು
ಸಣ್ತಮ್ಮನೊ ಸಣ್ದಿಮ್ಮನೊ ಇರಬೇಕು. ಈಗ ಅದೂ ಮರೆತು ಹೋಗಿದೆ. ಈತ, ಬಹಳ ಹಿಂದೆ
ಸಂತೆಯಲ್ಲಿ ರಾಗಿ ವ್ಯಾಪಾರ ಮಾಡುವ ಸಾಬರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಸಂತೆ
ವಾರಕ್ಕೊಂದು ದಿನ ಪ್ರತಿ ಗುರುವಾರ ನಡೆಯುತ್ತಿತ್ತು. ಗುರುವಾರದ ದಿನ ಆತನಿಗೆ ಕೈತುಂಬಾ
ಸಂಪಾದನೆ. ಸಾಬರು ಕೊಡುತ್ತಿದ್ದ ಕೂಲಿಯಲ್ಲದೆ, ಆತ ತೂಕಕ್ಕೆ ಹೊರುತ್ತಿದ್ದ ಪ್ರತೀ
ಚೀಲದಿಂದ ಒಂದೊಂದು ಬೊಗಸೆ ರಾಗಿ ಸಂಗ್ರಹಿಸುತ್ತಿದ್ದ. ಪಾಪ ರೈತರು ‘ಅಯ್ಯೊ ಒಂದು
ಬೊಗಸೆಯಲ್ಲವಾ’ ಎಂದು ಸುಮ್ಮನಾಗುತ್ತಿದ್ದರು. ಸಂಜೆಯ ಹೊತ್ತಿಗೆ ಅದೇ ಸುಮಾರು ಅರ್ಧ
ಚೀಲದಷ್ಟು ರಾಗಿಯಾಗುತ್ತಿತ್ತು. ಅದನ್ನೂ ಆ ಸಾಬರಿಗೇ ಮಾರಿ, ಬಂದ ಹಣದಲ್ಲಿ ಮನೆಗೆ
ವಾರಕ್ಕಾಗವಷ್ಟು ಸಾಮಾನು ಕೊಂಡು, ಹೆಂಡತಿಯ ಜೊತೆಯಲ್ಲಿ ಕಳುಹಿಸಿ, ಉಳಿದ ದುಡ್ಡಿನಲ್ಲಿ
ಚೆನ್ನಾಗಿ ಕುಡಿದು ತೂರಾಡುತ್ತಾ ತಡರಾತ್ರಿ ಮನೆಗೆ ಬರುವ ಅಭ್ಯಾಸ ಈತನದು. ಒಂದು ದಿನ
ಅದೇ ರೀತಿ, ಕುಡಿದು ಬರುವಾಗ, ಹೆಚ್ಚು ಕುಡಿದಿದ್ದರಿಂದಲೂ ಅಥವಾ ಕಳ್ಳಭಟ್ಟಿ
ಸೇರಿದ್ದರಿಂದಲೊ ರಸ್ತೆ ಬದಿಯಲ್ಲಿ ಬಿದ್ದುಬಿಟ್ಟಿದ್ದ. ಸಿಕ್ಕಾಪಟ್ಟೆ ವಾಂತಿಯನ್ನೂ
ಮಾಡಿಕೊಂಡಿದ್ದ.
ದಾರಿಯಲ್ಲಿ ಹೋಗುವವರೆಲ್ಲಾ ಆ ದುರ್ವಾಸನೆಗೆ
ಮೂಗು ಮುಚ್ಚಿ ಓಡಾಡುತ್ತಿದ್ದರೆ, ಒಂದು ನಾಯಿ ಮಾತ್ರ, ಸಂತೋಷದಿಂದಲೇ ವಾಂತಿಯನ್ನು
ನೆಕ್ಕುತ್ತಿತ್ತು. ಅದು ಹಾಗೇ ನೆಕ್ಕುತ್ತಾ ನೆಕ್ಕುತ್ತಾ ಆತನ ಮುಖ ಮೂತಿಯೆಲ್ಲವನ್ನೂ
ನೆಕ್ಕಿ ಸ್ವಚ್ಛಗೊಳಿಸುವ ಕೆಲಸವನ್ನೂ ನಿರ್ವಂಚನೆಯಿಂದ ಮಾಡಿತು. ಅದನ್ನು
ಗಮನಿಸಿದವರೆಲ್ಲಾ ಅಸಹ್ಯಸಿಕೊಂಡರೇ ಹೊರತು ಇನ್ನೇನನ್ನೂ ಮಾಡಲಿಲ್ಲ. ಇದಾದ ಕೆಲವು ದಿನಗಳ
ನಂತರ ಆತನಿಗೂ ಇನ್ನೊಬ್ಬನಿಗೂ ಮಾರಾಮಾರಿ ಜಗಳ. ಇಬ್ಬರೂ ಕೈಕೈ ಮಿಲಾಯಿಸಿ
ಹೊಡೆದಾಡದಿದ್ದರೂ ಅಪಾದಸೊಂಟದ ತನಕ ಬಯ್ಗುಳಗಳನ್ನು ಪ್ರಯೋಗಿಸಿ ಸುಮಾರು ಹೊತ್ತು
ಜಗಳವಾಡಿದರು. ಹಳ್ಳಿಯ ಕಡೆ ಕೈ ಕೈ ಮಿಲಾಯಿಸಿ ಜಗಳವಾಡುವವರೆಗೆ ಯಾರೂ ಜಗಳ ಬಿಡಿಸುವ
ಕೆಲಸಕ್ಕೆ ಹೋಗುವುದಿಲ್ಲ. ಬಿಟ್ಟಿ ಮನರಂಜನೆಯನ್ನು ಯಾರು ಕಳೆದುಕೊಳ್ಳುತ್ತಾರೆ ಹೇಳಿ?
ಇಬ್ಬರಿಗೂ ತಮ್ಮಲ್ಲಿದ್ದ ಬಯ್ಗುಳಗಳ ಸ್ಟಾಕು ಖಾಲಿಯಾದ, ಕಾರಣ ಹೊಸ ಹೊಸ ಬಯ್ಗಳಗಳ
ಅನ್ವೇಷಣೆಯಲ್ಲಿ ಅವರ ಮನಸ್ಸು ತೊಡಗಿಬಿಟ್ಟಿತ್ತು. ಅಂತಹ ಸಂದರ್ಭದಲ್ಲಿಯೇ ಆ ಎದುರಾಳಿ,
ಮುಖವನ್ನು ನಾಯಿ ನೆಕ್ಕುತ್ತಿದ್ದ ಸಂದರ್ಭವನ್ನು ಪ್ರಸ್ತಾಪಿಸಿ ‘ನಾಯಿನೆಕ್ಕ’ ಎಂದು
ಬಯ್ದುಬಿಟ್ಟ. ಆ ಮಾತು ಸುಮಾರು ನಲವತ್ತು ವರ್ಷಗಳಾದರೂ ಇನ್ನೂ ನಿಂತಿದೆ ಎಂದರೆ, ಜನಪದ
ಸೃಜನಶೀಲತೆಯ ಘಟ್ಟಿತನವಲ್ಲದೆ ಇನ್ನೇನು?
ಇನ್ನೊಂದು ಅಡ್ಡ ಹೆಸರಿನ ಕಥೆ, ಆ ಅಡ್ಡ ಹೆಸರೇ
ಮನೆತನದ ಹೆಸರೂ ಆಗುವಂತದ್ದು. ನಾವು ಮಿಡಲ್ ಸ್ಕೂಲಿಗೆ ಹೋಗುತ್ತಿದ್ದ ಊರಿನಲ್ಲಿ ಒಬ್ಬ
ಹುಡಗನಿದ್ದ. ಮೇಷ್ಟ್ರು ಅಟೆಂಡೆನ್ಸ್ ಕರೆಯುವಾಗ ‘ರಮೇಶ’ ಎಂದು ಆತನನ್ನು
ಕೂಗುತ್ತಿದ್ದರು. ಆದರೆ ಬೇರೆ ಸಮಯದಲ್ಲಿ ಅವರನ್ನೂ ಸೇರಿಸಿದಂತೆ ಉಳಿದವರೆಲ್ಲಾ
‘ಹಂದಿವಡೆ’ ಎಂದು ಕರೆಯುತ್ತಿದ್ದರು! ಆ ಹುಡುಗನ ಅಪ್ಪ, ಅಜ್ಜರಿಗೂ ಹಂದಿವಡೆ ಎಂಬ ಹೆಸರೇ
ಇದ್ದವು! ಊರೊಳಗೆ ಜನ ಆ ಹುಡುಗನ ಮನೆಯವರನ್ನು ‘ಹಂದಿವಡೆ’ ಮನೆಯವರು ಎಂದೇ
ಕರೆಯುತ್ತಿದ್ದರು. ಇದೇನು ಹಂದಿವಡೆ ಎಂದು ನನಗೆ ಕುತೂಹಲ. ಬಹಳ ದಿನಗಳ ನಂತರ ನನಗೆ
ತಿಳಿದ ಕಥೆಯಿದು. ಆ ಊರಿನವರೆಲ್ಲಾ ಮಾಂಸಾಹಾರಿಗಳಾದರೂ ಅದು ನಿತ್ಯದ ಆಹಾರವಾಗಿರಲಿಲ್ಲ.
ಅದು ಕೇವಲ ಹಬ್ಬ ಹುಣ್ಣಿಮೆಗಳಿಗೆ, ಮನೆಗೆ ಯಾರಾದರೂ ನೆಂಟರು ಬಂದಾಗ ಮಾತ್ರ
ನಡೆಯುತ್ತಿತ್ತು. ಹೀಗೆ ಊರಿನಲ್ಲಿ ಕುರಿ, ಹೋತ, ಹಂದಿಗಳನ್ನು ಕತ್ತರಿಸಿದಾಗ
ಸೇರುಗಟ್ಟಲೆ ಮಾಂಸ ಕೊಂಡು ವಾರಪೂರ್ತಿ ಉಳಿಕೆ ಮಾಡಿಕೊಂಡು ತಿನ್ನುವ ಅಭ್ಯಾಸ
ಕೆಲವರಿಗಿತ್ತು. ಈ ರಮೇಶನ ಮನೆಯವರಿಗೆ ಹಂದಿಮಾಂಸವೆಂದರೆ ತುಂಬಾ ಇಷ್ಟ. ಊರಿನಲ್ಲಿ ಹಂದಿ
ಕಡಿದರೆಂದರೆ ಐದಾರು ಸೇರು ಮಾಂಸ ಅವರಿಗೇ ಬೇಕಿತ್ತು. ಇಲ್ಲ ಒಬ್ಬರಿಗೆ ಇಂತಿಷ್ಟೇ
ಕೊಡುವುದು ಎಂದು ಮೊದಲೇ ನಿರ್ಧಾರವಾಗಿದ್ದರೆ, ಸೂತಕದ ಕಾರಣದಿಂದಲೊ, ದೇವರಪೂಜೆ ಹರಕೆ
ಮತ್ತಾವ ಕಾರಣದಿಂದಲೊ ಆ ಬಾರಿ ಮಾಂಸ ಬೇಡ ಎಂದು ಹೇಳಬಹುದಾದ ಮನೆಗಳನ್ನು ಪತ್ತೆ ಹಚ್ಚಿ
ಅವರ ಮನೆಯವರ ಮಾಂಸವನ್ನೂ ರಮೇಶನ ಮನೆಯವರೇ ಕೊಂಡುಕೊಳ್ಳುತ್ತಿದ್ದರಂತೆ.
ಇವರೇಕೆ ಇಷ್ಟೊಂದು ಹಂದಿ ಮಾಂಸ ಕೊಂಡು
ಕೊಳ್ಳುತ್ತಾರೆ ಎಂದು ಹುಡುಕಿ ಹೊರಟವರು ಕಂಡಿದ್ದು, ಅವರ ಮನೆಯವರು, ಮಾಂಸದ ಅಡುಗೆ
ಮಾಡುವಾಗ ಸಂಗ್ರಹಿಸುತ್ತಿದ್ದ ಮಡಕೆಗಟ್ಟಲೆ ಜಿಡ್ಡು. ಹಂದಿ ಮಾಂಸದ ಜಿಡ್ಡನ್ನು ಸ್ವಲ್ಪ
ಪ್ರಮಾಣದಲ್ಲಿ ಸಂಗ್ರಹಿಸಿ ಔಷಧಿಗೆಂದು ಬಳಸುವುದು ಎಲ್ಲರಿಗೂ ಗೊತ್ತಿತ್ತು. ಎತ್ತುಗಳ
ಹೆಗಲು ನೋವಿಗೆ ಅದು ರಾಮಭಾಣ ಎಂದು ರೈತರಿಗೆಲ್ಲಾ ಗೊತ್ತಿದ್ದ ವಿಷಯವೆ. ಆದರೆ ಅದನ್ನು
ಮಡಕೆಗಟ್ಟಲೆ ಏಕೆ ಸಂಗ್ರಹಿಸುತ್ತಾರೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿತ್ತು. ಕೆಲವು
ವರ್ಷಗಳ ನಂತರವೇ ಗೊತ್ತಾಗಿದ್ದು, ಹಾಗೆ ಸಂಗ್ರಹಿಸಿದ್ದ ಜಿಡ್ಡನ್ನು ‘ವಡೆ’ ಬೇಯಿಸಲು
ಬಳಸುತ್ತಾರೆ ಎಂದು! (ರಾಮನಗರದ ಒಂದು ಕಡೆ, ಸಂಜೆಯ ವೇಳೆ ವಡೆ ಮಾಡುತ್ತಾರೆ. ಹೋದಾಗ
ಮರೆಯದೆ ತಿಂದು ಬನ್ನಿ ಎಂದು ಸ್ನೇಹಿರೊಬ್ಬರು ಹೇಳಿದ್ದರು. ನಾನು ಒಮ್ಮೆ ತಿಂದು ಬಹಳ
ರುಚಿಯಾಗಿದ್ದುದರಿಂದ ಒಂದಷ್ಟನ್ನು ಪಾರ್ಸೆಲ್ ಮಾಡಿಸಿಕೊಂಡು ತಂದಿದ್ದೆ. ಅಷ್ಟೊಂದು
ರುಚಿಗೆ ಕಾರಣ ಏನೆಂದು ಸ್ನೇಹಿತರಲ್ಲಿ ವಿಚಾರಿಸಿದಾಗ ತಿಳಿದಿದ್ದು, ವಡೆಗೆ ಒಣ
ಸೀಗಡಿಯನ್ನು ಹುರಿದು ಪುಡಿ ಮಾಡಿ ಬಳಸುತ್ತಾರೆ ಎಂಬ ವಿಷಯ! ಅದ್ಭುತ ಸಂಶೋಧನೆ
ಅಲ್ಲವೆ?) ಹಂದಿಯ ಕೊಬ್ಬಿನಿಂದ ವಡೆ ಬೇಯಿಸುವ ಸಂಶೋಧನೆ ಮಾಡಿದ ಆ ಮನೆತನಕ್ಕೆ, ಪಾಪ
ಸಲ್ಲಬೇಕಾದ ಗೌರವ ಸಲ್ಲದೆ, ಸಿಕ್ಕಿದ್ದು ‘ಹಂದಿವಡೆ’ ಎಂಬ ಅಡ್ಡ ಹೆಸರು. ಅನ್ಯಾಯವಲ್ಲವೆ
ಅದು?
ಇನ್ನೊಂದು ಕಥೆ ಕೇಳಿ ಇಲ್ಲ. ನಮ್ಮ ಊರಿನಲ್ಲೇ
ಒಂದು ಕುಟುಂಬಕ್ಕೆ ‘ಎಪ್ಪತ್ತೈದು ಇಲಿ’ ಎಂಬ ಅಡ್ಡ ಹೆಸರಿತ್ತು. ಸ್ಕೂಲ್ ಮಕ್ಕಳು
ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿ ‘ಸೆವೆಂಟಿಫೈವ್ ರ್ಯಾಟ್ಸ್’ ಎಂದೂ ಕರೆಯುತ್ತಿದ್ದರು.
ಅವರ ಮನೆಯವರೆಲ್ಲರೂ ದೃಢ ಮೈಕಟ್ಟಿನವರು. ಕೆಲಸ ಮಾಡುವುದರಲ್ಲಿ ತಿನ್ನುವುದರಲ್ಲಿ
ಎಲ್ಲದರಲ್ಲೂ ಮುಂದು. ಮೂವರು ಮಾಡುವ ಕೆಲಸವನ್ನು ಒಬ್ಬೊಬ್ಬರೇ ಮಾಡುತ್ತಿದ್ದರು. ಒಬ್ಬ
ಒಂದು ಗಾಡಿ ಮಣ್ಣು ತುಂಬಲು ಅರ್ಧ ಗಂಟೆ ತೆಗೆದುಕೊಂಡರೆ, ಆ ಮನೆಯವನೊಬ್ಬ ಹತ್ತೇ
ನಿಮಿಷದಲ್ಲಿ ತುಂಬಿಬಿಡುತ್ತಿದ್ದ. ಒಮ್ಮೆ, ಸೂರ್ಯ ಗ್ರಹಣವಿದ್ದ ದಿನ, ನಮ್ಮ ತೋಟದಲ್ಲಿ
ಕೆಲಸ ನಡೆಯುತ್ತಿದ್ದರೆ, ಅವರ ಮನೆಯಲ್ಲಿ ಎಲ್ಲರೂ, ಮಕ್ಕಳು ಮರಿ, ದನಕರು, ಕುರಿಕೋಳಿ
ಎಲ್ಲವೂ ಮನೆಯೊಳಗೆ ಸೇರಿಬಿಟ್ಟಿದ್ದರು. ಊಟ ತಿಂಡಿ ಏನೂ ಇಲ್ಲ. ಬೆಳಗಿನಿಂದ ಏನೂ
ತಿಂದಿಲ್ಲ ಕುಡಿದೂ ಇಲ್ಲ. ಗ್ರಹಣ ಮುಗಿದ ಮೇಲೆ, ಕೆಲಸದ ನಿಮಿತ್ತ ಅವರ ಮನೆಗೆ
ಹೋಗಿದ್ದೆ. ಮಕ್ಕಳು ಮರಿ ಎಲ್ಲಾ ಸೇರಿ ಏಳೆಂಟು ಜನರಿದ್ದ ಮನೆಯಲ್ಲಿ, ಬೆಳಗಿನಿಂದ ಉಪವಾಸ
ಇದ್ದುದರಿಂದ ತಕ್ಷಣ ತಿನ್ನುವುದಕ್ಕೆ ಉಪ್ಪಿಟ್ಟು ಮಾಡುವ ಕೆಲಸ ನಡೆಯುತ್ತಿತ್ತು.
ಅದಕ್ಕೆ ಅವರು ಹುರಿದು ಸಿದ್ಧಪಡಿಸಿಟ್ಟುಕೊಂಡಿದ್ದ ರೆವೆ ಎಷ್ಟು ಗೊತ್ತೆ? ಕೇವಲ ಎರಡು
ಕೇಜಿ! ತುರಿದಿಟ್ಟುಕೊಂಡಿದ್ದ ತೆಂಗಿನಕಾಯಿ ಕೇವಲ ನಾಲ್ಕು!
ಇನ್ನೊಮ್ಮೆ ನಮ್ಮೆರಡು ಮನೆಯವರು ಆಲೋಗೆಡ್ಡೆ
ಬೆಳೆದಿದ್ದೆವು. ಅದನ್ನು ಮಾರಲು ಬೆಂಗಳೂರಿನ ಮಾರುಕಟ್ಟೆಗೆ ತರಬೇಕಾಗಿತ್ತು. ನಾನಾಗಲೇ
ಬೆಂಗಳೂರಿಗೆ ಒಂದೆರಡು ಭಾರಿ ಬಂದಿದ್ದೆನಾದ್ದರಿಂದ ನನ್ನೊಂದಿಗೆ ಆ ಮನೆಯ ಅಣ್ಣತಮ್ಮ
ಇಬ್ಬರು, ಮೊದಲ ಬಾರಿಗೆ ಬೆಂಗಳೂರಿಗೆ ಬಂದರು. ಆಲೋಗೆಡ್ಡೆ ಎಲ್ಲಾ ಹರಾಜಾಗಿ, ಮಾರಾಟವಾಗಿ
ಕೈಗೆ ದುಡ್ಡು ಬರುವಷ್ಟರಲ್ಲಿ ಮಧ್ಯಾಹ್ನ ಎರಡು ಗಂಟೆ. ಯಶವಂತಪುರ ಮಾರುಕಟ್ಟೆಯಿಂದ
ಮೆಜೆಸ್ಟಿಕ್ಕಿಗೆ ಬಂದು ಹೋಟೆಲಿನಲ್ಲಿ ಕುಳಿತುಕೊಳ್ಳುವುದರಲ್ಲಿ ಮೂರು ಗಂಟೆ. ಮೂವರಿಗೂ
ಹೊಟ್ಟೆ ಹಸಿದು ತಾಳ ಹಾಕುತ್ತಿತ್ತು. ಮೂರು ಟೋಕನ್ ಕೊಂಡು, ಟೇಬಲ್ಲಿನಲ್ಲಿ
ಕುಳಿತಿದ್ದೆವು. ಸರ್ವರ್ ಊಟದ ತಟ್ಟೆ ಹಿಡಿದು ನಮಗೆ ಹತ್ತಿರವಾದಂತೆ, ತಮ್ಮನ ಮುಖ
ಕಳೆಗುಂದತೊಡಗಿತು. ನಾನು ಗಮನಿಸುತ್ತಲೇ ಇದ್ದೆ. ತಟ್ಟೆ ಟೇಬಲ್ಲಿನ ಮೇಲೆ ಇಟ್ಟ ತಕ್ಷಣ
ಒಂದೇ ದೃಷ್ಟಿಯಲ್ಲಿ ಇಡೀ ತಟ್ಟೆಯನ್ನು ಅವಲೋಕಿಸಿ, ‘ನನಗೆ ಇನ್ನೊಂದು ಊಟ ಆರ್ಡರ್
ಮಾಡಿಬಿಡಪ್ಪ’ ಎಂದು ತಮ್ಮ ನನಗೆ ಆರ್ಡರ್ ಮಾಡಿಬಿಟ್ಟ!
ಕ್ಷಮೆಯಿರಲಿ ಮಹಾಶಯರೆ. ಅಡ್ಡ ಹೆಸರಿನ ಕಥೆಯನ್ನು
ಉದ್ದಕ್ಕೆ ಬಳೆಸಿದ್ದಕ್ಕೆ, ಕಥೆ ಉದ್ದ ಹಾದಿ ಹಿಡಿದಿದ್ದಕ್ಕೆ. ರಾಗಿ ಹೊಲದಲ್ಲಿ,
ಮೆದೆಯ ಕೆಳಗೆ ಹಿಡಿದು, ಯಾವುದೋ ಹಳ್ಳಿಯ ಮನೆಯೊಂದರ ಅಡುಗೆ ಮನೆಯ ಒಲೆಯ ಮೇಲೆ ಸಾರಾಗಿ
ಹೋಗಿದ್ದ ಎಪ್ಪತ್ತೈದು ಇಲಿಯ ಕಥೆ ದಾರಿತಪ್ಪಿ ಬೆಂಗಳೂರಿನ ಮೆಜೆಸ್ಟಿಕ್ಕಿನ ಹೋಟೆಲ್ಲಿನ
ಟೇಬಲ್ಲಿಗೆ ಬಂದಿದ್ದಕ್ಕೆ. ನಮ್ಮ ಹಳ್ಳಿಗಳ ಕಡೆ, ಸುಗ್ಗಿಯ ಸಮಯದಲ್ಲಿ, ರಾಗಿಯ ಪೈರನ್ನು
ಕತ್ತರಿಸಿ, ಕಂತೆಗಳನ್ನಾಗಿ ಕಟ್ಟಿ ಅದು ಚೆನ್ನಾಗಿ ಒಣಗಲೆಂದು ಸಣ್ಣ ಸಣ್ಣ ಮೆದೆಗಳ
ಅಥವಾ ಗುಪ್ಪೆಗಳ ರೂಪದಲ್ಲಿ ಹೊಲಗಳಲ್ಲಿ ನೆಲದ ಮೇಲೆಯೇ ಒಟ್ಟಿರುತ್ತಾರೆ. ಅವನ್ನು ಒಂದು
ದಿನ ಸಾಗಿಸಿ, ಕಣದಲ್ಲಿ, ಅಟ್ಟಣಿಗೆ ಮಾಡಿ, ಅದರ ಮೇಲೆ ದೊಡ್ಡ ಮೆದೆಯ ರೂಪದಲ್ಲಿ
ಒಟ್ಟುತ್ತಾರೆ. ಹೊಲದ ಮೆದೆಗಳಿಗೆ ತೋಡ (ಬೆಳ್ಳಿಲಿ ಎನ್ನುತ್ತಾರೆ. ಬಿಳಿಯ+ಇಲಿ)
ಬಿದ್ದಿರುತ್ತವೆ. ಅಂದರೆ, ನೆಲದಲ್ಲಿಯೇ ಸುರಂಗ ತೋಡಿ, ರಾಗಿ ತೆನೆಗಳನ್ನು ಸಾಗಿಸಿ
ಸಂಗ್ರಹಿಸಿಟ್ಟುಕೊಂಡಿರುತ್ತವೆ. ಭತ್ತದ ಗದ್ದೆಗಳಲ್ಲೂ ಹೀಗೆ ಮಾಡುತ್ತವೆ. ಹಿಂದೊಮ್ಮೆ
ತೀರಾ ಬರಗಾಲ ಬಂದಾಗ, ಬಿತ್ತನೆಗೂ ಸಹ ರಾಗಿಯಿಲ್ಲದೆ, ಜನ ಇಂತಹ ಇಲಿ ಬಿಲಗಳನ್ನು ಅಗೆದು
ಬೀಜಕ್ಕೆ ರಾಗಿ ಸಂಗ್ರಹಿಸಿದ್ದರೆಂದು ನನ್ನ ಅಜ್ಜಿ ಹೇಳುತ್ತಿದ್ದರು. ತೋಡಗಳನ್ನು
ಹಿಡಿಯುವುದು ಸುಲಭ. ಹೊರಹೋಗುವ ಬಿಲದ ದಾರಿಗಳನ್ನು ಮುಚ್ಚಿ ಎರಡನ್ನು ಮಾತ್ರ
ಉಳಿಸಿಕೊಳ್ಳುತ್ತಾರೆ. ಒಂದರಲ್ಲಿ ಹೊಗೆ ಹಾಕಿದರೆ, ಇನ್ನೊಂದರಲ್ಲಿ ಇಲಿಗಳು
ಹೊರಬರುತ್ತವೆ. ಅವನ್ನು ಹಿಡಿದು, ಅವುಗಳ ಬಾಲವನ್ನು ಬಲವಾಗಿ ಜಗ್ಗಿದರೆ ಸಾಕು ಸತ್ತೇ
ಹೋಗುತ್ತವೆ! ಕೆಲವರು ಬಿಲಕ್ಕೆ ನೀರು ತುಂಬಿಸುತ್ತಾರೆ. ಹೊಲದ ಕೊಯ್ಲಿನ ಸಮಯದಲ್ಲಿ
ಅಲೆಮಾರಿಗಳಾದ ಹಕ್ಕಿಪಿಕ್ಕಿಗಳು ಇಲಿಗಳನ್ನು ಹಿಡಿಯುವುದನ್ನೇ ಕಾಯಕ
ಮಾಡಿಕೊಂಡಿರುತ್ತಾರೆ.
ಅದೇನೆ ಇರಲಿ. ಕೆಲವರು ಈ ಬೆಳ್ಳಿಲಿಗಳನ್ನು
ಬೇಟೆಯಾಡಿ, ಸ್ವಚ್ಛಗೊಳಿಸಿ, ಅದರ ಒಡಲನ್ನೆಲ್ಲಾ ಖಾಲಿ ಮಾಡಿ, ಒಳಗೆ ಮಸಾಲೆ ತುಂಬಿ,
ಬೆಂಕಿಯಲ್ಲಿ ಸುಟ್ಟು, ಮೇಲೆ ಮತ್ತೆ ಮಸಾಲೆ ಸವರಿ, ಮತ್ತೆ ಸುಟ್ಟು (ಬಾರ್ಬೇಕ್ಯು!)
ತಿನ್ನುತ್ತಾರೆ. ಅದರ ಮಾಂಸ ಅತ್ಯಂತ ರುಚ್ಚಿಯದ್ದಾಗಿರುತ್ತದೆ. ನಮ್ಮ ಮನೆಯಲ್ಲಿದ್ದ
ಕೃಷ್ಣಣ್ಣ ಎಂಬುವವನ ಸಹವಾಸದಿಂದ, ಕುತೂಹಲಕ್ಕಾಗಿ ನಾನು ತಿಂದಿರುವೆನಾದ್ದರಿಂದ
ಅಧಿಕೃತವಾಗಿ ಈ ಮಾತು ಹೇಳುತ್ತಿದ್ದೇನೆ. ಅದರಷ್ಟು ರುಚಿಕಟ್ಟಾದ ಯಾವುದೇ ಖಾದ್ಯವನ್ನೂ
ಮನೆಯಲ್ಲಾಗಲೀ, ಹೋಟೆಲ್ಲಿನಾಗಲೀ (ಮಾಂಸಾಹಾರ ಮತ್ತು ಸಸ್ಯಹಾರ ಯಾವುದರಲ್ಲೂ) ನಾನು
ಇದುವರೆಗೆ ತಿಂದಿಲ್ಲ! ಮೊನ್ನೆ ಮೊನ್ನೆ ಟಿ.ಎಲ್.ಸಿ. ವಾಹಿನಿಯಲ್ಲಿ ಇಲಿ ಬೇಟೆಯಾಡಿ ಈ
ರೀತಿ ಸುಟ್ಟು ತಿನ್ನುವುದನ್ನು ನೋಡಿದ ಮೇಲೆ ನನಗೆ, ಸತ್ತು ಸ್ವರ್ಗದಲ್ಲಿರುವ
ಬಾರ್ಬೇಕ್ಯು ಎಕ್ಸ್ಪರ್ಟ್ ಕೃಷ್ಣಣ್ಣನ ನೆನಪು ಕಾಡುತ್ತಿದೆ; ಬಾಯಿಯಲ್ಲಿ
ನೀರೂರುತ್ತಿದೆ. (ಈ ಕೃಷ್ಣಣ್ಣನ ಬಗ್ಗೆ ‘ಕೃಷ್ಣಾವತಾರ’ ಎಂಬ ಕಥೆಯನ್ನೇ ಬರೆದಿದ್ದೇನೆ.
ಅವನಿಗಿದ್ದ ಅಡ್ಡ ಹೆಸರುಗಳದೇ ಒಂದು ಪಟ್ಟಿಯಿದೆ. ಅದೆಲ್ಲವೂ ಆ ಕಥೆಯಲ್ಲಿಯೇ
ಬಂದಿರುವುದರಿಂದ, ಹಾಗೂ ‘ತುರಿಸುವಾನಂದ’ ಎಂಬ ಪ್ರಬಂಧದಲ್ಲಿಯೂ ಬಂದಿರುವುದರಿಂದ ಇಲ್ಲಿ
ಬೇಡ)
ಇಂತಿಪ್ಪ ಒಂದು ಸಂದರ್ಭದಲ್ಲಿ, ಮೇಲೆ ಹೇಳಿದ
ಮನೆತನದ ಹಿರಿಯರು ಯಾರೊ ಒಮ್ಮೆ ಎಪ್ಪತ್ತೈದು ಇಲಿಗಳನ್ನು ಹಿಡಿದರಂತೆ. ಅಷ್ಟೂ
ಇಲಿಗಳನ್ನು ಏನು ಮಾಡುವುದು? ಬೇರೆಯವರಿಗೆ ಕೊಡಲು ಮನಸ್ಸಿಲ್ಲ! ಸುಟ್ಟು ತಿಂದರೆ ಒಂದೇ
ರುಚಿ. ಅದಕ್ಕೆ ಒಂದಷ್ಟು ಇಲಿಗಳ ಮಾಂಸವನ್ನು ಸೇರಿಸಿ ಸಾರನ್ನೂ ಮಾಡಿ ವಾರಗಟ್ಟಲೆ
ಇಟ್ಟುಕೊಂಡು ಸವಿದಿದ್ದರಂತೆ. ಬೆಳ್ಳಿಲಿಗಳನ್ನು ಸುಟ್ಟು ತಿನ್ನುವುದು ಸಾಮಾನ್ಯ
ಸಂಗತಿಯಾದರೂ ಅದರಿಂದ ಸಾರು ಮಾಡುವ ಸಂಶೋಧನೆ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದು ಆ
ಕುಟುಂಬದವರು ಮಾತ್ರ. ಅದಕ್ಕೆ ಖುಷಿ ಪಡುವ ಬದಲು ಅವರ ಮನೆಯವರಿಗೇ ಎಪ್ಪತ್ತೈದು ಇಲಿ
ಎಂದು ಅಡ್ಡ ಹೆಸರು ಇಡುವುದು ಎಷ್ಟು ಸರಿ? ನನಗನ್ನಿಸುತ್ತದೆ, ಎಪ್ಪತ್ತೈದು ಇಲಿ ಎಂಬ
ಅಡ್ಡ ಹೆಸರಿನ ಕಿಡಿಗೇಡಿ ಕರ್ತೃ, ನನಗೂ ಒಂದೆರಡನ್ನಾದರೂ ಕೊಡದೆ, ಎಪ್ಪತ್ತೈದನ್ನೂ ಆ
ಮನೆಯವರೇ ತಿಂದರಲ್ಲ ಎಂಬ ಹೊಟ್ಟೆಕಿಚ್ಚಿಗೆ ಆ ಅಡ್ಡ ಹೆಸರನ್ನು ಇಟ್ಟಿರಬೇಕು ಎಂದು.
ಹೀಗೆ ಇತಿಹಾಸದಲ್ಲಿ ಹುದುಗಿ ಹೋಗಬಹುದಾಗಿದ್ದ ಘಟನೆಗಳನ್ನು ಕೇವಲ ಒಂದೊ ಎರಡೊ ಪದಗಳ
ಅಡ್ಡ ಹೆಸರುಗಳ ರೂಪದಲ್ಲಿ ಹಿಡಿದಿಟ್ಟಿರುವ ಜನಪದ ಪ್ರತಿಭೆಗೆ ನಮೋ ಎನ್ನೋಣ. (ನರೇಂದ್ರ
ಮೋದಿ ಅಲ್ಲ ಮತ್ತೆ!)
No comments:
Post a Comment