Tuesday, March 19, 2013

ಎದೆಗೆ ಬಿದ್ದ ಅಕ್ಷರವೂ.. ಬೆಂಕಿ ಆಕಸ್ಮಿಕವೂ... ನನ್ನೆದೆಯ ತಳಮಳವೂ....


ಸಹೃದಯರೆ, ನೆನ್ನೆ (18.03.2013) ಬೆಳಿಗ್ಗೆಯಿಂದ ನಡೆದ ಘಟನೆಗಳನ್ನು ಮೊದಲು ಹೇಳಿಬಿಡುತ್ತೇನೆ. ಆಮೇಲೆ ಮೇಲಿನ ಶಿರ್ಷಿಕೆಯ ಬಗ್ಗೆ ನೀವೇ ತೀರ್ಮಾನಿಸಿ!
ನೆನ್ನೆ ಎಂದಿನಂತೆ ಮಗಳನ್ನು ಸ್ಕೂಲಿಗೆ ಬಿಟ್ಟು ಕಾಲೇಜಿಗೆ ಬಂದೆ. ನಿತ್ಯದಂತೆ, ಮರವೊಂದರ ಕೆಳಗೆ ಕಾರನ್ನು ನಿಲ್ಲಿಸಿ ಬರುವಾಗ ಸುಮಾರು ಮೂರ‍್ನಾಲ್ಕು ಅಡಿ ಎತ್ತರದ ತರಗೆಲೆಗಳ ರಾಶಿ ಕಣ್ಣಿಗೆ ಬಿತ್ತು. ಆ ರಾಶಿಗೆ ತಗುಲಿಕೊಂಡಂತೆ ನನ್ನ ಕಾರಿನ ಹಿಂದಿನ ಚಕ್ರಗಳು ನಿಂತಿದ್ದವು. ’ಉದುರಿದ್ದ ಎಲ್ಲ ತರಗೆಲೆಗಳನ್ನು ಒಂದೆಡೆ ರಾಶಿ ಹಾಕಿದ್ದಾರೆ. ಬಹುಶಃ ನಂತರ ಬಂದು ತೆಗೆದುಕೊಂಡು ಹೋಗುತ್ತಾರೆ. ನೀರು ಕಾಯಿಸಲು ಬಳಸುತ್ತಾರೊ ಅಥವಾ ಗೊಬ್ಬರದ ಗುಂಡಿಗೆ ಹಾಕುತ್ತಾರೊ’ ಎಂದುಕೊಂಡು, ಕಾಲೇಜಿಗೆ ಬಂದು ಕೆಲಸದಲ್ಲಿ ತೊಡಗಿಕೊಂಡೆ. ಸುಮಾರು ಹನ್ನೊಂದು ಘಂಟೆಯ ಹೊತ್ತಿಗೆ, ಆ ತರಗೆಲೆಯ ರಾಶಿ ನೆನಪಾಗಿ ಕಣ್ಣ ಮುಂದೆ ಬಂತು. ’ಬೇಸಿಗೆಯಲ್ಲಿ ಚೆನ್ನಾಗಿ ಒಣಗಿದೆ. ಯಾರಾದರೂ ಕಿಡಿಗೇಡಿ ಒಂದು ಬೆಂಕಿಕಡ್ಡಿ ಗೀರಿ ಒಗೆದರೆ ಅಥವಾ ಬೀಡಿ ಸೇದಿ ತುಂಡನ್ನು ಆ ರಾಶಿಯೊಳಗೆ ಬಿಸಾಕಿದರೆ ದಗ್ಗನೆ ಹತ್ತಿ ಉರಿಯುತ್ತದೆ. ಆಗ ನನ್ನ ಕಾರಿಗೂ ಬೆಂಕಿ ತಗುಲಿಕೊಳ್ಳಬಹುದಲ್ಲ’ ಎನ್ನಿಸಿತು. ಮನಸ್ಸಿನಲ್ಲಿ ಒಂದು ರೀತಿಯ ಅವಾಚ್ಯ ವೇದನೆ ಶುರುವಾಗಿಬಿಟ್ಟಿತು. ಸುಮಾರು ಒಂದು ಗಂಟೆಯವರೆಗೂ ನಾನು ಆ ಹಿಂಸೆಯನ್ನು ನಾನು ಅನುಭವಿಸಿದ್ದೇನೆ. ತಕ್ಷಣ ಹೋಗಿ ಬೇರೆಡೆಗೆ ನಿಲ್ಲಿಸಿ ಬರಲೇ ಎನ್ನಿಸಿದ್ದೂ ಇದೆ. ಕೆಲಸದ ಒತ್ತಡದಿಂದ ಹಾಗೂ ಮತ್ತೆ ನೆರಳಿರುವ ಪಾರ್ಕಿಂಗ್ ಸಿಗುತ್ತದೊ ಇಲ್ಲವೊ ಎಂದುಕೊಂಡು ಆ ಕ್ಷಣಕ್ಕೆ ಅದನ್ನು ಮನಸ್ಸು ನಿರಾಕರಿಸಿದರೂ ಆ ಅವಾಚ್ಯ ವೇದನೆಯ ಕಳವಳವನ್ನು ನಾನು ಅನುಭವಿಸಿದ್ದೇನೆ. ಮದ್ಯಾಹ್ನ ಊಟದ ಸಮಯದಲ್ಲಿ ಹೊರಗೆ ಬಂದಾಗ ಕಾರಿನ ಕಡೆಯೇ ನಡೆದು ನೋಡಿದೆ. ಕಾರು ಹಾಗೇ ನಿಂತಿತ್ತು; ತರಗೆಲೆಯ ರಾಶಿಯೂ ಹಾಗೇ ಇತ್ತು. ಊಟ ಮುಗಿಸಿ ವಾಪಸ್ಸು ಬರುವಾಗ ಬಿಸಿಲ ಧಗೆ ವಿಪರೀತವಾಗಿದ್ದುದಲ್ಲದೆ, ನನಗೆ ಮತ್ತೆ ಬೆಂಕಿ ಹತ್ತಿಕೊಂಡ ತರಗೆಲೆಯ ರಾಶಿ ಕಣ್ಣ ಮುಂದೆ ಬಂತು. ಇನ್ನು ತಡೆಯಲಾರೆನು ಎಂದುಕೊಂಡು ಕಾರನ್ನು ಅಲ್ಲಿಂದ ತೆಗೆದು ಬೇರೆಡೆ ಸೂಕ್ತವಾದ ಜಾಗವನ್ನು ಹುಡುಕಿ ಕಾಲೇಜಿಗೆ ಬಂದೆ.
ಸಂಜೆ ನಾಲ್ಕರ ಹೊತ್ತಿಗೆ ಬಿಡುವಾಯಿತು. ಈಗಾಗಲೇ ಓದಿ ಮುಗಿಸಿದ್ದ, ’ಎದೆಗೆ ಬಿದ್ದ ಅಕ್ಷರ’ ಪುಸ್ತಕವನ್ನು ತೆಗೆದುಕೊಂಡು, ಅನೈಚ್ಛಿಕವಾಗಿ ಒಂದು ಕಡೆ ತೆರೆದೆ. ಅದು ೧೦ನೆಯ ಪುಟ. ಅಲ್ಲಿದ್ದ ಲೇಖನದ ಹೆಸರು ’ಮೂರ್ಛಾವಸ್ಥೆಯಲ್ಲಿ ಕಾರುಣ್ಯ’. ಸುಮ್ಮನೆ ಓದಿದೆ. ಶಿವಮೊಗ್ಗದಿಂದ ಬಂದಿದ್ದ ಡಾ. ಅಶೋಕ ಪೈ ಅವರು ದೇವನೂರರಿಗೆ ಹೇಳಿದ ಒಂದು ಘಟನೆಯನ್ನು ಅದು ಒಳಗೊಂಡಿದೆ. ಮನಸ್ಸಿನ ಬಗ್ಗೆ ನಡೆದಿರುವ ಸಂಶೋಧನೆಯೊಂದರ ಪ್ರಕಾರ, ’ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.... ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುವುದೇನೊ. ಈ ಅನುಕಂಪನ ನಿಜವು ಇಡೀ ಜೀವಸಂಕುಲವನ್ನೆ ಒಂದು ಎಂದು ಹೇಳುತ್ತದೆ’. ಇದಕ್ಕೆ ಪೂರಕವಾಗಿ ಡಾ. ಅಶೋಕ ಪೈ ಅವರು ಕೊಟ್ಟಿರುವ ಉದಾಹರಣೆ ಇದು. ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿರುವ ಹೊತ್ತಿನಲ್ಲೇ, ಪಕ್ಕದ ಇನ್ನೊಂದು ಕೊಠಡಿಯಲ್ಲಿ ಒಂದಷ್ಟು ಜನ ಇಸ್ಪೀಟ್ ಆಡುತ್ತಲೊ, ಏನೊ ಮಾತುಕತೆಯಲ್ಲೊ ನಿರತರಾಗಿರುತ್ತಾರೆ. ಟೀವಿಯಲ್ಲಿ ಕೊಲೆಯ ಸುದ್ದಿಯೊಂದನ್ನು ನೋಡಿದ ಈ ರೂಮಿನ ಜನ ಅನುಭವಿಸಿದ ಭಾವದ ಒಂದೆಳೆಯನ್ನು ಪಕ್ಕದ ಕೊಠಡಿಯಲ್ಲಿರುವವರೂ ಅನುಭವಿಸಿರುತ್ತಾರೆ. ಈ ರೂಮಿನವರ ದುಗುಡ ಆ ರೂಮಿನಲ್ಲಿದ್ದವರ ಮನಸ್ಸಿಗೂ ತಟ್ಟಿರುತ್ತದೆ. ಅದೇ ಟೀವಿ ರೂಮಿನಲ್ಲಿರುವ ಜನ ಹಾಡನ್ನೊ ನೃತ್ಯವನ್ನೊ ನೋಡಿ ಸಂತುಷ್ಟ ಭಾವವನ್ನು ಅನುಭವಿಸುತ್ತಿದ್ದರೆ, ಇತ್ತ ಈ ಕೊಠಡಿಯಲ್ಲಿದ್ದವರ ಮನಸ್ಸಿನ ಮೇಲೂ ಸ್ವಲ್ಪ ಮಟ್ಟಿನ ಸಂತೋಷದ ಭಾವನೆ ಉಂಟಾಗುವುದಂತೆ. ಇದು ಪರಸ್ಪರ ಎಂಬುದು ಎಂಬುದು ಮಾತ್ರ ನಿಜ. ಈ ಘಟನೆಯನ್ನು ಓದಿದಾಗ ನನಗೆ ’ಅಮೃತವಾಹಿನಿಯೊಂದು ಹರಿಯುತಲಿಹುದು ಮಾನವನ ಎದೆಯಿಂದಲೆದೆಗೆ’ ಎಂಬ ಕವಿವಾಣಿ ನೆನಪಾಯಿತು. ಜೊತೆಗೆ, ಸಂದರ್ಶನವೊಂದರಲ್ಲಿ ಜೋತಿಷ್ಯದ ಬಗ್ಗೆ ಉತ್ತರಿಸಿದ್ದ ಕುವೆಂಪು ’ಈಗ ಈ ಮೋಡ ಅಲ್ಲಿದೆ; ಈ ಮರ ಇಲ್ಲಿದೆ. ಇವುಗಳ ಸಂಬಂಧವೂ ಕೂಡ ಆ ಗ್ರಹಗತಿಗಳಷ್ಟೇ ಪರಿಣಾಮ ಬೀರುತ್ತೆ. ಇವುಗಳಿಗೂ ನಾವು ಮಾತಾಡೋದಿಕ್ಕೂ ಸಂಬಂಧ ಇದೇ ಅಂತ ನಾನು ಹೇಳ್ತಿನಿ’ ಎಂದಿದ್ದ ಮಾತು ನೆನಪಾಯಿತು. ಅಷ್ಟಕ್ಕೆ ಸಮಯ ಮುಗಿದಿದ್ದರಿಂದ ಪುಸ್ತಕ ಮಡಿಚಿಟ್ಟು, ಮನೆಗೆ ಹೊರಟೆ.
ಸಂಜೆ ಮತ್ತು ರಾತ್ರಿಯಿಡೀ. ನನ್ನ ಮಗಳಿಗೆ ಬಹುದಿನದಿಂದ ಹೇಳುತ್ತಾ ಬಂದಿದ್ದ, ಒಂದು ಪುಟ್ಟ ಅಕ್ವೇರಿಯಂ ಸಿದ್ಧಪಡಿಸಿಕೊಡುವುದರಲ್ಲಿ ಕಳೆದು ಹೋಯಿತು. ಟೀವಿ ಹಾಕಿ ನ್ಯೂಸ್ ಕೂಡಾ ನೋಡಲಾಗಿರಲಿಲ್ಲ. ಬೆಳಿಗ್ಗೆ ಎದ್ದು ಎಂದಿನಂತೆ, ಪೇಪರ್ ಕೈಗೆತ್ತಿಕೊಂಡಾಗ, ಬೆಂಗಳೂರಿನ ಮುರುಗೇಶಪಾಳ್ಯದಲ್ಲಿ ಇನ್‌ಫ್ಯಾಂಟ್ ಟ್ರಾವಲ್ ಸರ್ವೀಸ್ ಘಟಕದಲ್ಲಿ ನಡೆದ ಅಗ್ನಿ ಅನಾಹುತ ಕಣ್ಣಿಗೆ ಬಿತ್ತು. ಬೆಂಕಿ ಅನಾಹುತ ಎಂದ ತಕ್ಷಣ ಮನಸ್ಸಿನಲ್ಲಿ ಒಂದು ರೀತಿಯ ಹಳಹಳಿಕೆ ಶುರುವಾಯಿತು. ಅದು ನಾನು ಈಗಾಗಲೇ ಅನುಭವಿಸಿದ್ದ ಒಂದು ಭಾವ ಎಂದು ಮನಸ್ಸಿಗೆ ಹೊಳೆಯಿತು. ನೆನ್ನೆ ಸುಮಾರು ಹನ್ನೊಂದರಿಂದ ಒಂದು ಘಂಟೆಯವರೆಗೂ ನನ್ನ ಮನಸ್ಸು ಅನುಭವಿಸಿದ್ದ ಭಾವವೇ ಅದಾಗಿತ್ತು. ತರಗೆಲೆ, ಕಾರು, ಬೆಂಕಿ ಅನಾಹುತ ಇವುಗಳೆಲ್ಲವೂ ಮನಸ್ಸಿಗೆ ಬಂದವು. ಅದರ ಹಿಂದೆಯೇ ದೇವನೂರರ ’ಎದೆಗೆ ಬಿದ್ದ ಅಕ್ಷರ’ ಕೃತಿಯ ಹತ್ತನೆಯ ಪುಟದ ಮೂರ್ಛಾವಸ್ಥೆಯಲ್ಲಿ ಕಾರುಣ್ಯ ಎಂಬ ಪುಟ್ಟ ಬರಹವೂ ನೆನಪಾಯಿತು.
ಸಾಹಿತ್ಯ ಜೀವನದ ಪ್ರತಿಕರತಿ ಎಂಬ ಮಾತಿದೆ. ಈಗ ಹೇಳಿ. ಈ ಮೇಲಿನ ಶೀರ್ಷಿಕೆಗೂ ಕಳೆದ ಇಪ್ಪತ್ತನಾಲ್ಕು ಘಂಟೆಗಳಲ್ಲಿ ನನ್ನ ಪ್ರಜ್ಞೆಯಾವರಣದಲ್ಲಿ ನಡೆದ ಘಟನೆಗಳಿಗೂ, ಮನಸ್ಸು ಅನುಭವಿಸಿದ್ದ ಭಾವನೆಗಳಿಗೂ ಒಂದಕ್ಕೊಂದು ಸಂಬಂಧವಿಲ್ಲವೆ?

2 comments:

savitha B C said...

ನಿಮ್ಮ ಬರಹ ಚೆನ್ನಾಗಿದೆ...ನಾನು ಕೂಡಾ ಕಳೆದ ವಾರವಷ್ಟೇ ಎದೆಗೆ ಬಿದ್ದ ಅಕ್ಷರ ಪುಸ್ತಕ ಕೊಂಡು ಓದಿದ್ದೆ..ನಿಮಗೆ ಆದ ಅನುಭವ ಜೊತೆ ಪುಸ್ತಕದ ಬರವಣಿಗೆಯ ಜೊತೆ ಹೋಲಿಕೆ ಚೆನ್ನಾಗಿದೆ ಮತ್ತು ಅಲ್ಲಿ ಹೇಳಿರುವಂತೆ ಒಂದರ ಜೊತೆಗಿನ ಇನ್ನೊಂದರ ಸಂಬಂದವು ಅಷ್ಟೆ ನಿಜ...

nenapina sanchy inda said...

khanDita ide. naanoo halavaaru baari idannu anubhavisiddene
malathi S