Monday, December 23, 2013

ಪ್ರವಾಸಿಗರ ನಿರೀಕ್ಷೆಯಲ್ಲಿ ನುಗ್ಗೇಹಳ್ಳಿ ದೇವಾಲಯಗಳು

ಭಾರತೀಯ ಪ್ರವಾಸೋದ್ಯಮಕ್ಕೆ ಕರ್ನಾಟಕದ ಕೊಡುಗೆ ಅಪಾರ. ಶಿಲ್ಪಕಲೆಯ ಮಾತು ಬಂತೆಂದರೆ ಹಾಸನ ಜಿಲ್ಲೆ ನೆನಪಾಗುತ್ತದೆ. ಬೇಲೂರು ಹಳೇಬೀಡು ಮತ್ತು ಶ್ರವಣಬೆಳಗೊಳಗಳಲ್ಲಿನ ಹೊಯ್ಸಳ ಶಿಲ್ಪಕಲಾವೈಭವ ಕಣ್ಣಿಗೆ ಕಟ್ಟುತ್ತದೆ. ಶ್ರವಣಬೆಳಗೊಳಕ್ಕೆ ಬಂದವರು ಕೇವಲ ಇಪ್ಪತ್ತೈದು ಕಿಲೋಮೀಟರ್‌ಗಳ ದೂರ ಪ್ರಯಾಣಿಸುವ ಉತ್ಸಾಹವಿದ್ದರೆ ಸಾಕು; ಹೊಸಹೊಳಲು ಮತ್ತು ಸೋಮನಾಥಪುರದ ತ್ರಿಕೂಟ ದೇವಾಲಯಗಳನ್ನೇ ಹೋಲುವ, ಸೋಮನಾಥಪುರದ ಕೇಶವದೇವಾಲಯಕ್ಕಿಂತ ಚಿಕ್ಕದಾದರೂ, ಅದಕ್ಕಿಂತ ಇಪ್ಪತ್ತು ವರ್ಷ ಹಳೆಯದಾದ ನುಗ್ಗೆಹಳ್ಳಿಯ ಲಕ್ಷ್ಮೀನರಸಿಂಹ ಮತ್ತು ಸದಾಶಿವ ದೇವಾಲಯಗಳನ್ನು ನೀವು ನೋಡಬಹುದು. ಹೊಯ್ಸಳ ಶೈಲಿಯ ದೇವಾಲಯಗಳ ಎಲ್ಲ ಲಕ್ಷಣಗಳನ್ನು ಮೈವೆತ್ತು ನಿಂತಿರುವ ಲಕ್ಷ್ಮೀನರಸಿಂಹ ದೇವಾಲಯದ ರಚನೆಯ ಕಾಲ ಕ್ರಿ.ಶ. ೧೨೪೬. ಇದಕ್ಕಿಂತ ಮೂರು ವರ್ಷ ಇತ್ತೀಚಿನದಾದ ಅಂದರೆ ಕ್ರಿ.ಶ. ೧೨೪೯ ರಲ್ಲಿ ನಿರ್ಮಿತವಾಗಿರುವ ಇಲ್ಲಿನ ಸದಾಶಿವ ದೇವಾಲಯವೂ ತನ್ನ ವಿಶಿಷ್ಟ ಶೈಲಿಯ ಶಿಖರದಿಂದಾಗಿ ಕಲಾವಿಮರ್ಶಕರ ಗಮನ ಸೆಳೆದಿದೆ.
ಲಕ್ಷ್ಮೀನರಸಿಂಹ ದೇವಾಲಯ
ನುಗ್ಗೇಹಳ್ಳಿಯು ಒಂದು ಪ್ರಾಚೀನ ಪಟ್ಟಣವಾಗಿದೆ. ೧೧೨೧ಕ್ಕೆ ಸೇರಿದ ವಿಷ್ಣುವರ್ಧನನ ಶಾಸನವು ಇಲ್ಲಿಂದ ಪ್ರಕಟವಾಗಿದೆ. ಕ್ರಿ.ಶ. ೧೨೪೬ ಕ್ಕೂ ಮುಂಚೆಯೇ ಹೊಯ್ಸಳ ಸೋಮೇಶ್ವರನ ದಂಡನಾಯಕನಾಗಿದ್ದ ಬೊಮ್ಮಣ್ಣನು ನುಗ್ಗೇಹಳ್ಳಿಯನ್ನು ‘ಸೋಮನಾಥಪುರ’ವೆಂಬ ಅಗ್ರಹಾರವನ್ನಾಗಿ ಮಾಡಿ, ದಾನ ಕೊಟ್ಟಿದ್ದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಇದೇ ಬೊಮ್ಮಣ್ಣ ದಂಡನಾಯಕನು ಪ್ರಸನ್ನಕೇಶವ ಮತ್ತು ಸದಾಶಿವ ದೇವಾಲಯಗಳೆರಡನ್ನೂ ಕಟ್ಟಿಸಿದ್ದಾನೆ.
ರತಿ-ಮನ್ಮಥ
ಶಾಸನಗಳಲ್ಲಿ ‘ಪ್ರಸನ್ನಕೇಶವ ದೇವಾಲಯ’ ಎಂದೇ ಉಲ್ಲೇಖವಿದ್ದರೂ ಈಗ ಜನಮನದಲ್ಲಿ ‘ಲಕ್ಷ್ಮೀನರಸಿಂಹ ದೇವಾಲಯ’ ಎಂದು ಖ್ಯಾತವಾಗಿದೆ. ಹಳೇಬೀಡಿನ ದೇವಾಲಯದ ನಕ್ಷತ್ರಾಕಾರದ ಹೊರಬಿತ್ತಿಯಲ್ಲಿ ಇರುವಂತೆಯೇ ಆನೆ ಕುದುರೆಗಳ ಸಾಲುಗಳಲ್ಲದೆ ಲತಾಪಟ್ಟಿಕೆ, ಸಿಂಹಮುಖ, ಕಪಿ, ಪಕ್ಷಿ, ಜಿಂಕೆ ಇತ್ಯಾದಿಗಳಿವೆ. ಇದರ ಮೇಲಿನ ಪಟ್ಟಿಯಲ್ಲಿ ಪೌರಾಣಿಕ ಕಥೆಗಳು ಕೆತ್ತಲ್ಪಟ್ಟಿವೆ. ಉತ್ತರದ ಗರ್ಭಗುಡಿಯ ಬಿತ್ತಿಯಲ್ಲಿ ಭಾಗವಾತ ಕಥೆಯ ಚಿತ್ರಣವಿದೆ. ಕೃಷ್ಣನು ಬಾಯ್ದೆರೆದು ಯಶೋದೆಗೆ ವಿಶ್ವವನ್ನು ತೋರಿಸುವುದು, ಯಶೋದೆಯು ಕೃಷ್ಣನನ್ನು ದಂಡಿಸುತ್ತಿರುವುದು, ಪೂತನೀಸಂಹಾರ, ನವನೀತ ಕೃಷ್ಣ ಮತ್ತು ಬೆಕ್ಕು ಬೆಣ್ಣೆ ಕದಿಯುವುದು ಮುಂತಾದ ಶಿಲ್ಪಗಳಿವೆ. ದಕ್ಷಿಣದಲ್ಲಿ ಕಾಳಿಂಗಮರ್ದನ, ಗೋವರ್ಧನಗಿರಿಯನ್ನು ಎತ್ತುವುದು ಮುಂತಾದ ಶಿಲ್ಪಗಳಿವೆ. ಪಶ್ಚಿಮದಲ್ಲಿ ರಾಸಕ್ರೀಡೆ, ವಸ್ತ್ರಾಪಹರಣ, ಅಕ್ರೂರನಿಗೆ ವಿಶ್ವರೂಪದರ್ಶನ ಮಾಡಿಸುವುದು, ಕಂಸವಧೆ ಮುಂತಾದ ಚಿತ್ರಗಳಿವೆ.  ಈ ಪಟ್ಟಿಕೆಗಳ ಮೇಲೆ ಮಕರಗಳ ಸಾಲು, ಅದರ ಮೇಲೆ ಹಂಸಗಳ ಸಾಲುಗಳಿವೆ.
ಅಷ್ಟಭುಜ ನೃತ್ಯ ಸರಸ್ವತೀ
ಪಟ್ಟಿಕೆಗಳ ಮೇಲ್ಭಾಗದಲ್ಲಿ ಸುಮಾರು ಒಂದು ನೂರಕ್ಕೂ ಹೆಚ್ಚು ವಿಗ್ರಹಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಮೋಹಿನಿ, ಕೇಶವ ತ್ರಿವಿಕ್ರಮ ಮೊದಲಾದ ವಿಷ್ಣುವಿನ ಇಪ್ಪತ್ತನಾಲ್ಕು ರೂಪಗಳು ಹಾಗೂ ಕುಲಾವಿ, ನಿಲುವಂಗಿ, ಪಾದುಕೆಗಳನ್ನು ಧರಿಸಿ ದಂಡಚಕ್ರಗಳನ್ನು ಹಿಡಿದಿರುವ ವಿಶಿಷ್ಟವಾದ ದಕ್ಷಿಣಾಮೂರ್ತಿ, ರತಿಮನ್ಮಥ, ಮಾಧವ ಲಕ್ಷ್ಮೀ, ತಾಂಡವ ಗಣೇಶ, ಯೋಗನರಸಿಂಹ, ಗರುಡ, ಪ್ರಹ್ಲಾದ, ವರಾಹ, ಭೂದೇವಿ, ವೇಣುಗೋಪಾಲ, ಸೂರ್ಯ, ಮುಂತಾದ ದೇವದೇವಿಯರ ವಿಗ್ರಹಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕುಸುರಿ ಕೆಲಸದಲ್ಲಿ ಬೇಲೂರು ಹಳೇಬೀಡು ದೇವಾಲಯಗಳ ಶಿಲ್ಪಗಳನ್ನೇ ಹೋಲತ್ತವೆ.
ಮೋಹಿನೀ ಅಥವಾ ವಿಷಕನ್ಯೆ
ದೇವಾಲಯದ ದಕ್ಷಿಣ ಭಾಗದ ವಿಗ್ರಹಗಳನ್ನು ರೂವಾರಿ ಬೈಚೋಜ ಮಾಡಿದ್ದರೆ ಉತ್ತರ ಭಾಗದ ವಿಗ್ರಹಗಳನ್ನು ಮಲ್ಲಿತಮ ಮಾಡಿರುವುದು ವಿಶೇಷ. ದಕ್ಷಿಣದಲ್ಲಿರುವ ಬಹುತೇಕ ವಿಗ್ರಹಗಳು ಉತ್ತರದಲ್ಲಿಯೂ ಇವೆ. ಅವುಗಳ ಜೊತೆಗೆ ನಾಟ್ಯಸರಸ್ವತಿ, ನಾಟ್ಯಲಕ್ಷ್ಮೀ, ಅರ್ಜುನ ಮತ್ಸ್ಯಯಂತ್ರ ಭೇದಿಸುತ್ತಿರುವಾಗ ಹಾರ ಹಿಡಿದು ನಿಂತಿರುವ ದ್ರೌಪದಿ, ರಾಮ-ಲಕ್ಷ್ಮಣ-ಸೀತೆ-ಆಂಜನೇಯ ಮುಂತಾದ ವಿಗ್ರಹಗಳು ಕಲಾತ್ಮಕವಾಗಿವೆ. ಪಶ್ಚಿಮದ ಗೂಡಿನಲ್ಲಿರುವ ಹರಿಹರ ಮೂರ್ತಿ ಗಮನ ಸೆಳೆಯುತ್ತದೆ.

 ಮೂಲ ಗರ್ಭಗುಡಿಯಲ್ಲಿ ಪ್ರಸನ್ನಕೇಶವ, ದಕ್ಷಿಣ ಗರ್ಭಗುಡಿಯಲ್ಲಿ ವೇಣುಗೋಪಾಲ, ಉತ್ತರ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹ ವಿಗ್ರಹಗಳಿವೆ. ಮೂರೂ ವಿಗ್ರಹಗಳು ಸುಮಾರು ಐದು ಅಡಿ ಎತ್ತರವಾಗಿದ್ದು ಅತ್ಯಂತ ಸೂಕ್ಷ್ಮ ಕುಸುರಿ ಕೆಲಸಗಳಿಂದ ಅಲಂಕೃತವಾಗಿವೆ. ನವರಂಗವು ಒಂಬತ್ತು ಅಂಕಣದ್ದಾಗಿದ್ದು, ಒಂದೊಂದು ಅಂಕಣವೂ ಭಿನ್ನವಾದ ಮತ್ತು ಆಳವಾದ ಭುವನೇಶ್ವರಗಳಿಂದ ಕೂಡಿದೆ. ಮೂಲ ಗರ್ಭಗುಡಿಯ ಗೋಪುರ ಹೊಯ್ಸಳ ಶೈಲಿಯಲ್ಲಿದೆ. ಉತ್ತರ-ದಕ್ಷಿಣದ ಗೋಪುರಗಳೆರಡೂ ಇತ್ತೀಚಿನ ರಚೆನೆಗಳಾಗಿದ್ದು ಇಟ್ಟಿಗೆಯಿಂದ ಕಟ್ಟಲ್ಪಟ್ಟಿವೆ.

ಸದಾಶಿವ ದೇವಾಲಯ
ಸದಾಶಿವ ದೇವಾಲಯವು ಅಷ್ಟಕೋನ ನಕ್ಷತ್ರಾಕಾರದ ತಳವಿನ್ಯಾಸವಿರುವ ದೇವಾಲಯವಾಗಿದೆ. ಹೊರಬಿತ್ತಿಯಲ್ಲಿ ಶಿಲ್ಪಗಳಿಲ್ಲ. ಆದರೆ ಈ ದೇವಾಲಯದ ವೈಶಿಷ್ಟವಿರುವುದು ಅದರ ಶಿಖರದಲ್ಲಿ. ಆಷ್ಟಕೋನದ ಮೂಲೆಗಳಲ್ಲಿ ನಕ್ಷತ್ರಗಳು, ಅಷ್ಟಮುಖ ಸ್ತಂಭಗಳು, ಬಗ್ಗಿದ ರೇಖೆಯಂತಿರುವ ಬಳಪದ ಕಲ್ಲಿನ ಶಿಖರ ವಿಶಿಷ್ಟವಾಗಿದೆ. ಅಷ್ಟಾಸ್ರವಾದ ಆಮಲಕ ಕಲಶ, ಶಿಖರಕ್ಕೊಂದು ಶೋಭೆಯನ್ನಿತ್ತಿದೆ. ಶಿಖರದಲ್ಲಿ ಪೂರ್ವಾಭಿಮುಖವಾಗಿ ಕೆತ್ತಿರುವ ನಟರಾಜನ ಉಬ್ಬುಶಿಲ್ಪ ಮನಮೋಹಕವಾಗಿದೆ. ಇನ್ನೆಲ್ಲಿಯೂ ಈ ವಿನ್ಯಾಸ ಕಂಡುಬರುವುದಿಲ್ಲ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ದೇವಾಲಯದ ನವರಂಗದಲ್ಲಿ ಸೂರ್ಯ-ಛಾಯಾದೇವಿ, ಸಪ್ತಮಾತೃಕಾ, ವೀರಭದ್ರ, ಗಣೇಶ, ಭೈರವ, ಸರಸ್ವತಿ, ಮಹಿಷಾಸುರಮರ್ದಿನಿ, ಷಣ್ಮುಖ ಮೊದಲಾದ ವಿಗ್ರಹಗಳಿವೆ. ಸೇರ್ಪಡೆಯಾಗಿರುವ ಪಾರ್ವತಿ ಗುಡಿಯಲ್ಲಿ ಪಾರ್ವತಿಯ ವಿಗ್ರಹ ಸುಂದರವಾಗಿದೆ. ಜಾಲಂದ್ರಗಳಿಂದ ಕೂಡಿರುವ ನಂದಿಮಂಟಪದಲ್ಲಿ ಆಕರ್ಷಕವಾದ ನಾಲ್ಕು ಅಡಿ ಎತ್ತರದ ನಂದಿಯಿದೆ.
ಎರಡೂ ದೇವಾಲಯಗಳ ಮಹಾದ್ವಾರ, ಸ್ತಂಭಗಳು, ಪಾತಾಳಾಂಕಣ, ಮುಖಮಂಟಪ, ಹೊರಗಿನ ನವರಂಗಗಳು ವಿಜಯನಗರ ಮತ್ತು ಪಾಳೆಯಗಾರರ ಕಾಲದ ಸೇರ್ಪಡೆಯಾಗಿವೆ. ಈ ದೇವಾಲಯದ ಈಶಾನ್ಯಕ್ಕೆ ಕೂಗಳತೆಯ ದೂರದಲ್ಲಿ ಬೊಮ್ಮಣ್ಣದಂಡನಾಯಕನ ಅಕ್ಕ ಲಕ್ಕವ್ವೆಯಕ್ಕ ಕಟ್ಟಿಸಿದ ಹಿರಿಯಕೆರೆ ಇಂದಿಗೂ ಸುಸ್ಥಿತಿಯಲ್ಲಿ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ತುಂಬಿದ್ದಿಲ್ಲ.
ದಕ್ಷಿಣಭಾರತದಲ್ಲೇ ವಿಶೇಷವೆನ್ನಬಹುದಾದ ಶಿಖರ - ಸದಾಶಿವ ದೇವಾಲಯ

ಪ್ರಸನ್ನಕೇಶವ ದೇವಾಲಯವು ಕೇಂದ್ರ ಪುರಾತತ್ವ ಇಲಾಖೆಗೂ, ಸದಾಶಿವ ದೇವಾಲಯ ರಾಜ್ಯ ಪುರಾತತ್ವ ಇಲಾಖೆಗೂ ಸೇರಿವೆ. ಎರಡೂ ದೇವಾಲಯಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲಾಗಿದೆ. ಇಷ್ಟೆಲ್ಲಾ ಆಕರ್ಷಣೆಯಿರುವ ಇಲ್ಲಿನ ಪ್ರಮುಖ ಕೊರತೆಯೆಂದರೆ ಪ್ರವಾಸಿಗರು. ಈ ದೇವಾಲಯದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮೌನವಾಗಿದೆ. ಈ ಊರನ್ನು ಪ್ರವಾಸಿಗರಿಗೆ ತೋರಿಸುವ ಯಾವ ಏರ್ಪಾಡೂ ಇಲ್ಲ. ಹಿರಿಯಕೆರೆಯಿಂದ ಅಲ್ಪ ದೂರದಲ್ಲಿ ಹೇಮಾವತಿ ಎಡದಂಡೆ ನಾಲೆಯಿದೆ. ಅದರಿಂದ ಶಾಶ್ವತವಾಗಿ ಈ ಕೆರೆಗೆ ನೀರೊದೊಗಿಸಿದ್ದೇ ಆದರೆ, ಸಾವಿರಾರು ಎಕರೆ ಭೂಮಿಗೆ, ಜನ-ಜಾನುವಾರುಗಳಿಗೆ ಹಾಗೆಯೇ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಉಪಯೋಗವಾಗುತ್ತದೆ.
ಮಾರ್ಗ: ಶ್ರವಣಬೆಳಗೊಳದಿಂದ ಹಿರಿಸಾವೆ ಮೂಲಕ ನುಗ್ಗೆಹಳ್ಳಿಗೆ ಹೋಗಬಹುದು. ಚೆನ್ನರಾಯಪಟ್ಟಣದಿಂದ ನುಗ್ಗೆಹಳ್ಳಿಗೆ ಬಸ್ ಸೌಕರ್ಯ ಅನುಕೂಲಕರವಾಗಿದೆ.

No comments: