ಸರಿಸುಮಾರು ಇದೇ ಭಿತ್ತಿಯನ್ನುಳ್ಳ ಒಂದು ಕಥೆ ಕುವೆಂಪು ಅವರಿಂದ ೧೯೨೬-೨೭ರಲ್ಲೇ ಬರೆಯಲ್ಪಟ್ಟಿತ್ತು. ಆದರೆ, ಅದು ಮುದ್ರಣಗೊಂಡಿದ್ದು ೧೯೮೫ರಲ್ಲಿ! ’ಕತೆಗಳೊಡನೆ ಆರಂಭದಲ್ಲಿ’ ಎಂಬ ಸಂಕಲನ ಹೊರಬಂದಾಗ. ಅದರಲ್ಲಿ ಮೂರು ಟಾಲ್‌ಸ್ಟಾಯ್ ಕತೆಗಳ ಅನುವಾದ, ಟಾಗೂರರ ಒಂದು ಕತೆಯ ಅನುವಾದ ಮತ್ತು ಉಳಿದ ನಾಲ್ಕು ಕತೆಗಳು ಕುವೆಂಪು ಅವರ ಸ್ವತಂತ್ರ ಸೃಷ್ಟಿ. ಆ ಸಂಕಲನದ ’ಅಂದಿನ ರಾತ್ರಿ’ ಎಂಬ ಕತೆಯಲ್ಲಿ ’ಲಿಂಗ’ ಎಂಬ ಪಾತ್ರವಿದೆ. ಮಲೆನಾಡಿನ ತುಂಬುಕುಟುಂಬವೊಂದರ ಚಿತ್ರಣವಿದೆ. ಆ ಮನೆಯ ಕೆಲಸಗಾರ ಲಿಂಗ. ಕತೆಯ ನಿರೂಪಕನಾಗಿರುವ ಹುಡುಗನ ಜೊತೆಯಲ್ಲಿ ತಿಮ್ಮು, ಸುಬ್ಬು, ಸೀತೆ, ಕಿಟ್ಟು ಮತ್ತು ಜಾನಕಿ ಎಂಬ ಮಕ್ಕಳು ಆ ಮನೆಯಲ್ಲಿವೆ. ಮನೆಕೆಲಸದ ಲಿಂಗನಿಗೆ ಕತೆ ಹೇಳುವ ಹವ್ಯಾಸ. ಅದರಲ್ಲೂ ದೆವ್ವ ಭೂತದ ಕೆತಗಳನ್ನು ಹೇಳುವುದರಲ್ಲಿ ಆತ ನಿಸ್ಸೀಮ. ಆತನಿಗೆ ಪಿಶಾಚಿಗಳ ವಿಷಯವೆಂದರೆ ಬಹಳ ಸಂತೋಷ! ನೋಡ್ತಾ ಇದ್ದಂಗೆ ಒಂದು ಭೂಮಿಗೂ ಆಕಾಸಕ್ಕೂ ಒಂದಾಗಿ ನಿಂತು ಬಿಡ್ತು ಎಂದು ಆತ ಹೇಳಿದ್ದ ಒಂದು ಭೂತದ ಕತೆ ಮಕ್ಕಳ ಕುತೂಹಲವನ್ನು ಕೆರಳಿಸಿಬಿಟ್ಟಿರುತ್ತದೆ. ಅದರಲ್ಲಿ ಚಿಕ್ಕವಳಾದ ಜಾನಕಿಗೆ ಭಯವನ್ನೂ ಹುಟ್ಟಿಸಿರುತ್ತದೆ. ಮಕ್ಕಳೆಲ್ಲ ಭಯದಿಂದ ಕತೆಯನ್ನು ತುಂಡುಗಡಿಯುವ ಮನಸ್ಸುಳ್ಳವರಾದರೂ ಲಿಂಗ ಅವರನ್ನು ಬಿಡುವುದಿಲ್ಲ. ಮನೆಯ ಯಜಮಾನರ ಪ್ರವೇಶ ಆ ಕತೆ ತುಂಡುಗಡಿಯಲು ಹಾಗೂ ಚಿಕ್ಕಹುಡುಗಿ ಜಾನಕಿ ಭಯಮುಕ್ತಳಾಗಲು ಸಹಕಾರವಾಗುತ್ತದೆ. ಆದರೆ, ಜಾನಕಿಯನ್ನು ಆಡಿಕೊಳ್ಳುತ್ತಿದ್ದ ಮಕ್ಕಳ ಸೈನ್ಯಕ್ಕೆ, ಅಡುಗೆ ಮನೆಗೆ ಹೋಗಿ ಅಮ್ಮಂದಿರ, ಅಜ್ಜಿಯರನ್ನು ಕೂಡಿಕೊಳ್ಳುವ ಕಾತರ. ಆಗ ದಾಟಬೇಕಾದ ಮಾಣಿಗೆ ಮನೆಯ ದೆವ್ವದ ನೆನಪು ಬರುತ್ತದೆ. ಆಗ ಅವರೊಳಗಿನ ಪುಕ್ಕಲುತನ ಹೊರಬೀಳುತ್ತದೆ. ಆ ಕತೆಯನ್ನು ಲಿಂಗನೇ ಹೇಳಿರುತ್ತಾನೆ, ಮಾಣಿಗೆ ಮನೆಯಲ್ಲಿ ದೆವ್ವ ಇದೆ ಎಂದು. ಹೇಗೋ ಉಪಾಯ ಮಾಡಿ, ಚಿಕ್ಕಮನೊಂದಿಗೆ ಮಾಣಿಗೆ ಮನೆ ದಾಟಿ ಅಡುಗೆ ಮನೆ ಸೇರಿಕೊಳ್ಳುವ ಧಾವಂತದಲ್ಲಿದ್ದ ಮಕ್ಕಳ ಮನಸ್ಸಿನ ಭಯ, ಅವರ ಚಿಕ್ಕಮ್ಮನಿಗೂ ಆವರಿಸಿಬಿಡುವುದು, ಭಯ ಎಂಬುದು ಸಾಂಕ್ರಾಮಿಕ ಎಂಬುದಕ್ಕೆ ಸಾಕ್ಷಿಯಂತಿದೆ.
ಆ ಗಲಾಟೆಯೆಲ್ಲ ಮುಗಿದು ಪರಿಸ್ಥಿತಿ ಶಾಂತವಾದರೂ ಮಕ್ಕಳ ಭಯ ದೂರವಾದರೂ ಮಕ್ಕಳ ತುಂಟಾಟ ನಡೆಯುತ್ತದೆ. ಆಗ ಬಂದ ಲಿಂಗ, ’ಮಾಣಿಗೆ ಮನೆಯಲ್ಲಿ ಆದ ಅವಾಂತರಕ್ಕೆ ಅಲ್ಲಿರುವ ದೆವ್ವವೇ ಕಾರಣ’ ಎನ್ನುತ್ತಾನೆ. ಮಕ್ಕಳಿಗೂ ಅದು ನಿಜ ಅನ್ನಿಸಿಬಿಡುತ್ತದೆ. ಏಕೆಂದರೆ ದೆವ್ವ ಪಿಶಾಚ ಭೂತ ಇವುಗಳ ವಿಷಯಿಕವಾಗಿ ಸಂದೇಹ ಬಂದಾಗ, ಆ ಮಕ್ಕಳಿಗೆ ಲಿಂಗನೇ ಪ್ರಮಾಣ. ಪ್ರತ್ಯಕ್ಷ ಪ್ರಮಾಣವೂ ಹೌದು, ಪರೋಕ್ಷ ಪ್ರಮಾಣವೂ ಹೌದು!
ಮನೆಯವರ ಮಾತಿನ ನಡುವೆಯೂ ದೆವ್ವದ ವಿಚಾರ ಬರುತ್ತದೆ. ಮನೆಯ ಹಿರಿಯರೆಲ್ಲಾ ದೆವ್ವ ಭೂತಗಳನ್ನು ಪ್ರತ್ಯಕ್ಷ ಕಂಡವರೆ! ಆದರೆ, ’ಈಗೇತಕೆ ಅಂಥ ವಿಷಯಗಳು ಜರಗುವುದಿಲ್ಲ’ ಎಂಬುದಕ್ಕೆ ಅವರದು ಹಾರಿಕೆಯ ಉತ್ತರ; ಕಲಿಗಾಲ, ನಂಬಿಕೆಯಿಲ್ಲ, ನಿಮ್ಮ ಭಕ್ತಿಯೂ ಅಷ್ಟೆ ಅವುಗಳ ಶಕ್ತಿಯೂ ಅಷ್ಟೆ!
ಕಥೆಯ ನಿರೂಪಕನಿಗೆ ಕೊನೆಯಲ್ಲಿ ಅನ್ನಿಸುವುದಿಷ್ಟು: ಆಹಾ! ಅಂದಿನ ದಿನದ ರಾತ್ರಿಯು ಇನ್ನೊಮ್ಮೆ ಬರುವುದೇ?
ಈಗ ತೇಜಸ್ವಿಯವರ ಲಿಂಗ ಬಂದ ಕತೆಗೆ ಬರೋಣ. ಇಲ್ಲಿ ಅಲ್ಲಿಯಂತೆ ಕೂಡು ಕುಟುಂಬವೊಂದರ ಹಿನ್ನೆಲೆಯಿಲ್ಲದಿದ್ದರು ತುಂಬು ಕುಟುಂಬವಿದೆ. ಗಂಡ ಹೆಂಡತಿ ಮತ್ತು ಮೂವರು ಮಕ್ಕಳು. ಜೊತೆಗೆ ಮನೆಗೆಲಸದ ಲಿಂಗ. ಇಲ್ಲಿಯೂ ಆತ ದೆವ್ವ-ಭೂತಗಳ ಕತೆಯನ್ನು ಹೇಳಿ ಮಕ್ಕಳನ್ನು ವಿಷ್ಮಯಲೋಕಕ್ಕೆ ತಳ್ಳುವವನೇ ಆಗಿದ್ದಾನೆ. ಆ ಮನೆಯ ಹಿರಿಯ ಮಗ ಕಿಟ್ಟಿ ಸುಮಾರು ಒಂಭತ್ತು ವರ್ಷದವ, ಲಿಂಗ ಹೇಳಿದ ಕತೆಯನ್ನೇ ತನ್ನ ತಂಗಿ ಸುಭದ್ರಳಿಗೆ ಹೇಳಿ ಹೆದರಿಸುವವ. ಹಾಗೇ ಹೇಳುತ್ತಲೇ ಸ್ವತಃ ತಾನೇ ಭಯಪಡುವವ! ಕತೆಗೆ ಪೂರಕವಾಗಿ ಮಲೆನಾಡಿನ ಕತ್ತಲು, ಮಳೆ ಇಲ್ಲಿಯೂ ಇದೆ.
’ಜಾಗ ಹೆಚ್ಚಿಗೆ ಬೇಕು. ಇನ್ನೂ ಒತ್ತು’ ಎಂದು ಪೀಡಿಸುವ ಮುದ್ದಿನ ತಂಗಿಯನ್ನು ಹೆದರಿಸಲು, ತಾನೂ ಹಾಗೆ ಕೇಳಿದಾಗ ಲಿಂಗ ಹೇಳಿದ್ದ ಕತೆಯನ್ನೇ ಕಿಟ್ಟಿ ಇಲ್ಲಿ ಹೇಳುತ್ತಾನೆ. ಇಂಗ್ಲಾದಿಯಲ್ಲಿ, ಸಿಕ್ಕಿಸಿಕ್ಕಿದ್ದನ್ನೆಲ್ಲಾ ಹೆಚ್ಗೆ ಬೇಕು ಅನ್ನುತ್ತಿದ್ದವನೊಬ್ಬನಿಗೆ ಹುಟ್ಟಿದ ಮಗು, ನಾಲ್ಕೈದು ದಿನಗಳಲ್ಲೇ ಹಲ್ಲು, ಉಗುರು ಕೂದಲು ಎಲ್ಲಾ ಬೆಳೆಸಿಕೊಂಡು, ತೊಟ್ಟಿಲಿಗಿಂತ ದೊಡ್ಡದಾಗಿ, ತೊಟ್ಟಿಲೇ ಒಡೆದು ಹೋಗುತ್ತದೆ. ಆ ಮಗು ಬೆಳೆದು ಬೆಳೆದು ಪೂರಾ ದೊಡ್ಡದಾಗಿಬಿಡುತ್ತದೆ, ರಾಕ್ಷಸನಂತೆ. ಆ ರಾಕ್ಷಸನನ್ನು ಕೊಂದು ಹಾಕುವುದು ಇದೇ ಲಿಂಗನ ಅಜ್ಜ! ಇತ್ತು ಕತೆಯಲ್ಲಿ ಮಗು ಬೆಳೆಯುತ್ತಾ ಹೋದಂತೆ ಅತ್ತ ಮನಸ್ಸಿನಲ್ಲಿ ಭಯವೂ ಹೆಚ್ಚುತ್ತಾ ಹೋಗುತ್ತದೆ. ’ಅಂದಿನ ರಾತ್ರಿ’ ಕತೆಯಲ್ಲಿ ’ಈಗೇತಕೆ ಅಂಥ ವಿಷಯಗಳು ನಡೆಯುವುದಿಲ್ಲ’ ಎಂದು ಮಕ್ಕಳು ಕೇಳುತ್ತವೆ. ಆದರೆ ಇಲ್ಲಿ ಕಿಟ್ಟಿ, ತೊಟ್ಟಿಲಲ್ಲಿ ಮಲಗಿದ್ದ ಸ್ವಂತ ತಮ್ಮ ಸದಾನಂದನನ್ನು ತಂಗಿಗೆ ತೋರಿಸಿ, ಅದು ಬೆಳೆಯುತ್ತಿದೆ ಎಂದು ನಂಬಿಸಿ ಭಯಬೀಳಿಸುತ್ತಾನೆ. ತಂಗಿಯನ್ನು ಭಯಬೀಳಿಸುವ ಯತ್ನದಲ್ಲಿ ತಾನೂ ಆ ಭಯದೊಳಗೆ ಸೇರಿಕೊಂಡುಬಿಡುತ್ತಾನೆ. ದೀಪ ಅಲುಗಿದಂತೆಲ್ಲಾ, ಅಲ್ಲಾಡುತ್ತಿದ್ದ, ಗಿಡ್ಡ-ಉದ್ದವಾಗುತ್ತಿದ್ದ ಮನೆಯೊಳಗಣ ವಸ್ತುಗಳ ನೆರಳು ಆತನ ವರ್ಣನೆ ಹಾಗೂ ಕಲ್ಪನೆಗೆ ಹಿನ್ನೆಲೆಯನ್ನೊದಗಿಸುತ್ತವೆ. ತನ್ನ ಕಲ್ಪನೆಗೆ ತಾನೇ ಮೊದಲು ಭಯ ತಡೆಯಲಾರದೆ ಅಮ್ಮಾ ಎಂದು ಕಿರುಚಿಕೊಳ್ಳುತ್ತಾನೆ. ನಿಜವಾಗಿ ಹೆದರುತ್ತಿದ್ದ ತಂಗಿ ಸುಭದ್ರೆ ಅಣ್ಣ ಕಿರುಚಿದ ಮೇಲೆ ಕಿರುಚುತ್ತಾಳೆ. ಅಷ್ಟರಲ್ಲಿ ಮನೆಯ ಹೊರಗಡೆ ಲಿಂಗ ಬಂದಿರುತ್ತಾನೆ, ಕಿಟ್ಟಿಯ ತಂದೆಯ ಜೊತೆಯಲ್ಲಿ. ಕಿಟ್ಟಿಗೆ ಧೈರ್ಯವಾಗುತ್ತದೆ. ಏಕೆಂದರೆ, ’ಎಷ್ಟಾದರೂ ರಾಕ್ಷಸನನ್ನು ಕೊಲ್ಲಿಸಿದವನ ಮೊಮ್ಮಗನೇ ಲಿಂಗ’ ಎಂದು!
ಕುವೆಂಪು ಅವರ ’ಅಂದಿನ ರಾತ್ರಿ’ ಕತೆ ರಚನೆಯಾಗಿದ್ದು ಸುಮಾರು ೧೯೨೬-೨೭ರಲ್ಲಿ. ಅಲ್ಲಿಂದ ಸುಮಾರು ಮೂವತ್ತು ವರ್ಷಗಳ ನಂತರದಲ್ಲಿ ಬಂದಿದ್ದು ತೇಜಸ್ವಿಯವರ ’ಲಿಂಗ ಬಂದ’ ಕತೆ.
ತೇಜಸ್ವಿಯವರು ’ಅಂದಿನ ರಾತ್ರಿ’ ಕತೆಯನ್ನು ಓದಿದ್ದರೆ? ಬಹುಶಃ ಇರಲಾರದು. ಏಕೆಂದರೆ, ಕುವೆಂಪು ಎಂಬ ಮಹಾಕವಿ ಪ್ರತಿಭೆ ತನ್ನ ಶೈಶವಾವಸ್ಥೆಯಲ್ಲಿ ಸಣ್ಣಕತೆಗಳೊಡನೆ ಗುದ್ದಾಡಿದಂತೆ ರಚಿಸಿರುವ ಈ ಸಂಕಲನದ ಕತೆಗಳನ್ನು ಪ್ರಕಟಿಸುವ ಇಚ್ಛೆಯೇ ಕುವೆಂಪು ಅವರಿಗೆ ಇರಲಿಲ್ಲವಂತೆ! ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಹಾಗೂ ದೇಜಗೌ ಅವರ ಒತ್ತಾಯಕ್ಕೆ ಕಟ್ಟು ಬಿದ್ದು ಅನುಮತಿ ನೀಡಿದ್ದರೆಂದು ದೇಜಗೌ ಅವರು ಆ ಸಂಕಲನದ ಮೊದಲ ಮಾತುಗಳಲ್ಲಿ ಹೇಳಿದ್ದಾರೆ. (ತೇಜಸ್ವಿ ಅಂದಿನ ರಾತ್ರಿಯನ್ನು ಓದಿದ್ದರೆ, ಅದನ್ನು ಹಸ್ತಪ್ರತಿ ರೂಪದಲ್ಲಿಯೇ ಓದಿರಬಹುದು, ಅಷ್ಟೆ.)
1936ರಲ್ಲಿ ಪ್ರಕಟವಾದ ಕುವೆಂಪು ಅವರ ‘ಸಂನ್ಯಾಸಿ ಮತ್ತು ಇತರ ಕತೆಗಳು’ ಕಥಾಸಂಕಲನದಲ್ಲಿ ‘ಯಾರೂ ಅರಿಯದ ವೀರ’ ಎಂಬ ಕತೆಯಿದೆ. ಈ ಕತೆಯನ್ನು ತೇಜಸ್ವಿಯವರು ಓದಿರುವ ಸಾಧ್ಯತೆಯೂ ಇದೆ. ಈ ಕತೆಯಲ್ಲೂ ‘ಲಿಂಗ ಬಂದ’ ಕತೆಯ ಬೀಜಗಳಿವೆ! ಇದರಲ್ಲೂ ತುಂಬುಕುಟುಂಬವಿದೆ. ಎಂಟು ವರ್ಷದ ಹುಡುಗ ತಿಮ್ಮು, ಆರು ವರ್ಷದ ಹುಡುಗಿ ಸೀತೆ ಇದ್ದಾಳೆ. ಇಬ್ಬರಿಗೂ ಲಿಂಗನೆಂದರೆ ತುಂಬಾ ಪ್ರೀತಿ. ಹೆಚ್ಚಿನಂಶವೆಂದರೆ, ಈ ಕತೆಯಲ್ಲಿ ಲಿಂಗ ಮಾಜಿ ಕೈದಿ! ಜೊತೆಗೆ ವಿಧುರ. ಆತನಿಗೆ ನಾಗ ಎಂಬ ಮಗನಿದ್ದಾನೆ. ಮುಖ್ಯಾಂಶವೆಂದರೆ ಈ ಕತೆಯಲ್ಲೆಲ್ಲೂ ಭೂತದ ಪ್ರಸ್ತಾಪವಿಲ್ಲ. ಆದರೆ ತುಂಬಿ ಹರಿಯುತ್ತಿರುವ ಹೊಳೆಯೇ ಭೂತದ ಪಾತ್ರವನ್ನು ನಿರ್ವಹಸಿದೆ. ತಾನೂ ಜೈಲಿನಿಂದ ಬಂದವನೆಂದೂ ತಿಳಿದೂ ತನಗೆ ಆಶ್ರಯ ಕೊಟ್ಟ ಸುಬ್ಬಣ್ಣಗೌಡನ ಮನೆತನ ಮಹಾಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನದಿಯ ಪಾಲಾಗುವುದನ್ನು ತಪ್ಪಿಸಲೋಸುಗ ತನ್ನ ಪ್ರಾಣಾರ್ಪಣೆಗೂ ಸಿದ್ಧನಾಗುವ ಲಿಂಗ ಇಲ್ಲಿ ‘ಯಾರೂ ಅರಿಯದ ವೀರ’. ತಾನು ದೋಣಿಯಿಂದ ಹೊಳೆಗೆ ಹಾರಿ ತನ್ನ ಒಡೆಯನ ಕುಟುಂಬವನ್ನು ಕಾಪಾಡುವ ಸಂಕಲ್ಪ ಮಾಡಿ ಹಾಗೆಯೇ ನಡೆದುಕೊಳ್ಳುತ್ತಾನೆ. ಸುರಕ್ಷಿತವಾಗಿ ದಡ ಸೇರಿದ ಸುಬ್ಬಣ್ಣಗೌಡರ ಕುಟುಂಬಕ್ಕೆ ಲಿಂಗ ನಮ್ಮ ಜೊತೆ ಇಲ್ಲ ಎಂಬುದು ತಿಳಿದಾಗ ಅತೀವ ದುಃಖವಾಗುತ್ತದೆ. ಲಿಂಗನ ಮಗ ನಾಗನಂತೂ ತೀವ್ರವಾಗಿ ದುಃಖಿಸುತ್ತಾನೆ. ಆಗ ತಿಮ್ಮು ಮತ್ತು ಸೀತೆ ಇಬ್ಬರೂ ‘ಲಿಂಗ ಬಂದೇ ಬರುತ್ತಾನೆ ಸುಮ್ಮನಿರೊ’ ಎಂದು ಸಮಾಧಾನ ಮಾಡುತ್ತಿರುತ್ತಾರೆ. ಮೂವರೂ ಮಕ್ಕಳ ಮನಸ್ಸಿನ ಮೇಲೆ ಲಿಂಗನ ಗೈರು ತೀವ್ರತರವಾದ ಪರಿಣಾಮ ಬೀರಿರುತ್ತದೆ.
ಆದರೆ ಅದಕ್ಕಿಂತ ಹೆಚ್ಚಾಗಿ, ಮೂರೂ ಕತೆಗಳ ಮುಖ್ಯ ಪಾತ್ರ ಲಿಂಗ ಇಂಗ್ಲಾದಿ, ಕುಪ್ಪಳಿ ಅಥವಾ ದೇವಂಗಿ ಪರಿಸರದಲ್ಲಿ ಇದ್ದ ಪಾತ್ರವಾಗಿದ್ದಿರಬಹುದು. ಆ ಪ್ರದೇಶದಲ್ಲಿ ಮಕ್ಕಳಿಗೆ ಹೇಳುವ ಕತೆಗಳಲ್ಲಿ, ಆತನ ಹಾಗೂ ಆತನ ಕತೆಗಳ ಪ್ರಸ್ತಾಪ ಹೆಚ್ಚಾಗಿ ಇದ್ದಿರಲೂಬಹುದು. ಕುವೆಂಪು ಅವರು ಚಿಕ್ಕವನಾಗಿದ್ದಾಗ ಆತನನ್ನು ನೋಡಿರುವ ಸಾಧ್ಯತೆಯೂ ಇದ್ದಿರಬಹುದು. ಕುವೆಂಪು ಅವರ ಇನ್ನೊಂದು ಕತೆ ’ಕಥೆಗಾರ ಮಂಜಣ್ಣ’ದಲ್ಲಿ, ಮಂಜಣ್ಣ ಚಳಿ ಕಾಯಿಸಿಕೊಳ್ಳಲು ಮಕ್ಕಳ ನಡುವೆ ಜಾಗ ಮಾಡಿಕೊಳ್ಳುವ ಸಂದರ್ಭಕ್ಕೂ ’ಲಿಂಗ ಬಂದ’ ಕತೆಯಲ್ಲಿ ಲಿಂಗ ಕಿಟ್ಟಿ-ಸುಭದ್ರೆಯರ ನಡುವೆ ಜಾಗ ಮಾಡಿಕೊಳ್ಳುವ ಸಂದರ್ಭಕ್ಕೂ ಸ್ವಲ್ಪಮಟ್ಟಿನ ಹೋಲಿಕೆಯಿದೆ. ಅಲ್ಲಿ ಕುಂಬಳಕಾಯಿ ಬೆಳೆಯುತ್ತಾ ಹೋಗುತ್ತದೆ; ಇಲ್ಲ ತೊಟ್ಟಿಲಲ್ಲಿದ್ದ ಮಗು ಸದಾನಂದನೇ ಬೆಳೆಯುತ್ತಾ ಹೋಗುತ್ತದೆ. ಬಾಲ್ಯದಲ್ಲಿ ಯಾರಿಂದಲಾದರೂ (ಅವರ ಅಜ್ಜಿ, ತಾಯಿ ಅಥವಾ ಕುವೆಂಪು!) ಕತೆ ಕೇಳುವಾಗಲೋ, ಮಾತುಕತೆಯ ನಡುವೆಯೊ ತೇಜಸ್ವಿಯೊಳಗೆ ಲಿಂಗ ಬಂದಿರಬಹುದು! ಬಾಲ್ಯದಲ್ಲಿ ಕೇಳಿರಬಹುದಾದ ಕತೆಯೊಂದು ಕುವೆಂಪು ತೇಜಸ್ವಿಯವರನ್ನು ಆವರಸಿಕೊಂಡಿರುವ ಹಾಗೂ ಅಭಿವ್ಯಕ್ತಗೊಂಡಿರುವ ರೀತಿ ಅಸಮಾನ್ಯವಾದುದು.
No comments:
Post a Comment