Monday, August 04, 2014

‘ಪದಧ್ವನಿ’ ಅಂದರೆ… ...

ಭಾರತೀಯ ಕಾವ್ಯಮೀಮಾಂಸೆಯ ಧ್ವನಿ ಸಿದ್ಧಾಂತದ ಪ್ರಬೇಧಗಳಲ್ಲಿ ಪದಧ್ವನಿ ಎಂಬುದೊಂದುಂಟು. ‘ಶಬ್ದ ಶಕ್ತಿಮೂಲ’ ಧ್ವನಿಯನ್ನು ಹೇಳುವಾಗ, ಕೇವಲ ಒಂದು ಪದದ ಮೇಲೆ ಒತ್ತು ಬೀಳುವುದನ್ನು ಹಾಗೂ ಆ ಪದದಿಂದಲೇ ಒಂದು ಅಲಂಕಾರ ಧ್ವನಿಸುವುದನ್ನು ಪದಧ್ವನಿ ಎನ್ನಲಾಗುತ್ತದೆ.
ವಿಚ್ಛಿತ್ತಿಶೋಭಿನೈಕೇನ ಭೂಷಣೇನೇವ ಭಾಮಿನಿ
ಪದದ್ಯೋತ್ಯೇನ ಸುಕವೇರ್ಧ್ವನಿನಾ ಭಾತಿ ಭಾರತಿ||
ರಮಣೀಯವಾಗಿ ಶೋಭಿಸುವ ಒಂದೇ ಆಭರಣದಿಂದ ಸ್ತ್ರೀ ಹೇಗೆ ಕಳೆಗೂಡುವಳೋ ಹಾಗೆ ಒಂದು ಪದವು ಹೊಳೆಯಿಸುವ ಧ್ವನಿಯಿಂದಲೇ ಸುಕವಿಯ ವಾಣಿ ಕಳೆಗೂಡುತ್ತದೆ! ಹಲವಾರು ಉದಾಹರಣೆಗಳಿಂದ ಅದನ್ನು ಮನನ ಮಾಡಿಕೊಳ್ಳಬಹುದು.
ಸಂಸ್ಕೃತ ಕಾವ್ಯದಿಂದಲೇ ಆರಂಭಿಸುವುದಾದರೆ, ಭಾಸನ ಊರುಭಂಗ ನಾಟಕದಲ್ಲಿ, ತೊಡೆ ಮುರಿದುಕೊಂಡು ಮರಣಶ್ಯಯ್ಯೆಯಲ್ಲಿ ಬಿದ್ದಿರುವ ದುರ್ಯೋಧನನಿಗೂ ಆತನ ಕಿರಿಯ ಮಗ ದುರ್ಜಯನಿಗೂ ನಡೆಯುವ ಸಂಭಾಷಣೆಯನ್ನು ಗಮನಿಸಬಹುದು. ತೊಡೆಯ ಮೇಲೆ ಕೂರಲು ಬಂದ ದುರ್ಜಯನನ್ನು ದೊರೆ ತಡೆದು, ‘ಈ ಪೀಠ ನಿನಗೆ ಇನ್ನು ಸಿಗುವುದಿಲ್ಲ’ ಎನ್ನುತ್ತಾನೆ. ‘ಮಹಾರಾಜನು ಹೋಗುವುದೆಲ್ಲಿಗೆ?’ ಎಂಬ ದುರ್ಜಯನ ಪ್ರಶ್ನೆಗೆ ‘ನೂರು ಮಂದಿ ತಮ್ಮಂದಿರ ಹಿಂದೆ ಹೋಗುತ್ತೇನೆ.’ ಎನ್ನುತ್ತಾನೆ ದುರ್ಯೋಧನ. ಅಷ್ಟರಲ್ಲಿ ಆತನ ನೂರು ಮಂದಿ ತಮ್ಮಂದಿರೂ ಸತ್ತುಹೋಗಿರುತ್ತಾರೆ! ಆದರೆ ಅದು ಮಗುವಿಗೆ ಅರ್ಥವಾಗುವುದಾದರೂ ಹೇಗೆ? ‘ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗು’ ಎನ್ನುತ್ತಾನೆ. ಆಗ ದುರ್ಯೋಧನ ‘ಹೋಗು ಮಗು. ಹೀಗೆಂದು ವೃಕೋದರನನ್ನು ಕೇಳು’ ಎನ್ನುತ್ತಾನೆ. ಈ ಮಾತು ಆ ಮಗುವಿಗೆ ಎಷ್ಟು ಅರ್ಥವಾಯಿತೊ ಇಲ್ಲವೊ. ಆದರೆ ಓದುಗನ ಹಾಗೂ ನಾಟಕದ ನೋಡುಗನ ಮನಸ್ಸು ಒಂದು ಕ್ಷಣ ವಿಹ್ವಲಗೊಳ್ಳುವುದು ಮಾತ್ರ ನಿಜ. ಅಲ್ಲಿ ವೃಕೋದರ ಅಂದರೆ ತೋಳನಂತೆ ಹೊಟ್ಟೆಯುಳ್ಳವನು ಅಂದರೆ ಭೀಮ! ಇನ್ನೇನು ಪ್ರಾಣ ಬಿಡಲಿರುವ ದುರ್ಯೋಧನನ ಜೊತೆಯಲ್ಲಿ ಹೋಗಲು ಆತನ ಮಗನಿಗೆ ಅನುಮತಿ ಕೊಡಬೇಕಾದವನು ಭೀಮ! ಭೀಮ ಇಲ್ಲಿ ಯುದ್ಧೋನ್ಮತ್ತನಾದವನು. ಆತನಿಗೆ ಕೌರವರ ನಾಶ ಮುಖ್ಯವೇ ಹೊರತು, ಚಿಕ್ಕವರು ದೊಡ್ಡವರು ಎಂಬದಲ್ಲ. ದುರ್ಯೋಧನನ ಸಂತತಿಯನ್ನೇ ಕೊನೆಗಾಣಿಸುವ ಪ್ರತಿಜ್ಞೆ ಮಾಡಿದವನು ಮಗುವೆಂದು ಕರುಣೆ ತೋರುವುದಿಲ್ಲ. ಆದ್ದರಿಂದಲೇ ದುರ್ಯೋಧನ ಭೀಮನನ್ನು ಕೇಳಹೋಗು ಎನ್ನುತ್ತಾನೆ. ಭೀಮ ಅನ್ನುವುದಕ್ಕಿಂತ ವೃಕೋದರ ಎಂಬ ಪದ ಈ ಸಂದರ್ಭಕ್ಕೆ ಹೆಚ್ಚು ಅರ್ಥವನ್ನೊದಗಿಸುತ್ತದೆ. ತೋಳ ಎಂಬುದು ಹಸಿವೆಯ ಸಂಕೇತ. ತೋಳಕ್ಕೆ ಅರ್ಥಾತ್ ಹಸಿವಿಗೆ ಯಾವುದೇ ಕರುಣೆಯಿರುವುದಿಲ್ಲ. ಅದು ಹಸುಗೂಸನ್ನಾದರೂ ಕೊಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತದೆ. ಆ ಕಾರಣದಿಂದ ಇಲ್ಲಿ ಭೀಮ ಎನ್ನುವುದಕ್ಕಿಂತ ವೃಕೋದರ ಪದವೇ ಹೆಚ್ಚು ಧ್ವನಿಪೂರ್ಣವೆನ್ನಿಸುತ್ತದೆ.

ರನ್ನನ ಗದಾಯುದ್ಧದ ‘ಕುರುಧರೆಯೊಳ್ ಕುರುಪತಿಯನರಸಿದಂ ಪವನಸುತಂ’ ಎಂಬ ಮಾತನ್ನು ಗಮನಿಸಬಹುದು. ಕುರುಪತಿ ರಾಜ ದುರ್ಯೋಧನ. ರಾಜನನ್ನು ಆತನ ರಾಜ್ಯದಲ್ಲಿಯೇ ಹುಡುಕುವುದೆಂದರೆ ಎಂತಹ ಆಭಾಸವಾಗುತ್ತದೆ ಎಲ್ಲವೆ? ಇನ್ನು ಮುಂದುವರೆದರೆ, ಹುಡುಕುತ್ತಿರುವವನು ಭೀಮ ಅನ್ನುವುದಕ್ಕಿಂತ ಪವನಸುತ ಎಂಬುದು ಹೆಚ್ಚು ಸಂಗತ. ಪವನ ಎಂದರೆ ಗಾಳಿ; ಗಾಳಿ ಇಲ್ಲದ, ಪ್ರವೇಶ ಮಾಡದ ಜಾಗವೇ ಇಲ್ಲ! ಹಾಗಿರುವಾಗ, ಪವನಸುತನಾದ ಭೀಮ ಕುರುಪತಿಯಾದ ದುರ್ಯೋಧನನ್ನು ಕುರುಧರೆಯಲ್ಲೇ ಹುಡುಕುತ್ತಿದ್ದಾನೆ! ಇಲ್ಲಿ ಕುರುಧರೆ, ಕುರುಪತಿ ಮತ್ತು ಪವನಸುತ ಈ ಮೂರೂ ಪದಗಳು ಪದಧ್ವನಿಯ ಅತ್ಯುತ್ತಮ ಉದಾಹರಣೆಗಳಾಗಿವೆ. ರನ್ನನ ಇನ್ನೊಂದು ಪ್ರಸಿದ್ಧ ಮಾತು, ನೀರೊಳಿರ್ದುಂ ಬೆಮರ್ತನ್ ಉರಗಪತಾಕಂ ಎಂಬುದು. ನೀರೊಳಗಿದ್ದೂ ಬೆವರಬೇಕಾದರೆ ಆತನ ಮೇಲೆ ಇದ್ದ ಒತ್ತಡವೆಷ್ಟು? ಆತನ ಕ್ರೋಧವೆಂತದ್ದು? ಇದೆಲ್ಲವನ್ನೂ ಓದುಗನಿಗೆ ಮನಗಾಣಿಸಬೇಕಾದರೆ, ಇಲ್ಲಿ ದುರ್ಯೋಧನ ಎಂದೊ, ಸುಯೋಧನ ಎಂದೊ ಕರೆಯುವ ಆಗಿಲ್ಲ. ಉರಗಪತಾಕ ಎಂಬ ಪದವೇ ದುರ್ಯೋಧನನ ಮತ್ಸರದ ಸ್ವಭಾವವನ್ನು ಮನಗಾಣಿಸುತ್ತದೆ.
ಬೇಂದ್ರೆಯವರ ‘ಮೂವತ್ತು ಮೂರು ಕೋಟಿ’ ಕವನದ ಸಾಲುಗಳು:
ಮೂವತ್ತು ಮೂರು ಕೋಟೀ ಮೂವತ್ತು ಮೂರು ಕೋಟೀ!
ಬಯಕೆಗಳು ಬಸಿರುಗಳು ಹಡೆದದ್ದು ಹಿಂಗಿದ್ದು
ಮೂವತ್ತು ಮೂರು ಕೋಟಿ!
ಸೂಲಗಳು
ಮೂವತ್ತು ಮೂರು ಕೋಟಿ!!
ಎಂಬ ಸಾಲುಗಳನ್ನು ಗಮನಿಸಬೇಕು. ಭಾರತದ ಜನಸಂಖ್ಯೆ ಮೂವತ್ತು ಮೂರು ಕೋಟಿ. ಅವರನ್ನು ಹಡೆದದ್ದು ಬಯಸಿ ಬಯಸಿ! ಆದರೆ ಅವು ಹಿಂಗಿ ಹೋಗುತ್ತಿವೆ! ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ವೀರ್ಯತೆಯನ್ನು ಪ್ರದರ್ಶಿಸಿದವರಿಗೆ ಬೇಂದ್ರೆ ಬೀಸಿದ ಚಾಟಿ ಇದು! ಸೂಲ ಎಂಬ ಪದಕ್ಕೆ ಹೆರಿಗೆ, ಶೂಲ(ಗಲ್ಲು), ಚುಚ್ಚುವುದು ಮೊದಲಾದ ಅರ್ಥಗಳಿವೆ. ಮೇಲ್ನೋಟಕ್ಕೆ ಮೂವತ್ತು ಮೂರು ಕೋಟಿ ಹೆರಿಗೆಗಳು ಎನ್ನಿಸಿದರೆ, ಒಳನೋಟಕ್ಕೆ ಮೂವತ್ತುಮೂರುಕೋಟಿ ಶೂಲಗಳು ಮಗ್ಗುಲ ಮುಳ್ಳಾಗಿ ಚುಚ್ಚುತ್ತಿವೆ ಎನ್ನುವುದನ್ನು ಧ್ವನಿಸುತ್ತದೆ. ಇಲ್ಲಿ ಸೂಲ ಎಂಬ ಒಂದೇ ಪದ ಇಡೀ ಕವಿತೆಯ ಅರ್ಥಸಾಧ್ಯತೆಯನ್ನು ಬಹುವಾಗಿ ಅರ್ಥಪೂರ್ಣವಾಗಿ ವಿಸ್ತರಿಸಿಬಿಡುತ್ತದೆ.
ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ನಾಟಕದ ತುದಿಯಲ್ಲಿ, ಪಾಂಡವರಿಗೆ ಕರ್ಣ ಕುಂತಿಯ ಮಗ, ನಮಗೆ ಸ್ವತಃ ಅಣ್ಣ ಎಂಬ ಸತ್ಯ ಗೊತ್ತಾಗುತ್ತದೆ. ಆಗ ಭೀಮನ ಬಾಯಿಯಲ್ಲಿ ಹೊರಡುವ ಉದ್ಘಾರ ‘ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ!’ ಎಂಬುದು. ಈ ಮಾತಿನೊಂದಿಗೆ ದೃಶ್ಯವೂ ಮುಕ್ತಾಯವಾಗುತ್ತದೆ. ಮಿಡುಕುಳ್ಳ ಗಂಡನಾಗಿ ದ್ರೌಪದಿಯ ಶಪಥಕ್ಕೆ ಶಸ್ತ್ರವಾಗಿದ್ದವನು ಭೀಮ. ಇಡೀ ಕೌರವರ ಸಂತತಿಯನ್ನು ಯಮಪುರಿಗಟ್ಟುವಲ್ಲಿ ಆತನದೇ ಪ್ರಮುಖ ಪಾತ್ರ. ಆತ ಯುದ್ಧಭಯಂಕರನೂ ಆಗಿದ್ದಂತೆ ಯುದ್ಧೋನ್ಮಾದನೂ ಆಗಿಬಿಟ್ಟಿದ್ದ. ಅದಕ್ಕೆ ಕಾರಣ, ಧರ್ಮಪರರಾಗಿದ್ದ ತನ್ನವರಿಗೆ ಒದಗಿದ ಕಷ್ಟಗಳ ಸರಮಾಲೆ. ಅದಕ್ಕೆ ಕಾರಣ, ದುರ್ಯೋಧನ ಮೊದಲಾದವರು. ಆ ದುರ್ಯೋಧನನಿಗೆ ಬೆಂಗಾವಲಾಗಿ ಬೆಂಬಲವಾಗಿ ನಿಂತವನು ಕರ್ಣ. ಆತ ಸತ್ತ ಮೇಲೆ, ಕರ್ಣ ಅವರೆಲ್ಲರ ಹಿರಿಯ ಎಂದು ತಿಳಿದಾಗ, ಧರ್ಮವಿಜಯಕ್ಕಾಗೇ ಯುದ್ಧ ಮಾಡುತ್ತಿದ್ದೇನೆ ಎಂದುಕೊಂಡಿದ್ದ ಭೀಮನ ಮನಸ್ಥಿತಿ ಹೇಗಾಗಿರಬೇಡ! ಧರ್ಮ, ಯುದ್ಧ, ಸಂಬಂಧಗಳು ಎಲ್ಲವೂ ಅರ್ಥಹೀನವೆನ್ನಿಸಿಬಿಡುತ್ತದೆ. ಅದುವರೆಗೂ ಮಹೋನ್ನತ ಉದ್ದೇಶಕ್ಕಾಗಿ ನಡೆಯುತ್ತಿದೆ ಎಂದುಕೊಂಡಿದ್ದ ಯುದ್ಧ ಅರ್ಥಹೀನವಾಗುತ್ತದೆ. ಅದನ್ನು ಭೀಮನ ಒಂದು ಮಾತು ಇಡಿಯಾಗಿ ಕಟ್ಟಿಕೊಟ್ಟಿದೆ. ಆ ಮಾತಿಗೆ ಯಾವುದೇ ವಿವರಣೆಗಳನ್ನು ಕವಿ ಕೊಡದೆ ದೃಶ್ಯವನ್ನು ಕೊನೆಗಾಣಿಸಿರುವುದೇ ಅದರ ಅರ್ಥಸಾಧ್ಯತೆಯನ್ನು ಇನ್ನೂ ಹೆಚ್ಚಿಸಿರುತ್ತದೆ.
ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ, ಸೀತೆಯ ಪ್ರಭಾವದಿಂದ, ಸೀತಾಪಹರಣಕ್ಕೆ ಕಾರಣಳಾಗಿದ್ದ ಚಂದ್ರನಖಿಯೂ ಉದ್ಧಾರಪಥ ಹಿಡಿದ ಸೂಚನೆಯನ್ನು ಅರಿತ ರಾವಣ, ಸೀತೆ, ಚಂದ್ರನಖಿಯರ ಎದುರಿಗೇ ಆಡುವ ಮಾತುಗಳಿವು.
ನೀನಾದೊಡಂ, ಅನಲೆಯಾದೊಡಂ, ಮತ್ತಂ ಇನ್ನಾರಾದೊಡಂ
ಇತ್ತಲ್ ಈ ಬನಕೆ ಕಾಲಿಟ್ಟುದಂ ಕೇಳ್ದೆನಾದೊಡೆ… (ಎನ್ನುವಷ್ಟರಲ್ಲಿ ಹಕ್ಕಿಯೊಂದು ಕೆಡವಿದ ಹಾಲಿವಾಣ ಮರದ ಕೆಂಪು ಹೂವೊಂದು ರಾವಣನ ತಲೆಯ ಮೇಲೆ ಬೀಳುತ್ತದೆ! ಅದನ್ನು ಗಮನಿಸಿ ತಲೆಕೊಡವಿದ ರಾವಣ)
ಕೊರಳ್ ಉರುಳ್ದಪುದು’
ಎಂದು ಮಾತನ್ನು ಪೂರೈಸುತ್ತಾನೆ. ಆತ ಮಾತನ್ನು ಆರಂಭಿಸಿದ ರಭಸ ಮುಗಿಸುವಷ್ಟರಲ್ಲಿ ಕಾಣೆಯಾಗಿಬಿಟ್ಟಿರುತ್ತದೆ. ಇಲ್ಲಿ ಕೊರಳ್ ಉರುಳುವುದು ಯಾರದು? ಹೂವನ್ನು ರಾವಣನ ಮೇಲೆ ಕೆಡವಿದ ಹಕ್ಕಿಯದೆ? ಎಂಬ ಸಂದಗ್ಧ ಒಂದು ಕ್ಷಣ ಓದುಗನಿಗೆ ಮೂಡಿದರೆ ಆಶ್ಚರ್ಯವೇನಿಲ್ಲ! ಇನ್ನು ಅನಲೆ ಚಂದ್ರನಖಿಯರ ತಲೆಯನ್ನು ತೆಗೆಯುವಷ್ಟು ಕ್ರೂರಿಯಲ್ಲ ರಾವಣ. ಇಲ್ಲಿ ಕೊರಳು ಉರುಳಲು ಸಿದ್ಧವಾಗಿರುವುದು ಸ್ವತಃ ರಾವಣನದೆ! ಹಳ್ಳಿಯ ಕಡೆ ಜಾತ್ರೆಯಲ್ಲಿ ಬಲಿ ಕೊಡಲಿರುವ ಕೋಳಿ ಕುರಿಗಳಿಗೆ ತೀರ್ಥವೆಂದು ನೀರನ್ನು ಪ್ರೋಕ್ಷಿಸಿ, ಹೂವನ್ನು ಬಲಿಯ ತಲೆಗೆ ಮಡಿಸುತ್ತಾರೆ. ಹಾಗೆ ರಾವಣನ ತಲೆಯ ಮೇಲೆ ಹೂವು ಬಿದ್ದಿದೆ! ಅದೂ ಕೆಂಪು ಹೂವು. ರಾವಣನ ತಲೆ ಉರುಳುವುದೇ ಸಹಜ ಪ್ರಕ್ರಿಯೆ. ಸೃಷ್ಟಿಯ ರಚನೆಯಲ್ಲಿ ಹೂವೊಂದು ತೊಟ್ಟು ಕಳಚಿ ಬೀಳುವುದೂ, ರಾಮಾಯಣದ ಕಥಾಚಕ್ರದಲ್ಲಿ ರಾವಣನ ತಲೆ ಉರುಳುವುದೂ ಎರಡೂ ಸಹಜ ಕ್ರಿಯೆಗಳೇ ಆಗಿವೆ!
ಕವಿಯಿಂದ ಒಮ್ಮೆ ಮಾತ್ರ ರಚಿತವಾಗುವ ಕಾವ್ಯ ಓದುಗನಿಂದ ಮತ್ತೆ ಮತ್ತೆ ನೂತನವಾಗಿ ರಚಿತವಾಗುತ್ತಲೇ ಸಾಗುತ್ತದೆ. ಅಂತ ಕಾವ್ಯದ ಓದು ಹೆಚ್ಚು ಹೆಚ್ಚು ಅರ್ಥಪೂರ್ಣವೂ ಆಗಿರಬೇಕು. ಓದು ಅರ್ಥಪೂರ್ಣವಾಗಬೇಕಾದರೆ ಹಲವಾರು ಕೀಲಿಕೈಗಳು ಬೇಕಾಗುತ್ತವೆ. ಅವುಗಳಲ್ಲಿ ಈ ಪದಧ್ವನಿಯೂ ಒಂದು. ಇದರ ಅರಿವು ಕಾವ್ಯವನ್ನು ಸಹೃದಯನಿಗೆ ಮತ್ತಷ್ಟು ಆಪ್ತವಾಗಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

2 comments:

Badarinath Palavalli said...

ಪದ ದ್ವನಿಯ ವಿವರಣೆ ನಮಗೆಲ್ಲ ಉಪಯುಕ್ತವಾಗಿದೆ.

ಅರವಿಂದ said...

ಬಹಳ ಚನ್ನಾಗಿದೆ....