Thursday, January 22, 2015

ಭಗವಂತನ ನಿರಂಕುಶೇಚ್ಛೆಯ ವಿರುದ್ಧ ದಂಗೆಯೆದ್ದ ಬಾಲಕ!

ಒಂದು ಬೈಗು. ಸ್ಕೂಲಿನಿಂದ ಮನೆಗೆ ಬಂದು ಇತರರೊಡನೆ ತಿಂಡಿ ತಿಂದೆ. ಹೊರಗೆ ಅಲೆಯಲು ಹೋಗುವ ಮನಸ್ಸು ಕುದಿಯತೊಡಗಿತು. ಜೊತೆಯ ಸಹಪಾಠಿಗಳು ಯಾರೊಬ್ಬರೂ ನನ್ನೊಡನೆ ಬರಲೊಪ್ಪಲಿಲ್ಲ. ನಾನೊಬ್ಬನೆ ಹೊರಟೆ ರಬ್ಬರು ಬಿಲ್ಲನ್ನು ಕೈಯಲ್ಲಿ ಹಿಡಿದು, ಕಲ್ಲಿನ ಚೀಲವನ್ನು ಬಗಲಿಗೆ ಸಿಕ್ಕಿಸಿಕೊಂಡು, (ಆ ಕಲ್ಲಿನ ಚೀಲ ಅದರ ಹಿಂದಿನ ಅವತಾರದಲ್ಲಿ ನನ್ನದೆ ಇಜಾರದ ಒಂದು ಕಾಲಾಗಿತ್ತು. ಇಜಾರ ಮಂಡಿಯ ಹತ್ತಿರ ಸವೆದು ತೂತು ಬೀಳಲು ಅದನ್ನು ಅಲ್ಲಿಗೇ, ಹರಿದು ಚಡ್ಡಿಯನ್ನಾಗಿ ಮಾಡಿ ಹಾಕಿಕೊಂಡಿದ್ದೆ. ಉಳಿದ ಕತ್ತರಿಸಿದ ಎರಡು ಕಾಲಿನ ಅರ್ಧ ಭಾಗಗಳನ್ನು ಒಂದು ತುದಿ ಹೊಲಿದು ’ಚಾಟರ್ ಬಿಲ್ಲಿ’ಗೆ ಉಪಯೋಗಿಸಲು ಹರಳುಕಲ್ಲು ತುಂಬುವ ಚೀಲಗಳನ್ನಾಗಿಸಿದ್ದೆ. ಭಾರವಾಗಿದ್ದ ಚೀಲವನ್ನು ಬಗಲಿಗೆ ಸಿಕ್ಕಿಸಿಕೊಳ್ಳಲು ಅನುಕೂಲವಾಘುವಂತೆ ನೇಲುಹಗ್ಗಗಳನ್ನು ಪಟ್ಟಿಯಾಗಿ ಹೊಲೆದಿದ್ದೆ.)

ಸೂರ್ಯ ಆಗತಾನೆ ಪಶ್ಚಿಮದಿಕ್ಕಿನ ಕಾಡುಗಳಲ್ಲಿ ಕಣ್ಮರೆಯಾಗಿದ್ದ. ಸಂಧ್ಯಾರಾಗ ಹಸುರನ್ನೆಲ್ಲ ಮೀಯಿಸಿತ್ತು. ಗೂಡುಗೊತ್ತುಗಳೀಗೆ ಹಿಂತಿರುಗುತ್ತಿದ್ದ ಹಕ್ಕಿಗಳ ತರತರಹ ಉಲಿ ಬನದ ನೀರವತೆಗೆ ರಾಗರೋಮಾಂಚನವೀಯುತ್ತಿತ್ತು. ಅದು ಹೊರತು ಬೇರೆ ಯಾವ ಸದ್ದೂ ಇರಲಿಲ್ಲ. ನಾನು ಹೋಗುತ್ತಿದ್ದ ಕಾಡು ಒಂದು ಪೃಶಾಂತ ವಾತಾವರಣದಿಂದ ಧ್ಯಾನಮಯವಾಗಿತ್ತು. ನನ್ನ ಕೈ ಬಿಲ್ಲನ್ನು ಹಿಡಿದಿದ್ದರೂ, ಕಣ್ಣು ಗುರಿಯನ್ನು ಹುಡುಕುವ ಕಾರ್ಯದಲ್ಲಿ ಮಗ್ನವಾದಂತೆಯಿದ್ದರೂ ಮನಸ್ಸು ಏನೇನನ್ನೊ ಮೆಲುಕುಹಾಕುತ್ತಿತ್ತು. ಒಮ್ಮೊಮ್ಮೆ ಅದು ತುಂಬ ಗಹನವೂ ಉನ್ನತವೂ ಆದ ವಿಚಾರಗಳ ಕಡೆಗೂ ಏರಿ ಇಳಿಯುತ್ತಿತ್ತು. ಪಾಪ, ಪುಣ್ಯ, ದೇವರು, ಜಗತ್ತು, ಸೃಷ್ಟಿ, ವಿಧಿ, ಕಾಡು, ಬೆಟ್ಟ, ಸೂರ್ಯ, ಚಂದ್ರ -ಹೀಗೆಲ್ಲ ಅಲೆಯುತ್ತಿತ್ತು ಆಲೋಚನೆ, ಅಥವಾ ಅದರ ಅಂಬೆಗಾಲಿಕ್ಕುವ ಒಂದು ಮನಃಸ್ಥಿತಿ!
ಅಷ್ಟರಲ್ಲಿ ಬಾಯಲ್ಲಿದ್ದ ಪೆಪ್ಪರಮೆಂಟು ಕರಗಿ ಖರ್ಚಾಗಿತ್ತು. ಮತ್ತೆ ಕೈ ತನಗೆ ತಾನೆ ಸ್ವಯಂಚಾಲಿತವಾಗಿ ಜೇಬಿನೊಳಗೆ ತೂರಿ ಹುಡುಕಿತು. ಇಲ್ಲ, ಪೆಪ್ಪರಮೆಂಟೆಲ್ಲ ಮುಗಿದು ಹೋಗಿವೆ! ಆದರೆ, ತಿಂಡಿಯ ಕೊಸರಾಗಿ ಬಂದಿದ್ದ ಒಂದು ಬಾಳೆಯ ಹಣ್ಣು ಜೇಬಿನ ಆಶ್ರಯ ಪಡೆದಿತ್ತು. ಕೈ ಅದನ್ನು ಈಚೆಗೆ ಎಳೆಯಿತು. ಸಿಪ್ಪೆಯನ್ನು ಸ್ವಲ್ಪಸ್ವಲ್ಪವಾಗಿ ಸುಲಿಯುತ್ತಾ ಅಷ್ಟಷ್ಟೆ ಭಾಗವನ್ನು ಕಚ್ಚಿಕಚ್ಚಿ ತಿನ್ನತೊಡಗಿತು ಬಾಯಿ. ಇಷ್ಟೆಲ್ಲ ಅನೈಚ್ಛಿಕವೊ ಎಂಬಂತಹ ಕ್ರಿಯೆ ನಡೆಯುತ್ತಿದ್ದಾಗ ಕಾಲುಗಳು ನಡೆಯುವ ತಮ್ಮ ಕೆಲಸವನ್ನು ಮಾಡುತ್ತಲೆ ಇದ್ದುವು; ಕಣ್ಣುಗಳು ಪೊದೆ ಮರಗಳಲ್ಲಿ ದಿಟ್ಟಿನೆಟ್ಟು ಹುಡುಕುತ್ತಲೆ ಇದ್ದುವು; ಮನಸ್ಸೂ ತನ್ನ ಪಾಡಿಗೆ ತಾನು ಚಿಂತನ ಕಾರ್ಯದಲ್ಲಿ ತೊಡಗಿಯೆ ಇತ್ತು:
ಈ ಕಾಡು, ಈ ಗುಡ್ಡಸಾಲು, ಈ ಮೋಡ, ಈ ಆಕಾಶ ಇದನ್ನೆಲ್ಲ ಮಾಡಿದ್ದಾನಲ್ಲಾ ದೇವರು, ಅವನು ಎಂತಹ ಅದ್ಭುತ ಶಕ್ತಶಾಲಿಯಾಗಿರಬೇಕು? ಬಾವಿಸುತ್ತೇನೆ. ಎಲ್ಲ ಅವನ ಇಚ್ಛೆಯಂತೆಯೆ ಆಗಿದೆ. ಅವನ ಇಚ್ಛೆಗೆ ಎಲ್ಲವೂ ಅಧೀನ. ಈ ಪೊದೆಯ ಬಳಿ ಹಸುರಿನ ಮೇಲೆ ಅರ್ಧ ಕಾಣಿಸಿಕೊಂಡು ಇಲ್ಲಿ ಬಿದ್ದಿರುವ ಈ ಕಲ್ಲುಗುಂಡು ಇಲ್ಲಿಯೇ ಹೀಗೆಯೇ ಬಿದ್ದಿರಬೇಕೆಂದು ದೇವರು ನಿಯಮಿಸಿದ್ದಾನೆ. ಆದ್ದರಿಂದಲೆ ಅದು ಇಲ್ಲಿಯೇ ಬಿದ್ದಿದೆ, ಇಲ್ಲಿಂದ ಹಂದುವುದಿಲ್ಲ. ಎಲ್ಲ ಭಗವಂತನ ವಜ್ರನಿಯಮಕ್ಕೆ ಅಧೀನ. ಸ್ವತಂತ್ರೇಚ್ಛೆ ಎಲ್ಲಿಯೂ ಇಲ್ಲ. ಯಾರಿಗೂ ಇಲ್ಲ -ಇದ್ದಕ್ಕಿದ್ದ ಹಾಗೆ ಹುಡುಗನ ಮನಸ್ಸು ಸೆರೆಯಲ್ಲಿ ಸಿಕ್ಕಿಬಿದ್ದ ಸಿಂಹದಂತಾಗಿ ಕಂಬಿಗಳನ್ನೆಲ್ಲ ಕಿತ್ತು ಬಿಡುವಂತೆ ನುಗ್ಗತೊಡಗಿತು. ಛೆಃ ಇದೆಂತಹ ದಾಸ್ಯ?
ಅಷ್ಟು ಹೊತ್ತಿಗೆ ಬಾಳೆಯಹಣ್ಣು ತಿಂದು ಮುಗಿದು, ಸಿಪ್ಪೆ ಮಾತ್ರ ಕೈಯಲ್ಲಿತ್ತು. ಕೈ ಯಾಂತ್ರಿಕವಾಗಿ ಅದನ್ನು ಬಲವಾಗಿ ಎಸೆಯಿತು. ಅದು ತುಸುವೆ ದೂರದಲ್ಲಿದ್ದ ಒಂದು ಮುಳ್ಳುಪೊದೆಯ ಹರೆಗೆ ತಗುಲಿ ಒಂದೆರಡು ಕ್ಷಣ ಅಲ್ಲಿ ನೇತಾಡಿ, ಕೆಳಗೆ ನೆಲದ ಹಸುರಿಗೆ ಬಿತ್ತು. ಕಾಲು ತನ್ನ ಪಾಡಿಗೆ ತಾನು ಮುಂದುವರಿಯಿತು. ಹತ್ತಿಪ್ಪತ್ತು ಮಾರು.
ಭಗವಂತನ ನಿರಂಕುಶೇಚ್ಛೆಯ ಪ್ರಭುತ್ವದ ಮೇಲೆ ದಂಗೆಯೆದ್ದಿದ್ದ ನನ್ನ ಮನಸ್ಸು, ಒಡನೆಯೆ, ಆಗತಾನೆ ನಡೆದಿದ್ದ ನಿದರ್ಶನವನ್ನು ಆಶ್ರಯಿಸಿ ಪ್ರತಿಭಟಿಸಲು ಹೆಡೆಯೆತ್ತಿ ನಿಂತಿತ್ತು.
ನೋಡಿದೆಯಾ ದೇವರ ಇಚ್ಛೆಯನ್ನು ಉಲ್ಲಂಘಿಸಲು ಯಾರಿಗೂ ಎಂದಿಗೂ ಸಾಧ್ಯವಿಲ್ಲ. ಈ ಬಾಳೆಹಣ್ಣಿನ ಸಿಪ್ಪೆ ಇಲ್ಲಿಯೇ ಇಂಥ ಜಾಗದಲ್ಲಿಯೆ ಬೀಳಬೇಕೆಂದು ಅವನು ನಿಯಮಿಸಿಬಿಟ್ಟಿದ್ದ. ಆದ್ದರಿಂದ ಅದು ಅಲ್ಲಿಯೇ ಬೀಳಬೇಕಾಯಿತು. ಅದು ಯಾರ ತೋಟದ್ದೊ? ಯಾರು ಯಾರಿಗೆ ಮಾರಿದ್ದೊ? ಅದನ್ನು ನಮ್ಮ ಮನೆಯವರು ತಂದು, ನೀನು ತಿಂದು, ಅದರ ಸಿಪ್ಪೆಯನ್ನು ಇಲ್ಲಿಗೇ ತಂದು ಹಾಕಬೇಕಾಯಿತು. ಆ ವಿಧಿಯ ಇಚ್ಛೆಗೆ ನೀನೆ ವಾಹಕ ಗುಲಾಮ! ನೀನು ಮನೆಯಲ್ಲಿಯೇ ಅದನ್ನು ತಿಂದು ಅಲ್ಲಿಯೆ ಎಸೆಯಬಹುದಾಗಿತ್ತು. ಆದರೆ ಅದರ, ಆ ನೂರಾರು ಗೊನೆಗಳಲ್ಲಿ ಒಂದು ಗೊನೆಯ ನೂರಾರು ಹಣ್ಣುಗಳಲ್ಲಿ ಒಂದು ಯಃಕಶ್ಚಿತ್ ಹಣ್ಣಿನ ಆ ಸಿಪ್ಪೆ ಇಲ್ಲಿಯೇ ಬೀಳಬೇಕೆಂದು ವಿಧಿ ಇಚ್ಛಿಸಿದ್ದುದರಿಂದ ನೀನು ಇಂದು ಸಂಜೆ ಶಾಲೆಯಿಂದ ಬಂದು ತಿಂಡಿಯ ನೆವದಿಂದ ಅದನ್ನು ಇಲ್ಲಿಗೆ ತಂದು ತಿಂದು ಇಲ್ಲಿಯೆ ಹಾಕಬೇಕಾಯಿತು. ಹಾಗಿದೆ ಭಗವಂತನ ಅಲುಗಾಡದ ಕಟ್ಟಳೆ.
ಹುಡುಗನ ಮನಸ್ಸು ರೇಗಿತು. ನಾನೇನು ವಿಧಿಯ ಗುಲಾಮನಲ್ಲ. ವಿಧಿಯ ಇಚ್ಛೆಗೆ ಭಂಗ ತರಲೇಬೇಕು.
ಸೂರ್ಯ ಚಂದ್ರ ಪೃಥ್ವಿ ನಕ್ಷತ್ರಾದಿಗಳನ್ನು ಸೃಷ್ಟಿಸಿ ನಿಯಮ ಬಂಧನದಲ್ಲಿಟ್ಟಿರುವ ಆ ದುಷ್ಟವಿಧಿಯನ್ನು ಭಂಗಿಸುವ ದೃಢಛಲದಿಂದ, ಸಿಪ್ಪೆಯನ್ನೆಸೆದು ಅಷ್ಟು ದೂರ ಹೋಗಿದ್ದ ನಾನು, ಮತ್ತೆ ಹಿಂದಕ್ಕೆ ಬಂದೆ! ಸಿಪ್ಪೆ ಬಿದ್ದಿದ್ದ ಸ್ಥಳಕ್ಕೆ ಧಾವಿಸಿ ಹುಡುಕಿದೆ. ಅದು ಹಸರು ಹುಲ್ಲಿನಲ್ಲಿ ಅಡಗಿ ಬಿದ್ದಿತ್ತು. (ಪಾಪ! ಆ ಸೆರೆಮನೆಯ ಭಯಂಕರ ಶಿಕ್ಷೆಗೆ ಗೋಳಿಡುತ್ತಾ!) ಸೆರೆ ಬಿಡಿಸುವವನಂತೆ ಅದನ್ನು ಎತ್ತಿಕೊಂಡೆ! ಮತ್ತೆ ಸ್ವಲ್ಪ ದೂರ ನಡೆದು ಅದನ್ನು ಬೇರೊಂದು ಕಡೆಗೆ ಎಸೆದು, ವಿಜಯಿಯ ಹೆಮ್ಮೆಯಿಂದ ಮುಂದುವರಿದೆ.
ಆದರೆ ಆ ಹೆಮ್ಮೆ ಅಲ್ಪಾಯುವಾಗಿ ಬಿಟ್ಟಿತು! ಹಾಳು ವಿಧಿ ಮೂದಲಿಸತೊಡಗಿತು. ಆ ಬಾಳೆಹಣ್ಣಿನ ಸಿಪ್ಪೆ ನಾನು ಮತ್ತೆ ಎಸೆದು ಈಗ ಅದು ಬಿದ್ದಿರುವ ಜಾಗದಲ್ಲಿಯೆ ಅದು ಬೀಳಬೇಕೆಂದು ವಿಧಿಯ ಇಚ್ಛೆಯಿದ್ದುದರಿಂದಲೆ ನಾನು ಪುನಃ ಅದರ ದಾಸನಂತೆ ಹಿಂದಕ್ಕೆ ಹೋಗಿ ಅದನ್ನು ತಂದು ಇಲ್ಲಿ ಎಸೆಯಬೇಕಾಯಿತಲ್ಲಾ! ನನಗೆ ತಲೆ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತು. ನನ್ನ ಅಸಹಾಯಕತೆಗೆ ನಾನೆ ದುಃಖಿಸಿ ಕಣ್ಣು ಹನಿತುಂಬಿತು. ಸೋಲಿಗೂ ಅವಮಾನಕ್ಕೂ ಅಳು ಬರುವಂತಾಯ್ತು. ಈ ಬಿದ್ದಿರುವ ಜಾಗದಿಂದಲೂ ಅದನ್ನು ತೆಗೆದು ಬೇರೆ ಕಡೆಗೆ ಬಿಸಾಡಬೇಕು ಎಂದೆನಿಸಿತು. ಆದರೆ ಏನು ಪ್ರಯೋಜನ? ಮತ್ತೆ ವಿಧಿಯ ದಾಸನಾಗಿಯೆ ಕೆಲಸ ಮಾಡಿದಂತಾಗುತ್ತದೆ. ಥೂ! ಹಾಳು ವಿಧಿಯ ಬಾಯಿಗೆ ಮಣ್ಣು ಹಾಕಲಿ! ಏನಾದರೂ ಸಾಯಲಿ! ನನಗೇಕೆ? ಎಂದೆಲ್ಲ ಶಪಿಸಿಬಿಟ್ಟು, ಮನಸ್ಸಿನಿಂದ ಅದನ್ನು ತಳ್ಳಿ, ರಬ್ಬರುಬಿಲ್ಲಿಗೆ ಕಲ್ಲುಹರಳು ಹಾಕಿಕೊಂಡು, ಬೇಗಬೇಗೆ ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳಲು ಧಾವಿಸಿದೆ! ಹೊತ್ತುಮೀರಿ ಹೋದರೆ, ಹಾಳುವಿಧಿ, ಮನೆ ಮೇಷ್ಟರ ಕೈಲಿ ಛಡಿ ಏಟು ಹಾಖಿಸುವ ಹುನಾರು ಮಾಡಿದೆಯೋ ಏನೋ ಯಾಋಉ ಬಲ್ಲರು?
***
ಬೆಟ್ಟಕಾಡುಗಳಲ್ಲಿ, ತಿರುಗಾಡುವ ನನ್ನ ಆಜನ್ಮಚಪಲತೆಗೆ ’ಪ್ರಕೃತಿ ಪ್ರೇಮ’ ’ನಿಸರ್ಗಸೌಂದಾರ್ಯಆಭಿರುಚಿ’ ಎಂದು ನಾಮಕರಣ ಮಾಡಿಸಿಕೊಳ್ಳುವಷ್ಟು ಯೋಗ್ಯತೆಗೆ ಅರ್ಹವಾಗಿತ್ತೆಂದು ನಾನು ನಂಬಲಾರೆ. ಅದು ಒಂದು ತರಹ ಐಂದ್ರಿಯ ಸುಖಾನುಭವವಾಗಿತ್ತೆ ಹೊರತು ಬುದ್ಧಿಪೂರ್ವಕವಾದ ಸೌಂದರ್ಯಪ್ರಜ್ಞೆಯ ಆಸ್ವಾದವಾಗಿರಲಿಲ್ಲ. ಹಸಿದ ಪ್ರಾಣಿಗೆ ಹಸುರು ಮೇಯುವಾಗ ಒಂದು ಸುಖಾನುಭವವಾಗುತ್ತದೆ; ಅದಕ್ಕೆ ಹಸುರಿನ ಬಣ್ಣದ ಚೆಲುವಾಗಲಿ ಅದರ ಕೋಮಲತೆಯಾಗಲಿ ಬುದ್ಧಿಗಮ್ಯವಲ್ಲ. ಹಸುರಿನ ಚೆಲುವೂ ಕೋಮಲತೆಯೂ ಹುಲ್ಲು ಮೇಯುವ ಪ್ರಾಣಿಯ ಅಂತಃಪ್ರಜ್ಞೆಗೆ ಸಂಪೂರ್ಣ ಅಗಮ್ಯವೇನಲ್ಲ. ಸಂವೇದನೆ ಸಂಪೂರ್ಣ ಅಗಮ್ಯವಾಗಿ ಇದ್ದಿದ್ದರೆ ಅದು ಹುಲ್ಲು ಅಷ್ಟು ಹಸನಾಗಿ ಬೆಳೆದಿರದಿದ್ದ ಸ್ಥಳವನ್ನು ತಿರಸ್ಕರಿಸಿ ಈ ’ಸುಂದರ ಕೋಮಲ’ ಸ್ಥಾನಕ್ಕೇ ನುಗ್ಗಿ ಬರುತ್ತಿರಲಿಲ್ಲ. ಆದರೆ ಈ ಸೌಂದರ್ಯ ಈ ಕೋಮಲತೆಗೆಳು ಆ ಪ್ರಾಣಿಗೆ ತನ್ನ ಆಹಾರದ ಸಾರದ ಮತ್ತು ಸ್ವಾದುತ್ವದ ಅಂಗಗಳಾಗಿ ಇಂದ್ರಿಯಗೋಚರವಾಗಿ ಅದನ್ನು ಆಹ್ವಾನಿಸುತ್ತವೆ. ಅದು ’ಅಭಿರುಚಿ’ಗಿಂತಲೂ ಹೆಚ್ಚಾಗಿ ’ರುಚಿ’ಯಾಗಿರುತ್ತದೆ. ಅಂತಹ ಅಬುದ್ಧಿಪೂರ್ವಕವಾದ ಜೀವಪೌಷ್ಠಿಕ ಸಾಮಗ್ರಿಯಾಗಿತ್ತೆಂದು ತೋರುತ್ತದೆ, ನನಗೆ ಅಂದು ಆ ’ಪ್ರಕತಿ ಸೌಂದರ್ಯ!’ ನಾನು ’ಪ್ರಕೃತಿ’ಯನ್ನು ಸವಿಯುತ್ತಿದ್ದೆ ಎನ್ನುವುದಕ್ಕೆ ಬದಲಾಗಿ ’ಪ್ರಕೃತಿ’ಯೆ ನನ್ನನ್ನು ಸವಿಯುತ್ತಿದ್ದಳು ಎನ್ನಬಹುದಾಗಿತ್ತೇನೊ?! ಎಂತೂ ಸಹ್ಯಾದ್ರಿಯ ನೈಸರ್ಗಿಕ ರಮಣೀಯತೆಯ ಸುವಿಶಾಲ ಸರೋವರದಲ್ಲಿ ನನ್ನ ಬಾಲಚೇತನ ಮರಿಮೀನಾಗಿ ಓಲಾಡಿ ತೇಲಾಡುತ್ತಿತ್ತು.

1 comment:

Badarinath Palavalli said...

ನಮ್ಮನ್ನೂ ಸಹ್ಯಾದ್ರಿಯ ಮಡಿಲಿಗೆ ಕೊಂಡೊಯ್ದಿರಿ.
ಚಾಟರ ಬಿಲ್ಲೆಯ ಜೊತೆ ನನ್ನ ಬಾಲ್ಯವೂ ನೆನಪಿಸಿದಿರಿ.