Wednesday, February 25, 2009

ಅಜ್ಜ ಹೇಳಿದ್ದ ‘ನರಿ ಪಂಚಾಯ್ತಿ ಮಾಡಿದ ಕಥೆ’ - (೩)

ಒಂದು ಊರಿನಲ್ಲಿ ಒಬ್ಬ ಅಜ್ಜ ಇದ್ದ. ಆತನಿಗೆ ಇಬ್ಬರು ಗಂಡಮಕ್ಕಳು. ಇಬ್ಬರಿಗೂ ಮದುವೆಯಾಗಿತ್ತು. ಅಜ್ಜ ಸಾಯುವಾಗ ತನ್ನ ಆಸ್ತಿಯನ್ನು ಎರಡು ಭಾಗ ಮಾಡಿ ಇಬ್ಬರಿಗೂ ಕೊಟ್ಟಿದ್ದ. ಅವನತ್ರ ಇದ್ದ ಒಂದು ಹಸು ಒಂದು ಎತ್ತನ್ನ, ಅಣ್ಣನಿಗೆ ಎತ್ತನ್ನು ತಮ್ಮನಿಗೆ ಹಸುವನ್ನು ಕೊಟ್ಟಿದ್ದ. ಇಬ್ಬರೂ ಅವರವರ ಆಸ್ತಿ ನೋಡಿಕೊಂಡು ಚೆನ್ನಾಗಿದ್ರು. ಒಂದು ದಿನ ತಮ್ಮನ ಮನಯ ಹಸು ಕರು ಹಾಕ್ತು. ಬೆಳಿಗ್ಗೆ ಹಾಲು ಕರೆದುಕೊಂಡು ತಮ್ಮನ ಹೆಂಡತಿ ಕರುವನ್ನು ಹಾಲೂಡಲು ಬಿಟ್ಟು ಒಳಗೆ ಹೋಗಿದ್ದಳು. ಅದು ಹಾಲು ಕುಡಿದು, ನೆಗೆದಾಡುತ್ತಾ, ಪಕ್ಕದ ಅಣ್ಣನ ಮನೆ ಮುಂದೆ ಕಟ್ಟಿದ್ದ ಎತ್ತಿನ ಬಳಿ ಬಂತು. ಎತ್ತಿನ ಜೊತೆ ಸುಮಾನ ಆಡುತ್ತಾ, ಅದರಿಂದ ಹಾಲು ಕುಡಿಯುತ್ತಿರುವಂತೆ ಎತ್ತಿನ ತೊಡೆಯ ಸಂದಿಗೆ ಬಾಯಿ ಹಾಕಿತ್ತು. ಆಗ ಅಲ್ಲಿಗೆ ಬಂದ ಅಣ್ಣನ ಹೆಂಡತಿ, ‘ಓ, ನನ್ನ ಮೈದುನನ ದನಿನಂಗೆ ನಮ್ಮ ದನಾನೂ ಕರು ಹಾಕಿದೆ’ ಅಂತ ತಂದು ಕೊಟ್ಟಿಗೆಗೆ ಕಟ್ಟಿದಳು. ಹೊರಗೆ ಬಂದ ತಮ್ಮನ ಹೆಂಡತಿ ಅದನ್ನು ನೋಡಿ ಕರುವನ್ನು ಬಿಡುವಂತೆ ಕೇಳಿದಳು. ಇಬ್ಬರಿಗೂ ಜಗಳ ಶುರುವಾಯಿತು. ಕರು ನನ್ನದು, ಕರು ನನ್ನದು ಅಂತ. ಅಷ್ಟರಲ್ಲಿ ಹೊಲದ ಕಡೀಗೆ ಹೋಗಿದ್ದ ಅಣ್ಣತಮ್ಮ ಬಂದ್ರು. ಜಗಳ ಇನ್ನೂ ಜೋರಾಯಿತು. ಇದು ಬಗೆಹರಿಯುವ ಜಗಳವಲ್ಲ ಅಂತ ಊರಿನ ಪಂಚಾಯಿತಿಗೆ ಕೊಟ್ರು.
ಸುತ್ತ ಹತ್ತು ಹಳ್ಳಿ ಜನ ಪಂಚಾಯ್ತಿಗೆ ಸೇರಿದ್ರು. ತಮ್ಮಂದು ಒಂದೇ ದೂರು. ನನ್ನ ದನೀನ ಕರಾನ ಅಣ್ಣನ ಹೆಂಡತಿ ಹಿಡಿದಾಕಿದ್ದಾಳೆ ಅಂತ. ಅಣ್ಣಂದು ಒಂದೇ ಉತ್ತರ, ಅದು ನನ್ನ ದನೀಂದೆ ಕರ. ಇಲ್ಲಾಂದ್ರೆ ಅದು ನನ್ನ ದನೀನಲ್ಲಿ ಏಕೆ ಹಾಲು ಕುಡೀತಿತ್ತು ಅಂತ. ಪಂಚಾಯ್ತಿಲಿದ್ದ ಮುಖಂಡ್ರೆಲ್ಲಾ ‘ಕರ ಅಣ್ಣನ ದನೀನಲ್ಲಿ ಹಾಲು ಕುಡೀತಿದ್ರಿಂದ ಅದು ಅವಂದೆ’ ಅಂತ ತೀರ್ಮಾನ ಕೊಟ್ರು. ತಮ್ಮನಿಗೆ ಬೋ ಬೇಸ್ರ ಆಯ್ತು. ಅದೇ ಬೇಸರದಲ್ಲಿ ಕಾಡಿನೊಳಗೆ ಬಂದು ಅಳುತ್ತಾ ಕೂತಿದ್ದ.
ಅಲ್ಲಿ ಒಂದು ನರಿ ಅವನ್ನ ನೋಡ್ತು. ಅದು ‘ಏನ್ರಣ್ಣ ವಿಷಯ? ಏಕ್ ಆಳ್ತಾಯಿದ್ದಿ?’ ಅಂತು. ಅದಕ್ಕೆ ಅವನು, ‘ಏನೆಂದ್ರೆ ಏನೇಳ್ಳಿ ನರಿಯಣ್ಣ’ ಅಂದು ಇಡೀ ಕಥೇನೆಲ್ಲ ಹೇಳಿದ. ಅದಕ್ಕೆ ನರಿಯಣ್ಣ ‘ಅಷ್ಟೇ ತಾನೆ, ನಾನು ಈ ಸಮಸ್ಯೇನ ಬಗೆಹರಿಸ್ತೀನಿ. ನನಗೆ ಏನು ಕೊಡ್ತೀಯ?’ ಅಂತು. ಅದಕ್ಕೆ ಅವನು ‘ಈ ಪಂಚಾಯ್ತಿ ಬಗೆಹರಿಸಿದ್ರೆ ನಿನಗೆ ಎರಡು ಮೊಟ್ಟೆಕೋಳಿ ಕೊಡ್ತೀನಿ’ ಅಂತ ಮಾತು ಕೊಟ್ಟ. ಅದಕ್ಕೆ ನರಿ ‘ಹಾಗಾದ್ರೆ, ಇವತ್ತಿನ ಸಂಜಿಕೆ ಎಲ್ಲಾರ್‍ನೂ ಸೇರ್‍ಸ್ಸು. ಪಂಚಾಯ್ತಿ ಮಡಗ್ಸು. ನಾನು ಬತ್ತೀನಿ, ಊರ್‍ನಾಗಿರೋ ನಾಯಿನೆಲ್ಲ ಕಟ್ಟಾಕ್ಸು’ ಅಂತು. ‘ಸರಿ’ ಅಂದ್ಕೊಂಡು ಬಂದ.
ತಮ್ಮ ಮತ್ತೆ ಊರೋರ್‍ನೆಲ್ಲಾ ಸೇರ್‍ಸಿದ. ನಾಯಿ ಎಲ್ಲಾ ಕಟ್ಟಾಕ್ಸಿದ. ಸಂಜೆ ಎಲ್ಲಾ ಊರು ಮುಂದೆ ಸೇರಿದ್ರು. ನರಿ ಬರೋದ್ನೆ ಕಾಯ್ತಿದ್ರು. ಎಷ್ಟೊತ್ತಾದ್ರೂ ನರಿ ಬರ್‍ಲೇ ಇಲ್ಲ. ರಾತ್ರಿ ಎಂಟಾಯ್ತು, ಹತ್ತಾಯ್ತು, ಹನ್ನೆರಡಾಯ್ತು ನರಿ ಬರ್‍ಲೇ ಇಲ್ಲ. ಎಲ್ಲಾ ತಮ್ಮನಿಗೆ ಬಯ್ಯುತ್ತಾ ಕೂತಲ್ಲೇ ತೂಕಡಿಸೋಕೆ ಶುರು ಮಾಡಿದ್ರು. ಕೊನೆಗೆ ಮಧ್ಯರಾತ್ರಿ ಕಳೆದ ಮೇಲೆ ನರಿ ನಿಧಾನವಾಗಿ ನಡಕೊಂಡು ಬಂತು. ಮುಖಂಡ ಎಲ್ಲಾ ‘ಏನ್ ನರಿಯಣ್ಣ ಇಷ್ಟೊತ್ತು ಮಾಡಿಬಿಟ್ಟೆ’ ಅಂದ್ರು ಅದಕ್ಕೆ ನರಿ ‘ಏನಂದ್ರೆ ಏನೇಳ್ಳಣ್ಣ, ಪಕ್ಕದ ಊರ್‍ನಾಗೆ ಸಮುದ್ರಕ್ಕೆ ಬೆಂಕಿ ಬಿದ್ದಿತ್ತು. ಅದನ್ನು ಆರಿಸೋಕೆ ಅಂತ ನನ್ನ ಕರೆಸಿದ್ರು. ಅದಕ್ಕೆ ನೆಲ್ಲುಲ್ಲು (ಭತ್ತದ ಹುಲ್ಲು) ಹಾಕಿ ಆರ್‍ಸಿ ಬರೋತ್ಕೆ ಇಷ್ಟೊತ್ತಾಯ್ತು’ ಅಂತು.
ಅದಕ್ಕೆ ಜನೆಲ್ಲಾ ನಗುತ್ತಾ ‘ಏನಣ್ಣ ಹಿಂಗೇಳ್ತಿ, ಸಮುದ್ರಕ್ಕೆ ಎಲ್ಲಾರ ಬೆಂಕಿ ಬೀಳೋದ್ ದಿಟವಾ? ಬಿದ್ರು ಅದನ್ನ ನೆಲ್ಲುಲ್ಲಲ್ಲಿ ಆರ್‍ಸೋದು ಸಾದ್ಯವಾ?’ ಅಂದು ಗೇಲಿ ಮಾಡಿದ್ರು.
ಅದಕ್ಕೆ ನರಿಯಣ್ಣ, ‘ಅಲ್ಲಕಣ್ರಯ್ಯಾ, ನಿಮ್ಮೂರಲ್ಲಿ ಎತ್ತು (ಗಂಡುದನ) ಕರು ಹಾಕಬಹುದಾದ್ರೆ, ಪಕ್ಕದ ಊರಲ್ಲಿ ಸಮುದ್ರಕ್ಕೆ ಬೆಂಕಿ ಬೀಳೋದ್ರಲ್ಲಿ ಏನಶ್ಚರ್ಯ’ ಅಂತು. ಆಗ ಊರಿನ ಜನಗೋಳ್ಗೆ ಎಲ್ಲಾ ಅರ್ಥ ಆಯ್ತು. ಕರೂನ ತಮ್ಮನಿಗೆ ಕೊಡಿಸಿದ್ರು. ತಮ್ಮ ನರಿಗೆ ಮಾತು ಕೊಟ್ಟಂತೆ ಎರಡು ಮೊಟ್ಟೆ ಕೋಳಿ ಇನಾಮು ಕೊಟ್ಟು, ಸುಖವಾಗಿದ್ದ.

No comments: