Tuesday, February 03, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 2



ಕುಂದೂರುಮಠ
ನಾನು ಈಗ ಹೇಳಹೊರಟಿರುವ ಸಂಪೂರ್ಣ ಕಥೆ ಕುಂದೂರುಮಠದಲ್ಲೇ ನಡೆದದ್ದು. ಆದ್ದರಿಂದ ಕುಂದೂರುಮಠದ ಸಾಂಸ್ಕೃತಿಕ ಹಿನ್ನೆಲೆ ಮುನ್ನೆಲೆಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಟ್ಟುಬಿಡುತ್ತೇನೆ. ಅದರ ಹಿನ್ನೆಲೆಯಿದ್ದರೆ ಮುಂದೆ ನಾನು ಕೊಡುವ ಚಿತ್ರಣ ಸ್ಪಷ್ಟವಾಗಿ ಗೋಚರವಾಗುತ್ತದೆ.
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿಯ ಒಂದು ಗ್ರಾಮ ಕುಂದೂರು. ಆಗ್ಗೆ ಇಲ್ಲಿ ಒಂದರಿಂದ ಏಳನೇ ತರಗತಿಯವರಗೆ ಸರ್ಕಾರಿ ಮಾಧ್ಯಮಿಕ ಶಾಲೆಯಿತ್ತು. ಹೊಳೇನರಸೀಪುರ ವಿಧಾನಸಭೆ ಹಾಗೂ ಹಾಸನ ಲೋಕಸಭೆ ಕ್ಷೇತ್ರಕ್ಕೆ ಸೇರುವ ಈ ಊರು ದೇವೇಗೌಡರ ರಾಜಕೀಯ ಏಳುಬೀಳುಗಳೊಂದಿಗೇ ಗುರುತಿಸಿಕೊಳ್ಳುತ್ತಾ ಬರುತ್ತಿದೆ. ಈ ಕುಂದೂರಿನಿಂದ ಪಶ್ಚಿಮಕ್ಕೆ ಒಂದು ಕಿಲೋಮೀಟರ್ ದೂರದಲ್ಲಿ ಒಂದು ಮಠವಿದೆ. ಅದನ್ನು ಸಾಮಾನ್ಯವಾಗಿ ಕುಂದೂರುಮಠ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿರುವ ಎರಡನೇ ಒಕ್ಕಲಿಗ ಮಠ ಎಂದು ಹೇಳುತ್ತಾರೆ.
ಇಡೀ ಮಠ ಸುತ್ತಮುತ್ತಲಿನ ಹಳ್ಳಿಯ ಕೆಲವರಿಗೆ ಹೊತ್ತು ಕಳೆಯುವ, ಭಂಗಿ ಸೇದುವ ‘ಅಡ್ಡಾ’ ಇದ್ದ ಹಾಗೆ. ಚುನಾವಣೆ ಬಂದಾಗ ರಾಜಕಾರಣಿಗಳಿಗೆ ಸಭೆ ಸಮಾರಂಭಗಳನ್ನು ನಡೆಸಲು ತಕ್ಕ ತಾಣ. ಇಲ್ಲಿ ದೇವೇಗೌಡರು ರಾಜಕೀಯ ಪ್ರವರ್ಧಮಾನಕ್ಕೆ ಬಂದ ಹಾಗೆ ಬೆಳವಣಿಗೆಗಳೂ ಆಗಿವೆ. ಒಂದು ಹೈಸ್ಕೂಲು, ಆಸ್ಪತ್ರೆ, ಓ.ಬಿ.ಸಿ.ಹಾಸ್ಟೆಲ್, ಜೂನಿಯರ್ ಕಾಲೇಜು ಆಗಿದ್ದವು. ಈಗ ಜೂನಿಯರ್ ಕಾಲೇಜು ಇಲ್ಲ. ಇವುಗಳ ಕಟ್ಟಡಗಳು ಮತ್ತು ಕೆಲವು ಕ್ವಾರ್ಟ್ರಸ್‌ಗಳನ್ನು ಬಿಟ್ಟರೆ ಇನ್ನಾವುದೇ ಖಾಸಗೀ ಕಟ್ಟಡಗಳು ಅಲ್ಲಿಲ್ಲ. ಅಲ್ಲಿರುವ ಎಲ್ಲಾ ಆಸ್ತಿಯು ಮಠಕ್ಕೆ ಸೇರಿದ್ದರಿಂದ ಹೆಚ್ಚಿನ ಬೆಳವಣಿಗೆಗಳು ಆಗಿಲ್ಲ. ಕೆಲವು ತಾತ್ಕಾಲಿಕ ಗುಡಿಸಲುಗಳಲ್ಲಿ ಹೊಟೇಲು ಅಂಗಡಿಮುಂಗಟ್ಟುಗಳು ಇದ್ದವು.
ಈ ಮಠದಲ್ಲಿ ಮೂರು ಸುತ್ತಿನ, ಪುಟ್ಟದಾದ, ಹೆಚ್ಚು ಎತ್ತರವಿಲ್ಲದ ಒಂದು ಕೋಟೆ(ಪೌಳಿ) ಇದೆ. ಅದನ್ನು ಹತ್ತಿ ಹೋಗಲು ಸುಮಾರು ಐವತ್ತು ಮೆಟ್ಟಿಲುಗಳಿವೆ. ನಡುವೆ ಒಂದು ರಂಗನಾಥಸ್ವಾಮಿ ದೇವಾಲಯ, ಒಂದು ಶಿವಾಲಯ ಹಾಗೂ ಸ್ವಾಮೀಜಿಗಳು ವಾಸಿಸುವ ಮನೆಗಳಿವೆ. ಮಠದಿಂದ ಪೂರ್ವಕ್ಕೆ ಹಾಗೂ ಪಶ್ಚಿಮಕ್ಕೆ ಎರಡು ಸುಬ್ರಹ್ಮಣ್ಯ ದೇವರ ಗುಡಿಗಳಿವೆ. ಅವುಗಳನ್ನು ಮೇಲಿನ ಸುಬ್ಬಪ್ಪ ಮತ್ತು ಕೆಳಗಿನ ಸುಬ್ಬಪ್ಪನ ಗುಡಿಗಳೆಂದು ಕರೆಯುತ್ತಾರೆ. ಈ ಮೇಲಿನ ಗುಡಿಯಿರುವ ಜಾಗದಿಂದ ಒಂದು ನಾಯಿ ಮತ್ತು ಕೆಳಗಿನ ಗುಡಿಯಿರುವ ಜಾಗದಿಂದ ಒಂದು ಮೊಲ ಓಡುತ್ತಾ ಬಂದು, ಈಗ ಮಠವಿರುವ ಜಾಗದಲ್ಲಿ ಜಗಳಕ್ಕೆ ಬಿದ್ದವಂತೆ! ನಂತರ ಯಾವುದೂ ಸೋಲದೆ ಇದ್ದುದ್ದನ್ನು ಕಂಡವರೊಬ್ಬರು ಅದನ್ನು ‘ಗಂಡುಭೂಮಿ’ ಎಂದು ಕರೆದು ಮಠ ಸ್ಥಾಪನೆ ಮಾಡಿದರಂತೆ!! ಮಠ ಸ್ಥಾಪನೆ ಮಾಡಿದ್ದು ವಿಜಯನಗರದ ಅರಸರು ಎಂಬುದು ಇನ್ನೊಂದು ಕಥೆ!!!
ಅದೇನೇ ಇರಲಿ. ಇತ್ತೀಚಿಗೆ ನನ್ನಲ್ಲಿ ಬೆಳೆದ ಐತಿಹಾಸಿಕ ಮತ್ತು ಜಾನಪದ ಸಂಶೋಧನೆಯ ಆಸಕ್ತಿಯಿಂದ ಈ ಮಠದ ಬಗ್ಗೆ ಒಂದು ಸಂಶೋಧನಾ ಲೇಖನವನ್ನು, ಡಾ. ಎಂ. ಬೈರೇಗೌಡ ಅವರ ಜೊತೆಯಲ್ಲಿ ಸೇರಿ ಸಿದ್ಧಪಡಿಸಿದ್ದೆ. ಅದು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಸಂಶೋಧನೆಯ ಫಲಿತಾಂಶದಂತೆ, ಈ ಮಠದ ಇತಿಹಾಸ ಹೀಗಿದೆ. ಮೂಲತಃ ಕುರುಬರಿಗೆ ಸೇರಿದ ಮಠ ಇದಾಗಿದ್ದು, ತಿಪಟೂರು ತಾಲೋಕಿನ, ಕೆರಗೋಡು ರಂಗಾಪುರ ಎಂಬಲ್ಲಿರುವ ಮಠದ ಶಾಖಾಮಠ ಇದಾಗಿತ್ತು. ನಂತರದ ದಿನಗಳಲ್ಲಿ ಒಕ್ಕಲಿಗ ಪ್ರಾಬಲ್ಯ ಹೆಚ್ಚಾದಂತೆ (ಕುರುಬ ಒಕ್ಕಲಿಗ ಎಂಬ ಜಾತಿಯೂ ಇದೆ!) ಒಕ್ಕಲಿಗರ ಮಠ ಎಂಬ ಪ್ರಚಾರ ಸಿಕ್ಕಿದೆ. ಈಗಲೂ ಕುಂದೂರಿನಲ್ಲಿ ನಡೆಯುವ ರಂಗನ ಕುಣತದಲ್ಲಿ ಮೊದಲಿಗೆ ಪೂಜೆ ಸಲ್ಲುವುದು ಕುರುಬರ ದೈವವಾದ ಬೀರೆ(ರ)ದೇವರಿಗೆ! ಮಠದಲ್ಲಿರುವ ದಾಖಲೆಗಳಿಂದಲೂ ಅದು ಮೂಲತಃ ಕುರುಬರ ಮಠ ಎಂಬುದು ಸ್ಪಷ್ಟವಾಗುತ್ತದೆ. ಮಠದಲ್ಲಿ ಕುರಿ ಸಾಕಾಣಿಕೆ ಒಂದು ಕಸುಬಾಗಿಯೇ ಬೆಳೆದು ಬಂದಿದೆ. ನಾವು ಹೈಸ್ಕೂಲು ಓದುವಾಗ್ಗೆ ಮಠದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕುರಿಗಳಿದ್ದವು.
ಈ ಮಠದಿಂದ ದಕ್ಷಿಣಕ್ಕೆ, ಕೂಗಳತೆಯ ದೂರದಲ್ಲಿ ಮೆಳೆಯಮ್ಮ ಎಂಬ ರಕ್ತದೇವತೆಯ ಗುಡಿಯಿದೆ. ಇಲ್ಲಿ ಪ್ರತಿದಿನ ನೂರಾರು ಭಕ್ತಾದಿಗಳು ಬಂದು ಕುರಿ, ಕೋಳಿ, ಹಂದಿಗಳನ್ನು ಮೆಳೆಯಮ್ಮನಿಗೆ ಬಲಿ ಕೊಟ್ಟು, ಅಲ್ಲಿಯೇ ಅಡುಗೆ ಮಾಡಿ, ಊಟ ಮಾಡಿಕೊಂಡು ಹೋಗುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಹಾಗೂ ಅಮಾವಾಸ್ಯೆ ಮತ್ತು ಪೂರ್ಣಿಮೆ ದಿನಗಳಲ್ಲಿ ಇಲ್ಲಿ ಬಲಿಯಾಗುವ ಕುರಿ ಕೋಳಿಗಳ ಸಂಖ್ಯೆ ಸಾವಿರವನ್ನು ದಾಟುತ್ತದೆ. ಹೀಗೆ ಬಲಿ ಕೊಡಲು, ಮಠಕ್ಕೆ ಹಣ ಪಾವತಿಸಿ ರಸೀತಿ ಪಡೆಯಬೇಕು. ಕುರಿ, ಮೇಕೆಯ ಬಲಿಯಾದರೆ ಅವುಗಳ ಚರ್ಮವನ್ನು ಮಠಕ್ಕೆ ಒಪ್ಪಿಸಬೇಕು. ಇವುಗಳಿಂದ ಮಠಕ್ಕೆ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ಜೊತೆಗೆ ಸಾಕಷ್ಟು ತೆಂಗಿನ ತೋಟವೂ ಜಮೀನೂ ಇದೆ.
ಇವುಗಳಲ್ಲದೆ, ಸುಗ್ಗಿಕಾಲದಲ್ಲಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ರೈತರುಗಳಿಂದ ರಾಗಿ, ಜೋಳ, ಭತ್ತ... ಹೀಗೆ ಬೆಳೆದಿದ್ದರಲ್ಲಿ ನಾಲ್ಕೈದು ಸೇರು ಧಾನ್ಯವನ್ನು, ಕೆಲವು ತೆಂಗಿನಕಾಯಿಗಳನ್ನು ವಸೂಲಿ ಮಾಡುತ್ತಿದ್ದರು. ವಸೂಲಿಗೆ ಹೋಗುವಾಗ, ಮುಂದೆ ಧ್ವಜ, ಛತ್ರಿ, ಚಾಮರಗಳನ್ನು ಹಿಡಿದ ಜನರು ಇದ್ದರೆ, ಅವರ ಹಿಂದೆ ಒಂದು ಬಸವನ ಮೇಲೆ ಒಬ್ಬ ಢಕ್ಕೆ ಬಡಿದುಕೊಂಡು ಕುಳಿತಿರುತ್ತಿದ್ದ. ಕೊಂಬು ಕಹಳೆ ಊದುವ ಜನರೂ ಇರುತ್ತಿದ್ದರು. ಅವರ ಹಿಂದೆ ಕುದುರೆಯ ಮೇಲೆ ಸ್ವಾಮೀಜಿಗಳಿರುತ್ತಿದ್ದರು. ಅವರ ಹಿಂದೆ ನಾಲ್ಕಾರು ಗಾಡಿಗಳು ಸಾಗುತ್ತಿದ್ದವು. ಹೀಗೆ ಕುಂದೂರುಮಠದ ಸ್ವಾಮೀಜಿಗಳು ವಸೂಲಿಗೆ ಹೊರಟರೆಂದರೆ, ಒಂದು ಚಿಕ್ಕ ಮೆರವಣಿಗೆಯೇ ಹೊರಟಂತಾಗುತ್ತಿತ್ತು!
ಕುದ್ರೆ ಕುಂದೂರಯ್ಯ
ಕುಂದೂರಯ್ಯ ಕುದ್ರೆ ಕೊಡು
ಹತ್ತಿ ನೋಡಾನ;
ಬಾಗೂರಯ್ಯ ಬಾಗ್ಲು ತಗಿ
ಬಗ್ಗಿ ನೋಡಾನ.
ಎಂಬುದು ಕುಂದೂರು ಪರಿಸರದ ಅತ್ಯಂತ ಜನಪ್ರಿಯ ಶಿಶುಪ್ರಾಸ. ಕುಂದೂರುಮಠಕ್ಕೂ ಕುದುರೆಗೂ ಅವಿನಾಭಾವ ಸಂಬಂಧ. ನಾವು ಹೈಸ್ಕೂಲಿನಲ್ಲಿದ್ದಾಗ ನಂಜಯ್ಯ ಎಂಬ ‘ದೊಡ್ಡಯ್ಯನೋರು’ ಬದುಕಿದ್ದರು. ಆಗಿದ್ದ ‘ಸಣ್ಣಯ್ಯನೋರು’ ಈಗ ‘ದೊಡ್ಡಯ್ಯನೋರು’ ಆಗಿದ್ದಾರೆ. ಮೊದಲ ಮಠಾಧಿಪತಿಯೊಬ್ಬರು ಜೀವಂತ ಸಮಾಧಿಯಾಗಿದ್ದಾರೆ ಎಂಬ ಪ್ರತೀತಿಯೂ ಇದೆ. ದೊಡ್ಡಯ್ಯನೋರು ಕುದುರೆ ಓಡಿಸುವುದರಲ್ಲಿ ನಿಪುಣರಾಗಿದ್ದರು. ಒಮ್ಮೆ ಮಠಕ್ಕೆ ನುಗ್ಗಿದ್ದ ಕಳ್ಳರು ಎಲ್ಲಾ ಕುರಿಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದರಂತೆ. ರಂಗನಾಥಸ್ವಾಮಿಯೇ ಕನಸಿನಲ್ಲಿ ಬಂದು ಆಗ ಸಣ್ಣಯ್ಯನೋರಾಗಿದ್ದ ನಂಜಯ್ಯನನ್ನು ಎಬ್ಬಿಸಿದನಂತೆ! ಬೆತ್ತಲೆ ಕುದುರೆ ಹತ್ತಿದ ನಂಜಯ್ಯ, ಲಾರಿಯನ್ನು ಬೆನ್ನತ್ತಿ ಸಕಲೇಶಪುರದ ಬಳಿ ಕಳ್ಳರನ್ನು ಹಿಡಿದರಂತೆ! ಆಗಿನಿಂದ ಅವರಿಗೆ ‘ಕುದುರೆ ನಂಜಯ್ಯ’ ಎಂಬ ಹೆಸರು ಬಂದಿತಂತೆ! ಇನ್ನೊಂದು ಕಥೆಯಲ್ಲಿ, ಕಾರಿದ್ದ ಒಬ್ಬ ಸಾಹುಕಾರನಿಗೂ ಈ ನಂಜಯ್ಯನ ಕುದುರೆಗೂ ಪಂದ್ಯವಾಗಿ, ನಂಜಯ್ಯ ಕುದುರೆ ಸವಾರಿ ಮಾಡಿ ಗೆದ್ದರಂತೆ! ಉಸಿರು ಕಟ್ಟಿದ್ದ ಕುದುರೆಗೆ ತಕ್ಷಣ ನೀರು ಕುಡಿಸಿದ್ದರಿಂದ ಅದು ಸತ್ತು ಹೋಯಿತಂತೆ! ಅದನ್ನು ಮಠದ ಆವರಣದಲ್ಲಿ ಸಮಾಧಿ ಮಾಡಲಾಯಿತಂತೆ!
ಇಂತಹ ಕಥೆಗಳನ್ನು ನಾವು ಬಾಲ್ಯದಲ್ಲಿ ತುಂಬಾ ಕೇಳಿದ್ದೆವು. ಆದ್ದರಿಂದ ಕುಂದೂರುಮಠದ ಬಗ್ಗೆ ಸುತ್ತಮುತ್ತಲಿನ ಮಕ್ಕಳಿಗೆ ಏನೋ ಒಂದು ಬಗೆಯ ಆಕರ್ಷಣೆ. ಅದಕ್ಕಿಂತ ವಿಶೇಷ ಆಕರ್ಷಣೆಯೆಂದರೆ ಅಲ್ಲಿ ಪ್ರತಿ ವರ್ಷ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆಯುವ ಷಷ್ಠಿ ಜಾತ್ರೆ. ಮುಖ್ಯಜಾತ್ರೆ ಕಳೆದ ಒಂದು ತಿಂಗಳಿಗೆ ಮತ್ತೊಮ್ಮೆ ‘ಮರಿಜಾತ್ರೆ’ ಎಂದು ಹಬ್ಬ ಮಾಡುತ್ತಿದ್ದರಾದರೂ ಆಗ ಅಂಗಡಿಗಳು ಸೇರುತ್ತಿರಲಿಲ್ಲ.

No comments: