Tuesday, December 08, 2009

T20 = ತೇಜಸ್ವಿ ಟ್ವೆಂಟಿ : ಅಲೆಮಾರಿಯ ಅಂಡಮಾನ್

T20 = ತೇಜಸ್ವಿ ಟ್ವೆಂಟ ಮಾಲಿಕೆಯಲ್ಲಿ ಇದು ನನ್ನ ಎರಡನೆಯ ಪ್ರಯತ್ನ. ಈ ಮೊದಲಿಗೆ ಸಹಜಕೃಷಿ ಪುಸ್ತಕವನ್ನು ಈ ಪ್ರಯೋಗಕ್ಕೆ ಬಳಸಿಕೊಂಡಿದ್ದೆ. ಈಗ 'ಅಲೆಮಾರಿಯ ಅಂಡಮಾನ್' ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. (ಈ ಕೃತಿಯಲ್ಲಿ ಅಲೆಮಾರಿಯ ಅಂಡಮಾನ್ ಬರಹವಲ್ಲದೆ, ಮಹಾನದಿ ನೈಲ್' ಎಂಬ ಬರಹವೂ ಸೇರಿದೆ. ಪ್ರಸ್ತುತ ನಾನು ಅಲಮೇರಿಯ ಅಂಡಮಾನ್ ಕಥೆಯನ್ನು ಮಾತ್ರ ಈ 20-20ಯಲ್ಲಿ ಬಳಸಿಕೊಂಡಿದ್ದೇನೆ.)
ಮತ್ತೊಮ್ಮೆ ಓದುಗರಲ್ಲಿ ನನ್ನದೊಂದು ವಿನಂತಿ. ಇಲ್ಲಿನ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.
ಈಗಾಗಲೇ ಅಲೆಮಾರಿಯ ಅಂಡಮಾನ್ ಕಥೆಯನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ಅಲೆಮಾರಿಯ ಅಂಡಮಾನ್ ಕಥೆಯನ್ನು ಓದಿದವರೂ ಮತ್ತೊಮ್ಮೆ ಓದುವಂತಾದರೆ ಡಬಲ್ ಖುಷಿ ನನ್ನದು.
  ***
  1. ಯಾರಿಗೆ ತಾವಿರುವಲ್ಲೇ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದೂ ವ್ಯರ್ಥ.
  2. ನನಗಂತೂ ಪುಣ್ಯಕ್ಷೇತ್ರಗಳಿಗೆ, ಪವಿತ್ರ ತೀರ್ಥಗಳಿಗೆ, ಚಾರಿತ್ರಿಕ ಸ್ಥಳಗಳಿಗೆ, ಪ್ರವಾಸಿಧಾಮಗಳಿಗೆ ಭೇಟಿಕೊಡುವ ಹಂಬಲವಂತೂ ಕೊಂಚವೂ ಇಲ್ಲ.
  3. (ಪುಣ್ಯಕ್ಷೇತ್ರಗಳ) ಅಲ್ಲಿನ ಅರ್ಚಕರ ದೇವಸ್ಥಾನದ ಏಜಂಟರುಗಳ, ವಸತಿಗೃಹಗಳ ಜನ ಕಾಟ ಗಲಭೆಗಳನ್ನು ಕಂಡು ಹೇಸಿಹೋಗಿದ್ದೇನೆ.
  4. ತಲೆ ಬೋಳಿಸಿಕೊಂಡು, ಕಿಟಕಿಗಳಿಗೆಲ್ಲಾ ತಮ್ಮ ಒದ್ದೆ ಬಟ್ಟೆಗಳನ್ನು ನೇತುಹಾಕಿಕೊಂಡು, ಬಸ್ಸಿನೊಳಗೆಲ್ಲಾ ವಾಂತಿಮಾಡಿಕೊಳ್ಳುತ್ತಾ ಸಾಗುವ ಈ ಪ್ರವಾಸಿಗಳ ಜೊತೆ ಕಣ್ಣು ಮೂಗು ಇರುವ ನರಮನುಷ್ಯ ಪ್ರವಾಸ ಹೋಗಲು ಸಾಧ್ಯವೇ?
  5. ಪಕ್ಕಾ ಐಹಿಕವಾದಿಗಳಾದ ಈ ಅರ್ಚಕರು, ಏಜಂಟುರುಗಳು ಇವರ ಸ್ಪೆಷಲ್ ಪೂಜೆ, ಸೂಪರ್ ಪೂಜೆಗಳಿಂದ ಇವರ ಹುಂಡಿಗಳಿಗೆ ಹಣ ಹಾಕುವುದರಿಂದ ಯಾರಿಗಾದರೂ ಪುಣ್ಯ ಪ್ರಾಪ್ತಿ ಸಾಧ್ಯವೇ?
  6. ಮಾನವ ಪ್ರತಿಯೊಬ್ಬನೂ ಕೊನೆಗೂ ಸಾವಿನಲ್ಲಿ ಏಕಾಂಗಿ ಎನ್ನುವ ಕಠೋರ ಸತ್ಯವನ್ನು ಮರೆಸಲು ಹಿಂದೂಧರ್ಮ ಈ ರೀತಿ ಗಲಾಟೆ ಗದ್ದಲ ದೊಂಬಿ ಮೈಕುಗಳ ಮರೆ ಹೊಕ್ಕಿದೆಯೆ ಎನ್ನುವ ಅನುಮಾನ ಬರುತ್ತದೆ.
  7. ಈಗಿನ ಅವತಾರಪುರುಷರು ಬಿಡಿ, ಹುಟ್ಟುವಾಗಲೇ ಹುಂಡಿ ಕಾಣಿಕೆ ಡಬ್ಬಿಗಳನ್ನು ಕೈಯಲ್ಲಿ ಹಿಡಿದುಕೊಂಡೇ ಹುಟ್ಟುತ್ತಾರೆ.
  8. ಈ ಪ್ರವಾಶಿಧಾಮಗಳ ಒಳಚರಂಡಿ ವ್ಯವಸ್ಥೆಗಳೆಲ್ಲಾ ನಿರೋಧ್‌ಗಳು ಸಿಕ್ಕಿಹಾಕಿಕೊಂಡು ನೀರು ಹೋಗದಂತೆ ಕೆಟ್ಟಿರುತ್ತವೆ.
  9. ಅವ್ಯವಹಾರಗಳ ಆಗರಗಳಾಗಿರುವ ಈ ವಿಹಾರಧಾಮಗಳಿಗೆ ಹೋಗಿ ನಮ್ಮನ್ನು ಅವರೂ ಅವರನ್ನು ನಾವೂ ಪರಸ್ಪರ ಶಂಕೆಯಿಂದ ನೋಡುವುದರ ಬದಲು ಅಲ್ಲಿಗೆ ಹೋಗದಿರುವುದೇ ಮೇಲಲ್ಲವೇ?
  10. ಈ ಪುಣ್ಯಕ್ಷೇತ್ರಗಳು ದೇವಸ್ಥಾನಗಳು ಯಾವುವೂ ಇಲ್ಲದ ಜಾಗ ಅಂಡಮಾನ್ ಆಗಿದ್ದರೆ ನನ್ನಂಥ ಅಲೆಮಾರಿಗೆ ಅದೇ ಸರಿ.
  11. ನಮ್ಮ ಕಲ್ಪನೆಯ ‘ನಮಗೂ’ ನಿಜವಾದ ನಮಗೂ ವ್ಯತ್ಯಾಸವಿರುವುದರಿಂದಲೇ ನಮ್ಮ ಫೋಟೋಗಳು ನಮ್ಮ ಸರಿಯಾದ ಪ್ರತಿಬಿಂಬವಾಗಿಲ್ಲವೆಂದು ಅದನ್ನು ದೂಷಿಸುತ್ತೇವೆ.
  12. ದರಿದ್ರ ದೇಶ! ನೋಡಿ ಹೇಗಿದೆ. ಆ ಬಡತನ! ಆ ರಾಜಕಾರಣಿಗಳೂ! ಆ ಭ್ರಷ್ಟಾಚಾರ! ಆ ಜನಸಂಖ್ಯೆ! ಆ ಪರಿಸರ ನಾಶ! ಸಾಕಪ್ಪಾ! ಈ ಶನಿಯನ್ನು ಬಿಟ್ಟು ದೂರ ಹೋಗುವುದಕ್ಕೆ ನನಗೇನೋ ಸಂತೋಷವೇ ಆಗುತ್ತಿದೆ.
  13. ಕಂತ್ರಿ ರಾಜಕಾರಣಿಗಳ ಮುಖಾಂತರ, ಭ್ರಷ್ಟ ಅಧಿಕಾರಿಶಾಹಿಯ ಮುಖಾಂತರ, ಲಂಪಟ ಓಟುದಾರರ ಮುಖಾಂತರ ಕ್ಷಣಕ್ಷಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ದೇಶವನ್ನು ಪೃಏಮಿಸುವುದು ನಮಗೆ ಅಸಾಧ್ಯವಾಗಿ ಕಂಡಿತು.
  14. ಸಹಸ್ರಾರು ಮೈಲಿ ದೂರದ ಅಂಡಮಾನಿಗೆ ಶಿಕ್ಷೆ ಅನುಭವಿಸಲು ಅಥವಾ ಮರಣದಂಡನೆಗೆ ಹಿಂದೆಲ್ಲಾ ಹೋಗುತ್ತಿದ್ದ ಖೈದಿಗಳಿಗೆ ಏನೆನ್ನಿಸಿರಬಹುದು? ಭಾರತಕ್ಕೆ ಹೋರಾಡಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಏನೆನ್ನಿಸಿರಬಹುದು? ವೀರಸಾವರ್ಕರ್‌ಗೆ ಈ ಕ್ಷಣಗಳು ಹೇಗೆ ಕಂಡಿರಬಹುದು?
  15. ಸಾರ್ವಜನಿಕ ಸ್ವತ್ತು ಎಂದಾದ ಕೂಡಲೇ ಏನಾದರೂ ಮಾಡಿ ಅದನ್ನು ಹಾಳುಮಾಡುತ್ತಾರೆ. ಸಮುದ್ರದ ಮಧ್ಯೆ ಮುಳುಗಿಹೋಗುತ್ತೇವೆನ್ನುವ ಭಯ ಇಲ್ಲದಿದ್ದರೆ ಪ್ರಯಾಣಿಕರು ಹಡಗನ್ನೇ ತಮ್ಮ ಸೂಟ್ ಕೇಸಿಗೆ ತುಂಬಿಕೊಳ್ಳುತ್ತಿದ್ದರೋ ಏನೋ!
  16. ನನಗೆ ನನ್ನ ಕ್ಯಾಬಿನ್ನಿನಲ್ಲಿ ಇದ್ದ ಲೈಫ್ ಜಾಕೆಟ್ಟನ್ನು ನೋಡಿದಾಗೆಲ್ಲ ಕರಿ ನೀಲಿಯ ಸಮುದ್ರದ ಕರೆ ಕೇಳಿದಂತಾಗುತ್ತಿತ್ತು.
  17. ನಾವು ಎಲ್ಲಿಗಾದರೂ ಹೋದರೆ ಪ್ರವಾಸ ಮುಗಿಸಿ ವಾಪಸಾದ ನಂತರ ನಮ್ಮನ್ನು ವಿಚಾರಿಸಿ ವಿವರಗಳನ್ನು ಕೇಳುವ ಮಿತ್ರರ ದೃಷ್ಟಿಯನ್ನೂ ನಾವೂ ಪ್ರವಾಸದಲ್ಲಿ ಪರಿಗಣಿಸುತ್ತೇವೆ.
  18. ರಾಜೀವ್‌ಗಾಂಧಿ ನಮ್ಮ ಜನತೆಗೆ ಹತ್ತಿಸಿರುವ ಇಪ್ಪತ್ತೊಂದನೆಯ ಶತಮಾನದ ಪಿತ್ತ ನೋಡಿದರೆ ಇನ್ನು ಹತ್ತು ವರ್ಷಗಳೊಳಗಾಗಿ ಅಂಡಮಾನ್ ನಾಶವಾಗಬಹುದೆಂದು ನನಗನ್ನಿಸುತ್ತದೆ.
  19. ಮರಗಳಿದ್ದಲ್ಲಿ ಮಲೆಯಾಳಿಗಳನ್ನು ನೋಡಿದರೆ ಶಕುನ ನೋಡಿದಂತಾಗುತ್ತದೆ.
  20. ಪೂಜೆಯ ಭಟ್ಟನಿಗೆ ತೆಂಗಿನಕಾಯಿ ಒಡೆಯಲು ಸುತ್ತಮುತ್ತ ಯಾವ ಕಲ್ಲಾಗಲೀ ಕತ್ತಿಯಾಗಲೀ ಕಾಣಲಿಲ್ಲ. ಹಾಗಾಗಿ ಆತ ಕಾಯನ್ನು ಪಂಪ್ ಸೆಟ್ಟಿನ ಉಕ್ಕಿನ ಕವಚದ ಮೇಲೆ ಕುಕ್ಕಿದ. ಭಟ್ಟನ ಕೈಯಲ್ಲಿದ್ದ ತಿಪಟೂರಿನ ತೆಂಗಿನಕಾಯಿ ಹೇಗಿತ್ತೋ ಹಾಗೇ ಇತ್ತು! ಕಿರ್ಲೋಸ್ಕರ್ ಪಂಪ್ ಸೆಟ್ಟು ಮಾತ್ರ ಸರಿಯಾಗಿ ಎರಡು ಹೋಳಾಯ್ತು!
ಕೃತಿಯ ಹೆಸರು         :    ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್

ಲೇಖಕರು                 :    ಕೆ.ಪಿ. ಪೂರ್ಣಚಂದ್ರ ತೇಜಸ್ವಿ


ಪ್ರಕಾಶಕರು               :    ಪುಸ್ತಕ ಪ್ರಕಾಶನ, ಮೈಸೂರು

1990ರಲ್ಲಿ ಮೊದಲ ಮುದ್ರಣವಾಗಿದ್ದ ಈ ಕೃತಿ 2008ರ ಹೊತ್ತಿಗೆ ಒಂಬತ್ತು ಮುದ್ರಣಗಳನ್ನು ಕಂಡಿದೆ.

ಕೃತಿಯ ಬೆನ್ನುಡಿಯಿದು:
'ಅಲೆಮಾರಿಯ ಅಂಡಮಾನ್' ಕನ್ನಡ ಸಾಹಿತ್ಯದಲ್ಲಿ ಈವರೆಗೂ ಬಂದಿಲ್ಲದಹೊಸರೀತಿಯ ಪ್ರವಾಸ ಕಥನ. ಕಾಲ ಮತ್ತು ದೇಶಗಳಲ್ಲಿ ಅಥವಾ ಚರಿತ್ರೆ ಮತ್ತು ವರ್ತಮಾನಗಳಲ್ಲಿ ಒಮ್ಮೆಲೇ ಚಲಿಸುವ ಬರಹಗಾರರ ಪ್ರಜ್ಞೆ ಅನುಭವುಗಳ ಅನೇಕ ಆಯಾಮಗಳನ್ನು ಒಟ್ಟೊಟ್ಟಿಗೇ ಸೃಷ್ಟಿಸುತ್ತದೆ. ಅಲೆಮಾರಿಯ ಅಂಡಮಾನ್ ಹೊಸರೀತಿಯ ಕಥನತಂತ್ರವನ್ನೇ ಕನ್ನಡ ಸಾಹಿತ್ಯದಲ್ಲಿ ಸೃಷ್ಟಿಸಿದೆ.
***

12 comments:

ಕ್ಷಣ... ಚಿಂತನೆ... said...

ಸತ್ಯನಾರಾಯಣ ಸರ್‍, ಅಲೆಮಾರಿಯ ಅಂಡಮಾನ್‌ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಈ ಪುಸ್ತಕ ಓದಿಲ್ಲ. ಓದಬೇಕೆನಿಸುತ್ತಿದೆ.

ಧನ್ಯವಾದಗಳು.

ಬಿಸಿಲ ಹನಿ said...

ಸತ್ಯನಾರಾಯಣವರೆ,
ನಾನು ಪುಸ್ತಕದ ಪರಿಚಯವಿರಬೇಕೆಂದುಕೊಂಡಿದ್ದೆ. ಆದರೆ ಓದಲು ಆರಂಭಿಸಿದ ಮೇಲೆ ಇದು ಹೈಲೈಟ್ ಮಾತ್ರ ಅಂತ ಗೊತ್ತಾಯಿತು. ಒಳ್ಳೊಳ್ಲೆ ಸಾಲುಗಳನ್ನು ಹೆಕ್ಕಿ ತೆಗಿದಿದ್ದೀರಿ. " ಈ ಪ್ರವಾಶಿಧಾಮಗಳ ಒಳಚರಂಡಿ ವ್ಯವಸ್ಥೆಗಳೆಲ್ಲಾ ನಿರೋಧ್‌ಗಳು ಸಿಕ್ಕಿಹಾಕಿಕೊಂಡು ನೀರು ಹೋಗದಂತೆ ಕೆಟ್ಟಿರುತ್ತವೆ" ಬರಿ ಪ್ರವಾಸಿ ತಾಣಗಳು ಮಾತ್ರವಲ್ಲ ಬೆಂಗಳೂರಿನ ಕೆಲವು ಕಾಲೇಜುಗಳ ಟೈಲೊಟ್‍ಗಳ ಹಣೆಬರಹವೂ ಇದೇ ಆಗಿದೆ. ಟೈಲೊಟ್ ಕಟ್ಟಿತೆಂದರೆ ಅದು ನಿರೋಧ್‍ಗಳಿಂದ ಜಾಮ್ ಆಗಿದೆ ಅಂತಾನೇ ಅರ್ಥ ಅಂತ ನಮಗೆ ಅರ್ಥವಾಗಿದ್ದು ನಮ್ಮ ಕಾಲೇಜಿನ ಟೈಲೊಟ್‍ಗಳನ್ನು ಕ್ಲೀನ್ ಮಾಡಿಸಿದಾಗಲೇ ಗೊತ್ತಾಗಿದ್ದು. ಇರಲಿ. ಚನ್ನಾಗಿಪರಿಚಯಿಸಿದ್ದೀರಿ. ಇಷ್ಟವಾಯಿತು.

laxmi machina said...

naanu kuda i pusthakavannu odiddene. chennagide. hekkida vakyagalu chennagide

ಸಾಗರದಾಚೆಯ ಇಂಚರ said...

ಅಂಡಮಾನ್‌ ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಓದಬೇಕೆನಿಸುತ್ತಿದೆ.

Unknown said...

ಅಲೆಮಾರಿ ಅಂಡಮಾನ್ ಓದಿದ್ದ ಮತ್ತೆ ನೆನಪಿಸಿತು ನಿಮ್ಮ ಬರಹ.

balasubramanya said...

ನಾನು ಪೂರ್ಣ ಚಂದ್ರ ತೇಜಸ್ವಿಯವರ ಎಲ್ಲ ಪುಸ್ತಕಗಳನ್ನು ಓದಿದ್ದೇನೆ ,ಹಾಗು ಸಂಗ್ರಹಿಸಿದ್ದೇನೆ.ಬಹುಷಃ ನನ್ನ ತಿರುಗಾಟಕ್ಕೆ ,ಅಲೆದಾಟಕ್ಕೆ,ಹುಡುಕಾಟಕ್ಕೆ, ಅವರ ಪುಸ್ತಕಗಳು ಪ್ರೇರಣೆ ನೀಡಿವೆ.ಅಲೆಮಾರಿಯ ಅಂಡಮಾನಿನ ಅನುಭವಗಳ ಜೊತೆಗೆ ನೈಲ್ ನದಿಯ ಅನ್ವೇಷಣೆ ಸಾಹಸವನ್ನು ಕನ್ನಡಿಗರಿಗೆ ಪರಿಚಯಿಸಿದ ಕೀರ್ತಿ ಅವರದು.ನಿಮ್ಮಿಂದ ಇವರ ರಚನೆಯ ಮಿಲ್ಲೇನಿಯಂ ಪುಸ್ತಕಗಳ ಬಗ್ಗೆ,ಅದರಲ್ಲೂ ಮಹಾಪಲಾಯನ ಪುಸ್ತಕದ ಬಗ್ಗೆ ,ಕಾರ್ವಾಲೋ ,ಕಾಡಿನ ಕಥೆಗಳು ,ಕಿರಗೂರಿನ ಗಯ್ಯಾಳಿಗಳ ಅವಾಂತರದ ಬಗ್ಗೆ, ಮಿಸ್ಸಿಂಗ್ ಲಿಂಕ್, ಇವೆಲ್ಲ ಪುಸ್ತಗಳ ಬಗ್ಗೆ ಲೇಖನ ಹೇಗೆ ಬರುತ್ತೆ ಎಂದು ಕಾಯುತ್ತಿದ್ದೇನೆ.ಉತ್ತಮ ಕಾರ್ಯಕ್ಕೆ ಜಯವಾಗಲಿ.ನಿಮಗೆ ಶುಭಾಶಯಗಳು ...ಬಾಲು ಮೈಸೂರು

shivu.k said...

ಸರ್,

ಅಲೆಮಾರಿಯ ಅಂಡಮಾನ್ ನನ್ನ ಮೆಚ್ಚಿನ ಕೃತಿಗಳಲ್ಲಿ ಒಂದು. ಯಾವಾಗ ಕೈಗೆ ತೆಗೆದುಕೊಂಡರೂ ಹೊಸತರಂತೆ ಓದಿಸಿಕೊಳ್ಳುತ್ತದೆ. ನನ್ನ ಶ್ರೀಮತಿಗೂ ಪಾಕಕ್ರಾಂತಿಯಂತೆ ಇದು ಕೂಡ ತುಂಬಾ ಇಷ್ಟ. ನಿಮ್ಮ ಕೆಲವು ವಾಕ್ಯಗಳನ್ನು ಓದಿದ ಮೇಲೆ ಮತ್ತೊಮ್ಮೆ ಓದಲು ಇವತ್ತೆ ಕೈಗೆತ್ತಿಕೊಳ್ಳುತ್ತೇನೆ..
ನೀವು ಕೊಟ್ಟಿರುವ ಕೆಲವು ವಾಕ್ಯಗಳನ್ನು ಮತ್ತೊಮ್ಮೆ enjoy ಮಾಡಲು ಓದಬೇಕೆನಿಸುತ್ತದೆ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಪ್ರವಾಸಕಥನಗಳಲ್ಲಿ ನನ್ನ favorite ಪುಸ್ತಕ "ಅಲೆಮಾರಿಯ ಅಂಡಮಾನ್". ಅದರಲ್ಲಿ ಮಲೇರಿಯಾ ಮಾತ್ರೆ ನುಂಗಿದರೆ ಎವೆರಿಥಿಂಗ್ ವ್ಯಾನಿಷ್ ಎಂದು ಹೇಳುವ ಪೆಥಾಲಜಿಸ್ಟ್ ಚಂದ್ರು ಅವರನ್ನು ಭೇಟಿಮಾಡಿದ್ದೆ. ಬಸ್ಸಲ್ಲಿ ಸೀಟಿಗಾಗಿ ಜಗಳವಾಡುವುದು... ಎಲ್ಲ ನೆನಪಾಗುತ್ತಿದೆ. ಮತ್ತೆ ಓದಬೇಕೆನಿಸಿದೆ.

PARAANJAPE K.N. said...

ನಾನು ಇದನ್ನು ಓದಿದ್ದೇನೆ,ಚೆನ್ನಾಗಿದೆ, ನಿಮ್ಮ ಬ್ಲಾಗ್ ಬರಹ ಓದಿದ ಮೇಲೆ ಮತ್ತೊಮ್ಮೆ ಓದಬೇಕೆನಿಸಿದೆ

PARAANJAPE K.N. said...

ನಾನು ಇದನ್ನು ಓದಿದ್ದೇನೆ,ಚೆನ್ನಾಗಿದೆ, ನಿಮ್ಮ ಬ್ಲಾಗ್ ಬರಹ ಓದಿದ ಮೇಲೆ ಮತ್ತೊಮ್ಮೆ ಓದಬೇಕೆನಿಸಿದೆ

AntharangadaMaathugalu said...

ಸಾರ್...
ನಿಮ್ಮ T20 ವಿಧ ನಿಜಕ್ಕೂ ಚೆನ್ನಾಗಿದೆ. ಈ ಪುಸ್ತಕ ನಾನು ಓದಿಲ್ಲ. ಖಂಡಿತಾ ಓದುತ್ತೇನೆ. ಧನ್ಯವಾದಗಳು

Ittigecement said...

ಸತ್ಯನಾರಾಯಣರೆ...

ತೇಜಸ್ವಿಯವರಿಗೆ ತೇಜಸ್ವಿಯವರೆ ಸಾಟಿ...

ಅವರ ನೇರ ಮಾತುಗಳು ಕೆಲವೊಮ್ಮೆ ಕಾರಂತಜ್ಜನನ್ನು ನೆನಪಿಸುತ್ತವೆ. ಅಲ್ಲವೆ?

ಮತ್ತೊಮ್ಮೆ ಈ ಕೃತಿಯನ್ನು ಓದುವ ಆಸೆ ಹುಟ್ಟಿಸಿ ಬಿಟ್ರಿ...