Thursday, March 08, 2012

ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ!

ಭಾವಗೀತೆಯಾಗಿ, ಚಲನಚಿತ್ರಗೀತೆಯಾಗಿ ಹಲವಾರು ದಶಕಗಳಿಂದ ಕನ್ನಡಿಗರ ಜನಮಾನಸದಲ್ಲಿ ನೆಲೆಯಾಗಿರುವ ಹಾಡು ’ದೋಣಿಹಾಡು’. ಒಂದು ಸುಂದರ ಮುಂಜಾವಿನಲ್ಲಿ ಕೆರೆಯ ನೀರಿನಲ್ಲಿ ದೋಣಿಯಾತ್ರೆ ಮಾಡುತ್ತಾ, ಸೂರ್ಯೋದಯದ ಸೊಬಗನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿರುವ ಹಾಡು ಇದು. ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ! ಎಂದು ಆರಂಭವಾಗುವ ಈ ಕವಿತೆಯ ಹುಟ್ಟಿಗೆ ಒಂದು ಐತಿಹಾಸಿಕ ಮಹತ್ವವಿದೆ. ಈ ಹಾಡು ಹುಟ್ಟಿ ಎಂಬತ್ತು ವರ್ಷಗಳೇ ಕಳೆದಿವೆ!
ಕುಕ್ಕನಹಳ್ಳಿ ಕೆರೆಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಅದೇ ಕುಕ್ಕನಹಳ್ಳಿ ಕೆರೆಗೂ ಮೈಸೂರು ವಿಶ್ವವಿದ್ಯಾನಿಲಯಕ್ಕೂ, ಕವಿ ಕುವೆಂಪು ಅವರಿಗೂ ಬಿಡಿಸಲಾಗದ ನಂಟಿದೆ. ಒಂಟಿಕೊಪ್ಪಲಿನ ಕಡೆಯಿಂದ ಮಹಾರಾಜ ಕಾಲೇಜಿನ ಕಡೆಗೆ ಬರಲು ಒಮ್ಮೊಮ್ಮೆ ಕುಕ್ಕನಹಳ್ಳಿ ಕೆರೆಯಲ್ಲಿ ದೋಣಿ ಏರಿ ಬರುವುದು ನಡೆಯುತ್ತಿತ್ತು. ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಪ್ರೊ.ಜೆ.ಸಿ.ರಾಲೊ ಅವರು ಒಂದು ಸೀಮೆದೋಣಿಯನ್ನು ತರಿಸಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಕುಕ್ಕನಹಳ್ಳಿ ಕೆರೆಯಲ್ಲಿ ದೋಣಿಯಾಟಕ್ಕೆ ಅವಕಾಶ ಕಲ್ಪಿಸಿದ್ದರಂತೆ. ೧೯೨೦-೩೦ರ ದಶಕದಲ್ಲಿ ಕುಕ್ಕನಹಳ್ಳಿಯ ಕೆರೆ ಈಗಿನಂತಿರಲಿಲ್ಲ; ಹೇಗಿತ್ತು ಎಂಬುದಕ್ಕೆ ಕುವೆಂಪು ಅವರ ಸಾಹಿತ್ಯದಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಿವೆ. ಕುಕ್ಕನಹಳ್ಳಿಯ ಕೆರೆಯ ಸಾಮೀಪ್ಯ, ಕೆರೆಯ ನೀರಿನಲ್ಲಿ ದೋಣೀಯೇರಿ ತೇಲುತ್ತಾ ಸುತ್ತಲಿನ ಹಸಿರು ಸಸ್ಯರಾಶಿ, ದೂರದ ಚಾಮುಂಡಿಬೆಟ್ಟ, ಸೂರ್ಯೋದಯ, ಸೂರ್ಯಾಸ್ತ ಇವುಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕವಿಗೆ ಸಹಜವಾಗಿಯೇ ಸಂತೋಷ ನೀಡಿರಬಹುದು. ಕುಕ್ಕನಹಳ್ಳಿಯ ಕೆರೆಯಾಚೆ ಒಮ್ಮೆ ನಡೆದಾಗ, ಕವಿಗೆ, ಸಾಯಂಕಾಲವು ’ಧ್ಯಾನದೊಳಿರ್ಪ ತಪಸ್ವಿನಿಯಂತೆ’ ತೋರುತ್ತಿತ್ತಂತೆ! ದಿನವೂ ಪ್ರಾತಃಕಾಲ ಒಂದು-ಒಂದೂವರೆಗಂಟೆಯ ಹೊತ್ತು ನೀರಿನಲ್ಲಿ, ಲಯಬದ್ಧವಾಗಿ ಹುಟ್ಟುಹಾಕುತ್ತಾ ಸಾಗುತ್ತಿದ್ದಾಗಲೇ ಕವಿಗೆ ಈ ಹಾಡು ಹೊಳೆದಿದ್ದು. ೯.೮.೧೯೩೦ ಈ ಹಾಡನ್ನು ರಚಿಸಿ ಹಾಡಲು ಕೊಟ್ಟರಂತೆ. ನಂತರ ದೋಣಿಯಲ್ಲಿ ಹೋಗುವಾಗಲೆಲ್ಲಾ ಹುಟ್ಟಿನ ಲಯಕ್ಕೆ ಸರಿಯಾಗಿ ಈ ಹಾಡನ್ನು ದೋಣಿಯಲ್ಲಿದ್ದವರೆಲ್ಲಾ ಹಾಡುತ್ತಿದ್ದರಂತೆ. ಆ ದಿನಗಳಲ್ಲಿ. ಕಾಲೇಜಿನ ದೋಣಿ ಕಲಾಪ ಮತ್ತು ಈಜುಗಾರಿಕೆ ವಿಭಾಗದ ಕ್ಯಾಪ್ಟನ್ ಆಗಿದ್ದ ಬಿ.ಟಿ.ಗೋವಿಂದಯ್ಯ ಎಂಬುವವರು ಈ ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದವರು, ಹೀಗೆ ದಾಖಲಿಸಿದ್ದಾರೆ.
"ತರುಣ ಕವಿ ಕುವೆಂಪು ನಿಂತು ನೋಡಿದರು. ನಾವೂ ಅವರನ್ನು ನೋಡಿದೆವು. ಗೌರವಾನ್ವಿತ ವ್ಯಕ್ತಿಯಲ್ಲವೇ? “ಬರ್ತಿರಾ, ಬನ್ನಿ” ಎಂದು ಕವಿಗೆ ನಾನು ಆಹ್ವಾನವಿತ್ತೆ. ದೋಣಿಯನ್ನು ನಾವಿಕರು ದಂಡೆಯ ಸಮೀಪ ತಂದರು. ಮುಗುಳ್ನಗು ಬೀರುತ್ತಾ ಪುಟ್ಟಪ್ಪನವರು ಮೆಟ್ಟಲುಗಳನ್ನಿಳಿದು ಬಂದರು. ನೀರಿನಲ್ಲಿಳಿದು ದೋಣಿಯನ್ನು ಹಿಡಿದು ಅವರಿಗೆ ದೋಣಿ ಏರಲು ನೆರವಾದೆ. ಅಲುಗಾಡುತ್ತಿದ್ದ ದೋಣಿಯಲ್ಲಿ ತಡವರಿಸುತ್ತಾ ಅವರು ಕೊನೆಯಂಚಿನ ಅತಿಥಿ ಆಸನದಲ್ಲಿ ಕುಳಿತರು. ದೋಣಿ ದಡ ಬಿಟ್ಟಿತು. ಅದರ ಚಲನ ವೇಗ ತೀವ್ರವಾಯಿತು. ಐವರು ಹುಟ್ಟು ಹಿಡಿದವರು ಕ್ರಮಬದ್ಧವಾಗಿ ಸಟ್ಟುಗ ಮೊಗೆಯಲಾಗಿ ಕಡಾಣಿಯ ಠಕ್ ಠಕ್ ಸದ್ದು, ಸೀಳುವ ನೀರಿನ ಸುಯ್ಯಿ, ತಾಳಮೇಳವಾಯಿತು. ಕವಿಯ ಕುಂಡಲಿನಿ ಶಕ್ತಿ ಕುದುರಿತು. ಹೆಚ್ಚಿನ ಮಾತಿಲ್ಲ. ಅವರ ಭಾವೋನ್ಮುಖವಾದ ಶ್ರೀವದನದಿಂದ ‘ಗೋವಿಂದಯ್ಯ, ನೋಡಿ, ಹುಟ್ಟು ಹಾಕಲು ಈ ಪದಗಳ ನೆರವಾದೀತೇ? ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ’ ಎಂದರು. ಸಟ್ಟುಗ ಹಿಡಿದು ನೀರು ಮೊಗೆತಕ್ಕೆ ನಾನು ಕುಳಿತೆ. ಕುವೆಂಪು ಧ್ವನಿಗೂಡಿಸಿದರು. ತಾಳ ಸರಿಗೂಡಿತು. ‘ಬಲು ಸೊಗಸು ಜೋಡಿ’ ಎಂದೆ. ಶ್ರೀ ಪುಟ್ಟಪ್ಪನವರು ಸಶ್ರಾವ್ಯವಾಗಿ ಹಾಡುತ್ತಾರೆ. ಹಾಡಿದರು. ಕವಿಯ ಹೃದಯದಲ್ಲಿ ಹೊತ್ತು ಬ್ರಾಹ್ಮೀ ಮುಹೂರ್ತದಲ್ಲಿ ದೋಣಿ ವಿಹಾರ ವೈಭವೋಪೇತವಾಗಿತ್ತು. ಕುವೆಂಪು ಅತಿಥಿಯಲ್ಲ, ಆಗಂತುಕನಲ್ಲ ನಮ್ಮ ಕೂಟಕ್ಕೆ ಸೇರಿಹೋದವರೆಂದೆನಿಸಿತು. ಆನಂದದ ವಾತಾವರಣದಲ್ಲಿ ನಾವೆಲ್ಲರೂ ಮೈಮರೆಯುತ್ತಿದ್ದೆವು. ಏನೊಂದು ಸಿಹಿ!"
’ದೋಣಿಹಾಡು’
ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ!
ಬೀಸುಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ!
ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ,
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ,
ನೋಡಿ, ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ! ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ!
(’ಮೂಡುವೆಣ್ಣು’ ಎಂಬ ಪದಪ್ರಯೋಗ ಗಮನಾರ್ಹ)
ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡತೈತರೆ ಬಾಲಕೋಮಲ ದಿನಮಣಿ!
ಹಸುರು ಜೋಳದ ಹೊಲದ ಗಾಳಿ ತೀಡಿ ತಣ್ಣಗೆ ಬರುತಿದೆ,
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ!
ದೂರಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ;
ಅದನೆ ಹೋಲುತ, ಅಂತೆ ತೇಲುತ ದೋಣಿಯಾಟವನಾಡಿರಿ!
ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ!
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ!
ದೋಣಿಯ ಚಲನೆಯ ಲಯದೊಂದಿಗೆ ಆರಂಭವಾಗುವ ಹಾಡು, ಸೂರ್ಯೋದಯದ ಸೌಂದರ್ಯವನ್ನು ಕಟ್ಟಿಕೊಡುತ್ತಲೇ, ಬದುಕಿನ ಅನಂತತೆಯನ್ನು ಮನಗಾಣಿಸಿ, ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ! ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ! ಎಂಬ ತಾತ್ವಿಕತೆಯನ್ನು ಮನಗಾಣಿಸುತ್ತದೆ! ಹಸುರುಹುಲ್ಲಿನ ತುದಿಯಲ್ಲಿ ಮುತ್ತಿನಂತೆ ಬೆಳ್ಳಗಿರುವ ಸಾವಿರ ಸಾವಿರ ಹನಿಗಳ ಸಾಲು, ಉದಯರವಿಯ ಪ್ರಥಮಕಿರಣಗಳು ಬಿದ್ದಗಳಿಗೆಯಲ್ಲಿ ಒಂದೊಂದು ಹನಿಗಳೂ ಒಂದೊಂದು ಬಿಡಿ ವಜ್ರದಂತೆ ಪ್ರಕಾಶಿಸುವ ಶಿವಸೌಂದರ್ಯವನ್ನು ಕವಿ ಪದರೂಪದಲ್ಲಿ ಸೆರೆಹಿಡಿದಿರುವುದರಲ್ಲೇ ಈ ಕವಿತೆಯ ಅನನ್ಯತೆ ಅಡಗಿದೆ. ಸೂರ್ಯೋದಯವರ್ಣನೆಯಿಂದ ’ವಿಶ್ವಕವಿವರನ ಕಾವ್ಯಂ ಭುವನವಿದು’ ಎಂಬ ಭಾವ ಸಹೃದಯನಲ್ಲಿ ಮೂಡಿ ಪ್ರಜ್ವಲಿಸಿ ಮರೆಯಾಗಿಬಿಡುತ್ತದೆ! ಒತ್ತಕ್ಷರಗಳು ಅತಿ ವಿರಳವಾಗಿರುವುದು ಈ ಕವಿತೆಯ ಲಯ ದೋಣಿಯ ತೇಲುವಿಕೆಯ ಲಯದೊಂದಿಗೆ ಮಿಳಿತವಾಗಿರುವುದಕ್ಕೆ ಸಾಕ್ಷಿಯಾಗಿವೆ. ಪಲ್ಲವಿಯ ಸಾಲುಗಳಲ್ಲಂತೂ ಒತ್ತಕ್ಷರಗಳೇ ಇಲ್ಲ! ಒಂದು ಮತ್ತು ಚರಣಗಳಲ್ಲಿ ಕೇವಲ ಮೂರು ಮೂರು; ಎರಡನೆಯದರಲ್ಲಿ ಒಂದು ಮಾತ್ರ! 3, 4; 3, 4; 3, 4; -4 ಮಾತ್ರಾಗಣಗಳ ಪಂಕ್ತಿಗಳು ನೀರಿನ ಅಲೆಗಳಂತೆಯೇ ತಳುಕಿ ಬಳುಕಿ ಭಾವವನ್ನು ಹೊಮ್ಮಿಸುತ್ತವೆ! ಇಡೀ ಪದ್ಯವನ್ನು ಕಿರುಭಾಮಿನಿ ಷಟ್ಪದಿಯ ರೂಪದಲ್ಲಿಯೂ ಬರೆಯಬಹುದು, ಕೆಳಕಂಡಂತೆ!
ದೋಣಿ ಸಾಗಲಿ,
ಮುಂದೆ ಹೋಗಲಿ,
ದೂರ ತೀರವ ಸೇರಲಿ!
ಬೀಸುಗಾಳಿಗೆ
ಬೀಳುತೇಳುವ
ತೆರೆಯ ಮೇಗಡೆ ಹಾರಲಿ!

ಹೊನ್ನಗಿಂಡಿಯ
ಹಿಡಿದು ಕೈಯೊಳು
ಹೇಮವಾರಿಯ ಚಿಮುಕಿಸಿ,
ಮೇಘಮಾಲೆಗೆ
ಬಣ್ಣವೀಯುತ
ಯಕ್ಷಲೋಕವ ವಿರಚಿಸಿ,

ನೋಡಿ, ಮೂಡಣ
ದಾ ದಿಗಂತದಿ
ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ!
ಚೆಲುವೆಯಾಕೆಗೆ
ಸುಪ್ರಭಾತವ ಬಯಸಿರಿ!

ಕೆರೆಯ ಅಂಚಿನ
ಮೇಲೆ ಮಿಂಚಿನ
ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು
ಮೂಡತೈತರೆ
ಬಾಲಕೋಮಲ ದಿನಮಣಿ!

ಹಸುರು ಜೋಳದ
ಹೊಲದ ಗಾಳಿಯು
ತೀಡಿ ತಣ್ಣಗೆ ಬರುತಿದೆ,
ಹುದುಗಿ ಹಾಡುವ
ಮತ್ತಕೋಕಿಲ
ಮಧುರವಾಣಿಯ ತರುತಿದೆ!

ದೂರಬೆಟ್ಟದ
ಮೇಲೆ ತೇಲುವ
ಬಿಳಿಯ ಮೋಡವ ನೋಡಿರಿ;
ಅದನೆ ಹೋಲುತ,
ಅಂತೆ ತೇಲುತ
ದೋಣಿಯಾಟವನಾಡಿರಿ!

ನಾವು ಲೀಲಾ
ಮಾತ್ರ ಜೀವರು,
ನಮ್ಮ ಜೀವನ ಲೀಲೆಗೆ!
ನಿನ್ನೆ ನಿನ್ನೆಗೆ,
ಇಂದು ಇಂದಿಗೆ
ಇರಲಿ ನಾಳೆಯು ನಾಳೆಗೆ!
ಮುಂದೆ, ೨೪.೮.೧೯೩೦ರಂದು ತುಂಬಾ ಹೊತ್ತು ಮೈಮರೆತು ದೋಣಿಯಲ್ಲಿ ತೇಲುತ್ತಿದ್ದರಂತೆ. ಕವಿ ಹಾಕುತ್ತಿದ್ದ ಹುಟ್ಟು ಕವೆಯಿಂದ ತಪ್ಪಿ, ಕಾಲು ಮೇಲಾಗಿ ದೋಣಿಯೊಳಗೆ ಬಿದ್ದು ಸೊಂಟಕ್ಕೆ ಪೆಟ್ಟೂ ಕೂಡ ಮಾಡಿಕೊಂಡಿದ್ದರಂತೆ. ಈ ಘಟನೆಯನ್ನೂ ಬಿ.ಟಿ.ಗೋವಿಂದಯ್ಯ ದಾಖಲಿಸಿದ್ದಾರೆ. "ಕಾಲನಿಗೆ ಅಸೂಯೆಯಿದೆ. ನಮ್ಮ ಆನಂದವನ್ನು ಮೊಟಕುಗೊಳಿಸಿದ. ಕುವೆಂಪು ಚುಕ್ಕಾಣಿ ಹಿಡಿದರು. ಪರಿಣತರಾದರು. ಹುಟ್ಟು ಹಾಕುವುದನ್ನು ಕಲಿಯಬೇಕು. ನಾನು ವಿವರ ಹೇಳಿಕೊಟ್ಟೆ. ಸಟ್ಟುಗ, ನೀರೊಳಗೆ ಸಾಕಷ್ಟು ಅದ್ದಿ ಮೊಗೆತದ ಸೆಳೆತಕ್ಕೆ ಸಿಗಬೇಕು ಇಲ್ಲವಾದರೆ ಕಡಾಣಿಯಿಂದ ಜಾರಿ ದೇಹಕ್ಕೆ ಅಪ್ಪಳಿಸೀತು ಎಂಬ ಎಚ್ಚರ ಕೊಟ್ಟಿದ್ದೆ. ಒಂದೇ ಸಾಲಿನಲ್ಲಿ ಈರ್ವರು ಕುಳಿತು ಎರಡು ಬದಿಯಿಂದಲೂ ಹುಟ್ಟು ಹಾಕಬಹುದಿತ್ತು. ನಾನು ಜತೆ ಕುಳಿತು ಪ್ರಾಯೋಗಿಕ ಅಭ್ಯಾಸಕ್ಕೆ ಅನುವು ಮಾಡಿದೆ. ಪುಟ್ಟಪ್ಪನವರು ಸಟ್ಟುಗ ಹಿಡಿದು ಹುಟ್ಟು ಹಾಕಿದರು. ಸರಿದೋರಿತು. ಕವಿಯ ಬಾಯಲ್ಲಿ ಸ್ವರ ಮೂಡಿತು. ‘ಭಾವನಾ ಪ್ರಪಂಚಕ್ಕೇರದೆ ವಾಸ್ತವ ಪ್ರಪಂಚದಲ್ಲಿರಬೇಕು ಪುಟ್ಟಪ್ಪನವರೇ-ಸಟ್ಟುಗ ಅಣಿಯಿಂದ ಜಾರೀತು’ ಎಂದು ನಾನು ಹೇಳುವಷ್ಟರಲ್ಲಿ, ಕುವೆಂಪು ಹಿಡಿದಿದ್ದ ಸಟ್ಟುಗ ‘ಹಿಮಮಣಿ’ ಸೆಳೆತಕ್ಕೆ ಲಾಳದಿಂದ ಹೊರ ಚಿಮ್ಮಿತು. ಬಾಗಿ ಎಳೆಯುತ್ತಿದ್ದ ತರುಣ ಕವಿ ಧೊಪ್ಪನೆ ದೋಣಿಯ ತಳಕ್ಕೆ ಬಿದ್ದರು- ಹಲಗೆ ತಾಕಿತು. ತಳದ ಅಡ್ಡಪಟ್ಟಿಗಳಿಂದ ಬೆನ್ನು ಮೂಳೆಗೆ ನೋವಾಯಿತು. ಅವರನ್ನು ಮೇಲೆಳಿಸುವ ಕೆಲಸ ಕೆಲವರಿಗೆ, ದೋಣಿಯನ್ನು ದಂಡೆಗೆ ಒಯ್ಯುವ ಕೆಲಸ ಇತರರಿಗೆ. ಒಬ್ಬನಂತೂ ದಡ ಸೇರುತ್ತಲೇ ದೋಣಿಯಿಂದ ಹಾರಿ, ಓಡಿ ಓಡಿ ದೂರದಲ್ಲಿ ಹಾಯುತ್ತಿದ್ದ ಟಾಂಗಾ ಒಂದನ್ನು ತಂದ. ಮೃದುವಾಗಿ ಕವಿಯನ್ನು ದೋಣಿಯಿಂದ ದಂಡೆಗೆ, ದಂಡೆಯಿಂದ ಟಾಂಗಾಕ್ಕೆ ಏರಿಸಿದ್ದಾಯಿತು. ನಾನು ಒದ್ದೆಯಾಗಿದ್ದ ಮೈಗೆ ಉಡುಪು ಧರಿಸಿಕೊಂಡು ಹೊರಟೆ. ಕವಿಯಾಗ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಡಾಕ್ಟರು ಮತ್ತು ನರ‍್ಸ್‌ಗಳು ಗೌರವ ಉಪಚಾರಗಳಿಂದ ಚಿಕಿತ್ಸೆ ಮಾಡಿ ಪುಟ್ಟಪ್ಪನವರು ಗುಣಮುಖರಾದರು."
ಜಟ್ಟಿಯೊಬ್ಬನಿಂದ ಉಳುಕು ತೆಗೆಸಿದರೂ ನೋವು ಹೋಗಲಿಲ್ಲ. ಆಶ್ರಮದಲ್ಲಿ ಸಹವಾಸಿಯಾಗಿದ್ದ ಪ್ರಿಯಾನಾಥ್ ಮಹಾರಾಜ್ (ಸ್ವಾಮಿ ಚಿನ್ಮಾತ್ರಾನಂದ) ಅವರು ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಮೇಲಿಂದ ಮೇಲೆ ಎಲೆಕ್ಟ್ರಿಕ್ ಮಸಾಜ್ ಮಾಡಿಸಿಕೊಂಡು ಕಳೆಯಬೇಕಾಯಿತಂತೆ! ಆ ನೋವಿನಲ್ಲಿ ೫.೯.೧೯೩೦ರಂದು ಬರೆದ ಸಾಲುಗಳಿವು.
ಸೊಗದಂತೆಯೇ ನೋವೂ ಧೀರರಿಗಾಹಾರಮಲ್ತೆ?
ನೋವೆ ಬಾಳಿಗೆ ಸಾಣೆಯಲ್ತೆ? ಮಣಿಕರ್ಣಿಕೆಯಲ್ಲಿ
ಮಸಣಗಾಹಿಯು ನೀನಲ್ತೆ? ಬೃಂದಾವನದಲ್ಲಿ ತುರುಗಾಹಿಯೂ
ನೀನಲ್ತೆ? ಅದರಿಂದಲೆ ನಾನು ನಿನ್ನನ್ನು ಸುಖದಲ್ಲಿಯೂ
ದುಃಖದಲ್ಲಿಯೂ ಕಂಡು ಆರಾಧಿಸಬಲ್ಲೆ.
ಈ ದೋಣಿಯಾಟ, ದೋಣಿಹಾಡು ಬಹಳದಿನಗಳ ಕಾಲ ಮುಂದುವರೆದಿತ್ತು. ೨೧.೨.೧೯೩೧ ಪಂಜೆ ಮಂಗೇಶರಾಯರು ಮೈಸೂರಿಗೆ ಬಂದಿದ್ದಾಗ, ಒಂಟಿಕೊಪ್ಪಲಿನ ಆಶ್ರಮದಿಂದ ಕಾಲೇಜಿಗೆ ಹೋಗುವಾಗ ದೋಣಿಯಲ್ಲೇ ಕವಿಗೋಷ್ಠಿ ನಡೆದುಹೋಗುತ್ತದೆ.. ಅಂದು ಮಂಗೇಶರಾಯರು ದೋಣಿಯಲ್ಲಿ ತಮ್ಮದೊಂದು ಕವನ ವಾಚಿಸುತ್ತಾರೆ. ಉದ್ದಕ್ಕೂ ’ದೋಣಿಹಾಡು’ ಗೀತೆಯನ್ನು ಕುವೆಂಪು ಮತ್ತು ಡಿ.ಎಲ್.ನರಸಿಂಹಾಚಾರ್ ಇಬ್ಬರೂ ಕೂಡಿ ಹಾಡುತ್ತಾರೆ. ತೀನಂಶ್ರೀಯವರ ಸ್ವಾಗತಗೀತೆಯನ್ನು ಡಿ.ಎಲ್.ಎನ್. ಹಾಡುತ್ತಾರೆ.
೧೯೩೪ರಲ್ಲಿ ದೋಣಿಹಾಡು ’ನವಿಲು’ ಕವನಸಂಕಲನವನ್ನು ಸೇರಿ ಪ್ರಕಟವಾಗುತ್ತದೆ. ಹಲವಾರು ದಿಗ್ಗಜ ಗಾಯಕರು ಅದನ್ನು ಹಾಡಿ ಜನಪ್ರಿಯಗೊಳಿಸಿದ್ದಾರೆ. ೧೯೬೫ರಲ್ಲಿ ’ಮಿಸ್.ಲೀಲಾವತಿ’ ಚಿತ್ರಕ್ಕೆ ಬಳಸಿಕೊಳ್ಳಲಾಯಿತು. ಚಲನಚಿತ್ರಗೀತೆಯಾಗಿಯೂ ’ದೋಣಿಹಾಡು’ ಚಿರನೂತನವಾಗಿದೆ.

1 comment:

yimnibabu trekker said...

ಅತ್ಯುಪಯುಕ್ತವಾದ ಮಾಹಿತಿ.ಈ ಹಾಡು ನನ್ನ ಅಚ್ಚುಮೆಚ್ಚಿನ ಗೀತೆ. ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ