Saturday, March 24, 2012

ಚೈತ್ರದ ಉರಿಯಲ್ಲಿ ಪಂಪನ ವೃತ್ತಗಳು

ಈಗೊಂದು ವಾರದಿಂದ ಗಮನಿಸುತ್ತಿದ್ದೇನೆ. ನಿಸರ್ಗದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತಿವೆ! ಇನ್ನೇನು ಯುಗಾದಿ ಬರಲಿದೆ. ಬೆಂಗಳೂರಿನಲ್ಲಿ ಅಲ್ಲೊಂದು ಇಲ್ಲೊಂದು ಇರುವ ಮರಗಿಡಗಳು ನಿತ್ಯವೂ ಒಂದೊಂದು ಬಣ್ಣ ಬಳಿದುಕೊಳ್ಳುತ್ತಿವೆ. ಊರಿಗೆ ಹೋಗುವ ದಾರಿಯಲ್ಲಿ ಕಾಣುವ ಹಸಿರು, ಬೇಸಿಗೆಯ ಪ್ರಯಾಣದ ದಣಿವನ್ನು ಮರೆಸುತ್ತದೆ. ನಮ್ಮ ತೋಟದಲ್ಲೂ ಹಸಿರು ಉಕ್ಕುತ್ತಿದೆ. ಅದರಲ್ಲೂ ಮಾವಿನ ಮರಗಳಂತೂ ಹಸಿರನ್ನೂ ಮರೆಸುವಂತೆ ಹೂಮುಡಿದು ತೊನೆದಾಡುತ್ತಿವೆ. ಇಷ್ಟೆಲ್ಲಾ ಹೇಳಿದ ಮೇಲೆ ಇದು ವಸಂತಕಾಲದ ಆಗಮನ, ಚೈತ್ರದ ಸೊಬಗು ಎಂದು ಹೇಳಬೇಕಾಗಿಲ್ಲ ಅಲ್ಲವೆ? ಆದರೆ, ಹೂ ಬಿಟ್ಟು ಕೂತ ಮಾವಿನ ಮರಗಳನ್ನು ನೋಡುವಾಗ ನನಗೆ ನೆನಪಾಗಿದ್ದು ಪಂಪಭಾರತದಲ್ಲಿ ಬಂದಿರುವ ವಸಂತನ ವರ್ಣನೆ. ಅದು ನೆನಪಾಗಲು ಕಾರಣ ಹೀಗಿದೆ. ಶ್ರೀರಾಮಾಯಣದರ್ಶನಂ ಕಾವ್ಯದ ಅಧ್ಯಯನ ಮುಗಿದ ಮೇಲೆ ನಮ್ಮ ತಂಡ ಪಂಪಭಾರತದ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ. ಈಗ ಕಳೆದೆರಡು ವಾರಗಳ ಹಿಂದೆ, ಪಂಪಭಾರತದ ಎರಡನೇ ಆಶ್ವಾಸದಲ್ಲಿರುವ ಪಾಂಡು-ಮಾದ್ರಿಯರ ಪರಿಣಯಕ್ಕೆ ಪೂರ್ವಭಾವಿಯಾಗಿ ಪಂಪ ವಸಂತ ವರ್ಣನೆಯನ್ನು ಮಾಡಿದ್ದಾನೆ. ಅದು ಇನ್ನೂ ನನ್ನ ತಲೆಯಲ್ಲಿ ಕೊರೆಯುತ್ತಲಿರುವುದರಿಂದಲೋ ಏನೋ ಕಣ್ಣಿಗೆ ಕಾಣುವ ಪ್ರಕೃತಿಯೆಲ್ಲವೂ ಹೊಸದಾಗಿ ಕಾಣುತ್ತಿದೆ. ನನ್ನೊಳಗೆ ಹೊಸ ಕವನವೊಂದು ಹುಟ್ಟಬಹುದಾದ ಈ ಸಂದರ್ಭದಲ್ಲೂ, ಪಂಪನ ವಸಂತವರ್ಣನೆಯೇ ಕಣ್ಣಮುಂದೆ ಸುಳಿಯುತ್ತಿದೆ; ಕಿವಿಯಲ್ಲಿ ಭೋರ್ಗರೆಯುತ್ತುದೆ. ಅದಕ್ಕಾಗಿ ಪಂಪನ ವಸಂತವೈಭವವನ್ನೇ ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ನನ್ನದಾಗಿದೆ. ಪಂಪನು ನಾಲ್ಕು ವೃತ್ತಗಳಲ್ಲಿ ಮತ್ತು ಹಲವಾರು ಸಾಲು ಗದ್ಯದಲ್ಲಿ ವಸಂತ ವರ್ಣನೆಯನ್ನು ಮಾಡಿದ್ದಾನೆ. ಅದನ್ನು ಸರಳವಾಗಿ ಬಿಡಿಸಿ, ಅನ್ವಯಿಸಿ ಇಲ್ಲಿ ಸಂಸ್ಕರಿಸಿದ್ದೇನೆ. (ಗದ್ಯಾನುವಾದವನ್ನು ಹೊಸದಾಗಿ ಸೇರಿಸಿರುತ್ತೇನೆ)
1
ಅಲರ್ದ ಅದಿರ್ಮುತ್ತೆ
ಪೂತ ಪೊಸಮಲ್ಲಿಗೆ
ಕಂಪನ್ ಅವುಂಕುತಿರ್ಪ ತೆಂಬೆಲರುಂ
ಇದಂ ಗೆಲಲ್ ಬಗೆವ ತುಂಬಿ
ಗಳಧ್ವನಿಯಿಂ ಕುಕಿಲ್ವ ಕೋಗಿಲೆ
ನನೆದೋಱೆ ನುಣ್ಪೆಸೆವ ಮಾಮರನ್
ಒರ್ ಮೊದಲಲ್ಲದೆ ಉಣ್ಮುವ ಉಯ್ಯಲ ಪೊಸಗಾವರಂ
ಪುಗಿಲೊಳ್ ಬಸಂತಮಾಸದೊಳ್ ಏನ್ ಎಸೆದತ್ತೊ
[ಅರಳಿದ ‘ಅದಿರ್ಮುತ್ತೆ’*ಯ ಹೂವು
ಹೊಸಮಲ್ಲಿಗೆಯ ಹೂವು
ಕಂಪನ್ನು ಪಸರಿಸುತ್ತಿರುವ ತಂಬೆಲರು
ಕಂಪನೀಂಟಲು ಮೊರೆಯುತ್ತಿರುವ ದುಂಬಿ
ಇಂಪಾಗಿ ಕೇಳುವ ಕೋಗಿಲೆಗಳ ಕುಕಿಲಿಂಚರ
ಮೋಹಕ ಹೂಗೊಂಚಲತೋರಿ ಸಂಭ್ರಮಿಸುವ ಮಾಮರ
ಒಮ್ಮೆ ಮಾತ್ರವಲ್ಲದೆ ಹೊಮ್ಮುತ್ತಲೇ ಇರುವ ಉಯ್ಯಾಲೆಯಿಂಚರ
ವಸಂತಮಾಸದ ಆಗಮನ ಏನು ಶೂಭಿಸುತ್ತಿದೆಯೋ!]
(*ಅದಿರ್ಮುತ್ತೆ ಎಂಬ ಹೂ ವಸಂತಾರಂಭದಲ್ಲಿ ಅರಳುತ್ತದೆ;
ಇದಕ್ಕೆ ವಸಂತದೂತಿ ಎಂದು ಮತ್ತೊಂದು ಹೆಸರು.
ಏಕೆಂದರೆ ಇದು ವಸಂತಾಗಮನವನ್ನು ಸೂಚಿಸುತ್ತದೆ.)

2
(ಆಗಳ್ ಆ) ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ
ಬಳ್ವಳ ಬಳೆದಮಿಳಿರ್ವ ಅಶೋಕೆಯ ತಳಿರ್ಗಳುಂ
ಆತನ ಬರುವಿಂಗೆ ತೋರಣ ಕಟ್ಟಿದಂತೆ
ಬಂದ ಮಾಮರಂಗಳನ್ ಅಡರ್ದು ತೊಡರ್ದು ಎಳಗೊಂಬುಗಳ್ವಿಡಿದು
ಮರದಿಂ ಮರಕ್ಕೆ ದಾಂಗುಡಿಯಿಡುವ ಮಾಧವೀಲತೆಗಳುಂ
ಆತನ ಬರವಿಂಗೆ ನೆಱೆಯೆ ಸೊಗಯಿಸೆ ಕೆಯ್ಗೆಯ್ವ ನಲ್ಲಳಂತೆ
ನನೆಯಬಿರಿಮುಗುಳ್ಗಳ ತುಱುಗಲೊಳ್ ಎರಗಿದ ಕಲ್ಪಲತೆಗಳುಂ
ಆತನ ಬರವಿಂಗೆ ಬದ್ದವಣಂ ಬಾಜಿಪಂತೆ
ಭೋರ್ಗರೆದು ಮೊರೆವ ತುಂಬಿಗಳುಂ
ಆತನ ಬರವಿಂಗೆ ರಂಗವಲ್ಲಿಯಿಕ್ಕಿದಂತೆ
ಪುಳಿನಸ್ಥಳಂಗಳೊಳುದಿರ್ದ ಕೞವೂಗಳುಂ
ಆತನ ಬರವಿಂಗೆ ವನವನಿತೆ ಮೆಚ್ಚಿ ನೆಱೆಯೆ ಕೆಯ್ಗೆಯ್ದಂತೆ
ನಿಱನಿಱಗೊಂಡು ಸೊಯಿಸುವ ನಿಱಗನ ನಿಱದಳಿರ ಗೊಂಚಲ್ಗಳುಂ
ಆತನ ಮೇಲ್ವಾಯೆ ರಾಗಿಸಿ ರೋಮಾಂಕುರಂ ಒಗೆದಂತೆ
ಒಗೆದ ಕಳಿಕಾಂಕುರಂಗಳುಂ
ಆತನ ಅಂಗಸಂಗದೊಳ್ ಕಾಮರಸಂ ಉಗುವಂತೆ
ಉಗುವ ಸೊನೆಯ ಸೋನೆಗಳುಮನ್ -
ಒಳಕೊಂಡು ತದಾಶ್ರಮದ ನಂದನವನಂಗಳ್
ಜನಂಗಳನ್ ಅನಂಗಂಗೆ ತೊಫ್ತುವೆಸಂಗೆಯ್ಸಿದವು
[ಆಗ
ವಸಂತರಾಜನಾಗಮನಕ್ಕಾಗಿ ಬಾವುಟ ಕಟ್ಟಿದಂತೆ
ಸೋಂಪಾಗಿ ಬೆಳೆದ ಅಶೋಕೆಯ ಚಿಗುರು
ವಸಂತರಾಜನಾಗಮನಕ್ಕಾಗಿ ತೋರಣವ ಕಟ್ಟಿದಂತೆ
ತುಂಬಿದ ಮಾಮರಗಳನಾವರಿಸಿ, ಏರಿ ಎಳೆಕೊಂಬೆಗಳನಿಡಿದು
ಮರದಿಂದ ಮರಕ್ಕೆ ಸಾಗುತ್ತಿರುವ ಮಾಧವೀಲತೆಗಳು
ವಸಂತರಾಜನಾಗಮನಕ್ಕಾಗಿ ಪೂರ್ಣಾಲಂಕಾರದಿಂದ
ಸೊಗಯಿಸುತ್ತಿರುವ ನಲ್ಲಳಂತೆ ಸೋಂಪಾದ ಮೊಗ್ಗುಗಳ ಗೊಂಚಲುಗಳೊಂದಿಗೆ ಸೊಯಿಸುತ್ತಿರುವ ಕಲ್ಪಲತೆಗಳು
ವಸಂತರಾಜನಾಗಮನಕ್ಕಾಗಿ ಮಂಗಳವಾದ್ಯಗಂತೆ
ಭೋರ್ಗರೆಯುತ್ತಿರುವ ದುಂಬಿಗಳು
ವಸಂತರಾಜನಾಗಮನಕ್ಕಾಗಿ ರಂಗವಲ್ಲಿಯಿಕ್ಕಿದಂತೆ ಮರಳಿನ ಮೇಲೆ
ಉದುರಿರುವ ಮಾಗಿದ ಹೂವುಗಳು
ವಸಂತರಾಜನಾಗಮನಕ್ಕಾಗಿ ಕಾಡಿನ ಹೆಣ್ಣು ಸಂತೋಷದಿಂದ ಅಲಂಕರಿಸಿಕೊಂಡಂತೆ
ನಿರಿನಿರಿಯಾಗಿ ಶೋಭಿಸುತ್ತಿರುವ ಸಿಹಿಮಾವಿನಮರದ ನವಿರಾದ ಎಳೆಚಿಗುರಿನ ಗೊಂಚಲುಗಳು
ವಸಂತರಾಜನ ಮೇಲೆ ಪ್ರೀತಿಯಿಂದ ಹಾಯಲು ರೋಮಾಂಚನಗೊಂಡಂತೆ
ಮಾವಿನ ಮರದ ಮೇಲೆ ಬೆಳೆದಿರುವ ನವಿರಾದ ಚಿಗುರುಗಳು ಎಳೆಕೊಂಬೆಗಳು
ವಸಂತನ ಅಂಗಸಂಗದೊಳಗೆ ಕಾಮರಸವು ಉಕ್ಕುವಂತೆ ಉಕ್ಕುತ್ತಿರುವ ಮಾವಿನ ಸೊನೆಯನ್ನು
ಒಳಕೊಂಡು ಆ ಆಶ್ರಮದ ಉದ್ಯಾನವನದಲ್ಲಿ ಜನಗಳನ್ನು ವಸಂತನಿಗೆ ತೊಳ್ತಾಗುವಂತೆ ಮಾಡಿದವು.]
3
‘ಬಿರಯಿಯ ಮಿೞ್ತುವೆಂ, ಮಿದಿದೊಡಲ್ಲದೆ ಅಣಂ ಮುಳಿಸಾರದು’
ಎಂದು ಮನ್ಮಥನ್ ಇಲ್ಲಿ ಪಲ್ಮೊರೆದಪನ್
‘ಇದಂ ಪುಗಲಿಂಗಡಿಂ’
ಎಂದು ಬೇಟಕಾಱರನ್ ಇರದೂಱ ಸಾಱ ಜಡಿವಂತೆ
ಸಹಕಾರ ಕೋಮಳಾಂಕುರ ಒರಿತುಷ್ಟ ಪಷ್ಟ ಪರಪುಷ್ಟ ಗಳಧ್ವನಿ
ನಂದನಂಗಳೊಳ್ ಎಸಗುಂ
[‘ವಿರಹಿಗಳನ್ನು ಚಚ್ಚದೆ, ವಿರಹಿಗಳ ಮೃತ್ಯುವಾಗಿರುವ ನನ್ನ ಕೋಪ ತಣಿಯದು’ ಎಂದಲ್ಲಿ ಮನ್ಮಥನ್ ಹಲ್ಕಡಿದನು
‘ಪ್ರವೇಶವಿಲ್ಲ ನಿಮಗೆ’ ಎಂದು ವಿರಹಿಗಳನ್ನು ದೂರ ಸರಿಸುತ್ತಿರುವವೋ ಎನ್ನುವಂತೆ
ಮಾವಿನೆಳೆ ಚಿಗುರನು ತಿಂದು ಸುಪುಷ್ಟವಾಗಿ ಬೆಳೆದಿರುವ ಕೋಗಿಲೆಗಳ ಧ್ವನಿ ಮೊರೆಯುತ್ತಿತ್ತು ಆ ಉದ್ಯಾನದಲ್ಲಿ]
4
ಕವಿವ ಮದಾಳಿಯಿಂ ಮುಸುಳನ್ ಆಗಿ
ಪಯೋಜರಜಂಗಳೊಳ್ ಕವಿಲ್ಗವಿಲನುಂ ಆಗಿ
ಬಂದ ಮಲಯಾನಿಲನ್ ಊದೆ
ತೆರಳ್ವ ಚೂತ ಪಲ್ಲವದ ತೆರಳ್ಕೆ
ತದ್ವನವಿಳಾಸಿನಿಯುಟ್ಟ ದುಕೂಲದ
ಒಂದು ಪಲ್ಲವದ ತೆರಳ್ಕೆಯಂತೆ ಎಸೆಯೆ
ನಂದನಾಳಿಗಳ್ ಎಸೆದಿರ್ದವು ಕಣ್ಗೆ
[ಮುತ್ತುತ್ತಿರುವ ಸೊಕ್ಕಿನ ದುಂಬಿಗಳಿಂದಾಗಿ ಅಪ್ರಾಕಶಿತವಾಗಿದ್ದರೂ
ತಾವರೆಯ ಧೂಳಿನಿಂದ ಮಾಸಲು ಬಣ್ಣವಾಗಿದ್ದರೂ
ಬೀಸುತ್ತಿರುವ ಮಲಯಮಾರುತದಿಂದಾಗಿ ಅಲ್ಲಾಡುತ್ತಿರುವ ಮಾವಿನೆಳೆ ಚಿಗುರಿನ ಸಪ್ಪಳ
ವನದೇವಿಯುಟ್ಟ ರೇಷ್ಮೆವಸ್ತ್ರದ ಸೆರಗಿನ ಸಪ್ಪಳದಂತೆ
ಶೋಭಿಸುತ್ತಿರಲು ಆ ತೋಟದ ಶೋಭೆ ಮೆರೆಯುತ್ತಿತ್ತು.]
5
ಪೋಗದೆ ಪಾಡುತಿರ್ಪ ಅಳಿಯೆ ಬೃಂಹಿತಂ ಆಗಿರೆ
ಚಂದ್ರಕಾಂತಿ ಕಾಯ್ಪು ಆಗಿರೆ
ಬೀಸುವ ಒಂದು ಎಲರೆ ಬೀಸುವುದು ಆಗಿರೆ
ಕಾಯ್ಗಳಿಂದಂ ಇಂಬಾಗಿರೆ ಸೋರ್ವ ಸೋನೆ ಮದಂ ಆಗಿರೆ
ಬಂದ ಮಾವಿನ ಕೋಡೆ ಕೋಡಾಗಿರೆ
ವಸಂತಗಜಂ ವಿಯೋಗಿಯಂ ಕೋಡುಗೊಂಡು ಪರಿದತ್ತು
[ಉದ್ಯಾನವನ್ನು ಬಿಟ್ಟು ಹೋಗದೆ ಭೋರ್ಗರೆಯುತ್ತಿರುವ ದುಂಬಿಯ ಝೇಂಕಾರವೇ ಆನೆಯ ಘೀಂಕಾರವಾಗಿರಲು
ಬೆಳದಿಂಗಳೇ ಆ ಗಜದ ಕೋಪವಾಗಿರಲು
ಬೀಸುಗಾಳಿಯೇ ಬೀಸಣಿಕೆಯಾಗಿರಲು
ಮಾವಿನೆಳೆ ಕಾಯಿಯಿಂದ ಒಸರುತ್ತಿರುವ ಸೊನೆಯೇ ಮದೋದಕವಾಗಿರಲು
ಮಾಮರದ ಕೊಂಬೆಗಳೇ ಅದರ ಕೊಂಬಾಗಿರಲು
ವಸಂತವೆಂಬಾನೆಯು ವಿರಹಿಗಳನ್ನು ತನ್ನ ಕೋಡಿಂದ ತಿವಿದು ಓಡಿತ್ತು ಅಲ್ಲಿ] 

1 comment:

ushodaya said...

ಲೇಖನ ,ಅದಕ್ಕೆ ಹೊ೦ದಿಕೆಯಾಗೊ ಫೋಟೋಗಳು ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ ಸರ್.