Monday, January 21, 2013

ಕುವೆಂಪು ಕಾವ್ಯಯಾನಕ್ಕೊಂದು ಪ್ರತಿಕ್ರಿಯೆ




ಶ್ರೀಯುತ ಸತ್ಯನಾರಾಯಣ ಅವರೇ,
ದಿನಾಂಕ ೨೯.೧೨.೨೦೧೨ರಂದು ಬಿಡುಗಡೆಯಾದ ತಮ್ಮ ಕೃತಿ ’ಕುವೆಂಪು ಕಾವ್ಯಯಾನ’ವನ್ನು ಓದಿ ಇಂದು ಮುಗಿಸಿದೆ.
ಮೊದಲ ಲೇಖನ ’ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು’ ಇಡೀ ಕೃತಿಗೆ ಪ್ರವೇಶವನ್ನು ಸೊಗಸಾಗಿ ನಿರೂಪಿಸಿದೆ. ಎಲ್ಲಾ ನಲ್ವತ್ತೆಂಟು ಲೇಖನಗಳೂ ಅವುಗಳ ಸಾಂದರ್ಭಿಕ ವೈಶಿಷ್ಟ್ಯವನ್ನು ಹೊಂದಿವೆ. ಸದ್ಯಕ್ಕೆ ನೆನಪಿಗೆ ಬರುವುದನ್ನು ಹೇಳುವುದಾದರೆ, ಸಂಖ್ಯೆ ೬ ’ಜನನ . . . . ಚರಮಗೀತೆಗಳು’; ಸಂಖ್ಯೆ ೧೦ ’ಊರ ತೋಟಿಯು . . . . ನಾನು’; ಸಂಖ್ಯೆ ೧೫ ’ಹುತಾತ್ಮ . . . . ಪಾಂಚಜನ್ಯ’; ಸಂಖ್ಯೆ ೧೬ ’ನಾವು ಲೀಲಾಮಾತ್ರ ಜೀವರು . . . .’; ಸಂಖ್ಯೆ ೧೮, ೨೬, ೨೮, ೨೯, ೩೦, ೪೦.
ನನಗೆ ತೋರಿದಂತೆ ಅತ್ಯಂತ ಹೃದಯಸ್ಪರ್ಶಿಯಾದ ಸಾಂದರ್ಭಿಕ ಕವಿತೆಯ ಲೇಖನ ಸಂಖ್ಯೆ ೨೦ ’ನಡುವೆ ನಿಂತುದದೊಂದೆ ವಿಶ್ವದಾ ಶಿಶುಮೂರ್ತಿ’. ಅದನ್ನು ಓದಿದ ನಂತರ ಸುಮಾರು ಒಂದು ಘಂಟೆಗೂ ಹೆಚ್ಚುಕಾಲ ನಾನು ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲದೆ ಮರಗಟ್ಟಿದಂತಿದ್ದೆ. ಕಿಟ್ಟಯ್ಯನ ಗತಿ-ಸ್ಥಿತಿ ಇಂದು ಬಹುತೇಕ ರೈತರ ವ್ಯಥೆಯ ಕಥೆಯಾಗಿದೆ. ನಮ್ಮ ಊರುಗಳಲ್ಲಿ ಯುವಕರು ನಗರ ಸೇರಿ ಹಳ್ಳಿಗಳು ವೃದ್ಧಾಶ್ರಮದಂತಾಗಿವೆ. ಗದ್ದೆ-ತೋಟಗಳಲ್ಲಿ ಕೆಲಸ ಮಾಡಲು ಜನರಿಲ್ಲ, ಕುವೆಂಪು ಅವರ ’ಹಾಳೂರು’ ಕವನಕ್ಕೆ ಸಮೀಪಿಸುತ್ತಿವೆ.
ಕಿಟ್ಟಯ್ಯನ ಹೊಲವನ್ನು ಇಂದು ಮೈಸೂರು ನಗರ ನುಂಗಿರಬಹುದು. ಅಲ್ಲಿ ಬಹುಮಹಡಿ ಕಟ್ಟಡವೋ ಕಾರ್ಖಾನೆಯೋ ಬಂದಿರಬಹುದು. ಅವನ ಈಗಿನ ಪೀಳಿಗೆಯವರು ಅಲ್ಲಿ ಕೂಲಿನಾಲಿ ಮಾಡಿಕೊಂಡು ಜೀವಿಸುತ್ತಿರಬಹುದು.  
ಧನ್ಯವಾದಗಳೊಂದಿಗೆ,
ತಾ. ೨೦.೦೧.೨೦೧೩ ಅಲಿಗೆ ಆರ್. ಗುರು
ಬೆಂಗಳೂರು



No comments: