Thursday, January 31, 2013

ಕವಿಯ ಬಟ್ಟೆ - ಕಾವೀ ಬಟ್ಟೆ ಮತ್ತು ಬೇಂದ್ರೆ

ಸಮಾರಂಭವೊಂದರಲ್ಲಿ ವರಕವಿ ಬೇಂದ್ರೆಯವರಿಗೆ ಕಾವಿ ಬಟ್ಟೆಯನ್ನು ಉಡುಗೊರೆಯಾಗಿ ಕೊಟ್ಟರು. (ಕೊಟ್ಟವರ ಉದ್ದೇಶ ಏನೆಂಬುದು ಮಾತ್ರ ಗೊತ್ತಿಲ್ಲ.) ಬೇಂದ್ರೆ ಆ ಒಂದು ದಿನ ಮಾತ್ರ ಅದನ್ನು ಧರಿಸಿದ್ದರು. ನಂತರ ಎಂದೂ ಅದನ್ನು ಮುಟ್ಟಲಿಲ್ಲವಂತೆ. ಆದರೆ ಕವನವೊಂದರ ಮುಖಾಂತರ ಆ ಕಾವೀ ಬಟ್ಟೆಗೆ ಒಂದು ಶಾಶ್ವತ ಸ್ಥಾನ ಕೊಟ್ಟುಬಿಟ್ಟರು. ಆ ಕವಿತೆ ಹೀಗಿದೆ.
1
ಕವಿಯ ಬಟ್ಟೆ - ಕಾವೀ ಬಟ್ಟೆ
ಅದನ್ನು ಉಟ್ಟೆ ಎಂದಿಗೂ
ಬಿಚ್ಚಿಬಿಟ್ಟೆ ದಾನಕೊಟ್ಟೆ
ಮುಗಿಲನೆಲ್ಲ ಮಂದಿಗೂ

2
ವಿರಹದಲ್ಲೆ ಮಿಲನವೆನಿಸಿ
ಸಂಧಿ ಸಂಧಿಗೂ
ಚರ್ಮ ಸುಲಿದ ಮರ್ಮಗಳಲಿ
ಯಜ್ಞ ಸಂದಿಗೊಂದಿಗೂ.

ಸಮರಸವೇ ಜೀವನ ಎಂದ ಸಾಂಸಾರಿಕ ಕವಿ ಬೇಂದ್ರೆ. ಕವಿಗೆ ಸಂಸಾರವೆಂದರೆ ಪ್ರೀತಿ-ಪ್ರೇಮ-ಪವಿತ್ರ... ಎಲ್ಲವೂ. ವಿರಹದಲ್ಲೂ ಮಿಲನವನ್ನು ಅನುಭವಿಸುವ ಉತ್ಕಟವಾದ ಸಂಸಾರಪ್ರೇಮವನ್ನು ಕವಿ ಇಲ್ಲಿ ವ್ಯಕ್ತಪಡಿಸಿದ್ದಾರೆ! ಅಂತಹ ರಸಿಕ-ಸಾಂಸಾರಿಕ ಕವಿಗೆ ಕಾವೀ ಬಟ್ಟೆಯನ್ನು ಕೊಟ್ಟವರ ಉದ್ದೇಶವೇನು? ಅದನ್ನು ಕೊಟ್ಟವರಷ್ಟೇ ಹೇಳಬೇಕು. ಅದು ಕವಿಗೇನು ಗೊತ್ತು.
"ಸಂಸಾರವನ್ನು ಯಜ್ಞದಂತೆ ಸಾಂಗವಾಗಿ ಸಂಪೂರ್ಣಗೊಳಿಸಬೇಕು. ಬೇಂದ್ರೆಯವರಿಗೆ ಕಾವ್ಯಸೃಷ್ಟಿ ಎಂಬುದು ಪರಮಾತ್ಮನನ್ನು ಸಂತುಷ್ಟಗೊಳಿಸುವ ವಾಕ್ ಯಜ್ಞವಾಗಿತ್ತು. ಅಂತಹ ಪರಮ ಸಂತುಷ್ಟ ಕವಿಗೆ, ಪರಮಾತ್ಮನನ್ನು ತೃಪ್ತಿಪಡಿಸಲು ಡಂಭಾಚಾರದ ಕಾವೀ ಬಟ್ಟೆ ಏಕೆ ಬೇಕು ಅಲ್ಲವೆ?

ಇಂದು ಕವಿಯ ಜನ್ಮ ದಿನ.

No comments: