ನಾನೇಕೆ ನನ್ನ ಹೈಸ್ಕೂಲು ದಿನಗಳ ಬಗ್ಗೆ ಬರೆಯಬೇಕು?
ನನ್ನ ಹೈಸ್ಕೂಲು ಬದುಕಿನ ಮೂರು ವರ್ಷಗಳು, ಇದುವರೆಗಿನ ನನ್ನ ಜೀವಮಾನದಲ್ಲೇ ಅತ್ಯಂತ ಸ್ವಾರಸ್ಯಕರವಾದ ಘಟನೆಗಳಿಂದ ಕೂಡಿದವುಗಳಾಗಿವೆ. ಗ್ರಾಮೀಣ ಪ್ರದೇಶವೊಂದರ ಸರ್ಕಾರಿ ಶಾಲೆ, ಅಲ್ಲಿದ್ದ ಮೇಷ್ಟ್ರುಗಳು, ಅವರ ಸೋಮಾರಿತನ, ಒಂದಂಕಿ ದಾಟದ ಫಲಿತಾಂಶ, ಹಾಸ್ಟೆಲ್ ಜೀವನ ಎಲ್ಲವೂ ನನ್ನ ಮನೋಭಿತ್ತಿಯಲ್ಲಿ ಅಚ್ಚಳಿಯದೆ ದಾಖಲಾಗಿಬಿಟ್ಟಿವೆ. ನಾನು ಎಂಟನೇ ತರಗತಿಗೆ ಕುಂದೂರುಮಠದಲ್ಲಿದ್ದ ಸರ್ಕಾರಿ ಹೈಸ್ಕೂಲಿಗೆ ದಾಖಲಾದ ವರ್ಷವೇ ಅಲ್ಲಿಗೆ ಜೂನಿಯರ್ ಕಾಲೇಜು ಬಂದಿತ್ತು. ಅದರ ಹಿಂದಿನ ಎರಡು ವರ್ಷಗಳಲ್ಲಿ ಶ್ರೀ ವೆಂಕಟಪ್ಪ ಎಂಬ ಹೆಡ್ಮಾಸ್ಟರ್ ಮಾಡಿದ್ದ ಸಾಧನೆ ಅದಕ್ಕೆ ಕಾರಣ. ವರ್ಷದಲ್ಲಿ ಎರಡು ಮೂರು ಜನ ಮಾತ್ರ ಹತ್ತನೇ ತರಗತಿ ಪಾಸಾಗುತ್ತಿದ್ದ ಹಾಗೂ ಅವ್ಯವಸ್ಥೆಯ ಗೂಡಾಗಿದ್ದ ಆ ಹೈಸ್ಕೂಲಿಗೆ ಹೆಡ್ಮಾಸ್ಟರಾಗಿ ಬಂದ ವೆಂಕಟಪ್ಪನವರು ಕೇವಲ ಎರಡೇ ವರ್ಷದಲ್ಲಿ ಫಲಿತಾಂಶವನ್ನು ಶೇಕಡಾ ಐವತ್ತಕ್ಕೆ ಏರಿಸಿದ್ದರು. ಅದರ ಫಲವಾಗಿ ಆಗ ಮಂತ್ರಿಗಳಾಗಿದ್ದ ದೇವೇಗೌಡರು ಸ್ವತಃ ಆಸಕ್ತಿ ವಹಿಸಿ ಜೂನಿಯರ್ ಕಾಲೇಜು ಕೊಡಿಸಿದ್ದರು. ‘ಜಿ.ಹೆಚ್.ಎಸ್. ಕುಂದೂರುಮಠ’ ಇದ್ದಿದ್ದು ‘ಜಿ.ಜೆ.ಸಿ. ಕುಂದೂರುಮಠ’ ಆಗಿತ್ತು. ದುರದೃಷ್ಟವೆಂದರೆ, ಹೈಸ್ಕೂಲ್ ಹೆಡ್ಮಾಸ್ಟರಾಗಿದ್ದ ವೆಂಕಟಪ್ಪನವರಿಗೆ ಸಾಮರ್ಥ್ಯವಿದ್ದರೂ ಜೂನಿಯರ್ (ಸಂಯುಕ್ತ) ಕಾಲೇಜು ಪ್ರಾಂಶುಪಾಲರಾಗುವಷ್ಟು ಕ್ವಾಲಿಫಿಕೇಷನ್ ಇರಲಿಲ್ಲ. ಅವರು ಬೇರೆಡೆಗೆ ವರ್ಗವಾಗಿದ್ದರಿಂದ, ಹೊಸದಾಗಿ ಬಂದ ಪ್ರಾಂಶುಪಾಲರ ಹೊಣೆಗೇಡಿತನದಿಂದಾಗಿ ಮುಂದಿನ ಮೂರೇ ವರ್ಷದಲ್ಲಿ, ಅಂದರೆ ನನ್ನ ಹೈಸ್ಕೂಲು ಶಿಕ್ಷಣ ಮುಗಿಯುವಷ್ಟರಲ್ಲಿ ಆ ಕಾಲೇಜು ಮುಚ್ಚಿ ಹೋಯಿತು. ಮತ್ತೆ ‘ಜಿ.ಹೆಚ್.ಎಸ್. ಕುಂದೂರುಮಠ’ವೇ ಆಯಿತು!
ಆಡಳಿತದಲ್ಲಿ ಬಿಗಿ ಇಲ್ಲದೆ, ಸ್ವತಃ ದರ್ಬಾರ್ ಮಾಡುತ್ತಿದ್ದ ಕೆಲವು ಮೇಷ್ಟ್ರುಗಳಿಂದಾಗಿ ವಿದ್ಯಾರ್ಥಿಗಳೆಲ್ಲರೂ ಬಿಟ್ಟು ಮೇಯಿಸಿದ ಕುದುರೆಗಳಾಗಿದ್ದರು. ನಾವಂತೂ ಹಾಸ್ಟೆಲ್ಲಿನಲ್ಲಿದ್ದುದರಿಂದ ತಂದೆ-ತಾಯಿಯರ ಭಯವೂ ನಮಗಿರಲಿಲ್ಲ. ನಾನು ಹತ್ತನೇ ತರಗತಿಗೆ ಬರುವಷ್ಟರಲ್ಲಿ, ನನ್ನ ಅದೃಷ್ಟಕ್ಕೆ, ಹಾಸ್ಟೆಲ್ಲಿಗೆ ವಾರ್ಡನ್ ಆಗಿ ಶ್ರೀ ಭೀಮಪ್ಪ ಕರಿಯಪ್ಪ ಜಟಗೊಂಡ ಎಂಬುವವರು ಬಂದಿದ್ದರು. ಅವರೊಬ್ಬರು ಮಾತ್ರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ವತಃ ತಾವೇ ಪಾಠ ಮಾಡುತ್ತ, ಬುದ್ಧಿ ಹೇಳುತ್ತಾ ಸ್ವಲ್ಪ ಮಟ್ಟಿಗೆ ಶಿಸ್ತನ್ನೂ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಜೂನಿಯರ್ ಕಾಲೇಜು ಬಂದ ಮರುವರ್ಷದಿಂದಲೇ ಹತ್ತನೇ ತರಗತಿ ಫಲಿತಾಂಶ ಅಧೋಗತಿಗಿಳಿಯಲಾರಂಭಿಸಿತ್ತು. ವೆಂಕಟಪ್ಪನವರು ವರ್ಗವಾದ ವರ್ಷ ಮೂರು, ಅದರ ಮುಂದಿನ ವರ್ಷ ಇಬ್ಬರು ಮಾತ್ರ ಉತ್ತೀರ್ಣರಾಗಿದ್ದರು. ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಸುತ್ತಮುತ್ತಲಿನ ಊರಿನವರು ಮುಂದಿನ ವರ್ಷ ಪಾಸಾಗುವವರು ಒಬ್ಬರೇ ಎಂದು ತಮಾಷೆ ಮಾಡುತ್ತಿದ್ದರು. ನಮ್ಮ ತರಗತಿಯ ಕೆಲವರು ಟೀ.ಸಿ. ತಗೆದುಕೊಂಡು ಬೇರೆಡೆಗೆ ಹೊರಟು ಹೋಗಿದ್ದರು. ಸ್ವತಃ ಅಲ್ಲಿದ್ದ ಒಬ್ಬ ಮೇಷ್ಟ್ರೇ ತಮ್ಮ ಮಗಳನ್ನು ಬೇರೆ ಸ್ಕೂಲಿಗೆ ಸೇರಿಸಿದ್ದರು. ನಮ್ಮ ಅಣ್ಣನೂ ಆ ವರ್ಷ ಫೇಲಾಗಿದ್ದ. ಆದರೂ ನಮ್ಮ ಮನೆಯವರು ನನ್ನನ್ನು ಮಾತ್ರ ಬೇರೆ ಸ್ಕೂಲಿಗೆ ಸೇರಿಸುವ ಯೋಚನೆ ಮಾಡಲಿಲ್ಲ. ಕಾರಣ ನಮ್ಮ ಆಗಿನ ಆರ್ಥಿಕ ಪರಿಸ್ಥಿತಿ. ‘ಉಚಿತ ಹಾಸ್ಟೆಲ್ ಇದೆ. ಹೇಗೋ ನೀನು ಕಷ್ಟಪಟ್ಟು ಓದಿದರೆ ಪಾಸಾಗುತ್ತೀಯಾ ಇಲ್ಲ ಫೇಲಾಗುತ್ತೀಯಾ’ ಎಂದು ಬೇರೆ ಸ್ಕೂಲಿಗೆ ಸೇರಿಸುವ ವಿಷಯವನ್ನು ಬಿಟ್ಟೇಬಿಟ್ಟರು. ಇದೇ ಸಮಸ್ಯೆ ಎಷ್ಟೋ ವಿದ್ಯಾರ್ಥಿಗಳಿಗಿತ್ತು. ಹಾಗಾಗಿ ಕೊನೆಗೂ ಹತ್ತನೇ ತರಗತಿಯಲ್ಲಿ ನಲವತ್ತೈದು ಮಂದಿ ಉಳಿದಿದ್ದೆವು.
ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಿಗೆ ಮೇಷ್ಟ್ರುಗಳೇ ಇರಲಿಲ್ಲ. ಹಿಂದಿಯಂತು ನಮಗೆ ಮಿಡ್ಲಿಸ್ಕೂಲ್‌ನಲ್ಲೂ ಇರಲಿಲ್ಲ. ಹಾಗಾಗಿ ಅದರ ಲಿಪಿಗಳನ್ನು ಬರೆಯುವುದಿರಲಿ ಓದುವುದಕ್ಕೂ ಒಂದಕ್ಷರ ಬರುತ್ತಿರಲಿಲ್ಲ. ಆ ವರ್ಷದ ಕೊನೆಯ ಹೊತ್ತಿಗೆ ಪಿ.ಟಿ.ಮೇಷ್ಟ್ರಾಗಿ ಬಂದ ಉಮೇಶ್ ಎಂಬುವವರು, ಹಿಂದಿ ಪ್ರಶ್ನೆ ಪತ್ರಿಕೆಯನ್ನು ನೋಡಿಕೊಂಡು ಅದನ್ನೇ ಉಲ್ಟಾಪಲ್ಟಾ ಮಾಡಿ ಹೇಗೆ ಬರೆಯಬೇಕೆಂದು ತೋರಿಸಿಕೊಟ್ಟಿದ್ದರು. ಐವತ್ತು ಅಂಕಗಳ ಹಿಂದಿ ಪತ್ರಿಕೆಯಲ್ಲಿ ನಾವು ಗಳಿಸಬೇಕಾಗಿದ್ದು ಹದಿಮೂರು ಅಂಕಗಳು ಮಾತ್ರ. ಅದಕ್ಕೆ ನಮಗೆ ಒದಗಿದ ತರಬೇತಿ ಪ್ರಶ್ನೆಪತ್ರಿಕೆಯನ್ನೇ ಉಲ್ಟಾಪಲ್ಟಾ ಮಾಡಿ ಬರೆಯುವಷ್ಟು ಮಾತ್ರ!
ಇನ್ನು ಇಂಗ್ಲೀಷ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮೊದಲ ಶತ್ರು. ಸಮಾಜ ಪತ್ರಿಕೆಯನ್ನು ಮಾಡುತ್ತಿದ್ದ ಇಬ್ಬರು ಮೇಷ್ಟ್ರುಗಳು ಇಂಗ್ಲೀಷಿನ ಡಿಟೈಲ್ ಮತ್ತು ನಾನ್‌ಡಿಟೈಲ್ ಪೇಪರ್‌ಗಳನ್ನು ಪರಸ್ಪರ ಹಂಚಿಕೊಂಡಿದ್ದರು. ಅದರಲ್ಲೂ ನಾನ್‌ಡಿಟೈಲ್ ಪೇಪರ್ ತಗೆದುಕೊಳ್ಳುತ್ತಿದ್ದವರು ಮಧ್ಯದಲ್ಲೇ ವರ್ಗವಾಗಿ ಹೋದರು. ಆಗ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಲ್ಲದಿದ್ದರಿಂದ ಅದರ ಉಪನ್ಯಾಸಕರು ಯಾವ ಕೆಲಸವೂ ಇರದೆ ಸುಮ್ಮನೆ ಬೆಲ್ಲು-ಬಿಲ್ಲು ನೋಡಿಕೊಂಡು ಕಾಲ ಕಳೆಯುತ್ತಿದ್ದರು. ಅವರು ಇಂಗ್ಲೀಷ್ ಪಾಠ ಮಾಡಬಹುದಿತ್ತು. ನಾವು ವಿದ್ಯಾರ್ಥಿಗಳೇ ಕೇಳಿಕೊಂಡ ಮೇಲೆ ಅವರು ಒಪ್ಪಿಕೊಂಡರೂ, ಈ ಸಮಾಜದ ಮೇಷ್ಟ್ರು ಒಪ್ಪಲೇ ಇಲ್ಲ! ‘ಅದು ನನ್ನ ಕೆಲಸ ನಾನೇ ಮಾಡುತ್ತೇನೆ’ ಎಂದು ಅಡ್ಡರಾಗ ಹಾಡಿಯೇಬಿಟ್ಟರು. ಅಂತೂ ನಮಗೆ ಇಂಗ್ಲೀಷ್ ಪಾಠ ಕೇಳುವ ಅದೃಷ್ಟ ಬರಲೇಯಿಲ್ಲ! ನಾನು ಇಂಗ್ಲೀಷ್ ಭಾಷೆಯ ಒಂದು ಗೈಡನ್ನು ಕೊಂಡು ಪರೀಕ್ಷೆಗೆ ಸ್ದಿದ್ಧನಾಗಿದ್ದೆ. ನನ್ನ ವಿದ್ಯಾರ್ಥಿ ಬದುಕಿನ ಮೊದಲ ಮತ್ತು ಕೊನೆಯ ಗೈಡ್ ಅದಾಗಿತ್ತು!
ಕುಂದೂರುಮಠದ ಹೈಸ್ಕೂಲಿನಲ್ಲಿ ಏನೇ ಅವ್ಯವಸ್ಥೆಯಿರಲಿ, ವ್ಯವಸ್ಥೆ ಎಷ್ಟೇ ರೋಗಗ್ರಸ್ಥವಾಗಿರಲಿ, ಪರೀಕ್ಷೆಯಂತೂ ಬಂದೇಬಿಟ್ಟಿತ್ತು. ಅಲ್ಲಿಂದ ಹತ್ತು ಕಿಲೋಮೀಟರ್ ದೂರದಲ್ಲಿದ್ದ ಉದಯಪುರ ಹೈಸ್ಕೂಲಿನಲ್ಲಿ ಪರೀಕ್ಷಾ ಕೇಂದ್ರ. ಇದ್ದ ನಲವತ್ತೈದರಲ್ಲಿ ನಲವತ್ತೆರಡು ಜನ ಪರೀಕ್ಷೆ ತಗೆದುಕೊಂಡಿದ್ದೆವು. ಪ್ರತೀವರ್ಷ ಅಲ್ಲಿಗೆ ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು ಊಟ ವಸತಿಗೆಲ್ಲಾ ಪರದಾಡಬೇಕಾಗುತ್ತಿತ್ತು. ನಮ್ಮ ಅದೃಷ್ಟಕ್ಕೆ ಅಲ್ಲಿಯೂ ಒಂದು ಓ.ಬಿ.ಸಿ.ಹಾಸ್ಟೆಲ್ ಇದ್ದು, ಅದರ ವಾರ್ಡನ್ ಆಗಿದ್ದ ಸಿ.ಎನ್. ಅಂಗಡಿ ಎಂಬುವವರು ನಮ್ಮ ಹಾಸ್ಟೆಲಿನ ವಾರ್ಡನ್ ಜಟಗೊಂಡ ಅವರಿಗೆ ಸ್ನೇಹಿತರಾಗಿದ್ದರು. ಇಬ್ಬರೂ ಬೆಳಗಾವಿ ಜಿಲ್ಲೆಯವರೇ ಆಗಿದ್ದರು. ಆದ್ದರಿಂದ ಇಬ್ಬರೂ ಪರಸ್ಪರ ಮಾತನಾಡಿ ಹಾಸ್ಟೆಲ್ಲಿನಲ್ಲಿದ್ದ ಹದಿಮೂರು ಜನ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಏರ್ಪಡಿಸಿದ್ದರು. ಜೊತೆಗೆ, ನಮ್ಮ ಸಹಾಯಕ್ಕಿರಲಿ ಎಂದು ಇಬ್ಬರು ಎಂಟನೇ ತರಗತಿಯ ಹುಡುಗರನ್ನೂ ನಮ್ಮ ಜೊತೆ ಕಳುಹಿಸಿದ್ದರು. ಅಂತೂ ಪರೀಕ್ಷೆ ಬರೆದಿದ್ದೂ ಆಯಿತು.
ಆ ವರ್ಷ ಫಲಿತಾಂಶಗಳು ಪ್ರಕಟವಾಗಿದ್ದು ತುಂಬಾ ತಡವಾಗಿ. ನಮಗಂತೂ, ಅಂದರೆ ಸಪ್ಲಿಮೆಂಟರಿ ಪರೀಕ್ಷೆ ತಗೆದುಕೊಂಡಿದ್ದ ನನ್ನಣ್ಣನಿಗು ಹಾಗೂ ನನಗು ಎರಡು ದಿನಕ್ಕೊಮ್ಮೆ ಸ್ಕೂಲಿಗೆ ಅಲೆಯುವುದೇ ಕೆಲಸವಾಗಿತ್ತು. ಕೊನೆಗೆ ನಾನೊಂದು ದಿನ ಅವನೊಂದು ದಿನ ಎಂದು ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ನಮ್ಮ ಫಲಿತಾಂಶ ನಮಗೆ ಗೊತ್ತಾಗಿದ್ದು ಮಾತ್ರ ಒಂದು ವಿಚಿತ್ರ ಸನ್ನಿವೇಶದಲ್ಲಿ.
ಗುರುವಾರದ ಗಂಡಸಿ ಸಂತೆ ನಮ್ಮ ಸುತ್ತಮುತ್ತಲಿನವರಿಗೆ ಅತ್ಯಂತ ಪ್ರಮುಖವಾದುದ್ದು. ಬುಧುವಾರ ರಾತ್ರಿಯೇ ಕಾಯಿ, ರಾಗಿ ಮಾರಬೇಕಾದವರು ಸಂತೆ ಸೇರಿ, ಬೆಳಗಿನ ಜಾವವೇ ವ್ಯಾಪಾರ ಮುಗಿಸಿಬಿಡುತ್ತಾರೆ. ಅಂದು ಬುಧವಾರ ರೇಡಿಯೋದಲ್ಲಿ ‘ನಾಳೆ ರಾಜ್ಯಾದ್ಯಂತ ಹೈಸ್ಕೂಲ್‌ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ’ ಎಂಬ ಸುದ್ದಿ ಬಂದಿತ್ತು. ಆದರೂ ನಮ್ಮ ತಂದೆ ನನ್ನ ದೊಡ್ಡಣ್ಣನ ಜೊತೆಯಲ್ಲಿ ಸಂತೆಗೆ ಹೋಗಿಬರಲು ಹೇಳಿದ್ದರು. ನಾನು ‘ರಿಸಲ್ಟ್ ಬರುತ್ತದೆ ನಾನು ಹೋಗುವುದಿಲ್ಲ’ ಅಂದರೆ, ‘ನಿಮ್ಮ ಸ್ಕೂಲಿನಲ್ಲಿ ರಿಸಲ್ಟ್ ಹಾಕುವುದೇ ಹನ್ನೊಂದು ಗಂಟೆಯ ಮೇಲೆ. ಅಷ್ಟೊತ್ತಿಗೆ ಕಾಯಿ ಕೊಟ್ಟು ಬಂದುಬಿಡಿ’ ಎಂದು ಹೊರಡಿಸಿಬಿಟ್ಟಿದ್ದರು. ರಾತ್ರಿಯೇ ಗಾಡಿ ಮೇಲೆ ಪ್ರಯಾಣ ಮಾಡಿ ಸಂತೆಮಾಳದಲ್ಲಿದ್ದ ಒಂದು ‘ಟೆಂಟ್’ ಹೋಟೆಲಿನಲ್ಲಿ ಬಿಡಾರ ಹೂಡಿದೆವು. ಇಡೀ ರಾತ್ರಿ ನಿದ್ದೆಯಿಲ್ಲದೆ ‘ನನ್ನ ರಿಸಲ್ಟ್ ಪಾಸಾದರೆ ಏನಾಗಬಹುದು, ಫೇಲಾದರೆ ಏನಾಗಬಹುದು’ ಎಂಬ ಲೆಕ್ಕಾಚಾರ ಮಾಡುತ್ತಿದ್ದೆ. ಒಂದರೆಗಳಿಗೆಯೂ ನಾನವತ್ತು ನಿದ್ದೆ ಮಾಡಲಿಲ್ಲ!
ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ನಮ್ಮ ಕಾಯಿಗಳು ಮಾರಾಟವಾಗಿ ದುಡ್ಡು ಕೈಗೆ ಬಂತು. ತಕ್ಷಣ ನಾನು ಗಾಡಿಯನ್ನು, ನನ್ನಣ್ಣನನ್ನು ಬಿಟ್ಟು ಸಿಕ್ಕಿದ ಲಾರಿ ಹತ್ತಿ ಊರಿಗೆ ಬಂದೆ. ಇನ್ನು ಲಾರಿ ಇಳಿಯುತ್ತಿರುವಾಗಲೇ ಎದುರಿಗೆ ಪೋಸ್ಟ್‌ಮ್ಯಾನ್ ತಮ್ಮಯ್ಯ ಸಿಕ್ಕಬೇಕೆ! ನನ್ನ ಅವಸರವನ್ನು ಬಲ್ಲ ಆತ ‘ಲೇ ನಿಮ್ಮ ರಿಸಲ್ಟ್ ನೆನ್ನೇನೆ ನೋಡಿದ್ದೆ. ಒಬ್ಬನೇ ಪಾಸಾಗಿರೋದು’ ಎಂದು ಛೇಡಿಸಿದ. ‘ಅದು ಯಾರು?’ ಎಂಬುದಕ್ಕೆ ಮಾತ್ರ ಆತನ ಬಳಿ ಉತ್ತರವಿರಲಿಲ್ಲ. ಆತ ಛೇಡಿಸಿದ್ದನೋ? ಇಲ್ಲವೋ? ಅಲ್ಲಿಂದ ಹತ್ತೇ ನಿಮಿಷದಲ್ಲಿ ನಾಗೇಶ್ ಎಂಬುವವರು ಸಿಕ್ಕು ‘ಏನಪ್ಪ ಹೊಡಿದ್ಯಲ್ಲ ಬಂಪರ್. ನಿಮ್ಮ ಸ್ಕೂಲಿನಲ್ಲಿ ನೀನೊಬ್ಬನೇ ಪಾಸಾಗಿರೋದಂತೆ’ ಎಂದರು. ಅಂತೂ ಅದು ನಿಜವಾಗಿತ್ತು. ನನಗೆ ಆಘಾತ, ಆನಂದ ಎಲ್ಲವೂ ಆಯಿತು. ಅದಕ್ಕಿಂತಲೂ ಆಘಾತದ ಸಂಗತಿಯೆಂದರೆ ಉಳಿದ ನಲವತ್ತೊಂದು ಜನ ವಿದ್ಯಾರ್ಥಿಗಳಲ್ಲಿ ಒಬ್ಬನೂ, ಆರರಲ್ಲಿ ಐದು ಪತ್ರಿಕೆಗಳಲ್ಲಿ ಪಾಸಾಗಿರಲಿಲ್ಲ! ಇಬ್ಬರು ಮಾತ್ರ ನಾಲ್ಕು ಪತ್ರಿಕೆಗಳಲ್ಲಿ ಪಾಸಾಗಿದ್ದರು!!
ಹೀಗೆ ತನ್ನ ಅಧೋಮುಖ ಸ್ಥಿತಿಯತ್ತ ಮುಖಮಾಡಿ ನಿಂತಿದ್ದ ಸರ್ಕಾರಿ ಕೃಪಾಫೋಷಿತ ವ್ಯವಸ್ಥೆಯ ಬಗ್ಗೆ, ಸುಮಾರು ಇಪ್ಪತ್ತೈದು ವರ್ಷಗಳ ನಂತರ ತಿರುಗಿ ನೋಡಬೇಕೆನ್ನಿಸಿದೆ. ಆ ಮೂರು ವರ್ಷಗಳ ಅವಧಿಯ ನನ್ನ ಬದುಕನ್ನು ನಾನು ಮತ್ತೆ ಕಾಣಬೇಕೆನ್ನಿಸಿದೆ. ಎಲ್ಲವನ್ನೂ ಒಟ್ಟಿಗೆ ಯಾರಿಗಾದರೂ ಹೇಳಬೇಕೆನ್ನಿಸಿದೆ. ಅಲ್ಲಿ ನಾನು ಕಂಡ ವ್ಯಕ್ತಿಗಳು, ಪರಿಸ್ಥಿತಿ, ಮೇಷ್ಟ್ರುಗಳು, ಅವರುಗಳ ದೊಡ್ಡತನ, ಸೋಗಲಾಡಿತನ, ಅಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆ ಎಂಬ ಅವ್ಯವಸ್ಥೆ ಮೊದಲಾದವನ್ನು ಇಂದು ನನ್ನ ಅನುಭವದ ಹಿನ್ನೆಲೆಯಲ್ಲಿ ಹಿಡಿದಿಡಬೇಕೆನ್ನಿಸಿದೆ.
ಇದು ಆತ್ಮಚರಿತ್ರೆಯಲ್ಲ. ಆತ್ಮದ ಬಗ್ಗೆ ನನಗೆ ನಂಬಿಕೆಯೂ ಇಲ್ಲ! ಜೀವನ ಚರಿತ್ರೆಯೂ ಅಲ್ಲ. ಏಕೆಂದರೆ ಕೇವಲ ಮೂರೇ ವರ್ಷದ ಕಾಲಮಿತಿ ಇದಕ್ಕಿದೆ. ಆದ್ದರಿಂದ ಇದು, ನನ್ನ ಇತಿಹಾಸವನ್ನು ನಾನೇ ಕಂಡುಕೊಳ್ಳುವ, ಇತಿಹಾಸದ ಭಾಗವಾಗಿ ಹೋಗಿರುವ ನನ್ನನ್ನು ಮತ್ತು ಒಂದು ಕಾಲಘಟ್ಟದ ನನ್ನ ಬದುಕನ್ನು ನಾನೇ ಸಂಶೋಧಿಸುವ ಪುಟ್ಟ ಪ್ರಯತ್ನ ಮಾತ್ರ. ಹಾಗೇ ನೋಡಿದರೆ ಎಲ್ಲ ಆತ್ಮಕಥೆಗಳೂ ಜೀವನಚರಿತ್ರೆಗಳೂ ಐತಿಹಾಸಿಕ ಸಂಶೋಧನೆಗಳೇ ಆಗಿರುತ್ತವೆ!

No comments:
Post a Comment