Wednesday, January 07, 2009

ಈ ರಾಜ್ಯದಲ್ಲಿ ಏನು ನಡೆಯುತ್ತಿದೆ... ಸಾರ್?

ಮೊನ್ನೆ ಸಚಿವ ಸಂಪುಟದ ಸಭೆ ಮುಗಿಸಿ ಮಾಧ್ಯಮಗಳ ಮುಂದೆ ಬಂದ ಶೋಭಾ ಕರಂದ್ಲಾಜೆ ಅವರು, ಸಂಪುಟ ಸಭೆಯ ನಿರ್ಣಯಗಳನ್ನು ಓದಿ ಹೇಳಿದರು. ಅವುಗಳಲ್ಲಿ ಒಂದು, ‘ದತ್ತಪೀಠ ವಿವಾದದಲ್ಲಿ ಕೆಲವರ ಮೇಲೆ ಹಾಕಾಲಾಗಿದ್ದ ೧೧ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು!’ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಅದಕ್ಕೆ ಎಂಬಂತೆ ಸಂಪುಟ ಸಂಬೆಯಲ್ಲಿ ತೀರ್ಮಾನಿಸಿ ಅದರ ಹಿಂಬಾಲಕರ ಮೇಲಿದ್ದ ಕೇಸುಗಳನ್ನು ಹಿಂದಕ್ಕೆ ಪಡೆದುಕೊಂಡುಬಿಟ್ಟಿತು! ಹೊಟ್ಟೆ ತುಂಬಿದ ಜನ ಧರ್ಮದ ಹೆಸರಿನಲ್ಲಿ ಮುಗ್ಧ ಜನರ ಮೇಲೆ ದಾಂದಲೆ ನಡೆಸಿದ ಪ್ರಕರಣಗಳನ್ನು ಯಾವ ಆಧಾರದ ಮೇಲೆ ಹಿಂದಕ್ಕೆ ಪಡೆಯಲಾಯಿತೋ ಅದು ಬಿ.ಜೆ.ಪಿಯ ದೇವರುಗಳಿಗೇ ಗೊತ್ತು.
ಇದೇ ಸರ್ಕಾರ ಅಧಿಕಾರಕ್ಕೆ ಬಂದ ತಿಂಗಳೊಳಗೆ ಹಾವೇರಿಯಲ್ಲಿ ರೈತರ ಮೇಲೆ ನಡೆಸಿದ ಗೋಲಿಬಾರ್ ನಡೆಸಿತು. ಆ ಗಲಭೆಯಲ್ಲಿ ೧೦೧ ಜನರ ಮೇಲೆ ೧೫೭ ಪ್ರಕರಣಗಳನ್ನು ಹಾವೇರಿ ಠಾಣೆಯಲ್ಲಿ ದಾಖಲಿಸಲಾಗಿದೆ. ಅವರೆಲ್ಲಾ ತೀರಾ ಸಣ್ಣ ರೈತರು. ಆ ವರ್ಷದ ಗಳಿಕೆ ಆ ವರ್ಷಕ್ಕೆ ಎಂದು ಸರಿದೂಗಿಸಿಕೊಂಡು ಬದುಕುತ್ತಿರುವವರು. ಅಂತಹ ಬಡರೈತರ ಮೇಲಿನ ಮೊಕದ್ದಮೆಗಳು ಮಾತ್ರ ಸರ್ಕಾರದ ನೆನಪಿಗೆ ಬರುತ್ತಿಲ್ಲ. ಅದರೆ ಹೊಟ್ಟೆಪಾಡಿಗಾಗಿ, ರೈತರ ಬದುಕಿಗೆ ಅಗತ್ಯವಾಗಿ ಬೇಕಾಗಿರುವ ರಸಗೊಬ್ಬರಕ್ಕಾಗಿ ಹೋರಾಟ ನಡೆಸಿದ ಬಡರೈತರ ಗೋಳು ಮಾತ್ರ ಯಾವ ದೇವರನ್ನೂ ಮುಟ್ಟುತ್ತಿಲ್ಲ. ಹಾವೇರಿ ರೈತ ಹೋರಾಟದಲ್ಲಿ ಗಾಯಗೊಂಡ ರೈತರ ಮೇಲೂ ಕೇಸು ದಾಖಲಾಗಿವೆ! ಅತ್ತ ಆಸ್ಪತ್ರೆ ಖರ್ಚು, ಇತ್ತ ಕೋರ್ಟಿಗೆ ಅಲೆದಾಟ. ನಿಂತುಹೋಗಿರುವ ಕೃಷಿ ಚಟುವಟಿಕೆಗಳು ಇವು ಯಾವುವೂ ಸರ್ಕಾರಕ್ಕೆ ಏಕೆ ಕಾಣುವುದಿಲ್ಲ? ವಿಧಾನಸೌಧದ ಎದುರು ಹಸಿರು ಟವೆಲ್ ಹಾಕಿಕೊಂಡು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಾತ್ರಕ್ಕೆ ರೈತರ ಬದುಕು ಸುಧಾರಿಸೀತೇ?
ಇನ್ನು ಕರೆಂಟ್ ಮಿನಿಷ್ಟ್ರು ಈಶ್ವರಪ್ಪ ತಮ್ಮ ಮಾತಿನ ಕರೆಂಟನ್ನೇ ಕಳೆದುಕೊಂಡಿದ್ದಾರೆ. ‘ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ, ಬೇಸಿಗೆಯಲ್ಲೂ ಪವರ್ ಕಟ್ ಇಲ್ಲ’ ಎಂದು ಒಂದು ಊರಿನಲ್ಲಿ ಹೇಳಿದರೆ, ಇನ್ನೊಂದು ಊರಿನಲ್ಲಿ, ‘ರಾಜ್ಯದ ವಿದ್ಯುತ್ ಅಭಾವವನ್ನು ನೀಗಿಸಲು ಶಿವನ ಸಮುದ್ರದಲ್ಲಿ ಒಂದು ರುಪಾಯಿಗೆ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಲಾಗುವುದು’ ಎಂಬ ನುಡಿಮುತ್ತುಗಳನ್ನುದುರಿಸುತ್ತಾರೆ. ಅಲ್ಲೆಲ್ಲೋ ಉಷ್ಣು ವಿದ್ಯುತ್ ಸ್ಥಾವರ ಸ್ಥಾಪಿಸಿ ರಾಜ್ಯಕ್ಕೆ ವಿದ್ಯುತ್ ಕೊಡುತ್ತೇವೆ ಎನ್ನುತ್ತಾರೆ! ‘ಅಧಿಕಾರಕ್ಕೆ ಬಂದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ರೈತರ ಪಂಪ್ ಸೆಟ್ಟುಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು’ ಎಂಬ ಆಶ್ವಾಸನೆ ಬಿ.ಜೆ.ಪಿ.ಯ ಪ್ರಣಾಳಿಕೆಯಲ್ಲೇ ಇದೆ. ಆದರೆ ಅದು ಮುಖ್ಯಮಂತ್ರಿಗಳಿಗೆ, ಕರೆಂಟ್ ಮಂತ್ರಿಗಳಿಗೆ ಮರೆತುಹೋಗಿದೆ!
ಅಷ್ಟಕ್ಕೂ ರೈತರ ಬೇಡಿಕೆಗಳು ಸರಳ. ‘ಕೊಡುವಷ್ಟು ಕಾಲ ಗುಣಮಟ್ಟದ ವಿದ್ಯುತ್ ಬೇಕು.’ ‘ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಬೇಕು.’ ಆದರೆ ಇವೆರಡೂ ಬೇಡಿಕೆಗಳು ಆಡಳಿತ ನಡೆಸುವವರ ದಪ್ಪ ಚರ್ಮದಿಂದಾಗಿ ಇಂದು ಸವೆದು ಹೋಗಿವೆ. ಕರೆಂಟ್ ಬಂತು ಎಂದು ಪಂಪ್ ಸೆಟ್ ಆನ್ ಮಾಡಿದರೆ ಮೋಟಾರ್ ಸುಟ್ಟು ಹೋಗುತ್ತದೆ! ಅದೃಷ್ಟಕ್ಕೆ ಆನ್ ಆದರೆ ಮತ್ತೆ ಕೆಲವೇ ನಿಮಿಷಗಳಲ್ಲಿ ಕರೆಂಟ್ ಕಟ್ ಆಗುತ್ತದೆ. ಹೇಗೋ ಬೆಳೆದ ಬೆಳೆ ಮಾರ್ಕೆಟ್ಟಿಗೆ ಬರುವಷ್ಟರಲ್ಲಿ ಬೆಲೆ ಕಳೆದುಕೊಳ್ಳುತ್ತದೆ. ಆದರೆ ಪೈಪೋಟಿಯ ಮೇಲೆ ರೈತರನ್ನು ಸಾಲಗಾರರನ್ನಾಗಿ ಮಾಡುವಲ್ಲಿ ಯಾವ ರಾಜಕೀಯ ಪಕ್ಷಗಳು ಹಿಂದೆ ಬಿದ್ದಿಲ್ಲ. ಸಾಲ, ಪರಿಹಾರ ಮೊದಲಾದವುಗಳನ್ನು ಘೋಷಣೆ ಮಾಡಿ ರೈತರ ಸ್ವಾಭಿಮಾನವನ್ನೇ ನಾಶ ಮಾಡುತ್ತಿದೆಯೇನೋ ಎಂಬ ಅನುಮಾನ ಬಂದರೆ ಆಶ್ಚರ್ಯವೇನೂ ಇಲ್ಲ. ಇದನ್ನು ತಿಳಿಸಿ ಹೇಳುವವರು ನಕಕ್ಸಲರಂತೆ, ರಾಜಕೀಯ ವ್ಯಭಿಚಾರ ಮಾಡುವವರಂತೆ ಈ ಸರ್ಕಾರಕ್ಕೆ ಕಾಣುತ್ತಾರೆ.
ರೈತರಿಗೆ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಸರ್ಕಾರ ‘ತಾನು ರೈತಪರ’ ಎಒದು ಹೇಳಿಕೊಳ್ಳ್ಳುವಂತೆ ಕೆಲಸ ಮಾಡುತ್ತಿದೆ! ಅದರಲ್ಲಿ ನೂರಾರು ರೈತರನ್ನು ಚೀನಾಪ್ರವಾಸಕ್ಕೆ ಕಳುಹಿಸಿರುವುದು ಅದರ ಸಾಧನೆ. ‘ಹೋದವರಲ್ಲಿ ರೈತರೆಷ್ಟು ಮಂದಿ?’ ಎಂಬ ಪ್ರಶ್ನೆ ಒತ್ತೊಟ್ಟಿಗಿರಲಿ. ಸಾವಿರಾರು ವರ್ಷಗಳಿಂದ ಈ ದೇಶ ಕೃಷಿಯನ್ನೇ ಅವಲಂಬಿಸಿ ಬದುಕಿದೆ. ಆಗ ಯಾವ ದೇಶದ ಕೃಷಿಯನ್ನೂ ಅದು ಅನುಕರಿಸುತ್ತಿರಲಿಲ್ಲ. ಆದರೆ ಈಗ? ನಮ್ಮ ದೇಶದ ಹವಾಮಾನಕ್ಕೆ ಹೊಂದುತ್ತದೋ ಇಲ್ಲವೋ ಬೇರೆ ದೇಶದ ಕೃಷಿ ಪದ್ಧತಿಯನ್ನು ಅನುಸರಿಸಲು ಸರ್ಕಾರವೇ ಪ್ರೋತ್ಸಾಹಿಸುತ್ತದೆ. ಇನ್ನೂ ಒಂದು ರೈತರ ತಂಡವನ್ನು ಅದು ಚೀನಾಕ್ಕೆ ಕಳುಹಿಸುತ್ತದಂತೆ! ರೈತರ ಜೀವನಾಡಿಯಾಗಿರುವ ಕಾಲುವೆಗಳು ಒಡೆಯುವುದರಲ್ಲಿ ಗಿನ್ನೆಸ್ ದಾಖಲೆ ಸೇರುತ್ತಿವೆ. ಇವಾವೂ ದಪ್ಪಚರ್ಮದವರಿಗೆ ಕಾಣುತ್ತಿಲ್ಲ. ತನ್ನ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿದ ಕೆಲವರನ್ನು ತೃಪ್ತಿ ಪಡಿಸಲು ರಾಜಕೀಯ ಪಕ್ಷಗಳಿಗೆ ಹಲವಾರು ಮಾರ್ಗಗಳಿವೆ. ಅದರಲ್ಲಿ ರೈತರ ವಿದೇಶಿ ಪ್ರವಾಸವೂ ಒಂದು!
ಈ ಸರ್ಕಾರದ ವಿರುದ್ಧ ಮಾತನಾಡುವವರು ರಾಜಕೀಯ ಕ್ರಿಮಿನಲ್‌ಗಳಂತೆ ಕಾಣುತ್ತಾರೆ! ಬಳ್ಳಾರಿ ಹತ್ತಿರ ಸ್ಥಾಪಿಸಲು ಉದ್ಧೇಶಿಸಿರುವ ವಿಮಾನ ನಿಲ್ದಾಣದ ಜಾಗದ ಬಗ್ಗೆ ಅಪಸ್ವರ ಎತ್ತಿರುವ ರೈತರು, ಜಾಗ ಬದಲಿಸುವಂತೆ ಗ್ರಾಮಪಂಚಾಯಿತಿಯಲ್ಲಿ ಠರಾವು ಪಾಸು ಮಾಡಿದ್ದಾರೆ. ಅದರೆ ಅದು ಅಲ್ಲಿಯ ಗಣಿದಣಿ ಮಂತ್ರಿಗಳಿಗೆ ರಾಜಕೀಯ ಕ್ರಿಮಿನಲ್‌ಗಳು ಮಾಡುವ ಕೆಲಸದಂತೆ ಕಾಣುತ್ತದೆ. ಜನರಿಂದಲೇ ಆರಿಸಲ್ಪಟ್ಟ ಗ್ರಾಮಪಂಚಾಯಿತಿಯ ಸದಸ್ಯರ ಬಗ್ಗೆ ಇವರಿಗೆ ಯಾವುದೇ ಗೌರವವಿಲ್ಲ. ಈ ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆಲ್ಲಾ ಮಾನನಷ್ಟ ಮೊಕದ್ದಮೆ ಹೂಡುವ ಮಾತುಗಳನ್ನು ಮುಖ್ಯಮಂತ್ರಿಗಳು ಆಡುತ್ತಾರೆ. ಮುಂದೆ ರಾಜ್ಯದಲ್ಲಿ ಮಾನನಷ್ಟ ಮೊಕದ್ದಮೆಗಳನ್ನು ನಡೆಸಲೆಂದೇ ಒಂದು ಪ್ರತ್ಯೇಕ ಇಲಾಖೆ, ಮಂತ್ರಿ ಬೇಕಾಗಬಹುದು!
ಅಂದ ಹಾಗೆ ಇವಾವೂ ಬಿ.ಜೆ.ಪಿ.ಯ ಚುನಾವಣಾ ಪ್ರಣಾಳಿಕೆಯಲ್ಲೇನು ಸೇರಿರಲಿಲ್ಲ! ಈ ಪಕ್ಷಕ್ಕೆ ಹಿಡನ್ ಅಜೆಂಡಾ ಎಂಬುದೊಂದಿದೆ. ಅದರಲ್ಲಿವೆ! ಅದರಲ್ಲಿ ರೈತರ ವಿಷಯಗಳಿಗೆ ಪ್ರಾಶಸ್ತ್ಯವಿಲ್ಲ. ಹಿಡನ್ ಅಜೆಂಡಾವನ್ನು ಕಾರ್ಯರೂಪಕ್ಕೆ ತರಲು ಅದರ ಹಿಂಬಾಲಕರು ತುದಿಗಾಲಿನಲ್ಲಿ ನಿಂತಿರುವಂತೆ ಕಾಣುತ್ತದೆ. ಸರ್ಕಾರದ ಬೆಂಬಲವೂ ಇದೆ. ಮೊನ್ನೆ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಕುಣಿಗಲ್ ಪಟ್ಟಣದ ನಡುವೆ ರಸ್ತೆ ಅಗಲೀಕರಣಕ್ಕೆ ದೇವಾಲಯವೊಂದನ್ನು ತೆರವು ಗೊಳಿಸಲಾಯಿತು. ಆಗ ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಕೇವಲ ಐದಾರು ಕೇಸರಿ ಭಾವುಟಗಳು, ಸಾವಿರಾರು ಜನರನ್ನು ಸೇರಿಸಿ ಸುಮಾರು ಆರು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರು. ಅವರ್‍ಯಾರನ್ನೂ ಬಂಧಿಸುವ ಅಥವಾ ಅವರ ಮೇಲೆ ಕೇಸು ದಾಖಲಿಸುವ ಕಾರ್ಯವನ್ನು ಯಾರೂ ಮಾಡಲಿಲ್ಲ. ಆದರೆ ಅದೇ ಕುಣಿಗಲ್ಲಿನಲ್ಲಿ ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ರೈತ ಮತ್ತು ಕನ್ನಡಪರ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಸೇರಿದ್ದ ಜನ ಐವತ್ತನ್ನೂ ಮೀರಿರಲಿಲ್ಲ. ಸಾವಿರಾರು ಜನರಿಗೆ ಜೀವನಾಧಾರವಾಗಿರುವ ಕೆರೆಯನ್ನು ಉಳಿಸುವುದಕ್ಕಿಂತ, ಸಾರ್ವಜನಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದ ದೇವಾಲಯವನ್ನು ತೆರವುಗೊಳಿಸುವುದು ಈ ರಾಜ್ಯದಲ್ಲಿ ಮಹಾಪರಾಧ!
ಈ ದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ಗೋಮಾಂಸ ಸೇವೆನೆ ನಡೆದು ಬಂದಿದೆ. ಒಂದು ಕಾಲದಲ್ಲಿ ಬ್ರಾಹ್ಮಣರೂ ಗೋಮಾಂಸ ತಿನ್ನುತ್ತಿದ್ದವರೆ. ಇವರು ಕಷ್ಟಕಾಲದಲ್ಲಿ ಮಾತ್ರ ಯಾರನ್ನು ಹಿಂದುಗಳು ಎನ್ನುತ್ತಾರೋ ಅವರಲ್ಲಿ ಹೆಚ್ಚಿನವರು ಗೋಮಾಂಸ ಸೇವೆಯನ್ನು ಇಂದೂ ಮಾಡುತ್ತಿದ್ದಾರೆ. ಅದು ಕೇವಲ ಮುಸಲ್ಮಾನರಿಗೆ ಮಾತ್ರ ಮೀಸಲಾಗಿಲ್ಲ. ಅದರಿಂದಾಗಿ ಗೋವಧೆ, ವ್ಯಾಪಾರ ಮೊದಲಾದವುಗಳು ಈ ದೇಶದಲ್ಲಿ ವ್ಯವಸ್ಥಿತವಾಗಿಯೇ ನಡೆದುಕೊಂಡು ಬಂದಿವೆ. ಆದರೆ ಈಗ ಕೆಲವು ಜನರಿಗೆ ಅದು ಅಪರಾಧವಾಗಿ ಕಂಡು, ಗೋವುಗಳನ್ನು ಸಾಗಿಸುವವರಿಗೆಲ್ಲಾ ತೊಂದರೆ ಕೊಡುತ್ತಾರೆ. ಗೋವಧೆ, ಗೋಮಾಂಸ ಸೇವನೆ, ಇವುಗಳಿಗಾಗಿ ಗೋವುಗಳನ್ನು ಸಾಗಿಸುವುದು ಮೊದಲೂ ನಡೆಯುತ್ತಿದ್ದವು. ಈಗಲೂ ನಡೆಯುತ್ತಿವೆ. ಆದರೆ ಈಗ ಅದನ್ನು ವಿರೋಧಿಸುವ, ಅದನ್ನು ತಡೆಯುವ ನೆಪದಲ್ಲಿ ಅಮಾಯಕರನ್ನು ಥಳಿಸುವ ಕಾರ್ಯ ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಸರ್ಕಾರದ ಗುಪ್ತ ಬೆಂಬಲ ಇದ್ದೇ ಇದೆ. ಹಾಗೆಯೇ ಮತಾಂತರವೂ ಸಹ!
‘ಸನಾತನ ಸಂಸ್ಕೃತಿ ಅಪಾಯದಲ್ಲಿದೆ. ಅದನ್ನು ಉಳಿಸಲು ಬ್ರಾಹ್ಮಣರು ಶ್ರಮಿಸಬೇಕು’ ಎಂದು ಬಿ.ಜೆ.ಪಿ. ದುರೀಣರು ಹೇಳಿಕೆ ಕೊಡುತ್ತಾರೆ. ಈ ಹೇಳಿಕೆಯಲ್ಲೇ ಸನಾತನ ಸಂಸ್ಕೃತಿ ಬ್ರಾಹ್ಮಣರದ್ದು ಎನ್ನುವ ಧೋರಣೆ ಎದ್ದು ಕಾಣುತ್ತಿದೆ. ಆದರೆ ಯಾರಾದರೂ ಬೇರೆ ಧರ್ಮಕ್ಕೆ ಮತಾಂತರವಾದಾಗ ಮಾತ್ರ ಈ ಜನಕ್ಕೆ ಉಳಿದವರೂ ಹಿಂದೂಗಳ ತರವೇ ಕಾಣುತ್ತಾರೆ! ಬೌದ್ಧಧರ್ಮವೂ ಹಿಂದೂ ಧರ್ಮದ ಒಂದು ಭಾಗವೇ ಎಂದು ಹೇಳಿಕೆ ಕೊಡುವವರೇ, ದಲಿತರು ಬೌದ್ಧ ಧರ್ಮಕ್ಕೆ ಮತಾಂತರ ಆಗಬಾರದು. ಆರ್ಯ ಸಮಾಜ ಸೇರಲಿ ಎಂದು ಅಪ್ಪಣೆ ಕೊಡುತ್ತಾರೆ. ಈ ಹೇಳಿಕೆಯಲ್ಲು ಅಷ್ಟೆ. ದಲಿತರು ಹಿಂದೂಗಳಲ್ಲ ಎನ್ನುವ ಧೋರಣೆ ಕಾಣುತ್ತದೆ. ಈ ರೀತಿ ಹೇಳಿಕೆ ಕೊಡುವ ಮಹನೀಯರಿಗೆ ‘ದಲಿತರು ತಮ್ಮ ಮಠಕ್ಕೇ ಸೇರಲಿ, ತಮ್ಮ ಮತಕ್ಕೇ ಸೇರಲಿ’ ಎಂದುಹೇಳುವ ದೊಡ್ಡತನವಿಲ್ಲ. ದಲಿತರು ಆಹ್ವಾನಿಸಿದರೂ ಸಹಭೋಜನಕ್ಕೆ ಒಪ್ಪುವುದಿಲ್ಲ. ಸನ್ಯಾಸಿಯಾದವನಿಗೆ ಸಹಬೋಜನಕ್ಕೆ ನಿಷೇಧವಿರುವಂತೆ ಲೌಖಿಕ ವಿಚಾರಗಳಿಗೂ ಆತ ತಲೆ ಕೆಡಿಸಿಕೊಳ್ಳಬಾರದು. ಆದರೆ ಲೌಖಿಕ ವಿಚಾರಗಳಿಗೆ ಅಡ್ಡಿ ಬಾರದ ಸನ್ಯಾಸತ್ವ ಸಹಭೋಜನಕ್ಕೆ ಬರುತ್ತದೆ!
ಕೋಮುವಾದದ ವಿರುದ್ಧ ಮಾತನಾಡುವವರೆಲ್ಲಾ ಸಾರಸಗಟಾಗಿ ಕೆಲವು ವಿಚಾರವಂತರಿಗೆ ಸುಳ್ಳುಗಾರರಂತೆ ಕಾಣುತ್ತಾರೆ. ಆಜನ್ಮ ಬ್ರಹ್ಮಚಾರಿಗಳೊಬ್ಬರು ಮುಂಬಯಿಯ ಕಾಮಟಿಪುರವನ್ನು ಹೆಸರಿಸಿ ಬುದ್ದಿಜೀವಿಗಳನ್ನು ಟೀಕಿಸುತ್ತಾರೆ. ಕಾಮಟಿಪುರದ ವ್ಯವಸ್ಥೆ ಬಲಗೊಳ್ಳಲು ಬ್ರಹ್ಮಚಾರಿಗಳೆನಿಸಿಕೊಂಡವರ ಕೊಡುಗೆಯೂ ಇದೆ ಎಂಬುದನ್ನು ಮರೆಯುತ್ತಾರೆ. ಭಾರತೀಯ ಸಂಸ್ಕೃತಿಯ ರಕ್ಷಕರೆನಿಸಿಕೊಂಡವರು, ಭಾರತೀಯತೆಯನ್ನು ಗುತ್ತಿಗೆ ಹಿಡಿದಂತೆ ಮಾತನಾಡುತ್ತಿರುವವರು, ‘ಈ ದೇಶದ ಬಹುಸಂಖ್ಯಾತ ಜನರ ಸಂಸ್ಕೃತಿಯೇನು?’ ಎಂಬುದನ್ನೇ ತಿಳಿದಿಲ್ಲ!
ಗಣಿಗಾರಿಕೆಯಿಂದ ಈ ರಾಜ್ಯದ ಗಡಿಯನ್ನೇ ಒತ್ತುವರಿ ಮಾಡಲಾಗುತ್ತಿದೆ. ಕನ್ನಡಕ್ಕೆ ಯಾವಾಗಲೂ ಕೈ ಎತ್ತುತ್ತಿದ್ದ ಹಿರಿಯರೊಬ್ಬರು ಈಗ, ಕನ್ನಡದ ವಿಷಯದಲ್ಲಿ ಪಂಚೇಂಧ್ರಿಯಗಳನ್ನು ಮುಚ್ಚಿ ಕುಳಿತಿದ್ದಾರೆ. ಮೊದಲು ಕನ್ನಡಿಗ ಮಾತ್ರರಾಗಿದ್ದ ಅವರು ಈಗ ಭಾರತೀಯರಂತೆ! ವಿಶ್ವಮಾನವರಾಗುವುದು ಯಾವಾಗ ಕಾದು ನೋಡಬೇಕು. ಯಾವುದೋ ಪ್ರಶ್ನೆಗೆ ಲೋಕಸಭೆಯಲ್ಲಿ ಜನಗಣತಿಯ ವಿವರಗಳನ್ನು ಉತ್ತರವಾಗಿ ಕೊಟ್ಟಾಗ, ಆ ಉತ್ತರದ ಕಾಲಾವಧಿಯ ಬಗ್ಗೆ ಯೋಚಿಸದೇ, ಮಾರನೆಯ ದಿನವೇ ಇವರಿಗೆ ಅನುಕೂಲವಾಗುವ ಕಾಲಾವಧಿಯ ಅಂಕಿಸಂಖ್ಯೆಗಳನ್ನು ಕೊಟ್ಟು ವಾಚಕರವಾಣಿಗೆ ಕಾಗದ ಬರೆಯುತ್ತಾರೆ. ಗಣಿ ವಿಚಾರದಲ್ಲಿ ಲೋಕಾಯುಕ್ತರ ವರದಿ ಬೆಳಕಿಗೆ ಬಂದು, ಅದರಲ್ಲಿ ಸ್ಪಷ್ಟವಾಗಿ ನಾಡಿನ ಗಡಿ ಒತ್ತುವರಿಯಾಗುತ್ತಿರುವುದನ್ನು ಸೂಚಿಸಿ, ಎರಡು ವಾರಗಳು ಕಳೆದಿದ್ದರೂ ಮಹಾನುಭಾವರು ಬಾಯಿ ಬಿಟ್ಟಿಲ್ಲ! ಇವರು ಕ್ರೈಸ್ತ-ಮುಸಲ್ಮಾನರಿಂದ ಈ ದೇಶವನ್ನು ಕಾಪಾಡಬೇಕೆಂದು ಮೊರೆಯಿಡುತ್ತಾರೆ!
ಈ ದೇಶವನ್ನು, ಈ ರಾಜ್ಯವನ್ನು ಯಾರು, ಯಾರಿಂದ ಕಾಪಾಡಬೇಕು? ದಿಕ್ಕು ಕಾಣದಾಗಿದೆ.

No comments: