Tuesday, January 27, 2009

ಅಜ್ಜ ಹೇಳಿದ ‘ಹನ್ಮಂತಪ್ಪನ ಕಥೆ’ (೧)


ನಾನು ನನ್ನ ಬಾಲ್ಯವನ್ನು ನನ್ನಜ್ಜ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ಕಳೆದವನು. ನೂರಾರು ಕಥೆಗಳನ್ನು ಅಜ್ಜ ನನಗೆ ಹೇಳಿದ್ದರು. ಆದರೆ ಅದರಲ್ಲಿ ನನಗೆ ನೆಪಿರುವ ಕಥೆಗಳ ಸಂಖ್ಯೆ ಎರಡಂಕಿ ದಾಟುವುದಿಲ್ಲವೇನೋ! ಇನ್ನೂ ಐದು ವರ್ಷ ತುಂಬದ
ನನ್ನ ಮಗಳು ಕಥೆ ಹೇಳು ಎಂದು ಪೀಡಿಸುತ್ತಿದ್ದಾಗ ಕೆಲವೊಂದು ಜ್ಞಾಪಕಕ್ಕೆ ಬರುತ್ತಿವೆ. ನೆನಪಿಗೆ
ಬಂದ ಕಥೆಗಳನ್ನೆಲ್ಲಾ ದಾಖಲಿಸಲು ತೀರ್ಮಾನಿಸಿದ್ದೇನೆ. ‘ಅಜ್ಜ ಹೇಳಿದ್ದ ಕಥೆಗಳು’ ಎಂಬ
ಶಿರ್ಷಿಕೆಯಲ್ಲಿ ನೆನಪಾದಾಗ ಬರೆದು ಹಾರಿಬಿಡುತ್ತೇನೆ. ಈ ಕಥೆಗಳು ಎಲ್ಲ
ವಯೋಮಾನದ ಮಕ್ಕಳಿಗೂ ಇಷ್ಟವಾಗುವಂತವುಗಳು. ಆದರೆ
ಅಲ್ಲಿನ ಕೆಲವು ಪದಗಳು ಇಂದು ಬಳಕೆಯಲ್ಲಿಲ್ಲ. ನಗರದ
ಮಕ್ಕಳಿಗಂತೂ ಅವು ಅರ್ಥವಾಗುವುದಿಲ್ಲ. ಅದನ್ನು
ತಿಳಿಸಿ, ಅಗತ್ಯಬಿದ್ದಲ್ಲಿ ಇಂಗ್ಲಿಷ್ ಪದಗಳನ್ನೇ
ಬಳಸಿ ಮಕ್ಕಳಿಗೆ ಹೇಳಿದರೆ ಖಂಡಿತಾ
ಎಂಜಾಯ್ ಮಾಡುತ್ತವೆ.
ಜನಪದ & ಜಾನಪದ
ಬೆಳೆದು ಬಂದಿದ್ದೇ
ಹಾಗೆ.

ಒಂದು ಊರು. ಆ ಊರಿನ ಪಕ್ಕ ಒಂದು ಹೊಳೆ. ಅಲ್ಲೊಂದು ಅರಳಿಮರ. ಒಂದಿನ ರಾತ್ರಿ ಬರಬಾರದ ಮಳೆ ಬಂದು, ಬೀಸಬಾರದ ಗಾಳಿ ಬೀಸಿ ಆ ಅರಳಿ ಮರದ ಎಲೆ ಎಲ್ಲಾ ಉದುರೋದ್ವು. ಅದರ ಮಾರನೆ ದಿನ ಎಲ್ಲಿಂದ್ಲೊ ಬಂದ ಒಂದು ಬೆಳ್ಳಕ್ಕಿ ಅರಳಿ ಮರನ ಕೇಳ್ತು, ‘ಅರಳಿ ಮರ, ಆರಳಿ ಮರ. ನಿನ್ನ ಎಲೆ ಎಲ್ಲಾ ಯಾಕೆ ಉದುರೊದ್ವು?’ ಅಂತ. ಅದಕ್ಕೆ ಅರಳಿಮರ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ನನ್ನ ಎಲೆ ಎಲ್ಲಾ ಉದುರೋದ್ವು.
ಈಗ ನಿನ್ನ ಪುಕ್ಕ ಎಲ್ಲಾ ಉದುರೋಗ್ಲಿ’ ಅಂತು.


ಬೆಳ್ಳಕ್ಕಿ ಅಳ್ತಾ ನದಿದಡದಲ್ಲಿ ಬಂದು ಕುಳ್ತಿತ್ತು. ಆಗ ಆ ಊರಿನ ಹನುಮಂತಪ್ಪನ ಗುಡಿ ಬಸವ ನದಿಗೆ ನೀರು ಕುಡಿಯೊಕೆ ಅಂತ ಬಂತು. ಅಳ್ತಾ ಕೂತಿದ್ದ ಬೆಳ್ಳಕ್ಕಿನ ಕಂಡು ‘ಯಾಕ್ ಬೆಳ್ಳಕ್ಕಿ ಅಳ್ತಾಯಿದ್ದಿ, ನಿನ್ನ ಪುಕ್ಕ ಎಲ್ಲ ಯಾಕ್ ಉದುರೋದೊ?’ ಅಂತು. ಅದಕ್ಕೆ ಬೆಳ್ಳಕ್ಕಿ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿದ್ವು.
ಈಗ ನಿನ್ನ ಕೊಂಬು ಮುರ್ದೋಗ್ಲಿ’ ಅಂತು.


ಬಸವ ನೀರು ಕುಡ್ದು ಊರ್ಕಡೆಗೆ ಹೋಗ್ತಾಯಿತ್ತು. ದಾರಿಲಿ ಗುದ್ಲಿ ಇಡ್ಕಂಡು ತೋಟುಕ್ಕೊಂಟಿದ್ದ ಊರಿನ ಗೌಡ ಸಿಕ್ಕ. ಬಸವಣ್ಣನ ಕಂಡು ‘ಯಾಕ್ ಬಸವಣ್ಣ ನಿನ್ನ ಕೋಡು ಮುರ್ದೋಗೈತೆ’ ಅಂದ. ಅದಕ್ಕೆ ಬಸವಣ್ಣ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿ,
ಬಸವಣ್ಣನ ಕೊಂಬು ಮುರ್ದೋಯ್ತು.
ಈಗ ಗೌಡನ ಅಂಡಿಗೆ ಗುದ್ಲಿ ಅಂಟ್ಕೊಳ್ಳಿ’ ಅಂತು.


ಗೌಡ ಮನಿಗೆ ವಾಪಸ್ಸು ಬಂದ. ಅದನ್ಕಂಡು ಗೌಡ್ತಿ ‘ಅಯ್ಯೊ, ನಿನ್ನಂಡಿಗೆ ಗುದ್ಲಿಯಾಕ್ ಅಂಟ್ಕಂಡೈತೆ’ ಅಂದು ಗುದ್ಲಿನ ಕೀಳಕ್ಕೆ ಕೈ ಹಾಕಿದ್ಲು. ಅದಕ್ಕೆ ಗೌಡ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿ,
ಬಸವಣ್ಣನ ಕೊಂಬು ಮುರ್ದು,
ಗೌಡನ ಅಂಡಿಗೆ ಗುದ್ಲಿ ಅಂಟ್ಕಂತು.
ಈಗ ನಿನ್ನ ಕೈಯೆ ಮುರ್ದೋಗ್ಲಿ’ ಅಂದ.


ಪಾಪ ಗೌಡ್ತಿ ಹೊರ್ಗೆಲ್ಲು ಹೋಗ್ದೆ ಒಳಗೇ ಇದ್ಲು. ಗೌಡನ ಮನೆಗೆ ಕಸಗುಡ್ಸಾಕೆ ಬರೊ ಹೊಲ್ತಿ ಗೌಡತಿ ಅವಸ್ಥೆ ಕಂಡು, ‘ಯಾಕ್ ಗೌಡ್ತಿ ಇಂಗೆ’ ಅಂದ್ಲು. ಅದಕ್ಕೆ ಗೌಡ್ತಿ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿ,
ಬಸವಣ್ಣನ ಕೊಂಬು ಮುರ್ದು,
ಗೌಡನ ಅಂಡಿಗೆ ಗುದ್ಲಿ ಅಂಟ್ಕಂಡು,
ಗೌಡ್ತಿ ಕೈ ಮುರ್ದೋಯ್ತು.
ಈಗ ಹೊಲ್ತಿ ತಿಕ್ಕೆ ಬರ್ಲು ಹೊಕ್ಕಳ್ಳಿ’ ಅಂದ್ಲು.


ಹೊಲ್ತಿ ಮನಿಗೆ ಹೋಗ್ತಾ ಇರುವಾಗ ದಾರಿಲಿ, ದೇವ್ರ ಅಬ್ಷೇಕಕ್ಕೆ ಚೆಂಬಲ್ಲಿ ನೀರು ತಗಂಡೋಗ್ತಿದ್ದ ಹನುಮಂತಪ್ಪನ ಗುಡಿ ಪೂಜಾರಿ ನೋಡ್ದ. ‘ಯಾಕಮ್ಮ, ನಿನ್ನ ತಿಕ್ಕೆ ಬರ್ಲು ಹೊಕ್ಕೊಂತು?’ ಅಂದ. ಅದಕ್ಕೆ ಹೊಲ್ತಿ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿ,
ಬಸವಣ್ಣನ ಕೊಂಬು ಮುರ್ದು,
ಗೌಡನ ಅಂಡಿಗೆ ಗುದ್ಲಿ ಅಂಟ್ಕಂಡು,
ಗೌಡ್ತಿ ಕೈ ಮುರ್ದೋಗಿ,
ಹೊಲ್ತಿ ತಿಕ್ಕೆ ಬರ್ಲು ಹೊಕ್ಕತ್ತು.
ಈಗ ಪೂಜಾರಪ್ಪನ ಸೊಂಟಕ್ಕೆ ಚೆಂಬೊಕ್ಕೊಳ್ಳಿ’ ಅಂದ್ಲು.


ಪಾಪ ಪೂಜಾರಪ್ಪ ಗುಡಿಗೆ ಬಂದು, ಎಡ್ಗೈಲಿ ಚೆಂಬಿಂದ ನೀರು ತಕ್ಕೊಂಡು, ಬಲ್ಗೈಲಿ ದೇವ್ರ ಮೇಲೆ ಹಾಕ್ತಾಯಿದ್ದ. ಅದನ್ನ ಕಂಡು ಹನ್ಮಂತಪ್ಪನಿಗೆ ಕೋಪಬಂದು ‘ಯಾಕಯ್ಯ ಪೂಜಾರಿ, ನಿನ್ನ ಸೊಂಟಕ್ಕೆ ಚೆಂಬು ಹೊಕ್ಕೊಂಡೈತೆ?’ ಅಂದ. ಅದಕ್ಕೆ ಪೂಜಾರಿ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿ,
ಬಸವಣ್ಣನ ಕೊಂಬು ಮುರ್ದು,
ಗೌಡನ ಅಂಡಿಗೆ ಗುದ್ಲಿ ಅಂಟ್ಕಂಡು,
ಗೌಡ್ತಿ ಕೈ ಮುರ್ದೋಯ್ತು.
ಹೊಲ್ತಿ ತಿಕ್ಕೆ ಬರ್ಲು ಹೊಕ್ಕಂಡು,
ಪೂಜರಪ್ಪನ ಸೊಂಟಕ್ಕೆ ಚೆಂಬು ಹೊಕ್ಕೊಂತು.
ಈಗ ಹನುಮಂತಪ್ಪನ ಮೂತಿ ಮೂಡುಮುಂದಾಗಿ ತಿರಿಕ್ಕೊಳ್ಳಿ’ ಅಂದ.


ಅವತ್ನಿಂದ ಯಾವೂರಲ್ಲೆ ಆಗ್ಲಿ ಹನುಮಂತನ ಗುಡಿ ಬಾಗ್ಲು ಯಾವ ದಿಕ್ಕಿಗಿದ್ರು ಹನುಮಂತಪ್ಪನ ಮೂತಿ ಮಾತ್ರ ಮೂಡುಮುಂದಾಗಿ (ಪೂರ್ವಕ್ಕೆ) ತಿರಿಗಿರುತ್ತೆ.

No comments: