Monday, February 09, 2009

ಅಜ್ಜ ಹೇಳಿದ ‘ಗುಂಡನ ಕಡುಬು’ ಕಥೆ (೨)

ಒಂದು ಊರಲ್ಲಿ ಒಬ್ಬ ಗುಂಡ ಇದ್ದ. ಅವನಿಗೊಬ್ಬಳು ಹೆಂಡತಿ ಇದ್ದಳು. ಅವನು ಒಂದು ದಿನ ನೆಂಟರ ಮನೆಗೆ ಹೋಗಿರ್‍ತನೆ. ಅಲ್ಲಿ ಕಡಬು ಮಾಡಿರ್‍ತರೆ. ಊಟಕ್ಕೆ ಕಡಬು ಹಾಕಿದಾಗ, ಅದು ಅವನಿಗೆ ತುಂಬಾ ಇಷ್ಟವಾಗುತ್ತೆ. ಹೊಟ್ಟೆ ಬಿರಿಯೆ ತಿಂತಾನೆ. ಊರಿಗೆ ಹೋಗಿ, ತನ್ನ ಹೆಂಡ್ತಿ ಕೈಯಲ್ಲೂ ಕಡಬು ಮಾಡಿಸ್ಕೊಂಡು ತಿನ್ನಬೇಕು ಅಂದ್ಕೊತಾನೆ. ಊರಿಗೆ ವಾಪಸ್ಸು ಬರೋವಾಗ, ದಾರಿ ಉದ್ದಕ್ಕೂ ‘ಕಡಬು... ಕಡಬು... ಕಡಬು...’ ಅಂದ್ಕೊತಾ ಬರ್‍ತಾ ಇರ್‍ತಾನೆ.

ದಾರೀಲಿ ಹೆಣಾನ ಹೊತ್ಕೊಂಡು ಒಂದಷ್ಟು ಜನ ಮಶಾಣಕ್ಕೆ ಹೋಗ್ತಿರ್‍ತಾರೆ. ಅವ್ರು ಅಳೋದು, ಕಿರ್‍ಚೋದು ನೋಡಿ ಅವನಿಗೆ ಕಡಬು ಅನ್ನೋದು ಮರ್‍ತೋಗುತ್ತೆ. ಅಯ್ಯೋ ಮರ್‍ತೋಯ್ತಲ್ಲ ಅಂದ್ಕೊಂಡು ಊರಿಗೆ ಬರ್‍ತಾನೆ.
ಊರಿಗೆ ಬಂದವ್ನೆ ಹೆಂಡ್ತಿನ ಕರೆದು ‘ಲೇ ಇವ್ಳೇ, ನೆಂಟರ ಮನೇಲಿ ಊಟಕ್ಕೆ ಅದೆಂತದೋ ಹಾಕಿದ್ರು. ಬಾಳ ಚೆಂದಾಗಿತ್ತು. ನೀನು ಅದು ಮಾಡ್ಕೊಡು’ ಅಂತಾನೆ.
ಅವಳು ‘ಏನು’ ಅಂತಾಳೆ.
‘ಅದೆ ಇದು’ ಅಂತಾನೆ.
ಅವಳು ‘ಅದೇನು ಸರಿಯಾಗಿ ಹೇಳಬಾರದೆ’ ಅಂತಾಳೆ.
ಅದಕ್ಕೆ ಅವನು ‘ಅದೇ ಕಣೆ, ದುಂಡುಗೆ ಉದ್ದಕ್ಕೆ ದಪ್ಪಗೆ ಇರ್‍ತದಲ್ಲ, ಅದು’ ಅಂತಾನೆ.
‘ಅದೇನು ಬಾಳೆ ಹಣ್ಣೆ’ ಅಂತಾಳೆ ಅವ್ಳು.
ಅವ್ನಿಗೆ ಸಿಟ್ಟು ಬರುತ್ತೆ. ‘ಅಯ್ಯೊ ಬಡ್ಡೆತ್ತದ್ದೆ, ಬಾಳೆಹಣ್ಣನ್ನು ಅಡ್ಗೆ ಮನೇಲಿ ಯರ್‍ಯಾರ ಮಾಡ್ತಾರ?’ ಅಂತಾನೆ. ಮತ್ತೆ ‘ಅದೇ ಕಣೇ, ಗರಿ ಗರಿಯಾಗಿ, ಘಮ್ಮಂತ ವಾಸ್ನೆ ಬರುತ್ತಲ್ಲ, ಅದು’ ಅಂತಾನೆ.
ಅವ್ಳಿಗೆ ಸಿಟ್ಟು ಬಂದು ‘ಅದ್ಯೋನು ಸರಿಯಾಗಿ ಹೇಳಿ. ಲಾಡೋ, ಕೋಡ್ಬಳೆನೋ’ ಅಂತಾಳೆ.
ಅವ್ನಿಗೆ ವಿಪ್ರೀತ ಸಿಟ್ಟು ಬಂದ್ಬುಡುತ್ತೆ. ತೆಗೆದು ಅವಳ ಕೆನ್ನೆಗೆ ರಪ್ಪಂತ ಒಂದೇಟು ಹೊಡೆದು, ಹೊಲದ ಕಡೀಕೆ ಹೊರಟೋಗ್ತಾನೆ. ವಾಪಸ್ಸು ಬಂದಾಗ ಅವ್ನ ಹೆಂಡ್ತಿ ಅಳ್ತಾ ಕೂತಿರ್‍ತಾಳೆ.
ಇವ್ನು, ‘ಅದ್ಯಾಕೆ ಅಳ್ತಿದ್ದೀಯಾ?’ ಅಂತ ರೇಗ್ತಾನೆ.
ಅದಕ್ಕೆ ಅವ್ಳು ‘ಅಳ್ದೇ ಇನ್ನೇನು ಮಾಡ್ಲಿ. ಇಲ್ನೋಡು, ನೀನು ಹೊಡ್ದಿದ್ದು, ಒಳ್ಳೆ ಕಡ್ಬು ಊದ್ದಂಗೆ ಊದ್ಬುಟ್ಟದೆ’ ಅಂದು ಕೆನ್ನೆ ತೋರಿಸ್ತಾಳೆ.
ಗುಂಡ ತಕ್ಷಣ ‘ಅದೆ ಕಣೆ ಅದೇ, ಕಡಬು. ಅದನ್ನ ಮಾಡ್ಕೊಡು ಅಂತಾನೆ ನಾನು ಕೇಳಿದ್ದು. ಈಗ, ಈಗ್ಲೆ ಮಾಡ್ಕೊಡು’ ಅಂತ ಕುಣ್ದಾಡ್ತಾನೆ.
ಅದಕ್ಕೆ ಅವ್ನ ಹೆಂಡ್ತಿ ‘ಅಷ್ಟಕ್ಕೆ ಇಷ್ಟೊಂದು ಕುಣ್ದಾಡ್ಬೇಕ. ಬುಡು ಮಾಡ್ಕೊಡ್ತಿನಿ’ ಅಂತ ಅಡುಗೆ ಮನೆಗೆ ಹೋಗ್ತಾಳೆ.

3 comments:

ಬಿಸಿಲ ಹನಿ said...

ಸತ್ಯನಾರಾಯಣವರೇ,
ತುಂಬಾ ತಮಾಷೆಯಾಗಿದೆ ನಿಮ್ಮ ಕತೆ. ಅದೂ ಮಂಡ್ಯ ಭಾಷೆಯಲ್ಲಿದೆ. ನಾನು ಮಂಡ್ಯದಲ್ಲಿ ಓದಬೇಕಾದರೆ ಆ ಭಾಷೆಗೆ ಸಾಕಷ್ಟು ಆಕರ್ಷಿತನಾಗಿದ್ದೆ.

sunaath said...

ಈ ಕತೆಯನ್ನು ನಾನು ನಮ್ಮ ಅಜ್ಜಿಯಿಂದ ಕೇಳಿದ್ದೆ with a few variations. ಈಗ ನಿಮ್ಮಿಂದ ಕೇಳಿದಾಗ ಮತ್ತೆ ನೆನಪಾದಂತಾಯಿತು.

Anonymous said...

ತಮಾಷೆ ಕತೆ. ಇವತ್ತು ನೆನಪಾಗಿತ್ತು. ನನ್ನ ಬ್ಲಾಗಲ್ಲಿ ಬರೆದು ಕಡುಬಿನ ಚಿತ್ರ ಸಿಗುತ್ತೇನೋ ಎಲ್ಲಾದರು ಅಂತ ಹುಡುಕಿದಾಗ ನಿಮ್ಮ ಬ್ಲಾಗು, ಕಡುಬಿನ ಚಿತ್ರ, ಕತೆಯ ಇನ್ನೊಂದು ವರ್ಶನ್ ಎಲ್ಲಾ ಸಿಕ್ತು :)