
ಮಿಡ್ಲಿಸ್ಕೂಲಿಗೆ ಒಬ್ಬನೇ ಹೋಗಿ ಅಡ್ಮಿಷನ್ ಆದವನಿಗೆ, ಹೈಸ್ಕೂಲಿಗೆ ಅಡ್ಮಿಷನ್ ಆಗಲು ಕಷ್ಟವೇನು? ಸರಿ, ಜೂನ್ ತಿಂಗಳ ಒಂದನೇ ತಾರೀಖಿನಂದೇ ಮಿಡ್ಲಿಸ್ಕೂಲಿಗೆ ಹೋದೆ. ನನ್ನ ಅಜ್ಜಿಯನ್ನು ಪುಸಲಾಯಿಸಿ ಪಡೆದಿದ್ದ ಹಣದಿಂದ, ಹೋಗುವಾಗಲೇ ಒಂದು ಬಿಸ್ಕೆಟ್ ಪ್ಯಾಕೆಟ್ ತಗೆದುಕೊಂಡು ಹೋದೆ. ಹಿಂದಿನ ವರ್ಷದ ವಿದ್ಯಾರ್ಥಿಗಳು ಟಿ.ಸಿ. ತೆಗೆದುಕೊಂಡು ಹೋಗುವಾಗ ಬಿಸ್ಕೆಟ್ ಪ್ಯಾಕೆಟ್, ಬಾಳೆ ಹಣ್ಣು, ಕೊಬ್ಬರಿ ತಂದು ಮಿಡ್ಲಿಸ್ಕೂಲಿನ ಮೇಷ್ಟ್ರುಗಳಿಗೆ ಕೊಟ್ಟಿದ್ದನ್ನು ನಾನು ನೋಡಿದ್ದೆ! ತೆಗೆದುಕೊಂಡು ಹೋಗಿದ್ದು ಒಂದೇ ಪ್ಯಾಕೆಟ್ ಆಗಿದ್ದರಿಂದ, ಅದನ್ನು ಬೇರೆ ಮೇಷ್ಟ್ರುಗಳಿಗೆ ಕಾಣದಂತೆ ಅಡಗಿಸಿಟ್ಟುಕೊಂಡು ಹೋಗಿ ಹೆಡ್ಮಾಸ್ಟರಿಗೆ ಕೊಟ್ಟಿದ್ದೆ! ಆಗ ಹೆಡ್ಮಾಸ್ಟರಾಗಿದ್ದ ಕೇಶವೇಗೌಡ ಎಂಬುವವರು ತುಂಬಾ ಪ್ರೀತಿಯಿಂದ ಮಾತನಾಡಿಸಿ ಟೀ.ಸಿ. ಬರೆದುಕೊಟ್ಟರು. ಹಾಗೆ ಕೊಡುವಾಗ ‘ಏಳನೇ ತರಗತಿಯಲ್ಲಿ ಅತಿ ಹೆಚ್ಚು ಅಂದರೆ ಆರನೂರಕ್ಕೆ ನಾನೂರ ಏಳು ಅಂಕ ಪಡೆದವನು ನೀನಯ್ಯ. ಇನ್ನು ಮುಂದೆಯೂ ಚೆನ್ನಾಗಿ ಓದಬೇಕು’ ಎಂದು ಹಿತವಚನವನ್ನೂ ಹೇಳಿದರು. ಅವರು ಕೊಟ್ಟ ಟೀ.ಸಿ.ಯನ್ನು ನೋಡುವ, ಓದುವ ವ್ಯವಧಾನವಿಲ್ಲದೆ, ಅಂದೇ ಕುಂದೂರುಮಠದ ಹೈಸ್ಕೂಲಿಗೆ ತಗೆದುಕೊಂಡು ಹೋದೆ.

ನಂತರ ಅವರು ‘ಟೀ.ಸಿ. ಬರೆದದ್ದು ಯಾರು?’ ಎಂದರು.
ನಾನು ‘ಹೆಡ್ಮಾಸ್ಟ್ರು ಕೇಶವೇಗೌಡರು ಸಾರ್’ ಎಂದೆ.
ಅವರು ನನ್ನೆಡೆಗೆ ಟೀ.ಸಿ. ತೋರಿಸುತ್ತಾ, ‘ನೋಡಿಲ್ಲಿ, ಅವರು ತಪ್ಪು ಬರೆದಿದ್ದಾರೆ. ಅಂಕಗಳನ್ನು ಕೂಡಿದಾಗ ನಾನೂರ ಮೂವತ್ತೇಳು ಬರುತ್ತದೆ. ಅವರು ನಾನೂರ ಏಳು ಎಂದು ಬರೆದಿದ್ದಾರೆ. ಆದ್ದರಿಂದ ಈವತ್ತು ನಿನ್ನನ್ನು ಅಡ್ಮಿಷನ್ ಮಾಡಿಕೊಳ್ಳಲಾಗುವುದಿಲ್ಲ. ಹೋಗಿ ಇದನ್ನು ಸರಿ ಮಾಡಿಸಿಕೊಂಡು ಬಾ’ ಎಂದು ಟೀ.ಸಿ.ಯನ್ನು ನನಗೇ ವಾಪಸ್ಸು ಕೊಟ್ಟು ಬಿಟ್ಟರು.
ನನಗೋ ಗಾಬರಿ. ಒಂದು ಕ್ಷಣ ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲೇ ಇಲ್ಲ. ‘ನಿನ್ನನ್ನು ಅಡ್ಮಿಷನ್ ಮಾಡಿಕೊಳ್ಳಲಾಗುವುದಿಲ್ಲ’ ಎಂಬುದಷ್ಟೇ ನನ್ನ ತಲೆಯೊಳಗೆ ಹೋಗಿ ಮುಖ ಬಾಡಿ, ಕಣ್ಣೀರು ದುಮ್ಮಿಕ್ಕುವ ಸ್ಥಿತಿಗೆ ತಲುಪಿದ್ದೆ. ಅದನ್ನು ಗಮನಿಸಿದ ಅವರು ‘ಈಗಲೇ ಹೋದರೆ ಇನ್ನೊಂದು ಗಂಟೆಯಲ್ಲಿ ವಾಪಸ್ ಬಂದೇ ಬಿಡುತ್ತೀಯಾ, ಹೋಗು. ಇಂದೇ ಅಡ್ಮಿಷನ್ ಆಗಬಹುದು’ ಎಂದರು.

ಮಧ್ಯಾಹ್ನ ಎರಡೂವರೆಯವರೆಗೆ ನನ್ನ ಸನ್ಮಿತ್ರನೊಂದಿಗೆ ಗೋಲಿ ಆಡಿ, ಮತ್ತೆ ಸ್ಕೂಲಿನ ಕಡೆ ಹೋದೆ. ನೇರವಾಗಿ ಹೆಡ್ಮಾಸ್ಟರ ಬಳಿ ಹೋಗಿ ಟೀ.ಸಿ.ಯನ್ನು ತೆಗೆದುಕೊಡುತ್ತಾ ‘ಸಾರ್, ಸರಿ ಮಾಡಿಸಿಕೊಂಡು ಬಂದಿದ್ದೇನೆ’ ಎಂದೆ.
ಅವರು ಅಷ್ಟೇ ಸಮಾಧಾನದಿಂದ, ಮೊದಲಿನಿಂದ ಟೀ.ಸಿ.ಯನ್ನು ನೋಡುತ್ತಾ ಹಾಳೆ ತಿರುಗಿಸಿದರು. ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಇದ್ದಕ್ಕಿದ್ದಂತೆ ಅವರ ನೋಟ ಭಯಂಕರವಾಯಿತು. ನನ್ನನ್ನೇ ಇರಿಯುವಂತೆ ನೋಡಿದರು. ‘ಅವರು ದೃಷ್ಟಿಯಿಟ್ಟು ನೋಡಿದರೆ ಸಾಕು ಮೇಷ್ಟ್ರುಗಳೇ ಹೆದರುತ್ತಾರೆ’ ಎಂದು ನನ್ನಣ್ಣ ಆಗಾಗ ಹೇಳುತ್ತಿದ್ದ. ‘ಇದನ್ನು ಯಾರು ತಿದ್ದಿದ್ದು? ಎಂದರು.
ನಾನು ‘ಸಾರ್, ಅದು ಕೇಶವೇಗೌಡರು’ ಎಂದು ಮುಂತಾಗಿ ತೊದಲಿದೆ.
‘ಸುಳ್ಳು ಹೇಳಬೇಡ. ಅವರು ತಿದ್ದಿದ್ದರೆ ಅದರ ಕೆಳಗೆ ಸಹಿ ಹಾಕಿ ಕೊಡುತ್ತಿದ್ದರು, ಗೊತ್ತಾ’ ಎಂದರು.
‘ಸಾರ್ ಅದು... ಅದು... ಅವರು ಚೆನ್ನರಾಯಪಟ್ಟಣಕ್ಕೆ ಹೋಗಲು ಹೊರಟು ನಿಂತಿದ್ದರು. ಅರ್ಜೆಂಟಲ್ಲಿ ಹಾಗೇ ಕೊಟ್ಟಿರಬಹುದು....’
‘ಸ್ಟಾಪ್, ಸ್ಟಾಪ್. ಮತ್ತೊಮ್ಮೆ ಸುಳ್ಳು ಹೇಳುತ್ತಿದ್ದೀಯ. ಅಂಕಿಯಲ್ಲಿ ನಾನೂರ ಮುವತ್ತೇಳು ಎಂದು ತಿದ್ದಿದವರು ಅಕ್ಷರದಲ್ಲಿ ಹಾಗೇ ಬಿಟ್ಟಿದ್ದಾರೆ. ನೀನು ಸುಳ್ಳು ಹೇಳುವುದು ನನಗೆ ಗೊತ್ತಾಗುವುದಿಲ್ಲ ಎಂದುಕೊಂಡೆಯಾ! ಭಡವಾ! ನಾಳೆ ಹೋಗಿ, ಅವರಲ್ಲಿ ಇದನ್ನು ಸಂಪೂರ್ಣ ಸರಿ ಮಾಡಿಸಿಕೊಂಡು ಬಾ. ಇಲ್ಲದಿದ್ದಲ್ಲಿ ನಿನಗೆ ಅಡ್ಮಿಷನ್ ಇಲ್ಲ. ಹೋಗು. ಇನ್ನೆಂದೂ ನನ್ನ ಎದುರಿಗೆ ಸುಳ್ಳು ಹೇಳಬೇಡ’ ಅಂದು ಟೀ.ಸಿಯನ್ನು ನನ್ನ ಕಡೆಗೆ ತಳ್ಳಿದರು.
ನಾನು ಅದನ್ನು ಎತ್ತಿಕೊಂಡು ಕತ್ತು ಬಗ್ಗಿಸಿ ಹೊರಗೆ ಬಂದೆ. ಆಗಿನ್ನೂ ನಮಗೆ ಈ ‘ಸ್ಸಾರಿ’ ಪದ ಪರಿಚಯವಾಗಿರಲಿಲ್ಲ. ಮುಂದೊಂದು ದಿನ ಈ ಸ್ಸಾರಿ ಎಂಬ ಪದ ಒಂದು ವಿಶೇಷ ಸಂದರ್ಭದಲ್ಲಿ ಇದೇ ವೆಂಕಟಪ್ಪನವರಿಂದಲೇ ಪರಿಚಯವೂ ಆಯಿತು!
ಮಾರನೆಯ ದಿನ ಮಿಡ್ಲಿಸ್ಕೂಲಿಗೆ ಹೋಗಿ ಕೇಶವೇಗೌಡರನ್ನು ನೋಡಿದೆ. ಅವರು ಟೀ.ಸಿ. ನೋಡಿದವರೆ, ಯಕ್ಷಗಾನದ ದೈತ್ಯಕುಣಿತವನ್ನೇ ಪ್ರಾರಂಭಿಸಿದರು. ನಾನು ಏನೂ ಮಾತನಾಡದೆ ಪಿಳಪಿಳನೆ ಅವರನ್ನೇ ನೋಡುತ್ತಿದ್ದೆ.
‘ಏನಯ್ಯ ಏನೋ ಒಳ್ಳೆ ಮಾರ್ಕ್ಸ್ ತೆಗೆದಿದ್ದೀಯಾ ಅಂದರೆ, ಫೋರ್ಜರಿ ಮಾಡೋಕು ಬರುತ್ತೆ ಅಂತ ತೋರಿಸ್ತಿದ್ದೀಯಾ’ ಅಂದರು.
ಆಗ ನನಗೆ ‘ಫರ್ಜರಿ’ ಪದದ ಅರ್ಥ ಗೊತ್ತಿರಲಿಲ್ಲ! ಮಾರ್ಕ್ಸ್ ತಿದ್ದಿದ್ದ ಕಡೆ ತೋರುತ್ತಾ ‘ಇದನ್ನು ಯಾರು ತಿದ್ದಿದ್ದು, ಕತ್ತೆ ಭಡವಾ’ ಎಂದು ಅಬ್ಬರಿಸಿದರು.
ನಾನು ‘ನನ್ನ ಪ್ರೆಂಡು ಸಾರ್’ ಎಂದೆ!
‘ಯಾವನಲೆ ಅವನು ನಿನ್ನ ಪ್ರೆಂಡು. ನೆನ್ನೆಯಿನ್ನು ಸ್ಕೂಲಿಗೆ ಹೋಗಿದ್ದೀಯಾ ಅಷ್ಟು ಬೇಗ ಅದ್ಯಾವನಪ್ಪ ನಿನಗೆ ಫ್ರೆಂಡು ಆದವನು....... ನಮ್ಮ ಸ್ಕೂಲಿನಿಂದ ಹೋದವನೇ ಯಾವನೊ ಇರಬೇಕು. ಅವನ್ಯಾರು ಹೇಳು’ ಅಂದರು.
ನಾನು ಏನೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಕಂಡು, ‘ಸಾರ್. ಇದೊಂದು ಸಾರಿ ತಪ್ಪಾಗೋತು. ಇನ್ಯಾವತ್ತು ಹಿಂಗೆ ಮಾಡೋದಿಲ್ಲ ಸಾರ್. ಬೇರೆ ಟೀ.ಸಿ. ಕೊಡಿ ಸಾರ್’ ಎಂದು ಅಂಗಲಾಚಿದೆ.
ಆಗ ಕೇಶವೇಗೌಡರು ನಗುತ್ತಾ ‘ಹಂಗೆ ಬಾ ದಾರಿಗೆ, ಭಡವಾ’ ಎಂದು ಇನ್ನಷ್ಟು ಹೊತ್ತು ಕಾಯಿಸಿ, ಮತ್ತಷ್ಟು ಬಯ್ದು, ಹೊಸ ಟೀ.ಸಿ. ಬರೆದುಕೊಟ್ಟರು.
4 comments:
ಟಿ.ಸಿ.ಸಮಸ್ಯೆ ಗ್ರಾಮೀಣ ಪ್ರದೇಶದಲ್ಲಿ ಒಂದು ಸಮಸ್ಯೆಯೇ ಆಗಿದೆ. ಸರಣಿ ಚೆನ್ನಾಗಿ ಬರುತ್ತಿದೆ.
ಕೇಶವಗೌಡರೇನೋ ತಪ್ಪು ಅಂಕ ಕೂಡಿ ಬರೆದಿದ್ರು. ಆದ್ರೆ ಅದರಿಂದ ಇಷ್ಟೆಲ್ಲಾ ಅನುಭವಿಸಿದ್ದು ಯಾರು?
ಬಿಡಿ ಅದನ್ನೆಲ್ಲಾ, ಎಂದೋ ನಡೆದದ್ದನ್ನು ರಬ್ಬರಿನಂತೆ ಎಳೆದು ಉಪಯೋಗವಿಲ್ಲ.
ಬರಹ ಚೆನ್ನಾಗಿದೆ.
ಕಟ್ಟೆ ಶಂಕ್ರ
ಅಂದಿನ ಕಾಲದಲ್ಲಿ ಹೆತ್ತವರು ಕಲಸದ ಕಾರಣದಿಂದಲೋ ಇಲ್ಲಾ ಇನ್ನಾವುದೋ ಕಾರಣದಿಂದಲೋ ಮಕ್ಕಳಿಗೆ ತುಂಬಾ ಸ್ವಾತಂತ್ರವನ್ನು ಕೊಟ್ಟಿರುತ್ತಿದ್ದರು. ಹಾಗಾಗಿ ಹಲವಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಿವಲ್ಲಿ ಅವರೇ ಪ್ರಮುಖರಾಗಿರುತ್ತಿದ್ದರು. ಇದರಿಂದಾಗಿ ಅತಿ ಸಣ್ಣ ವಯಸ್ಸಿನಲ್ಲಿಯೇ ಕೆಲವೊಂದು ಕಾರ್ಯಗಳ ವೈಖರಿ, ಹಾಗೂ ಪರಿಚಾಯವಾಗುತ್ತಿತ್ತು. ಈಗಲಾದರೋ ಹೆತ್ತವರು ತಮ್ಮ ಮಕ್ಕಳನ್ನು ಹತ್ತನೆಯ ತರಗತಿಯವರೆಗೂ ಮಗುವೆಂದೇ ಪರಿಗಣಿಸಿ ಸ್ಪೂನ್ಫೀಡ್ ಮಾಡುವವರೂ ಇದ್ದಾರೆ. ಹಾಗಾಗಿಯೇ ಅವರಿಗೆ ಪಿ.ಯು.ಸಿಗೆ ಬಂದರೂ ಬ್ಯಾಂಕ್ ವ್ಯವಹಾರವಾಗಲೀ ಇಲ್ಲಾ ಇನ್ನಾವುದೇ ಸಾಮಾನ್ಯ ವ್ಯವಹಾರವಾಗಲೀ ತಿಳಿಯದಂತಾಗಿದೆ.
ಅಂದಿನ ಹೆತ್ತವರ ಧೋರಣೆಯಿಂದ ಉಪಯೋಗ ಹಾಗೂ ಅನುಪಯೋಗಗಳೂ ಇದ್ದಂತೇ ಇಂದಿನ ಹೆತ್ತವರ ಯೋಚನೆಯಲ್ಲೂ ಒಳಿತು ಕೆಡುಕುಗಳಿವೆ. ಇದರ ಕುರಿತೂ ಲೇಖನಗಳ ಸರಣಿ ನಿಮ್ಮಿಂದ ಹೊರಬರಲೆಂದು ಆಶಿಸುವೆ.
ಸರ್, ನಿಮ್ಮ "ಹೈಸ್ಕೂಲು ದಿನಗಳು" ಪುಸ್ತಕ ರೂಪದಲ್ಲಿ ಬಂದಿದೆಯಾ? ತಿಳಿಸಿ. ತರಿಸಿಕೊಂಡು ಓದಬೇಕೆನಿಸುತ್ತಿದೆ. ಹಾಗೆಯೇ ನೀವು ತೇಜಸ್ವಿಯರ ಬಗ್ಗೆ ಸಂಪಾದಿಸಿರುವ ಪುಸ್ತಕದ ಬಗ್ಗೆಯು ಮಾಹಿತಿ ಕೊಡಿ. ನನ್ನ email : malli7997@gmail.com
ನೀವು ನನ್ನ ಬ್ಲಾಗಿಗೆ ಬಂದದ್ದು ಸಂತೋಷವಾಯ್ತು.
Post a Comment