Tuesday, February 17, 2009

ಮೂಢನಂಬಿಕೆ ಮತ್ತು ತತ್ತಕ್ಷಣದ ಪ್ರತಿಕ್ರಿಯೆ


ನಾನು ಮೂಢನಂಬಿಕೆಗೆ ತುತ್ತಾಗಬಾರದೆಂದು ನಿರ್ಧರಿಸಿ ಸುಮಾರು ಹದಿನಾರು ವರ್ಷಗಳೇ ಕಳೆದುಹೋಗಿವೆ. ಅವುಗಳನ್ನು ಅಪ್ರಜ್ಞಾಪೂರ್ವಕವಾಗಿಯೋ, ಪ್ರಜ್ಞಾಪೂರ್ವಕವಾಗಿಯೋ ಮೀರಲು ಪ್ರಯತ್ನಿಸುತ್ತಿರುತ್ತೇನೆ. ಆದರೂ ಒಮ್ಮಮ್ಮೆ ನನಗರಿವಿಲ್ಲದೆ ಮನಸ್ಸಿನಲ್ಲಿ ಮಿಂಚಿಹೋಗುವ ಮೂಢನಂಬಿಕೆಗಳ ಶಕ್ತಿಯ ಬಗ್ಗೆ, ಅವುಗಳು ನಮ್ಮ ರಕ್ತದಲ್ಲಿಯೇ ಬಂದಿವೆಯೋ ಎನ್ನುವಷ್ಟರ ಮಟ್ಟಿಗೆ ನಮ್ಮಿಂದ ತೊಲಗಲು ನಿರಾಕರಿಸುತ್ತಿರುವ ಅವುಗಳ ದೃಡ ನಿಲುವಿನ ಬಗ್ಗೆ ನನಗೆ ಆಶ್ಚರ್‍ಯ ಮತ್ತು ಭಯ ಎರಡೂ ಇವೆ. ನೆನ್ನೆ ಮನೆಯಿಂದ ಹೊರಟಾಗ, ದಾರಿಯಲ್ಲಿ ಬೈಕಿಗಡ್ಡವಾಗಿ ಬೆಕ್ಕೊಂದು ಬಲದಿಂದ ಎಡಕ್ಕೆ ಹೋಯಿತು. ಇದಕ್ಕೂ ಮೊದಲು ಬೇಕಾದಷ್ಟು ಬಾರಿ ಬೆಕ್ಕು ಅಡ್ಡ ಹೋಗಿದ್ದರೂ, ಮನಸ್ಸಿಗೆ ಯೋಚನೆ ಮಾಡಲು ಬೇಕಾದಷ್ಟು ವಿಷಯಗಳಿದ್ದರಿಂದಲೋ ಏನೋ ಆಕ್ಷಣಕ್ಕೇ ಅದನ್ನು ಮರೆತುಬಿಡುತ್ತಿದ್ದೆ. ಆದರೆ ನೆನ್ನೆ ಆಕ್ಷಣ ನನಗೆ ಏನನ್ನಿಸದಿದ್ದರೂ, ನನ್ನ ಮನಸ್ಸು ನನ್ನ ಬಾಲ್ಯಕ್ಕೆ ಜಿಗಿಯಿತು. ನನ್ನ ಬಾಲ್ಯದಲ್ಲಿ ನಮ್ಮ ಪರಿಸರದಲ್ಲಿ ದಾರಿಗಡ್ಡವಾಗಿ ಬೆಕ್ಕು ಬರುವುದು ಅಪಶಕುನ. ಅದರಲ್ಲು ಬಲದಿಂದ ಎಡಕ್ಕೆ ಹೋದರಂತೂ ಮಹಾ ದೊಡ್ಡ ಅಪರಾಧ. ಹೊರಟಿದ್ದವರು, ಮರಳಿಬಂದು ಸ್ವಲ್ಪ ಹೊತ್ತು ಬಿಟ್ಟೋ, ಅಥವಾ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತೋ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಿದ್ದರು. ಅದೂ ಈಗಲೂ ಹಾಗೇ ಇರಬಹುದು. ಹೋಗುವ ಬೆಕ್ಕೋ ಗಂಡೋ ಹೆಣ್ಣೋ, ಯಾವ ಬಣ್ಣದ್ದು ಎಂಬ ಆಧಾರದ ಮೇಲೆ ಶಕುನ-ಅಪಶಕುನಗಳನ್ನು ನಿರ್ಧರಿಸುವ ಪ್ರವೃತ್ತಿಯನ್ನೂ ನಾನು ನೋಡಿದ್ದೇನೆ. ಹಾಗೆ ನೋಡಿದರೆ ನನಗೆ ಬೆಕ್ಕಿನ ಬಗ್ಗೆ ಯಾವುದೇ ದ್ವೇಷವಿಲ್ಲ. ನಾನು ಬೆಕ್ಕುಗಳೊಂದಿಗೇ ಬೆಳೆದವನು. ನಮ್ಮ ತೋಟದ ಮನೆಯಲ್ಲ್ಲಿ ಬೆಕ್ಕು ಇಲ್ಲದ ದಿನಗಳೇ ಇಲ್ಲವೆನ್ನಬಹುದು. ನಾವು ಚಿಕ್ಕವರಾಗಿದ್ದಾಗ ಹೊಂಬಣ್ಣದ ಮೈಮೇಲೆ ಬಿಳಿಯ ಪಟ್ಟೆಗಳಿದ್ದ ಬೆಕ್ಕು ಸಾಕಿದ್ದವು. ಅದು ಹದಿನೆಂಟು ವರ್ಷ ಬದುಕಿತ್ತು. ಈಗ ನಮ್ಮಲ್ಲಿರುವ ಬೆಕ್ಕೂ ಅದೇ ಬಣ್ಣದ್ದು. ನಾನು ಊರಿಗೆ ಹೋದಾಗ ನಾನು ಬೇಕಾಗೋ ಬೇಡವಾಗೋ ತೊಡೆ ತಟ್ಟಿಕೊಂಡರೆ ಸಾಕು, ಎಲ್ಲಿಂದಲೋ ಥಟ್ಟನೆ ನೆಗೆದು ಬಂದು ನನ್ನೆ ತೊಡೆಯ ಮೇಲೇ ಆಸೀನವಾಗಿಬಿಡುವ ನಮ್ಮ ಬೆಕ್ಕಿನ (ಸಿದ್ದಿಯ) ಬಗ್ಗೆ ಮತ್ತುಅವುಗಳ ವಂಶದ ಬಗ್ಗೆ ನನಗೆ ಪ್ರೀತಿಯಿದೆ.
ನೆನ್ನೆ ಈ ರೀತಿ ನಾನು ಯೋಚಿಸುತ್ತಾ ಬರುತ್ತಿರಬೇಕಾದರೆ ಒಂದು ತಿರುವಿನಲ್ಲಿ ಸಿಟಿಬಸ್ ಬಂದಿದ್ದರಿಂದ ನಾನು ಬೈಕ್ ನಿಧಾನಿಸಿದೆ. ಅಷ್ಟೊಂದು ನಿಧಾನಿಸಬೇಕಾದ ಸನ್ನಿವೇಶವೇನೂ ಇರಲಿಲ್ಲ. ನಾನು ಅಷ್ಟೊಂದು ರಾಷ್ ರೈಡಿಂಗ ಮಾಡುವುದಿಲ್ಲವಾದರೂ ತುಂಬಾ ನಿಧಾನಸ್ತನೇನಲ್ಲ. ಆದರೆ ನೆನ್ನೆ ನಾನು ಸಿಟಿ ಬಸ್ಸಿಗೆ ಜಾಗ ಕೊಟ್ಟುದ್ದು ಏಕೆ? ಆಗ ನನ್ನ ಮನಸ್ಸಿನಲ್ಲಿದ್ದ ಬೆಕ್ಕಿನ ಅಪಶಕುನವೇ ಅದಕ್ಕೆ ಕಾರಣವೇ ಎಂಬ ಯೋಚನೆ ಬಂತು. ಅಲ್ಲಿಂದ ಮುಂದಕ್ಕೆ ನಾನು ತುಂಬಾ ಜಾಗರೂಕನಾಗಿ ಬೈಕ್ ಓಡಿಸುತ್ತಿದ್ದೇನೆಯೇ ಎಂಬ ಅನುಮಾನ ಕಾಡಿಸಲು ಶುರುವಾಯಿತು. ಇಲ್ಲ, ಇಲ್ಲ ಎಂದು ತಲೆಕೊಡವಿಕೊಂಡು ಸ್ವಲ್ಪ ವೇಗ ಹೆಚ್ಚಿಸಿ, ಒಂದೆರಡು ನಿಮಿಷಗಳು ಕಳೆಯುವುದರಲ್ಲಿ ಮತ್ತೆ ಗಾಡಿಯ ವೇಗ ನಿಧಾನವೆನ್ನಿಸಿತು. ಜೊತೆಗೆ ಅತ್ಯಂತ ಎಚ್ಚರಿಕೆಯಿಂದ ಓಡಿಸುತ್ತಿದ್ದೇನೆ ಎನ್ನುವುದು ಆಗಿನ ನನ್ನ ಮನಸ್ಸಿಗೆ ಹೊಳೆದಿತ್ತು.
ಹೀಗೇಕೆ? ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಈ ಮೂಢನಂಬಿಕೆ ಎಂಬವುಗಳು ಜನ್ಮಕ್ಕಂಟಿದ ಶನಿಗಳು ಅಂದುಕೊಳ್ಳಬೇಕಷ್ಟೆ. ಒಂದು ಕಡೆ ತೇಜಸ್ವಿಯವರೂ ಅದನ್ನೇ ಹೇಳಿದ್ದಾರೆ. ಮೂಢನಂಬಿಕೆಗಳನ್ನು ನಂಬದವರೂ, ನಾನೂ ಕೂಡಾ ಬೆಕ್ಕ ಅಡ್ಡ ಬಂದರೆ ಆಕ್ಷಣಕ್ಕೆ ತತ್ ಎಂದುಬಿಡುತ್ತೇನೆ’ ಎಂದಿದ್ದಾರೆ.
ಇಷ್ಟನ್ನು ಯೋಚಿಸಿ ಸುಮ್ಮನಾಗಿದ್ದೆ. ಅದನ್ನು ಬ್ಲಾಗಿಸುವ ಯಾವ ಯೋಚನೆಯೂ ನನಗಿರಲಿಲ್ಲ. ಆದರೆ ಇಂದು ನನ್ನ ಸಹೋದ್ಯೋಗಿ ಮಿತ್ರರೊಬ್ಬರು ಕಾಫಿಗೆ ಕರೆದು ಒಂದು ವಿಷಯ ಹೇಳಿದರು. ನೆನ್ನೆ ನಮ್ಮ ಕಾಲೇಜಿನಲ್ಲಿ ಫೋಟೋ ಸೆಷನ್ ಇತ್ತು. ಆ ಮಿತ್ರರೇ ಅದರ ಇನ್ ಚಾರ್ಜ್ ಕೂಡಾ. ಅವರಿಗೆ ಒಂದು ನಂಬಿಕೆ. ಸೋಮವಾರ ಮತ್ತು ಮಂಗಳವಾರ ಹೊಸಬಟ್ಟೆ ಧರಿಸಿದರೆ, ಯಾವಾಗಲೂ ಏನಾದರು ಕಿರಿ ಕಿರಿ ಅನುಭವಿಸುತ್ತಿರುತ್ತೇನೆ ಎಂದು. ಉದಾಹರಣೆಗೆ, ಬಟ್ಟೆಗಳು ಕರೆಯಾಗುವುದು, ಬೇಗ ಹರಿದುಹೋಗುವದು, ಹಕ್ಕಿ ಹಿಕ್ಕೆ ಹಾಕುವುದು, ಊಟ ಮಾಡುವಾಗ ಸಾರು ಚೆಲ್ಲಿಕೊಳ್ಳುವುದು ಇತ್ಯಾದಿ ಇತ್ಯಾದಿ. ಮೊನ್ನೆ ಭಾನುವಾರ ಹೊಸದಾಗಿ ತೆಗೆದುಕೊಂಡಿದ್ದ ಪ್ಯಾಂಟ್ ಶರ್ಟ್ ಅವರಿಗೆ ತುಂಬಾ ಇಷ್ಟವಾಗಿತ್ತಂತೆ. ಫೋಟೋ ಸೆಷನ್ನಿಗೆ ಅದನ್ನೇ ಹಾಕಿಕೊಳ್ಳುವ ಮನಸ್ಸಾಯಿತು. ಆದರೆ ಸೋಮವಾರ! ಮನಸ್ಸು ಬಹಳ ಯೋಚಿಸಿದ ನಂತರ ಇವೊತ್ತೊಂದಿನ ಹಾಕಿಕೊಂಡು ನೋಡಿಯೇ ಬಿಡುವ ಎಂದುಕೊಂಡರಂತೆ; ಅಷ್ಟರ ಮಟ್ಟಿಗೆ ಆ ಹೊಸಬಟ್ಟೆಗಳು ಅವರನ್ನು ಮೋಡಿಮಾಡಿಬಿಟ್ಟಿದ್ದವು. ಹಾಗೆ ಧರಿಸಿ ಸ್ಕೂಟರ್‌ನಲ್ಲಿ ಹೊರಟರೆ, ಅರ್ಧ ಕಿಲೋಮೀಟರ್ ಬರುವಷ್ಟರಲ್ಲಿ ಮೊಬೈಲ್ ಬಿಟ್ಟುಬಂದಿರುವುದು ಗಮನಕ್ಕೆ ಬಂತಂತೆ. ಹೋ, ಸೋಮವಾರ ಹೊಸಬಟ್ಟೆ ಧರಿಸಿದ್ದರಿಂದಲೇ ಹೀಗಾಗಿದೆ ಅನ್ನಿಸಿತಂತೆ. ಆಮೇಲೆ ಅಯ್ಯೋ ಇದಕ್ಕೂ ಮೊದಲು ಎಷ್ಟೋ ದಿನಗಳ ಕಾಲ ಬಿಟ್ಟುಬಂದಿದ್ದೇನೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದುಕೊಂಡು, ವಾಪಸ್ ಮನಗೆ ಹೋಗಿ ತೆಗೆದುಕೊಂಡು ಬಂದರಂತೆ. ಬರುವ ದಾರಿಯಲ್ಲಿ ಟಾರ್ ರಸ್ತೆ ಮಾಡುವುದಕ್ಕೆ ನೆಲ ಗುಡಿಸುತ್ತಿದ್ದರು. ಒಬ್ಬ ಅದರ ತೆಳುವಾದ ಮಿಶ್ರಣವನ್ನು ಡಬ್ಬಕ್ಕೆ ತುಂಬಿಕೊಂಡು ನೆಲಕ್ಕೆ ಚಿತ್ತಾರ ಮೂಡಿಸುತ್ತಿದ್ದ. ಹಾಗೆ ಡಬ್ಬಕ್ಕೆ ತುಂಬಿಕೊಳ್ಳುವಾಗ, ಡಬ್ಬ ತುಂಬಿದ್ದರಿಂದ, ದೊಡ್ಡ ಡ್ರಮ್ಮಿನಿಂದ ಹೊರಟಿದ್ದ ರಬ್ಬರ್ ಪೈಪನ್ನು ಒತ್ತಿಹಿಡಿಯುವುದಕ್ಕೂ, ನನ್ನ ಮಿತ್ರರು ಅಲ್ಲಿಗೆ ಬರುವುದಕ್ಕೂ ಸರಿಹೋಗಿದೆ. ಇವರ ಪ್ಯಾಂಟ್ ಶರ್ಟ್ ಎರಡಕ್ಕೂ ಚೆನ್ನಾಗಿಯೇ ಅಭಿಷೇಕವಾಗಿದೆ! ತನ್ನ (ಮೂಢ)ನಂಬಿಕೆಯೇ ಸರಿ ಎಂದುಕೊಂಡು ತಮ್ಮನ್ನೇ ತಾವು ಹಳಿದುಕೊಳ್ಳುತ್ತಾ ಮತ್ತೆ ಮನೆಗೆ ಹೋಗಿ ಬೇರೆ ಬಟ್ಟೆ ಹಾಕಿಕೊಂಡು ಬಂದರಂತೆ.
ಇದಕ್ಕೆ ಏನನ್ನೋಣ? ಎಂಬ ಬಹುದೊಡ್ಡ ಪ್ರಶ್ನೆಯನ್ನೇ ಅವರು ನನ್ನ ಮುಂದಿಟ್ಟರು. ಅವರಿಗಂತೂ ಅವರ ನಂಬಿಕೆಯೇ ಸತ್ಯ ಎಂಬುದು ನನಗೆ ಅರಿವಾಗಿತ್ತು. ಆದ್ದರಿಂದ ಹೆಚ್ಚಿನ ವಿವರಣೆಗೆ ಚರ್ಚೆಗೆ ನಾನು ಇಳಿಯಲಿಲ್ಲ. ಆದರೆ ಕೆಲವು ನಂಬಿಕೆಗಳು ನಮ್ಮ ಮನಸ್ಸನ್ನಾಳುತ್ತವೆ, ಅದೂ ನಮ್ಮ ಇಚ್ಛೆಗೆ ವಿರುದ್ಧವಾಗಿ ಎಂದು ಆಶ್ಚರ್ಯವಾಯಿತು. ಜೊತೆಗೆ ಈ ನಂಬಿಕೆಗಳೂ ಕೂಡಾ ವಂಶವಾಹಿನಿಯೇ? ನಮ್ಮ ಪುರಾತನರಿಂದ ನಮಗೆ ಹರಿದುಬರುವ ಕೆಲವು ಲಕ್ಷಣಗಳಂತೆ, ಇವೂ ಕೂಡಾ ದಾಟಿ ಬರುತ್ತವೆಯೇ? ಅವರ ಒಂದು ಪ್ರಶ್ನೆಗೆ ಎದುರಾಗಿ ನನ್ನಲ್ಲಿ ನೂರಾರು ಪ್ರಶ್ನೆಗಳು ಏಳುತ್ತಿವೆ. ಅವುಗಳಲ್ಲಿ ಕೆಲವಾದರೂ ನಿಮಗೆ ಕಾಡಬಹುದು ಎಂದುಕೊಂಡು, ಪೋಸ್ಟ್ ಮಾಡಿ ನಿರಾಳನಾಗುತ್ತಿದ್ದೇನೆ.

3 comments:

ಸಾಗರದಾಚೆಯ ಇಂಚರ said...

Dear Dr.Satyanarayan,
wonderful, tumba ishtavaayitu nimma shaili.

ಸುಪ್ತದೀಪ್ತಿ suptadeepti said...

ನಮ್ಮ ನಂಬಿಕೆಗಳು ನಮ್ಮ ಮನಸ್ಸನ್ನು ಆಳುತ್ತವೆ, ಅದಕ್ಕೆ ಸರಿಯಾದ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಲೂ ಶಕ್ತವಾಗಿವೆ ಎಂದು ನನಗೊಬ್ಬರು ಹೇಳಿದ್ದರು ಒಮ್ಮೆ. ನಿಮ್ಮ ಗೆಳೆಯರ ಒಳಮನಸ್ಸಿನ ತುಮುಲವೇ ಅವರು ಮೊದಲಾಗಿ ಮೊಬೈಲ್ ಬಿಟ್ಟುಹೋಗಿದ್ದರ ಹೊಣೆ. ನಂತರ ಮೊಬೈಲ್ ತಗೊಂಡು ಹೊರಟಾಗ ತಡವಾಗಿ ಹೋಗುವ ಸಾಧ್ಯತೆಯಿತ್ತು, ಅದನ್ನು ಹೊಸ ಬಟ್ಟೆಯ ಮೇಲೆ ದೂರುವ ಅವಕಾಶವಿತ್ತಲ್ಲ! ಅದಲ್ಲದೆ, ರಸ್ತೆಯಲ್ಲಿ ಟಾರ್ ಅಭಿಷೇಕ ಅವರ ನಂಬಿಕೆಗೆ ದೊಡ್ಡ ಪೂರಕವೇ ಆಗಿ ನಿಂತದ್ದು ಕಾಕತಾಳೀಯವೆ? ಮೊಬೈಲ್ ತಗೊಂಡು ತಿರುಗಿ ಹೊರಟಾಗ ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಅವರು ಸೇರುವಂತೆ ನಡೆದುಹೋದ ಡಿವೈನ್ ಡೆಸ್ಟಿನಿಯೆ?
ಇರಲಿ ಬಿಡಿ, ಉತ್ತರಗಳು ನಮ್ಮಲ್ಲಿಲ್ಲ. ಪ್ರಶ್ನೆಗಳು ಮಾತ್ರ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್, ನೀವೇನೋ ಬರೆದು ನಿರಾಳವಾಗಿಬಿಟ್ಟಿದ್ದೀರ. ನನ್ನ ತಲೆಯಲ್ಲಿ ಹುಳು ಹೊಕ್ಕಿದೆ. ಮರೆತು ಮನದ ಮೂಲೆಯಲ್ಲಿದ್ದನ್ನು ಕೆರೆದು ಎಬ್ಬಿಸಿದಂತಾಗಿದೆ!