ಅಜ್ಜಿಗೆ ಒಬ್ಬ ತಮ್ಮ ಇದ್ದ. ಆತನಿಗೆ ಸುಂದರಳಾಗಿದ್ದ ಒಬ್ಬಳೇ ಮಗಳಿದ್ದಳು. ಅವಳನ್ನು ತನ್ನ ಸೊಸೆ ಮಾಡಿಕೊಳ್ಳಬೇಕು ಅಂತ ಆಸೆ. ಆದರೆ ತಮ್ಮ ‘ಸೋಮಾರಿಗಳಾಗಿರುವ ಇವರಿಗೆ ನನ್ನ ಮಗಳನ್ನು ನಾನು ಕೊಡುವುದಿಲ್ಲ. ಯಾರಾದರು ದುಡಿದು ತಿನ್ನುವಂತಹ ಬುದ್ಧವಂತನಿಗೆ ಕೊಡುತ್ತೇನೆ’ ಎಂದು ಹೇಳಿಬಿಟ್ಟ. ಅಜ್ಜಿಗೆ ದುಃಖವಾಯ್ತು. ತನ್ನ ಮೂವರು ಮಕ್ಕಳನ್ನು ಬಳಿಗೆ ಕರೆದು ‘ನೋಡ್ರೋ, ನಾನು ಮುಂದೊಂದು ದಿನ ಸತ್ತೋಯ್ತಿನಿ. ಮುಂದೆ ಜೀವನಕ್ಕೆ ಏನು ಮಾಡ್ತೀರಿ. ನಾನು ಕಷ್ಟಪಟ್ಟು ಒಂದಷ್ಟು ದುಡ್ಡು ಕೂಡಿಟ್ಟಿದ್ದಿನಿ. ಅದನ್ನು ಮೂರು ಭಾಗ ಮಾಡಿ ನಿಮಗೆ ಒಂದೊಂದು ಭಾಗ ಕೊಡ್ತಿನಿ. ಅದನ್ನು ತಗೊಂಡು, ಬೇರೆ ಯಾವ ಊರಿಗಾದ್ರೂ ಹೋಗಿ, ಏನಾದ್ರು ವ್ಯಾಪಾರ ಮಾಡಿ, ಸಂಪಾದನೆ ಮಾಡಿಕೊಂಡು ಬನ್ನಿ’ ಎಂದಳು. ಅಂತೆಯೇ ಮೂವರಿಗೂ ದುಡ್ಡು ಭಾಗ ಮಾಡಿಕೊಟ್ಟಳು.
ಆಗ ಮೂವರೂ ಊಟ ಮಾಡಿಕೊಂಡು, ಅಜ್ಜಿ ಕೊಟ್ಟಿದ್ದ ದುಡ್ಡು ತಗೊಂಡು ಊರು ಬಿಟ್ಟರು. ಆದರೆ ಮುಂದೆ ಎಲ್ಲಿ ಹೋಗಬೇಕು? ಏನು ಮಾಡಬೇಕು ಎಂದು ಯಾರಿಗೂ ಗೊತ್ತಿಲ್ಲ. ಸುಮ್ಮನೆ ಸುಸ್ತಾಗುವವರೆಗೂ ನಡೆದು ಒಂದು ಊರು ತಲುಪಿದರು. ಅಲ್ಲಿ ಊರಮುಂದೆ ಒಂದು ಅಂಗಡಿ ಇತ್ತು.
ಅದರ ಮುಂದೆ ಸುಮ್ಮನೇ ಹೋಗಿ ಕುಂತುಕೊಂಡರು. ಅದರ ಯಜಮಾನ ಕಾಲಿಲ್ಲದ ಕುಂಟ. ಈ ಮೂರೂ ಜನರನ್ನ ನೋಡಿ ‘ಏನ್ರಪ್ಪ, ಏನು ಬೇಕು?’ ಎಂದ. ಇವ್ರಿಗೂ ಏನೂ ತೋಚಲಿಲ್ಲ. ಒಬ್ಬ, ‘ಅಣ್ಣ, ನನ್ನತ್ರ ಸ್ವಲ್ಪ ದುಡ್ಡಿದೆ. ಅದನ್ನು ತೊಗೊಂಡು ವ್ಯಾಪಾರ ಮಾಡೋಕೆ ಏನಾರ ಸಾಮಾನನ್ನು, ಈಗ ತಿನ್ನೋದಿಕ್ಕೆ ಕಡ್ಲೆಪುರಿನು ಕೊಡು’ ಅಂದ. ಆಗ ಕುಂಟ ಅವನಿಗೆ ಒಂದು ‘ಭೂತಗನ್ನಡಿ’ಯನ್ನೂ (ದೂರದರ್ಶಕಯಂತ್ರ - ಬೈನಾಕ್ಯುಲರ್!), ತಿನ್ನಲೂ ಕಡ್ಲೆ ಪುರಿಯನ್ನು ಕೊಟ್ಟು ದುಡ್ಡು ತಗೊಂಡ. ಇನ್ನೊಬ್ಬನೂ ಹಾಗೇ ಕೇಳಿದಾಗ, ಅವನಿಗೆ, ಸತ್ತವರನ್ನು ಒಮ್ಮೆ ಮಾತ್ರ ಬದುಕಿಸುವ ‘ಜೀವಾಳದ ಕಡ್ಡಿ’ಯನ್ನು, ತಿನ್ನಲು ಕಡ್ಲೆಪುರಿಯನ್ನು ಕೊಟ್ಟ. ಮೂರನೆಯವನೂ ಕೇಳಿದಾಗ, ಅವನಿಗೆ ಆಕಾಶದಲ್ಲಿ ಹಾರಿ ಹೋಗುವ ಒಂದು ಕುದುರೆಯನ್ನು, ಕಡ್ಲೆಪುರಿಯನ್ನು ಕೊಟ್ಟ.
ಮೂವರೂ ಅವನ್ನೆಲ್ಲಾ ತಗೊಂಡು ಊರಾಚೆ ಹೊಳೆದಂಡೆಲಿರೂ ಒಂದು ಮರದ ಕೆಳಗೆ ಕುಂತ್ಕೊಂಡು, ತಿಂದ್ಕೊಂಡು, ನೀರ್ಕುಡ್ಕೊಂಡು ಹಾಗೇ ಮಲಿಕ್ಕೊಂಡ್ರು. ಬೆಳ್ಳಿಗ್ಗೆ ಎದ್ದಾಗ, ಭೂತಗನ್ನಡಿ ತಗೊಂಡಿದ್ದವನು, ಸುಮ್ಮನೇ ಭೂತಗನ್ನಡಿಲಿ ಎಲ್ಲಾ ಕಡೆಗೂ ನೋಡ್ತಾಯಿದ್ದ.
ಅದ್ರಲ್ಲಿ ಅವರ ಊರಲ್ಲಿ ಅವರ ಸೋದರಮಾವನ ಮಗಳು ಸತ್ತೋಗಿರೋದು ಕಾಣ್ತಾಯಿತ್ತು. ಹೆಣ ಸುಡೋದಿಕ್ಕೆ ವ್ಯವಸ್ಥೆ ಮಾಡ್ತಾಯಿದ್ರು. ಅವನು ಪಕ್ಕದವನನ್ನು ಕರೆದು ಅದನ್ನು ತೋರಿಸಿದ. ಆಗ ಅವನು, ‘ಅಯ್ಯೋ ನನ್ನತ್ರ ಸತ್ತವರನ್ನು ಬದುಕಿಸೋ ಜೀವಾಳದ ಕಡ್ಡಿ ಐತೆ. ಹೆಣ ಸುಡೋದ್ರೊಳಗೆ ಅಲ್ಲಿಗೆ ಬೇಗ ಹೋಗಬೇಕು. ಹೋದ್ರೆ ಅವಳನ್ನು ಜೀವಂತ ಮಾಡ್ತಿನಿ’ ಅಂದ. ಆಗ ಮೂರನೆಯವನು ‘ಬನ್ನಿ ಬನ್ನಿ, ನನ್ನ ಕುದ್ರೆ ಮೇಲೆ ಕುಂತ್ಕೊಂಡ್ರೆ, ಬೇಗ ಹೋಗಬೌದು’ ಎಂದ. ಅದರಂತೆ ಮೂರೂಜನ ಕುದ್ರೆ ಹತ್ತಿ ಊರಿಗೆ ಬಂದ್ರು.
ಅಲ್ಲಿ ಬಂದವರೆ, ಹೆಣವಾಗಿ ಮಲಗಿದ್ದ ಸೋದರಮಾವನ ಮಗಳ ಹತ್ರ ಹೋಗಿ, ಜೀವಾಳದ ಕಡ್ಡಿನ ಅವಳಿಗೆ ಮುಟ್ಟಿಸಿದ್ರು. ತಕ್ಷಣ ಅವಳು ಎದ್ದು ಕುಂತ್ಕೊಂಡ್ಳು.
ಸೋದರ ಮಾವನಿಗೆ ಬಾಳ ಖುಷಿಯಾಯಿತು. ತನ್ನ ಅಳಿಯಂದಿರೂ ಬುದ್ಧಿವಂತರು ಎಂದು ಒಪ್ಪಿಕೊಂಡ. ಆಗ ಮೂರೂ ಜನರಿಗೆ ಮಾವನ ಮಗಳನ್ನು ಮದುವೆಯಾಗುವ ಆಸೆಯಾಯಿತು. ಮೂರು ಜನರಲ್ಲಿ ಜಗಳ ಶುರುವಾಯಿತು. ‘ನಾನು ಭೂತಗನ್ನಡಿಯಲ್ಲಿ ನೋಡದ್ರಿಂದಲೇ ಗೊತ್ತಾಗಿದ್ದು. ನಾನು ನೋಡದೇ ಹೋಗಿದ್ರೆ, ಇವನು ಕುದ್ರೆ ಮೇಲೆ ಕರ್ಕೊಂಡು ಬರೋಕು ಆಗ್ತಾಯಿರ್ಲಿಲ್ಲ; ಇವನು ಜೀವಾಳದ ಕಡ್ಡಿಲಿ ಬದುಕ್ಸೋಕು ಆಗ್ತಾಯಿರ್ಲಿಲ್ಲ. ಅದರಿಂದ ನನಗೆ ಅವಳನ್ನು ಕೊಟ್ಟು ಮದುವೆ ಮಾಡಬೇಕು’ ಎಂದು ಭೂತಗನ್ನಡಿಯಿದ್ದವನು ಹಠ ಹಿಡಿದ. ಆಗ ಜೀವಾಳದ ಕಡ್ಡಿಯಿದ್ದವನು, ‘ನಾನು ನನ್ನ ಜೀವಾಳದ ಕಡ್ಡಿಯಿಂದ ಅವಳನ್ನ ಬದುಕಿಸಿರೋದು. ಒಬ್ಬ ಭೂತಗನ್ನಡಿಲಿ ನೋಡಿದ್ರೂ, ಬೇಗ ನನ್ನನ್ನ ಇಲ್ಲಿಗೆ ಇನ್ನೊಬ್ಬ ಕರ್ಕೊಂಡು ಬಂದಿದ್ರೂ ಸತ್ತವಳನ್ನು ಬದುಕಿಸಿದ್ದು ನಾನೆ. ಆದ್ರಿಂದ ನನಗೆ ಕೊಟ್ಟು ಮದುವೆ ಮಾಡ್ಬೇಕು’ ಅಂದ. ಮೂರನೆಯವನು, ‘ಒಬ್ಬ ಭೂತಗನ್ನಡಿಲಿ ನೋಡಿದ್ರೂ, ಇನ್ನೊಬ್ಬನತ್ರ ಜೀವಾಳದ ಕಡ್ಡಿ ಇದ್ರೂ ನಾನು ಬೇಗ ಇಲ್ಲಿಗೆ ಕರ್ಕೊಂಡು ಬರ್ದೆ ಇದ್ರೆ, ಹೆಣ ಸುಟ್ಟೋಗ್ತಾಯಿತ್ತು. ನಾನು ವೇಗವಾಗಿ ನಿಮ್ಮನ್ನ ಕರ್ಕೊಂಡು ಬಂದಿದ್ದಕ್ಕೆ ಅಲ್ಲವಾ, ಅವಳನ್ನ ಉಳಿಸೋದಿಕ್ಕೆ ಸಾಧ್ಯವಾಗಿದ್ದು. ಅದ್ರಿಂದ ನನಗೇ ಕೊಟ್ಟು ಮದುವೆ ಮಾಡ್ಬೇಕು’ ಎಂದು ಹಠ ಹಿಡಿದ. ಮೂರೂ ಜನಕ್ಕೆ ದೊಡ್ಡ ಜಗಳ ಆಯ್ತು. ಊರಲ್ಲಿ ಪಂಚಾಯ್ತಿ ಶುರುವಾಯಿತು.
ಅವರವರ ವಾದ ಕೇಳಿದಾಗಲೂ ಜನ ಅವನಿಗೇ ಕೊಡಬೇಕು ಅನ್ನೋರು. ಅದರಿಂದ ಊರಿನ ಜನರಲ್ಲೂ ಮೂರು ಭಾಗ ಆಗೋಯ್ತು. ಇವತ್ತಿಗೂ ಆ ಊರಲ್ಲಿ ಜಗಳ ನಿಂತಿಲ್ಲ. ಯಾರಾದ್ರು ಬುದ್ದಿವಂತರು ಇದ್ರೆ ಈ ಪಂಚಾಯ್ತಿನ ಬಗೆಹರಿಸಿ, ಊರವರ ಜಗಳ ನಿಲ್ಲಿಸಬೇಕಾಗಿ ನನ್ನ ಕೋರಿಕೆ.
ಈ ಸಮ್ಯೆಸ್ಯೆಯನ್ನು ಬಿಡಿಸುವುದಕ್ಕೆ ನಿಮಗೆ ಒಂದುವಾರ ಸಮಯವಿರುತ್ತದೆ. ಈಗಿನಿಂದಲೇ ಯೋಚಿಸಿ, ಉತ್ತರಿಸಿ. ಊರಿನವರ ಜಗಳ ನಿಲ್ಲಿಸಿ. ಆ ಹುಡುಗಿಗೊಂದು ಮದುವೆ ಮಾಡಿಸಿ. ನಾನಂತೂ ಮುಂದಿನವಾರ ಮುಹೂರ್ತ ಫಿಕ್ಸ್ ಮಾಡಿಕೊಂಡು ಕಾಯುತ್ತಿದ್ದೇನೆ!
10 comments:
ಒಳ್ಳೇ ಸಮಸ್ಯೆ ತಂದು ಇಟ್ಟಿ ಬಿಟ್ರಲ್ಲಾ... ಸಾರ್..!
ಮೂವರೂ ಸ್ವಂತ ಬುದ್ಧಿಯಿಂದ ಅವಳನ್ನು ಬದುಕಿಸಿಲ್ಲ....
ಮೂವರಲ್ಲಿ ಯಾರಿಗೂ ಅರ್ಹತೆ ಇಲ್ಲ...
ಇನ್ನು ಯಾರಿಗೆ...?
ನನಗೆ ಮದುವೆಯಾಗಿ ಮಗನಿದ್ದಾನೆ...
ನನ್ನ ಮಗನೂ ಸಣ್ಣವನು ಸಾರ್...!
ನನ್ನ ಗೆಳೆಯರನ್ನು ಕಳಿಸಿ ಕೊಡ್ತೇನೆ..
ಆಗಬಹುದಾ...?
ಪ್ರಕಾಶ್ ಸರ್
ಇನ್ನೂ ಸ್ವಲ್ಪ ಯೋಚನೆ ಮಾಡಿ. ಮುಹೂರ್ತ ನೆಕ್ಸ್ಟ್ ವೀಕ್ ಇರೋದು!
ಸತ್ಯನಾರಾಯಣ ಸರ್,
ಚೆನ್ನಾಗಿದೆ ಮದುವೆ ಪುರಾಣ.ಆದರೆ ಉತ್ತರ ಮಾತ್ರ ಹೊಳೆಯುತ್ತಿಲ್ಲ.
ಉದಯ್ ಸರ್
ಯುಗಾದಿ ಹೋಳಿಗೆ ತಿನ್ನುತ್ತಾ ಯೋಚನೆ ಮಾಡಿ. ಹೊಳೆದರೂ ಹೊಳೆಯಬಹುದು. ಮುಂದಿನ ವಾರ ಆ ಹುಡುಗಿಗೆ ಮದುವೆಯಂತೂ ನಡೆಯುತ್ತದೆ!
ಚೆನ್ನಾಗಿದೆ ಸರ್ ಕಥೆ .
ಆ ಹುಡುಗಿಯ ಹೆಣವನ್ನು ಸ್ಮಶಾನದಲ್ಲಿ ನೋಡಿದವನು ಅವಳಿಗೆ ಸಗೋತ್ರ ಅಂದರೆ ಅಣ್ಣನಾಗುತ್ತಾನೆ; ಬದುಕಿಸಿದವನು ತಂದೆಯಾಗುತ್ತಾನೆ. ಕುದುರೆಯ ಮೇಲೆ ಅಲ್ಲಿಗೆ
ಕರೆದುಕೊಂಡು ಹೊದವನೇ ಅವಳ ಪತಿಯಾಗಲು ಅರ್ಹನು.
ಅಲ್ಲದೆ, ಮತ್ತೂ ಒಂದು ಜಾಣತನದ ವ್ಯವಹಾರ ಗಮನಿಸೋಣ.
ಈ ಬದುಕಿಸುವ ಕಡ್ಡಿಯಿಂದ ಹಾಗೂ ದುರ್ಬೀನಿನಿಂದ ಆ ಹುಡುಗಿಗೆ ಸಿಗುವ ಪ್ರಯೋಜನ ಅಷ್ಟರಲ್ಲೇ ಇದೆ. ಆದರೆ ಕುದುರೆಯ ಮೇಲೆ ಕುಳಿತುಕೊಂಡು ಗಂಡನೊಡನೆ ಎಲ್ಲಾದರೂ ತಿರುಗಬಹುದಲ್ಲ, ಹನಿಮೂನಿಗೆ ಹೋಗಬಹುದಲ್ಲ!
Sunaath
ನಿಮ್ಮ ಲಾಜಿಕ್ ಏನೋ ಚೆನ್ನಾಗಿದೆ. ಆದರೆ ನೀವು ಸೂಚಿಸಿರುವ ಜಾಣತನದ ವ್ಯವಹಾರ ಆ ಹುಡುಗಿಗೆ ತೋಚಿರಬೇಕಲ್ಲ!
ಸರ್,
ಮೂರು ಜನರು ಆ ಹುಡುಗಿಗೆ ಎಲ್ಲಾ ರೀತಿಯ ಸಹಾಯ ಮಾಡಿರುವುದರಿಂದ ಅವರೆಲ್ಲಾ ಅಣ್ಣ ಅಥವ ತಂದೆಯ ಸಮಾನರಾಗುತ್ತಾರೆ...ಅದಕ್ಕೆ ಆಕೆ ಬೇರೆ ಯಾರನ್ನಾದರೂ ಮದುವೆಯಾಗುತ್ತಾಳೆ....
ಈ ಲಾಜಿಕ್ಕು ನನ್ನ ಶ್ರೀಮತಿಯದು....
ನನ್ನ ಉತ್ತರವನ್ನು ಸಂಜೆಯೊಳಗೆ ಹೇಳಲೆತ್ನಿಸುತ್ತೇನೆ....
ಶಿವು ನಿಮ್ಮ ಶ್ರೀಮತಿಯವರ ಉತ್ತರ ಶೇ ಐವತ್ತು ಸಿರಿಯಾಗಿದೆ. ಅವರು ಯೋಚಿಸಿರುವ ದಿಕ್ಕು ಸರಿಯಾಗಿದೆ. ಆದರೆ ಮದುವೆ ಮಾಡಿಸುವುದಕ್ಕೆ ಬೇಕಾಗಿರುವುದು ಒಂದೇ ಗಂಡು. ಅದು ಯಾರು?
ನಿಮ್ಮ ುತ್ತರವನ್ನು ತಿಳಿಸಿ. ನಾನು ಸೋಮವಾರ ಅದನ್ನು ನೋಡುತ್ತೇನೆ. ಏಕೆಂದರೆ ಹಬ್ಬದ ಪ್ರಯುಕ್ತ ನಾನು ನನ್ನ ಹಳ್ಳಿಯಲ್ಲಿರುತ್ತೇನೆ. ಅಲ್ಲಿ 'ನೋ' ಬ್ಲಾಗಿಂಗ್.
ಅಂದ ಹಾಗೆ ನೆನ್ನೆ ಕಸ್ತೂರಿಯಲ್ಲಿ ನಿಮ್ಮ ಚಿತ್ರಗಳನ್ನು ನೋಡಿದೆವು ಹಾಗೂ ನಿಮ್ಮ ಮತ್ತು ಶ್ರೀಮತಿಯವರ ಮಾತುಗಳನ್ನು ಕೇಳಿದೆವು.
ಸರ್,
ಸುನಾತ್ ಸರ್ ಉತ್ತರಕ್ಕೆ ನನ್ನ ಸಹಮತವಿದೆ. ಇದೊಳ್ಳೆ ವಿಕ್ರಮಾದಿತ್ಯನ ಕಥೆಯಾಯ್ತಲ್ಲ?
Post a Comment