Thursday, March 12, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 7

ಸಿ.ಒ.ಆರ್.ಪಿ.ರೇಷನ್ ಮೇಷ್ಟ್ರು
ಈ ತಲೆಬರಹವನ್ನು ನೋಡಿ ನಿಮಗೆ ಆಶ್ಚರ್ಯವಾಗಬಹುದು. ಸಿ.ಒ.ಆರ್.ಪಿ. ಎಂಬುದು ನಾಲ್ಕು ಹೆಸರುಗಳ ಮೊದಲ ಅಕ್ಷರಗಳೆಂದು, ರೇಷನ್ ಎಂಬುದು ಸರ್‌ನೇಮ್ ಆಗಿದ್ದಿರಬಹುದು, ಒಟ್ಟಿಗೆ ಆ ಮೇಷ್ಟ್ರಿಗೆ ಐದು ಹೆರಸುಗಳಿದ್ದಿರಬೇಕು ಎಂದುಕೊಳ್ಳಬೇಡಿ. ‘ಕಾರ್ಪೊರೇಷನ್’ ಎಂಬ ಪದವನ್ನು ‘ಸಿ-ಒ-ಆರ್-ಪಿ-ರೇಷನ್ ಎಂದು ಉಚ್ಛರಿಸುತ್ತಿದ್ದ ಮೇಷ್ಟ್ರಿಗೆ ನಾವು ಇಟ್ಟಿದ್ದ ಅಡ್ಡ ಹೆಸರು ಇದು!
ನಾನು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಶಾಲೆಯ ವಾತಾವರಣ ಕೆಟ್ಟುಹೋಗಿತ್ತು ಎಂದು ಮೊದಲೇ ಹೇಳಿದ್ದೇನಲ್ಲ. ಇಂಗ್ಲೀಷ್ ಮತ್ತು ಹಿಂದಿ ವಿಷಯಗಳಿಗೆ ಮೇಷ್ಟ್ರುಗಳೇ ಇರಲಿಲ್ಲ. ಆಗ ಸಮಾಜವನ್ನು ಪಾಠ ಮಾಡುತ್ತಿದ್ದ ಡಿ.ಎಸ್.ನಿಂಗೇಗೌಡ ಎಂಬ ಮಹಾಶಯರೇ ಡೀಟೈಲ್ ಇಂಗ್ಲೀಷ್‌ನ್ನೂ ಪಾಠ ಮಾಡುತ್ತಿದ್ದರು. ಅವರು ಮಾತನಾಡುವಾಗ ತೊದಲುತ್ತಿದ್ದರು. ಇಂಗ್ಲೀಷ್‌ನಲ್ಲಿ ಅವರ ಜ್ಞಾನ ಅಷ್ಟಕ್ಕಷ್ಟೆ. ಸರಿಯಾಗಿ ಓದುವುದಕ್ಕೇ ಬರುತ್ತಿರಲಿಲ್ಲ. ಕೆಲವೊಂದು ದೀರ್ಘವಾದ ಪದಗಳನ್ನು ಮೊದಲು ಸ್ಪೆಲ್ಲಿಂಗ್ ಹೇಳಿ ನಂತರ ಉಚ್ಛಾರ ಮಾಡುತ್ತಿದ್ದರು. ಕೆಲವೊಂದು ಪದಗಳಿಗೆ ಸ್ಪೆಲ್ಲಿಂಗ್ ಮಾತ್ರ ಹೇಳಿ ಮುಂದುವರೆಯುತ್ತಿದ್ದರು. ಹೀಗೆ ಅವರು ಅರ್ಧ ಸ್ಪೆಲ್ಲಿಂಗನ್ನು ಅರ್ಧ ಪದವನ್ನು ಮಾತ್ರ ಹೇಳುತ್ತಿದ್ದ ಹಲವಾರು ಪದಗಳಲ್ಲಿ ಕಾರ್ಪೊರೇಷನ್ ಎಂಬ ಪದವೂ ಒಂದು. ಯಾವುದೋ ಪಾಠದಲ್ಲಿ ಈ ಪದ ಮೇಲಿಂದ ಮೇಲೆ ಬರುತ್ತಿತ್ತು. ಅದನ್ನು ಅವರು ‘ಸಿ-ಒ-ಆರ್-ಪಿ-ರೇಷನ್’ ಎಂದು ಯಾವಾಗಲೂ ಹೇಳುತ್ತಿದ್ದರು!
ಈ ಬಗೆಯ ಹಲವಾರು ಬಗೆಯ ಪದಪ್ರಯೋಗಗಳನ್ನು ಅವರು ಮಾಡುತ್ತಿದ್ದರೂ ಈ ಹೆಸರೇ ಅವರಿಗೆ ಪರ್ಮನೆಂಟಾಗಿ ನೆಲೆ ನಿಲ್ಲಲು ಕಾರಣವೆಂದರೆ, ಮೊದಲ ಬಾರಿಗೆ ಈ ಪದವನ್ನು ಅವರು ಹೇಳಿದಾಗ ಇಡೀ ತರಗತಿಯೇ ಗೊಳ್ ಎಂದು ನಕ್ಕುಬಿಟ್ಟಿತ್ತು. ಅದರಿಂದ ಸಿಟ್ಟಿಗೆದ್ದ ನಿಂಗೇಗೌಡರು, ಹತ್ತಿರದಲ್ಲಿ ಕೈಗೆ ಸಿಕ್ಕ ಹೊನ್ನೇಗೌಡ ಎಂಬ ವಿದ್ಯಾರ್ಥಿಯನ್ನು ಹಿಡಿದು ಚೆನ್ನಾಗಿ ಬಡಿದಿದ್ದರು. ಎಷ್ಟರ ಮಟ್ಟಿಗೆ ಎಂದರೆ ಆತ ಚಡ್ಡಿಯಲ್ಲಿ ಹಿಂದೆ ಮತ್ತು ಮುಂದೆ ಎರಡನ್ನು ಒಟ್ಟಿಗೇ ಮಾಡಿಕೊಂಡಿದ್ದ. ಅಲ್ಲಿಂದ ಮುಂದೆ ಅವರ ಈ ರೀತಿ ಪದ ಪ್ರಯೋಗಗಳಿಗೆ ಮೌನವೇ ತರಗತಿಯ ಉತ್ತರವಾಗಿತ್ತು. ಆದರೆ ಅಂದು ಅವಮಾನಿತನಾಗಿದ್ದ ಹೊನ್ನೇಗೌಡ ಹುಡುಗರ ನಡುವೆ ಮೇಲಿಂದ ಮೇಲೆ ಅವರನ್ನು ಈ ಹೆಸರಿನಿಂದಲೇ ಸಂಬೋಧಿಸುತ್ತಿದ್ದುದರಿಂದ ‘ಸಿ.ಒ.ಆರ್.ಪಿ.ರೇಷನ್ ಮೇಷ್ಟ್ರು’ ಎಂಬ ಅಡ್ಡ ಹೆಸರು ಸ್ಥಿರವಾಗಿ ನೆಲೆನಿಂತುಬಿಟ್ಟಿತ್ತು. ಇಂಗ್ಲೀಷ್ ಪಾಠ ಮಾಡುವಲ್ಲಿ ಇಷ್ಟೆಲ್ಲಾ ಅಸಮರ್ಥರಾಗಿದ್ದ ಇವರು, ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಜೂನಿಯರ್ ಕಾಲೇಜಿನ ಲೆಕ್ಚರರ್ ಇಂಗ್ಲೀಷ್ ಪಾಠ ಮಾಡುತ್ತೇನೆ ಎಂದಾಗ ವಿರೋಧಿಸಿದ್ದೇಕೆಂದು ನನಗಾಗ ಅರ್ಥವಾಗಿರಲಿಲ್ಲ.
ಈ ನಿಂಗೇಗೌಡರ ಬಗ್ಗೆ ನಾನು ಐದನೇ ತರಗತಿಯಲ್ಲಿ ಓದುವಾಗಲಿಂದ ಕೇಳಿದ್ದೆ. ಅವರ ಮಗಳು ನನ್ನ ತರಗತಿಯಲ್ಲೇ ಓದುತ್ತಿದ್ದಳು. ಹೈಸ್ಕೂಲಿನಲ್ಲಿ ಮೇಷ್ಟ್ರಾಗಿದ್ದ ಡಿ.ಎಸ್.ಎನ್. ಅವರ ಮಗಳೆಂದು ಹುಡುಗರು ಹೇಳುತ್ತಿದ್ದರು. ಮಿಡ್ಲಿಸ್ಕೂಲಿನ ಮೇಷ್ಟ್ರುಗಳು ಅವಳನ್ನು ಮಾತನಾಡಿಸುವಾಗ ಅವಳ ತಂದೆಯ ಹೆಸರನ್ನು ಪ್ರಸ್ತಾಪಿಸುತ್ತಿದ್ದರು. ಹುಡುಗರು, ಡಿ.ಎಸ್.ಎನ್. ಹುಡುಗರಿಗೆ ಹೊಡೆಯುವುದರಲ್ಲಿ ಸಿದ್ಧಹಸ್ತರೆಂದೂ, ಅವರನ್ನು ಕಂಡರೆ ಹುಡುಗರು ಹೆದರಿ ಸಾಯುತ್ತಾರೆಂದೂ ಮಾತನಾಡಿಕೊಳ್ಳುತ್ತಿದ್ದರು. ನಾನು ಏಳನೇ ತರಗತಿಯಲ್ಲಿದ್ದಾಗಲೇ ನನ್ನಣ್ಣ ಎಂಟನೇ ತರಗತಿಗೆ ಸೇರಿದ್ದರಿಂದ ಆತನೂ ನಿಂಗೇಗೌಡರ ಹೊಡೆತಗಳ ಬಗ್ಗೆ ಆಗಾಗ ಹೇಳುತ್ತಿದ್ದ. ಮಿಡ್ಲಿಸ್ಕೂಲಿನಲ್ಲಿದ್ದ ರಾಮೇಗೌಡರೇ ಜಾಸ್ತಿ ಹೊಡೆಯುವ ಮೇಷ್ಟ್ರು ಎಂಬ ನಮ್ಮ ಮಾತಿಗೆ ‘ಹೈಸ್ಕೂಲಿನಲ್ಲಿ ಡಿ.ಎಸ್.ಎನ್. ಇದ್ದಾರೆ ಬನ್ನಿ’ ಎನ್ನುವ ಮಾತು ಉತ್ತರವಾಗಿರುತ್ತಿತ್ತು!
ಈ ಡಿ.ಎಸ್.ಎನ್.ಗೂ ನನಗೂ ಒಂದು ರೀತಿಯ ಎಣ್ಣೆ ಸೀಗೇಕಾಯಿ ಇದ್ದ ಹಾಗೆ. ಎಂಟನೇ ತರಗತಿಯ ಪ್ರಾರಂಭದಲ್ಲೇ ನಡೆದ ಒಂದು ಘಟನೆಯಿಂದ ನನ್ನನ್ನು ಒಂದು ರೀತಿಯಲ್ಲಿ ಶತ್ರುವಿನಂತೆ ನೋಡುತ್ತಿದ್ದ ಅವರು, ನಾನು ಆ ಸ್ಕೂಲನ್ನು ಬಿಟ್ಟ ಮೇಲೂ ದ್ವೇಷ ಸಾಧಿಸುತ್ತಿದ್ದರು!
ನಾನು ಎಂಟನೇ ತರಗತಿಯಲ್ಲಿ ಮಾನಿಟರ್ ಆಗಿದ್ದರಿಂದಲೂ, ಆ ತರಗತಿಯ ಪಕ್ಕದಲ್ಲೇ ಆಫೀಸ್ ಮತ್ತು ಸ್ಟಾಫ್ ರೂಮ್‌ಗಳಿದ್ದುದರಿಂದಲೂ ಆಗಾಗ ನನ್ನನ್ನು ಕರೆಯುತ್ತಿದ್ದುದ್ದು ಸಾಮಾನ್ಯವಾಗಿತ್ತು. ಹೆಚ್ಚಾಗಿ ಬೆಲ್ ಮಾಡಲು ಕರೆಯುತ್ತಿದ್ದರು. ಹಾಗೊಂದು ದಿನ ಹೆಡ್ಮಾಸ್ಟರಾದ ವೆಂಕಟಪ್ಪನವರು ಇಲ್ಲದಿದ್ದಾಗ, ಈ ಡಿ.ಎಸ್.ಎನ್. ಮೇಷ್ಟ್ರು ನನ್ನನ್ನು ಕೂಗಿದ್ದರು. ನಾನು ಹೋಗಿ ಅವರು ಹೇಳಿದಂತೆ ಬೆಲ್ ಮಾಡಿ ವಾಪಸ್ ತರಗತಿಗೆ ಬಂದಾಗ, ಹೊನ್ನೇಗೌಡ ಮತ್ತು ಇತರ ವಿದ್ಯಾರ್ಥಿಗಳು ‘ಕರೆದಿದ್ದು ಏನಕ್ಕೆ?’ ಎಂದು ಕೇಳಿದರು. ನಾನು ತಮಾಷೆಯಾಗಿ ‘ಎ....ಎ....ಎರಡು ಬೆ....ಬೆ....ಲ್’ ಹೊಡೆಯಕ್ಕೆ’ ಅಂದಿದ್ದೆ. ಚಿಕ್ಕಮಗಳೂರಿನ ಹೈಸ್ಕೂಲಿನಲ್ಲಿ, ತನ್ನ ತುಂಟಾಟಗಳಿಂದಾಗಿ ಹಾಗೂ ಎಂಟನೇ ತರಗತಿಯಲ್ಲಿ ಫೇಲ್ ಆಗಿದ್ದರಿಂದಾಗಿ, ಈ ಕುಂದೂರುಮಠದ ಹೈಸ್ಕೂಲಿನಲ್ಲಿ ಮತ್ತೆ ಎಂಟನೇ ತರಗತಿಗೆ ಅಡ್ಮಿಷನ್ ಆಗಿದ್ದ ಹೊನ್ನೇಗೌಡ, ಇಲ್ಲಿಯೂ ತುಂಬ ತುಂಟನಾಗೇ ಉಳಿದಿದ್ದ. ನಾನು ಬೆಲ್ ಹೊಡೆಯುವುದಕ್ಕೆ ಎಂದು ಡಿ.ಎಸ್.ಎನ್. ಹೇಳಿದ್ದ ರೀತಿಯನ್ನು ಅಣಕಿಸುವಂತೆ ಹೇಳಿದ್ದರಿಂದ ಸ್ಫೂರ್ತಿಗೊಂಡು ‘ಬೆ....ಬೆ...ಬೆಲ್ ಹೊ....ಹೊ....ಹೊಡೆದು ಬ.....ಬ....ಬಂದೆಯಾ?’ ಎಂದು ಜೋರಾಗಿ ಕಿರುಚಿದ. ಅದು ಪಕ್ಕದ ರೂಮಿನಲ್ಲೇ ಕುಳಿತಿದ್ದ ಡಿ.ಎಸ್.ಎನ್.ಗೆ ಕೇಳಿಸಿತ್ತು!
ಅಂದು ಸಂಜೆ ಅವರು ಹಾಸ್ಟೆಲ್ಲಿಗೆ ಟ್ಯೂಷನ್‌ಗೆಂದು ಬಂದವರೆ, ಬರುವಾಗಲೇ ಹಿಡಿದು ತಂದಿದ್ದ ಒಂದು ಬಿದಿರು ಕೋಲಿನಿಂದ ನನಗೆ ಬಾರಿಸತೊಡಗಿದರು. ನನ್ನ ಬೆನ್ನು ಮುಖ ಕೈ ಮೇಲೆಲ್ಲಾ ಏಟು ಬೀಳುತ್ತಿದ್ದವು. ನಡುನಡುವೆ ಅವರು ಕಿರುಚುತ್ತಿದ್ದ ಮಾತುಗಳಿಂದ ಬೆಳಿಗ್ಗೆ ನಾವು ಅವರನ್ನು ಆಡಿಕೊಂಡಿದ್ದಕ್ಕೆ ಹೊಡೆಯುತ್ತಿದ್ದಾರೆಂದು ನನಗೆ ತಿಳಿಯಿತು. ಈಗ ನನಗನ್ನಿಸುವಂತೆ, ಅಂದು ನಾನು ಮಾಡಿದ್ದು ತಪ್ಪು. ಆದರೆ ಅದಕ್ಕೆ ಒಬ್ಬ ಎಂಟನೇ ತರಗತಿ ಓದುತ್ತಿರುವ, ಸುಮಾರು ಹದಿಮೂರು ಹದಿನಾಲ್ಕು ವರ್ಷದ ವಿದ್ಯಾರ್ಥಿಗೆ, ಆ ರೀತಿ ಒಬ್ಬ ಮೇಷ್ಟ್ರು ಹೊಡೆಯುವುದನ್ನು ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂದು ನಾನು ನಡೆದುಕೊಂಡ ರೀತಿ ಇಂದೂ ನನಗೆ ಆಶ್ಚರ್ಯ ತರುತ್ತಿದೆ. ಏಟು ಬೀಳುತ್ತಿದ್ದ ರಭಸಕ್ಕೆ ಚರ್ಮ ಬೆಂಕಿಹೊತ್ತಿಕೊಂಡಂತೆ ಉರಿಯುತ್ತಿತ್ತು. ಚೆಡ್ಡಿ ಮಾತ್ರ ಹಾಕಿರುತ್ತಿದ್ದ ನನಗೆ, ತೊಡೆಯ ಭಾಗದಲ್ಲಿ ರಕ್ತ ಕಿತ್ತು ಬಂದಿದ್ದು, ಉರಿಯನ್ನು ತಡೆಯಲಾರದೆ ಕೈಯಿಂದ ಮುಟ್ಟಿ ನೋಡಿಕೊಂಡಾಗ ನನ್ನ ಗಮನಕ್ಕೆ ಬಂದಿತ್ತು. ಅದು ಎಲ್ಲಿತ್ತೋ ಏನೋ, ಆ ಸಿಟ್ಟು. ಅಬ್ಬರಿಸುತ್ತಾ, ಸುಮಾರು ನಾಲ್ಕೈದು ಅಡಿ ಮೇಲೆ ನೆಗೆದು, ಅವರು ಇನ್ನೂ ಹೊಡೆಯಲು ಕೈಎತ್ತಿ ಹಿಡಿದಿದ್ದ ಕೋಲನ್ನು ಕಿತ್ತುಕೊಂಡುಬಿಟ್ಟಿದ್ದೆ. ಕಬಡಿ ಆಟದಲ್ಲಿ ನಿಪುಣನಾಗಿದ್ದ ನನಗೆ ನಿಂತನಿಲುವಿನಲ್ಲೇ ನಾಲ್ಕೈದು ಅಡಿ ಮೇಲಕ್ಕೆ ಎಗರುವುದು ಕಷ್ಟವೇನಾಗಿರಲಿಲ್ಲ! ಹಾಗೆ ಕಿತ್ತುಕೊಂಡ ಕೋಲನ್ನು ಅವರ ಮುಖದ ಮೇಲೆ ರಪ್ಪನೆಂದು ಬಿಸಾಕಿ ಹೊರಗೆ ಬಂದುಬಿಟ್ಟೆ. ಹಾಸ್ಟೆಲ್ಲಿನಲ್ಲಿಯೇ ಇದ್ದ ನನ್ನಣ್ಣ ಅಳುತ್ತಿದ್ದುದು ನನ್ನ ಕಣ್ಣಿಗೆ ಬಿದ್ದು, ನನಗೂ ಅಳು ಬಂದಿತ್ತು. ದೂರ, ಮಠದ ಕಲ್ಯಾಣಿಯವರೆಗೂ ಒಬ್ಬನೇ ಹೋಗಿ ತುಂಬಾ ಹೊತ್ತು ಅಳುತ್ತಾ ಕುಳಿತಿದ್ದೆ!
ಮಾರನೆಯ ದಿನ ಬೆಳಿಗ್ಗೆಯೇ, ಇಡೀ ಸ್ಕೂಲಿಗೆ ಈ ಸುದ್ದಿ ಹಬ್ಬಿತ್ತು. ಕೆಲವರಂತೂ ನಾನು ಡಿ.ಎಸ್.ಎನ್. ಅವರಿಗೆ ಕೋಲು ಕಿತ್ತುಕೊಂಡು ಹೊಡೆದನೆಂದೇ ಮಾತನಾಡಿಕೊಳ್ಳುತ್ತಿದ್ದರು. ಅಂದು ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಒಂಬತ್ತು ಮತ್ತು ಹತ್ತನೇ ತರಗತಿಯ ಕೆಲವು ಹುಡುಗರು ನನ್ನನ್ನು ಯಾರೆಂದು ಕೇಳಿಕೊಂಡು ಬಂದು ನೋಡಿ ಹೋಗುತ್ತಿದ್ದರು. ಒಳಗೊಳಗೆ ಅಳುಕು ಇದ್ದರೂ, ದಿನ ಬೆಳಗಾಗುವುದರೊಳಗಾಗಿ ಎಲ್ಲರೂ ಗುರುತಿಸುವಂತಾಗಿದ್ದು ನನಗೆ ಖುಷಿ ಎನ್ನಿಸುತ್ತಿತ್ತು. ಆದರೆ, ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ, ವೆಂಕಟಪ್ಪನವರು ಕರೆದಾಗ ನನ್ನ ಜಂಘಾಬಲವೇ ಹುದುಗಿಹೋಯಿತು. ನನ್ನ ಮೇಲೆ ಕಂಪ್ಲೇಂಟ್ ಮಾಡಿರುವ ನಿಂಗೇಗೌಡರಿಗೆ ಹಿಡಿ ಶಾಪ ಹಾಕುತ್ತಲೇ ಹೆಡ್ಮಾಸ್ಟರ ಬಳಿಗೆ ಹೋಗಿದ್ದೆ.
ಅವರು ‘ಏನು ನಿನ್ನ ಗಲಾಟೆ? ನಿಂಗೇಗೌಡರಿಗೆ ಹೊಡೆಯುತ್ತೀಯಾ?’ ಎಂದರು.
ನಾನು ಅಳುತ್ತಲೇ ‘ನಾನು ಅವರನ್ನು ಹೊಡೆಯಲಿಲ್ಲ ಸಾರ್. ಅವರ ಏಟು ತಡೆಯಲಾರದೇ ಕೈಯಲ್ಲಿದ್ದ ಕೋಲು ಕಿತ್ತೆಸೆದೆ ಅಷ್ಟೆ’ ಎನ್ನುತ್ತಲೇ, ಬಾಸುಂಡೆ ಮತ್ತು ರಕ್ತದಿಂದ ಕರೆಕಟ್ಟಿದ್ದ ನನ್ನ ತೊಡೆಯನ್ನು ತೋರಿಸಿದೆ.
ಅದನ್ನು ನೋಡಲು ಎದ್ದು, ಮುಂದಿದ್ದ ಟೇಬಲ್ಲಿನ ಮೇಲಿಂದಲೇ ಬಾಗಿ ನಿಂತಿದ್ದ ವೆಂಕಟಪ್ಪನವರು ಒಂದು ಕ್ಷಣ ದಂಗಾಗಿ ಹೋದರು. ನಂತರ, ಕುರ್ಚಿಯಲ್ಲಿ ಕುಳಿತು, ತಮ್ಮ ಕನ್ನಡಕ ತೆಗೆದು ಕೈಯಲ್ಲಿ ಹಿಡಿದುಕೊಂಡು, ‘ಅದಕ್ಕೆ ಏನಾದರೂ ಔಷಧಿ ಹಾಕಿಸಿದೆಯಾ?’ ಎಂದರು.
ನಾನು ಕಣ್ಣೀರು ಒರೆಸಿಕೊಳ್ಳುತ್ತಾ ಇಲ್ಲವೆಂದು ತಲೆ ಆಡಿಸಿದೆ. ‘ಈಗಲೇ ಹೋಗಿ ಆಸ್ಪತ್ರೆಯಲ್ಲಿ, ನಾನು ಹೇಳಿದೆನೆಂದು ಹೇಳಿ ಸ್ವಲ್ಪ ಟಿಂಕ್ಚರ್ ಏನಾದರೂ ಹಾಕಿಸಿಕೊಂಡ ಬಾ’ ಎಂದು ಕಳಿಸಿದರು.
ಅವರು ಮತ್ತೆ ನನ್ನನ್ನು ಕರೆಯಲೂ ಇಲ್ಲ. ಈ ವಿಷಯವನ್ನು ಕೇಳಲೂ ಇಲ್ಲ. ಅಂದು ನಾನಂದುಕೊಂಡಂತೆ, ನಿಂಗೇಗೌಡರು ನನ್ನ ಮೇಲೇನೂ ದೂರು ಹೇಳಿರಲಿಲ್ಲ. ಆದರೆ ಅದು ಹೇಗೋ ವೆಂಕಟಪ್ಪನವರ ಕಿವಿಗೆ ಬಿದ್ದು ಅವರೇ ನನ್ನನ್ನು ಕರೆಸಿ ಕೇಳಿದ್ದರು ಅಷ್ಟೆ.
ಅಂದೇ ಕೊನೆ. ಇನ್ನೆಂದೂ ನನ್ನ ವಿದ್ಯಾರ್ಥಿ ಜೀವನದಲ್ಲಿ ನಾನು ಯಾವೊಬ್ಬ ಮೇಷ್ಟ್ರಿಂದಲೂ ಒದೆ ತಿಂದಿದ್ದಿಲ್ಲ. ಹೈಸ್ಕೂಲ್‌ನಲ್ಲಿದ್ದ ಮೂರು ವರ್ಷಗಳಲ್ಲಿ ನಾನೆಷ್ಟೇ ತಪ್ಪು ಮಾಡಿದ್ದರೂ ಯಾವ ಮೇಷ್ಟ್ರೂ ನನಗೆ ಹೊಡೆದಿದ್ದಿಲ್ಲ. ನಿಂಗೇಗೌಡರಂತೂ ಸ್ವಲ್ಪ ದಿನಗಳ ಕಾಲ ನನ್ನನ್ನು ಮಾತಾಡಿಸುತ್ತಿರಲಿಲ್ಲ. ನಾನು ಹತ್ತನೇ ತರಗತಿಯಲ್ಲಿದ್ದಾಗ, ಕಬಡ್ಡಿ ಪಂದ್ಯ ನಡೆಯುತ್ತಿದ್ದಾಗ, ನನ್ನೆಡೆಗೆ ಅಶ್ಲೀಲವಾಗಿ ಕೈ ತೋರಿಸಿದ ಎಂಬ ಕಾರಣಕ್ಕೆ ಒಂಬತ್ತನೇ ತರಗತಿಯ ಹುಡುಗನಿಗೆ, ಮೇಷ್ಟ್ರುಗಳ ಎದುರಿಗೇ ನೆಲಕ್ಕೆ ಬೀಳುವಂತೆ ಹೊಡೆದಿದ್ದೆ. ಆಗಲೂ ಯಾವೊಬ್ಬ ಮೇಷ್ಟ್ರೂ ನನ್ನ ಮೇಲೆ ಕೈ ಎತ್ತದಿದ್ದುದು ಇಂದೂ ನನಗೆ ಆಶ್ಚರ್ಯವಾಗಿ ಉಳಿದಿದೆ. ಕೆಲವರು ಸುನಿಲ್ ಗವಾಸ್ಕರ್ ಅವರ ತಾಳ್ಮೆಯನ್ನು ಉದಾಹರಣೆ ಕೊಟ್ಟ ನೆನಪಿದೆ ಅಷ್ಟೆ. ಆಗೆಲ್ಲೋ ಅವರು ಪಾಕಿಸ್ತಾನದಲ್ಲಿ ಅವಮಾನಕ್ಕೆ ಈಡಾದಾಗ ಏನೂ ಮಾತನಾಡದೆ ಆಟ ಆಡುವುದನ್ನು ಬಿಟ್ಟು ಬಂದಿದ್ದರಂತೆ!
ಆಗ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ, ನಮ್ಮ ಕಬಡ್ಡಿ ಆಟಕ್ಕೆ ಆದರ್ಶವಾಗಿದ್ದ, ರಾಜ್ಯಮಟ್ಟದ ಕಬಡ್ಡಿ ಆಟಗಾರ ನಮ್ಮೆಲ್ಲರ ಹೀರೋ ಡಿ.ಎಸ್.ನಾರಾಯಣಗೌಡ ಎಂಬುವವರು ಅಲ್ಲಿಯೇ ಹತ್ತನೇ ತರಗತಿಯನ್ನು ಮುಗಿಸಿದ್ದವರು. ಅವರೂ ಈ ನಿಂಗೇಗೌಡರ ದುಷ್ಟತನಕ್ಕೆ ಈಡಾಗಿದ್ದವರೇ. ಆಗ ಅವರು ಹೇಳಿದ್ದ ವಿಷಯವೊಂದು ತೀರಾ ಸಣ್ಣತನದ್ದಾಗಬಹುದಾದರೂ ನಾನಿಲ್ಲಿ ಹೇಳಲೇಬೇಕಾಗಿದೆ. ಡಿ.ಎಸ್.ಎನ್. ಅವರಿಗೆ ಯಾವುದೋ ದೆವ್ವ ಮೆಟ್ಟಿಕೊಂಡಿದ್ದು ಆಗಾಗ ಅದು ಕೆರಳುತ್ತಿತ್ತಂತೆ. ಅದೂ ಅಮಾವಾಸ್ಯೆ ಮತ್ತು ಪೂರ್ಣಮಿಗಳಲ್ಲಿ ಅವರು ಹುಚ್ಚು ಹುಚ್ಚಾಗಿ ಹುಡುಗರಿಗೆ ಹೊಡೆದು ಬಡಿದು ಮಾಡುತ್ತಿದ್ದರಂತೆ. ಎಲ್ಲವೂ ಅಂತೆ ಕಂತೆಗಳು ಮಾತ್ರ. ಆದರೆ ಅಂದು ನಾರಾಯಣಗೌಡ ಒದಗಿಸಿದ ಎರಡು ಸಾಕ್ಷಿಯೆಂದರೆ, ಅವರು ನನಗೆ ಹೊಡೆದ ದಿನವೂ ಅಮಾವಾಸ್ಯೆಯಾಗಿದ್ದು ಮತ್ತು ನಿಂಗೇಗೌಡರ ತೋಳಿನ ತುಂಬಾ ಇದ್ದ ತಾಯಿತಗಳು ಹಾಗೂ ಒಂದು ಕಬ್ಬಿಣದ ಬಳೆ! ನಾನಾಗ ಇತರರಂತೆ ಅದನ್ನು ನಿಸ್ಸಂಶಯವಾಗಿ ನಂಬಿದ್ದೆ!
ನಾನು ಎಂಟನೇ ತರಗತಿಗೆ ಅಡ್ಮಿಷನ್ ಆದಂದಿನಿಂದಲೇ ಓ.ಬಿ.ಸಿ. ಹಾಸ್ಟೆಲ್ಲನ್ನೂ ಸೇರಿದ್ದೆ. ಆಗ ಓ.ಬಿ.ಸಿ.ಹಾಸ್ಟೆಲ್ಲುಗಳಲ್ಲಿ ಇರುತ್ತಿದ್ದ ವಿದ್ಯಾರ್ಥಿಗಳಿಗೆ ಸಂಜೆ ಮನೆಪಾಠವನ್ನು ಏರ್ಪಡಿಸುತ್ತಿದ್ದರು. ಹೈಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಮೇಷ್ಟ್ರುಗಳೇ ಸಂಜೆಯೂ ಒಂದರ್ಧ ಗಂಟೆ ಪಾಠ ಮಾಡುವ ಶಾಸ್ತ್ರ ಮಾಡಿ ಮುಗಿಸುತ್ತಿದ್ದರು. ಆಗಿದ್ದ ಅಸಮರ್ಥ ಮತ್ತು ಭ್ರಷ್ಟ ವಾರ್ಡನ್ನನೂ ಅವರುಗಳೊಂದಿಗೆ ಸೇರಿ, ತಿಂಗಳ ಕೊನೆಯಲ್ಲಿ ಗೌರ್‍ನಮೆಂಟಿನಿಂದ ಹಣವನ್ನು ಮಾತ್ರ ತಪ್ಪದೇ ಪಡೆಯುತ್ತಿದ್ದರು. ನಂತರದ ದಿನಗಳಲ್ಲಿ ಟ್ಯೂಷನ್ ಮಾಡುವ ಪದ್ಧತಿ ನಿಂತು ಹೋಯಿತೆಂದು ಕಾಣುತ್ತದೆ. ನಾವು ಹತ್ತನೇ ತರಗತಿಯಲ್ಲಿದ್ದಾಗ ವಾರ್ಡನ್ ಆಗಿ ಬಂದ ಭೀಮಪ್ಪ ಕರಿಯಪ್ಪ ಜಟಗೊಂಡ ಅವರು, ಸ್ವತಃ ಬಿ.ಎಡ್. ಪದವೀಧರರಾಗಿದ್ದರಿಂದಲೂ, ಸ್ವಭಾವತಃ ಒಳ್ಳೆಯವರಾಗಿದ್ದರಿಂದಲೂ ಅವರೇ ಆಗಾಗ ಟ್ಯೂಷನ್ ತೆಗೆದುಕೊಂಡು ಗಣಿತ, ವಿಜ್ಞಾನ, ಇಂಗ್ಲೀಷ್ ಪಾಠಗಳನ್ನು ಓದಿ, ಓದಿಸಿ ಮಾಡುತ್ತಿದ್ದರು.

6 comments:

Shankar Prasad ಶಂಕರ ಪ್ರಸಾದ said...

ಬಾಲ್ಯದ ನೆನಪುಗಳು ಬಹು ಸೊಗಸಾಗಿ ಮೂಡಿ ಬರುತ್ತಾ ಇದೆ.
ನಿಮ್ಮ ಸಿ.ಓ.ಆರ್.ಪಿ. ರೇಶನ್ ಅವರಿಗೆ ತಮ್ಮ ದೆವ್ವದ ಬಗ್ಗೆ ಭಯ ಇತ್ತೋ, ಅಥವಾ ಅವರ ಉಗ್ಗಿನ ಬಗ್ಗೆ ನಾಚಿಕೆ ಇತ್ತೋ ?
ಸುಖಾ ಸುಮ್ನೆ ಒದೆ ತಿನ್ನೋರನ್ನ ವಿದ್ಯಾರ್ಥಿ ಅಂತಾರೆ. ನಾವೂ ನಾಯಿಗಳ ಥರ ಏಟು ತಿಂದಿದೀವಿ. ಆದ್ರೆ, ಇವತ್ತಿನ ದಿನಗಳಲ್ಲಿ ಯಾರೂ ಮಕ್ಕಳಿಗೆ ಹೊಡೆಯೋದೆ ಇಲ್ಲ.
ಹೀಗೆ ಮುಂದುವರೀಲಿ ಸಾರ್ ನಿಮ್ಮ ಅನುಭವಗಳು.

ಕಟ್ಟೆ ಶಂಕ್ರ

shivu.k said...

ಸತ್ಯನಾರಾಯಣ ಸರ್,

ನಿಮ್ಮ ಹೈಸ್ಕೂಲ್ ದಿನಗಳ ಕತೆಯನ್ನು ಓದುತ್ತಿದ್ದರೆ ತುಂಬಾ ಖುಷಿಯಾಗುತ್ತದೆ...ಮತ್ತೆ ನಿಮ್ಮ ನೆನಪಿನ ಶಕ್ತಿಗೆ ಹ್ಯಾಟ್ಸಪ್!...ಪ್ರತಿಯೊಂದನ್ನು ಇಂಚಿಂಚು ಬಿಡದೆ...ವಿವರಿಸುತ್ತಾ...ಕತೆ ಹೇಳುವ ಶೈಲಿ ಇಷ್ಟವಾಗುತ್ತದೆ....ಮುಂದಿನ ಬರಹಕ್ಕೆ ಕುತೂಹಲ ಮೂಡಿದೆ...
ಧನ್ಯವಾದಗಳು.....

ತೇಜಸ್ವಿನಿ ಹೆಗಡೆ said...

ಸತ್ಯನಾರಾಯಣ ಅವರೆ,

ನಿಮ್ಮ ಕಹಿ ಅನುಭವಗಳನ್ನು ಓದುತ್ತಾ ಮನಸ್ಸು ಪಿಚ್ಚೆನಿಸಿತು. ಹಿಂದೆ ವಿದ್ಯಾರ್ಥಿಗಳನ್ನು ತುಂಬಾ ಹೀನಾಯವಾಗಿ ಹೊಡೆಯುತ್ತಿದ್ದರೆಂದು ಕೇಳಿದ್ದೆ. ಇದೇ ಕಾರಣಕ್ಕಾಗಿಯೇ ಸ್ಕೂಲಿಗೆ ಹೋಗದೇ ಅನಕ್ಷರತೆಯೂ ಬೆಳೆದಿರಬೇಕು ಆಗ. ತುಂಬಾ ಹಿಂಸೆಯಾಗುತ್ತಿರಬೇಕು ಮಕ್ಕಳಿಗೆ ಆ ಕಾಲ!

ನಿಮ್ಮ ಮೇಸ್ಟ್ರಿಗೆ ನೀವು ಆ ರೀತಿ ಮಾಡಿದ್ದರಲ್ಲಿ ಏನೂ ತಪ್ಪು ಕಾಣಿಸಲಿಲ್ಲ. ಪ್ರೀತಿಯಿಂದಲೂ ಅವರು ನಿಮ್ಮನ್ನು ತಿದ್ದಬಹುದಿತ್ತು. ತಮ್ಮ ಅಸಾಮರ್ಥ್ಯತೆಯನ್ನು ಮುಚ್ಚಿಕೊಳ್ಳಲು ಈ ರೀತಿಯ ಶೋಷಣೆಯನ್ನು ಮಾಡುತ್ತಿರಬೇಕು ಅವರು.

"ಸಿ.ಒ.ಆರ್.ಪಿ. ರೇಷನ್" ಸದಾ ನೆನಪಿನಲ್ಲಿ ಉಳಿಯುತ್ತದೆ ಇನ್ನು..:)

sunaath said...

ಸತ್ಯನಾರಾಯಣರೆ,
ಶಿಷ್ಯರನ್ನು ದಂಡಿಸುವ ಇಂತಹ ಕ್ರೌರ್ಯವನ್ನು ಓದಿ ದಂಗಾಗಿ ಹೋದೆ.
ನಿಮ್ಮ narration ಚೆನ್ನಾಗಿದೆ. ರೇಖಾಚಿತ್ರವನ್ನೂ ನೀವೇ ಬರೆದಿರುವಿರಾ?

ಬಿಸಿಲ ಹನಿ said...

ಸತ್ಯನಾರಾಯಣವರೆ,
ತಮಾಷೆ, ವಿಷಾದಗಳೊಂದಿಗೆ ಬಿಚ್ಚಿಕೊಳ್ಳುವ ನಿಮ್ಮ ಹೈಸ್ಕೂಲ್ ದಿನಗಳು ಮನಮುಟ್ಟುವಂತಿದೆ.

Unknown said...

ಆತ್ಮೀಯರೆ, ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ನಾನು ಆಭಾರಿಯಾಗಿದ್ದೇನೆ. ಹಾಗೇ ನಿಮ್ಮ ವಿಮರ್ಶೆಗಳಿಗೆ ಸದಾ ಸ್ವಾಗತ.
Sunaath ಅವರೇ, ರೇಖಾಚಿತ್ರಗಳನ್ನು ನಾನು ಬರೆದಿದ್ದಲ್ಲ. ನನಗೆ ಚಿತ್ರಕಲೆಯಲ್ಲಿ ಯಾವುದೇ ಪರಿಶ್ರಮವಿಲ್ಲ, ಒಳ್ಳೆಯ ಚಿತ್ರವನ್ನು ನೋಡಿ ಕುಷಿ ಪಡುವುದರ ಹೊರತು. ಪುಸ್ತಕ ಪ್ರಕಟಣೆಗಾಗಿ ಶ್ರೀ ಪರಮೇಶ್ ಡಿ. ಜೋಳದ್ ಎಂಬ ಕಲಾವಿದರಿಂದ ಮಾಡಿಸಿದ್ದು. ಅವರಿಗೆ ನಾನು ಚಿರಋಣಿ.