ಹತ್ತನೇ ತರಗತಿಯಲ್ಲಿ ಸ್ವಂತಪುರಾಣ ವಾಚನ ಗೋಷ್ಠಿ!
ಈ ಸಿ.ಓ.ಆರ್.ಪಿ.ರೇಷನ್ ಮೇಷ್ಟ್ರು ಪಾಠ ಮಾಡುವ ವೈಖರಿಯನ್ನು ನಾನಿಲ್ಲಿ ಹೇಳಲೇಬೇಕು. ಇಂಗ್ಲೀಷ್ನ್ನು ಪಾಠ ಮಾಡುವಾಗ ಯಾವುದೋ ಕಾಲದ ಒಂದು ಗೈಡನ್ನು ಇಟ್ಟುಕೊಂಡು ಅದರಲ್ಲಿ ಕೊಡುತ್ತಿದ್ದ ಕನ್ನಡ ಭಾವಾನುವಾದವನ್ನು ಓದಿ ಹೇಳುತ್ತಿದ್ದರು. ಅದರಲ್ಲಿಯೇ ನೋಡಿಕೊಂಡು ಪ್ರಶ್ನೆಗಳಿಗೆ ಉತ್ತರ ಬರೆಯಿಸುತ್ತಿದ್ದರು. ‘ಇಂಗ್ಲೀಷ್ ಹೇಗೋ ಹಾಳಾಗಲಿ, ಅದು ಅವರ ಸಬ್ಜೆಕ್ಟ್ ಅಲ್ಲವಲ್ಲ’ ಎಂದುಕೊಂಡರೆ ಸಮಾಜ ಪಾಠ ಮಾಡುವಾಗಲೂ ಅವರದು ಇದೇ ಪದ್ಧತಿಗೆ. ಆದರೆ ಇಲ್ಲಿ ಗೈಡ್ಗೆ ಬದಲಾಗಿ ಯಾವುದೋ ಕಾಲದ, ಹರಿದು ಜೂಲುಜೂಲಾಗಿದ್ದ ಒಂದು ನೋಟ್ ಪುಸ್ತಕದಲ್ಲಿ ಬರೆದುದ್ದನ್ನು ನೋಡಿಕೊಂಡು ಪ್ರಶ್ನೆಗಳಿಗೆ ಉತ್ತರ ಬರೆಸುತ್ತಿದ್ದರು!
ಸಮಾಜ ಪಾಠ ಮಾಡುವಾಗ ಯಾವಾಗಲೂ ಅವರು ಬೋರ್ಡಿನ ಮೇಲೆ ಭಾರತದ ನಕ್ಷೆ ಬರೆಯುತ್ತಿದ್ದರು. ಅವರು ಬರೆಯುತ್ತಿದ್ದುದು ಇಷ್ಟೆ. ದಕ್ಷಿಣ ಭಾರತದ ನಕ್ಷೆಯಂತೆ ಕಾಣುವ ಇಂಗ್ಲೀಷ್ನ ‘ವಿ’ ಅಕ್ಷರವನ್ನು ಹೋಲುವ ಒಂದು ಗೆರೆ. ಅದನ್ನು ಬರೆಯುವುದಕ್ಕೆ ಅವರು ತೆಗೆದುಕೊಳ್ಳುತ್ತಿದ್ದ ಕಾಲ ಒಂದು ಕಣ್ಣೆವೆಯಿಕ್ಕುವಷ್ಟು ಮಾತ್ರ! ಆದರೆ ಸ್ವಾಂತಂತ್ರ್ಯ ದಿನಾಚಾರಣೆಯಂದು ನಾನು ಹಾಸ್ಟೆಲ್ಲಿನ ಮುಂಭಾಗದಲ್ಲಿ ಧ್ವಜಕಟ್ಟೆಯ ಮುಂದೆ ಚೆನ್ನಾಗಿಯೇ ಬರೆದಿದ್ದ ಭಾರತದ ನಕ್ಷೆಯನ್ನು ಕಂಡು ‘ಯಾವನೋ ಅವನು ಇಷ್ಟೊಂದು ಪಸಂದಾಗಿ ಮ್ಯಾಪು ಬರೆದಿರೋನು?’ ಎಂದು ಆಡಿಕೊಂಡಿದ್ದರು! ನಾನು ಎದೆಯುಬ್ಬಿಸಿ ‘ನಾನೆ ಸಾರ್’ ಎಂದು ಹೇಳಿದಾಗ ತೆಪ್ಪಗಾಗಿದ್ದರು ಕೂಡಾ!
ಐವತ್ತು ನಿಮಿಷದ ಪೀರಿಯಡ್ಡಿನಲ್ಲಿ ಅವರು ಪಾಠ ಮಾಡುತ್ತಿದ್ದುದ್ದು ಕೇವಲ ಇಪ್ಪತ್ತು ಇಪ್ಪತ್ತೈದು ನಿಮಿಷ ಅಷ್ಟೆ, ನಂತರ ಯಾವುದಾವುದೋ ವಿಷಯಗಳನ್ನು ತೆಗೆದುಕೊಂಡು ಮಾತನಾಡುತ್ತಿದ್ದರು. ಅವರು ನೋಡಿದ ಸಿನಿಮಾ, ಹೋಗಿದ್ದ ಹೋಟೆಲ್ ಹೀಗೆ ಅವರ ವಿಷಯಗಳಿಗೆ ಮಿತಿಯೇ ಇರುತ್ತಿರಲಿಲ್ಲ. ಅವರ ಈ ದುರಭ್ಯಾಸ ಮೊದಲೆರಡು ವರ್ಷಗಳಲ್ಲಿ ಸ್ವಲ್ಪ ಕಡಿಮೆಯಿತ್ತೆಂದು ಹೇಳಬೇಕು. ಬಹುಶಃ ಅದಕ್ಕೆ ಈಗಿನ ನನ್ನ ಊಹೆ ಸರಿಯೆನ್ನಿಸುತ್ತದೆ. ಆ ಎರಡು ವರ್ಷಗಳ ಕಾಲ ಅವರ ಮಗಳೂ ನಮ್ಮ ತರಗತಿಯಲ್ಲಿಯೇ ಇದ್ದಳು. ಯಾವಾಗ ಆ ವರ್ಷ ಹತ್ತನೇ ತರಗತಿ ಪಾಸಾದವರ ಸಂಖ್ಯೆ ಮೂರರಿಂದ ಎರಡಕ್ಕೆ ಇಳಿಯಿತೋ, ಆಗ ತಮ್ಮ ಮಗಳನ್ನು ಚನ್ನರಾಯಪಟ್ಟಣದ ಹೈಸ್ಕೂಲಿಗೆ ಸೇರಿಸಿಬಿಟ್ಟರು. ನಂತರದ ದಿನಗಳಲ್ಲಿ ಶುರುವಾಯಿತು ನೋಡಿ ಅವರ ಸ್ವಂತಪುರಾಣ ವಾಚನ ಗೋಷ್ಠಿ!
ಆಗ ನಮ್ಮ ತರಗತಿಯಲ್ಲಿದ್ದ ನಲವತ್ತೈದು ಮಂದಿಯಲ್ಲಿ ಕೇವಲ ನಾಲ್ಕೇ ಜನ ಹುಡುಗಿಯರಿದ್ದುದ್ದು. ಮುಂದಿನ ಒಂದೇ ಬೆಂಚಿನಲ್ಲಿ ಆ ನಾಲ್ಕೂ ಹುಡುಗಿಯರು ಕುಳಿತುಕೊಳ್ಳುತ್ತಿದ್ದರು. ಒಂದಷ್ಟು ಹೊತ್ತು ಪಾಠ ಮಾಡಿ, ಗೈಡೋ, ನೋಟ್ಸೋ ನೋಡಿಕೊಂಡು ಒಂದೆರಡು ಪ್ರಶ್ನೆಗಳಿಗೆ ಉತ್ತರ ಬರೆಯಿಸಿದರೆ ನಿಂಗೇಗೌಡರ ಕೆಲಸ ಮುಗಿಯುತ್ತಿತ್ತು. ನಂತರ ತಮ್ಮ ಕುರ್ಚಿಯನ್ನು ಹುಡುಗಿಯರ ಡೆಸ್ಕಿನ ಮುಂದೆ ಎಳೆದುಕೊಂಡು ಕುಳಿತುಕೊಳ್ಳುತ್ತಿದ್ದರು. ತಾವು ಓದುತ್ತಿದ್ದುದ್ದು, ಅವರ ಮೇಷ್ಟ್ರುಗಳಿಗೆ ಅವರು ಹೆದರಿ ಉಚ್ಚೆ ಹುಯ್ದುಕೊಳ್ಳುತ್ತಿದ್ದುದು, ಈಗಿನ ಮಕ್ಕಳಿಗೆ ಭಯವೇ ಇಲ್ಲದಿರುವುದು ಮುಂತಾದ ವಿಷಯಗಳನ್ನು ಹೇಳುತ್ತಿದ್ದರು. ಹುಡುಗಿಯರ ಕೈಹಿಡಿದು ಹಸ್ತರೇಖೇ ನೋಡಿ ಭವಿಷ್ಯವನ್ನೂ ಹೇಳುತ್ತಿದ್ದರು!
ಒಮ್ಮೆ ಅವರು ಶಿವಮೊಗ್ಗಕ್ಕೆ ಹೋಗಿಬಂದ ವಿಚಾರವನ್ನು, ಅಲ್ಲಿನ ಹೋಟೆಲಿನಲ್ಲಿ ಅವರು ತಿಂದ ಮಸಾಲೆದೋಸೆಯ ವಿಚಾರವನ್ನು ಸುಮಾರು ಅರ್ಧಗಂಟೆ ಇಡೀ ತರಗತಿಗೆ ಕೇಳಿಸುವಂತೆ, ಹುಡುಗಿಯರಿಗೆ ಮಾತ್ರ ಹೇಳಿದ್ದರು! ಅಲ್ಲದೆ ಹುಡುಗಿಯರಿಗೆ ‘ನಿಮ್ಮ ಮದುವೆ ಯಾವಾಗ?’ ಎಂದು ಅವರು ನಾಚಿಕೊಳ್ಳುವಂತೆ ಮಾಡುತ್ತಿದ್ದರು. ಅವರು ನಾಚಿಕೊಳ್ಳುವುದನ್ನು ನೋಡಿ, ‘ನಾಚಿಕೊಳ್ಳುವುದನ್ನು ನೋಡು, ಚಿನಾಲಿ. ಈಗ ನಾಚಿಕೊಳ್ಳುತ್ತಾಳೆ. ಗಂಡ ಪಕ್ಕಕ್ಕೆ ಬಂದರೆ ನಮ್ಮನ್ನು ನೋಡಿದರೂ ನೋಡದೆ ಹೋಗುತ್ತಾಳೆ’ ಎಂದು ಅಭಿನಯ ಪೂರ್ವಕವಾಗಿ ಹೇಳುತ್ತಿದ್ದರು. ಅಂತಹ ಸಂದರ್ಭದಲ್ಲಿ ಅವರು ಹೇಳುತ್ತಿದ್ದ ಒಂದು ಹಾಡಿನ ಕೆಲವು ಸಾಲುಗಳು ನೆನಪಿಗೆ ಬರುತ್ತಿವೆ.
ಕೊತಕೊತ ಅಂತ ಕುದಿತೈತೆ
ಗರತಿ ಬಾಯಲಿ ಜೊಲ್ಲು ಸುರಿತೈತೆ
ಆರಕಡಿದೊಂದು ಕುಚ್ಚಿನಮೀನು
ಮೂರಕಡಿದೊಂದು ಬಾಳೆ ಮೀನು
ಕೊತಕೊತ ಅಂತ ಕುದಿತೈತೆ
ಗರತಿ ಬಾಯಲಿ ಜೊಲ್ಲು ಸುರಿತೈತೆ
ಎಂದು ಅಭಿನಯಪೂರ್ವಕವಾಗಿ ಹೇಳುತ್ತಾ, ಹೆಣ್ಣು ಮಕ್ಕಳು ಹೇಗೆ ಗಂಡನಿಗೆ ಮೋಸ ಮಾಡುತ್ತಾರೆ ಎಂದೂ ಹೇಳುತ್ತಿದ್ದರು!
ತೋಟದ ಕೆಲಸಕ್ಕೂ ಬೇಕು ವಿದ್ಯಾರ್ಥಿಗಳು!
ಅವರ ಇನ್ನೊಂದು ದುರಭ್ಯಾಸವನ್ನೂ ನಾನಿಲ್ಲಿ ಹೇಳಬಹುದು. ದಸರಾ ಮತ್ತು ಬೇಸಿಗೆ ರಜ ಬಂತೆಂದರೆ ಸಾಕು, ಆ ಮೇಷ್ಟ್ರಿಗೆ ತಮ್ಮ ಊರಿನ, ತೋಟದ ನೆನಪಾಗುತ್ತಿತ್ತು. ಆಗ ಅವರ ದೃಷ್ಟಿ, ಸ್ವಲ್ಪ ಬಲಿಷ್ಠರಾದ ಹುಡುಗರ ಮೇಲೆ ಬೀಳುತ್ತಿತ್ತು. ನನಗೆ ಇದು ಗೊತ್ತಾಗಿದ್ದು ನಾವು ಒಂಬತ್ತನೇ ತರಗತಿಯಲ್ಲಿದ್ದಾಗಲೇ. ಆಗ ಹತ್ತನೇ ತರಗತಿಯಲ್ಲಿದ್ದ, ನನ್ನಣ್ಣನೊಂದಿಗೆ ಚಿಕ್ಕಯ್ಯ ಮತ್ತು ಎಂ.ಕೆ.ಸ್ವಾಮಿ ಎಂಬ ವಿದ್ಯಾರ್ಥಿಗಳಿದ್ದರು. ಈ ಮೂವರೂ ನೋಡಲು ತುಂಬಾ ಬಲಿಷ್ಠರಾಗಿದ್ದರು. ಕಬಡ್ಡಿ ವಾಲಿಬಾಲ್ ಯಾವುದರಲ್ಲಿಯೇ ಆಗಲಿ ಆ ಮೂವರದೇ ಕಾರುಬಾರು. ಅಲ್ಲದೆ ಆ ಮೂವರೂ ಹಾಸ್ಟೆಲ್ಲಿನಲ್ಲಿಯೇ ಇದ್ದರು ಹಾಗೂ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಆ ಬಾರಿ ದಸರಾ ರಜ ಬಂದಾಗ ನಿಂಗೇಗೌಡರು ಆ ಮೂವರನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಿದ್ದರು. ಅವರು ವಾಪಸ್ಸು ಬಂದು, ಚಿಕ್ಕಯ್ಯ ನಮಗೆ ಎಲ್ಲಾ ವಿಷಯ ಹೇಳುವವರೆಗೂ ನಮಗೆ ಅವರನ್ನು ಕರೆದುಕೊಂಡು ಹೋಗಿದ್ದು ಏಕೆಂದು ಗೊತ್ತೇ ಇರಲಿಲ್ಲ! ಸುಮಾರು ಇಪ್ಪತ್ತಮೂರು ದಿನಗಳ ಕಾಲ ಆ ಮೂವರಿಂದ ಹೊಲ-ತೋಟಗಳಲ್ಲಿ ಪುಕ್ಕಟೆಯಾಗಿ ಕೆಲಸ ಮಾಡಿಸಿಕೊಂಡಿದ್ದರು. ನನ್ನಣ್ಣ ಮನೆಯಲ್ಲಿ ಏನೇನೋ ಹೇಳಿ ತಪ್ಪಿಸಿಕೊಂಡಿದ್ದ. ಆದರೆ ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದ ಚಿಕ್ಕಯ್ಯ ಮತ್ತು ಎಂ.ಕೆ.ಸ್ವಾಮಿ ಅವರು ನಿಜ ಹೇಳಿಯೇ ಬಿಟ್ಟರು.
ಚಿಕ್ಕಯ್ಯ ಹರಿಜನನಾಗಿದ್ದರೂ, ನಮ್ಮ ಜೊತೆಯಲ್ಲಿ ಬಂದಾಗ ನಮ್ಮ ಮನೆಯೊಳಗೇ ಬಂದು ನಮ್ಮ ಜೊತೆಯಲ್ಲೇ ಊಟ ಮಾಡುತ್ತಿದ್ದ. ಅದಕ್ಕೆ ನಮ್ಮ ತಂದೆ ತಾಯಿಯವರೂ ಏನೂ ಹೇಳುತ್ತಿರಲಿಲ್ಲ. ಓದುತ್ತಿರುವ ಹುಡುಗರಲ್ಲವೆ? ಅವರನ್ನು ಬೇರೆ ಬೇರೆ ಕೂರಿಸಿ ಊಟ ಹಾಕಲಾಗುತ್ತದೆಯೆ? ಎಂದು ನಮ್ಮ ತಾಯಿ ಸುಮ್ಮನಾಗುತ್ತಿದ್ದರು. ಹಾಸ್ಟೆಲ್ಲಿನಲ್ಲಿದ್ದ ಕೆಲವು ಹುಡುಗರು, ಭಾನುವಾರ ಬಂತೆಂದರೆ ನಮ್ಮ ಜೊತೆ ನಮ್ಮ ತೋಟದ ಮನೆಗೆ ಬಂದು ಅಲ್ಲಿಯೇ ಬಟ್ಟೆ ತೊಳೆದುಕೊಂಡು ಸ್ನಾನ ಮಾಡಿಕೊಂಡು, ನಮ್ಮ ಮನೆಯಲ್ಲೇ ಊಟ ಮಾಡಿಕೊಂಡು ಹೋಗುತ್ತಿದ್ದರು. ಅದರಲ್ಲೂ ತುಂಬಾ ಜನ ದೂರದ ಊರಿನ ಹರಿಜನ ವಿದ್ಯಾರ್ಥಿಗಳಿರುತ್ತಿದ್ದರು. ಈ ರೀತಿ ನಮ್ಮ ಮನೆಯವರಿಗೆ ಸ್ನೇಹಿತನಂತಿದ್ದ ಚಿಕ್ಕಯ್ಯ ಎಲ್ಲಾ ವಿಷಯವನ್ನು ಬಾಯಿಬಿಟ್ಟಿದ್ದರಿಂದ ನಿಂಗೇಗೌಡರ ಸ್ವಾರ್ಥ ಬಯಲಾಗಿತ್ತು. ನಮ್ಮ ತಂದೆ ಏನೂ ಹೇಳದೆ ‘ಹಾಳಾಗಿ ಹೋಗಲಿ’ ಎಂದು ಸುಮ್ಮನಾಗಿ ಬಿಟ್ಟರು.
ಆದರೆ ವಿಷಯ ಸ್ಕೂಲಿನಲ್ಲೆಲ್ಲಾ ಜಗಜ್ಜಾಹೀರಾಗಿತ್ತು. ಅದರಿಂದಲೋ ಏನೋ ಮುಂದಿನ ಬೇಸಿಗೆ ರಜದಲ್ಲಿ ಯಾವ ವಿದ್ಯಾರ್ಥಿಗಳನ್ನೂ ಅವರು ಕರೆದುಕೊಂಡು ಹೋಗಲಿಲ್ಲ. ನಾನು ಹತ್ತನೇ ತರಗತಿಗೆ ಬಂದಾಗ ಕೆಲವೊಂದು ವಿದ್ಯಾರ್ಥಿಗಳನ್ನು ಅವರು ಕೇಳಿದ್ದುಂಟು. ಆದರೆ ಅವರ ಅದೃಷ್ಟಕ್ಕೆ, ಆಗ ವಾರ್ಡನ್ನಾಗಿ ಬಂದ ಜಟಗೊಂಡ ಅವರು, ಹತ್ತನೆ ತರಗತಿಯವರಿಗೆ ರಜದಲ್ಲೂ ಹಾಸ್ಟೆಲ್ಲನ್ನು ತೆರೆದಿಟ್ಟು, ಪಾಠ ಮಾಡುವುದಾಗಿ ಘೋಷಿಸಿದ್ದರು. ನಿಂಗೇಗೌಡರ ಆಹ್ವಾನಕ್ಕೆ ಒಳಗಾಗಿದ್ದ ಹುಡುಗರು ಈ ಕಾರಣ ನೀಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಸ್ವತಃ ನಿಂಗೇಗೌಡರೇ ಹಾಸ್ಟೆಲ್ಲಿಗೆ ಬಂದು ‘ಹುಡುಗರನ್ನು ನಾನು ಕೆಲಸ ಮಾಡಿಸಿಕೊಳ್ಳಲು ಕರೆದುಕೊಂಡು ಹೋಗುತ್ತಿಲ್ಲ. ಅವರಿಗೆ ಅಲ್ಲಿಯೇ ಪಾಠ ಹೇಳಿಕೊಡುತ್ತೇನೆ. ಕಳುಹಿಸಿ’ ಎಂದು ಕೇಳಿದ್ದುಂಟು. ಆದರೆ ತುಂಬಾ ಸ್ಟ್ರಿಕ್ಟ್ ಎನಿಸಿಕೊಂಡಿದ್ದ ಜಟಗೊಂಡ ಅವರು ‘ಹಾಸ್ಟೆಲ್ಲಿನಲ್ಲಿರುವ ವಿದ್ಯಾರ್ಥಿಗಳ ಹೊಣೆ ನನ್ನದು. ಆದ್ದರಿಂದ ಅವರನ್ನು ಎಲ್ಲಿಗೂ ಕಳುಹಿಸುವುದಿಲ್ಲ. ಅವರ ಊರಿಗೂ ಕಳುಹಿಸದೆ ಇಲ್ಲೇ ಇರಿಸಿಕೊಂಡು ಪಾಠ ಮಾಡುತ್ತೇನೆ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟಿದ್ದರು.
(ಮುಂದಿನ ವಾರ: ಮೊಲದ ಮಂಜನ ಕಥೆ)
6 comments:
ಸರ್, ಚೆನ್ನಾಗಿದೆ, ನಿಮ್ಮ ಸ್ಕೂಲ್ ಪುರಾಣ. ನಿಮ್ಮ ನಿ೦ಗೇಗೌಡರ ತರಹದ ಶಿಕ್ಷಕರೊಬ್ಬರು ನನಗೂ ಇದ್ದರು, ನೆನಪಾಯಿತು.
ಸರ್,
ನಿಂಗೇ ಗೌಡ ಮೇಷ್ಟ್ರ ಕತೆ ಕೇಳಿದ ಮೇಲೆ ಪಾಠ ಹೇಳಿಕೊಡುವ ಮೇಷ್ಟು ಗುರು ಸಮಾನ....ಅದರಿಲ್ಲಿ...ಹೆಣ್ಣು ಮಕ್ಕಳ ಜೊತೆ ಅವರ ನಡುವಳಿಕೆ ಇತ್ಯಾದಿಗಳನ್ನು ಓದಿದಾಗ ಹೀಗೂ ಇರುತ್ತಾರಾ ಅನ್ನಿಸಿತು....ಧನ್ಯವಾದಗಳು...
ಸತ್ಯನಾರಾಯಣವರೆ,
ನಿಮ್ಮ ಹೈಸ್ಕೂಲ್ ದಿನಗಳನ್ನು ಓದುತ್ತಿದ್ದರೆ ನನಗೆ ನನ್ನ ಪ್ರಾಥಮಿಕ ಶಾಲಾ ದಿನಗಳು ನೆನಪಿಗೆ ಬರುತ್ತಿವೆ.ನಿಂಗೇಗೌಡರಂಥ ಮೇಷ್ಟ್ರು ಬಹುಶಃ ಹಳ್ಳಿಯ ಅನೇಕ ಶಾಲೆಗಳಲ್ಲಿ ಸಿಗುತ್ತಾರೆ.ನನಗೂ ನಿಂಗೇಗೌಡರನ್ನು ಅಲ್ಪ ಸ್ವಲ್ಪ ಹೋಲುವಂಥ ಒಬ್ಬ ಮೇಷ್ಟ್ರು ಇದ್ದರು.ಆದರೆ ಅವರು ನಿಂಗೇಗೌಡರಷ್ಟು ಕೄರಿಯಾಗಿರಲಿಲ್ಲ.
ಸತ್ಯನಾರಾಯಣವರೆ,
ನಿಮ್ಮ ಹೈಸ್ಕೂಲ್ ದಿನಗಳು ನನ್ನ ಪ್ರೈಮರಿ ದಿನಗಳನ್ನು ನೆನಪಿಸುತ್ತದೆ.ನಿಂಗೇಗೌಡರಂಥ ಮೇಷ್ಟ್ರು ಹಳ್ಳೈಯ ಅನೇಕ ಶಾಲೆಗಳಲ್ಲಿ ಸಿಗುತ್ತಾರೆ.ಅವರಂಥ ಮೇಷ್ಟ್ರು ನನಗೊಬ್ಬರು ಇದ್ದರು.ಆದರೆ ಅವರಷ್ಟು ಕೄರಿಯಾಗಿರಲಿಲ್ಲ.
ತುಂಬಾ ಚೆನ್ನಾಗಿದೆ ನಿಮ್ಮ ಕಥೆ..
ನಿಂಗೇಗೌಡರಂಥವರು ಇರಲು ಸಾಧ್ಯವೆ ಎಂದು ಆಶ್ಚರ್ಯವಾಯಿತು.
Post a Comment