Monday, March 16, 2009

ಜಾಗಿಂಗ್ ಯಾ ವಾಕಿಂಗ್

ಸರಿಸುಮಾರು ಇಪ್ಪತ್ತು ಬಾರಿಯಾದರೂ ನಾನು ನನ್ನ ಜಾಗಿಂಗ್ ಇಲ್ಲವೆ ವಾಕಿಂಗ್ ಶುರು ಮಾಡಿ ನಿಲ್ಲಿಸಿದ್ದೇನೆ. ಆದರೆ ಇತ್ತೀಚಿಗೆ ಅದನ್ನು ನಿಲ್ಲಿಸಲು ಮನಸ್ಸಾಗುತ್ತಿಲ್ಲ. ದೇಹವೂ, ಅಂತರಾಳವೂ ನನಗೆ ಚಾಳೀಸು ಸಮೀಪಿಸುತ್ತಿರುವುದನ್ನು ಒಪ್ಪಿಕೊಂಡು ‘ಅರ್ಧ ದಾರಿ ಮುಗಿಯಿತಲ್ಲ’ ಎಂದು ಪರೋಕ್ಷವಾಗಿ ಬೆಳಗಿನ ವಾಯುವಿಹಾರಕ್ಕೆ ನನ್ನನ್ನು ಪ್ರೇರೇಪಿಸುತ್ತಿರಬಹುದು! ಜೊತೆಗೆ ಈ ಬಾರಿ ನನ್ನ ಹೆಂಡತಿಯೂ ಸೇರಿಕೊಂಡಿದ್ದರಿಂದ, ‘ನಿನ್ನಿಂದಲೇ ಬೆಳಗಿನ ವಾಕ್ ನಿಂತುಹೋಯಿತು’ ಎಂಬ ದೂರನ್ನು ಹೊರಲು ಇಬ್ಬರೂ ಸಿದ್ದರಿಲ್ಲದ್ದರಿಂದ, ಅದು ಮುಂದುವರೆಯುತ್ತಿದೆ.
ಈ ಬೆಳಗಿನ ವಾಕಿಂಗಿಗೆ ಕೆಲವರು ಮನೆಯ ಮುಂದೆಯೇ ಓಡಾಡುತ್ತಾರೆ, ಇನ್ನು ಕೆಲವರು ಮನೆಯ ಒಳಗೇ ಓಡಾಡುತ್ತಾರೆ. ಮತ್ತೆ ಕೆಲವರು ಹತ್ತಿರದ ಪಾರ್ಕುಗಳನ್ನು ಆಶ್ರಯಿಸುತ್ತಾರೆ. ದೂರದ ಪಾರ್ಕುಗಳಿಗೂ ಕೆಲವರು ವಾಹನದಲ್ಲಿ ಹೋಗಿ, ಅಲ್ಲಿ ಒಂದಷ್ಟು ನಡೆದು ಮತ್ತೆ ವಾಹನದಲ್ಲಿ ವಾಪಸ್ಸು ಬರುತ್ತಾರೆ. ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು, ಸುಸ್ಥಿತಿಯಲ್ಲಿಟ್ಟುಕೊಳ್ಳಲು ಇವರು ಒಂದಿಷ್ಟು ಪೆಟ್ರೋಲು ಯಾ ಡೀಸೆಲ್ ಉರಿಸಿ ಭೂಮಿಯನ್ನು ಬಿಸಿ ಮಾಡುತ್ತಾರೆ.
ಆದರೆ ನನ್ನ ಕಥೆ ಕೇಳಿ.
ನಮ್ಮ ಮನೆಯ ಬಳಿ ಕಾಲ್ನಡಿಗೆಯ ದೂರದಲ್ಲಿ ಮೂರು ಪಾರ್ಕುಗಳಿವೆ. ನನ್ನ ಮನೆಗೆ ತೀರಾ ಹತ್ತಿರದಲ್ಲಿರುವ ಪಾರ್ಕು ರಿಂಗ್ ರೋಡಿಗೆ ಹತ್ತಿರದಲ್ಲಿರುವುದಲ್ಲದೆ, ತೀರಾ ಚಿಕ್ಕದು. ಅಲ್ಲಿ ಇದ್ದಷ್ಟೂ ಹೊತ್ತು ಕೇವಲ ಹೊಗೆಯಷ್ಟೇ ನಮ್ಮ ಉಸಿರಾಟಕ್ಕೆ ದಕ್ಕುವುದು! ಎರಡನೆಯದು ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಹೆಸರಿನಲ್ಲಿರುವ ಸುಸಜ್ಜಿತ ಪಾರ್ಕು. ನಡೆಯಲು ಕಾಲುಹಾದಿ, ದಟ್ಟವಾದ ಮರಗಿಡಗಳು, ಹುಲ್ಲು ಹಾಸು, ಕುಳಿತುಕೊಳ್ಳಲು ಸಿಮೆಂಟಿನ ಆರಾಮಾಸನಗಳು, ಆಗಾಗ ಗೊರಗೊರ ಸದ್ದು ಮಾಡುತ್ತಲೇ ಕಿವಿಯಮೇಲೆ ಬೀಳುವ, ಮೈಸೂರುಮಲ್ಲಿಗೆಯ ಹಾಡುಗಳು... ಹೀಗೆ ಎಲ್ಲಾ ರೀತಿಯಲ್ಲೂ ಸುಸಜ್ಜಿತವಾದ ಪಾರ್ಕು. ನಾನು ಇದನ್ನು ‘ಡೆವಲಪ್‌ಡ್ ಪಾರ್ಕು’ ಎನ್ನುತ್ತೇನೆ; ‘ಡೆವಲಪ್‌ಡ್ ಕಂಟ್ರಿ’ ಎನ್ನುವ ರೀತಿಯಲ್ಲಿ.
ಆದರೆ ಇಲ್ಲಿರುವ ಅನುಕೂಲತೆಗಳೇ ಅನಾನುಕೂಲತೆಗಳಾಗಿ ಮಾರ್ಪಟ್ಟಿವೆ. ವಿಪರೀತ ಜನಜಂಗುಳಿ. ನಡೆದುಕೊಂಡೇ ಅಥವಾ ತೆವಳಿಕೊಂಡೇ ಓಡಾಡಬೇಕು. ಓಡುವಂತಿಲ್ಲ. ಅದಕ್ಕಿಂತ ಹೆಚ್ಚಾಗಿ ಬೆಳಗಿನ ಆ ನೀರವ ಮೌನವನ್ನು ಅನುಭವಿಸಲು ಹಾಗೂ ಆಗೊಮ್ಮೆ ಈಗೊಮ್ಮೆ ಕಿವಿಗಪ್ಪಳಿಸುವ ಹಕ್ಕಿಗಳ ಇಂಚರವನ್ನು ಕೇಳಲು ಸಾಧ್ಯವೇ ಇಲ್ಲ. ಇದಕ್ಕೆ ಒಂದೇ ಕಾರಣವೆಂದರೆ, ಲಾಫಿಂಗ್ ಕ್ಲಬ್ ಸದಸ್ಯರು! ಇವರಿಗೆ ಅದ್ಯಾವ ಪುಣ್ಯಾತ್ಮ ಅರ್ಥ ಮಾಡಿಸಿದನೋ ಕಾಣೆ, ನಗುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದು. ಇವರು ಅದನ್ನೇ ಅಪಾರ್ಥ ಮಾಡಿಕೊಂಡು ಅರ್ಧ ಕಿಲೋಮೀಟರ್ ದೂರ ಕೇಳಿಸುವಂತೆ, ಅಕ್ಕಪಕ್ಕದ ರಸ್ತೆಯ ಮನೆಗಳಲ್ಲಿ ಮಲಗಿರುವವರು, ವೃದ್ಧರು, ವಿದ್ಯಾರ್ಥಿಗಳು, ರೋಗಿಗಳು ಬೆಚ್ಚಿ ಬೀಳುವಂತೆ ನಗುತ್ತಾರೆ ಅಲ್ಲಲ್ಲ ಕೆನೆಯುತ್ತಾರೆ. ‘ನಗುವುದು ಸಹಜಧರ್ಮ ನಗಿಸುವುದು ಪರಧರ್ಮ’ ಎಂಬ ಮಾತು ಇಲ್ಲಿ ಅನ್ವಯವಾಗುವುದಿಲ್ಲ. ‘ನಗುವುದು ಅನಿವಾರ್ಯ ಕರ್ಮ’ ಎಂದು ಇವರು ತಿಳಿದುಕೊಂಡಿದ್ದಾರೆ. ಅರವತ್ತು ಎಪ್ಪತ್ತು ಜನರಷ್ಟಿರುವ ಇವರೆಲ್ಲಾ ಒಮ್ಮೆಲೇ ಬಲವಂತವಾಗಿ ಜೋರಾಗಿ ನಗುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಉಂಟು ಮಾಡುವ ಶಬ್ದಕ್ಕೆ, ಹತ್ತು ಯುದ್ಧ ವಿಮಾನಗಳು ನಮ್ಮ ನೆತ್ತಿಯ ಮೇಲೆ ಒಮ್ಮೆಲೆ ದೌಡಾಯಿಸಿದಂತೆ ಆಗುತ್ತದೆ! ಇನ್ನು ಮರಗಿಡಗಳಲ್ಲಿ ಕುಳಿತಿರುವ ಹಕ್ಕಿಗಳೆಲ್ಲಾ ‘ಓ ಪ್ರಳಯವಾಗುತ್ತಿದೆ. ತಪ್ಪಿಸಿಕೊಳ್ಳಿ, ತಪ್ಪಿಸಿಕೊಳ್ಳಿ’ ಎಂದು ಇಟ್ಟಿದ್ದ ಮೊಟ್ಟೆಗಳನ್ನು, ತುಪ್ಪಳ ಮೂಡದ ಮರಿಗಳನ್ನು ಅಲ್ಲಲ್ಲಿಯೇ ಬಿಟ್ಟು ದೌಡಾಯಿಸುತ್ತವೆ, ಅಷ್ಟೆ. ಇನ್ನು ಹಕ್ಕಿಯಿಂಚರ ಕೇಳುತ್ತಾ ವಾಕಿಂಗ್ ಮಾಡುವ ಆಸೆಯಿರುವ ನನ್ನಂತವರಿಗೆ ಅಲ್ಲಿ ನೆಲೆಯಿಲ್ಲ. ಅದಕ್ಕೆ ನಾನು ಆ ಪಾರ್ಕಿಗೆ ವಾಕಿಂಗ್ ಹೋಗುವ ಆಸೆ ಕೈ ಬಿಟ್ಟಿದ್ದೇನೆ.

ಆದರೂ ನನ್ನ ಕಿರಿಯ ಮಿತ್ರರೊಬ್ಬರು ನನಗೆ ಹಲವಾರು ಸಲಹೆಗಳನ್ನು ಕೊಟ್ಟರು. ಅವು ಸಲಹೆಗಳಲ್ಲ. ಸ್ವತಃ ಅವರೇ ಪಾಲಿಸುತ್ತಿರುವ ಸುರಕ್ಷತಾ ಕ್ರಮಗಳು ಎನ್ನಬಹುದು. ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋಗಿದ್ದ ಮಿತ್ರರು, ಅಲ್ಲಿ ಹೊತ್ತು ಕಳೆಯಲು ರೂಢಿಸಿಕೊಂಡ ಅಭ್ಯಾಸಗಳಲ್ಲಿ ಜಾಗಿಂಗ್ ಕೂಡಾ ಒಂದು. ದಿನಕ್ಕೆ ಬೆಳಿಗ್ಗೆ, ಸಂಜೆ ಸಮಯವಿದ್ದರೆ ಮದ್ಯಾಹ್ನ ಕೂಡಾ ಜಾಗಿಂಗ್ ಹೋಗುವುದು ಅಭ್ಯಾಸವಾಗಿದೆ. ಇಲ್ಲಿ ಬಂದು ಒಳ್ಳೆಯ ಕೆಲಸ ಹಿಡಿದರೂ, ಆ ಕೆಲಸದಲ್ಲಿ ಕುಂಡಿ ತುರಿಸಲು ಪುರುಸೊತ್ತು ಎನ್ನುವುದು ಇಲ್ಲದಿರುವಾಗಲೂ ಈ ಜಾಗಿಂಗ್ ಹುಚ್ಚು ಅವರಿಗೆ ಹೋಗಿಲ್ಲ. ಆದರೆ ಜಾಗಿಂಗ್ ಮಾಡುವ ಸಮಯ ಕಡಿಮೆಯಾಗಿದೆ ಅಷ್ಟೆ. ಅವರ ಮನೆಯಿಂದ ನಮ್ಮ ಮೈಸೂರು ಮಲ್ಲಿಗೆ ಪಾರ್ಕು ಒಂದು ನಿಮಿಷದ ಹಾದಿ. ದೂರ ದೂರದ ಪಾರ್ಕುಗಳಿಗೆ ಹೋಗಿ ಜಾಗಿಂಗ್ ಮಾಡುವಷ್ಟು ಸಮಯವಿಲ್ಲದ್ದರಿಂದ ಅವರೂ ಅದೇ ಪಾರ್ಕನ್ನು ಆಶ್ರಯಿಸಿಬೇಕಾಯಿತು. ಆದರೆ ಅಲ್ಲಿ ದಿನಕ್ಕೊಂದರಂತೆ ತೊಂದರೆಗಳು ಉದ್ಭವಿಸತೊಡಗಿದವು.
ಮೊದಲಿಗೆ ಪಾರ್ಕಿನಲ್ಲಿ ದಿನವೂ ಹಾಕುತ್ತಿದ್ದ ಮೈಸೂರುಮಲ್ಲಿಗೆ ಹಾಡುಗಳು. ಮೈಸೂರು ಮಲ್ಲಿಗೆಯ ಹಾಡುಗಳನ್ನು ಐಪಾಡಿನಲ್ಲಿಟ್ಟುಕೊಂಡು, ಇಷ್ಟಪಟ್ಟು ಕೇಳುವವರಾಗಿದ್ದ ಅವರಿಗೆ, ಆ ಗೊರ ಗೊರ ಶಬ್ದದ ನಡುವೆ, ತಾರಕದಲ್ಲಿ ಕೇಳಿಸುವ ಅಶ್ವತ್ಥರ ಧ್ವನಿ ಕೇಳಿದರೇ ಬಹಳ ರೇಜಿಗೆಯುಂಟಾಗಲಾರಂಭಿಸಿತು.
ಎರಡನೆಯದು, ವೇಗವಾಗಿ ಓಡಲು ಸಾಧ್ಯವೇ ಇಲ್ಲದಷ್ಟು ಜನಗಳ ಟ್ರಾಫಿಕ್ಕು. ಅದಕ್ಕೆ ಅವರು ಕಂಡುಕೊಂಡ ಉಪಾಯ, ಪಾರ್ಕನ್ನು ಬಿಟ್ಟು ಪಾರ್ಕ್ ಸುತ್ತ ಇರುವ ರಸ್ತೆಯಲ್ಲಿ ಓಡುವುದು! ಆದರೆ ಅಲ್ಲಿಗೂ ಬಂದು ಅಪ್ಪಳಿಸುವ ಲಾಫಿಂಗ್ ಕ್ಲಬ್‌ನ ಹಾಸ್ಯೋತ್ಪಾದಕರ ಅಪಹಾಸ್ಯ ಬೇರೆ. ಈ ಎರಡೂ ಸಮಸ್ಯೆಗಳಿಗೆ ಅವರು ಐಪಾಡಿನಿಂದ ಇಯರ್ ಫೋನ್ ಮುಖಾಂತರ ಜೋರಾಗಿ ಹಾಡುಗಳನ್ನು ಕೇಳುವ ಅಭ್ಯಾಸಕ್ಕೆ ಮೊರೆ ಹೋದರು. ಆದರೂ ಶನಿವಾರ ಭಾನುವಾರ ಹಾಗೂ ಬಿಡುವಾದಗಲೆಲ್ಲಾ, ದೂರದ ಲಾಲ್‌ಬಾಗಿಗೋ, ಜಯನಗರದ ಮಾಧವನ್ ಪಾರ್ಕಿಗೋ ಹೋಗಿ ಜಾಗಿಂಗ್ ಎಂಜಾಯ್ ಮಾಡುತ್ತಿರುತ್ತಾರೆ.
ಜೋರಾಗಿ ಇಯರ್ ಫೋನ್ ಮುಖಾಂತರ ಹಾಡು ಕೇಳಿ ಅವಧಿಗೆ ಮೊದಲೇ ಕಿವುಡನಾಗುವ ತಾಪತ್ರವೇ ಬೇಡ ಎಂದುಕೊಂಡು ನಾನು ಆ ದುಸ್ಸಾಹಾಸಕ್ಕೆ ಕೈಹಾಕಲಿಲ್ಲ. ಆದರೂ ವಾಯುವಿಹಾರ ನಡೆಯಲೇಬೇಕಲ್ಲ. ಅದಕ್ಕಾಗಿ ಮೂರನೇ ಪಾರ್ಕು ಆಯ್ದುಕೊಂಡೆ. ಇದೂ ಕೂಡಾ ಮೈಸೂರು ಮಲ್ಲಿಗೆ ಪಾರ್ಕಿನಷ್ಟೇ ದೂರದಲ್ಲಿದೆ. ಆದರೆ ಅಷ್ಟು ದೊಡ್ಡದಲ್ಲ. ನಮ್ಮ ಮನೆಯಿಂದ ಹದಿನೈದು ನಿಮಿಷಗಳು ನಡೆಯಬೇಕು. ಬೈಕಿನಲ್ಲಿ ಹೋಗಿ, ಅಲ್ಲಿ ನಡೆಯುವಷ್ಟು ಕೆಟ್ಟವನಲ್ಲ ನಾನು. ಅದಕ್ಕಾಗಿ ನಡೆದುಕೊಂಡೇ ಹೋಗುತ್ತೇವೆ. ಆದರೆ ಶನಿವಾರ ಭಾನುವಾರ ಈ ನಿಯಮವನ್ನು ಮೀರಬೇಕಾಗುತ್ತದೆ. ಕಾರಣ ನನ್ನ ಐದು ವರ್ಷದ ಮಗಳು. ಆ ಎರಡು ದಿನಗಳು ಅವಳೂ ಪಾರ್ಕಿಗೆ ಬರುತ್ತಾಳೆ. ವಾಕಿಂಗ್ ಅಥವಾ ಜಾಗಿಂಗ್ ಅವಳಿಗೆ ಅಪಥ್ಯ. ಆದರೆ ಅಲ್ಲಿರುವ ಮರಳಿನ ಮೇಲೆ, ರಾಟೆಯ ಮೇಲೆ, ಜಾರುಬಂಡೆಯ ಮೇಲೆ, ಉಯ್ಯಾಲೆಯಲ್ಲಿ ಆಟವಾಡಲು. ಅವಳ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ನಾನು ನನ್ನ ಕಯ್ಯಾರೆ ಮಾಡಿಕೊಟ್ಟಿರುವ ಉಯ್ಯಾಲೆ ಮನೆಯಲ್ಲಿದೆ. ನಾವು ಮೊದಲಿದ್ದ ಬಾಡಿಗೆ ಮನೆಯಲ್ಲಿ ಅದಕ್ಕೆ ಸಾಕಷ್ಟು ಜಾಗವಿತ್ತು. ಆದರೆ ಈಗ ಅದು ನನ್ನ ಸ್ವಂತ ಪುಟ್ಟ ಅರಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬಹುದಾದ ತೂಗು ಕುರ್ಚಿಯಾಗಿದೆಯೇ ಹೊರತು ಉಯ್ಯಾಲೆಯಾಗಿಲ್ಲ. ಆದ್ದರಿಂದ ಅವಳು ಅದನ್ನು ಏರಿ ಕೂರುವುದಿಲ್ಲ! ಇವಳಿಗೆ ಪಾರ್ಕಿಗೆ ಇರುವ ದೂರವನ್ನು ನಡೆಯುವುದು ಕಷ್ಟವಲ್ಲದಿದ್ದರೂ ಇಷ್ಟವಿಲ್ಲ. ಅವಳನ್ನು ಎತ್ತಿಕೊಂಡು ನಡೆಯುವ ತ್ರಾಣ ನಮ್ಮಿಬ್ಬರಲ್ಲಿ ಯಾರಿಗೂ ಇಲ್ಲ. ವಾರದ ಎಲ್ಲಾ ದಿನಗಳೂ ಅವಳು ಬರಲು ಸಿದ್ದಳಿದ್ದರೂ ಎರಡು ಕಾರಣಗಳಿಗಾಗಿ ನಾನು ಅದಕ್ಕೆ ಬ್ರೇಕ್ ಹಾಕಿದ್ದೇನೆ. ಮೊದಲನೆಯದು, ಸ್ಕೂಲ್ ಇದ್ದ ದಿನ ಪಾರ್ಕಿಗೆ ಬಂದರೆ, ಮಧ್ಯಾಹ್ನ ಸ್ಕೂಲಿನಿಂದ ವಾಪಸ್ಸು ಬರುವುದರೊಳಗೆ ವ್ಯಾನಿನಲ್ಲೇ ನಿದ್ದೆ ಮಾಡುಬಿಡುತ್ತಾಳೆ. ಎರಡನೆಯದು, ಬೈಕಿನಲ್ಲಿ ನಿತ್ಯವೂ ಪಾರ್ಕಿಗೆ ಹೋಗಲು ನನಗೆ ಮನಸ್ಸಿಲ್ಲದಿರುವುದು! ಅದಕ್ಕಾಗಿ ವಾರಾಂತ್ಯದ ಎರಡು ದಿನ ಮಾತ್ರ ವಾಯುವಿಹಾರಕ್ಕೆ ಪೂರ್ವಬಾವಿಯಾಗಿ ಬೈಕ್ ವಿಹಾರವೂ ನಡೆಯುತ್ತದೆ.
ಇನ್ನು ಆ ಪಾರ್ಕಿನ ಸ್ಥಿತಿಗತಿ. ಅದೊಂದು ‘ಅಂಡರ್ ಡೆವಲಪ್‌ಡ್ ಪಾರ್ಕ್’, ‘ಅಂಡರ್ ಡೆವಲಪ್‌ಡ್ ಕಂಟ್ರಿ’ ಇದ್ದಹಾಗೆ! ಮರಗಿಡಗಳು ಸ್ವಲ್ಪ ಕಡಿಮೆ. ಆದರೆ ನಡೆಯಲು ಸೂಕ್ತವಾದ ಕಾಲುಹಾದಿಯಿದೆ. ಜನರೂ ಕಡಿಮೆ. ಲಾಫಿಂಗ್ ಕ್ಲಬ್ಬಿನ ಹಾಸ್ಯೋತ್ಪಾದಕರು ಅಲ್ಲಲ್ಲ ಶಬ್ದೋತ್ಪಾದಕರು (ಅದು ಹಾಸ್ಯವಲ್ಲ; ಬರೀ ಶಬ್ದ!) ಇಲ್ಲಿಗೆ ಇನ್ನು ಕಾಲಿಟ್ಟಿಲ್ಲ. ಹಲವಾರು ಹೊಂಗೇ ಮರಗಳು ಇವೆ. ಈ ಚೈತ್ರದ ಉರಿಯಲ್ಲಿ ಅವು ಸೊಂಪಾಗಿ ಪಲ್ಲವಿಸಿ ಹೂಬಿಟ್ಟಿವೆ. ಅವುಗಳ ಕೆಳಗೆ ಉದುರಿರುವ ಹೂವುಗಳನ್ನು ನೋಡಿ ನನಗೆ ‘ಪಂಪಭಾರತ’ದಲ್ಲಿ ಬರುವ ಮರಳಿನ ಮೇಲೆ ಅಕ್ಷತೆಯ ರಂಗವಲ್ಲಿಯಿಕ್ಕಿದಂತೆ ಚೆಲ್ಲಿದ್ದ ಹೊಂಗೆ ಹೂವುಗಳ ಶಬ್ದಚಿತ್ರ ನೆನಪಿಗೆ ಬರುತ್ತದೆ. ಕುವೆಂಪು ರಾಮಾಯಣದಲ್ಲೂ ಮರಳಿನ ಮೇಲೆ ಚೆಲ್ಲಿದ ಹೊಂಗೇ ಮರದ ದಟ್ಟ ನೆರಳಿನ ಚಿತ್ರ ಬರುತ್ತದೆ. ಬೇಂದ್ರೆಯವರ ಯುಗಾದಿ ಕವಿತೆಯಲ್ಲಿ 'ಹೊಂಗೆ ಹೂವ ತೊಂಗಲಲ್ಲಿ ಬೃಂಗದ ಸಂಗೀತ ಕೇಳಿ' ಎಂಬ ಸಾಲು ಅಜರಾಮರ'. ಪಾರ್ಕಿನ ಬದಿಯ ರಸ್ತೆಯಲ್ಲಿ ಒಂದರೆಡು ಮಾವಿನ ಮರಗಳೂ ಇವೆ. ಆ ಮರಗಳಲ್ಲಿ ಆಶ್ರಯ ಪಡೆದಿರುವ ಹಲವಾರು ಹಕ್ಕಿಗಳ ಇಂಚರ ಕಿವಿಯ ಮೇಲೆ ಬೀಳುತ್ತಿರುತ್ತದೆ. ನನ್ನ ಮಗಳಿಗೆ ಕೇಳಿಸುತ್ತಿರುತ್ತೇನೆ. ಮನೆಯಲ್ಲಿ, ಮೈಸೂರು ವಿಶ್ವವಿದ್ಯಾಲಯದ ಡಿಜಿಟಲ್ ವಿಶ್ವಕೋಶದಿಂದ ಹಕ್ಕಿಗಳ ಇಂಚರ ಕೇಳಿಸಿ ಅವುಗಳನ್ನು ಗುರುತಿಟ್ಟುಕೊಳ್ಳುವ ಪ್ರಯತ್ನವನ್ನು ನನ್ನ ಮಗಳಿಗೆ ಹಕ್ಕಿಗಳ ಬಗ್ಗೆ ಕುತೂಹಲ ಮೂಡಿಸುವುದಕ್ಕೋಸ್ಕರ, ನಮ್ಮ ‘ತೇಜಸ್ವಿ’ ಸಾಹಿತ್ಯದ ದಿಸೆಯಿಂದ ಮಾಡುತ್ತಿರುತ್ತೇನೆ. (ನನ್ನ ಮಟ್ಟಿಗೆ ವಿಫಲ. ಏಕೆಂದರೆ, ಎಷ್ಟೆಲ್ಲಾ ಪರಿಶ್ರಮ ಪಟ್ಟರೂ ನಾನು ಧ್ವನಿ ಕೇಳಿ ಗುರುತಿಸುವ ಪಕ್ಷಿಗಳ ಸಂಖ್ಯೆ ಒಂದು ಕೈನ ಬೆರಳಗಳಷ್ಟೂ ಆಗುವುದಿಲ್ಲ.!) ಹಕ್ಕಿಗಳ ಧ್ವನಿ ಕೇಳಿ ಗುರುತಿಸುವುದು ಬಹಳ ಕಷ್ಟ. ನನಗೆ ಈ ಮೊದಲು ಹಾಗೆ ಗೊತ್ತಿದ್ದಿದ್ದು ಕಾಗೆ-ಗೂಬೆ! ಈ ಎರಡನ್ನು ಬಿಟ್ಟರೆ ಸುಲಭವಾಗಿ ಗುರುತಿಸಬಹುದಾದದ್ದು ಎಂದರೆ, ಕೋಳಿ ಮಾತ್ರ!
ಈ ಪಾರ್ಕಿನ ಒಂದೆರಡು ವಿಶೇಷಗಳನ್ನು ಹೇಳಿ, ಈ ದೀರ್ಘ ಓದಿನಿಂದ ನಿಮಗೆ ಬಿಡುಗಡೆ ನೀಡುತ್ತೇನೆ. ಇಲ್ಲಿಗೆ ಮಧ್ಯವಯಸ್ಸಿನ ಮಹಿಳೆಯೊಬ್ಬರು ವಾಕಿಂಗ್ ಬರುತ್ತಾರೆ. ಪಾರ್ಕಿನ ವಾಕ್ಫಥ ಒಂದೇ ಸಮತಟ್ಟಿನಲ್ಲಿ ಇಲ್ಲ. ಕೆಲವು ಕಡೆ ಇಳಿಜಾರು ಸಿಗುತ್ತದೆ. ಆಯತಾಕೃಆದಲ್ಲಿರುವ ವಾಕ್ಫಥದ ಒಂದು ಸಣ್ಣ ಭುಜ ಇಳಿಜಾರಾಗಿದೆ. ಆ ಮಹಿಳೆ ಅಲ್ಲಿಗೆ ಬಂದ ತಕ್ಷಣ ಸುಮಾರು ಹತ್ತಿಪ್ಪತ್ತು ಹೆಜ್ಜೆ ದಡದಡನೆ ಓಡಿ ಮತ್ತೆ ನಡೆಯಲು ಶುರು ಮಾಡುತ್ತಾರೆ. ಮೊದಲ ಬಾರಿ, ಮುಂದೆ ನಡೆಯುತ್ತಿದ್ದ ನಾವು, ಹಿಂದಿನಿಂದ ದಡದಡನೆ ಓಡಿ ನಮ್ಮನ್ನು ಹಿಂದೆ ಹಾಕಿ ಮತ್ತೆ ನಡೆಯಲು ಪ್ರಾರಂಭಿಸಿದ ಅವರ ರೀತಿಯಿಂದ ದಂಗಾಗಿ ಹೋಗಿದ್ದೆವು. ಬಹುಶಃ ಅವರು ನಡೆಯುವ ವೇಗಕ್ಕಿಂತ ನಾವು ನಡೆಯುವ ವೇಗ ಕಡಿಮೆಯಾದ್ದರಿಂದ ನಮ್ಮನ್ನು ಹಿಂದೆ ಹಾಕಲು ಆ ರೀತಿ ಮಾಡಿರಬಹುದು ಎಂದುಕೊಂಡೆವು. ಆದರೆ ಮುಂದಿನ ದಿನಗಳಲ್ಲಿ ಅದು ಸುಳ್ಳು ಎಂದು ತಿಳಿಯಿತು. ಆ ಜಾಗಕ್ಕೆ ಅವರು ಬಂದಾಗ, ಅಲ್ಲಿ ಯಾರು ಇಲ್ಲದಿದ್ದರೂ ಹಾಗೇ ದಡದಡನೆ ಓಡಿ ಮತ್ತೆ ನಡೆಯಲು ಪ್ರಾರಂಭಿಸುತ್ತಾರೆ. ಅವರು ಎಷ್ಟು ಸುತ್ತು ನಡೆದರೂ ಇದು ಮಾತ್ರ ತಪ್ಪುವುದಿಲ್ಲ! ಆದರೆ ಬೇರೆಡೆ ಇಳಿಜಾರಾಗಿರುವಲ್ಲಿ ಮಾತ್ರ ಈ ರೀತಿ ದಡದಡನೆ ಓಡುವ ಚಾಳಿ ಅವರಿಗಿಲ್ಲ.
ಇನ್ನೊಬ್ಬ ಮಹನೀಯರಿದ್ದಾರೆ. ಅವರು ಸಿಮೆಂಟಿನ ಬೆಂಚಿನ ಮೇಲೆ ಕುಳಿತುಕೊಂಡು, ಹೊಟ್ಟೆಯ ಮೇಲೆ ಎರಡೂ ಕೈಗಳನ್ನು ಇಟ್ಟುಕೊಂಡು ಮಿಡುಕುತ್ತಾರೆ. ಮಿಡುಕುವುದು ಎಂಬುದು ಸರಿಯಾದ ಪದವೋ ಏನೋ ತಿಳಿಯುತ್ತಿಲ್ಲ. ಒಂದ ರೀತಿಯಲ್ಲಿ ಬೆಚ್ಚಿದವರಂತೆ ಮೈ ನಡುಗಿಸುತ್ತಿರುತ್ತಾರೆ. ಇದು ಆಗಾಗ ನಡೆಯುತ್ತಿರುತ್ತದೆ. ಅದನ್ನು ಕಂಡ ನಮ್ಮ ಪರಿಚಯದ ಸಹನಡಿಗೆದಾರರೊಬ್ಬರು ಅವರನ್ನು ಕಂಡಾಗಲೆಲ್ಲಾ ‘ಮಿಡುಕಪ್ಪ’ ಎಂದು ನಮಗೆ ಕೇಳಿಸುವಂತೆ ಹೇಳುತ್ತಾರೆ! ಅದೊಂದು ರೀತಿಯ ವ್ಯಾಯಾಮವಿರಬಹುದು. ಏಕೆಂದರೆ, ನಾಲ್ಕಾರು ದಿನಗಳು ಕಣ್ಣಿಗೆ ಬಿದ್ದು ಈಗ ಮಾಯವಾಗಿರುವ ಮಹಿಳೆಯೊಬ್ಬರೂ ಅದೇ ರೀತಿ ಮಾಡುತ್ತಿದ್ದರು.
ಇನ್ನೊಬ್ಬರಿದ್ದಾರೆ. ಅವರು ತಮ್ಮ ಎರಡೂ ಕಿವಿಗಳನ್ನು ತಮ್ಮ ಕೈಗಳಿಂದ ಎಳೆದುಕೊಳ್ಳುತ್ತಿರುತ್ತಾರೆ. ಅದನ್ನು ಐದೈದು ನಿಮಿಷ ಮಾಡುತ್ತಾರೆ. ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಅದನ್ನೆ ಮಾಡುತ್ತಾರೆ. ನಡುವೆ ಕೆನ್ನೆಗೆ ರಪರಪನೆ ಬಡಿದುಕೊಳ್ಳುತ್ತಾರೆ. ನಾನು ತುಂಬಾ ಹತ್ತಿರದಿಂದ ಅವರ ಕಿವಿಯ ಆಲೆಗಳನ್ನು ಗಮನಿಸಬೇಕೆಂದಿದ್ದೇನೆ. ಏಕೆಂದರೆ ಹಿಂದೊಮ್ಮೆ ಎ.ಎಕ್ಸ್.ಎನ್. ವಾಹಿನಿಯಲ್ಲಿ ಅತ್ಯಂತ ಉದ್ದ ಕಿವಿಯಾಲೆಗಳನ್ನು ಹೊಂದಿದ್ದವನೊಬ್ಬನಿಗೆ ಗಿನ್ನೆಸ್ ದಾಖಲೆಯ ಗೌರವ ಕೊಡುತ್ತಿರುವುದನ್ನು ನೋಡಿದ್ದೆ. ಈ ವ್ಯಕ್ತಿಯೇನಾದರೂ ಅದಕ್ಕೆ ತಯಾರಿ ನಡೆಸುತ್ತಿದ್ದಾರೋ ಎನ್ನುವ ಅನುಮಾನ ನನ್ನದು!

ಸುಮಾರು ಏಳೆಂಟು ವರ್ಷದ ಮುದ್ದಾದ ಹೆಣ್ಣುಮಗಳೊಬ್ಬಳು ಅವಳ ತಾತನೊಂದಿಗೆ ಆಗಾಗ ಪಾರ್‍ಕಿಗೆ ಬರುತ್ತಾಳೆ. ಅವಳು ಹೆಚ್ಚಿನ ಸಮಯವನ್ನು ಉಯ್ಯಾಲೆಯ ಸಮೀಪ ಕಳೆಯುತ್ತಾಳೆ. ಉಯ್ಯಾಲೆಯಲ್ಲಿ ಜೀಕಿಕೊಳ್ಳುವುದಿಲ್ಲ. ಆದರೆ ಆ ಉಯ್ಯಾಲೆಯನ್ನು ತೊಟ್ಟಿಲ ಹಾಗೆ ತೂಗುತ್ತಿರುತ್ತಾಳೆ! ಮಕ್ಕಳ ಆಸಕ್ತಿಯನ್ನು ನೋಡಿ ಅವರು ಮುಂದೇನಾಗುತ್ತಾರೆ ಎಂಬುದನ್ನು ಹೇಳಬಹುದು ಅಂತಾರೆ, ಕೆಲವರು. ಅದು ನಿಜವಾದರೆ ಈ ಹುಡುಗಿ ಒಳ್ಳೆಯ ತಾಯಿಯಾಗುತ್ತಾಳೆ ಎಂದು ಹೇಳಬಹುದು. ಇಂದಿನ ವೇಗದ ಜಗತ್ತಿನಲ್ಲಿ ಒಳ್ಳೆಯ ತಾಯಿಯಾಗುವುದೂ ಒಂದು ಸವಾಲೇ ಹೌದು. ಅದು ಏನೇ ಇರಲಿ, ಹೆಣ್ಣು ಮಕ್ಕಳಿಗೆ ಮಾತೃಭಾವ ಎಂಬುದು ಪ್ರಕೃತಿಸಹಜವಾಗಿ, ಹುಟ್ಟಿನಿಂದಲೇ ಬಂದುಬಿಟ್ಟಿರುತ್ತದೆ. ಅದು ಸಧಾ ಜಾಗೃತವಾಗಿದ್ದು, ಆಗಾ ಪ್ರಕಟಗೊಳ್ಳುತ್ತಿರುತ್ತದೆ ಎನ್ನಬಹುದು.
ಇನ್ನು ಕೆಲವು ಪಡ್ಡೆ ಹುಡುಗರಿದ್ದಾರೆ. ಅವರು ನಾನು ನೋಡಿದ ಹೆಚ್ಚಿನ ಸಮಯದಲ್ಲಿ ಸುಮ್ಮನೇ ನಿಂತು ಮಾತನಾಡುತ್ತಿರುತ್ತಾರೆ. ಇವರು ಯಾವಾಗ ವ್ಯಾಯಮ ಮಾಡುತ್ತಾರೆ, ಯಾವಾಗ ಜಾಗಿಂಗ್ ಮಾಡುತ್ತಾರೆ ಎನ್ನುವ ಕೆಟ್ಟ ಕುತೂಹಲ ನನಗೆ ತಿಂಗಳ ಹಿಂದೆ ಬರಬೇಕೆ. ಸರಿ ಪತ್ತೆ ದಾರಿಕೆಯಲ್ಲಿ ತೊಡಗಿಸಿಕೊಂಡೇ ಬಿಟ್ಟೆ. ಪ್ರತಿದಿನ ನಾಲ್ಲಿರುವಷ್ಟು ಹೊತ್ತು ಅವರ ಮೇಲೊಂದು ನನ್ನ ಕಣ್ಣಿಟ್ಟೆ. ಆಗ ನನ್ನ ಗಮನಕ್ಕೆ ಬಂದ ಭಯಂಕರ ಸತ್ಯವನ್ನು ಸ್ಪಷ್ಟ ಮಾಡಿಕೊಳ್ಳಲು ಒಂದು ವಾರ ಅವರನ್ನು ಸೂಕ್ಷ್ಮವಾಗಿ ಅವಲೋಕಿಸಿದೆ. ಯಾರಾದರು ಹುಡುಗಿಯರು ಹತ್ತಿರ ಬಂದ ನಂತರವಷ್ಟೇ ಅವರೂ ವ್ಯಾಯಾಮ ಮಾಡಲು ಶುರು ಮಾಡುತ್ತಿದ್ದರು.! ಯಾರಾದರು ಹುಡುಗಿಯರು ವಾಕಿಂಗ್ ಮಾಡುತ್ತಿದ್ದರಷ್ಟೇ ಇವರು ಜಾಗಿಂಗಿಗೆ ಹೊರಡುತ್ತಿದ್ದರು! ನಿಜವಾಗಿಯೂ ನನಗೆ ಆಶ್ಚರ್ಯವಾಯಿತು. ಆ ಹುಡುಗರು ಕೆಟ್ಟವರೇನಲ್ಲ. ಯಾರನ್ನೂ ರೇಗಿಸಿಲ್ಲ. ಅಸಭ್ಯವಾಗಿಯೂ ವರ್ತಿಸಿಲ್ಲ. ಆದರೆ ಅವರ ಈ ಅಭ್ಯಾಸ ಮಾತ್ರ ವಿಚಿತ್ರ. ಅದು ಆ ಹುಡುಗರ ಮನಸ್ಸಿನ ಪೂರ್ವನಿರ್ಧಾರಿತ ಯೋಜನೆಯೇ? ಇಲ್ಲಾ ಅವರಲ್ಲಿ ಯಾರಾದರೊಬ್ಬನ ಯೋಜನೆಯಾಗಿದ್ದು, ಅವನು ಉಳಿದವರನ್ನು ಉಪಾಯವಾಗಿ ನಿಯಂತ್ರಿಸುತ್ತಿದ್ದಾನೆಯೇ? ಹಲವಾರು ಪ್ರಶ್ನೆಗಳು ಕಾಡಲು ಶುರುವಾಯಿತು.
ಇದು ನನ್ನೊಬ್ಬನ ಅನಿಸಿಕೆಯಾಗಿರಲಿಲ್ಲ. ನಮ್ಮ ಪರಿಚಯದವರೊಬ್ಬರು ಇದೇ ರೀತಿಯ ಸಂಶಯವನ್ನು ವ್ಯಕ್ತಪಡಿಸಿದರು! ಆದರೆ ಆ ಹುಡುಗರ ಗುಂಪಿನ ಸಂಖ್ಯೆ ಒಂದೇ ಸಮನಾಗಿರುವುದಿಲ್ಲ. ಒಂದೊಂದು ದಿನ ಇಬ್ಬರೇ ಇದ್ದರೆ, ಇನ್ನೊಂದು ದಿನ ಏಳೆಂಟು ಜನರಿರುತ್ತಾರೆ. ಅವರಿಂದ ಯಾವುದೇ ತೊಂದರೆಯಿಲ್ಲ. ಅದರಿಂದಲೋ ಏನೋ ನನ್ನ ಮನಸ್ಸು ಅವರ ಬಗ್ಗೆ ಯೋಚಿಸುವುದನ್ನು ಬಿಟ್ಟಿತು. ಈಗ ಪಿಯುಸಿ ಪರೀಕ್ಷೆ ಹತ್ತಿರಕ್ಕೆ ಬಂದಂತೆ ಅವರು ಬರುವುದು ಕ್ರಮೇಣ ನಿಂತುಹೋಯಿತು!


ಪಿಯುಸಿ ಎಂದಾಕ್ಷಣ ಇನ್ನೊಂದು ಜೋಡಿ ನೆನಪಾಯಿತು. ಒಂದು ಹುಡುಗಿ, ಒಬ್ಬ ಹುಡುಗ ಒಂದಷ್ಟು ದಿನ ಪಾರ್ಕಿಗೆ ಬಂದು ಕಲ್ಲು ಬೆಂಚಿನ ಮೇಲೆ ಒಂದರ್ಧ ಗಂಟೆ ಕುಳಿತು, ಮಾತನಾಡಿ, ಫೋನಿನಲ್ಲೂ ಮಾತನಾಡಿ ಹೊರಟು ಹೋಗುತ್ತಿದ್ದರು. ಅವರಿಬ್ಬರೂ ಪಿಯುಸಿ ಸೈನ್ಸ್ ವಿದ್ಯಾರ್ಥಿಗಳೆಂದು ನನಗೊಂದು ದಿನ ತಿಳಿಯಿತು. ಹುಡುಗಿಯ ಕೈಯಲ್ಲಿದ್ದ ಟಿ.ಟಿ.ಶ್ರೀನಿವಾಸನ್ ಬರೆದಿರುವ ದ್ವಿತೀಯ ಪಿಯುಸಿ ಟೆಕ್ಸ್ಟ್ ಬುಕ್ ನನ್ನ ಕಣ್ಣಿಗೆ ಬಿದ್ದಿತ್ತು. ಈ ಇಬ್ಬರೂ ಟ್ಯೂಷನ್ ಪೂರ್ವ ಅಥವಾ ಟ್ಯೂಷನ್ನೋತ್ತರ, ಅಥವಾ ಟ್ಯೂಷನ್ ಬಂಕ್ ಬೇಟಿಗೆ ಇಲ್ಲಿಗೆ ಬರುತ್ತಿದ್ದರೆಂದು ಕಾಣುತ್ತದೆ. ಹುಡಗಿ ಸ್ಕೂಟಿಯಲ್ಲಿ ಬರುತ್ತಿದ್ದರೆ, ಆತ ಹೋಂಡಾ ಆಕ್ಟೀವಾದಲ್ಲಿ ಬರುತ್ತಿದ್ದ. ಬೆಳಗಿನ ಚುಮುಚಮು ಚಳಿಯಲ್ಲಿ, ನಸುಗತ್ತಲಿನಲ್ಲಿ ಪಾರ್ಕಿನ ಬೆಂಚಿನಲ್ಲಿ ಅಕ್ಕಪಕ್ಕ ಕುಳಿತು ಪ್ರೇಮದ ಕನಸುಗಳನ್ನು ಕಾಣುತ್ತಿದ್ದ ಆ ಯುವಪ್ರೇಮಿಗಳ ತುಂಬಾ ದಿನ ಬರಲಿಲ್ಲ. ಅವರಿಬ್ಬರೂ ಜೊತೆಯಲ್ಲಿದ್ದಷ್ಟು ಹೊತ್ತು ಏನು ಮಾತನಾಡಿಕೊಳ್ಳುತ್ತಿದ್ದರು ಎಂದು ನನಗೆ ತಿಳಿಯಲಿಲ್ಲ. ಆದರೆ ಹೆಚ್ಚಿನ ಹೊತ್ತು ಇಬ್ಬರಲ್ಲಿ ಒಬ್ಬರು ಫೋನಿನಲ್ಲಿ ಬೇರೊಬ್ಬರೊಂದಿಗೆ ಮಾತನಾಡುತ್ತಿದ್ದರು!
ಹೀಗೆ ನಾನು ಕಂಡಿದ್ದನ್ನೆಲ್ಲಾ ಉಪ್ಪುಕಾರ ಸೇರಿಸಿ ನನ್ನ ಶ್ರೀಮತಿಗೆ ಹೇಳುತ್ತಿರುತ್ತೇನೆ. ಆಗ ಅವಳು ಇದನ್ನೆಲ್ಲಾ ರೆಕಾರ್ಡ ಮಾಡಿಕೊಳ್ಳಬೇಕು, ಫೋಟೊ ತೆಗೆದುಕೊಳ್ಳಬೇಕು ಎನ್ನುವ ಭಯಂಕರ ಸಲಹೆಗಳನ್ನು ಒಮ್ಮೆ ಕೊಟ್ಟಳು. ಭಯಂಕರವೇಕೆಂದರೆ ಅವರವರ (ವಿಚಿತ್ರ) ಕರ್ಮದಲ್ಲಿ ತೊಡಗಿರುವವರ ಮುಂದೆ ನಾನು ಕ್ಯಾಮೆರಾ ಹಿಡಿದು ಹೋದರೆ ನನಗೆ ಧರ್ಮದೇಟು ಬೀಳುವುದರಲ್ಲಿ ಸಂದೇಹವಂತೂ ನನಗೆ ಉಳಿದಿಲ್ಲ, ಅದಕ್ಕೆ! ಆದ್ದರಿಂದ ನಾನು ಇಲ್ಲಿ ಬಳಸಿಕೊಂಡಿರುವ ಫೋಟೋಗಳು ಅಂತರ್ಜಾಲದ ಕೃಪೆಯಿಂದ ದೊರೆತವುಗಳು. ಆ ಅಪರಿಚಿತ, ಅನಾಮಿಕ ಕಲಾವಿದರಿಗೆ ನಾನು ಆಭಾರಿಯಾಗಿದ್ದೇನೆ.

3 comments:

sunaath said...

ಸತ್ಯನಾರಾಯಣ,
ನಿಮ್ಮ ‘ಪಾರ್ಕಾಯಣ’ ಸೊಗಸಾಗಿದೆ. ಈಗ ನನಗೂ ಸಹ ಬೆಳಿಗ್ಗೆ ವಾಕಿಂಗ್ ಹೋಗಬೇಕೆನ್ನುವ ಹುಕಿ ಬರ್ತಾ ಇದೆ!

ಬಿಸಿಲ ಹನಿ said...

ಸತ್ಯನಾರಾಯಣ,
ಬೆಳಗಿನ ವಾಕ್‍ನೊಂದಿಗೆ ಬಿಚ್ಚಿಕೊಳ್ಳುವ ಬೇರೆ ಬೇರೆಯವರ ಬದುಕಿನ ವೈಖರಿಗಳನ್ನು ನಿಮ್ಮದೇ ಶೈಲಿಯಲ್ಲಿ ಚನ್ನಾಗಿ ನಿರೂಪಿಸಿದ್ದೀರಿ.ನಾನೂ ನಿಮ್ಮಂತೆಯೇ ಬೆಳಗಿನ ವಾಕ್ ಆರಂಭಿಸಿ ಆರಂಭಿಸಿ ಅದೆಷ್ಟು ಸಲ ಬಿಟ್ಟಿದ್ದೇನೋ ಗೊತ್ತಿಲ್ಲ.ಒಳ್ಳೆಯ ಬರಹಕ್ಕೆ ಥ್ಯಾಂಕ್ಸ್.

RAMESH C said...

tuMba cennaagide. naanuu saha namma pakkada laoutge hOgi prati dina vaak maadteeni. aadre nimma anubhava nanage innuu aagilla.