Monday, May 18, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 15

ಎರಡೆರಡು ಬಾರಿ ಕಟಿಂಗ್ ಮಾಡಿಸಿದರು!
ಹಾಸ್ಟೆಲ್ಲಿನ ಎಲ್ಲರಿಗೂ ನಾಗರಾಜ ಎಂಬ ಕ್ಷೌರಿಕ ಬಂದು ಕಟಿಂಗ್ ಮಾಡಿ ಹೋಗುತ್ತಿದ್ದ. ಎರಡು ತಿಂಗಳಿಗೊಮ್ಮೆ ಆ ಮಹಾಯಜ್ಞ ನಡೆಯುತ್ತಿತ್ತು. ಭಾನುವಾರ ಬೆಳಿಗ್ಗೆಯೇ ಬಂದು ಹನ್ನೆರಡು ಗಂಟೆಯ ಹೊತ್ತಿಗೆ, ಹಾಸ್ಟೆಲ್ಲಿನಲ್ಲಿ ಅವತ್ತು ಇದ್ದ ಎಲ್ಲರಿಗೂ ಕಟಿಂಗ್ ಮಾಡಿ ಮುಗಿಸುತ್ತಿದ್ದ! ಯಾರೂ ಬೇಡ ಎನ್ನುವಂತಿಲ್ಲ. ವಾರ್ಡನ್ನರೇ ಮುಂದೆ ನಿಂತು ಈ ಕೆಲಸವನ್ನು ಮಾಡಿಸುತ್ತಿದ್ದರು. ಕೇವಲ ಐದು ಹತ್ತು ನಿಮಿಷಗಳಲ್ಲೇ ಒಬ್ಬೊಬ್ಬರ ಕಟಿಂಗ್ ಮುಗಿದು ಹೋಗುತ್ತಿತ್ತು. ಆತ ಎಷ್ಟೊಂದು ಕೆಟ್ಟದಾಗಿ ಕಟಿಂಗ್ ಮಾಡುತ್ತಿದ್ದ ಎಂದರೆ, ನಾವು ಕಟಿಂಗ್ ಮುಗಿದ ಮೇಲೆ ತಲೆ ಬಾಚಿ ನಿಂತರೆ ಇಲಿ ಕೆರೆದ ಹಾಗೆ ಕಾಣುತ್ತಿತ್ತು. ಆದ್ದರಿಂದ ಅವನು ಬರುವುದು ತಿಳಿದರೆ ಹೇಗಾದರೂ ಸರಿಯೆ ನಾವು ತಪ್ಪಿಸಿಕೊಳ್ಳುತ್ತಿದ್ದೆವು. ಮನೆಯಲ್ಲಿ ಬಯ್ಯಿಸಿಕೊಂಡರೂ ಎರಡು ರೂಪಾಯಿ ಕಿತ್ತುಕೊಂಡು ಬೇರೆಡೆ ನಮಗೆ ಬೇಕಾದ ಹೇರ್ ಸ್ಟೈಲ್ ಮಾಡಿಸಿಕೊಂಡು ಬೀಗುತ್ತಿದ್ದೆವು.
ಒಮ್ಮೆ ಭಾನುವಾರ ಬೆಳಿಗ್ಗೆ ಮಜವಾಗಿ ಮಲಗಿದ್ದ ನಮಗೆ, ಎಚ್ಚರವಾಗುವಷ್ಟರಲ್ಲಿ ನಾಗರಾಜ ಬಂದು ಕುಳಿತಿದ್ದ. ಅಂದು ತಪ್ಪಿಸಿಕೊಳ್ಳುವಂತಿರಲಿಲ್ಲ. ಕೂದಲೂ ಬೆಳೆದಿತ್ತು. ವಾರ್ಡನ್, ನಾನು ಏನೇ ಸಬೂಬು ಹೇಳಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ನನಗೊಬ್ಬನಿಗೆ ರಿಯಾಯಿತಿ ತೋರಿಸಿದರೆ ಬೇರೆಯವರಿಗೂ ತೋರಿಸಬೇಕಾಗಿತ್ತು. ಆತನ ಕೆಲಸ ಶುರುವಾಗಿ ಐದಾರು ಜನ ಮುಗಿಯುವಷ್ಟರಲ್ಲಿ ವಾರ್ಡನ್ ಎಲ್ಲೋ ಹೋಗಿ ಬರುತ್ತೇನೆ ಎಂದು ಭಟ್ಟರುಗಳಿಗೆ ಇನ್‌ಚಾರ್ಜ್ ವಹಿಸಿ ಹೋದರು. ಇದೇ ಸುಸಮಯವೆಂದು ನಾಗರಾಜನ ಮುಂದೆ ಕುಳಿತ ನಾನು ಆತನ ಕೈಗೆ ಒಂದು ರೂಪಾಯಿ ಹಾಕಿ ‘ಸ್ಟೆಪ್ ಕಟಿಂಗ್ ಮಾಡು’ ಎಂದೆ. ಆತ ಸೊಗಸಾಗಿಯೇ ಕಟಿಂಗ್ ಮಾಡಿ ಮುಗಿಸಿದ. ನನ್ನನ್ನು ನೋಡಿ ಇನ್ನೂ ಐದಾರು ಜನ ಅದೇ ಮಾರ್ಗ ಹಿಡಿದರು. ವಾರ್ಡನ್ ಬರುವಷ್ಟರಲ್ಲಿ ನಾವು ಬೋರ್‌ವೆಲ್ ಬಳಿಗೆ ಹೋಗಿ ಸ್ನಾನ ಮಾಡಿ ವಾಪಸ್ಸಾಗಿದ್ದೆವು.
ಅಂದು ಅವರ ಜೊತೆಯಲ್ಲಿ ಯಾರೋ ಬಂದಿದ್ದರಿಂದ ಅವರೂ ನಮ್ಮನ್ನು ಗಮನಿಸಲಿಲ್ಲ. ಹಾಸ್ಟೆಲ್ಲಿನ ಹಿಂದೆ ಇನ್ನೂ ಕಟಿಂಗ್ ಕೆಲಸ ಮುಂದುವರೆದೇ ಇತ್ತು. ಬಂದವರಿಗೆ ಹಾಸ್ಟೆಲ್‌ನ್ನು ಪರಿಚಯ ಮಾಡಿಕೊಡುತ್ತಾ ಹಾಸ್ಟೆಲ್ ಹಿಂದಕ್ಕೆ ಬಂದರು. ಬಂದಿದ್ದಾತ ಮಿಲಿಟರಿಯಲ್ಲಿದ್ದವನು. ಆ ರೀತಿ ತುಂಡಾಗಿ ಕಟಿಂಗ್ ಮಾಡುತ್ತಿರುವುದನ್ನು ನೋಡಿ ಅವನಿಗೆ ಸಂತೋಷವಾಯಿತೆಂದು ಕಾಣುತ್ತದೆ. ‘ಇನ್ನು, ಇನ್ನು ಶಾರ್ಟ್ ಮಾಡು’ ಎಂದು ನಾಗರಾಜನಿಗೆ ಹೇಳತೊಡಗಿದ್ದ. ಸ್ಟೆಪ್ ಕಟಿಂಗ್ ಮಾಡಿಸಿಕೊಂಡಿದ್ದ ನಾವು ಒಂದಿಬ್ಬರು ಅದೇ ವೇಳೆಗೆ ಅಲ್ಲಿದ್ದೆವು.
ನಮ್ಮನ್ನು ನೋಡಿದ ಆತ ‘ಏನು ನಿಮ್ಮ ಕಟಿಂಗ್ ಆಯಿತೆ?’ ಎಂದ. ನಾವು ಹೌದೆಂದು ತಲೆಯಾಡಿಸಿದೆವು. ‘ಏನು ಅದನ್ನು ಯಾರಾದರೂ ಕಟಿಂಗ್ ಎನ್ನುತ್ತಾರೆಯ? ವಾರ್ಡನ್ ಸಾಹೇಬರೆ ನೋಡಿರಿಲ್ಲಿ. ಇವರಿಗೆ ಇನ್ನಷ್ಟು ಶಾರ್ಟ್ ಆಗಿ ಕಟಿಂಗ್ ಮಾಡಿಸಿ’ ಎಂದು ನಾಗರಾಜನನ್ನು ಕರೆದು, ನಮಗೆ ಷಾರ್ಟಾಗಿ ಕಟಿಂಗ್ ಮಾಡಲು ಆರ್ಡರ್ ಮಾಡಿದ. ಅವತ್ತೇಕೋ ವಾರ್ಡನ್ ಕೂಡಾ ಅವನ ಪರವಾಗಿಯೇ ಇದ್ದರು! ವಿಧಿಯಿಲ್ಲದೆ ನಾವು ಮತ್ತೊಮ್ಮೆ ಕಟಿಂಗಿಗೆ ತಲೆ ಕೊಡಬೇಕಾಯಿತು!


‘ತಾನು ಮಾಡಿದ ಕಟಿಂಗನ್ನೂ ಒಬ್ಬರು ‘ಚೆನ್ನಾಗಿದೆ’ ಎಂದರಲ್ಲ, ಅದೂ ಮಿಲಿಟರಿಯಲ್ಲಿರುವವರು’ ಎಂದು ಜಂಭ ಕೊಚ್ಚಿಕೊಳ್ಳುತ್ತಾ ಉತ್ಸಾಹದಿಂದಲೇ ನಾಗರಾಜ ತನ್ನ ಕತ್ತರಿಸುವ ಕಾಯಕವನ್ನು ಮುಂದುವರೆಸಿದ. ಹತ್ತೇ ನಿಮಿಷದಲ್ಲಿ, ಸುಂದರವಾದ ಸ್ಟೆಪ್ ಕಟಿಂಗ್‌ನಿಂದ ಕಂಗೊಳಿಸುತ್ತಿದ್ದ ನಮ್ಮ ತಲೆ ಅರ್ಧಂಬರ್ಧ ಪುಕ್ಕ ಕಿತ್ತ ಕೋಳಿಯಂತಾಗಿತ್ತು. ನಮ್ಮ ಸಿಟ್ಟನ್ನು ನಾವು ಯಾರ ಮೇಲೆ ತೋರಿಸುವುದು? ನಮ್ಮಂತೆಯೇ ಕಟಿಂಗ್ ಮಾಡಿಸಿಕೊಂಡು ಅವಿತು ಕುಳಿತಿದ್ದ ಬೇರೆಯವರ ಹೆಸರನ್ನೂ ನಾವು ಅವರಿಗೆ ಹೇಳಿದೆವು. ಸ್ವತಃ ಅವರೇ ಎದ್ದು ಹುಡುಕಾಡಿ ಉಳಿದ ಮೂವರನ್ನೂ ಕರೆದು ತಂದು ಅವರ ತಲೆಯನ್ನು ಕೋಳಿ ತರಿದಂತೆ ತರಿಸಿಬಿಟ್ಟರು!
ಹಾಗೇ ಮಾತಾನಾಡುವಾಗ ತಾನು ಹಾಕಿಕೊಂಡಿದ್ದ ಟೋಪಿಯನ್ನು ಆತ ತೆಗೆದಾಗ ಆತನ ಕಟಿಂಗ್ ಕೂಡಾ ನಮ್ಮದರಷ್ಟೇ ಕೆಟ್ಟದಾಗಿರುವುದನ್ನು ನೋಡಿ ನಮಗೆ ಸಮಾಧಾನವಾಯಿತು! ಆತನ ಕೆಟ್ಟ ಕಟಿಂಗೇ ಆತ ನಮಗೆ ಅಷ್ಟೊಂದು ಆಸಕ್ತಿ ವಹಿಸಿ ನಮಗೂ ಕೆಟ್ಟ ಕಟಿಂಗ್ ಮಾಡಿಸಲು ಕಾರಣವಾಗಿತ್ತು.
ಆದರೆ ನಮ್ಮ ಕಟಿಂಗ್ ಪುರಾಣವನ್ನು ನಾವು ಅಷ್ಟಕ್ಕೆ ಬಿಡಲು ಸಿದ್ಧರಿರಲಿಲ್ಲ. ಕಟಿಂಗ್ ಮಾಡಿದ ನಾಗರಾಜನ ಬಳಿ ನಮ್ಮ ಹಣವನ್ನು ವಾಪಸ್ ಕೊಡಲು ಜಗಳ ಶುರು ಮಾಡಿದೆವು. ಆತನದು ಒಂದೇ ಪಟ್ಟು, ‘ನಾನು ನೀವು ಹೇಳಿದಂತೆ ಸ್ಟೆಪ್ ಕಟಿಂಗ್ ಮಾಡಿರುವಾಗ ನಾನೇಕೆ ದುಡ್ಡು ವಾಪಸ್ ಕೊಡಬೇಕು?! ಇನ್ನು ನೀವೇ ಏನಿದ್ದರೂ ಎರಡನೇ ಬಾರಿಗೆ ಕಟಿಂಗ್ ಮಾಡಿಸಿಕೊಂಡಿದ್ದಕ್ಕೆ ದುಡ್ಡು ಕೊಡಬೇಕು ಗೊತ್ತಾ?’ ಎಂಬುದು ಅವನ ವಾದ. ಆದರೆ, ನಾವು ‘ದುಡ್ಡು ಕೊಟ್ಟಿದ್ದು ಸ್ಟೆಪ್ ಕಟಿಂಗ್ ಮಾಡಲಲ್ಲ! ಸ್ಟೆಪ್ ಕಟಿಂಗ್ ಮಾಡಿದ ಮೇಲೆಯೇ ನೀನು ನಿನ್ನ ಕೆಟ್ಟ ಕಟಿಂಗನ್ನು ಎಲ್ಲರಿಗೂ ಮಾಡುವುದರಿಂದ, ಅದನ್ನು ಅಷ್ಟಕ್ಕ್ಕೆ ನಿಲ್ಲಿಸಲು ಮಾತ್ರ ನಿನಗೆ ಹಣ ಕೊಟ್ಟಿದ್ದು. ನೀನು ಹೇಳಿದ್ದೇ ನಿಜವಾಗಿದ್ದಲ್ಲಿ ಸ್ಟೆಪ್ ಕಟಿಂಗ್ ಮಾಡಿದ ಮೇಲೆ ಮತ್ತೆ ಕಟಿಂಗ್ ಮಾಡಲಾಗುವುದಿಲ್ಲ ಎಂದು ಏಕೆ ಹೇಳಲಿಲ್ಲ’ ಎಂಬುದು ನಮ್ಮ ವಾದವಾಗಿತ್ತು. ‘ಆತ ಕೊಡ; ನಾವು ಬಿಡ’ ಎಂಬಂತಾಗಿತ್ತು. ಕೊನೆಯ ಅಸ್ತ್ರವಾಗಿ ನಾನು ‘ನೀನು ದುಡ್ಡು ತೆಗೆದುಕೊಂಡಿದ್ದನ್ನು ವಾರ್ಡನ್‌ಗೆ ಹೇಳಿ, ಮುಂದಿನ ಸಾರಿಯಿಂದ ನೀನು ಇಲ್ಲಿಗೆ ಬರದಂತೆ ಮಾಡುತ್ತೇವೆ’ ಎಂದುಬಿಟ್ಟೆ.
ಕೇವಲ ‘ವಾರ್ಡನ್‌ಗೆ ಹೇಳುತ್ತೇವೆ’ ಎಂದಿದ್ದರೆ ಆತ ಕೇರ್ ಮಾಡುತ್ತಿದ್ದನೋ ಇಲ್ಲವೋ. ಆದರೆ ‘ಮುಂದಿನ ಸಾರಿ ನೀನು ಬರದಂತೆ ಮಾಡುತ್ತೇವೆ’ ಎಂದ ನನ್ನ ಮಾತು ಚೆನ್ನಾಗಿಯೇ ಪರಿಣಾಮ ಬೀರಿತ್ತು. ಕೊನೆಗೆ ಆತನೇ ಪುಸಲಾಯಿಸಿ, ಐದೂ ಜನರಿಗೆ ಐವತ್ತು ಐವತ್ತು ಪೈಸೆ ಕೊಡುವ ಮಾತು ತೆಗೆದ. ಆದರೆ ಪಟ್ಟು ಬಿಡದ ನಾವು ಪೂರ್ತಿ ಹಣ ಬೇಕೆಂದು ಹಠ ಮಾಡಿದೆವು. ಆ ಹಣ ಆತ ಬಯಸದೇ ಬಂದುದ್ದಾಗಿತ್ತು. ನಮ್ಮಿಂದ ಹಣ ಪಡೆದ ಮೇಲೆ ಸಂಜೆಗೆ ಏನೇನು ಕಾರ್ಯಕ್ರಮವನ್ನು ಆತ ಊಹಿಸಿದ್ದನೋ ಏನೋ. ಪಾಪ. ಅದಕ್ಕೆ ಅಷ್ಟು ಬೇಗ ಸಂಚಕಾರ ಬಂದಿತೆಂದು ಆತ ಊಹಿಸಿರಲಿಕ್ಕಿಲ್ಲ. ಅದಕ್ಕೇ ಆತ ಅಷ್ಟು ಸುಲಭವಾಗಿ ಹಣ ವಾಪಸ್ ಮಾಡಲು ನಿರಾಕರಿಸಿದ್ದು. ‘ಏನೋ ಇವತ್ತೊಂದು ಚೂರು ಬ್ರಾಂದಿ ಹಾಕ್ಕೊಂಡು ಮಜ ಮಾಡಾನ ಅಂದ್ರೆ ಅದನ್ನು ಕಿತ್ಕೋತಿರಲ್ಲ. ನಿಮ್ಗೆ ಒಳ್ಳೆದಾಗಲ್ಲ. ಓದೋ ಹುಡುಗರು ಹಿಂಗೆಲ್ಲ ಮಾಡಬಾರದು’ ಎಂದು ರಾಗ ಎಳೆದ. ಕೊನೆಗೆ ನಮಗೇ ಬೇಸರವಾಗಿ ‘ಹೋಗಲಿ, ಒಬ್ಬೊಬ್ಬರಿಗೆ ಎಪ್ಪತ್ತೈದು ಪೈಸೆ ಕೊಟ್ಟುಬಿಡು. ನಾವು ಯಾರಿಗೂ ಹೇಳುವುದಿಲ್ಲ’ ಎಂದು ರಾಜಿ ಮಾಡಿಕೊಂಡೆವು! ನಾಗರಾಜ ಗೊಣಗುಡುತ್ತಲೇ ಹಣ ಎಣಿಸಿಕೊಟ್ಟ!
ಸಿನಿಮಾ ಹುಚ್ಚು - ಹಾಫ್ ಟಿಕೆಟ್ ಪ್ಲಾನ್
ಹಾಸ್ಟೆಲ್ಲಿಗೆ ತರಕಾರಿಯನ್ನು ತರುವ ವ್ಯವಸ್ಥೆಯ ಬಗ್ಗೆ ಮೊದಲೇ ಹೇಳಿದ್ದೇನೆ. ಆದರೆ ಅದನ್ನು ತರಲು ಹೋಗಲು ಹುಡುಗರಲ್ಲಿ ಕಾಂಪಿಟೇಷನ್ ಇತ್ತು ಎಂಬುದೂ ಸತ್ಯ. ಸಾಮಾನ್ಯವಾಗಿ ವಾರ್ಡನ್ ಅಥವಾ ಭಟ್ಟರು ಚನ್ನರಾಯಪಟ್ಟಣಕ್ಕೆ ಹೋದಾಗ ತರಕಾರಿ ತರುತ್ತಿದ್ದರು. ಆದರೆ ಹೆಚ್ಚಿನ ದಿನಗಳಲ್ಲಿ ಯಾರಾದರೊಬ್ಬ ಹುಡುಗನನ್ನು ಕಳುಹಿಸಿ ತರಿಸಲಾಗುತ್ತಿತ್ತು. ಅದಕ್ಕಾಗಿಯೆ ಇದ್ದ ಒಂದು ಪುಸ್ತಕವನ್ನು ತೆಗೆದುಕೊಂಡು ಹೋಗಿ ತರಕಾರಿ ಅಂಗಡಿಯವನಿಗೆ ಕೊಟ್ಟರೆ, ಆತ ತನಗೆ ತೋಚಿದ ತರಕಾರಿಯನ್ನು ಒಂದು ಚೀಲಕ್ಕೆ ಹಾಕಿ ಕಟ್ಟಿಕೊಡುತ್ತಿದ್ದ. ಅದನ್ನು ಒಂದು ಆಟೋಗೆ ಹಾಕಿಕೊಂಡು ಬಸ್‌ಸ್ಟ್ಯಾಂಡ್‌ಗೆ ತಂದು ಬಸ್‌ನಲ್ಲಿ ಹಾಕಿಕೊಂಡು ಕುಂದೂರುಮಠಕ್ಕೆ ತರುವುದು ಹುಡುಗನ ಕೆಲಸವಾಗಿರುತ್ತಿತ್ತು. ಅದಕ್ಕಾಗಿ ಆತನಿಗೆ ಕೊಡುತ್ತಿದ್ದುದ್ದು ಕೇವಲ ಇಪ್ಪತ್ತು ರೂಪಾಯಿ. ಆ ಇಪ್ಪತ್ತು ರೂಪಾಯಿಯಲ್ಲೇ ಹೇಗೋ ಒಂದೆರಡು ರೂಪಾಯಿ ಉಳಿಸಿಬಿಡಬಹುದಿತ್ತು. ಆ ಉಳಿತಾಯದಲ್ಲೇ ಒಂದು ಮಾರ್‍ನಿಂಗ್ ಷೋ ಅನ್ನೊ ಮ್ಯಾಟನಿಯನ್ನೊ ನೋಡಿಕೊಂಡು ಬರುವ ಅವಕಾಶ ಇದ್ದುದ್ದರಿಂದಲೇ ತರಕಾರಿ ತರಲು ಹುಡುಗರ ನಡುವೆ ಪೈಪೋಟಿ ಇರುತ್ತಿತ್ತು.
ಹಾಸ್ಟೆಲ್ಲಿನಲ್ಲಿದ್ದ ಬಹುತೇಕ ಹುಡುಗರಿಗೆ ಸಿನಿಮಾ ಹುಚ್ಚು ಬಹಳವೇ ಇತ್ತು. ಹತ್ತಿರದ ಅಂದರೆ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿದ್ದ ಬಾಗೂರಿನಲ್ಲಿ ಒಂದು ಟೆಂಟ್ ಇತ್ತು. ಶನಿವಾರ ಭಾನುವಾರ ಮತ್ತು ರಜಾದಿನಗಳಲ್ಲಿ ಊರಿಗೆ ಹೋಗದೆ ಹಾಸ್ಟೆಲ್ಲಿನಲ್ಲೇ ಉಳಿದಿರುತ್ತಿದ್ದವರೆಲ್ಲ ಸೇರಿಕೊಂಡು ಬಾಗೂರಿಗೆ ನಡೆದುಕೊಂಡು ಹೋಗಿ ಸಿನಿಮಾ ನೋಡಿ, ಮತ್ತೆ ನಡೆದುಕೊಂಡೇ ಬರುತ್ತಿದ್ದರು!
ಒಮ್ಮೊಮ್ಮೆ ಬಾಗೂರಿನ ಟೆಂಟ್‌ನಲ್ಲಿ ಹಾಕುತ್ತಿದ್ದ ಸಿನಿಮಾಗಳೆಲ್ಲ ಹಳೆಯವು ಅನ್ನಿಸಿ ಚನ್ನರಾಯಪಟ್ಟಣದ ಟಾಕೀಸಿಗೂ ಸಿನಿಮಾಕ್ಕೆ ಹೋಗುವ ಹವ್ಯಾಸ ನಮ್ಮಲ್ಲಿತ್ತು. ಹೋಗಿಬರಲು ಐದು ರೂಪಾಯಿ, ಎರಡು ಸಿನಿಮಾಗಳಿಗೆ ನಾಲ್ಕು ರೂಪಾಯಿ ಹೀಗೆ ಒಟ್ಟಿಗೆ ಸುಮಾರು ಹತ್ತು ರೂಪಾಯಿ ಖರ್ಚು ಮಾಡುವ ತಾಕತ್ತಿದ್ದವರು ಚನ್ನರಾಯಪಟ್ಟಣಕ್ಕೆ ಹೋಗಿ ಒಂದೇ ದಿನ ಎರಡು ಸಿನಿಮಾ ನೋಡಿಕೊಂಡು ಬರುತ್ತಿದ್ದೆವು.
ಬಸ್ ಚಾರ್ಜನ್ನು ಏನಾದರೂ ಮಾಡಿ ಉಳಿಸುವ ಅಥವಾ ಕಡಿಮೆ ಮಾಡುವ ಹಲವಾರು ಉಪಾಯಗಳನ್ನು ಹಾಸ್ಟೆಲ್ ಹುಡುಗರು ಶೋಧಿಸುತ್ತಿದ್ದರು. ಮುಂದಿನ ಸ್ಟೇಜ್ ಸಿಗುವವರೆಗೂ ಕಂಡಕ್ಟರನ ಕಣ್ಣನ್ನು ಹೇಗೋ ತಪ್ಪಿಸಿ, ಸ್ಟೇಜ್ ಕಳೆದ ನಂತರ ಟಿಕೆಟ್ ತೆಗೆದುಕೊಂಡರೆ ಒಂದು ಸ್ಟೇಜಿನ ಹಣ ಅಂದರೆ ಸುಮಾರು ಒಂದು ರೂಪಾಯಿ ಉಳಿತಾಯವಾಗುತ್ತಿತ್ತು. ಕಂಡಕ್ಟರನ ಕೈಗೆ ಸಿಕ್ಕಿ ಬಯ್ಯಿಸಿಕೊಂಡರೂ, ನಿದ್ದೆ ಮಾಡುತ್ತಿದ್ದೆವೆಂದೋ, ಮರೆತವೆಂದೋ ಹಸಿಹಸಿ ಸುಳ್ಳು ಹೇಳುವುದು ಅಭ್ಯಾಸವಾಗಿತ್ತು. ಇನ್ನು ಕೆಲವರು ಕಂಡಕ್ಟರನ ಕೈಯಲ್ಲಿ ಬಯ್ಯಿಸಿಕೊಳ್ಳುವ ಉಸಬಾರಿಯೇ ಬೇಡ ಎಂದು ಒಂದು ಸ್ಟೇಜ್ ಕಳೆಯುವವರೆಗೂ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ ಚಾರ್ಜ ಮಾತ್ರ ಕೊಟ್ಟು ಒಂದು ರೂಪಾಯಿ ಉಳಿತಾಯ ಮಾಡುತ್ತಿದ್ದರು.
ಈ ಬಸ್‌ಚಾರ್ಜ್ ಉಳಿಸಲು ನನಗೆ ಕೆಲವೊಂದು ಅನುಕೂಲವಿದ್ದವು. ಅದರಲ್ಲಿ ಮುಖ್ಯವಾಗಿ ಕಂಡಕ್ಟರ್‌ಗಳ ಸ್ನೇಹ. ಚನ್ನರಾಯಪಟ್ಟಣದಿಂದ ಕುಂದೂರುಮಠಕ್ಕೆ ಒಂದು ರಿಟರ್ನ್ ಬಸ್ಸು ಬಂದು ಹೋಗುತ್ತಿತ್ತು. ಅದು ಬೆಳಿಗ್ಗೆ ಒಂಬತ್ತು ಗಂಟೆಯ ವೇಳೆಗೆ ಬರುತ್ತಿತ್ತು. ಅದರಲ್ಲಿ ಬರುತ್ತಿದ್ದ ಪೇಪರನ್ನು ನಾನು ಮೊದಲು ತಂದು ಓದಿದ ನಂತರವೇ ವಾರ್ಡನ್‌ಗೆ ಕೊಡುತ್ತಿದ್ದೆ. ಅಲ್ಲದೆ ಒಂದೊಂದು ದಿನ ಚೆಕ್ಕಿಂಗ್ ನಡೆಸುವವರು ಬಂದು ಆ ಬಸ್ಸಿಗೆ ಕಾಯುತ್ತಾ ಮರೆಯಲ್ಲಿ ನಿಂತಿರುತ್ತಿದ್ದರು. ಆಗ ನಾನು ಬಸ್ ಬರುವ ದಾರಿಯಲ್ಲಿ ಓಡುತ್ತಲೋ, ಇಲ್ಲವೇ ಯಾವುದಾದರೂ ಸೈಕಲ್ಲಿನಲ್ಲಿ ಬರುತ್ತಲೋ ಕಂಡಕ್ಟರ್‌ಗೆ ಸುದ್ದಿ ಮುಟ್ಟಿಸಿಬಿಡುತ್ತಿದ್ದೆ. ಅಂದು ಕಂಡಕ್ಟರ್ ಖುಷಿಯಿಂದ ನನಗೆ ಒಂದು ರೂಪಾಯಿ ಕೊಡುತ್ತಿದ್ದ. ಒಂದೊಂದು ದಿನ ಮಂಜಣ್ಣನ ಹೋಟೆಲಿನಲ್ಲಿ ಎರಡು ಇಡ್ಲಿಯನ್ನು ಕೊಡಿಸುತ್ತಿದ್ದ. ಈ ರೀತಿ ಹಾಗೂ ತರಕಾರಿ ತರಲು ಹೆಚ್ಚಿಗೆ ಹೋಗಿ ಬರುತ್ತಿದ್ದ ನನಗೆ ಕಂಡಕ್ಟರ್‌ಗಳ ಪರಿಚಯವಿತ್ತು. ಈ ಪರಿಚಯದ ಮೇಲೆ, ಕೆಲವೊಮ್ಮೆ ಕೇವಲ ಐವತ್ತು ಪೈಸೆ ಅಷ್ಟೆ ಕೊಟ್ಟು ಚನ್ನರಾಯಪಟ್ಟಣಕ್ಕೆ ಟಿಕೆಟ್ ಇಲ್ಲದೆ ಹೋಗಿದ್ದೂ ಇದೆ! ಈ ಘಟನೆಯ ಹಿನ್ನೆಲೆಯಲ್ಲಿ ಹೇಳುವುದಾದರೆ, ಆಗ ನಾನು ಭ್ರಷ್ಟಾಚಾರದ ಮಹಾನ್ ಪೋಷಕನಾಗಿದ್ದೆ!!
ಬಸ್‌ಚಾರ್ಜ್ ಉಳಿಸುವ ಇನ್ನೊಂದು ಸುಲಭೋಪಾಯವೆಂದರೆ ಹಾಫ್ ಟಿಕೆಟ್ ತೆಗೆದುಕೊಳ್ಳುವುದು. ಇದು ಸಾಮಾನ್ಯವಾಗಿ ರಾತ್ರಿ ವಾಪಸ್ ಬರುವಾಗ ಹಾಲ್ಟ್ ಬಸ್‌ನಲ್ಲಿ ನಡೆಯುತ್ತಿದ್ದ ಆಟ. ಬಸ್ಸಿನಲ್ಲಿ ಒಬ್ಬೊಬ್ಬರು ಒಂದೊಂದು ಕಡೆ ಕುಳಿತುಕೊಳ್ಳುತ್ತಿದ್ದರು. ಯಾರೋ ಒಬ್ಬ ಸ್ವಲ್ಪ ದೊಡ್ಡ ಹುಡುಗನಂತಿರುವವನು ಕಂಡಕ್ಟರ್‌ಗೆ, ಒಂದು ಫುಲ್ ಎರಡು ಹಾಫ್ ಎಂದೋ, ಎರಡು ಫುಲ್ ಎರಡು ಹಾಫ್ ಎಂದೋ ಹೇಳಿ ಟಿಕೆಟ್ ತೆಗೆದುಕೊಳ್ಳುವುದು. ಹಿಂದಿನವರನ್ನು ಕೇಳಿದಾಗ ಮುಂದೆ ತೆಗೆದುಕೊಂಡಿದ್ದಾರೆ ಎನ್ನುವುದು. ಒಂದು ದಿನ, ಫುಲ್ ಟಿಕೆಟ್‌ಗೆ ದುಡ್ಡಿದ್ದರೂ, ಅಂದು ಬಸ್ ಬರುವುದು ಲೇಟಾಗಿ, ಕಣ್ಣು ಮೂಗುಗಳಿಗೆ ನಯನಮನೋಹರವಾಗಿ ಕಾಣುತ್ತಿದ್ದ ಪಾನೀಪುರಿಯನ್ನು ತಿಂದು ಖರ್ಚಾಗಿದ್ದುದರಿಂದ, ಸ್ವಲ್ಪ ದೊಡ್ಡ ಹುಡುಗನಂತೆ ಕಾಣುತ್ತಿದ್ದ ನನಗೇ, ಹಾಫ್ ಟಿಕೆಟ್‌ನ್ನು, ಇನ್ನೊಬ್ಬ ಸಣ್ಣ ಹುಡುಗ ತೆಗೆದುಕೊಳ್ಳುವಂತೆ ಏರ್ಪಾಡು ಮಾಡಲಾಗಿತ್ತು. ಎರಡೂ ಹಾಫ್ ಟಿಕೆಟ್ ಎಂದಾಗ ಕಂಡಕ್ಟರ್‌ಗೆ ಅನುಮಾನ ಬಂದು ಬಯ್ದಿದ್ದ. ಆದರೆ ರಾತ್ರಿ ಬಸ್ಸಾದ್ದರಿಂದ ಹುಡುಗರಾದ ನಮ್ಮನ್ನು ಮಧ್ಯದಲ್ಲಿ ಇಳಿಸಿ ಹೋಗುವಷ್ಟು ಆತ ಕೆಟ್ಟವನಾಗಿರಲಿಲ್ಲ. ಆದರೆ ‘ಬೆಳಿಗ್ಗೆ ಬಂದು ಹೆಡ್ಮಾಸ್ಟರಿಗೋ, ವಾರ್ಡನ್ನಿಗೋ ಹೇಳುತ್ತೇನೆ’ ಎಂದರೆ ಮಾತ್ರ ಭಯವಾಗುತ್ತಿತ್ತು. ಪಾಪ, ಯಾವ ಕಂಡಕ್ಟರನೂ ಸ್ಕೂಲಿನ ಅಥವಾ ಹಾಸ್ಟೆಲ್ಲಿನ ಬಳಿಗೆ ಬರುತ್ತಿರಲಿಲ್ಲ.
ಹದಿನೈದು ಕಿಲೋಮೀಟರ್ ನಡೆಸಿದ ಸಿನಿಮಾ ಹುಚ್ಚು!
ಉದಯಪುರದ ಹಾಸ್ಟೆಲ್ಲಿನ ಹುಡುಗರಿಗೂ ನಮ್ಮ ಹಾಸ್ಟೆಲ್ಲಿನ ಹುಡುಗರಿಗೂ ಕಬ್ಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಯನ್ನು, ಒಂದು ದಿನ ನಮ್ಮ ವಾರ್ಡನ್ ಏರ್ಪಡಿಸಿದ್ದರು. ಎರಡೂ ಆಟಗಳು ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಮುಗಿದೇ ಹೋಗಿದ್ದವು. ನಾವು ಕಬ್ಬಡ್ಡಿಯಲ್ಲಿ ಗೆದ್ದರೆ ಅವರು ವಾಲಿಬಾಲ್‌ನಲ್ಲಿ ಗೆದ್ದರು. ಮಧ್ಯಾಹ್ನ ನಮ್ಮ ಹಾಸ್ಟೆಲ್ಲಿನಲ್ಲಿ ಊಟವಾದ ನಂತರ ಅವರೆಲ್ಲ ಹೊರಡುವ ತರಾತುರಿಯಲ್ಲಿದ್ದರು. ಆಗ ನಮಗೆ ಸಿನಿಮಾಕ್ಕೆ ಹೋಗುವ ಹುಚ್ಚು ತಲೆಗೇರಿತು. ಏಳೆಂಟು ಜನ ತಮ್ಮಲ್ಲಿದ್ದ ದುಡ್ಡನ್ನೆಲ್ಲಾ ಸೇರಿಸಿದರೂ ಬಸ್ ಚಾರ್ಜ್ ಮತ್ತು ಸಿನಿಮಾಕ್ಕೆ ಆಗುವಷ್ಟು ದುಡ್ಡು ಇರಲಿಲ್ಲ. ಕೊನೆಗೆ, ಉದಯಪುರದವರು ಎಂಟು ಕಿಲೋಮೀಟರ್ ದೂರ ನಡೆದುಕೊಂಡೇ ಬಂದಿದ್ದರು; ಹೋಗುವಾಗಲೂ ನಡೆದುಕೊಂಡೇ ಹೋಗುವವರಿದ್ದರು. ನಾವು ಅವರ ಜೊತೆಯಲ್ಲಿ ಅಲ್ಲಿಯವರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ಸು ಹತ್ತುವುದೆಂದು ತೀರ್ಮಾನಿಸಿ ಹೊರಟೆವು. ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಉದಯಪುರ ಸೇರಿದ ನಮಗೆ ಇನ್ನೊಂದು ಉಳಿತಾಯದ ಯೋಚನೆ ಹೊಳೆಯಿತು. ಹೇಗಿದ್ದರೂ ಮೊದಲನೇ ಷೋ ಆರಂಭವಾಗುವುದು ಆರು ಗಂಟೆಗೆ. ಇನ್ನೂ ಎರಡು ಗಂಟೆ ಸಮಯವಿರುವುದರಿಂದ ಚನ್ನರಾಯಪಟ್ಟಣಕ್ಕೂ ನಡೆದೇ ಹೋಗಲು ತೀರ್ಮಾನಿಸಿದೆವು.
ಸುಮಾರು ಆರುಕಾಲು ಗಂಟೆಯ ಹೊತ್ತಿಗೆ ಅಲ್ಲಿಗೆ ತಲುಪಿ ಟಿಕೆಟ್ ಕೊಂಡು ಹೋದರೆ ಅಲ್ಲಿದ್ದ ಸಿನಿಮಾ ನಾವು ಹಿಂದೆ ಏಳೆಂಟು ಬಾರಿಯಾದರೂ ನೋಡಿದ್ದ ‘ನಾನಿನ್ನ ಮರೆಯಲಾರೆ!’ ವಿಧಿಯಿಲ್ಲದೆ ಮತ್ತೆ ಅದನ್ನೇ ನೋಡಬೇಕಾಯಿತು. ಅಂದು ಭಾನುವಾರ ಆಗಿದ್ದರಿಂದ, ಹಾಗೂ ಭಾನುವಾರ ಮತ್ತು ಗುರುವಾರ ಬರುವ ಹಾಲ್ಟ್ ಗಾಡಿಯ ಡ್ರೈವರ್ ಮತ್ತು ಕಂಡಕ್ಟರ್ ಹತ್ತು ನಿಮಿಷ ಮುಂಚೆಯೇ ಸ್ಟ್ಯಾಂಡ್ ಬಿಡುತ್ತಿದ್ದುದ್ದು ನಮಗೆ ಗೊತ್ತಿದ್ದರಿಂದ ಸಿನಿಮಾವನ್ನು ಪೂರ್ತಿ ನೋಡದೆ ಎದ್ದು ಬರಬೇಕಾಯಿತು!
ವಿಡಿಯೋ ಥಿಯೇಟರ್ - ನಾ ನಿನ್ನ ಮರೆಯಲಾರೆ
‘ನಾನಿನ್ನ ಮರೆಯಲಾರೆ’ ಸಿನಿಮಾವನ್ನು ಏಳೆಂಟು ಬಾರಿಯಾದರೂ ನೋಡಿದ್ದೆವು ಎಂದು ಹೇಳಿದ್ದನ್ನು ಕೇಳಿ ನಮ್ಮನ್ನು ಹುಚ್ಚರೆಂದು ಭಾವಿಸಬೇಡಿ. ನಾವು ಈ ಸಿನಿಮಾವನ್ನು ಯಾವುದೇ ಟಾಕೀಸಿಗೆ ಹೋಗಿ ದುಡ್ಡು ಕೊಟ್ಟು ನೋಡಿದ್ದಲ್ಲ. ಆದರೆ ಏಳೆಂಟು ಬಾರಿ ನೋಡಿದ್ದಂತೂ ನಿಜ!
ಕುಂದೂರುಮಠದಲ್ಲಿ ವರ್ಷಕ್ಕೊಮ್ಮೆ ಷಷ್ಟಿ ಜಾತ್ರೆ ನಡೆಯುತ್ತದೆ. ನಾವು ಮೊದಲನೇ ವರ್ಷ ಹಾಸ್ಟೆಲ್ಲಿನಲ್ಲಿದ್ದಾಗ ಅಲ್ಲಿದ್ದ ಪಾರ್ಟ್‌ಟೈಮ್ ಪಿ.ಟಿ. ಮೇಷ್ಟ್ರೊಬ್ಬರು ಭಾರೀ ಮುಂದಾಲೋಚನೆ ಮಾಡಿ, ಒಂದು ಟೀವಿಯನ್ನು, ಒಂದು ವಿ.ಸಿ.ಪಿ.ಯನ್ನು ಬಾಡಿಗೆಗೆ ತಂದಿದ್ದರು. ಆ ದಂಧೆಯಲ್ಲಿ ಆಗಿನ ಹಾಸ್ಟೆಲ್ ವಾರ್ಡನ್ನನೂ ಭಾಗಿಯಾಗಿದ್ದ. ಅದನ್ನು ಹಾಸ್ಟೆಲ್ಲಿನ ದೊಡ್ಡ ಹಾಲ್‌ನಲ್ಲಿ ಇಡುತ್ತಿದ್ದರು. ಒಬ್ಬರಿಗೆ ಎರಡು ರೂಪಾಯಿ ಪ್ರವೇಶ ಧನ ಎಂದು ನಿಗದಿಪಡಿಸಿ, ಬಾಗಿಲಿನಲ್ಲಿಯೇ ನಿಂತು ಪಿ.ಟಿ. ಮೇಷ್ಟ್ರು ದುಡ್ಡು ತೆಗೆದುಕೊಂಡು ಜನಗಳನ್ನು ಒಳಗೆ ಬಿಡುತ್ತಿದ್ದ. ಹಾಲ್ ಭರ್ತಿಯಾಗುತ್ತಿದ್ದಂತೆ ಸಿನಿಮಾ ಶುರು. ಮೊದಲಿಗೆ ಶುಭಮಂಗಳ ಕ್ಯಾಸೆಟ್ಟನ್ನು ಹಾಕಿದ್ದರು. ಜಾತ್ರೆಗೆ ಬರುವ ಜನರಿಗೆಲ್ಲಾ ಇದೊಂದು ವಿಶೇಷ ಆಕರ್ಷಣೆಯಾಗಿತ್ತು. ಹೆಚ್ಚಿನ ಹುಡುಗರೆಲ್ಲ ಅವರವರ ಊರಿಗೆ ಷಷ್ಟಿ ಹಬ್ಬಕ್ಕೆ ಹೋಗಿದ್ದರಿಂದ ಹಾಸ್ಟೆಲ್ಲಿನಲ್ಲಿ ಇದ್ದವರು ಕಡಿಮೆ. ಅವರಿಗೆ ಮಾತ್ರ ಯಾವ ಚಾರ್ಜೂ ಇರಲಿಲ್ಲ. ಅಲ್ಲಿದ್ದ ನಮ್ಮಿಂದ ಅವರಿಗೆ ಉಪಯೋಗವೇ ಆಗುತ್ತಿತ್ತು. ಅವರಿಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದೆವು.
ಎರಡೇ ದಿನದಲ್ಲಿ ಆರು ಷೋ ‘ಶುಭಮಂಗಳ’ ಸಿನಿಮಾ ನೋಡಿದ್ದೆವು. ನಂತರ ‘ನಾನಿನ್ನ ಮರೆಯಾಲಾರೆ’ ಕ್ಯಾಸೆಟ್ ಬಂತು. ಜಾತ್ರೆ ಮುಗಿಯುವವರೆಗೂ ಅದನ್ನು ನೋಡಿಯೇ ನೋಡಿದ್ದು. ನಂತರ ನಡೆದಿದ್ದು ಮಾತ್ರ ಈಗ ನಂಬಲು ಕಷ್ಟವಾಗುವಂತಹದ್ದು. ಅಕ್ಕಪಕ್ಕದ ಊರವರಿಂದ ವಿಡಿಯೋಗೆ ಬೇಡಿಕೆ ಬರಲಾರಂಭಿಸಿತು. ಆ ಪಿ.ಟಿ. ಮೇಷ್ಟ್ರು ನಾಲ್ಕೈದು ಜನ ಹುಡುಗರನ್ನು ಕರೆದುಕೊಂಡು, ಅದನ್ನು ನಮ್ಮ ತಲೆಯ ಮೇಲೆ ಹೊರೆಸಿಕೊಂಡು ಊರೂರು ಸುತ್ತಲು ಆರಂಭಿಸಿದ. ನಮಗೆಲ್ಲಾ ಊಟ ಕೊಡಿಸುತ್ತಿದ್ದ. ನಾವು ನೋಡಿದ ಚಿತ್ರವನ್ನೇ ಮತ್ತೆ ಮತ್ತೆ ನೋಡಿ ಸಂತೋಷ ಪಡುತ್ತಿದ್ದೆವು.
ಹೀಗೆ ‘ವಿಡಿಯೋ ಟೂರಿಂಗ್ ಟಾಕೀಸ್’ ಜಾತ್ರೆ ಕಳೆದ ಮೇಲೂ ಒಂದೆರಡು ವಾರಗಳ ಕಾಲ ಊರೂರು ಸುತ್ತಿ ಚೆನ್ನಾಗಿಯೇ ಸಂಪಾದನೆ ಮಾಡಿತು. ಆ ಪಿ.ಟಿ. ಮಾಸ್ಟರನ್ನು ಮಠಕ್ಕೆ ಕರೆಸಿಕೊಂಡು ಅಲ್ಲಿಯೂ ಒಂದು ಷೋ ನಾನಿನ್ನ ಮರೆಯಲಾರೆ ಸಿನಿಮಾವನ್ನು ಮಠದವರು ಉಚಿತವಾಗಿ ನೋಡಿದರು. ಅವತ್ತು ಅದಕ್ಕೆ ಕೊನೆಯ ದಿನ. ಇಷ್ಟು ಮುಗಿಯುವಷ್ಟರಲ್ಲಿ ನಾವು ಐದಾರು ಸಿನಿಮಾಗಳನ್ನು, ಒಂದೊಂದನ್ನೂ ಏಳೆಂಟು ಬಾರಿಯಾದರೂ ನೋಡಿದ್ದೆವು!ಇಷ್ಟೆಲ್ಲಾ ಆದರೂ, ನಮ್ಮ ಸಿನಿಮಾ ಹುಚ್ಚಿನಿಂದ ಎಷ್ಟೆಲ್ಲಾ ಅಪಾಯಗಳನ್ನು ಎದುರು ಹಾಕಿಕೊಳ್ಳುತ್ತಿದ್ದರೂ ವಾರ್ಡನ್‌ಗೆ ಮಾತ್ರ ಅದರ ಸುಳಿವನ್ನು ನಾವು ಬಿಟ್ಟುಕೊಟ್ಟಿರಲಿಲ್ಲ! ಹತ್ತನೇ ತರಗತಿಯಲ್ಲಿದ್ದಾಗ, ಒಮ್ಮೆ ಹಾಲ್ಟ್ ಗಾಡಿ ಸಿಗದೆ, ಮೂಡನಹಳ್ಳಿಯವರೆಗೂ ಲಾರಿಯೊಂದರಲ್ಲಿ ಬಂದು, ಅಲ್ಲಿಂದ ನಡೆದು ಹಾಸ್ಟೆಲ್ ತಲಪುವಷ್ಟರಲ್ಲಿ ರಾತ್ರಿ ಹನ್ನೆರಡಾಗಿತ್ತು. ಅಂದು ರಜಾದಿನವಾಗಿದ್ದರಿಂದ ಹಾಸ್ಟೆಲ್ಲಿನಲ್ಲಿ ಉಳಿದಿದ್ದ ಕೆಲವೇ ಹುಡುಗರು ಭಯದಿಂದ ಬಾಗಿಲನ್ನು ತೆಗೆಯದೆ, ನಾವೇ ಅದನ್ನು ಬಲವಾಗಿ ತಳ್ಳಿ, ಅದಕ್ಕೆ ಒತ್ತುಕೊಟ್ಟಿದ್ದ ಬಿದಿರು ಗಳದ ಸಮೇತ ಬಾಗಿಲನ್ನೂ ಎತ್ತಿ ಹಾಕಿದ್ದೆವು! ಆ ಸಾಹಸದಲ್ಲಿ ಒಮ್ಮೆ ಬಾಗಿಲು ಸ್ಲಿಪ್ಪಾಗಿ ಬಿದ್ದು ನನ್ನ ಎಡಗೈ ಹೆಬ್ಬೆರಳಿನ ಉಗುರು ಹಾರಿಹೋಗಿತ್ತು!
ಈ ಸಿನಿಮಾ ಹುಚ್ಚು ಅಷ್ಟಕ್ಕೆ ನಿಲ್ಲದೆ, ಪತ್ರಿಕೆಯಲ್ಲಿ ಬರುತ್ತಿದ್ದ ಸಿನಿಮಾ ಜಾಹಿರಾತುಗಳನ್ನು ಕುರಿತು ಹುಡುಗರೆಲ್ಲಾ ಸೀರಿಯಸ್ಸಾಗಿ ಚರ್ಚಿಸುವವರೆಗೂ ಮುಂದುವರೆಯುತ್ತಿತ್ತು. ಯಾವ್ಯಾವ ಊರಿನಲ್ಲಿ ಯಾವ್ಯಾವ ಥಿಯೇಟರ್‌ಗಳಿವೆ, ಯಾವ ಸಿನಿಮಾ ಎಷ್ಟು ದಿನ ಓಡಿದೆ ಎಲ್ಲವೂ ನಮ್ಮ ಅಧ್ಯಯನದ ಭಾಗವಾಗಿದ್ದವು ಎಂಬುದನ್ನು, ಐದಾರು ವರ್ಷಗಳಿಂದ ಥಿಯೇಟರ್ ಕಡೆಗೇ ಮುಖ ಮಾಡದ ನನಗೆ, ಈಗ ಈ ಹೊತ್ತಿನಲ್ಲಿ ನೆನೆದಾಗ ನಗು ಬರುತ್ತದೆ!
ಹತ್ತನೇ ತರಗತಿಯಲ್ಲಿ ನಾನು ನೋಡಿದ ಎಲ್ಲಾ ಸಿನಿಮಾಗಳ ಹೆಸರುಗಳನ್ನು ಒಂದು ನೋಟ್ ಪುಸ್ತಕದಲ್ಲಿ ಬರೆದಿಟ್ಟಿದ್ದೆ. ಅವುಗಳ ಟಿಕೆಟ್‌ನ್ನು ಒಂದು ಕವರ್‌ನಲ್ಲಿ ಹಾಕಿ ಸಂಗ್ರಹಿಸಿದ್ದೆ. ಅಂದ ಹಾಗೆ ಆ ವರ್ಷ, ಹಾಸ್ಟೆಲ್ಲಿನಲ್ಲಿದ್ದ ಹತ್ತು ತಿಂಗಳ ಅವಧಿಯಲ್ಲಿ ನಾನು ನೋಡಿದ ಸಿನಿಮಾಗಳ ಸಂಖ್ಯೆ ಮೂವತ್ತೆಂಟು! ಅಂದರೆ ಸರಾಸರಿ ವಾರಕ್ಕೆ ಒಂದು!!

6 comments:

PARAANJAPE K.N. said...

ನಿಮ್ಮ ಅನುಭವ ಮಾಲೆ ಚೆನ್ನಾಗಿದೆ, ಓದಿಸಿಕೊ೦ಡು ಹೋಗುತ್ತದೆ. ಸಿನೆಮ ವೀಕ್ಷಣೆಯ ಹುಚ್ಚು ನನಗೂ ವಿಪರೀತವಾಗಿತ್ತು. ಪ್ರತಿವಾರ ಸಿನಿಮಾ ಬದಲಾವಣೆ ಯಾದಾಗಲೆಲ್ಲ ನೋಡುತ್ತಿದ್ದೆ. ಹೈಸ್ಕೂಲಿನ ದಿನಗಳಿ೦ದ ಆರ೦ಭವಾದ ಈ ಚಾಳಿ ದೂರದರ್ಶನ ಬರುವವರೆಗೂ ಇತ್ತು. ನನ್ನ ಕೆಲವು ಹಳೆಯ ನೆನಪುಗಳ ಮೆಲುಕು ಹಾಕಲು ನಿಮ್ಮ ಬರಹ ಪ್ರೇರಣೆಯಾಯ್ತು.

shivu.k said...

ಸರ್,

ನಿಮ್ಮ ಕಟಿಂಗ್ ಕತೆ ಬಲು ಸೊಗಸಾಗಿದೆ. ದುಡ್ಡು ಹೋಯ್ತು ಸ್ಟೆಪ್ ಬಂತು ಡುಂ ಡುಂ...ಸ್ಟೆಪ್ಪು ಹೋಯ್ತು ತಲೆ ಅರ್ಧಂಬರ್ಧ ಪುಕ್ಕ ಕಿತ್ತ ಕೋಳಿಯಂತಾಗಿತ್ತು ಡುಂ ಡುಂ...ಅಂತ ಹಾಡಬೇಕೆನಿಸಿದೆ...ಮತ್ತೆ ರೂಪಾಯಿ ವಾಪಸ್ಸು ಪಡೆಯುವ ಚೌಕಾಸಿ ಪ್ರಕರಣ, ಬಸ್ ಆಪ್ ಟಿಕೆಟ್, ಸಿನಿಮಾ ಕತೆ, ಟೂರಿಂಗ್ ವಿಡಿಯೋ ಕತೆಗೆಳೆಲ್ಲಾ ಸೊಗಸಾಗಿವೆ...ಓದುತ್ತಾ ನಗುಬಂತು ಮತ್ತು ಖುಷಿಯೂ ಆಯಿತು...

ಧನ್ಯವಾದಗಳು.

ಹರೀಶ ಮಾಂಬಾಡಿ said...

ಚೆನ್ನಾಗಿದೆ ಸರ್, ಉಸಿರು ಬಿಗಿ ಹಿಡಿದು ಓದಿದೆ :)

sunaath said...

ನಿಮ್ಮ ಸಾಹಸಗಳನ್ನು ಓದಿ ಆಶ್ಚರ್ಯ ಹಾಗೂ ಖುಶಿ ಒಟ್ಟಿಗೆ ಆದವು!

Unknown said...

ನಾನೂ ಪಿಯೂಸಿ ಮತ್ತು ಡಿಗ್ರಿ ಯಲ್ಲಿದಾಗ ರಾತ್ರಿ ೧ ಕಿಲೋಮೀಟರು ನಡೆದು ಹೋಗಿ ರಾತ್ರಿ ೯.೩೦ ಯಾ ಸಿನೆಮಾ ನೋಡಿ ೧೨.೩೦ ಗೆ ವಾಪಾಸು ನಡೆದು ರೂಂ ಸೇರುತ್ತಿದ್ದುದು ನೆನಪಾಯಿತು... ದಕ್ಷಿಣ ಕನ್ನಡ ಜಿಲ್ಲೆಯ ಭಾರಿ ಮಳೆಯಲ್ಲಿಯೂ ಸಹ ಈ ಕಾಯಕ ೫ ವರ್ಷ ಸಾಗಿತ್ತು... :-)

Ittigecement said...

ಸತ್ಯನಾರಾಯಣರೆ....

ನಿಮ್ಮ ಬರಹಗಳಲ್ಲಿ ಆಪ್ತತೆ ಇರುತ್ತದೆ...
ಇವು ನಮ್ಮ ಅನುಭವಗಳು ಅನ್ನುವಷ್ಟು...

ನಿಮ್ಮ ಸಾಹಸಗಳು ಮಜವಾಗಿದೆ...
ನನ್ನ ಆದಿನಗಳನ್ನು ನೆನಪು ಮಾಡಿತು...

ಧನ್ಯವಾದಗಳು..