Wednesday, May 20, 2009

ಅಜ್ಜ ಹೇಳಿದ್ದ ‘ಕೋತಿಯ ಕಥೆ’ - (5)

ಒಂದು ಊರಲ್ಲಿ ಒಂದು ಕೋತಿ ಇತ್ತು. ಒಂದು ದಿವಸ ಅದರ ಬಾಲ ಮುಳ್ಳಿಗೆ ಸಿಕ್ಕೊಂಡಿತ್ತು. ಆಗ ಆ ದಾರಿಲಿ ಒಬ್ಬ ಕುಡ್ಲು ಹಿಡ್ಕೊಂಡು ಬರ್‍ತಿದ್ದ. ಕೋತಿ ‘ಅಣ್ಣ ಅಣ್ಣ, ನನ್ನ ಬಾಲ ವಸಿ ಬಿಡಿಸ್ತೀಯಾ’ ಅಂತು. ಅವನು ಅದರ ಬಾಲ ಬಿಡಸುವಾಗ ಅಡ್ಡ ಬರ್‍ತಿದ್ದ ಮುಳ್ಳುಗಳನ್ನು ಕತ್ತರಿಸುವಾಗ, ಕೋತಿ ಬಾಲವೂ ತುಂಡಾಗಿ ಹೋಯ್ತು! ಆಗ ಕೋತಿ ‘ಏನಣ್ಣ, ಬಾಲ ಬಿಡ್ಸು ಅಂದ್ರೆ, ಅದನ್ನೇ ಕತ್ರಿಸಿಬಿಟ್ಟೆ. ಈಗ ನನ್ನ ಬಾಲ ಸರಿಮಾಡ್ಕೊಡು. ಇಲ್ಲಾಂದ್ರೆ ನಿನ್ನ ಕುಡ್ಲು ಕೊಡು’ ಅಂದ್ಬುಡ್ತು. ಅವನು ಕುಡ್ಲು ಕೊಟ್ಟ .
ಇತ್ತ ಕೋತಿ ಕುಡ್ಲು ಹಿಡ್ಕೊಂಡು ಬರ್‍ತಿರಬೇಕಾದ್ರೆ ಒಬ್ಬ ತೆಂಗಿನ್ಕಾಯಿನ ಹಲ್ಲಲ್ಲಿ ಸುಲೀತಿದ್ದ. ಆಗ ಕೋತಿ ‘ಅಣ್ಣ ಹಲ್ಲಲ್ಲಿ ಏಕ್ ಸುಲಿತೀಯಾ? ತಗೋ ಕುಡ್ಲು’ ಅಂತ ಕೊಡ್ತು. ಅವನು ಕುಡ್ಲು ತಗೊಂಡು ಕಾಯಿ ಸುಲಿದು, ಅದನ್ನು ಹೊಡಿಬೇಕಾದ್ರೆ ಕುಡ್ಲು ಮುರ್‍ದೋಯ್ತು! ಆಗ ಕೋತಿ ‘ಅಯ್ಯೋಯ್ಯೋ ನನ್ನ ಕುಡ್ಲು ಮುರ್‍ದೋಯ್ತು. ಈಗ ನನ್ನ ಕುಡ್ಲು ಸರಿ ಮಾಡ್ಕೊಡು. ಇಲ್ಲಾಂದ್ರೆ ನಿನ್ನ ತೆಂಗಿನ್ಕಾಯಿನೆ ಕೊಡು’ ಅಂತು. ಅವನು ಕಾಯಿ ಕೊಟ್ಟ.
ಕೋತಿ ಕಾಯಿ ಹಿಡ್ಕೊಂಡು ಬರ್‍ತಿರಬೇಕಾದ್ರೆ, ಅಲ್ಲೊಬ್ಬ ಒಂದು ಕೋಣನ್ನ ಹೊಡ್ಕೊಂಡು ಬರ್‍ತಿದ್ದ. ಅವನಿಗೆ ತುಂಬಾ ಹೊಟ್ಟೆ ಹಸ್ತಿತ್ತು. ಅದನ್ನು ನೋಡಿ ಕೋತಿ ‘ಅಣ್ಣ ಅದ್ಯಾಕೆ ಹಸ್ಕೊಂಡಿದ್ದಿ? ತಗೋ ಕಾಯಿ ತಿನ್ನು’ ಅಂತ ಕೊಡ್ತು. ಅವನು ಕಾಯಿ ತಿಂದು ಹೊಟ್ಟೆ ತುಂಬಿಸ್ಕೊಂಡ. ಆಗ ಕೋತಿ ‘ನನ್ನಕಾಯಿ ನನಗೆ ಕೊಟ್ಟುಬಿಡು. ಇಲ್ಲಾಂದ್ರೆ ನಿನ್ನ ಕೋಣನ್ನ ಕೊಡು’ ಅಂತು. ಅವನಿಗೆ ಬೇಜಾರಾಗಿ, ಕೋಣನ್ನೆ ಕೊಟ್ಟ.
ಕೋತಿ ಕೋಣನ ಮೇಲೆ ಕುತ್ಕೊಂಡು ಬರ್‍ತಿತ್ತು. ಅಲ್ಲೊಬ್ಬ ಗಾಣಿಗ, ಗಾಣಕ್ಕೆ ತನ್ನ ಹೆಂಡತೀನ ಕಟ್ಟಿ ಗಾಣ ಹೊಡಿತಿದ್ದ. ಆಗ ಕೋತಿ ‘ಏನಣ್ಣ? ಗಾಣಕ್ಕೆ ಯಾರ್‍ಯಾರ ಹೆಂಡ್ತೀನ ಕಟ್ಟಿ ಹೊಡಿತಾರ? ತಗೋ ಕೋಣನ್ನ. ಹೂಡು ಗಾಣಕ್ಕೆ’ ಅಂತು. ಅವನು ಖುಷಿಯಿಂದ ಗಾಣಕ್ಕೆ ಕೋಣನ್ನ ಹೂಡಿ ಹೊಡೆದ. ಅದು ಸುತ್ತುಬೇಕಾದ್ರೆ ಅದ್ರ ಕಾಲು ಮುರ್‍ದೋಯ್ತು! ಆಗ ಕೋತಿ ‘ನನ್ನ ಕೋಣದ ಕಾಲು ಸರಿಮಾಡ್ಕೊಡು. ಇಲ್ಲಾಂದ್ರೆ ನನಗೆ ಎಣ್ಣೆ ಕೊಡು’ ಅಂತು. ಅವನು ಎಣ್ಣೆ ಕೊಟ್ಟ.
ಕೋತಿ ಎಣ್ಣೆ ಇಡ್ಕೊಂಡು ಬರ್‍ತಿರಬೇಕಾದ್ರೆ ಅಲ್ಲೊಬ್ಬ ದೋಸೆ ಮಾಡ್ತಾಯಿದ್ದ. ಅದಕ್ಕೆ ಹಾಕಕ್ಕೆ ಅವನತ್ರ ಎಣ್ಣೆ ಇರ್‍ಲಿಲ್ಲ. ಆಗ ಕೋತಿ ‘ತಗೊಳ್ಳಣ್ಣ ಎಣ್ಣೆ ಹಾಕಿ ದೋಸೆ ಮಾಡು’ ಅಂತ ಕೊಡ್ತು. ಅವನು ದೋಸೆ ಮಾಡ್ದ. ಎಣ್ಣೆ ಎಲ್ಲ ಮುಗ್ದೋಯ್ತು! ಆಗ ಕೋತಿ, ‘ನನ್ನ ಎಣ್ಣೆ ವಾಪಸ್ ಕೊಡು. ಇಲ್ಲಾ ನನಗೆ ದೋಸೆ ಕೊಡು’ ಅಂತು. ಅವನು ಎಲ್ಲಾ ದೋಸೆ ಕೋತಿಗೆ ಕೊಟ್ಟ.
ಕೋತಿ ಒಂದಷ್ಟು ದೋಸೆ ತಿಂದು, ಉಳ್ದಿದ್ದ ದೋಸೆ ಹಿಡ್ಕೊಂಡು ಬರ್‍ತಾಯಿತ್ತು. ಅಲ್ಲೊಬ್ಬ ಡೋಲು ಹೊತ್ಕೊಂಡು ಹೋಗ್ತಾಯಿದ್ದ. ಅವನಿಗೆ ತುಂಬಾ ಹೊಟ್ಟೆ ಹಸ್ದಿತ್ತು. ಅದನ್ನ ನೋಡಿ ಕೋತಿ ಅವನಿಗೆ ದೋಸೆ ತಿನ್ನೋಕೆ ಕೊಡ್ತು. ಅವನು ದೋಸೆ ತಿಂದ. ಆಗ ಕೋತಿ, ‘ನನ್ನ ದೋಸೆ ನನಗೆ ಕೊಡು. ಇಲ್ಲಾ ನಿನ್ನ ಡೋಲು ಕೋಡು’ ಅಂತು. ಅವನು ಡೋಲು ಕೊಟ್ಟ.
ಆಗ ಕೋತಿ ಡೋಲು ನೇತಾಕ್ಕೊಂಡು ಬಡಿಯೋದಿಕ್ಕೆ ಶುರುಮಾಡ್ತು.
ಬಾಲ ಹೋಗಿ ಕುಡ್ಲು ಬಂತು ಡುಂ... ಡುಂ...
ಕುಡ್ಲು ಹೋಗಿ ಕಾಯಿ ಬಂತು ಡುಂ... ಡುಂ...
ಕಾಯಿ ಹೋಗಿ ಕೋಣ ಬಂತು ಡುಂ... ಡುಂ...
ಕೋಣ ಹೋಗಿ ಎಣ್ಣೆ ಬಂತು ಡುಂ... ಡುಂ...
ಎಣ್ಣೆ ಹೋಗಿ ದೋಸೆ ಬಂತು ಡುಂ... ಡುಂ...
ದೋಸೆ ಹೋಗಿ ಡೋಲು ಬಂತು ಡುಂ... ಡುಂ... ಡುಂ... ಡುಂ...
{ಈ ಕಥೆಯ ಹಲವಾರು ಪ್ರಬೇಧಗಳನ್ನು ನಾನು ಕೇಳಿದ್ದೇನೆ. ಬಹುಶಃ ಹೇಳಲು ಸುಲಭವಾಗಿರುವುದು ಮತ್ತು ಬಾಲ ಹಾಗೂ ಡೋಲು ಇವುಗಳ ಮಧ್ಯೆ ಎಷ್ಟು ಬೇಕಾದರೂ ಸೇರಿಸುವ ಅವಕಾಶ ಇರುವುದು ಈ ವೈವಿಧ್ಯತೆಗೆ ಕಾರಣ ಎನ್ನಿಸುತ್ತದೆ. ಕೋಣಕ್ಕೆ ಬದಲಾಗಿ ಎಣ್ಣೆ ಕೇಳುವ ಕೋತಿ ಇಲ್ಲಿದೆ. ಆದರೆ ಇನ್ನೊಂದರಲ್ಲಿ ಆ ಗಾಣಿಗನ ಹೆಂಡತಿಯನ್ನೇ ಕೇಳಿ ಪಡೆದುಕೊಳ್ಳುತ್ತದೆ! ಮುಂದೆ ದೋಸೆ ಮಾಡುವವನು ದೋಸೆಗೆ ಹಿಟ್ಟು ರುಬ್ಬೋದನ್ನು ನೋಡಿ, ತಗೋ ಹೆಂಡ್ತಿ ಕೈಯಲ್ಲಿ ರುಬ್ಬುಸ್ಕೊ ಅನ್ನುತ್ತೆ. ಆಗ ಅವಳ ಕೈ ಮುರ್‍ದೋಗಿ, ಅವಳ ಬದಲಿಗೆ ದೋಸೆ ಕೇಳುತ್ತೆ.}
ಚಿತ್ರಕೃಪೆ: ಅಂತರ್ಜಾಲ

11 comments:

Unknown said...

Hummmmmmmmmm !!!!!

ಶಿವಪ್ರಕಾಶ್ said...

ha ha ha.. channagide.. :)

ಬಿಸಿಲ ಹನಿ said...

ತುಂಬಾ ತಮಾಷೆಯಾಗಿದೆ. ನಾನು ಚಿಕ್ಕವನಿರಬೇಕಾದಾಗ ಈ ಕಥೆಯನ್ನು ಕೇಳಿದ್ದೆ.

PARAANJAPE K.N. said...

ಚೆನ್ನಾಗಿದೆ ಕಥೆ. ನಾನೂ ಕೇಳಿದ್ದೆ, ಹೊಸ ಸ್ವರೂಪದಲ್ಲಿ ಚೆನ್ನಾಗಿದೆ.

ಜಲನಯನ said...

ಬಾಲ ಹೋಗಿ...ಬಾಲೆ ಬಂತು ಡುಂ ಡುಂ ಅನ್ನಲಿಲ್ಲವೇ..??
ಪಂಚತಂತ್ರದಲ್ಲೂ ಒಂದು ತಂತ್ರ ಇತ್ತು..
ಅದೇ..ಪ್ರಾಣಿಗಳನ್ನು ಉಪಯೋಗಿಸಿ ಮಾನವನಿಗೆ ಬುದ್ಧಿಹೇಳುವ ಹೊಸ ಪ್ರಯೋಗ...
ಅದನ್ನೇ ನೀವೂ ಪ್ರಯತ್ನಿಸಿ...ನಿಮ್ಮ ಕಥೆಗೆ ನಿಮ್ಮ ಕಥನ ಮತ್ತು ಕೊನೆಗೆ ನೀತಿ ಬೊಧನ ಸೇರಿಸಿ...
ನಿಮ್ಮ ಕಥೆಗೆ ಹೊಂದುವ ಚಿತ್ರಗಳು...

ಧರಿತ್ರಿ said...

ನಮಗೂ ಅಮ್ಮ ಇಂಥ ಕತೆಗಳನ್ನು ಹೇಳುತ್ತಿದ್ದುದು ನೆನಪಾಯಿತು. ಕಥೆ ಚೆನ್ನಾಗಿದೆ ಸರ್.
-ಧರಿತ್ರಿ

shivu.k said...

ಸರ್,

ನನ್ನಜ್ಜಿ ಹೀಗೆ ಕತೆ ಹೇಳುತ್ತಿದ್ದುದ್ದು ನೆನೆಪಾಯಿತು...

ಇಂಥವನ್ನು ಈಗಲೂ ಕೇಳಬೇಕೆನಿಸುತ್ತೆ...ನೋಡೋಣ...ನಮ್ಮ ಓಣಿ ಮಕ್ಕಳ ಜೊತೆ ಇದನ್ನು ಟ್ರೈ ಮಾಡುತ್ತೇನೆ. [ರೇಡಿಯೋ ಜಾಕಿ, ಸೆಂಟು, ಪೌಡ್ರು, ಸುಬ್ಬ ಪ್ರೇರಿತ್, ಅಲೋಕ್...ಎಲ್ಲರ ಪ್ರತಿಕ್ರಿಯೆ ನೋಡಬೇಕು...

ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ನಾನೂ ಚಿಕ್ಕಂದಿನಲ್ಲಿ ಕೇಳಿದ್ದೆ. ಆದರೆ ಮರೆತ ಇದನ್ನು ನೆನಪಿಸಿದ್ದೀರಿ ಅದೂ ಚಿತ್ರ ಸಮೇತ. ಧನ್ಯವಾದಗಳು.

PaLa said...

ಚೆನ್ನಾಗಿದೆ, ಚಿತ್ರ ಸಹಿತ ಕಥೆ :)

ರೂpaश्री said...

ಹೌದು ಈ ಕಥೆಯ ಬಹಳಷ್ಟು ಬೇರೆ ವರ್ಷನ್ ಗಳಿವೆ.. ಕಥೆಗೆ ಪೂರಕವಾದ ನಿಮ್ಮ ಫೋಟೋಗಳು ಸೊಗಸಾಗಿವೆ:)

Srushti said...

ಪ್ರಿಯ ಸತ್ಯನಾರಯಣರವ್ರೆ ನಿಮ್ಮ ಅಜ್ಜಿ ಹೇಳಿದ ಕತೆ ನನಗೆ ಹಿಡಿಸಿತು. ಕತೆಯ ಜೋತೆಗೆ ಚಿತ್ರಗಳ ರಸದೂಟವನ್ನು ಬಡಿಸಿದ್ದೀರಿ. ನಿಮಗೆ ದನ್ಯವಾದಗಳು. ನಿಮ್ಗೂ ಡುಂ ಡುಂ