Friday, May 15, 2009

‘ರೆಡ್ಡಿಮೇಷ್ಟ್ರು’ ಮತ್ತು ನಾನು

ಕ್ರಿ.ಶ.೧೯೯೮ರಲ್ಲಿ ನಾನು ಉದ್ಯೋಗಾರ್ಥಿಯಾಗಿ ಬೆಂಗಳೂರಿಗೆ ಬಂದೆ. ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರಗೆ ಮಾತ್ರ ಉದ್ಯೋಗ. ನಂತರ ಕಾಲ ಕಳೆಯುವುದು ಬಹಳ ಕಷ್ಟವಾಗುತ್ತಿತ್ತು. ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂಬ ಉತ್ಕಟವಾದ ಆಕಾಂಕ್ಷೆ. ಆಗೊಂದು ದಿನ ದಿನಪತ್ರಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ಶಾಸನಶಾಸ್ತ್ರ’ ತರಗತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು ಕಣ್ಣಿಗೆ ಬಿತ್ತು. ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ತರಗತಿಗೆ ದಾಖಲಾಗಿದ್ದ ನನಗೆ, ಅಲ್ಲಿ ‘ಶಾಸನಶಾಸ್ತ್ರ’ ಎಂಬ ಒಂದು ಪತ್ರಿಕೆಯೇ ಇತ್ತು. ಸಂಜೆಯ ವೇಳೆ ತರಗತಿಗಳು ನಡೆಯುತ್ತಿದ್ದುದರಿಂದ, ಯಾವುದೇ ಯೋಚನೆ ಮಾಡದೆ ನಾನು ಶಾಸನಶಾಸ್ತ್ರ ತರಗತಿಗೆ ಸೇರಿಕೊಂಡುಬಿಟ್ಟೆ. ಅಲ್ಲಿಂದ ಮುಂದೆ ನನ್ನ ಅಧ್ಯಯನ, ಆಸಕ್ತಿ ಮೊದಲಾದವುಗಳು ಬದಲಾಗಿಬಿಟ್ಟವು. ಬಹುಶಃ ನಾನು ಈ ತರಗತಿಗಳಿಗೆ ಹೋಗಿರದಿದ್ದರೆ, ನಾನೊಬ್ಬ ಕೇವಲ ಸಂಬಳದ ಉದ್ಯೋಗಿಯಾಗಿ ಬೆಲ್ಲು-ಬಿಲ್ಲು ನೋಡಿಕೊಂಡು, ಹತ್ತರಲ್ಲಿ ಹನ್ನೊಂದನೆಯವನಾಗಿ ಬಿಡುತ್ತಿದ್ದೆ, ಅಷ್ಟೆ!
ಆ ತರಗತಿಗಳಲ್ಲಿ ಡಾ.ಕೆ.ಆರ್.ಗಣೇಶ, ಡಾ.ಪಿ.ವಿ.ಕೃಷ್ಣಮೂರ್ತಿ ಮೊದಲಾದವರು ಮಾಡುತ್ತಿದ್ದ ಪಾಠಗಳಿಂದಾಗಿ ಶಾಸನಕ್ಷೇತ್ರದಲ್ಲಿ ನನ್ನ ಆಸಕ್ತಿ ಹೆಚ್ಚಾಗತೊಡಗಿತು. ಈ ಶಾಸನಗಳ ಅಧ್ಯಯನ ಬಹುಮುಖಿಯಾದದ್ದು. ಅದಕ್ಕೆ ಪೂರಕವಾಗಿ ಇತಿಹಾಸ, ಸಾಹಿತ್ಯ, ದೇವಾಲಯ ವಾಶ್ತುಶಿಲ್ಪ, ಮೂರ್ತಿಶಿಲ್ಪ ಮೊದಲಾದವುಗಳ ತಿಳುವಳಿಕೆ ಅಗತ್ಯ ಬೇಕಾಗಿರುತ್ತದೆ. ಎರಡು ವರ್ಷಗಳ ಪ್ರವೇಶ ಮತ್ತು ಪ್ರೌಢ ಶಾಸನಶಾಸ್ತ್ರ ತರಗತಿಗಳು ಮುಗಿಯುವಷ್ಟರಲ್ಲಿ ನನ್ನ ಕನ್ನಡ ಎಂ.ಎ. ಕೂಡಾ ಮುಗಿದಿತ್ತು. ಪ್ರೌಢ ತರಗತಿಗಳಲ್ಲಿ ಇದ್ದಾಗಲೇ, ‘ಜಾನಪದ’ ಪ್ರವೇಶ ತರಗತಿಗೂ ದಾಖಲಾಗಿ ಅದನ್ನು ಯಶಸ್ವಿಯಾಗಿ ಮುಗಿಸಿಬಿಟ್ಟಿದ್ದೆ. ಬಿಎಂಶ್ರೀ ಪ್ರತಿಷ್ಠಾನದವರು ನಡೆಸುತ್ತಿದ್ದ ‘ಹಸ್ತಪ್ರತಿಶಾಸ್ತ್ರ’ ಕೋರ್ಸನ್ನೂ ಮಾಡಿಬಿಟಿದ್ದೆ. ಇನ್ನು ಪಿಹೆಚ್.ಡಿ. ಮಾಡುವುದಾದರೆ ಇದೇ ಕ್ಷೇತ್ರದಲ್ಲಿ ಮಾಡಬೇಕು ಎಂಬ ಆಲೋಚನೆಯೂ ಬಂತು. ಆದರೆ ವಿಷಯ ಯಾವುದು? ಇತಿಹಾಸ, ಸಾಹಿತ್ಯ, ಶಾಸನ, ಜಾನಪದ, ದೇವಾಲಯ ಮತ್ತು ಮೂರ್ತಿಶಿಲ್ಪ ಎಲ್ಲವೂ ನನ್ನ ಅಧ್ಯಯನದಲ್ಲಿ ಬಳಕೆಯಾಗುವಂತಹ ವಿಷಯಕ್ಕೆ ಹುಡಕಾಟ ನಡೆಸಿದಾಗ ನನ್ನ ತಲೆಗೆ ಹೊಳೆದಿದ್ದು ‘ಸರಸ್ವತಿ’.
ಈ ವಿಷಯವನ್ನು ನನ್ನ ಗೆಳೆಯರು, ಗುರುಗಳು ಎಲ್ಲರೂ ಅನುಮೋದಿಸಿದರು. ಆದರೆ ಯಾವ ವಿಶ್ವವಿದ್ಯಾಲಯ? ಮಾರ್ಗದರ್ಶಕರು ಯಾರು? ಎಂಬ ಹುಡುಕಾಟದಲ್ಲಿ ಒಂದೆರಡು ವರ್ಷಗಳು ಕಳೆದುಹೋದವು. ಅಷ್ಟರಲ್ಲಿ ನನ್ನ ಮದುವೆಯೂ ಆಯಿತು. ಈ ನಡುವೆ ಪ್ರಾಚೀನ ದೇವಾಲಯಗಳಿಗೆ ಬೇಟಿ ನೀಡುವುದು, ಅವುಗಳ ಅಧ್ಯಯನ ನಡೆಸುವುದು, ಪತ್ರಿಕೆಗಳಿಗೆ ಅವುಗಳ ಬಗ್ಗೆ ಲೇಖನ ಬರೆಯುವುದು ಮಾಡುತ್ತಿದ್ದೆ. ಈ ಸಂದರ್ಭದಲ್ಲಿ, ಶಾಸನ ತರಗತಿಯ ಹಿರಿಯ ವಿದ್ಯಾರ್ಥಿಯಾಗಿದ್ದ ಬಿ.ಆರ್.ಭಾರತಿಯವರ ಪರಿಚಯವಾಯಿತು. ಅವರು ಡಾ.ದೇವರಕೊಂಡಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ. ಅಧ್ಯಯನ ಕೈಗೊಂಡಿದ್ದರು. ಅವರ ಮುಖಾಂತರವಾಗಿಯೇ ನನಗೆ ‘ನನ್ನ ಮೇಷ್ಟ್ರು’ ದೇವರಕೊಂಡಾರೆಡ್ಡಿಯವರ ಪರಿಚಯವಾಗಿದ್ದು. ಭಾರತಿಯವರ ಮಹಾಪ್ರಬಂಧ ಸಿದ್ಧವಾಗುವಾಗ ಅವರಿಗೆ ತೀವ್ರವಾದ ಅನಾರೋಗ್ಯ ಕಾಡುತ್ತಿತ್ತು. ಆಗ ನಾವು ಸ್ನೇಹಿತರೆಲ್ಲಾ ಆ ಕೆಲಸದಲ್ಲಿ ಕೈಜೋಡಿಸಿದ್ದೆವು. ಒಂದೆರಡು ಬಾರಿ ಬಂದ ಮೇಷ್ಟ್ರಿಗೆ ನನ್ನ ವಿಷಯ ತಿಳಿಯಿತು. ಭಾರತಿಯವರ ಮಹಾಪ್ರಬಂಧ ಸಲ್ಲಿಕೆಯಾದ ಮೇಲೆ ಮೇಷ್ಟ್ರು ನನಗೆ ಒಂದು ಜವಾಬ್ದಾರಿಯನ್ನು ವಹಿಸುವುದಾಗಿ ಹೇಳಿದರು. ಅದರಂತೆ ಹಂಪಿ ವಿಶ್ವವಿದ್ಯಾಲಯದ ಡಾ.ಬಾಲಸುಬ್ರಹ್ಮಣ್ಯ ಅವರು ದೆಹಲಿ ಐ.ಜಿ.ಎನ್.ಸಿ.ಎ.ಗಾಗಿ ಸಿದ್ಧಪಡಿಸುತ್ತಿದ್ದ ಹಂಪಿ ಶಾಸನಗಳ ಸೂಚಿ ಕೆಲಸದಲ್ಲಿ ಭಾಗವಹಿಸುವಂತೆ ನನಗೆ ತಿಳಿಸಿದರು. ನಾನು ಆ ಕೆಲಸದಲ್ಲಿ ಸಂತೋಷವಾಗಿ ಭಾಗವಹಿಸಿದೆ. ಆ ಸಂದರ್ಭದಲ್ಲಿ ಭಾರತಿಯವರು, ‘ಮೇಷ್ಟ್ರನ್ನೇ ಏಕೆ ನೀವು ಗೈಡ್ ಆಗಲು ಕೇಳಬಾರದು’ ಎಂಬ ಸಲಹೆಯನ್ನು ಕೊಟ್ಟರು. ಜೊತೆಗೆ, ‘ನಾನು ಜನರಲ್ ಕೋಟಾದ ಅಭ್ಯರ್ಥಿ. ಆದ್ದರಿಂದ, ನನ್ನ ಮಹಾಪ್ರಬಂಧ ಸಲ್ಲಿಕೆಯಾಗಿರುವುದರಿಂದ ನಿಮ್ಮನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು ಕೇಳಿ ನೋಡಿ’ ಎಂಬ ಸಲಹೆಯನ್ನು ಕೊಟ್ಟರು.
ಬೆಂಗಳೂರಿನ ಬಿ.ಎಂ.ಶ್ರೀ. ಪ್ರತಿಷ್ಠಾನದ ಯಾವುದೋ ಸಮಾರಂಭಕ್ಕೆ ಬಂದಿದ್ದ ಮೇಷ್ಟ್ರಿಗೆ ಸಮಯ ನೋಡಿಕೊಂಡು ವಿಷಯ ತಿಳಿಸಿದೆ. ಅವರು ಎಲ್ಲವನ್ನೂ ನಿಧಾನವಾಗಿ ಕೇಳಿಸಿಕೊಂಡು, ‘ನನ್ನದು ಶಾಸನಶಾಸ್ತ್ರ ವಿಭಾಗವಾಗಿವುದರಿಂದ, ನಿಮ್ಮ ಅಧ್ಯಯನ ಆಂಶಿಕವಾಗಿಯದರೂ ಶಾಶನಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರಬೇಕಾಗುತ್ತದೆ. ಆದ್ದರಿಂದ ಶಾಶನಗಳಲ್ಲಿ ಸರಸ್ವತಿಯ ವಿಷಯ ಬಂದಿದೆಯೇ? ಅದು ಒಂದು ಅಧ್ಯಾಯವಾಗುವಷ್ಟು ಇದೆಯೇ? ಎಂಬುದನ್ನು ಪರಿಶೀಲಿಸಿ ತಿಳಿಸಿ. ನೋಡೋಣ’ ಎಂದು ಹೇಳಿದರು. ನಾನು ಅಲ್ಲಿಂದ ಮೂರ್ನಾಲ್ಕು ತಿಂಗಳು ಕೆಲಸ ಮಾಡಿ ಶಾಸನಗಳಲ್ಲಿ ವ್ಯಕ್ತವಾಗಿದ್ದ ಸರಸ್ವತಿಗೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸಿ ಮೇಷ್ಟ್ರ ಗಮನಕ್ಕೆ ತಂದೆ. ಆಗ ಅವರು ಮಾರ್ಗದರ್ಶಕರಾಗಲು ತಮ್ಮ ಒಪ್ಪಿಗೆ ಸೂಚಿಸಿ, ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಹೇಳಿದರು.

ಬಾ.ರಾ.ಗೋಪಾಲ್ ಪ್ರಶಸ್ತಿ ಸ್ವೀಕಾರ ಸಮಾರಂಭ

ಎಲ್ಲ ಮಾರ್ಗದರ್ಶಕರಂತೆ ಅವರೂ ನನಗೆ ಮಾರ್ಗದರ್ಶನ ಮಾಡಿದರು ಎಂದರೆ ಅವರ ವ್ಯಕ್ತಿತ್ವಕ್ಕೆ ನಾನು ಅಪಚಾರವೆಸಗಿದಂತೆ. ಮಾರ್ಗದರ್ಶಕರಾಗಿದ್ದಂತೆ ಒಬ್ಬ ವ್ಯಕ್ತಿಯಾಗಿಯೂ ಅವರು ನನಗೆ ಮುಖ್ಯರು. ಅವರು ನನಗೆ ಮೊದಲು ನೀಡಿದ ಸಲಹೆಯೇ, ಉತ್ಸಾಹದಲ್ಲಿ ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡಲು ಹೋಗಬೇಡಿ’ ಎಂಬುದಾಗಿತ್ತು. ಸ್ವತಃ ಅವರೇ ಹಂಪಿಯಿಂದ ಅರ್ಜಿಯನ್ನು ಕೊರಿಯರ್ ಮೂಲಕ ಕಳುಹಿಸಿಕೊಟ್ಟಿದ್ದರು. ಸಣ್ಣ ವಿಚಾರಗಳಿಗೂ ಅವರು ಮಹತ್ವ ಕೊಡುತ್ತಿದ್ದರು. ಮೊದಲ ಬಾರಿ ನಾನು ಪ್ರವೇಶ ಮತ್ತು ಮೌಖಿಕ ಪರೀಕ್ಷೆಗಾಗಿ ಹಂಪಿಗೆ ಹೊರಟು ನಿಂತಾಗ ಹೇಗೆ ಬರಬೇಕೆಂಂದು ಎಲ್ಲವನ್ನೂ ಫೋನಿನಲ್ಲಿಯೇ ತಿಳಿಸಿದ್ದರು. ‘ರೈಲಿನಲ್ಲಿ ಬರುವುದಾದರೆ, ಒಂದು ವಾರ ಮುಂಚಿತವಾಗಿಯೇ ರಿಸರ್ವೇಷನ್ ಮಾಡಿಸಿಕೊಳ್ಳಿ. ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಇಳಿದು, ಒಂದು ಆಟೋ ಹಿಡಿದು ಬಸ್ ಸ್ಟ್ಯಾಂಡಿಗೆ ಬನ್ನಿ. ಹತ್ತು ರೂಪಾಯಿ ಆಟೋಗೆ ತೆಗೆದುಕೊಳ್ಳುತ್ತಾರೆ. ಬೆಳಿಗ್ಗೆ ಏಳೂವರೆ ಮತ್ತು ಒಂಬತ್ತಕ್ಕೆ ವಿದ್ಯಾರಣ್ಯಕ್ಕೆ ಬಸ್ ಹೊರಡುತ್ತವೆ. ಏಳೂವರೆಯ ಬಸ್ ತಪ್ಪಿ ಹೋಗಿದ್ದರೆ, ಕಮಲಾಪುರಕ್ಕೆ ಬೇರೆ ಯಾವುದಾದರು ಬಸ್ ಹಿಡಿದು ಬಂದು, ಅಲ್ಲಿಂದ ಆಟೋದಲ್ಲಿ ಬಂದುಬಿಡಿ. ಆಟೋದವರು ಕೇಳುವಾಗ ಹೆಚ್ಚಿಗೆ ಕೇಳುತ್ತಾರೆ ಮೂವತ್ತು ರೂಪಾಯಿಗೆ ಒಪ್ಪಿಕೊಳ್ಳುತ್ತಾರೆ. ನೇರವಾಗಿ ನನ್ನ ಕ್ವಾರ್ಟ್ರಸಿಗೆ ಬನ್ನಿ. ಆಟೋದವರಿಗೆ ನನ್ನ ಹೆಸರು ಹೇಳಿದರೆ ಅವರೇ ನನ್ನ ಮನೆಯವರಗೆ ಕರೆದುಕೊಂಡು ಬರುತ್ತಾರೆ’ ಹೀಗೆ ಸಣ್ಣ ಸಣ್ಣ ವಿಷಯವನ್ನೂ ತಿಳಿಸಿ ನನಗೆ ಒಂದು ಸಣ್ಣ ತೊಂದರೆಯೂ ಆಗದಂತೆ ನೋಡಿಕೊಂಡು, ಮೊದಲ ಬಾರಿಗೇ ತಮ್ಮ ಶಿಷ್ಯವಾತ್ಸಲ್ಯವನ್ನು ನನಗೆ ಉಣಬಡಿಸಿಬಿಟ್ಟರು. ಅವರು ಅಲ್ಲಿ ಒಬ್ಬರೇ ಇದ್ದುದರಿಂದ, ತಿಂಡಿ ಮಾಡುವ ಕಷ್ಟ ಬೇಡ ಎಂದು ತಿಳಿಸಿ ಹೊಸಪೇಟೆಯಿಂದ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದೆ. ನಾನು ಹೋಗುವಷ್ಟರಲ್ಲಿ ತಮ್ಮ ಸ್ನಾನಾದಿಗಳನ್ನು ಮುಗಿಸಿ ಅಧ್ಯಯನ ಕೊಠಡಿಯಲ್ಲಿ ಕುಳಿತಿದ್ದ ಮೇಷ್ಟ್ರು, ನನಗೆ ಸ್ನಾನ ಮಾಡಿಕೊಳ್ಳುವಂತೆ ಹೇಳಿದರು. ಸ್ವತಃ ಅವರೇ ಸ್ಟೌವ್‌ನಲ್ಲಿ ಬಿಸಿನೀರು ಕಾಯಿಸಿ ಸಿದ್ಧಪಡಿಸಿದ್ದರು! ನನಗೆ ತುಸುವೇ ಸಂಕೋಚವಾಗದಂತೆ ನೋಡಿಕೊಂಡರು. ಇಬ್ಬರೂ ತಿಂಡಿ ಮುಗಿಸಿ ವಿಭಾಗದ ಕಡೆಗೆ ಹೊರಟೆವು. ದಾರಿಯಲ್ಲಿ ‘ಈ ಪ್ರವೇಶ ಪರೀಕ್ಷೆ, ಮೌಖಿಕ ಪರೀಕ್ಷೆ ಎಲ್ಲದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಡಿ. ಎಲ್ಲವೂ ಎಸ್.ಎಸ್.ಎಲ್.ಸಿ ಸ್ಟ್ಯಾಂಡರ್ಡಿಗೆ ಇರುತ್ತದೆ. ನಿಮಗೆ ಈಗಾಗಲೇ ಶಾಸನಶಾಸ್ತ್ರದಲ್ಲಿ ಸಾಕಷ್ಟು ಪರಿಶ್ರಮವಿರುವುದರಿಂದ ಇದು ಕಷ್ಟವಾಗುವುದಿಲ್ಲ ಎಂದು ಹೇಳಿದರು.
ಎಲ್ಲವನ್ನು ಮುಗಿಸಿ ಸಂಜೆಯ ವೇಳಗೆ ತಾತ್ಕಾಲಿಕ ಪ್ರವೇಶಧನವನ್ನು ಕಟ್ಟಿ ನಾನು ಊರಿಗೆ ಬಂದು ಬಿಟ್ಟೆ. ನಂತರ ಕೆಲ ತಿಂಗಳುಗಳಲ್ಲಿ ನನ್ನ ಪ್ರವೇಶ ಅಧಿಕೃತವಾಗಿ ಘೋಷಿಸಲ್ಪಟ್ಟಿತ್ತು. ಆಗ ನಾನು ಮತ್ತೆ ಹಂಪೆಗೆ ಹೋಗಿ ಪ್ರವೇಶ ಶುಲ್ಕವನ್ನು ಕಟ್ಟಬೇಕಾಗಿತ್ತು. ಆದರೆ ಮೇಷ್ಟ್ರು, ‘ಅದಕ್ಕಾಗಿ ನೀವು ಇಲ್ಲಿಯವರೆಗೆ ಬರಬೇಕಾಗಿಲ್ಲ. ಡಿ.ಡಿ. ತೆಗೆದು ನನ್ನ ವಿಳಾಸಕ್ಕೆ ಕಳುಹಿಸಿ. ನಾನೇ ಅದನ್ನು ಅಧ್ಯಯನಾಂಗಕ್ಕೆ ತಲುಪಿಸಿ, ಅದರ ರಸೀತಿಯನ್ನು ನಿಮಗೆ ತಲುಪಿಸುತ್ತೇನೆ’ ಎಂದು ನನಗೆ ಆಗಬಹುದಾಗಿದ್ದ ಆರ್ಥಿಕ ಹೊರೆಯನ್ನು ತಪ್ಪಿಸಿಬಿಟ್ಟರು. ಮುಂದೆಯೂ ಅಷ್ಟೆ, ಅರ್ಧವಾರ್ಷಿಕ ವರದಿಗಳನ್ನು ಅಂಚೆ ಮುಖಾಂತರ ತರಿಸಿಕೊಂಡು ಅಥವಾ ಅವರು ಬೆಂಗಳೂರಿಗೆ ಬಂದಾಗ ಸ್ವತಃ ತಾವೇ ತೆಗೆದುಕೊಂಡು ಅದನ್ನು ಅಧ್ಯಯನಾಂಗಕ್ಕೆ ಸಲ್ಲಿಸಿಬಿಡುತ್ತಿದ್ದರು. ಇದರಿಂದಾಗಿ ಆಗ ‘ತೀರಾ ಕಡಿಮೆ’ ಸಂಬಳದವನಾಗಿದ್ದ ನನಗೆ ಆರ್ಥಿಕವಾಗಿ ಹೊಡೆತ ಬೀಳುವುದನ್ನು ತಪ್ಪಿಸುತ್ತಿದ್ದರು. ಮಧ್ಯ ಒಂದು ಬಾರಿ ಮಾತ್ರ ನಾನು ಹಂಪೆಗೆ ಹೋಗಿದ್ದೆ. ಅದೂ ನನ್ನ ಪರಿವಾರದ ಸಮೇತ. ಜೊತೆಗೆ ನಾಲ್ಕೈದು ಊರಿಗಳಲ್ಲಿ ಕ್ಷೇತ್ರಕಾರ್ಯದ ಯೋಜನೆ ಬೇರೆ. ಅವರು ದೆಹಲಿಗೋ ಎಲ್ಲೋ ಹೊರಟಿದ್ದರು. ಆದರೆ ತಮ್ಮ ಮನೆಯನ್ನೇ ಪೂರ್ತಿ ನಮಗೆ ಬಿಟ್ಟುಕೊಟ್ಟು ನಾವು ಅಲ್ಲಿರುವವರಗೆ ಅಲ್ಲಿಯೇ ಉಳಿಯುವಂತೆ ತಿಳಿಸಿ ಹೋಗಿದ್ದರು. ಅವರ ಮನೆಯ ಹಿಂದೆ ಅವರೇ ಸ್ವತಃ ಕೈಯಾರೆ ಬೆಳೆಸಿದ್ದ ಹಲವಾರು ತರಕಾರಿಗಳನ್ನು ಬಳಸಿಕೊಳ್ಳುವಂತೆ ಹೇಳಿ ಹೋಗಿದ್ದರು!
ಮೇಷ್ಟ್ರು ತುಂಬಾ ಸರಳ ಜೀವಿ. ಅದು ಅವರ ಜೀವನ ವಿಧಾನದಲ್ಲೂ ಅಡಕವಾಗಿತ್ತು. ನಾನು ಚಿಕ್ಕಪುಟ್ಟ ವಿಷಯಕ್ಕೂ, ಎಲ್ಲಾದರೂ ಸರಸ್ವತಿಯ ಬಗ್ಗೆ ಒಂದು ಸಣ್ಣ ಮಾಹಿತಿ ದೊರೆತರೂ, ಆ ಊರು ಎಷ್ಟೇ ದೂರದಲ್ಲಿದ್ದರೂ ಹೊರಟು ನಿಂತು ಬಿಡುತ್ತಿದ್ದೆ. ಆಗೆಲ್ಲಾ ಅವರು, ಪ್ರತಿಯೊಂದನ್ನೂ ಸ್ಥಳಕ್ಕೇ ಹೋಗಿ ನೋಡಬೇಕೆಂದೇನಿಲ್ಲ. ಏನಾದರು ವಿಶೇಷವಿದ್ದರೆ ಮಾತ್ರ ಹೋಗಿ ನೋಡಿ’ ಎಂದು ಹೇಳುತ್ತಿದ್ದರು. ಅವರು ಬೆಂಗಳೂರಿಗೆ ಬಂದಾಗ ಮಾತ್ರ ನನ್ನ ಅವರ ಬೇಟಿ. ಮಿಥಿಕ್ ಸೊಸೈಟಿ, ಬಿಎಂಶ್ರೀ ಪ್ರತಿಷ್ಠಾನ ಅಥವಾ ಸಾಹಿತ್ಯ ಪರಿಷತ್ ಗ್ರಂಥಾಲಯದಲ್ಲಿ ಕುಳಿತು ಚರ್ಚೆ ಮಾಡುತ್ತಿದ್ದವು. ಒಂದೆರಡು ಬಾರಿ ಅವರ ಮನೆಗೇ ನನ್ನ ಆಹ್ವಾನಿಸಿ, ಊಟ ತಿಂಡಿ ಎಲ್ಲವನ್ನೂ ಅವರೇ ಕೊಟ್ಟು, ನನಗೆ ವಿದ್ಯಾದಾನ ಮಾತ್ರವಲ್ಲ ಅನ್ನದಾನವನ್ನೂ ಮಾಡಿದ್ದಾರೆ. ಇದು ಮನೆಯಲ್ಲಿ ಮಾತ್ರವಲ್ಲ. ಯಾವಗಲಾದರೂ ಹೋಟೆಲ್ಲಿಗೆ ಹೋಗಿ ತಿಂಡಿ ಕಾಫಿ ಮಾಡಿದರೂ ನನ್ನಿಂದ ಒಂದೂ ಪೈಸವನ್ನು ಅವರು ಕೊಡಿಸಲಿಲ್ಲ. ಆ ಐದು ವರ್ಷಗಳ ಅವಧಿಯಲ್ಲಿ ಬೈಟು ಕಾಫಿಯನ್ನು ಕುಡಿಸುವ ಅವಕಾಶವನ್ನು ಅವರು ನನಗೆ ನೀಡಲಿಲ್ಲ. ‘ನಿಮ್ಮ ಮನೆಗೆ ಬರುತ್ತೇನೆ. ಅಲ್ಲಿ ಕಾಫಿ ಕೊಡ್ರಿ’ ಎಂದು ಹೇಳುತ್ತಿದ್ದರು. ಒಂದೆರಡು ಬಾರಿ ನಮ್ಮ ಮನೆಗೇ ಬಂದು, ಗಂಟೆಗಟ್ಟಲೆ ಇದ್ದು, ಅಧ್ಯಯನದ ಪ್ರಗತಿಯನ್ನು ಪರಿಶೀಲಿಸಿ, ಚರ್ಚಿಸಿ, ಸಲಹೆಗಳನ್ನು ಕೊಟ್ಟು ಹೊರಡುತ್ತಿದ್ದರು. ಅವರಿಗೆ ಕಾಂಗ್ರೆಸ್ ಕಡ್ಲೆಬೀಜ ಎಂದರೆ ಇಷ್ಟ. ಜೊತೆಗೆ ಕಾಫಿ. ಇವೆರಡನ್ನು ಸಂತೋಷವಾಗಿ ಸ್ವೀಕರಿಸುತ್ತಿದ್ದರು. ಹೊರಡುವಾಗ ನಾನು ‘ಸಾರ್, ನಾನು ಬೈಕಿನಲ್ಲಿ ಬಿಟುಕೊಡುತ್ತೇನೆ’ ಎಂದರೆ, ‘ಅಯ್ಯೋ ಈ ಟ್ರಾಫಿಕ್ಕಿನಲ್ಲಿ ಸುಮ್ನೆ ಏಕೆ ತೊಂದರೆ ತಗೋತಿರಿ. ಹತ್ರದ ಬಸ್‌ಸ್ಟ್ಯಾಂಡಿಗೆ ಬಿಡಿ ಸಾಕು’ ಎನ್ನುತ್ತಿದ್ದರು. ಒಮ್ಮೆ, ಒಂದು ಭಾನುವಾರ ಅವರ ಮನೆಯಲ್ಲಿ, ನನ್ನನ್ನು ಪಕ್ಕದಲ್ಲೇ ಕೂರಿಸಿಕೊಂಡು, ಬಿರಿಯಾನಿ ಊಟ ಮಾಡಿಸಿದ್ದರು. ನನಗೆ ಸಂಕೋಚವಾಗಬಾರದೆಂದು ಅವರೇ ಕೇಳಿ ಕೇಳಿ ಬಡಿಸುತ್ತಿದ್ದರು ಕೂಡಾ.
ನನ್ನ ಪ್ರವೇಶ ಅಧಿಕೃತವಾಗಿ ಘೋಷಣೆಯಾದ ಮೇಲೆ, ಒಂದು ವಾರದ ಕಾಲ ವಿಶ್ವವಿದ್ಯಾಲಯದಲ್ಲಿ ಅಧ್ಯಯನಾಂಗದವರು ನಡೆಸುವ ಕಾರ್ಯಾಗಾರದಲ್ಲಿ ಭಾಗವಹಿಸಬೇಕಾಗಿತ್ತು. ಆಗ ಪೂರ್ತಿ ನನ್ನನ್ನು ಅವರ ಮನೆಯಲ್ಲಿಯೇ ಇರಿಸಿಕೊಂಡಿದ್ದರು. ಅವರು ತುಂಬಾ ರುಚಿಕಟ್ಟಾಗಿ ಸಾರು, ಫಲ್ಯ ಮಾಡುತ್ತಿದ್ದರು. ಮುದ್ದೆ ಮಾಡಿಕೊಳ್ಳಲು ಅಷ್ಟಾಗಿ ಬರುತ್ತಿರಲಿಲ್ಲ. ನಾನು ಚೆನ್ನಾಗಿ ಮುದ್ದೆ ಮಾಡುತ್ತಿದ್ದೆ. ಆದು ತಿಳಿದ ನಂತರ ನಾನಲ್ಲಿರುವಷ್ಟು ದಿನ ಬೆಳಿಗ್ಗೆ ತಿಂಡಿಗೇ ಮುದ್ದೆ ಊಟ, ರಾತ್ರಿ ಮತ್ತೆ ಮುದ್ದೆ ಊಟ! ಡಿಸೆಂಬರ್ ಮೂವತ್ತೊಂದನೇ ತಾರೀಖಿನಂದು ಅವರೇ ಹೊಸಪೇಟೆಗೆ ಹೋಗಿ ಚಿಕನ್ ತಂದಿದ್ದರು. ನಾನು ಚಿಕನ್ ಸಾಂಬಾರು ಮಾಡಿ ಮುದ್ದೆ ಮಾಡಿದ್ದೆ. ರಾತ್ರಿ ಕೆಲವು ಸ್ನೇಹಿತರೊಂದಿಗೆ ಊಟ ಮಾಡಿ, ಸುಮಾರು ಹನ್ನೆರಡು ಗಂಟೆಯ ಹೊತ್ತಿನಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಡಿದ ವಾಕಿಂಗ್‌ನ್ನು ನಾನು ಮರೆಯಲು ಸಾಧ್ಯವೇ ಇಲ್ಲ! ಅಲ್ಲಿದ್ದ ದಿನಗಳಲ್ಲಿ, ಅಲ್ಲಿಯ ಮಧ್ಯಾಹ್ನದ ಸೆಖೆಗೆ ನಾನು ಆಚೆ ಈಚೆ ಓಡಾಡುತ್ತಿದ್ದರೆ, ‘ಫ್ಯಾನ್ ಹಾಕಿಕೊಂಡು ಸ್ವಲ್ಪ ಹೊತ್ತು ಆರಾಮವಾಗಿ ಮಲಗಿಬಿಡಿ. ಇಲ್ಲಿಯ ಸೆಖೆಯೇ ಹೀಗೆ’ ಎಂದು ಹೇಳುತ್ತಿದ್ದರು.
ನನ್ನ ಮಹಾಪ್ರಬಂದ ಸಿದ್ಧವಾಗಿ ಅದನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಲು ಹೋಗಬೇಕಾಗಿತ್ತು. ಆಗ ನನ್ನ ಮನೆ ನಿರ್ಮಾಣವೂ ನಡೆಯುತ್ತಿತ್ತು. ಆಗಲೂ ಅವರು ‘ಅಲ್ಲಿ ನಿಮಗೆ ಕೆಲಸವಿದ್ದರೆ, ಕೊರಿಯರ್‌ನಲ್ಲಿ ಕಳುಹಿಸಿಬಿಡಿ. ಸುಮ್ಮನೇ ನೀವೇಕೆ ಹೊತ್ತುಕೊಂಡು ಬರುತ್ತೀರಿ’ ಎಂದಿದ್ದರು. ಆದರೂ ನಾನು ಸ್ವತಃ ಮಹಾಪ್ರಬಂಧದ ಸಂಪುಟಗಳನ್ನು ತೆಗೆದುಕೊಂಡು ಹೋಗಿದ್ದೆ. ರೈಲ್ವೆ ರಿಸರ್ವೇಷನ್ ಸಿಗದೆ ಬಸಿನಲ್ಲಿ ಹೋಗಿದ್ದೆ. ನಾನು ಹೋಗುವಷ್ಟರಲ್ಲಿ ಸೀಗಡಿ ಸಾರು ಮಾಡಿ, ಕಾಯುತ್ತಾ ಕುಳಿತಿದ್ದರು. ಬಕೆಟ್‌ಗಳಲ್ಲಿ ನೀರು ಸಹ ತುಂಬಿಸಿಟಿದ್ದರು! ‘ಹೋಗಿ ಸ್ನಾನ ಮಾಡಿಬಿಡಿ. ಆಮೇಲೆ ಮುದ್ದೆ ಮಾಡಿ. ಊಟ ಮಾಡಿ ಡಿಪಾರ್ಟಮೆಂಟಿಗೆ ಹೋಗೋಣ’ ಎಂದರು. ಅಂದು ನಾನು ಊಟ ಮಾಡಿದ ಮುದ್ದೆ-ಸೀಗಡಿ ಸಾರಿನ ರುಚಿಯನ್ನು (ಅನ್ನ ಕೂಡಾ ಮಾಡಿರಲಿಲ್ಲ) ನಾನು ಮತ್ತೆ ಸವಿಯುತ್ತೇನೋ ಇಲ್ಲವೋ, ಅದಕ್ಕೆ ಮುಂಚೆ ಮಾತ್ರ ಸವಿದಿಲ್ಲ. ಹೆಚ್ಚು ಮಸಾಲೆ ಹಾಕದೆ ಅತ್ಯಂತ ರುಚಿಕಟ್ಟಾಗಿ ಸೀಗಡಿ ಸಾರು ಮಾಡಬಹುದೆಂದು ನನಗೆ ನನ್ನ ಮೇಷ್ಟ್ರು ಕಲಿಸಿಬಿಟಿದ್ದರು!
ಕೇವಲ ಪಿಹೆಚ್.ಡಿ. ಅಧ್ಯಯನಕ್ಕೆ ಮಾತ್ರ ಅವರು ನನ್ನ ಮಾರ್ಗದರ್ಶಕರಾಗಿರಲಿಲ್ಲ. ನಾನು ಮನೆ ಕಟ್ಟಿಸುವ ವಿಚಾರ ತಿಳಿಸಿದಾಗಲೂ ಹಲವಾರು ಸಲಹೆ ಸೂಚನೆಗಳನ್ನು ಕೊಟ್ಟರು. ‘ಲಕ್ಸುರಿ, ಸ್ಟ್ಯಾಂಡರ್ಡ್ ಎಂದು ಅನಾವಶ್ಯಕವಾಗಿ ದುಡ್ಡು ಸುರಿಯಬೇಡಿ. ನಾವು ಕಟುವ ಮನೆ ನಮ್ಮ ತಲೆಮಾರಿಗಷ್ಟೆ. ಮುಂದಿನ ತಲೆಮಾರಿನವರಿಗೆ ಅದು ಹಳೆಯದಾಗುತ್ತದೆ.’ ಎಂದು ಹೇಳಿ ಬೆಂಗಳೂರಿನಲ್ಲಿ ಕೆಡವುತ್ತಿರುವ ಒಳ್ಳೊಳ್ಳೆಯ ಬಂಗಲೆಗಳ ಉದಾಹರಣೆಗಳನ್ನು ಕೊಟ್ಟಿದ್ದರು. ನನ್ನ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಮೇಷ್ಟ್ರು ಊರಿನಲ್ಲಿ ಇರಲಿಲ್ಲ. ಆದರೆ ಆಮೇಲೆ ಒಂದು ದಿನ ಫೋನ್ ಮಾಡಿ ‘ಇವತ್ತು ನಿಮ್ಮ ಮನೆಗೆ ಬರುತ್ತೇನೆ. ನಿಮ್ಮ ಹೊಸಮನೆ ನೋಡಬೇಕು’ ಎಂದು ಬಂದು ಒಂದೆರಡು ಗಂಟೆಗಳ ಕಾಲ ಇದ್ದು, ನನ್ನ ಮಗಳೊಂದಿಗೆ ಆಟವಾಡಿ, ಅದು ಇದು ಮಾತನಾಡಿ, ತಿಂಡಿ ತಿಂದು ಹೋಗಿದ್ದರು. ನನ್ನ ಮಗಳು ಡಾ.ಕೆ.ಆರ್.ಗಣೇಶ ಅವರನ್ನು ‘ಮೇಷ್ಟ್ರುತಾತ’ ಎಂದು ಕರೆಯುತ್ತಿದ್ದುರಿಂದ, ರೆಡ್ಡಿಮೇಷ್ಟ್ರನ್ನು ‘ಗೈಡ್‌ತಾತ’ ಎಂದು ಕರೆಯುತ್ತಿದ್ದಳು!
ನನ್ನ ಮೌಖಿಕ ಪರೀಕ್ಷೆ ನಡೆಯುವಷ್ಟರಲ್ಲಿ ಅವರು ನಿವೃತ್ತರಾಗಿದ್ದರು. ಅಷ್ಟರಲ್ಲಾಗಲೇ ಅವರು ವಿಶ್ವವಿದ್ಯಾಲಯದ ಪಕ್ಕದಲ್ಲೇ ಒಂದು ಎಕರೆ ಜಮೀನು ಖರೀದಿಸಿ, ಅಲ್ಲಿಯೇ ಕೈತೋಟ ಮಾಡಿಕೊಂಡು, ಪುಟ್ಟಮನೆ ನಿರ್ಮಾಣ ಮಾಡಿಕೊಂಡು ನೆಲೆಸಿದ್ದರು. ಗಿಡಗಳನ್ನು ಬೆಳೆಸುವುದರಲ್ಲಿ ಅವರಿಗೆ ವಿಶೇಷ ಪ್ರೀತಿ. ವಿಶ್ವವಿದ್ಯಾಲಯದ ಆವರಣದಲ್ಲಿನ ತೋಟಗಾರಿಕೆಯ ಉಸ್ತುವಾರಿಯನ್ನೂ ಕೆಲವು ವರ್ಷಗಳ ಕಾಲ ಅವರು ನಿರ್ವಹಿಸಿದ್ದುಂಟು. ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಯಾವುದಾದರು ಗಿಡದ ಮುಂದೆ ನಿಂತುಕೊಂಡು, ಅದನ್ನು ಎಲ್ಲಿಂದ ತರಿಸಿದೆ, ಅದರ ವಿಶೇಷವೇನು ಮೊದಲಾದವುಗಳನ್ನು ನನಗೆ ಹೇಳುತ್ತಿದ್ದರು. ಅವರ ಪುಟ್ಟ ತೋಟದ ಬಹುತೇಕ ಎಲ್ಲಾ ಗಿಡಗಳನ್ನು ಅವರು ನನಗೆ ಪರಿಚಯ ಮಾಡಿಕೊಟ್ಟಿದ್ದಾರೆ! ಇಂದು ಹಂಪಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಸುರು ಕಾಣುತ್ತಿರುವುದಕ್ಕೆ ಅತಿಮುಖ್ಯ ಕಾರಣಕರ್ತರು ನಮ್ಮ ಮೇಷ್ಟ್ರು. ಅಲ್ಲಿ ಬರುತ್ತಿದ್ದ ಕೆಲಸಗಾರರೊಂದಿಗೆ ಸ್ನೇಹದಿಂದ ವರ್ತಿಸುತ್ತಾ, ಕೆಲಸ ಮಾಡಿಸುತ್ತಿದ್ದುದನ್ನು ನಾನು ಹಲವಾರು ಬಾರಿ ಕಣ್ಣಾರೆ ಕಂಡಿದ್ದೇನೆ.
ನನ್ನ ಮೌಖಿಕ ಪರೀಕ್ಷೆಯಲ್ಲಿ ಒಬ್ಬ ಪ್ರಾಧ್ಯಪಕರು ಧರ್ಮಸಂಬಂಧವಾದ ಪ್ರಶ್ನೆಯನ್ನು ಅನಾವಶ್ಯಕವಾಗಿ ಎತ್ತಿದ್ದರಿಂದ, ಆ ಪ್ರಾಧ್ಯಪಕರು ಅಲ್ಲಿ ನೆರೆದಿದ್ದವರಿಂದಲೇ ತೀವ್ರವಾದ ಆಕ್ಷೇಪಕ್ಕೆ ಗುರಿಯಾಗಬೇಕಾಯಿತು. ಆಗ ಏರ್ಪಟ್ಟ ಗೊಂದಲದ ವಾತಾವರಣದಲ್ಲಿ ನನಗೆ, ಅವರ ಪ್ರಶ್ನೆಗೆ ಉತ್ತರಿಸುವ ಅವಕಾಶ ಸಿಗಲೇ ಇಲ್ಲ. ಸ್ವತಃ ಮಾನ್ಯ ಕುಲಪತಿಯವರೇ ಆ ಪ್ರಶ್ನೆಯನ್ನು ನಿರಾಕರಿಸಿ ಮುಂದೆ ಬೇರೆ ಪ್ರಶ್ನೆಗೆ ಉತ್ತರಿಸುವಂತೆ ಹೇಳಿಬಿಟ್ಟರು! ಎಲ್ಲಾ ಮುಗಿದ ಮೇಲೆ, ಮೇಷ್ಟ್ರಿಗೆ ತುಂಬಾ ಬೇಸರವಾಗಿತ್ತು. ‘ನಿಮಗೆ ಗೊತ್ತಿರುವ, ಬರೆದಿರುವ ವಿಷಯವನ್ನು ಹೇಳುವ ಅವಕಾಶ ಇಲ್ಲವಾಯಿತು’ ಎಂದು ಬೇಸರಪಟ್ಟುಕೊಂಡರು. ಕೊನೆಗೆ ಅವರೇ, ‘ಇಲ್ಲಿ ಇವೆಲ್ಲಾ ಮಾಮೂಲು ಬಿಡಿ’ ಎಂದು ಸುಮ್ಮನಾದರು ಕೂಡಾ.
ಘಟಿಕೋತ್ಸವದ ದಿನ ಅವರು ಊರಿನಲ್ಲಿ ಇರಲಿಲ್ಲ. ಆದರೂ ಅವರೇ ಫೋನ್ ಮಾಡಿ, ಅಲ್ಲಿ ಕೀ ಕೊಟ್ಟು ಬಂದಿರುವ, ಅಲ್ಲಿರುವ ವ್ಯಕ್ತಿಗೆ ನೀರು ತುಂಬಿಸಿಡಲು ಹೇಳಿ ಬಂದಿರುವ ವಿಚಾರವನ್ನು ತಿಳಿಸಿದ್ದರು. ಅಂದು ಅವರು ಅಲ್ಲಿಲ್ಲದಿದ್ದರೂ ನಾನು ಹೋಗಿ, ಸ್ನಾನ ಮಾಡಿಕೊಂಡು ಆರಾಮವಾಗಿ ಘಟಿಕೋತ್ಸವದಲ್ಲಿ ಭಾಗವಹಿಸಿ ಬಂದಿದ್ದೆ. ನಾನು ಹಂಪೆಯಲ್ಲಿದ್ದ ದಿನಗಳಲ್ಲಿ ನನ್ನ ಮನೆಯಿಂದ ಹೊರಗೆ ಇದ್ದೇನೆ ಎಂಬ ಭಾವನೆ ನನಗೆಂದೂ ಬರಲೇ ಇಲ್ಲ.
ಹೀಗೆ ಗುರು-ಶಿಷ್ಯ ಸಂಬಂಧದ ನಡುವೆ ಒಂದು ಆರೋಗ್ಯಕರ ದೂರವನ್ನು ಕಾಪಾಡಿಕೊಂಡೇ, ನನಗೆ ಅತ್ಯಂತ ಪ್ರೀತಿಯನ್ನು, ವಾತ್ಸಲ್ಯವನ್ನು ತೋರಿದ ನನ್ನ ಮೇಷ್ಟ್ರು ಒಬ್ಬ ವ್ಯಕ್ತಿಯಾಗಿ ನೂರಾರು ಜನಕ್ಕೆ ಮಾರ್ಗದರ್ಶಕರಾಗಿದ್ದವರು. ಕಮಲಾಪುರದ ಆಟೋ ಹುಡುಗರಿಗೆ, ‘ರೆಡ್ಡಿ ಮೇಷ್ಟ್ರ ಮನೆಗೆ’ ಅಂದರೆ ಸಾಕು, ‘ಓ ಅವ್ರಾ! ಗೊತ್ತು ಬನ್ರಿ ಸರ್’ ಎಂದು ಯಾವ ಸಬೂಬು ಹೇಳದೆ, ಚೌಕಾಸಿ ಮಾಡದೆ ಕರೆದುಕೊಂಡು ಹೋಗುತ್ತಿದ್ದರು. ಒಬ್ಬ ಮೇಷ್ಟ್ರು, ವಿಶ್ವವಿದ್ಯಾಲಯದ ಹೊರಗೂ ತನ್ನ ಪ್ರಭಾವವನ್ನು ಬೀರಬಲ್ಲ ಎಂಬುದಕ್ಕೆ ಅತ್ಯಂತ ಉತ್ತಮ ಉದಾಹರಣೆ ನಮ್ಮ ‘ರೆಡ್ಡಿ ಮೇಷ್ಟ್ರು’.
{ಕರ್ನಾಟಕದ ಇತಿಹಾಸ ಮತ್ತು ಶಾಸನತಜ್ಞರ ಸಾಲಿನಲ್ಲಿ ಚಿರಪರಿಚಿತವಾದ ಹೆಸರು ಡಾ.ದೇವರಕೊಂಡಾರೆಡ್ಡಿ ಅವರದು. ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಿವೃತ್ತರಾದ ಮೇಲೆ ಅವರಿಗೆ ಸಲ್ಲಿಕೆಯಾಗುತ್ತಿರುವ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನ ಇದು. ಅವರ ಕಿರುಪರಿಚಯ ಹೀಗಿದೆ.
ಮೂಲತಃ ಆನೆಕಲ್ ತಾಲ್ಲೋಕಿನವರಾದ ಡಾ.ರೆಡ್ಡಿಯವರು ಕನ್ನಡ ಎಂ.ಎ. ನಂತರ ಗಂಗ ಅರಸರ ಕಾಲದ ದೇವಾಲಯಗಳ ವಾಸ್ತುಶಿಲ್ಪವನ್ನು ಕುರಿತಂತೆ ಅಧ್ಯಯನ ನಡೆಸಿ ಪಿಎಚ್.ಡಿ. ಪದವಿ ಪಡೆದುಕೊಂಡರು. ಸಾಹಿತ್ಯ ಪರಿಷತ್ತಿನಲ್ಲಿ ನಡೆಸುತ್ತಿದ್ದ ಶಾಸನಶಾಸ್ತ್ರ ತರಗತಿಗಳಲ್ಲಿ ಗೌರವ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಲೇ ತಮ್ಮ ಅಧ್ಯಯನಶಿಲತೆಯನ್ನು ಉಳಿಸಿಕೊಂಡಿದ್ದ ಶ್ರೀ ರೆಡಿಯವರನ್ನು ಡಾ.ಸೂರ್ಯನಾಥಕಾಮಥ್ ಅವರು ಕರ್ನಾಟಕ ಗೆಸೆಟಿಯರ್ ಇಲಾಖೆಗೆ ನೇಮಕ ಮಾಡಿಕೊಂಡರು. ಅಲ್ಲಿಂದ ಡಾ.ಚಂದ್ರಶೇಖರ ಕಂಬಾರರ ಕಣ್ಣಿಗೆ ಬಿದ್ದ ರೆಡ್ಡಿಯವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಶಾಸನಶಾಸ್ತ್ರ ವಿಭಾಗಕ್ಕೆ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಪ್ರೊ.ಕಲ್ಬುರ್ಗಿಯವರ ಪ್ರೋತ್ಸಾಹದಿಂದಾಗಿ, ವಿಭಾಗವನ್ನು ಸದೃಢವಾಗಿ ಕಟ್ಟಿದ ಮೇಷ್ಟ್ರು, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಶಾಸನ ಸಂಪುಟಗಳನ್ನು ಸಿದ್ಧಪಡಿಸಿದರು. ಜೊತೆಗೆ ಉತ್ತರಕರ್ನಾಟಕದ ಹಲವಾರು ಜಿಲ್ಲೆಗಳ ಶಾಸನ ಸಂಪುಟಗಳನ್ನು ಸಿದ್ಧಪಡಿಸಿದರು. ಹೀಗೆ ಹದಿಮೂರು ಶಾಸನಸಂಪುಟಗಳನ್ನು ಸಿದ್ಧಪಡಿಸಿದ ರೆಡ್ಡಿಯವರು, ಡಾ.ಬಿ.ಎಲ.ರೈಸ್ (ಎಪಿಗ್ರಾಫಿಯಾ ಕರ್ನಾಟಿಕದ ಸಂಪಾದಕರು) ನಂತರ ಅತಿ ಹೆಚ್ಚು ಶಾಸನ ಸಂಪುಟಗಳನ್ನು ಸಂಪಾದಿಸಿ ಕೀರ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಲಿಪಿಶಾಸ್ತ್ರ, ಶ್ರವಣಬೆಳಗೊಳದ ವಾಸ್ತುಶಿಲ್ಪ, ಶಾಸನಪದಕೋಶ ಮೊದಲಾದ ಮೌಲಿಕ ಕೃತಿಗಳನ್ನು ಶ್ರೀಯುತರು ರಚಿಸಿದ್ದಾರೆ. ಶ್ರೀಯುತರು ಇತಿಹಾಸತಜ್ಞರಿಗೆ ಸಲ್ಲುವ ಶ್ರೀ ಬಾ.ರಾ.ಗೋಪಾಲ್ ಪ್ರಶಸ್ತಿ ಪುರಸಕೃತರಾಗಿದ್ದಾರೆ.}

7 comments:

PARAANJAPE K.N. said...

ನಿಮ್ಮ ಪಿ.ಎಚ್.ಡಿ .ಗೈಡ್ ಡಾ: ದೇವರಕೊ೦ಡಾರೆಡ್ಡಿಯವರ೦ಥವರು ಈಗ ದುರ್ಬೀನು ಹಾಕಿ ಹುಡುಕಿದರೂ ಸಿಗರು. ಅ೦ಥವರ ಸಾ೦ಗತ್ಯ ಪಡೆದ ನೀವು ಖ೦ದಿತವಾಗಿಯೂ ಧನ್ಯರು. ಲೇಖನ ಬಹಳ ಚೆನ್ನಾಗಿದೆ.

sunaath said...

ಸತ್ಯನಾರಾಯಣರೆ,
ಇಂತಹ ಘನವ್ಯಕ್ತಿತ್ವವುಳ್ಳ ಪ್ರೊಫೆಸರರ ಪರಿಚಯ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಇವರನ್ನು ಗೈಡ್ ಆಗಿ ಪಡೆದ ನೀವು ಅದೃಷ್ಟವಂತರೇ ಸರಿ.

ಬಿಸಿಲ ಹನಿ said...

ಬಲು ಅಪರೂಪದ ಮೇಷ್ಟ್ರು. ಇಂಥವರು ಈಗ ಸಿಗುವದು ವಿರಳ. ಅಂಥವರನ್ನು ಮೇಷ್ಟ್ರನ್ನಾಗಿ ಪಡೆದ ನೀವು ನಿಜಕ್ಕೂ ಪುಣ್ಯವಂತರು.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ಡಾ.ಶೇಷಶಾಸ್ತ್ರಿಯವರು ಅವರ ಸ್ನೇಹಿತರಾದ ಡಾ.ದೇವರಕೊ೦ಡಾರೆಡ್ಡಿಯವರ ಬಗ್ಗೆ ಹೇಳಿದ್ದರು. ನಿಮ್ಮ ಲೇಖನ ಓದಿ ಅವರ ಇನ್ನಷ್ಟು ವ್ಯಕ್ತಿತ್ವದ ಪರಿಚಯವಾಯ್ತು. ವಿಜಯಕರ್ನಾಟಕದಲ್ಲಿ ಪಿಹೆಚ್ ಡಿ ಬಗ್ಗೆ ಕೆಲ ದಿನಗಳು ಲೇಖನಮಾಲೆ ಪ್ರಕಟವಾಗಿತ್ತು. ಆಗ ಈ ಲೇಖನ ಹಾಕಬೇಕಿತ್ತು. ನಿಜಕ್ಕೂ ಇಂತಹ ಗುರುಗಳು ಸಿಗುವುದು ಪೂರ್ವ ಜನ್ಮದ ಸುಕೃತ.

shivu.k said...

ಸರ್,

ಗುರಿ ಮತ್ತು ಗುರು ಎರಡು ಇದ್ದು ಮಾಡುವ ಕೆಲಸದಲ್ಲಿ ಶ್ರದ್ಧೆ ಭಕ್ತಿ, ಆ ವಿಚಾರದಲ್ಲಿ ಅರ್ಪಣಾ ಭಾವನೆ ತುಂಬಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ನೀವೆ ಉದಾಹರಣೆ.

ಅಂತಹ ಮಹಾನ್ ವ್ಯಕ್ತಿಯನ್ನು ಗುರುವಾಗಿ ಪಡೆದ ನೀವೆ ಧನ್ಯರು. ಬರಹದಲ್ಲಿ ಎಲ್ಲವನ್ನೂ ಚೆನ್ನಾಗಿ ವಿವರಿಸಿದ್ದೀರಿ...ಇವೆಲ್ಲಾ ನಮೆಗೆ ಸ್ಫೂರ್ತಿ ನೀಡುವಂತಿದೆ...

ಧನ್ಯವಾದಗಳು.

Ittigecement said...

ಸತ್ಯನಾರಾಯಣರೆ...

ರೆಡ್ಡಿ ಮೇಷ್ಟ್ರನ್ನು ಗೈಡ್ ಆಗಿ ಪಡೆದ ನೀವೇ ಧನ್ಯರು....

ಇಂಥಹ ಮಹಾನ್ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕಾಗಿ
ಧನ್ಯವಾದಗಳು...

ಅವರ ಸರಳತೆ ಬಹಳ ಇಷ್ಟವಾಯಿತು...

ನಿಮಗೆ ಅವರ ಮಾರ್ಗದರ್ಶನ ಪಡೆದ ನೀವೇ ಪುಣ್ಯವಂತರು

ಜಲನಯನ said...

ಡಾ. ಸತ್ಯ ಅವರೇ...ಚುಟುಕಾಗಿ ಕರೆದರೆ ಆಪ್ಯಾಯತೆ ಹೆಚ್ಚುತ್ತೆ ಅಂತಾರೆ..ಅದಕ್ಕೆ...ತಪ್ಪಿದ್ದರೆ ಕ್ಷಮಿಸಿ,
ನನ್ನ ಬ್ಲಾಗಿಗೆ ಬಂದಿರಿ ಧನ್ಯವಾದಗಳು.
ಭಾಷೆಯಲ್ಲಿ ಪಿಎಚ್.ಡಿ ಒಂದು ಸಾಧನೆ...ಅದ್ರಲ್ಲೂ ಶಾಸನಗಳ ಅಧ್ಯಯನ, ಇತ್ಯಾದಿ..ನಾನು ಚಿಕ್ಕವ ಅದರ ಬಗ್ಗೆ ಬರೆಯಲು..
ನಿಮ್ಮಂತಹವರು ನಮ್ಮ ಬರವಣಿಗೆಯನ್ನು ಹಸನುಗೊಳಿಸಲು ಸಹಾಯಮಾಡಬೇಕು, ನಮ್ಮ ಬ್ಲಾಗ್ ಓದಿ ಟಿಕೆ ಟಿಪ್ಪಣಿ ಮಾಡಿ...ಸುಧಾರಣೆಗಳನ್ನು ಸೂಚಿಸಿದರೆ ಧನ್ಯರು ನಾವು.
ನಮನಗಳು